samachara
www.samachara.com
ಕುಮಾರಸ್ವಾಮಿ ಬಜೆಟ್; ಇಂದಿನ ‘ಶುಭಲಗ್ನ’ದಲ್ಲಿ ಆಯವ್ಯಯ ಸಂಪ್ರದಾಯ
ಸುದ್ದಿ ಸಾಗರ

ಕುಮಾರಸ್ವಾಮಿ ಬಜೆಟ್; ಇಂದಿನ ‘ಶುಭಲಗ್ನ’ದಲ್ಲಿ ಆಯವ್ಯಯ ಸಂಪ್ರದಾಯ

ರೈತರ ಸಾಲಮನ್ನಾ ಸೇರಿದಂತೆ ಹಲವು ನಿರೀಕ್ಷೆಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸುತ್ತಿರುವ ಸಮ್ಮಿಶ್ರ ಸರಕಾರದ ಮೊದಲ ಬಜೆಟ್‌ ಹುಟ್ಟುಹಾಕಿದೆ.

ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರಕಾರದ ಮೊದಲ ಬಜೆಟ್‌ ಮಂಡನೆಗೆ ಕ್ಷಣಗಣನೆ ಶುರುವಾಗಿದೆ. ಯಾವ ಪ್ರಮಾಣದಲ್ಲಿ ರೈತರ ಸಾಲಮನ್ನಾ ಆಗಲಿದೆ ಎಂಬ ಬಗ್ಗೆ ಈ ಬಜೆಟ್‌ ಹೆಚ್ಚು ಕುತೂಹಲ ಮೂಡಿಸಿದೆ.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಮ್ಮ ಬಜೆಟ್‌ನಲ್ಲಿ ಯಾವ ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಅನುದಾನ ಮೀಸಲಿಟ್ಟಿದ್ದಾರೆ, ಯಾವ ಯಾವ ಹೊಸ ಯೋಜನೆಗಳನ್ನು ಘೋಷಿಸಲಿದ್ದಾರೆ, ಕಾಂಗ್ರೆಸ್‌- ಜೆಡಿಎಸ್‌ ಪ್ರಣಾಳಿಕೆಯ ಎಷ್ಟು ಭರವಸೆಗಳಿಗೆ ಬಜೆಟ್‌ನಲ್ಲಿ ಸ್ಥಾನ ಸಿಕ್ಕಿದೆ ಎಂಬುದಕ್ಕೆ ಗುರುವಾರ ಮಧ್ಯಾಹ್ನದ ಹೊತ್ತಿಗೆ ಉತ್ತರ ದೊರೆಯಲಿದೆ.

ರೈತರ ಸಾಲಮನ್ನಾ, ಉದ್ಯೋಗ ಸೃಷ್ಟಿ, ಆರೋಗ್ಯ ಯೋಜನೆ, ನೀರಾವರಿಗೆ 1.25 ಲಕ್ಷ ಕೋಟಿ ಮೀಸಲು ವಿಚಾರಗಳು ಇತ್ತೀಚೆಗೆ ನಡೆದ ಸಮನ್ವಯ ಸಮಿತಿ ಸಭೆಯ ಬಳಿಕ ಬಹಿರಂಗವಾಗಿವೆ. ಆದರೆ, ರೈತರ ಸಾಲಮನ್ನಾ ವಿಚಾರದಲ್ಲಿ ಇನ್ನೂ ಪೂರ್ತಿ ಮಾಹಿತಿ ಬಹಿರಂಗವಾಗಿಲ್ಲ.

ರೈತರ ಸಾಲಮನ್ನಾ ವಿಚಾರ ಬಂದಾಗಲೆಲ್ಲಾ ಕುಮಾರಸ್ವಾಮಿ ಬಜೆಟ್‌ ಮಂಡನೆವರೆಗೆ ಕಾಯಿರಿ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಸಾಲಮನ್ನಾ ವಿಚಾರದ ಬಗ್ಗೆ ರೈತ ಮುಖಂಡರ ಸಭೆ ಕರೆದು ಷರತ್ತುಗಳನ್ನು ಹಾಕಿದ್ದ ಕುಮಾರಸ್ವಾಮಿ ಅಂತಿಮವಾಗಿ ಯಾವ ರೀತಿಯ ಸಾಲಮನ್ನಾ ಪ್ಯಾಕೇಜ್‌ ಘೋಷಿಸಲಿದ್ದಾರೆ ಎಂಬ ನಿರೀಕ್ಷೆ ಹೆಚ್ಚಿಸಿದೆ.

ಜೆಡಿಎಸ್‌- ಕಾಂಗ್ರೆಸ್‌ನ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ ಯಾವ ಯಾವ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗಿದೆ, ಹಿಂದಿನ ಸಿದ್ದರಾಮಯ್ಯ ನೇತೃತ್ವ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿದ್ದ ಯಾವ ಕಾರ್ಯಕ್ರಮಗಳು ಮುಂದುವರಿಯಲಿವೆ. ಯಾವ ಹೊಸ ಕಾರ್ಯಕ್ರಮಗಳು ಘೋಷಣೆಯಾಗಲಿವೆ ಎಂಬ ಪ್ರಶ್ನೆಗಳಿಗೆ ಬಜೆಟ್‌ ಭಾಷಣದ ಪುಸ್ತಕದಲ್ಲಿ ಈಗಾಗಲೇ ಉತ್ತರಗಳು ಸಿದ್ಧವಾಗಿವೆ. ಇನ್ನು ಬಾಕಿ ಇರುವುದು ಈ ಭಾಷಣವನ್ನು ಗುರುವಾರ ಸದನದಲ್ಲಿ ಓದುವುದಷ್ಟೆ.

ಬಜೆಟ್‌ ಮಂಡನೆ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅಪಸ್ವರ ತೆಗೆದಿದ್ದರು. ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದ ದಿನಗಳಲ್ಲಿ ಆಪ್ತರೊಂದಿಗೆ ಸಿದ್ದರಾಮಯ್ಯ ಮಾತನಾಡಿದ್ದ ವಿಡಿಯೊ ವೈರಲ್‌ ಆಗಿತ್ತು.

“ಕಾಂಗ್ರೆಸ್‌ ಅವಧಿಯ ಬಜೆಟ್‌ ಅನ್ನೇ ಮುಂದುವರಿಸಬಹುದು. ಸ್ವತಂತ್ರವಾಗಿ ಬಜೆಟ್‌ ಮಂಡಿಸಲು ಜೆಡಿಎಸ್‌ ಬಹುಮತದಿಂದ ಅಧಿಕಾರಕ್ಕೆ ಬಂದಿಲ್ಲ” ಎಂಬ ಮಾತುಗಳನ್ನು ಸಿದ್ದರಾಮಯ್ಯ ಆಡಿದ್ದರು. ಆದರೆ, ಇದೆಲ್ಲವೂ ಈಗ ತೆರೆಮರೆಗೆ ಸರಿದಿದೆ. ಮೊನ್ನೆಯ ಸಮನ್ವಯ ಸಮಿತಿ ಸಭೆಯಲ್ಲಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಒಟ್ಟಿಗೇ ಕುಳಿತು, ಚರ್ಚೆ ನಡೆಸಿ ಬಜೆಟ್‌ನಲ್ಲಿ ಏನೇನು ಇರಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಕಾಂಗ್ರೆಸ್ ಸರಕಾರದ ಅವಧಿಯ ಕೆಲ ಜನಪ್ರಿಯ ಯೋಜನೆಗಳನ್ನು ಕುಮಾರಸ್ವಾಮಿ ಕೈ ಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಅದಕ್ಕೆ ಬದಲಾಗಿ ಜೆಡಿಎಸ್‌ ಪ್ರಣಾಳಿಕೆಯಲ್ಲಿ ಹೇಳಿದ್ದ ‘ಜನಪ್ರಿಯ’ ಕಾರ್ಯಕ್ರಮಗಳು ಬಜೆಟ್‌ನಲ್ಲಿ ಘೋಷಣೆಯಾಗಲಿವೆ ಎಂಬ ಮಾತುಗಳಿವೆ.

ಕೃಷಿಗೆ ಈ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡುವ ನಿರೀಕ್ಷೆ ಇದೆ. ಅಲ್ಲದೆ ಸ್ವಕ್ಷೇತ್ರ ಹಾಗೂ ಒಕ್ಕಲಿಗರ ಪ್ರಾಬಲ್ಯವಿರುವ ಹಳೇ ಮೈಸೂರು ಭಾಗಕ್ಕೆ ವಿಶೇಷ ಕಾರ್ಯಕ್ರಮಗಳನ್ನು ಘೋಷಿಸಬಹುದು ಎಂಬ ಮಾತುಗಳೂ ಇವೆ. ಇಸ್ರೇಲ್‌ ಮಾದರಿ ಕೃಷಿ ಯೋಜನೆಯ ಬಗ್ಗೆಯೂ ಘೋಷಣೆಯ ನಿರೀಕ್ಷೆ ಇದೆ.

Also read: ಕುಮಾರಸ್ವಾಮಿ ಕನಸಿನ ಇಸ್ರೇಲ್ ಕೃಷಿ: ಏನಿದು ಮಂಡ್ಯದಲ್ಲಿ ಆರಂಭಗೊಂಡ ‘ಕಿಬೂತ್’ ಪ್ರಯೋಗ?

ಕುಮಾರಸ್ವಾಮಿ ಮಂಡಿಸುತ್ತಿರುವ ಬಜೆಟ್‌ ಬಗ್ಗೆ ನಿರೀಕ್ಷೆಗಳೇನೋ ಹೆಚ್ಚಾಗಿಯೇ ಇವೆ. ಈ ಬಜೆಟ್‌ಗೆ ಮಾತ್ರವಲ್ಲ ಯಾವುದೇ ಬಜೆಟ್‌ ಮಂಡನೆಯ ಸಂದರ್ಭದಲ್ಲೂ ನಿರೀಕ್ಷೆಗಳು ಹೆಚ್ಚಾಗಿಯೇ ಇರುತ್ತವೆ. ಆರ್ಥಿಕತೆಯ ವಿಚಾರಕ್ಕೆ ಬಂದಾಗ ಮಿತ ಸಂಪನ್ಮೂಲದಲ್ಲಿ ಅಪರಿಮಿತ ಬಯಕೆಗಳ ಈಡೇರಿಕೆ ಯಾವಾಗಲೂ ಕಷ್ಟಸಾಧ್ಯ.

ಹೀಗಾಗಿ ಈ ಬಾರಿಯ ಬಜೆಟ್‌ ಕೂಡಾ ಕೇವಲ ಜನಪ್ರಿಯ ಯೋಜನೆಗಳ ಘೋಷಣಾ ಪತ್ರವಾಗಲಿದೆಯೇ ಅಥವಾ ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಸಾಧ್ಯವಾಗುವ ಯೋಜನೆಗಳಷ್ಟೇ ಬಜೆಟ್‌ನಲ್ಲಿ ಘೋಷಣೆಯಾಗಲಿವೆಯೇ ಎಂಬುದಕ್ಕೆ ಕೆಲ ಗಂಟೆಗಳಲ್ಲಿ ಉತ್ತರ ಸಿಗಲಿದೆ.