ಕುಮಾರಣ್ಣ ಬಜೆಟ್‌ನಲ್ಲಿ  ಕೊಟ್ಟ ‘ಎಣ್ಣೆ ಏಟು’; ಸಾಮಾಜಿಕ ಮಾಧ್ಯಮದ ರತ್ನನ್‌ ಪದಗಳು!
ಸುದ್ದಿ ಸಾಗರ

ಕುಮಾರಣ್ಣ ಬಜೆಟ್‌ನಲ್ಲಿ ಕೊಟ್ಟ ‘ಎಣ್ಣೆ ಏಟು’; ಸಾಮಾಜಿಕ ಮಾಧ್ಯಮದ ರತ್ನನ್‌ ಪದಗಳು!

‘ರೈತರ ಸಾಲಮನ್ನಾ ಮಾಡಿದ್ದು ಕುಮಾರಸ್ವಾಮಿ ಸರಕಾರ ಅಲ್ಲ ಕುಡುಕರು’ ಎಂಬ ಮದ್ಯಾಲಾಪ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ತಾರಕಕ್ಕೇರಿದೆ. ಬಜೆಟ್‌ ಬಳಿಕ ಫೇಸ್‌ಬುಕ್‌ನಲ್ಲಿ ಹೊಸ ರತ್ನನ್‌ ಪದಗಳೂ ಹರಿದಾಡುತ್ತಿವೆ!

“ರೈತರ ಸಾಲಮನ್ನಾ ಮಾಡಿದ್ದು ಕುಮಾರಸ್ವಾಮಿ ಅಲ್ಲ, ಕುಡುಕರು”, “ಪ್ರತಿ ಬಜೆಟ್‌ನಲ್ಲೂ ಅನ್ಯಾಯವಾಗುವುದು ಕುಡುಕರಿಗೇ”, “ಕುಡುಕರೇ ಈ ದೇಶದ ಬೆನ್ನೆಲುಬು” -  ಇವು ಬಜೆಟ್ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಮಾತುಗಳು!

ರೈತರ ಸಾಲಮನ್ನಾದ ಹೊರೆ ಕುಡುಕರ ಮೇಲೆ ಬಿದ್ದಿದೆ ಎಂದು ಕುಡುಕರು ಹಾಗೂ ಕುಡುಕರ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ‘ಆಂದೋಲನ’ವೇ ಶುರುವಾಗಿದೆ! ಸಾಲಮನ್ನಾ ಹಾಗೂ ಮದ್ಯದ ಮೇಲಿನ ತೆರಿಗೆ ಹೆಚ್ಚಳ ವಿಷಯಗಳೀಗ ಸಾಮಾಜಿಕ ಜಾಲತಾಣಗಳಲ್ಲಿ ಮುಖಾಮುಖಿಯಾಗಿ ಗುದ್ದಾಟಕ್ಕೆ ನಿಂತಿವೆ.

ಬಜೆಟ್‌ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ‘ರತ್ನ’ಗಳು ಸೃಷ್ಟಿಯಾಗಿವೆ. ಕುಡುಕರ ಪರವಾಗಿ ಹಲವರು ತಮ್ಮ ತಮ್ಮ ಫೇಸ್‌ಬುಕ್‌ ಅಕೌಂಟ್‌ಗಳ ಮೂಲಕ ಹೊಸಹೊಸದಾಗಿ ರತ್ನನ್‌ ಪದಗಳನ್ನು ಹರಿಬಿಡುತ್ತಿದ್ದಾರೆ.

ಸಾಲಮನ್ನಾ ಹಾಗೂ ಕುಡುಕರ ಬಗೆಗೆ ಮೀಮ್‌ಗಳು, ಚುಟುಕುಗಳು, ಬರಹಗಳು ಫೇಸ್‌ಬುಕ್‌, ಟ್ವಿಟರ್‌ಗಳಲ್ಲಿ ಹೆಚ್ಚಾಗಿ ಹರಿದಾಡುತ್ತಿವೆ. ಕೆಲವರು ತಮ್ಮ ಪ್ರೊಫೈಲ್‌ ನೇಮ್‌ಗಳನ್ನು ‘ಕ್ಲಾಸಿಕ್‌ ಕುಡುಕ’, ‘ನಿಷ್ಠಾಂವತ ಕುಡುಕ’ ಎಂದೆಲ್ಲಾ ಬದಲಿಸಿಕೊಂಡಿದ್ದಾರೆ.

“ನಿಜಕ್ಕೂ ಸಾಲಮನ್ನಾ ಮಾಡಿದ್ದು ಸರಕಾರ ಅಲ್ಲ ಕುಡುಕರು”, “ಸಾಲ ಮಾಡೋದು ರೈತರು, ತೀರಿಸೋದು ಕುಡುಕರು”, “ಸಬ್ಸಿಡಿ ಕೇಳಿಲ್ಲ, ಸಾಲಮನ್ನಾ ಮಾಡಿ ಅನ್ನಲಿಲ್ಲ, ಆದ್ರೂ ನಮ್ ಕುಡುಕರ ಹೊಟ್ಟೆ ಮೇಲೆ ಯಾಕೆ ಹೊಡೀತೀರಾ” ಎಂಬ ಮೀಮ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುತ್ತಿವೆ.

ಕುಮಾರಣ್ಣ ಬಜೆಟ್‌ನಲ್ಲಿ  ಕೊಟ್ಟ ‘ಎಣ್ಣೆ ಏಟು’; ಸಾಮಾಜಿಕ ಮಾಧ್ಯಮದ ರತ್ನನ್‌ ಪದಗಳು!

ಪ್ರತಿ ಬಾರಿ ಬಜೆಟ್ ಘೋಷಣೆಯಾದರೂ ಕುಡುಕರ ಮೇಲೆ ಹೊರೆ ತಪ್ಪಿದ್ದಲ್ಲ ಎಂದು ಮದ್ಯಪ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ಮದ್ಯಾಲಾಪ ನಡೆಸುತ್ತಿದ್ದಾರೆ. ರೈತರ ಸಾಲಮನ್ನಾದ ಹೊರೆ ಹೊತ್ತೂ ಕುಡುಕರು ವಿಡಂಬನೆಗೆ ಗುರುಯಾಗಬೇಕಾಗಿರುವುದು ವಿಪರ್ಯಾಸ ಎಂದು ಹಲವರು ಕುಡುಕರ ಬಗ್ಗೆ ಮರುಕ ತೋರಿದ್ದಾರೆ.

“ದೇಶದ ಬಹುತೇಕ ಎಲ್ಲಾ ವರ್ಗದ ಸಾಲ ತೀರಿಸುವವರು ಕುಡುಕರೇ. ಕುಡುಕರಿಗೊಂದು ಸಲಾಂ” ಎಂದು ಹಲವರು ಪೋಸ್ಟ್‌ ಹಾಕಿದ್ದಾರೆ.

“ನಾನು ಕುಡಿಯೋದು ರೈತರ ಸಾಲಮನ್ನಾಕ್ಕಾಗಿ ಎಂದು ಇನ್ನು ಮುಂದೆ ಕುಡುಕರು ಎದೆ ತಟ್ಟಿಕೊಂಡು ಹೇಳಬಹುದು!” ಎಂದು ಕೆಲವರು ಮೀಮ್‌ಗಳನ್ನು ಮುಖಪುಟಕ್ಕೆ ತಗುಲಿ ಹಾಕಿದ್ದಾರೆ.

“ಸರಕಾರ ಅಲ್ಲ ನಮ್ಮಂತ ‘ಗ್ಲಾಸ್ ಪ್ರೇಮಿ’ಗಳು ರೈತರ ಸಾಲ ಕಟ್ಟೋರು... ಕುಡುಕರು ದೇಶದ ಆಸ್ತಿ ಅನ್ನೋದಕ್ಕೆ ಇನ್ನೊಂದು ಉದಾಹರಣೆ ಬೇಕೆ?” ಎಂದು ಕೆಲವರು ಅಣಕವಾಡಿದ್ದಾರೆ.