samachara
www.samachara.com
ಅಣೆಕಟ್ಟೆಗಳೂ ಇವೆ, ಕೆರೆಗಳೂ ಇವೆ; ನೀರು ನಿರ್ವಹಣೆಯಲ್ಲೇಕೆ ಸೋಲುತ್ತಿದೆ ಸರಕಾರ?
ಸುದ್ದಿ ಸಾಗರ

ಅಣೆಕಟ್ಟೆಗಳೂ ಇವೆ, ಕೆರೆಗಳೂ ಇವೆ; ನೀರು ನಿರ್ವಹಣೆಯಲ್ಲೇಕೆ ಸೋಲುತ್ತಿದೆ ಸರಕಾರ?

ಮಳೆಗಾಲದಲ್ಲಿ ರಾಜ್ಯದ ಕೆರೆಗಳನ್ನು ತುಂಬಿಸಿ ಅಂತರ್ಜಲ ಪ್ರಮಾಣ ಕಾಯ್ದುಕೊಳ್ಳುವ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ.

ದಯಾನಂದ

ದಯಾನಂದ

ರಾಜ್ಯದ ಪ್ರಮುಖ ನದಿಗಳ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ರಾಜ್ಯದ ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ಆದರೆ, ರಾಜ್ಯದ ಅದೆಷ್ಟೋ ಕೆರೆಗಳು ಇನ್ನೂ ತುಂಬಿಲ್ಲ. ಸದ್ಯ ರಾಜಕೀಯ ಕಿತ್ತಾಟದಲ್ಲಿ ನಿರತರಾಗಿರುವ ಜನಪ್ರತಿನಿಧಿಗಳಲ್ಲಿ ಕೆರೆಗಳ ನಿರ್ವಹಣೆಯ ಇಚ್ಛಾಶಕ್ತಿ ಕಾಣುತ್ತಿಲ್ಲ.

ರಾಜ್ಯದಲ್ಲಿ ಪ್ರತಿ ವರ್ಷವೂ ತಕ್ಕಮಟ್ಟಿಗೆ ಮಳೆಯಾಗುತ್ತಿದೆ. ರಾಜ್ಯದ ವಾಡಿಕೆ ಮಳೆ ಪ್ರಮಾಣ ಸರಾಸರಿ 1200 ಮಿ.ಮೀ. ಮುಂಗಾರಿನಲ್ಲಿ 800 ಮಿ.ಮೀ.ಗೂ ಹೆಚ್ಚು ಮಳೆಯಾಗುತ್ತದೆ. ಈ ಮಳೆ ಪ್ರಮಾಣ ರಾಜ್ಯದ ಪೂರ್ವ ಭಾಗದಲ್ಲಿ ಕಡಿಮೆ ಇದ್ದರೆ ಪಶ್ಚಿಮ ಭಾಗದಲ್ಲಿ ಹೆಚ್ಚಾಗಿರುತ್ತದೆ.

ಮಳೆ ಪ್ರಮಾಣ ಕಡಿಮೆ ಎಂದು ಹೇಳುವ ಬಯಲು ಪ್ರದೇಶದಲ್ಲೂ ಸರಾಸರಿ 400 ಮಿ.ಮೀ. ಮಳೆಯಾಗುತ್ತದೆ. ರಾಜ್ಯದ ಪಶ್ಚಿಮ ಭಾಗದಲ್ಲಿ ಸುರಿಯುವ ಮಳೆ ಪೂರ್ವಕ್ಕೆ ಹರಿಯುವ ನದಿಗಳ ಮೂಲಕ ಪೂರ್ವದ ಭಾಗಕ್ಕೂ ಜೀವನದಿಯಾಗುತ್ತವೆ. ರಾಜ್ಯದ ಪ್ರಮುಖ ನದಿಗಳು ಮಳೆಗಾಲದಲ್ಲಿ ಮೈದುಂಬಿ ಹರಿಯುವುದು ಸಾಮಾನ್ಯ. ಆದರೆ, ನದಿಗಳು ಉಕ್ಕಿ ಹರಿದರೂ, ಜಲಾಶಯಗಳು ಭರ್ತಿಯಾಗಿದ್ದರೂ ಹಳ್ಳಿಗಳ ಬಹುತೇಕ ಕೆರೆಗಳು ತುಂಬುವುದೇ ಇಲ್ಲ.

ಇದು ಒಂದು ಮಳೆಗಾಲದ ಸ್ಥಿತಿ ಮಾತ್ರವಲ್ಲ. ಪ್ರತಿ ವರ್ಷವೂ ರಾಜ್ಯದ ಸಾವಿರಾರು ಕೆರೆಗಳು ನೀರಿನಲ್ಲದೆ ಕಳೆ ತುಂಬಿಕೊಂಡಿರುತ್ತವೆ. ಪ್ರತಿ ವರ್ಷವೂ ಒಂದು ಕಡೆ ಹೆಚ್ಚು ಮಳೆಯಾಗಿ ಹಾನಿಯಾದರೆ, ಮತ್ತೊಂದು ಕಡೆ ಮಳೆಯಿಲ್ಲದೆ ಬೆಳೆ ಒಣಗುತ್ತದೆ. ಈ ಪರಿಸ್ಥಿತಿಯೂ ರೈತರನ್ನು ಕಷ್ಟಕ್ಕೆ ದೂಡುತ್ತಿದೆ.

ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಸಾಕು ಸಾಕೆನಿಸುವಷ್ಟು ಮಳೆಯಾದರೂ, ನದಿ, ತೊರೆಗಳು ಉಕ್ಕಿ ಹರಿದರೂ ಬಯಲು ಸೀಮೆಯ ಜನರಿಗೆ ನೀರಿನ ಅಭಾವ ತಪ್ಪಿದ್ದಲ್ಲ. ರಾಜ್ಯದಲ್ಲಿರುವ ಜಲಾಶಯದ ವ್ಯಾಪ್ತಿಗೆ ಬರುವ ಕೆರೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಹಾಗೂ ಅವುಗಳಿಗೆ ನೀರು ತುಂಬಿಸುವ ಕೆಲಸವನ್ನು ಸರಕಾರ ನಿರ್ಲಕ್ಷಿಸಿರುವುದು ಎದ್ದು ಕಾಣುತ್ತಿದೆ.

ರಾಜ್ಯದ ಬಯಲು ಸೀಮೆಯಲ್ಲಿ ಹತ್ತು ವರ್ಷಗಳ ಹಿಂದೆ 300-400 ಅಡಿ ಕೊರೆದರೆ ಕೊಳವೆಬಾವಿ ನೀರು ಸಿಗುತ್ತಿತ್ತು. ಆದರೆ, ಇಂದು ಸಾವಿರ ಅಡಿ ಭೂಮಿ ಕೊರೆದರೂ ನೀರು ಸಿಗುವ ಭರವಸೆ ಇಲ್ಲ. ನೀರು ಸಿಕ್ಕರೂ ಪ್ರಮಾಣವಂತೂ ಕಡಿಮೆಯೇ. ಇದಕ್ಕೆ ಪ್ರಮುಖ ಕಾರಣ ಅಂತರ್ಜಲ ಮರುಪೂರಣ ಹಾಗೂ ಕೆರೆಗಳ ಹೂಳೆತ್ತಿ ನೀರು ತುಂಬ ಬಗ್ಗೆ ಜನಪ್ರತಿನಿಧಿಗಳು ನಿಗಾ ವಹಿಸದಿರುವುದು.

ಕರ್ನಾಟಕದಲ್ಲಿ ಹೆಚ್ಚೂ ಕಡಿಮೆ ಪ್ರತಿ ಗ್ರಾಮಕ್ಕೊಂದು ಕೆರೆಯಿದೆ. ಒಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕನಿಷ್ಠವೆಂದರೂ ಎರಡು ದೊಡ್ಡ ಕೆರೆಗಳು ಬರುತ್ತವೆ. ರಾಜ್ಯದಲ್ಲಿ ಸುಮಾರು 3,500 ಕೆರೆಗಳಿದ್ದು ಇವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದರೆ ಆಯಾ ಕೆರೆಗಳ ವ್ಯಾಪ್ತಿಯ ರೈತರಿಗೆ ನೀರಿನ ಅಭಾವ ತಪ್ಪುವುದರ ಜತೆಗೆ ಅಂತರ್ಜಲ ವೃದ್ಧಿಯೂ ಸಾಧ್ಯ.

ಕೆರೆಗಳಿಗೆ ನೀರು ತುಂಬಿಸುವ ಮಾತು ಒತ್ತಟ್ಟಿಗಿರಲಿ, ಕೆರೆಗಳ ಹೂಳೆತ್ತಿಸುವ ಬಗ್ಗೆಯೇ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನಸ್ಸಿಲ್ಲ. ಸಣ್ಣ ನೀರಾವರಿ ಇಲಾಖೆ ಹಾಗೂ ಜಿಲ್ಲಾ ಪಂಚಾಯ್ತಿಗಳು ಸಮನ್ವಯದಲ್ಲಿ ಕೆಲಸ ಮಾಡಿದರೆ ಕೆರೆಗಳ ಹೂಳೆತ್ತಿಸುವುದು ಸರಕಾರದ ಮಟ್ಟದಲ್ಲಿ ದೊಡ್ಡ ಸವಾಲೇನೂ ಅಲ್ಲ. ಆದರೆ, ಈ ಕಾರ್ಯಕ್ಕೆ ಬೇಕಾಗಿರುವುದು ಇಚ್ಛಾಶಕ್ತಿ ಹಾಗೂ ದೂರದರ್ಶಿತ್ವ.

ರಾಜ್ಯ ಸರಕಾರದ ಅಧಿಕೃತ ಮಾಹಿತಿಯ ಪ್ರಕಾರ ರಾಜಧಾನಿ ಬೆಂಗಳೂರಿನಲ್ಲಿರುವ ಕೆರೆಗಳ ಸಂಖ್ಯೆ 837. ಆದರೆ, ಇಷ್ಟು ಕೆರೆಗಳೆಲ್ಲಿವೆ ಎಂಬ ಪ್ರಶ್ನೆ ಮೂಡಿದರೆ ಆಶ್ಚರ್ಯವೇನಿಲ್ಲ. ಏಕೆಂದರೆ ಬೆಂಗಳೂರಿನ ಬಹುತೇಕ ಕೆರಗಳು ಒತ್ತುವರಿದಾರರ ಪಾಲಾಗಿವೆ. ಒತ್ತುವರಿ ತೆರವಿನ ನಾಟಕವಾಡಿದ ಈ ಹಿಂದಿನ ಸರಕಾರ ಆ ನಾಟಕವನ್ನು ಮುಂದುವರಿಸುವ ಮನಸ್ಸು ಮಾಡಲಿಲ್ಲ.

ರಾಜ್ಯದ ಬೇರೆ ಬೇರೆ ಭಾಗಗಳ ಕೆರೆಗಳ ಸ್ಥಿತಿ ಬೆಂಗಳೂರಿನ ಕೆರೆಗಳ ಸ್ಥಿತಿಗಿಂತ ಭಿನ್ನವಾಗೇನೂ ಇಲ್ಲ. ಕೆರೆಗಳ ಒತ್ತುವರಿ, ಕೆರೆಗಳಿಗೆ ತ್ಯಾಜ್ಯ ನೀರು ಹರಿಸುವುದು, ಊರಿನ ಕಸವನ್ನು ಕೆರೆಗೆ ತುಂಬುವುದು ಮುಂದುವರಿದಿದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳ ಕೆರೆಗಳೂ ಅಲ್ಲಿನ ಸ್ಥಳೀಯ ಅಭಿವೃದ್ಧಿ ಪ್ರಾಧಿಕಾರದ ‘ಅಭಿವೃದ್ಧಿ’ ಹೆಸರಿಗೆ ಬಲಿಯಾಗಿವೆ.

ಬಡಾವಣೆ ನಿರ್ಮಾಣ, ಮೈದಾನ ನಿರ್ಮಾಣ, ಕೊನೆಗೆ ಸರಕಾರಿ ಕಚೇರಿಗಳ ನಿರ್ಮಾಣಕ್ಕಾಗಿ ಅದೆಷ್ಟೋ ಕೆರೆಗಳು ತಮ್ಮ ಅಸ್ಥಿತ್ವವನ್ನೇ ಕಳೆದುಕೊಂಡಿವೆ. ಆದರೆ, ಇರುವ ಕೆರೆಗಳ ಸಂರಕ್ಷಣೆ ಹಾಗೂ ಅವುಗಳ ನಿರ್ವಹಣೆ ಕಡೆಗೂ ಸರಕಾರ ಗಮನ ಹರಿಸುತ್ತಿಲ್ಲ.

ರಾಜ್ಯದ ಕೆರೆಗಳ ಸಂರಕ್ಷಣೆಗಾಗಿ 2015ರಲ್ಲಿ ‘ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ’ಯನ್ನು ಜಾರಿಗೆ ತರಲಾಗಿದೆ. ಈ ಕಾಯ್ದೆಯ ಪ್ರಕಾರ ಕೆರೆ ಒತ್ತುವರಿ ಹಾಗೂ ಕೆರೆಗಳನ್ನು ಮಲಿನಗೊಳಿಸುವವರ ವಿರುದ್ಧ ಕ್ರಿಮಿನಲ್‌ ಪ್ರಕರಣವನ್ನು ದಾಖಲಿಸಿಕೊಳ್ಳಲು ಅವಕಾಶವಿದೆ. ಆದರೆ, ಈ ಕಾಯ್ದೆ ಕೇವಲ ಹಾಳೆಗಳ ಮೇಲಷ್ಟೇ ಇದೆ. ಈ ಪ್ರಾಧಿಕಾರಕ್ಕೆ ರಾಜ್ಯಮಟ್ಟದಲ್ಲಿ ಶಕ್ತಿ ತುಂಬುವ ಕೆಲಸವನ್ನು ಸರಕಾರ ಈವರೆಗೂ ಮಾಡಿಲ್ಲ.

ರಾಜ್ಯದ ಕೆರೆಗಳ ಸ್ಥಿತಿಯ ಬಗ್ಗೆ ರೈತ ಮುಖಂಡರು ಹಾಗೂ ನೀರಾವರಿ ತಜ್ಞರ ಸಭೆ ಕರೆದು ಸಮಸ್ಯೆಗಳನ್ನು ಬಗೆಹರಿಸಿ ಕೆರೆಗಳಿಗೆ ಮರು ಜೀವ ಕೊಡುವ ಕೆಲಸ ಆಗಬೇಕಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಒಂದು ಕೆರೆಯನ್ನು ಅಭಿವೃದ್ಧಿಗೊಳಿಸುವ ಯೋಜನೆಯನ್ನು ಈ ಹಿಂದಿನ ಸರಕಾರ ಜಾರಿಗೆ ತಂದಿತ್ತು. ಇದರ ಫಲವಾಗಿ ಕೆಲವು ಕೆರೆಗಳು ಹೂಳು ಕಳೆದುಕೊಂಡು, ತಂತಿ ಬೇಲಿ ಹಾಕಿಕೊಂಡಿವೆ. ಆದರೆ, ಉಳಿದ ಅದೆಷ್ಟೋ ಕೆರೆಗಳು ಕಸದ ಗುಂಡಿಗಳಾಗಿ ಮಾರ್ಪಟ್ಟು, ಒತ್ತುವರಿದಾರರ ಅತಿಯಾಸೆಗೆ ಬಲಿಯಾಗುತ್ತಿವೆ.

“ಮಳೆಗಾಲಕ್ಕೂ ಮೊದಲೇ ಕೆರೆಗಳ ಹೂಳೆತ್ತುವ ಕೆಲಸ ಆಗಬೇಕು. ಬಳಿಕ ಆಯಾ ಜಲಾಶಯ ವ್ಯಾಪ್ತಿಯ ಜಲಾಶಯಗಳಿಂದ ಕೆರೆಗಳಿಗೆ ನೀರು ತುಂಬಿಸಬೇಕು. ಆದರೆ, ಈ ಬಗ್ಗೆ ಜನಪ್ರತಿನಿಧಿಗಳು ಉದಾಸೀನತೆ ತೋರುತ್ತಿದ್ದಾರೆ. ಶಾಸಕರಿಗೆ ಕೆರೆಗಳ ಬಗ್ಗೆ, ನೀರಾವರಿ ವ್ಯವಸ್ಥೆಯ ಬಗ್ಗೆ ಹಾಗೂ ಅಂತರ್ಜಲದ ಬಗ್ಗೆ ಕಾಳಜಿಯೇ ಇಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್.

ಸರ್ಕಾರ ಆದ್ಯತೆಯ ಮೇಲೆ ಕೆರೆಗಳ ಅಭಿವೃದ್ಧಿ ಪಡಿಸುವ ಹಾಗೂ ನೀರು ತುಂಬಿಸುವ ಕೆಲಸ ಮಾಡಬೇಕು. ಕೆರೆಗಳ ಸಂರಕ್ಷಣೆಯನ್ನು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಇರುವ ಅಂತರ್ಜಲವೂ ಬತ್ತಿ ಹೋಗುತ್ತದೆ. ಮಳೆಗಾಲದಲ್ಲಿ ಜಲಾಶಯಗಳಲ್ಲಿ ನೀರಿದ್ದಾಗಲೇ ರಾಜ್ಯದಲ್ಲಿರುವ ಕೆರೆಗಳನ್ನು ತುಂಬಿಸಲು ಸರಕಾರ ಮುಂದಾಗಬೇಕು.
- ಚಾಮರಸ ಮಾಲಿಪಾಟೀಲ್, ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ

“ಕೆರೆಗಳು ಒಣಗುತ್ತಿರುವುದು ಒತ್ತುವರಿದಾರರಿಗೆ ಅನುಕೂಲವಾಗಿ ಪರಿಣಮಿಸಿದೆ. ಸ್ಥಳೀಯ ಹಿತಾಸಕ್ತಿಗಳು ಕೆರೆಗಳನ್ನು ನುಂಗುತ್ತಿವೆ. ಇದರ ವಿರುದ್ಧ ಕೆಲಸ ಮಾಡಬೇಕಾದ ಅಧಿಕಾರಿಗಳು ಕೂಡಾ ಇವರೊಂದಿಗೆ ಸೇರಿಕೊಂಡಿದ್ದಾರೆ. ಒಟ್ಟಾರೆ ಈ ಕೆಟ್ಟ ವ್ಯವಸ್ಥೆಯು ಕೆರೆಗಳನ್ನು ಇಲ್ಲವಾಗಿಸುತ್ತಿದೆ” ಎಂದು ಬೇಸರಿಸುತ್ತಾರೆ ಮಾಲಿಪಾಟೀಲ್.

“ಸಣ್ಣ ನೀರಾವರಿ ವಿಚಾರಗಳನ್ನು ಸರಕಾರ ಮುಖ್ಯವಾಗಿ ಪರಿಗಣಿಸಬೇಕು. ರಾಜ್ಯದ ದೊಡ್ಡ ಪ್ರಮಾಣದ ರೈತರಿಗೆ ಹಾಗೂ ರಾಜ್ಯದ ಪಟ್ಟಣಗಳಿಗೆ ಕುಡಿಯುವ ನೀರನ್ನು ಒದಗಿಸುವ ಜವಾಬ್ದಾರಿ ಸಣ್ಣ ನೀರಾವರಿ ಇಲಾಖೆ ಮೇಲಿದೆ. ಜಲಾಶಯಗಳಲ್ಲಿ ನೀರು ಭರ್ತಿಯಾಗಿರುವ ಸಂದರ್ಭದಲ್ಲಿ ಹಾಗೂ ಏತ ನೀರಾವರಿ ಯೋಜನೆಗಳಿರುವ ಕಡೆ ನದಿಯಲ್ಲಿ ನೀರು ಹೆಚ್ಚಾಗಿರುವ ಸಂದರ್ಭದಲ್ಲೇ ಕೆರೆಗಳಿಗೆ ನೀರು ತುಂಬಿಸಬೇಕು” ಎನ್ನುತ್ತಾರೆ ಅವರು.

“ಜಲಾಶಯಗಳಲ್ಲಿ ನೀರಿನ ಲಭ್ಯತೆ ಇರುವಾಗಲೇ ನಮ್ಮ ಕೆರೆಗಳಿಗೆ ನೀರು ತುಂಬಿಸಿಕೊಂಡರೆ ಮುಂದೆ ಅಕ್ಕಪಕ್ಕದ ರಾಜ್ಯಗಳು ನೀರಿಗಾಗಿ ತಗಾದೆ ತೆಗೆದರೂ ನಮ್ಮ ರೈತರಿಗೆ ಅನ್ಯಾಯವಾಗುವುದಿಲ್ಲ. ನೀರಿನ ಹರಿವು ಹೆಚ್ಚಾಗಿರುವ ಸಂದರ್ಭದಲ್ಲಿ ಕೆರೆ ತುಂಬಿಸಿಕೊಳ್ಳುವ ಪರಿಪಾಠ ನಮ್ಮಲ್ಲಿ ಬೆಳೆದೇ ಇಲ್ಲ. ಇದಕ್ಕೆ ಜನಪ್ರತಿನಿಧಿಗಳಷ್ಟೇ ಅಧಿಕಾರಿಗಳ ಬೇಜವಾಬ್ದಾರಿಯೂ ಕಾರಣ” ಎಂಬುದು ಅವರ ಅಭಿಪ್ರಾಯ.

ರಾಜ್ಯದ ನೀರಾವರಿ ಹಾಗೂ ಕೆರೆಗಳ ಬಗ್ಗೆ ರೈತ ಸಂಘದ ಕೆ.ಎಸ್‌. ಪುಟ್ಟಣ್ಣಯ್ಯ ವಿಧಾನಸಭೆಯಲ್ಲಿ ದನಿ ಎತ್ತುತ್ತಿದ್ದರು. ಆದರೆ, ಈ ಹಿಂದೆ ಪುಟ್ಟಣ್ಣಯ್ಯ ಸ್ಪರ್ಧಿಸುತ್ತಿದ್ದ ಮೇಲುಕೋಟೆ ಕ್ಷೇತ್ರದಿಂದ ಈ ಬಾರಿ ಶಾಸಕರಾಗಿ ಆಯ್ಕೆಯಾಗಿ ಮಂತ್ರಿ ಸ್ಥಾನಕ್ಕೇರಿರುವ ಸಿ.ಎಸ್‌. ಪುಟ್ಟರಾಜು ತಮಗೆ ಸಣ್ಣ ನೀರಾವರಿ ಖಾತೆ ಕೊಟ್ಟ ಕಾರಣಕ್ಕೆ ಅಸಮಾಧಾನ ತೋರಿದ್ದರು. ಸಣ್ಣ ನೀರಾವರಿ ಖಾತೆಯ ಬಗ್ಗೆಯೇ ಅಸಮಾಧಾನ ತೋರಿದ್ದ ಸಚಿವರಿಂದ ರಾಜ್ಯದ ಜನತೆ ಇನ್ನು ಯಾವ ರೀತಿಯ ನೀರಾವರಿ ಯೋಜನೆಗಳನ್ನು ನಿರೀಕ್ಷಿಸಲು ಸಾಧ್ಯ.

ಮಳೆಗಾಲದಲ್ಲಿ ಜಲಾಶಯಗಳಲ್ಲಿ ನೀರು ಹೆಚ್ಚಾಗಿರುವಾಗ ಸಮರ್ಪಕ ನಾಲಾ ವ್ಯವಸ್ಥೆ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಪರಿಪಾಠವನ್ನು ನೆರೆಯ ತಮಿಳುನಾಡ ರೂಡಿಸಿಕೊಂಡಿದೆ. ಆದರೆ, ಆ ಪಾಠವನ್ನು ಕಲಿಯಲು ನಮ್ಮ ಸರಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ.