samachara
www.samachara.com
ಅನು ಕುಮಾರಿ, ಅನುದೀಪ್‌ ದುರಿಶೆಟ್ಟಿ ಮತ್ತು ಪ್ರಥಮ್ ಕೌಶಿಕ್
ಅನು ಕುಮಾರಿ, ಅನುದೀಪ್‌ ದುರಿಶೆಟ್ಟಿ ಮತ್ತು ಪ್ರಥಮ್ ಕೌಶಿಕ್
ಸುದ್ದಿ ಸಾಗರ

ಆಡಳಿತ ಸೇವೆಗೆ ಹೊಸ ರಕ್ತ: ಕೋಚಿಂಗ್ ಪಡೆಯದೇ ನಾಗರಿಕ ಸೇವೆಗೆ ಅಡಿ ಇಟ್ಟ ಅಭ್ಯರ್ಥಿಗಳು

ದೇಶದ ಅಧಿಕಾರಿ ವರ್ಗಕ್ಕೆ ಹೊಸ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮುಗಿದಿದೆ. ಈ ಬಾರಿ ಸುಮಾರು 990 ಅಭ್ಯರ್ಥಿಗಳು ನಾಗರಿಕ ಸೇವೆಗೆ ಅಡಿ ಇಟ್ಟಿದ್ದಾರೆ. 

samachara

samachara

ಕಳೆದ ವರ್ಷದಲ್ಲಿ ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ಪರೀಕ್ಷೆ ಬರೆದವರು ಕಾತರದಿಂದ ಕಾಯುತ್ತಿದ್ದ 2017ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದೆ.

ತೆಲಂಗಾಣ ಮೂಲದ ಹೈದಾರಾಬಾದ್ ಯುವಕ ಅನುದೀಪ್‌ ದುರಿಶೆಟ್ಟಿ ಮೊದಲ ರ್‍ಯಾಂಕ್‌ ಪಡೆದಿದ್ದಾರೆ. ಹರ್ಯಾಣದ ಅನು ಕುಮಾರಿ ಎರಡನೇ ರ್‍ಯಾಂಕ್‌ ಹಾಗೂ ಸಚಿನ್ ಗುಪ್ತ ಮೂರನೇ ರ್‍ಯಾಂಕ್‌ ಪಡೆದಿದ್ದಾರೆ.

ನಂದಿನಿ ಕುಮಾರಿ, ಟೀನಾ ದಬಿ ಮತ್ತು ಇರಾ ಸಿಂಘಾಲ್ ಈ ಹಿಂದೆ ಕ್ರಮವಾಗಿ 2016, 2015 ಮತ್ತು 2014ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸಿದ್ದರು.

ಟಾಪ್ 10 ಅಭ್ಯರ್ಥಿಗಳು: ಅನುದೀಪ್‌ ದುರಿಶೆಟ್ಟಿ (1), ಅನು ಕುಮಾರಿ (2), ಸಚಿನ್‌ ಗುಪ್ತಾ (3), ಅತುಲ್‌ ಪ್ರಕಾಶ್‌(4), ಪ್ರಥಮ್‌ ಕೌಶಿಕ್‌(5), ಕೋಯಾ ಶ್ರೀಹರ್ಷ(6), ಆಯುಷ್‌ ಸಿನ್ಹಾ (7), ಅನುಭವ್‌ ಸಿಂಗ್‌(8), ಸೌಮ್ಯ ಶರ್ಮಾ(9), ಅಭಿಷೇಕ್‌ ಸುರಾನ (10)

2017ರ ಯುಪಿಎಸ್‌ಸಿ ಪರೀಕ್ಷೆಗೆ ಒಟ್ಟು 9.5 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 4,56,625 ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಕೊನೆಗೆ 13,366 ಅಭ್ಯರ್ಥಿಗಳು ಲಿಖಿತ ಪರೀಕ್ಷೆ (Main Examination) ಗೆ ಅವಕಾಶ ಪಡೆದುಕೊಂಡಿದ್ದರು. ಅದರಲ್ಲಿ 2,658 ಅಭ್ಯರ್ಥಿಗಳು ಪರ್ಸನಾಲಿಟಿ ಟೆಸ್ಟ್‌ಗೆ ಹಾಜರಾಗಿದ್ದರು. ಎಲ್ಲ ರೀತಿಯ ಪರೀಕ್ಷೆಗಳು ಮುಗಿದ ನಂತರ ಈ ಬಾರಿ ಒಟ್ಟು 990 ಅಭ್ಯರ್ಥಿಗಳು ಭಾರತ ನಾಗರಿಕ ಸೇವೆಗೆ ಆಯ್ಕೆಯಾಗಿದ್ದಾರೆ. ಇವರ ನೇಮಕಾತಿಗೆ ಶಿಫಾರಸು ಮಾಡಲಾಗಿದೆ. ಅದರಲ್ಲಿ 750 ಪುರುಷರು ಮತ್ತು 240 ಮಹಿಳೆಯರಿದ್ದಾರೆ. ನೇಮಕಾತಿಗೆ ಶಿಫಾರಸು ಮಾಡಿದ ಅಭ್ಯರ್ಥಿಗಳಲ್ಲಿ 476 ವಿದ್ಯಾರ್ಥಿಗಳು ಸಾಮಾನ್ಯ ವರ್ಗದಿಂದ (ಜನರಲ್ ಕೆಟಗರಿ) 275 ವಿದ್ಯಾರ್ಥಿಗಳು ಹಿಂದುಳಿದ ವರ್ಗಗಳಿಂದ (ಓಬಿಸಿ) 165 ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ (ಎಸ್‌ಸಿ) ಇನ್ನುಳಿದ 74 ವಿದ್ಯಾರ್ಥಿಗಳು ಪರಿಶಿಷ್ಟ ಪಂಗಡದಿಂದ ಆಯ್ಕೆಯಾಗಿದ್ದಾರೆ.

ಇವರು ಐಎಎಸ್‌, ಐಎಫ್‌ಎಸ್‌ ಮತ್ತು ಐಪಿಎಸ್‌ ಸೇವೆಗೆ ಹಾಜರಾಗಲಿದ್ದಾರೆ. ಆಯ್ಕೆಯಾದ ಅಭ್ಯರ್ಥಿಗಳ ಪೈಕಿ, 29 ಅಭ್ಯರ್ಥಿಗಳು ವಿಕಲ ಚೇತನರಾಗಿದ್ದಾರೆ. ಶ್ರವಣದೋಷವುಳ್ಳ ಸೌಮ್ಯ ಶರ್ಮಾ 9ನೇ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.

ಆಡಳಿತ ಸೇವೆಗೆ ಹೊಸ ರಕ್ತ: ಕೋಚಿಂಗ್ ಪಡೆಯದೇ ನಾಗರಿಕ ಸೇವೆಗೆ ಅಡಿ ಇಟ್ಟ ಅಭ್ಯರ್ಥಿಗಳು

ಯುಪಿಎಸ್‌ಯಲ್ಲಿ ಕನ್ನಡಿಗರು:

ಈ ಹಿಂದೆ 2016ರ ಪರೀಕ್ಷೆಯಲ್ಲಿ ಕೋಲಾರದ ನಂದಿನಿ ದೇಶಕ್ಕೆ ಮೊದಲ ಸ್ಥಾನ ಪಡೆದಿದ್ದರು. ಇದೀಗ ರಾಜ್ಯದ 25 ಅಭ್ಯರ್ಥಿಗಳು ವಿವಿಧ ಹಂತದ ರ‍್ಯಾಂಕ್ ಗಳಿಸಿದ್ದು, ಬೀದರ್ ನ ಶಿಂಧೆ 95ನೇ ಸ್ಥಾನ ಪಡೆದಿದ್ದಾರೆ.

ಕೀರ್ತಿ ಕಿರಣ್‌ ಪೂಜಾರ್‌ (115 ರ್‍ಯಾಂಕ್‌), ಟಿ.ಶುಭಮಂಗಳಾ (147), ಎಂ.ಶ್ವೇತಾ (119), ಸಿ. ವಿಂಧ್ಯಾ (160), ಕೃತಿಕಾ (194), ಪೃಥ್ವಿಕ್‌ ಶಂಕರ್‌ (211), ಬಿ.ಗೋಪಾಲಕೃಷ್ಣ (265), ಎಚ್‌.ವಿನೋದ್‌ ಪಾಟೀಲ್‌ (294), ಎಂ.ಪುನೀತ್‌ ಕುಟ್ಟಯ್ಯ (324), ಸಿದ್ದಲಿಂಗ ರೆಡ್ಡಿ (346), ಸುದರ್ಶನ ಭಟ್‌ (434) ಎನ್‌.ವೈ. ವೃಶಾಂಕ್‌ (478), ಅಭಿಲಾಷ್‌ ಶಶಿಕಾಂತ್‌ ಬದ್ದೂರ್‌ (531), ನಿಖಿಲ್‌ ನಿಪ್ಪಾಣಿಕರ್‌ (563), ಟಿ.ಎನ್‌. ನಿಥನ್‌ರಾಜ್‌ (575), ಕೆ. ಸಚಿನ್‌ (652), ಎಸ್‌. ಪ್ರೀತಮ್‌ (654), ಬಿ.ಸಿ. ಹರೀಶ್‌ (657), ಆರ್‌.ವಿಜಯೇಂದ್ರ (666), ಶಿವರಾಜ್‌ ಸಾಯಿಬಣ್ಣ ಮನಗಿರಿ (784), ಸ್ಪರ್ಶ ನೀಲಾಂಗಿ (805), ಆರ್‌.ಸಿ. ಹರ್ಷವರ್ಧನ (913), ವೆಂಕಟೇಶ ನಾಯಕ್‌ (930), ಪಿ.ಪವನ್‌ (933),

ಅನುದೀಪ್‌ ದುರಿಶೆಟ್ಟಿ:

ಈ ಬಾರಿ ಮೊದಲ ರ್‍ಯಾಂಕ್‌ ಪಡೆದ ಅನುದೀಪ್‌ ಕೂಡ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ಅವರಿಗೆ ಪ್ರತಿಷ್ಠಿತ ರಾಜಸ್ಥಾನದ ಪಿಳಾನಿಯ ಬಿಐಟಿಎಸ್‌ನಲ್ಲಿ ಬಿ. ಇ (ಎಲೆಕ್ಟ್ರಾನಿಕ್ಸ್‌ ಅಂಡ್‌ ಇನ್‌ಸ್ಟ್ರುಮೆಂಟೇಷನ್‌) ಪದವಿಯ ಹಿನ್ನೆಲೆ ಇದೆ.

ಆಡಳಿತ ಸೇವೆಗೆ ಹೊಸ ರಕ್ತ: ಕೋಚಿಂಗ್ ಪಡೆಯದೇ ನಾಗರಿಕ ಸೇವೆಗೆ ಅಡಿ ಇಟ್ಟ ಅಭ್ಯರ್ಥಿಗಳು

ಈ ಹಿಂದೆ ಕೂಡ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತಮ ರ್‍ಯಾಂಕ್‌ ಪಡೆದು ಭಾರತೀಯ ಕಂದಾಯ ಸೇವೆಗೆ (ಐಆರ್
ಎಸ್) ಸೇರಿ ಉಪವಿಭಾಗಾಧಿಕಾರಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಮತ್ತಷ್ಟು ಉನ್ನತ ಹುದ್ದೆಯ ಕನಸು ಹೊತ್ತು 2017ರ ಯುಪಿಎಸ್‌ಸಿ ಪರೀಕ್ಷೆ ಬರೆದ ಇವರು ಮಾನವಶಾಸ್ತ್ರವನ್ನು ಆಯ್ಕೆಯ ವಿಷಯವಾಗಿ ತೆಗೆದುಕೊಂಡಿದ್ದರು. ಐದು ಪ್ರಯತ್ನಗಳಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಪರೀಕ್ಷೆಗೆ ಅವರು ಯಾವುದೇ ಕೋಚಿಂಗ್‌ ತೆಗೆದುಕೊಂಡಿರಲಿಲ್ಲ ಎನ್ನುವುದೇ ವಿಶೇಷ.

“ನಾನು ಈಗಾಗಲೇ ಐಆರ್‌ಎಸ್‌ ಆಗಿ ಕೆಲಸ ನಿರ್ವಹಿಸುತ್ತಿದ್ದು, ಅಧ್ಯಯನ ನಡೆಸಲು ಹೆಚ್ಚು ಸಮಯ ನನಗೆ ದೊರೆಯುತ್ತಿರಲಿಲ್ಲ. ಆದರೆ ವಿಕೇಂಡ್‌ಗಳಲ್ಲಿ ನಾನು ಹೆಚ್ಚಿನ ಅಧ್ಯಯನ ಮಾಡುತ್ತಿದ್ದೆ,” ಎನ್ನುತ್ತಾರೆ ಅವರು.

ನಾನು ಸದ್ಯ ಭಾರತೀಯ ಕಂದಾಯ ಸೇವೆಯಲ್ಲಿ ಸಹಾಯಕ ಆಯುಕ್ತನಾಗಿ ಸೇವೆ ಸಲ್ಲಿಸುತ್ತಿದ್ದು, ಫರೀದಾಬಾದ್‌ನ ನ್ಯಾಷನಲ್‌ ಅಕಾಡೆಮಿ ಆಫ್‌ ಕಸ್ಟಮ್ಸ್‌, ಎಕ್ಸಸೈಸ್‌ ಅಂಡ್‌ ನಾರ್ಕೊಟಿಕ್ಸ್‌ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದೇನೆ. ಐಎಎಸ್‌ ಅಧಿಕಾರಿಯಾಗುವ ಕನಸು ಇದೀಗ ನನಸಾಗಿದೆ. 
-ಅನುದೀಪ್‌ ದುರಿಶೆಟ್ಟಿ, ಯುಪಿಎಸ್‌ಸಿ ಮೊದಲ ರ್‍ಯಾಂಕ್‌

ಅನು ಕುಮಾರಿ:

ಹರಿಯಾಣದ ಅನು ಕುಮಾರಿ (31) ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಎರಡನೇ ರ್‍ಯಾಂಕ್‌ ಗಳಿಸಿದ್ದಾರೆ. ಅವರು ತಮ್ಮ ಎರಡನೇ ಪ್ರಯತ್ನದಲ್ಲಿಯೇ ಈ ಸಾಧನೆ ಮಾಡಿದ್ದಾರೆ. ಕಳೆದ ಬಾರಿಯ ಪ್ರಯತ್ನದಲ್ಲಿ ಕೇವಲ ಒಂದು ಅಂಕದಿಂದ ಅವರು ಐಎಸ್‌ಎಸ್‌ ಕನಸು ಕೈ ತಪ್ಪಿತ್ತು.

ಅನು ಕಮಾರಿ ಅವರು ವಿವಾಹಿತೆಯಾಗಿದ್ದು ಅವರಿಗೆ 4 ವರ್ಷದ ಮಗುವಿದೆ. ಮಗು ನೋಡಿಕೊಂಡು ಮನೆಯ ಕೆಲಸಗಳನ್ನೆಲ್ಲ ಮುಗಿಸಿ ದಿನಕ್ಕೆ 10-12 ತಾಸು ಅವರು ಯುಪಿಎಸ್‌ಸಿ ಪರೀಕ್ಷೆಗಾಗಿ ಓದುತ್ತಿದ್ದರು. ಈ ಮೂಲಕ 2ನೇ ರ್‍ಯಾಂಕ್‌ ಗಳಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಅನುಕುಮಾರಿ ಕುಟುಂಬ
ಅನುಕುಮಾರಿ ಕುಟುಂಬ

“ನಾನಿರುವ ಹಳ್ಳಿಯಲ್ಲಿ ಯಾವುದೇ ಸುದ್ದಿ ಪತ್ರಿಕೆಗಳು ಬರುತ್ತಿರಲಿಲ್ಲ; ಆ ಸಂದರ್ಭದಲ್ಲಿ ನನ್ನ ನೆರವಿಗೆ ಬಂದದ್ದು ಯುಪಿಎಸ್‌ಸಿ ಸಿದ್ಧತೆಗಾಗಿನ ಆನ್‌ಲೈನ್‌ ಕಂಟೆಟ್‌ಗಳು,” ಎಂದು ಸೋನಿಪತ್ ಹಳ್ಳಿಯ ಅವರು ಹೇಳಿದ್ದಾರೆ.

ಗುರಿ ಸಾಧಿಸುವ ಛಲ ಮತ್ತು ದೃಢ ಸಂಕಲ್ಪವೇ ನಮ್ಮ ಯಶಸ್ಸಿಗೆ ಕಾರಣ. ಒಂದು ವೇಳೆ ದೃಢ ಸಂಕಲ್ಪ ಮೂಡಿದ್ದೇ ಆದರೆ ಯಾರೂ ಅದನ್ನು ತಡೆಯಲು ಸಾಧ್ಯವಿಲ್ಲ.  ಐಎಎಸ್‌ ಅಧಿಕಾರಿ ಆದ ನಂತರ ಮಹಿಳಾ ಸುರಕ್ಷತೆಯೇ ತಮ್ಮ ಮೊದಲ ಆಧ್ಯತೆ.
-ಅನು ಕುಮಾರಿ (ಎನ್‌ಡಿಟಿವಿ ಸಂದರ್ಶನದಲ್ಲಿ)

ಅನು ಕುಮಾರಿ ಕೂಡ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಲು ಯಾವುದೇ ಕೋಚಿಂಗ್‌ ಕ್ಲಾಸ್‌ಗೆ ಹೋಗಿಲ್ಲ. ಹೀಗೆ ಈ ಬಾರಿಯ ಮೊದಲೆರಡು ಟಾಪ್ ರ್‍ಯಾಂಕ್‌ ಅಭ್ಯರ್ಥಿಗಳು ಕೋಚಿಂಗ್ ತೆಗೆದುಕೊಳ್ಳದೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಗ್ರ ಸಾಧನೆ ಮಾಡಿರುವುದು ಗಮನಾರ್ಹ. ಅನು ಕುಮಾರಿಯು ದೆಹಲಿಯ ವಿ.ವಿ.ಯಿಂದ ವಿಜ್ಞಾನದಲ್ಲಿ ಪದವಿ ಪಡೆದಿದ್ದಾರೆ ನಂತರ ಐಎಂಟಿ ನಾಗ್ಪುರದಿಂದ ಎಂಬಿಎ ಮುಗಿಸಿದ್ದಾರೆ.

ಹರ್ಯಾಣದತ್ತ ಇಡೀ ದೇಶವೇ ತಿರುಗಿ ನೋಡುವ ಸಾಧನೆ ಮಾಡಿದ ಅನುಕುಮಾರಿಯನ್ನು ಹರಿಯಾಣದ ಮುಖ್ಯಮಂತ್ರಿ ಮನೋಹರ ಲಾಲ್‌ ಟ್ವೀಟರ್‌ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.