ಕಾಮಿಡಿ ಅನ್‌ಲಿಮಿಟೆಡ್‌: ‘ಮಹಾಭಾರತ ಕಾಲದಲ್ಲೇ ಪತ್ರಿಕೋದ್ಯಮದ ಉಗಮ’
ಸುದ್ದಿ ಸಾಗರ

ಕಾಮಿಡಿ ಅನ್‌ಲಿಮಿಟೆಡ್‌: ‘ಮಹಾಭಾರತ ಕಾಲದಲ್ಲೇ ಪತ್ರಿಕೋದ್ಯಮದ ಉಗಮ’

ಇಷ್ಟು ದಿನ ತಂತ್ರಜ್ಞಾನ ವಿಷಯಗಳಲ್ಲಿ ಸೀರಿಯಸ್‌ ಕಾಮಿಡಿ ಮಾಡುತ್ತಿದ್ದ ಬಿಜೆಪಿ ನಾಯಕರು ಈಗ ಪತ್ರಿಕೋದ್ಯಮಕ್ಕೆ ಕೈಹಾಕಿದ್ದಾರೆ. ಉತ್ತರ ಪ್ರದೇಶ ಡಿಸಿಎಂ ಡಾ. ದಿನೇಶ್‌ ಶರ್ಮಾ ಅವರ ಈ ಹೇಳಿಕೆ ಓದಿ ಬಿದ್ದು ಬಿದ್ದು ನಗುವ ಸರದಿ ನಿಮ್ಮದು!

“ಭಾರತದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಅಂತರ್ಜಾಲ ಹಾಗೂ ಉಪಗ್ರಹ ಸಂಪರ್ಕ ತಂತ್ರಜ್ಞಾನ ಇತ್ತು” ಎಂಬ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್‌ ದೇವ್‌ ಹೇಳಿಕೆಯ ಬೆನ್ನಲ್ಲೇ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಡಾ. ದಿನೇಶ್ ಶರ್ಮಾ ಮತ್ತೊಂದು ಸೀರಿಯಸ್‌ ಕಾಮಿಡಿ ಮಾಡಿದ್ದಾರೆ. “ಪತ್ರಿಕೋದ್ಯಮ ಆರಂಭವಾಗಿದ್ದು ಮಹಾಭಾರತದ ಕಾಲದಲ್ಲಿ” ಎಂದಿದ್ದಾರೆ ಶರ್ಮಾ.

“ಪತ್ರಿಕೋದ್ಯಮ ಆರಂಭವಾಗಿದ್ದು ಮಹಾಭಾರತ ಕಾಲದಲ್ಲಿ. ನೇರ ಪ್ರಸಾರ ವ್ಯವಸ್ಥೆ ಮಹಾಭಾರತ ಕಾಲದಲ್ಲೇ ಇತ್ತು. ಕುರುಕ್ಷೇತ್ರ ಯುದ್ಧದ ಬಗ್ಗೆ ಸಂಜಯ ಧೃತರಾಷ್ಟ್ರನಿಗೆ ವರದಿ ನೀಡುತ್ತಿದ್ದ. ಯುದ್ಧಭೂಮಿಯ ವರದಿ ನೀಡುತ್ತಿದ್ದ ಈ ವ್ಯವಸ್ಥೆ ನೇರ ಪ್ರಸಾರವಲ್ಲದೆ ಮತ್ತೇನು?” ಎಂದಿದ್ದಾರೆ ಶರ್ಮಾ.

ಮಥುರಾದಲ್ಲಿ ನಡೆದ ‘ಹಿಂದಿ ಪತ್ರಿಕೋದ್ಯಮ ದಿನ’ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಶರ್ಮಾ, “ನಿಮ್ಮ ಗೂಗಲ್‌ ಈಗ ಆರಂಭವಾಗಿದೆ. ಆದರೆ, ನಮ್ಮ ಗೂಗಲ್‌ ತುಂಬಾ ಹಿಂದೆಯೇ ಆರಂಭವಾಗಿದೆ. ನಾರದ ಮುನಿ ಮಾಹಿತಿ ಸೇತುವಾಗಿ ಕೆಲಸ ಮಾಡುತ್ತಿದ್ದರು. ಮೂರು ಬಾರಿ ನಾರಾಯಣ ಎಂದು ಹೇಳುವ ಮೂಲಕ ಅವರು ಎಲ್ಲಿಂದ ಎಲ್ಲಿಗೆ ಬೇಕಾದರೂ ಹೋಗಬಹುದಿತ್ತು. ಪುರಾಣದ ಈ ವಿಚಾರಗಳನ್ನು ನಾವು ಲಘುವಾಗಿ ತೆಗೆದುಕೊಳ್ಳಬಾರದು” ಎಂದು ಹೇಳಿದ್ದಾರೆ.

ಎಂ.ಕಾಂ, ಪಿಎಚ್‌.ಡಿ ಮಾಡಿರುವ ಶರ್ಮಾ ಲಖನೌ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದವರು. ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿಯಂಥ ಜವಾಬ್ದಾರಿಯುತ ಹುದ್ದೆಯ ಜತೆಗೆ ಉನ್ನತ ಶಿಕ್ಷಣ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ವಿಜ್ಞಾನ, ಮಾಹಿತಿ ತಂತ್ರಜ್ಞಾನದಂಥ ಮಹತ್ವದ ಖಾತೆಗಳನ್ನು ಹೊಂದಿರುವ ಶರ್ಮಾ ಈ ರೀತಿಯ ಮಾತುಗಳನ್ನಾಡಿದ್ದಾರೆ.

ಪುರಾಣದ ವಿಚಾರಗಳನ್ನು ವಾಸ್ತವಕ್ಕೆ ಪೋಣಿಸುವುದರಲ್ಲಿ ಬಿಜೆಪಿ ಮುಖಂಡರು ಯಾವತ್ತೂ ಹಿಂದೆ ಉಳಿದಿಲ್ಲ. ಖುದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಗಣೇಶ ಮತ್ತು ಕರ್ಣನ ವಿಚಾರದಲ್ಲಿ ಪುರಾಣಕ್ಕೂ ವಾಸ್ತವಕ್ಕೂ ಸಂಬಂಧ ಕಲ್ಪಿಸಿದ್ದರು.

“ಗಣೇಶ ಪ್ಲಾಸ್ಟಿಕ್‌ ಸರ್ಜರಿಯ ಕೂಸು” ಎಂದು 2014ರಲ್ಲಿ ಹೇಳಿದ್ದ ಮೋದಿ, ವರ್ಷದ ಬಳಿಕ, “ಮಹಾಭಾರತದ ಕರ್ಣನ ಜನನ ಜನರಿಕ್‌ ಸೈನ್ಸ್‌ನ ಫಲ” ಎಂದಿದ್ದರು.

ಮೋದಿ ಸಂಪುಟದ ಮಾನವ ಸಂಪನ್ಮೂಲ ಸಚಿವ ಸತ್ಯಪಾಲ್‌ ಸಿಂಗ್‌ ಕಳೆದ ವರ್ಷ ವಿಮಾನ ಆವಿಷ್ಕಾರದ ಬಗ್ಗೆ ಹೇಳಿಕೆ ನೀಡಿ ನಗೆಪಾಟಲಿಗೆ ಈಡಾಗಿದ್ದರು. “ವಿಮಾನ ಆವಿಷ್ಕರಿಸಿದ್ದು ರೈಟ್ಸ್‌ ಸಹೋದರರಲ್ಲ, ಭಾರತದ ಸಂಶೋಧಕ ಶಿವಕರ್‌ ಬಾಪೂಜಿ ತಲ್ಪಾಡೆ” ಎಂದು ಸತ್ಯಪಾಲ್‌ ಹೇಳಿದ್ದರು.

ಪುರಾಣದ ಸಂಗತಿಗಳನ್ನು ವರ್ತಮಾನಕ್ಕೆ ಜೋಡಿಸುವ ಮೂಲಕ ಬಿಜೆಪಿ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಆಗುತ್ತಿದ್ದರು. ಈ ರೀತಿಯ ಹೇಳಿಕೆ ನೀಡಿ ನಗೆಪಾಟಲಿ ಸಿಲುಕಬೇಡಿ ಎಂದು ಬಿಜೆಪಿ ಮುಖಂಡರಿಗೆ ನರೇಂದ್ರ ಮೋದಿ ಈ ಹಿಂದೆ ಸೂಚನೆ ನೀಡಿದ್ದರು. ಆದರೆ, ಸೂಚನೆ ಹಳೆಯದಾಗುತ್ತಾ ಬಂದಂತೆ ಬಿಜೆಪಿ ಮುಖಂಡರ ತಮಾಷೆಯ ಮಾತುಗಳು ಮತ್ತೆ ಸುದ್ದಿಯಾಗುತ್ತಿವೆ.