ಭಾರತದ ರೈಲು ನಿಲ್ದಾಣಗಳ ಭದ್ರತೆಗೆ ಇಸ್ರೇಲ್‌ನ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ!
ಸುದ್ದಿ ಸಾಗರ

ಭಾರತದ ರೈಲು ನಿಲ್ದಾಣಗಳ ಭದ್ರತೆಗೆ ಇಸ್ರೇಲ್‌ನ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ!

ಮುಂಬೈನ ಎಲ್ಫಿನ್‌ಸ್ಟೋನ್‌ ರೈಲು ನಿಲ್ದಾಣದ ಕಾಲ್ತುಳಿತ ದುರಂತದ ಬಳಿಕ ಎಚ್ಚೆತ್ತುಕೊಂಡಿರುವ ರೈಲ್ವೆ ಇಲಾಖೆ ನಿಲ್ದಾಣಗಳ ಭದ್ರತೆ ಹಾಗೂ ಸುರಕ್ಷತೆಗಾಗಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು ಮುಂದಾಗಿದೆ.

ರೈಲ್ವೆ ನಿಲ್ದಾಣಗಳಲ್ಲಿನ ಭದ್ರತೆಗಾಗಿ ಇಸ್ರೇಲ್‌ ತಂತ್ರಜ್ಞಾನ ಅಳವಡಿಸಿಕೊಳ್ಳಲು ಭಾರತೀಯ ರೈಲ್ವೆ ಮುಂದಾಗಿದೆ.

ರೈಲು ನಿಲ್ದಾಣಗಳಲ್ಲಿ ಇಸ್ರೇಲ್‌ ಅಳವಡಿಸಿಕೊಂಡಿರುವ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವನ್ನು ಭಾರತದ ರೈಲು ನಿಲ್ದಾಣಗಳಲ್ಲೂ ಅಳವಡಿಸಿಕೊಳ್ಳುವ ಯೋಜನೆ ಇದೆ. ಪ್ರಯೋಗಾರ್ಥವಾಗಿ ಈ ಯೋಜನೆಯನ್ನು ಮುಂಬೈನ ಥಾಣೆ ಮತ್ತು ಕಲ್ಯಾಣ್‌ ರೈಲು ನಿಲ್ದಾಣಗಳಲ್ಲಿ ಜಾರಿಗೆ ತರಲು ಇಲಾಖೆ ಮುಂದಾಗಿದೆ.

ಸದ್ಯ ಪ್ರಮುಖ ರೈಲು ನಿಲ್ದಾಣಗಳಲ್ಲಿ ಭದ್ರತೆಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆದರೆ, ವಿಡಿಯೊ ಮೇಲೆ ನಿಗಾ ವಹಿಸುವ ವ್ಯವಸ್ಥೆ ಸರಿಯಾಗಿಲ್ಲ. ಇದಕ್ಕಾಗಿ ನಿಗಾ ವ್ಯವಸ್ಥೆಯನ್ನು ಸುಧಾರಿಸಲು ಭಾರತೀಯ ರೈಲ್ವೆ ಇಸ್ರೇಲ್‌ ತಂತ್ರಜ್ಞಾನದ ಮೊರೆ ಹೋಗಿದೆ.

ರೈಲ್ವೆ ನಿಲ್ದಾಣ ಪ್ರವೇಶಿಸಿದ ಅಪರಾಧ ಹಿನ್ನೆಲೆಯ ವ್ಯಕ್ತಿಗಳನ್ನು ಅವರ ಭಾವಚಿತ್ರದ ಮೂಲಕ ಗುರುತಿಸುವುದು ಈ ತಂತ್ರಜ್ಞಾನದ ಮೂಲಕ ಸುಲಭ ಮತ್ತು ಈ ತಂತ್ರಜ್ಞಾನದಲ್ಲಿ ಕೃತಕ ಬುದ್ಧಿಮತ್ತೆ ವ್ಯಕ್ತಿಗಳ ಮುಖ ಗುರುತಿಸುವಲ್ಲಿ ನೆರವಾಗುತ್ತದೆ ಎನ್ನಲಾಗಿದೆ.

ಈ ತಂತ್ರಜ್ಞಾನದ ಮೂಲಕ ನಿರ್ದಿಷ್ಟ ವ್ಯಕ್ತಿಯ ಭಾವಚಿತ್ರವನ್ನು ಕಂಪ್ಯೂಟರ್ನಲ್ಲಿರುವ ಸಾಫ್ಟ್‌ವೇರ್‌ಗೆ ಫೀಡ್‌ ಮಾಡಿದರೆ ಕೃತಕ ಬುದ್ಧಿಮತ್ತೆಯ ವಿಧಾನದಿಂದ ಆ ಭಾವಚಿತ್ರದಲ್ಲಿರುವ ವ್ಯಕ್ತಿ ಯಾವ ದಿನದಂದು, ಯಾವ ಸಮಯದಲ್ಲಿ ರೈಲು ನಿಲ್ದಾಣ ಪ್ರವೇಶಿಸಿದ್ದ ಎಂಬ ಮಾಹಿತಿ ಪಡೆಯುವುದು ಸುಲಭ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ರೈಲು ನಿಲ್ದಾಣಗಳಲ್ಲಿನ ಜನಸಂದಣಿಯನ್ನು ನಿರ್ವಹಿಸಲೂ ಈ ತಂತ್ರಜ್ಞಾನ ವ್ಯವಸ್ಥೆ ಸಹಾಯಕವಾಗಲಿದೆ. ಯಾವ ಪ್ಲಾಟ್‌ ಫಾರ್ಮ್‌ನಲ್ಲಿ ಎಷ್ಟು ಜನ ಇದ್ದಾರೆ, ಯಾವ ಪಾದಚಾರಿ ಮೇಲ್ಸೇತುವೆಯನ್ನು ಎಷ್ಟು ಜನ ಪ್ರವೇಶಿಸುತ್ತಿದ್ದಾರೆ, ನಿಲ್ದಾಣದ ಸಾಮರ್ಥ್ಯ ಮತ್ತು ಜನಸಂದಣಿಯ ಲೆಕ್ಕಾಚಾರದ ಮೇಲೆ ಈ ವ್ಯವಸ್ಥೆ ಎಚ್ಚರಿಕೆ ರವಾನಿಸಲಿದೆ. ಇದರಿಂದ ರೈಲ್ವೆ ನಿಲ್ದಾಣಗಳಲ್ಲಿ ಕಾಲ್ತುಳಿತ ಉಂಟಾಗುವುದನ್ನು ತಡೆಯಬಹುದು ಎನ್ನಲಾಗಿದೆ.

ಕಳೆದ ವರ್ಷ ಸೆಪ್ಟೆಂಬರ್‌ ತಿಂಗಳಲ್ಲಿ ಮುಂಬೈನ ಎಲ್ಫಿನ್‌ಸ್ಟೋನ್‌ ರೈಲು ನಿಲ್ದಾಣದಲ್ಲಿ ಜನರ ಕಾಲ್ತುಳಿತಕ್ಕೆ ಸುಮಾರು 22 ಮಂದಿ ಬಲಿಯಾಗಿದ್ದರು. ಭಾರೀ ಮಳೆಯ ಬಳಿಕ ರೈಲು ನಿಲ್ದಾಣದಲ್ಲಿ ಹೆಚ್ಚಿನ ಪ್ರಯಾಣಿಕರು ಜಮಾಯಿಸಿದ್ದರು. ನಿಲ್ದಾಣದಲ್ಲಿ ಸಂಭವಿಸಿದ ಸಣ್ಣ ಶಾರ್ಟ್‌ ಸರ್ಕಿಟ್‌ನಿಂದ ಗಾಬರಿಗೊಂಡ ಜನ ಒಟ್ಟಾಗಿ ಪಾದಚಾರಿ ಮೇಲ್ಸೇತುವೆ ಕಡೆಗೆ ನುಗ್ಗಿದ್ದು ಈ ದುರಂತಕ್ಕೆ ಕಾರಣ ಎನ್ನಲಾಗಿತ್ತು.

ಎಲ್ಫಿನ್‌ಸ್ಟೋನ್‌ ರೈಲು ನಿಲ್ದಾಣದ ಕಾಲ್ತುಳಿತ ದುರಂತದ ಬಳಿಕ ರೈಲ್ವೆ ಇಲಾಖೆ ನಿಲ್ದಾಣಗಳಲ್ಲಿನ ಸುರಕ್ಷತೆ ಹಾಗೂ ಭದ್ರತೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ಸುರಕ್ಷತಾ ಕ್ರಮದ ಮುಂದುವರಿದ ಭಾಗವೇ ಇಸ್ರೇಲ್‌ ತಂತ್ರಜ್ಞಾನದ ಅಳವಡಿಕೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.