samachara
www.samachara.com
ಆರ್‌ಎಸ್‌ಎಸ್‌ ಮುಖಂಡ ಇಂದ್ರೇಶ್‌ ಕುಮಾರ್‌
ಸುದ್ದಿ ಸಾಗರ

‘ಸರ್ಜಿಕಲ್‌ ಸ್ಟ್ರೈಕ್‌ ಭಾರತ ಲಾಹೋರ್‌ಗೂ ನುಗ್ಗಬಹುದೆಂಬ ಎಚ್ಚರಿಕೆಯ ಸಂದೇಶ’: RSS ಮುಖಂಡ ಇಂದ್ರೇಶ್‌ ಕುಮಾರ್‌

“ಭಾರತ ಯಾವಾಗ ಬೇಕಾದರೂ ಲಾಹೋರ್‌ಗೆ ನುಗ್ಗಬಹುದೆಂಬ ಎಚ್ಚರಿಕೆ ಸಂದೇಶವನ್ನು ಸರ್ಜಿಕಲ್‌ ಸ್ಟ್ರೈಕ್‌ ನೀಡಿದೆ” ಎಂದಿದ್ದಾರೆ ಆರ್‌ಎಸ್‌ಎಸ್‌ ಮುಖಂಡ ಇಂದ್ರೇಶ್‌ ಕುಮಾರ್.

“ಭಾರತೀಯ ಸೇನೆ ನಡೆಸಿದ ಸರ್ಜಿಕಲ್‌ ಸ್ಟ್ರೈಕ್‌ (ನಿರ್ದಿಷ್ಟ ದಾಳಿ) ಭಾರತ ಯಾವಾಗ ಬೇಕಾದರೂ ಪಾಕಿಸ್ತಾನದ ಲಾಹೋರ್‌ಗೆ ನುಗ್ಗಬಹುದೆಂಬ ಎಚ್ಚರಿಕೆಯ ಸಂದೇಶ” ಎಂದು ಆರ್‌ಎಸ್‌ಎಸ್‌ ಮುಖಂಡ ಇಂದ್ರೇಶ್‌ ಕುಮಾರ್‌ ಹೇಳಿದ್ದಾರೆ.

ಆರ್‌ಎಸ್‌ಎಸ್‌ನ ಕೇಂದ್ರ ಸ್ಥಾನ ನಾಗಪುರದಲ್ಲಿ ‘ದೇಶದ ವರ್ತಮಾನದ ಪರಿಸ್ಥಿತಿ’ ವಿಷಯವಾಗಿ ಉಪನ್ಯಾಸ ನೀಡಿದ ಇಂದ್ರೇಶ್‌ ಕುಮಾರ್‌, “ಭಾರತೀಯ ಸೇನೆ ಸುಮಾರು 300 ಉಗ್ರರನ್ನು ಕೊಂದುಹಾಕಿದೆ. ಜಮ್ಮು – ಕಾಶ್ಮೀರದಲ್ಲಿ ಸಮ್ಮಿಶ್ರ ಸರಕಾರ ರಚಿಸಿದ ಬಿಜೆಪಿ ಪಾಕಿಸ್ತಾನದ ಉಗ್ರರ ಸಂಪರ್ಕ ಜಾಲವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ” ಎಂದಿದ್ದಾರೆ.

“ಜಮ್ಮು- ಕಾಶ್ಮೀರದಲ್ಲಿ ಸಮ್ಮಿಶ್ರ ಸರಕಾರ ರಚಿಸಿದ ಬಿಜೆಪಿ ಪ್ರಮುಖವಾದ ಮೂರ್ನಾಲ್ಕು ಕಾರ್ಯಾಚರಣೆಗಳನ್ನು ಅಲ್ಲಿ ಯಶಸ್ವಿಯಾಗಿ ಪೂರೈಸಿದೆ. ಅಂದುಕೊಂಡ ಕೆಲಸ ಮುಗಿದ ಮೇಲೆ ಸಮ್ಮಿಶ್ರ ಸರಕಾರದಿಂದ ಹಿಂದೆ ಬಂದು ಅಧಿಕಾರ ತ್ಯಾಗ ಮಾಡಿದೆ” ಎಂದು ಇಂದ್ರೇಶ್‌ ಹೇಳಿದ್ದಾರೆ.

“ಜಮ್ಮು- ಕಾಶ್ಮೀರ ಸರಕಾರದ ಸಹಕಾರ ಇಲ್ಲದಿದ್ದರೆ ಸರ್ಜಿಕಲ್‌ ಸ್ಟ್ರೈಕ್‌ ನಡೆಸುವುದು ಸುಲಭವಿರಲಿಲ್ಲ. ಸರ್ಜಿಕಲ್‌ ಸ್ಟ್ರೈಕ್‌ ನಡೆಸಿದ್ದು ಭಾರತ ಯಾವಾಗ ಬೇಕಾದರೂ ಲಾಹೋರ್‌ಗೆ ನುಗ್ಗಬಹುದೆಂಬ ಎಚ್ಚರಿಕೆಯ ಸಂದೇಶವನ್ನು ಪಾಕಿಸ್ತಾನಕ್ಕೆ ರವಾನಿಸಿದೆ” ಎಂದು ಅವರು ತಿಳಿಸಿದ್ದಾರೆ.

‘ಅಖಂಡ ಭಾರತದಲ್ಲಿ ಅಸಮಾನತೆಯೇ ಇರುವುದಿಲ್ಲ’:

“ಅಖಂಡ ಭಾರತ ನನ್ನ ಕನಸು. ಅಖಂಡ ಭಾರತದಲ್ಲೇ ನಮ್ಮ ಕೊನೆಯ ಉಸಿರು ಹೋಗಲಿ ಎಂದು ನಾವು ದೇವರಲ್ಲಿ ಪ್ರಾರ್ಥಿಸೋಣ” ಎಂದು ಹೇಳಿರುವ ಇಂದ್ರೇಶ್‌, “ನಾಗಪುರದಲ್ಲಿ ಒಂದು ಮನೆ ಕಟ್ಟಿಸಿ, ಲಾಹೋರ್‌ ಇಲ್ಲವೇ ಪಾವಲ್ಪಿಂಡಿಯಲ್ಲಿ ಇನ್ನೊಂದು ಮನೆ ಕಟ್ಟಿಸಿ” ಎಂದು ನೆರೆದಿದ್ದ ಸಭಿಕರಿಗೆ ಒತ್ತಾಯಿಸಿದ್ದಾರೆ.

“ಆರ್‌ಎಸ್‌ಎಸ್‌ ಸಂಸ್ಥಾಪಕ ಕೆ.ಬಿ. ಹೆಗಡೆವಾರ್ ಮತ್ತು ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಸಿದ್ಧಾಂತಗಳ ಆಧಾರದ ಮೇಲೆ ಭವಿಷ್ಯದ ಭಾರತ ನಿರ್ಮಾಣವಾಗಲಿದೆ. ಅಂತಹ ಭವಿಷ್ಯದ ಭಾರತದಲ್ಲಿ ಯಾವುದೇ ಬಗೆಯ ತಾರತಮ್ಯ, ಅಸಮಾನತೆ ಇರುವುದಿಲ್ಲ” ಎಂದಿದ್ದಾರೆ.