samachara
www.samachara.com
ಮಕ್ಕಳ ಕಳ್ಳರ ವದಂತಿಗೆ ಅಮಾಯಕರ ಸಾವು; ರಾಜ್ಯಗಳಿಗೆ ನಿರ್ದೇಶನ ನೀಡಿದ ಕೇಂದ್ರ ಸರಕಾರ
ಸುದ್ದಿ ಸಾಗರ

ಮಕ್ಕಳ ಕಳ್ಳರ ವದಂತಿಗೆ ಅಮಾಯಕರ ಸಾವು; ರಾಜ್ಯಗಳಿಗೆ ನಿರ್ದೇಶನ ನೀಡಿದ ಕೇಂದ್ರ ಸರಕಾರ

ದೇಶದೆಲ್ಲೆಡೆ ಮಕ್ಕಳ ಕಳ್ಳರ ವದಂತಿ ಹರಡಿದ್ದು, ನೂರಾರು ಅಮಾಯಕರು ಜನ ಸಮೂಹದಿಂದ ಥಳಿಸಲ್ಪಟ್ಟಿದ್ದಾರೆ. ಹೀಗಾಗಿ ಕೇಂದ್ರ ಸರಕಾರ ಈ ಕುರಿತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರಕಾರಗಳಿಗೆ ಸೂಚಿಸಿದೆ.

samachara

samachara

ಮಕ್ಕಳ ಕಳ್ಳರು ಎಂಬ ಶಂಕೆಯ ಮೇಲೆ ಭಾರತದಾದ್ಯಂತ ಹಲವಾರು ಅಮಾಯಕರು ಸಾರ್ವಜನಿಕರಿಂದ ಥಳಿತಕ್ಕೆ ಒಳಗಾಗಿದ್ದರು. ಈ ಕುರಿತು ಕೇಂದ್ರ ಸರಕಾರ ರಾಜ್ಯ ಸರಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ. ಮಕ್ಕಳ ಕಳ್ಳರು ಎಂಬ ಶಂಕೆಯಿಂದ ಅಮಾಯಕರು ಬಲಿಯಾಗುವುದನ್ನು ತಡೆಗಟ್ಟಲು ಬೇಕಿರುವ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಹೇಳಿದೆ.

ಆದಷ್ಟು ಬೇಗ ಮಕ್ಕಳ ಕಳ್ಳರು ಎಂಬ ವದಂತಿಗಳನ್ನು ತಡೆಗಟ್ಟಿ, ಅಮಾಯಕರ ಸಾವನ್ನು ತಡೆಯಲು ಬೇಕಾದ ಪರಿಣಾಮಕಾರಿ ಕ್ರಮಗಳನ್ನು ಈ ಕೂಡಲೇ ಕೈಗೊಳ್ಳುವಂತೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡುವಂತೆ ಸೂಚಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ವಂದತಿಗಳಿಗೆ ಸಂಬಂಧಿಸಿದಂತೆ ಸಾಮುದಾಯಿಕ ಕಾರ್ಯಕ್ರಮಗಳನ್ನು ನಡೆಸಬೇಕಿದೆ. ಅರಿವು ಕಾರ್ಯಕ್ರಮಗಳನ್ನು ನಡೆಸಿ ಮಕ್ಕಳ ಕಳ್ಳರು ಎಂಬ ಭಯವನ್ನು ಜನರ ಮನಸ್ಸಿನಿಂದ ಹೋಗಲಾಡಿಸಿ, ಧೈರ್ಯ ತುಂಬಬೇಕಿದೆ ಎಂದು ಹೇಳಿದೆ.

ಕೇಂದ್ರ ಸಚಿವ ರವಿ ಶಂಕರ್‌ ಪ್ರಸಾದ್‌ ಬುಧವಾರ ವಾಟ್ಸ್‌ಆಪ್‌ನಂತಹ ಮೆಸೇಜಿಂಗ್‌ ಕಂಪನಿಗಳ ಮಾಲೀಕರ ಜತೆ ಮಾತನಾಡಿದ್ದು, ಐಟಿ ಸಚಿವಾಲಯದ ಜತೆ ಕೈಜೋಡಿಸಿ ಸುಳ್ಳು ಸಂದೇಶಗಳನ್ನು ತಡೆಯಲು ಸಹಕರಿಸಬೇಕೆಂದು ಕೇಳಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಂಡು, ತಪ್ಪು ಮಾಹಿತಿಗಳನ್ನು ಹಂಚಲು ಅವಕಾಶ ನೀಡದಂತೆ ಬಳಕೆದಾರರನ್ನು ತಡೆಗಟ್ಟಬೇಕೆಂದು ತಿಳಿಸಿದ್ದಾರೆ.

ಸಾರ್ವಜನಿಕ ಥಳಿತದ ಬಗ್ಗೆ ಮಂಗಳವಾರ ಪ್ರಸ್ತಾಪ ಮಾಡಿದ್ದ ಸುಪ್ರಿಂ ಕೋರ್ಟ್, ಈ ಸಮಸ್ಯೆಗಳು ಕಾನೂನು ಮತ್ತು ಸುವ್ಯವಸ್ಥೆಗಳ ಅಡಿಯೊಳಗೆ ಬರುವುದಿಲ್ಲ ಎಂದಿತ್ತು. ಸುಪ್ರಿಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ‘ಜನರ ಈ ಹಿಂಸೆಯನ್ನು ಜಾತಿ ಅಥವಾ ಧರ್ಮದೊಂದಿಗೆ ತಳುಕು ಹಾಕಬೇಡಿ’ ಎಂದು ಎಚ್ಚರಿಸಿದ್ದರು.

“ಜನಸಮೂಹ ನಡೆಸುವ ಹತ್ಯೆ ಕಾನೂನು ಸುವ್ಯವಸ್ಥೆಯ ಗಡಿಯೊಳಗೆ ಬರುವುದಿಲ್ಲ. ಆದಾಗ್ಯೂ ಕೂಡ ಇದು ಅಪರಾಧವೇ. ಆದರೆ ಇದು ಯಾವುದೇ ಉದ್ದೇಶವನ್ನಿಟ್ಟುಕೊಂಡು ಮಾಡುತ್ತಿರುವುದಲ್ಲ,” ಎಂದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ಗೋ ರಕ್ಷಣೆ, ಮಕ್ಕಳ ಕಳ್ಳತನ ಇತ್ಯಾದಿ ವದಂತಿಗಳು ಜನರ ಮನಸ್ಸಿನಲ್ಲಿ ಕೆಲಸ ಮಾಡುತ್ತಿವೆ ಎಂದಿದ್ದಾರೆ.

ಕಳೆದ ವಾರವಷ್ಟೇ ಮಹಾರಾಷ್ಟ್ರದ ಧೂಳೆ ಜಿಲ್ಲೆಯಲ್ಲಿ ಜನ 5 ಅಮಾಕರನ್ನು ಹೊಡೆದು ಸಾಯಿಸಿದ್ದರು. ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವೀಡಿಯೋ ವಾಟ್ಸ್‌ಆಪ್‌ನಲ್ಲಿ ಹೆಚ್ಚಾಗಿ ಹರಿದಾಡಿದ್ದ ಕಾರಣದಿಂದಾಗಿ ಜನ ಗೊತ್ತುಗುರಿ ಇಲ್ಲದವರನ್ನು ಥಳಿಸಲು ಮುಂದಾಗಿದ್ದರು.

ಇಂತಹದ್ದೇ ಘಟನೆಯೊಂದು ತ್ರಿಪುರದಲ್ಲಿ ವರದಿಯಾಗಿತ್ತು. ಮಕ್ಕಳ ಕಳ್ಳರು ಎಂಬ ಗುಮಾನಿಯ ಕಾರಣಕ್ಕೆ ಜನರಿಂದ ಥಳಿಸಲ್ಪಟ್ಟು ಒಬ್ಬ ವ್ಯಕ್ತಿ ಮೃತಪಟ್ಟರೆ, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದರು.

ಕೆಲವು ತಿಂಗಳ ಹಿಂದೆ ತಮಿಳುನಾಡಿನಲ್ಲಿ ಮಕ್ಕಳ ಕಳ್ಳರ ಕುರಿತಾದ ವದಂತಿ ಹಬ್ಬಿತ್ತು. ಈ ವದಂತಿಗೆ ಮೊದಲ ಬಲಿಯಾದವರು ತಿರುವಣ್ಣಾಮಲೈನ 65ರ ಪ್ರಾಯದ ವೃದ್ಧೆ ರುಕ್ಮಿಣಿ. “ಉತ್ತರ ಭಾರತದಿಂದ 300 ಜನ ಮಕ್ಕಳ ಕಳ್ಳರು ಬಂದಿದ್ದಾರೆ. ಯಾವ ಕ್ಷಣದಲ್ಲಿ ಆದರೂ ನಿಮ್ಮ ಮಕ್ಕಳನ್ನು ಅಪಹರಿಸಿ ಅಂಗಾಂಗ ಕದಿಯುತ್ತಾರೆ. ಎಲ್ಲರೂ ಜಾಗೃತರಾಗಿರಿ. ಈ ಸಂದೇಶವನ್ನು ಇತರರಿಗೂ ಕಳಿಸಿ, ಅವರ ಮಕ್ಕಳನ್ನೂ ರಕ್ಷಿಸಿ,” ಎಂಬ ವದಂತಿ ಜನರನ್ನು ಬೆಚ್ಚಿ ಬೀಳಿಸಿತ್ತು.

ಕರ್ನಾಟಕದಲ್ಲೂ ಕೂಡ ಮಕ್ಕಳ ಕಳ್ಳರ ವದಂತಿ ದೊಡ್ಡದಾಗಿ ಹಬ್ಬಿತ್ತು. ಮೇ ತಿಂಗಳಲ್ಲಿ ರಾಜ್ಯದಲ್ಲಿ ಮಕ್ಕಳ ಕಳ್ಳರೆಂದು ಥಳಿಸಿದ 68 ಪ್ರಕರಣಗಳು ವರದಿಯಾಗಿದ್ದವು. ಒಟ್ಟಾರೆ 81 ಅಮಾಯಕರನ್ನು ಜನ ಹೊಡೆದಿದ್ದರು. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ರಾಜಸ್ತಾನ ಮೂಲದ ಕಾಲೂರಾಮ್‌ ಎಂಬ ವ್ಯಕ್ತಿ ಜನರಿಂದ ಭೀಕರವಾಗಿ ಹಲ್ಲೆಗೊಳಗಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಜನರ ಏಟಿಗೆ ಜರ್ಜರಿತನಾಗಿದ್ದ ಕಾಲೂರಾಮ್‌, ಯಾವ ಅಪರಾಧವನ್ನೂ ಕೂಡ ಮಾಡದೇ ಸಾವನ್ನಪ್ಪಿದ್ದ.

ತಮ್ಮೂರಿಗೆ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿಗೆ ಕಿವಿಗೊಟ್ಟ ಬಳ್ಳಾರಿಯ ಕೆಲ ಹಳ್ಳಿಗಳ ಜನ ರಾತ್ರಿಯಡೀ ದೊಣ್ಣೆಗಳನ್ನು ಹಿಡಿದು ಕಾದುಕುಳಿತಿದ್ದರು. ಹುಬ್ಬಳ್ಳಿಯ ಕೆಲವು ಮಹಿಳೆಯರು ಕೈಯಲ್ಲಿ ಕಾರದಪುಡಿ, ಬಡಿಗೆಗಳನ್ನಿಡಿದು ಮಕ್ಕಳ ಕಳ್ಳರ ಶೋಧ ನಡೆಸಿದ್ದರು. ಮಕ್ಕಳ ಕಳ್ಳರು ಬಂದಿಲ್ಲ ಎಂದು ಪೊಲೀಸ್‌ ಇಲಾಖೆ ಸ್ಪಷ್ಟಪಡಿಸಿದ ಮೇಲಷ್ಟೇ ಕರ್ನಾಟಕದಲ್ಲಿ ಈ ಕ್ರೌರ್ಯ ತಹಬದಿಗೆ ಬಂದಿತ್ತು.