samachara
www.samachara.com
ಹತ್ಯೆ ಆರೋಪಿಗಳಿಗೆ ಹೂಹಾರದ ಸ್ವಾಗತ; ‘ಇದು ಕಾನೂನು ಪ್ರಕ್ರಿಯೆಗೆ ಗೌರವ’ ಎಂದ ಜಯಂತ್‌ ಸಿನ್ಹಾ
ಸುದ್ದಿ ಸಾಗರ

ಹತ್ಯೆ ಆರೋಪಿಗಳಿಗೆ ಹೂಹಾರದ ಸ್ವಾಗತ; ‘ಇದು ಕಾನೂನು ಪ್ರಕ್ರಿಯೆಗೆ ಗೌರವ’ ಎಂದ ಜಯಂತ್‌ ಸಿನ್ಹಾ

ಮಾಂಸದ ವ್ಯಾಪರಿಯೊಬ್ಬರ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ 8 ಜನರಿಗೆ ಕೇಂದ್ರ ಸಚಿವ ಜಯಂತ್‌ ಸಿನ್ಹಾ ಹೂಹಾರ ಹಾಕಿ ಶುಭ ಕೋರಿದ್ದರು. ವ್ಯಾಪಕ ಟೀಕೆಗಳು ಕೇಳಿ ಬಂದ ನಂತರ ಸರಣಿ ಟ್ವೀಟ್‌ಗಳ ಮೂಲಕ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

samachara

samachara

ಕೊಲೆ ಆರೋಪಿಗಳನ್ನು ಹೂಮಾಲೆ ಹಾಕಿ ಸ್ವಾಗತಿಸಿದ್ದ ಕೇಂದ್ರ ಸಚಿವ ಜಯಂತ್‌ ಸಿನ್ಹಾ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಈ ಕುರಿತು ಶನಿವಾರ ಸಾಲು ಸಾಲು ಟ್ವೀಟ್‌ಗಳನ್ನು ಮಾಡಿರುವ ಜಯಂತ್ ಸಿನ್ಹಾ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಕಳೆದ ವರ್ಷ ಜೂನ್‌ ತಿಂಗಳಿನಲ್ಲಿ ಜಾರ್ಖಂಡ್‌ ರಾಜ್ಯದ ರಾಮಘಡ ಜಿಲ್ಲೆಯಲ್ಲಿ ಗೋರಕ್ಷಣೆಯ ಹೆಸರಿನಿಂದ ಮಾಂಸದ ವ್ಯಾಪಾರಿ ಅಲೀಮುದ್ದೀನ್‌ ಅನ್ಸಾರಿ ಎನ್ನುವವರ ಕೊಲೆ ನಡೆದಿತ್ತು. ಈ ಕೊಲೆಗೆ ಸಂಬಂಧಿಸಿದಂತೆ ಈ ವರ್ಷದ ಮಾರ್ಚ್‌ ತಿಂಗಳಿನಲ್ಲಿ ಸ್ಥಳೀಯ ಬಿಜೆಪಿ ನಾಯಕ ನಿತ್ಯಾನಂದ್‌ ಮಾಥೋ ಸೇರಿದಂತೆ 8 ಜನರನ್ನು ಬಂಧಿಸಲಾಗಿತ್ತು.

ಜಾರ್ಖಂಡ್‌ ಸರಕಾರ ಆದಷ್ಟು ಬೇಗ ತನಿಖೆ ಮುಗಿಸಿ, ಪ್ರಕರಣವನ್ನು ಶೀಘ್ರಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಂತೆ ಪೊಲೀಸರ ಮೇಲೆ ಒತ್ತಡ ತಂದಿತ್ತು ಎನ್ನಲಾಗಿದೆ. ಆದರೂ ಕೂಡ ಪ್ರಕರಣದ ವಿಚಾರಣೆ 9 ತಿಂಗಳ ಸಮಯವನ್ನು ತೆಗೆದುಕೊಂಡಿತ್ತು.

ವಿಚಾರಣಾಧೀನ ನ್ಯಾಯಾಲಯ ಆರೋಪಿಗಳ ವಿಚಾರಣೆ ನಡೆಸಿತ್ತು. ಎಲ್ಲರನ್ನೂ ಕೂಡ ತಪ್ಪಿತಸ್ಥರು ಎಂದಿದ್ದ ನ್ಯಾಯಾಲಯ ಅದೇ ತಿಂಗಳಿನಲ್ಲಿ ಎಲ್ಲರಿಗೂ ಸಹ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಆದರೆ ಕಳೆದ ವಾರ ಜಾರ್ಖಂಡ್‌ನ ಉಚ್ಛ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ರದ್ದುಗೊಳಿಸಿದೆ. ಜತೆಗೆ ಜಾಮೀನಿನ ಮೇಲೆ ಎಲ್ಲರನ್ನೂ ಬಿಡುಗಡೆಗೊಳಿಸಿದೆ.

ಹಝಾರೀಬಾಗ್‌ ಜೈಲಿನಲ್ಲಿದ್ದ ಈ 8 ಜನರನ್ನು ಮಂಗಳವಾರ ಬಿಡುಗಡೆಗೊಳಿಸಲಾಗಿತ್ತು. 8 ಜನರೂ ಸಹ ಜೈಲಿನಿಂದ ಹೊರ ಬಂದ ನಂತರ ಕೇಂದ್ರ ಸಚಿವ ಹಾಗೂ ಹಝಾರೀಬಾಗ್ ಲೋಕಸಭಾ ಕ್ಷೇತ್ರದ ಸಂಸದ ಜಯಂತ್‌ ಸಿನ್ಹಾ ಮನೆಗೆ ತೆರಳಿದ್ದರು. ಈ ವೇಳೆ ಜಯಂತ್‌ ಸಿನ್ಹಾ ಎಲ್ಲರಿಗೂ ಹೂವಿನ ಹಾರ ಹಾಕುವ ಮೂಲಕ ಸ್ವಾಗತಿಸಿ, ಶುಭಾಷಯ ತಿಳಿಸಿದ್ದರು.

ಈ 8 ಜನರೊಟ್ಟಿಗೆ ಜಯಂತ್‌ ಸಿನ್ಹಾ ತೆಗೆಸಿಕೊಂಡಿದ್ದ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದವು. ಜಯಂತ್‌ ಸಿನ್ಹಾ ನಡೆ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಜಾರ್ಖಂಡ್‌ ವಿಧಾನಸಭೆಯ ವಿಪಕ್ಷ ನಾಯಕ, ಜೆಎಮ್‌ಎಮ್‌ ಪಕ್ಷದ ಹೇಮಂತ್‌ ಸೊರೇನ್‌ ಜಯಂತ್‌ ಸಿನ್ಹಾ ವಿರುದ್ಧ ಹರಿಹಾಯ್ದಿದ್ದರು.

ಈ ಕುರಿತು ಸ್ಪಷ್ಟನೆ ನೀಡಿರುವ ಜಯಂತ್‌ ಸಿನ್ಹಾ, ಶನಿವಾರ ಸಾಲು ಸಾಲು ಟ್ವೀಟ್‌ಗಳನ್ನು ಮಾಡಿದ್ದಾರೆ. “ಗೌರವಾನ್ವಿತ ಜಾರ್ಖಂಡ್‌ ಹೈಕೋರ್ಟ್‌ ರಾಮಗಢ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಯನ್ನು ರದ್ದುಗೊಳಿಸಿದೆ. ಪ್ರಕರಣದ ಕುರಿತು ಮರುವಿಚಾರಣೆ ನಡೆಯಬೇಕಿದೆ,” ಎಂದಿದ್ದಾರೆ.

“ನಾನು ಎಲ್ಲಾ ರೀತಿಯ ಹಿಂಸಾಚಾರಗಳನ್ನು ನಿಸ್ಸಂದೇಹವಾಗಿ ಖಂಡಿಸುತ್ತೇನೆ. ನಮ್ಮ ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಕಾನೂನೇ ಸರ್ವಶ್ರೇಷ್ಟವಾದದ್ದು. ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುವವರಿಗೆ, ಯಾವುದೇ ವೈಯಕ್ತಿಕ ಹಕ್ಕುಗಳನ್ನು ಉಲ್ಲಂಘಿಸುವವರಿಗೆ ಶಿಕ್ಷೆಯಾಗಲೇಬೇಕು, ಹಾಗೂ ಮುಗ್ಧರು ಬಿಡುಗಡೆಯಾಗಬೇಕು” ಎಂದು ಜಯಂತ್‌ ಸಿನ್ಹಾ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, “ನಾನು ಶೀಘ್ರಗತಿ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯ ತೀರ್ಪಿಗೆ ಹಲವಾರು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದೆ. ಶೀಘ್ರಗತಿ ನ್ಯಾಯಾಲಯದ ತೀರ್ಪನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದೆ,” ಎಂದು ಜಯಂತ್‌ ಸಿನ್ಹಾ ತಿಳಿಸಿದ್ದಾರೆ.

ಮುಂದುವರಿದು, “ನನಗೆ ನ್ಯಾಯಂಗ ವ್ಯವಸ್ಥೆ ಮತ್ತು ಕಾನೂನುಗಳ ಬಗ್ಗೆ ಸಂಪೂರ್ಣವಾಗಿ ನಂಬಿಕೆಯಿದೆ. ಹೀಗಿದ್ದಾಗೂ ಸಹ ಹಲವರು ನನ್ನ ವಿರುದ್ಧ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಾನು ಕಾನೂನು ಪ್ರಕ್ರಿಯೆಗೆ ಗೌರವ ನೀಡಿರುವುದಕ್ಕೆ ಕೆಲವರು ಬೇಜವಾಬ್ದಾರಿಯಿಂದ ಟೀಕೆ ಮಾಡಿರುವುದು ದುರದೃಷ್ಟಕರ” ಎಂದಿದ್ದಾರೆ.

ತಮ್ಮ ಹೇಳಿಕೆಗಳು ಮತ್ತು ನಡೆಗಳಿಂದಲೇ ಬಿಜೆಪಿ ನಾಯಕರು ಜನರ ವ್ಯಾಪಕ ಟೀಕೆಗೆ ಗುರಿಯಾಗಿ ಸ್ವಷ್ಟೀಕರಣ ನೀಡುತ್ತಲೇ ಬರುತ್ತಿದ್ದಾರೆ. ಈಗ ಜಾರ್ಖಂಡ್‌ನ ಬಿಜೆಪಿ ಸಂಸದ ಜಯಂತ್‌ ಸಿನ್ಹಾ ಈ ಸಾಲಿಗೆ ಸೇರಿಕೊಂಡಿದ್ದಾರೆ.