ಖುಂಟೀ ಅತ್ಯಾಚಾರ ಪ್ರಕರಣ; ಪಥಲ್‌ಗಡಿ ಹೋರಾಟಗಾರರೇ ಪೊಲೀಸರ ಗುರಿ
ಸುದ್ದಿ ಸಾಗರ

ಖುಂಟೀ ಅತ್ಯಾಚಾರ ಪ್ರಕರಣ; ಪಥಲ್‌ಗಡಿ ಹೋರಾಟಗಾರರೇ ಪೊಲೀಸರ ಗುರಿ

ಖುಂಟೀ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಪಥಲ್‌ಗಡಿ ಹೋರಾಟಗಾರರನ್ನೇ ಗುರಿಯಾಗಿಸಿಕೊಂಡಿದ್ದಾರೆ ಎಂದು ಸ್ಥಳೀಯ ಸತ್ಯಶೋಧನಾ ವರದಿ ಹೇಳಿದೆ.

ಜಾರ್ಖಂಡ್‌ನ ಖುಂಟೀ ಜಿಲ್ಲೆಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಪಥಲ್‌ಗಡಿ ಆದಿವಾಸಿ ಹೋರಾಟಗಾರರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಸ್ಥಳೀಯ ಸತ್ಯಶೋಧನಾ ಸಮಿತಿಯ ವರದಿ ಹೇಳಿದೆ.

ಈ ಪ್ರಕರಣದಲ್ಲಿ ಪಥಲ್‌ಗಡಿ ಹೋರಾಟಗಾರರು ಮತ್ತು ಕ್ರಿಶ್ಚಿಯನ್‌ ಮಿಷನರಿಗಳನ್ನೇ ಗುರಿಯಾಗಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿರುವುದು ಪ್ರಶ್ನಾರ್ಹ. ಪೊಲೀಸರ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ವರದಿ ತಿಳಿಸಿದೆ.

ಖುಂಟೀ ಜಿಲ್ಲೆಯ ಕೊಚಂಗ್‌ನ ಕ್ರಿಶ್ಚಿಯನ್‌ ಮಿಷನರಿ ಶಾಲೆಯಲ್ಲಿ ಜೂನ್‌ 19ರಂದು ಬೀದಿ ನಾಟಕ ಪ್ರದರ್ಶಿಸಲು ಬಂದಿದ್ದ ಸ್ವಯಂಸೇವಾ ಸಂಸ್ಥೆಯೊಂದರ ಐದು ಮಂದಿ ಮಹಿಳೆಯರ ಮೇಲೆ ಪಥಲ್‌ಗಡಿ ಹೋರಾಟಗಾರರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಕೊಚಂಗ್‌ನ ಕ್ರಿಶ್ಚಿಯನ್‌ ಮಿಷನರಿ ಶಾಲೆಯ ಪ್ರಾಂಶುಪಾಲ ಮತ್ತು ಮತ್ತೊಬ್ಬ ಸ್ಥಳೀಯ ಗ್ರಾಮಸ್ಥನನ್ನು ಪೊಲೀಸರು ಬಂಧಿಸಿದ್ದಾರೆ.

Also read: ‘ಅಂತರ್ಯುದ್ಧ’: ಮುಂಡಾ ಆದಿವಾಸಿಗಳ ‘ದಿಶೋಂ’ಗೆ ದಾಳಿ ಇಟ್ಟ ಅರೆಸೇನಾ ಪಡೆಗಳು

ಮಾನವ ಕಳ್ಳಸಾಗಣೆ ಬಗ್ಗೆ ಜಾಗೃತಿ ಮೂಡಿಸಲು ಈ ಬೀದಿ ನಾಟಕ ಆಯೋಜಿಸಲಾಗಿತ್ತು. ಈ ನಾಟಕದಲ್ಲಿ ಪಥಲ್‌ಗಡಿಗೆ ವಿರುದ್ಧವಾದ ಅಂಶಗಳಿವೆ ಎಂಬ ಕಾರಣಕ್ಕೆ ಈ ಸ್ವಯಂಸೇವಾ ಸಂಸ್ಥೆಯ ಸದಸ್ಯರಿಗೆ ಬುದ್ಧಿ ಕಲಿಸಬೇಕೆಂಬ ಉದ್ದೇಶದಿಂದ ಪಥಲ್‌ಗಡಿ ಹೋರಾಟಗಾರರೇ ಈ ಕೃತ್ಯ ಎಸಗಿದ್ದಾರೆ ಎಂಬುದು ಪೊಲೀಸರ ಆರೋಪ.

ಜೂನ್‌ 19ರಂದು ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದರೂ ಜೂನ್‌ 21ರಂದು ಮೊದಲ ಎಫ್‌ಐಆರ್‌ ದಾಖಲಿಸಲಾಗಿದೆ. ಎಫ್‌ಐಆರ್‌ ದಾಖಲಿಸುವ ಹಿಂದಿನ ದಿನ ಜೂನ್‌ 20ರಂದು ಐವರು ಮಹಿಳೆಯರ ಪೈಕಿ ಇಬ್ಬರ ಪ್ರಾಥಮಿಕ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಅಂದು ಕೃತ್ಯ ಎಸಗಿದವರ ಪೈಕಿ ಯಾರೂ ಸ್ಥಳೀಯರಲ್ಲ. ಆದರೆ ಪೊಲೀಸರು ಶಾಲೆಯ ಪ್ರಾಂಶುಪಾಲ ಮತ್ತು ಸ್ಥಳೀಯ ಗ್ರಾಮದ ಓರ್ವ ವ್ಯಕ್ತಿಯನ್ನು ಬಂಧಿಸಿಟ್ಟುಕೊಂಡಿದ್ದಾರೆ ಎಂದು ಸತ್ಯಶೋಧನಾ ವರದಿ ಹೇಳಿದೆ.

ಮಹಿಳೆಯರಿಗೆ ಸೂಕ್ತ ಭದ್ರತೆ ಒದಗಿಸದ ಆರೋಪದ ಮೇಲೆ ಶಾಲೆಯ ಪ್ರಾಂಶುಪಾಲರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಪ್ರಾಂಶುಪಾಲರ ವಿರುದ್ಧವೂ ಅಪಹರಣ, ಸಾಮೂಹಿಕ ಅತ್ಯಾಚಾರ, ಅಕ್ರಮ ಬಂಧನ, ಕೃತ್ಯಕ್ಕೆ ಸಂಚು ಆರೋಪಗಳು ಎಫ್‌ಐಆರ್‌ನಲ್ಲಿವೆ ಎಂದು ಸತ್ಯಶೋಧನಾ ಸಮಿತಿ ಹೇಳಿದೆ.

ಸದ್ಯ ಪೊಲೀಸರ ವಶದಲ್ಲಿರುವ ಸಂತ್ರಸ್ತ ಮಹಿಳೆಯರಿಂದ ಯಾವುದೇ ಹೇಳಿಕೆ ಪಡೆಯಲಾಗಿಲ್ಲ. ಬಂಧಿತ ಆರೋಪಿಗಳನ್ನು ಅವರು ಗುರುತಿಸಿಯೂ ಇಲ್ಲ. ಇವೆಲ್ಲವೂ ಈ ಪ್ರಕರಣದಲ್ಲಿ ಪೊಲೀಸರು ಪಥಲ್‌ಗಡಿ ಹೋರಾಟಗಾರರು ಹಾಗೂ ಕ್ರಿಶ್ಚಿಯನ್‌ ಮಿಷನರಿಯನ್ನು ಗುರಿಯಾಗಿಸಿಕೊಂಡಿದ್ದಾರೆ ಎಂಬ ಅನುಮಾನಗಳಿಗೆ ಪುಷ್ಟಿ ನೀಡುತ್ತವೆ ಎಂದು ಸಮಿತಿ ತಿಳಿಸಿದೆ.

ಜೂನ್‌ 26ರಂದು ಪೊಲೀಸರು ಅರೆ ಸೇನಾಪಡೆಗಳೊಂದಿಗೆ ಘಾರ್ಗಾ ಮತ್ತು ಇತರೆ ಏಳು ಗ್ರಾಮಗಳ ಮೇಲೆ ದಾಳಿ ನಡೆಸಿ, ಶಂಕೆಯ ಮೇಲೆ ಹಲವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪೊಲೀಸರು ಮತ್ತು ಆದಿವಾಸಿಗಳ ನಡುವಿನ ಘರ್ಷಣೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ.

ಈ ಪ್ರಕರಣದಲ್ಲಿ ಮಾಧ್ಯಮಗಳು ಕೂಡಾ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಪಥಲ್‌ಗಡಿ ಹೋರಾಟಗಾರರು ಹಾಗೂ ಕ್ರಿಶ್ಚಿಯನ್‌ ಮಿಷನರಿಯ ಬಗ್ಗೆಯೇ ನಕಾರಾತ್ಮಕವಾಗಿ ವರದಿ ಮಾಡುತ್ತಿವೆ ಎಂದು ಸತ್ಯಶೋಧನಾ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.