ನಾಲ್ಕು ವರ್ಷಗಳ ಬಳಿಕ ಇಲಾಖೆಗಳಿಂದ ಉದ್ಯೋಗ ಸೃಷ್ಟಿಯ ಲೆಕ್ಕ ಕೇಳಿದ ಮೋದಿ!
ಸುದ್ದಿ ಸಾಗರ

ನಾಲ್ಕು ವರ್ಷಗಳ ಬಳಿಕ ಇಲಾಖೆಗಳಿಂದ ಉದ್ಯೋಗ ಸೃಷ್ಟಿಯ ಲೆಕ್ಕ ಕೇಳಿದ ಮೋದಿ!

‘ಮೇಕ್‌ ಇನ್‌ ಇಂಡಿಯಾ’ದಂತಹ ಕಾರ್ಯಕ್ರಮಗಳ ಮೂಲಕ ಭಾರತದಲ್ಲಿ ಹೂಡಿಕೆಯ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ. ಆದರೆ, ಉದ್ಯೋಗ ಸೃಷ್ಟಿಯ ಅಂಕಿ ಸಂಖ್ಯೆಗಳು ಮಾತ್ರ ಕಾಣುತ್ತಿಲ್ಲ.

ದೇಶದೆಲ್ಲೆಡೆ ನಿರುದ್ಯೋಗದ ಸಮಸ್ಯೆ ಹೆಚ್ಚಾಗುತ್ತಿರುವ ಹೊತ್ತಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ನಾಲ್ಕು ವರ್ಷಗಳ ಆಡಳಿತ ಅವಧಿಯಲ್ಲಿ ಸೃಷ್ಟಿಯಾದ ಉದ್ಯೋಗದ ಲೆಕ್ಕ ಕೊಡುವಂತೆ ಇಲಾಖೆಗಳಿಗೆ ನಿರ್ದೇಶನ ನೀಡಿದ್ದಾರೆ.

2014ರ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿ ವರ್ಷ ಒಂದು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಮೋದಿ ಹೇಳಿದ್ದರು. ಆದರೆ, ಕೊಟ್ಟಿರುವ ಈ ಭರವಸೆ ಈಡೇರಿರುವ ಬಗ್ಗೆ ಇಷ್ಟು ದಿನ ಮೌನವಾಗಿದ್ದ ಮೋದಿ 2019ರ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ತಮ್ಮ ಸರಕಾರದ ಉದ್ಯೋಗ ಸೃಷ್ಟಿಯ ಲೆಕ್ಕ ಕೇಳಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರ ಸಭೆಗಳಲ್ಲೂ ಮೋದಿ ತಮ್ಮ ಸರಕಾರದ ಸಾಧನೆಗಳ ಬಗ್ಗೆ ಹೇಳಿಕೊಳ್ಳುವುದಕ್ಕಿಂತ ಕಾಂಗ್ರೆಸ್‌ನ ಕಾಲೆಳೆಯುವುದರಲ್ಲೇ ಹೆಚ್ಚು ಆಸಕ್ತಿ ತೋರಿದ್ದಾರೆ. ಈಗ ವಿವಿಧ ಇಲಾಖೆಗಳಿಂದ ಉದ್ಯೋಗ ಸೃಷ್ಟಿಯ ಲೆಕ್ಕ ಕೇಳುತ್ತಿರುವುದು ಕುತೂಹಲ ಹುಟ್ಟಿಸಿದೆ.

ನಾಲ್ಕು ವರ್ಷಗಳ ಬಳಿಕ ಇಲಾಖೆಗಳಿಂದ ಉದ್ಯೋಗ ಸೃಷ್ಟಿಯ ಲೆಕ್ಕ ಕೇಳಿದ ಮೋದಿ!

ಮೇ 26ಕ್ಕೆ ಮೋದಿ ನೇತೃತ್ವದ ಎನ್‌ಡಿಎ ಸರಕಾರಕ್ಕೆ ನಾಲ್ಕು ವರ್ಷ ತುಂಬುತ್ತದೆ. ಆದರೆ, 2014ರ ಸಂದರ್ಭದಲ್ಲಿದ್ದ ಮೋದಿ ಅಲೆ ಈಗ ಇಲ್ಲ ಎಂಬುದು ಬಿಜೆಪಿಗೆ ಅರಿವಾಗಿರುವಂತಿದೆ. ಮೋದಿ ನೇತೃತ್ವದ ಸರಕಾರ ಹೇಳಿಕೊಳ್ಳುವಂಥ ಕೆಲಸಗಳನ್ನು ಮಾಡಿಲ್ಲ ಎಂಬ ವಿರೋಧ ಪಕ್ಷಗಳ ಟೀಕೆಗೆ ತಿರುಗೇಟು ನೀಡಲು ಮೋದಿ ಉದ್ಯೋಗ ಸೃಷ್ಟಿಯ ಅಂಕಿಸಂಖ್ಯೆ ಕೇಳಿದ್ದಾರೆ ಎನ್ನಲಾಗಿದೆ.

ಈ ವರ್ಷದ ಏಪ್ರಿಲ್‌ ತಿಂಗಳಲ್ಲಿ ಭಾರತದ ನಿರುದ್ಯೋಗ ಪ್ರಮಾಣ ಶೇ. 6.75ಕ್ಕೆ ಏರಿದೆ.
ಸೆಂಟರ್‌ ಫಾರ್‌ ಮಾನಿಟರಿಂಗ್ ಇಂಡಿಯನ್‌ ಎಕಾನಮಿ ಪ್ರೈವೇಟ್‌ ಲಿಮಿಟೆಡ್‌ನ ಅಂಕಿಸಂಖ್ಯೆ

‘ಮೇಕ್‌ ಇನ್‌ ಇಂಡಿಯಾ’ದಂತಹ ಕಾರ್ಯಕ್ರಮಗಳ ಮೂಲಕ ಭಾರತದಲ್ಲಿ ಹೂಡಿಕೆಯ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ. ಆದರೆ, ಉದ್ಯೋಗ ಸೃಷ್ಟಿಯ ಅಂಕಿ ಸಂಖ್ಯೆಗಳು ಮಾತ್ರ ಕಾಣುತ್ತಿಲ್ಲ. ಅಲ್ಲದೆ 2016ರಲ್ಲಿ ಮೋದಿ ನೋಟು ರದ್ಧತಿ ಪರಿಣಾಮವಾಗಿ ಖಾಸಗಿ ವಲಯದ ಹಲವರು ಉದ್ಯೋಗ ಕಳೆದುಕೊಂಡಿದ್ದರು.

ಉದ್ಯೋಗ ಸೃಷ್ಟಿಯ ಅಸ್ತ್ರವನ್ನಿಟ್ಟುಕೊಂಡೇ ಮೋದಿ ಮುಂದಿನ ವರ್ಷದ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿದ್ದು, ಇದಕ್ಕಾಗಿ ಸರಕಾರಿ ಹಾಗೂ ಖಾಸಗಿ ವಲಯಗಳಲ್ಲಿ ಆಗಿರುವ ಉದ್ಯೋಗ ಸೃಷ್ಟಿಯ ಲೆಕ್ಕ ಕೇಳಿದ್ದಾರೆ ಎನ್ನಲಾಗಿದೆ.

ನಾಲ್ಕು ವರ್ಷಗಳ ಬಳಿಕ ಇಲಾಖೆಗಳಿಂದ ಉದ್ಯೋಗ ಸೃಷ್ಟಿಯ ಲೆಕ್ಕ ಕೇಳಿದ ಮೋದಿ!

ಇದರ ಜತೆಗೆ ಸರಕಾರಿ ಯೋಜನೆಗಳಿಂದ ಹೆಚ್ಚು ಪ್ರಯೋಜನ ಪಡೆದ ಐದು ಪ್ರಮುಖ ಜಿಲ್ಲೆಗಳನ್ನು ಗುರುತಿಸಿ, ಆ ಜಿಲ್ಲೆಗಳ ಜನರ ಜೀವನ ಮಟ್ಟದಲ್ಲಿ ಆಗಿರುವ ಸುಧಾರಣೆಯ ಅಧ್ಯಯನ ನಡೆಸುವಂತೆ ಮೋದಿ ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಒಂದು ವೇಳೆ ಮೋದಿ ನೀಡಿದ್ದ ಭರವಸೆಗಿಂತ ಹೆಚ್ಚಿನ ಪ್ರಮಾಣದ ಉದ್ಯೋಗ ಸೃಷ್ಟಿಯಾಗಿರುವ ಖಚಿತ ಅಂಕಿ ಸಂಖ್ಯೆ ಸಿಕ್ಕರೆ ಅದು ಮೋದಿ ಪಾಲಿಗೆ ವರವಾಗಬಹುದು. ಆದರೆ, ಹೇಳಿದ್ದಕ್ಕಿಂತ ಕಡಿಮೆ ಉದ್ಯೋಗ ಸೃಷ್ಟಿಯ ಲೆಕ್ಕ ಸಿಕ್ಕರೆ ಈ ವಿಚಾರವನ್ನೇ ಮರೆಮಾಚುವ ಸಾಧ್ಯತೆಯೇ ಹೆಚ್ಚು.