samachara
www.samachara.com
ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ; ಸಾಕಾರವಾಗಿದೆಯೇ ಸಮಾನತೆಯ ಆಶಯ?
ಸುದ್ದಿ ಸಾಗರ

ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ; ಸಾಕಾರವಾಗಿದೆಯೇ ಸಮಾನತೆಯ ಆಶಯ?

ರಾಜ್ಯ ಮತ್ತು ದೇಶದ ರಾಜಕಾರಣವನ್ನು ನಿಭಾಯಿಸಲು ಬೇಕಾದ ಶಕ್ತಿ ಸಾಮರ್ಥ್ಯ ಮಹಿಳೆಯರಿಗೆ ಇಲ್ಲವೆನ್ನುವ ಮಾತು ಮಹಿಳೆಯರನ್ನು ರಾಜಕೀಯದಿಂದ ದೂರವೇ ಉಳಿಯುವಂತೆ ಮಾಡುತ್ತಿದೆ.

ಭಾರತದ ರಾಜಕೀಯ ವ್ಯವಸ್ಥೆಯನ್ನು ಗಮನಿಸಿದರೆ ಸಕ್ರಿಯ ರಾಜಕಾರಣದಲ್ಲಿ ಪುರುಷರಿಗಿಂತ ಮಹಿಳೆಯರ ಪ್ರಾತಿನಿಧ್ಯ ಕಡಿಮೆ ಇದೆ. ರಾಜಕೀಯ ಕ್ಷೇತ್ರದಲ್ಲಿ ಮಹಿಳೆರಿಗೆ ಸಮಾನತೆ ಇನ್ನೂ ಸಿಕ್ಕಿಲ್ಲ.

ರಾಜ್ಯ ಮತ್ತು ದೇಶದ ರಾಜಕಾರಣವನ್ನು ನಿಭಾಯಿಸಲು ಬೇಕಾದ ಶಕ್ತಿ ಸಾಮರ್ಥ್ಯ ಮಹಿಳೆಯರಿಗೆ ಇಲ್ಲವೆನ್ನುವ ಮಾತು ಮಹಿಳೆಯರನ್ನು ರಾಜಕೀಯದಿಂದ ದೂರವೇ ಉಳಿಯುವಂತೆ ಮಾಡುತ್ತಿದೆ. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮಹಿಳೆಯರೂ ರಾಜಕೀಯದಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದಾರೆ.

ಮಹಿಳೆಯರೂ ರಾಜಕೀಯದಲ್ಲಿ ಹೊಸ ಆಲೋಚನೆ, ಹೊಸ ಬದಲಾವಣೆಗಳನ್ನು ತಂದಿದ್ದಾರೆ ಎಂಬುದಕ್ಕೆ ದೇಶದಲ್ಲಿ ಹಲವು ಉದಾಹರಣೆಗಳಿವೆ. ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯಿಂದ ಹಿಡಿದು ಮುಖ್ಯಮಂತ್ರಿ ಹುದ್ದೆಗೂ ಏರಿರುವ ಮಮತಾ ಬ್ಯಾನರ್ಜಿ, ಮಾಯಾವತಿ, ಜಯಲಲಿತಾ, ರಾಷ್ಟ್ರರಾಜಕಾರಣಲ್ಲಿ ಇಂದಿಗೂ ತಮ್ಮ ಪ್ರಭಾವ ಹೊಂದಿರುವ ಸುಷ್ಮಾ ಸ್ವರಾಜ್‌, ಸೋನಿಯಾ ಗಾಂಧಿ – ಹೀಗೆ ಯಶಸ್ವಿ ಮಹಿಳಾ ರಾಜಕಾರಣಿಗಳ ಪಟ್ಟಿ ಬೆಳೆಯುತ್ತದೆ.

ಮಹಿಳೆಯರು ಮನೆಕೆಲಸಕ್ಕೆ ಮಾತ್ರ ಸಿಮೀತವಾಗಿರದೆ ಉದ್ಯೋಗ, ಶಿಕ್ಷಣ, ವಿಜ್ಞಾನ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅದೇ ರೀತಿ ಮಹಿಳೆಯರು ರಾಜಕೀಯದಲ್ಲೂ ತಮ್ಮದೇ ಆದ ಪಡಿಯಚ್ಚು ಮೂಡಿಸಿದ್ದಾರೆ. ಆದರೆ, ಉಳಿದೆಲ್ಲಾ ಕ್ಷೇತ್ರಗಳಿಗೆ ಹೋಲಿಸಿದರೆ ರಾಜಕೀಯದಲ್ಲಿ ಮಹಿಳೆಯರಿಗೆ ಸಿಗಬೇಕಾದ ಸೂಕ್ತ ಪ್ರಾತಿನಿಧ್ಯ ಸಿಗುತ್ತಿದೆಯೇ ಎಂಬ ಪ್ರಶ್ನೆ ಎದುರಾಗುತ್ತದೆ.

ಶೋಭಾ ಕರಂದ್ಲಾಜೆ- ರಮ್ಯಾ
ಶೋಭಾ ಕರಂದ್ಲಾಜೆ- ರಮ್ಯಾ

ಕರ್ನಾಟಕದ ಸ್ಥಿತಿ ಗತಿ:

ಕರ್ನಾಟಕ ರಾಜಕೀಯದಲ್ಲೂ ಮಹಿಳೆಯರ ಸ್ಥಾನ ಕಡಿಮೆಯೇ. ಕರ್ನಾಟಕದ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸುವ 10 ಮಂದಿ ಮಹಿಳೆಯರ ಪೈಕಿ ಆಯ್ಕೆಯಾಗುವವರು ಒಬ್ಬರು ಮಾತ್ರ.

2008 ಮತ್ತು 2013ರ ಚುನಾವಣೆಯಲ್ಲಿ ಒಟ್ಟು ಮಹಿಳಾ ಅಭ್ಯರ್ಥಿಗಳಲ್ಲಿ 5ರಷ್ಟು ಮಂದಿಯನ್ನು ಮಾತ್ರ ಮತದಾರರು ಆಯ್ಕೆ ಮಾಡಿದ್ದಾರೆ. ಒಟ್ಟು 641 ಮಹಿಳಾ ಅಭ್ಯರ್ಥಿಗಳಲ್ಲಿ ಮತದಾರ ಆಯ್ಕೆ ಮಾಡಿರುವುದು ಕೇವಲ 38 ಜನರನ್ನು ಮಾತ್ರ. ಅಂದರೆ ಕೇವಲ 3% ಮಹಿಳಾ ಅಭ್ಯರ್ಥಿಗಳು ಮಾತ್ರ ಮತದಾರರ ಒಲವು ಗಳಿಸಿಕೊಳ್ಳಲು ಸಾಧ್ಯವಾಗಿದೆ.

ಇತರೆ ರಾಜ್ಯಗಳಲ್ಲಿ…

ಪಶ್ಚಿಮ ಬಂಗಾಳ, ರಾಜಸ್ಥಾನ, ಗೋವಾ, ತಮಿಳುನಾಡು, ಕೇರಳ, ಗುಜರಾತ್, ಆಂಧ್ರಪ್ರದೇಶ, ಬಿಹಾರ, ನವದೆಹಲಿ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸುವ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ಕರ್ನಾಟಕ ಈ ಎಲ್ಲ ರಾಜ್ಯಗಳಿಗಿಂತ ಅತಿ ಕಡಿಮೆ ಮಹಿಳಾ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿರುತ್ತಾರೆ.

“ಬೇರೆ ಕ್ಷೇತ್ರಗಳಂತೆ ಮಹಿಳೆಯರು ಸಕ್ರಿಯ ರಾಜಕಾರಣಕ್ಕೆ ಬರುವುದು ಮುಖ್ಯ. ಸಾಮಾಜಿಕ ಸಮಾನತೆ ಮತ್ತು ಸೇವೆಗಳಿಗೆ ಮಹಿಳೆಯರು ತೆರೆದುಕೊಳ್ಳಬೇಕು. ರಾಜಕೀಯ ಪ್ರವೇಶ ಮಹಿಳೆಯ ಸಂವಿಧಾನಿಕ ಹಕ್ಕು. ಮಹಿಳೆಯರು ತಮ್ಮ ಪಾಲನ್ನು ತಾವು ಪಡೆಯಬೇಕು” ಎನ್ನುತ್ತಾರೆ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್.

ಇತ್ತೀಚೆಗೆ ದೊಡ್ಡ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಹೆಚ್ಚಿನ ಕಡೆಗಳಲ್ಲಿ ಟಿಕೆಟ್‌ ನೀಡುತ್ತಿವೆ. ಮಹಿಳೆಯರು ಸ್ವತಂತ್ರರಾಗಿ ಅಥವಾ ಸಣ್ಣಪುಟ್ಟ ಪಕ್ಷಗಳಲ್ಲಿ ಸ್ಪರ್ಧೆ ನಡೆಸಿದರೆ ಅವರು ಗೆಲುವು ಸಾಧ್ಯವಿಲ್ಲ ಎನ್ನುವ ಮಾತಿದೆ. ಹೀಗಾಗಿ ಸಕ್ರಿಯ ರಾಜಕಾರಣಕ್ಕೆ ಬರುವ ಉದ್ದೇಶವಿರುವ ಮಹಿಳೆಯರು ತಮ್ಮ ರಾಜಕೀಯ ಭವಿಷ್ಯವನ್ನು ದೇಶದ ದೊಡ್ಡ ಪಕ್ಷಗಳಿಂದಲೇ ಕಟ್ಟಿಕೊಳ್ಳಬೇಕು ಎಂಬುದು ರಾಜಕೀಯ ತಜ್ಞರ ಅಭಿಮತ.

ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ; ಸಾಕಾರವಾಗಿದೆಯೇ ಸಮಾನತೆಯ ಆಶಯ?
ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳು ಮಹಿಳಾ ಮುಖ್ಯಮಂತ್ರಿಗಳನ್ನು ನೋಡಿವೆ. ಇಂತಹ ರಾಜ್ಯಗಳ ಮತದಾರರು ಮಹಿಳಾ ರಾಜಕಾರಣಿಗಳನ್ನು ನಂಬಿದ್ದಾರೆ. ಆದರೆ, ಕರ್ನಾಟಕದಲ್ಲಿ ಇಂತಹ ಪರಿಸ್ಥಿತಿ ಇಲ್ಲ.
- ಖುಷ್ಬು, ಎಐಸಿಸಿ ವಕ್ತಾರೆ

“ಪಾತಿನಿಧ್ಯದ ದೃಷ್ಟಿಯಿಂದ ನೋಡಿದರೆ ಮಹಿಳೆಯರಿಗೆ ಮೀಸಲಾತಿ ಅನುಕೂಲಕರ. ಆದರೆ, ಇಡೀ ವ್ಯವಸ್ಥೆಯೇ ಪುರುಷ ಪ್ರಾಬಲ್ಯ ಹೊಂದಿದೆ. ಚುನಾವಣೆ ಹಾಗೂ ರಾಜಕೀಯ ವ್ಯವಸ್ಥೆ ದಿನದಿಂದ ದಿನಕ್ಕೆ ಕೊಳಕಾಗುತ್ತಿದೆ. ಮಹಿಳೆಯರು ರಾಜಕೀಯದಿಂದ ದೂರ ಉಳಿಯಲು ಇದೂ ಪ್ರಮುಖ ಕಾರಣ. ರಾಜಕೀಯ ಹಿನ್ನೆಲೆ ಇರುವ ಹಾಗೂ ಈಗಾಗಲೇ ಜನಪ್ರಿಯರಾಗಿರುವ ಮಹಿಳೆಯರು ಮಾತ್ರ ಇಲ್ಲಿ ಬದುಕಲು ಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ” ಎಂಬುದು ವೈಎಸ್‌ಆರ್‌ ಕಾಂಗ್ರೆಸ್‌ ನಾಯಕಿ, ನಟಿ ಆರ್.ಕೆ.ರೋಜಾ ಅವರ ಮಾತು.

ಮಹಿಳಾ ಮೀಸಲಾತಿಯ ದುರ್ಬಳಕೆ

ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಮೀಸಲಾತಿಯ ಅನುಕೂಲವಿದ್ದರೂ ಅದು ದುರುಪಯೋಗವಾಗುತ್ತಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿಯಿಂದ ಆಯ್ಕೆಯಾಗುವ ಮಹಿಳಾ ಜನಪ್ರತಿ ನಿಧಿಗಳ ಬದಲಾಗಿ ಅವರ ಗಂಡ ಅಥವಾ ಮಕ್ಕಳು ಅಧಿಕಾರ ನಡೆಸುವುದು ಸಾಮಾನ್ಯ ಎಂಬಂತಾಗಿದೆ.

ಹಲವು ಕಡೆ ಗ್ರಾಮ ಪಂಚಾಯ್ತಿ ಸದಸ್ಯೆ ಮಟ್ಟದಿಂದ ಹಿಡಿದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಹುದ್ದೆಯವರೆಗೂ ಮಹಿಳೆಯರು ಕೇವಲ ನಾಮಕಾವಸ್ಥೆಗಷ್ಟೇ ಜನಪ್ರತಿನಿಧಿಗಳಾಗಿರುತ್ತಾರೆ. ಅಧಿಕಾರವೆಲ್ಲಾ ಅವರ ಗಂಡ ಅಥವಾ ಮಕ್ಕಳ ಕೈಯಲ್ಲೇ ಇರುತ್ತದೆ. ಇದು ಮೀಸಲಾತಿ ಇದ್ದೂ ಮಹಿಳೆಯರು ರಾಜಕೀಯದಲ್ಲಿ ಬೆಳೆಯಲು ಸಾಧ್ಯವಾದಿರುವ ಸ್ಥಿತಿ ನಿರ್ಮಾಣ ಮಾಡಿದೆ.