samachara
www.samachara.com
‘ಉಪ್ಪಿ ಬಿಟ್ಟರೂ ಪಕ್ಷ ಬಿಡದ ಶಂಕರ್’: ಈಗ ವಿಧಾನಸಭೆಯಲ್ಲಿ ಏಕೈಕ ಕೆಪಿಜೆಪಿ ಶಾಸಕ 
ಸುದ್ದಿ ಸಾಗರ

‘ಉಪ್ಪಿ ಬಿಟ್ಟರೂ ಪಕ್ಷ ಬಿಡದ ಶಂಕರ್’: ಈಗ ವಿಧಾನಸಭೆಯಲ್ಲಿ ಏಕೈಕ ಕೆಪಿಜೆಪಿ ಶಾಸಕ 

ನಟ ಉಪೇಂದ್ರ ರಾಜಕೀಯ ಪರ್ಯಾಯಕ್ಕೆ ಆರಂಭ ಶೂರತ್ವ ತೋರಿಸಿದರು. ಈ ಸಮಯದಲ್ಲಿ ‘ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ’ದ ಹೆಸರು ಕೇಳಿ ಬಂದಿತ್ತು. ಸದ್ಯ ಅದರ ಏಕೈಕ ಅಭ್ಯರ್ಥಿ ವಿಧಾನಸೌಧ ಪ್ರವೇಶಿಸಿದ್ದಾರೆ. ಹೆಸರು ಶಂಕರ್. 

ಕರ್ನಾಟಕ ಚುನಾವಣಾ ರಾಜಕಾರಣದಲ್ಲಿ ಇಷ್ಟು ದಿನ ಕೇಳಿರದ ಹೆಸರೊಂದು ಇದೀಗ ಇಡೀ ರಾಜ್ಯದ ಗಮನ ಸೆಳೆದಿದೆ. ಆ ಹೆಸರು ಆರ್‌. ಶಂಕರ್‌! ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಿರಿಯ ಅಭ್ಯರ್ಥಿ ಕೆ.ಬಿ. ಕೋಳಿವಾಡ ವಿರುದ್ಧ 4,338 ಮತಗಳ ಅಂತರದಿಂದ ವಿಜಯ ಸಾಧಿಸಿದ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಅಭ್ಯರ್ಥಿ.

63,910 ಮತಗಳನ್ನು ಪಡೆದು ರಾಣೆಬೆನ್ನೂರಿನಲ್ಲಿ ಗೆಲುವು ಕಂಡಿರುವ ಆರ್‌. ಶಂಕರ್‌ ರಿಯಲ್‌ ಎಸ್ಟೇಟ್‌ ವ್ಯವಹಾರದ ಕೋಟಿ ಕುಳ. ತಮ್ಮ ಹಾಗೂ ಪತ್ನಿ ಧನಲಕ್ಷ್ಮೀ ಹೆಸರಿನಲ್ಲಿ ಶಂಕರ್‌ ಘೋಷಿಸಿಕೊಂಡಿರುವ ಒಟ್ಟು ಆಸ್ತಿ ಮೌಲ್ಯ 225 ಕೋಟಿ ರೂಪಾಯಿ. ಶಂಕರ್‌ ಒಬ್ಬರ ಹೆಸರಿನಲ್ಲೇ ಇರುವ ಆಸ್ತಿ 138 ಕೋಟಿ ರೂಪಾಯಿ.

ನಾಮಪತ್ರದೊಂದಿಗೆ ಶಂಕರ್‌ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಹೇಳಿಕೊಂಡಿರುವಂತೆ ಅವರು ಓದಿರುವುದು 10ನೇ ತರಗತಿ. ‘ಧನಲಕ್ಷ್ಮೀ’, ‘ಹರ್ಷಿತ’, ‘ಶುಭ ಪ್ರಗತಿ’ ಹೆಸರಿನ ಡೆವಲಪರ್‌ ಕಂಪೆನಿಗಳ ಮೇಲೆ ಶಂಕರ್‌ ಕೋಟ್ಯಂತರ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ.

ಕರ್ನಾಟಕದ ಮಧ್ಯಭಾಗದ ಕ್ಷೇತ್ರವಾದ ರಾಣೆಬೆನ್ನೂರಿನಲ್ಲಿ ಕಾಂಗ್ರೆಸ್‌ ಮಣಿಸಿ ಸಣ್ಣ ಪಕ್ಷದ ಹೆಸರಿನಲ್ಲಿ ಉದಯಿಸಿರುವ ಶಂಕರ್‌, ಚುನಾವಣೆಗೂ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಮಾತಿದೆ. 2013ರಲ್ಲೂ ರಾಣೆಬೆನ್ನೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಂಕರ್‌ ಆಗ ಕೋಳಿವಾಡ ವಿರುದ್ಧ ಸೋಲುಂಡಿದ್ದರು.

ನಟ ಉಪೇಂದ್ರ ರಾಜಕೀಯ ಪರ್ಯಾಯಕ್ಕೆ ಆರಂಭ ಶೂರತ್ವ ತೋರಿ ಬಳಿಕ ಹೊರಬಂದ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ ಸ್ಪರ್ಧಿಸಿ ಜಯ ಸಾಧಿಸಿದ ಏಕೈಕ ಅಭ್ಯರ್ಥಿ ಆರ್‌. ಶಂಕರ್‌. ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್ ಮೂರು ಪಕ್ಷಗಳನ್ನು ಬಿಟ್ಟು ಪಕ್ಷೇತರ ಶಾಸಕರ ಹೆಸರಿನ ಜತೆಗೆ ಕೇಳಿಬಂದಿರುವ ಹೆಸರು ಆರ್‌. ಶಂಕರ್‌.

ಬಹುಬೇಡಿಕೆಯ ಶಾಸಕರಾಗಿ ಆಯ್ಕೆಯಾಗಿರುವ ಶಂಕರ್‌ ಹೊಸ ಸರಕಾರ ರಚನೆಗೆ ಕಾಂಗ್ರೆಸ್‌- ಜೆಡಿಎಸ್ ಮೈತ್ರಿಕೂಟದ ಕೈ ಹಿಡಿಯುತ್ತಾರೋ ಅಥವಾ ರಾಜ್ಯದ ರಾಜಕೀಯ ಚಿತ್ರಣ ಬದಲಿಸಲು ಯತ್ನಿಸುತ್ತಿರುವ ಬಿಜೆಪಿ ಪಾಳಯ ಸೇರುತ್ತಾರೋ ಎಂಬುದು ಇನ್ನೂ ನಿಗೂಢವಾಗಿದೆ.