samachara
www.samachara.com
ರೋಹಿಣಿ ಸಿಂಧೂರಿ VS ರಾಜ್ಯ ಸರಕಾರ; ವರ್ಗಾವಣೆ ‘ಸಿಂಧು’ ಎಂದ ಸಿಎಟಿ
ಸುದ್ದಿ ಸಾಗರ

ರೋಹಿಣಿ ಸಿಂಧೂರಿ VS ರಾಜ್ಯ ಸರಕಾರ; ವರ್ಗಾವಣೆ ‘ಸಿಂಧು’ ಎಂದ ಸಿಎಟಿ

ರಾಜ್ಯ ಸರಕಾರ ಮತ್ತು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಕಾನೂನು ಸಮರಕ್ಕೆ ಅಂತಿಮ ತೆರೆ ಬಿದ್ದಿದೆ. ಸುಮಾರು ಒಂದು ತಿಂಗಳ ವಾದ ಪ್ರತಿವಾದ ಆಲಿಸಿದ ಸಿಎಟಿ ರೋಹಿಣಿ ಸಿಂಧೂರಿ ವರ್ಗಾವಣೆ ‘ಸಿಂಧು’ ಎಂದಿದೆ

ರಾಜ್ಯ ಸರಕಾರವನ್ನು ಎದುರು ಹಾಕಿಕೊಂಡಿದ್ದ ಹಾಸನದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಹಿನ್ನಡೆಯಾಗುವಂತಹ ಬೆಳವಣಿಗೆ ನಡೆದಿದೆ. ಸಿಂಧೂರಿ ವರ್ಗಾವಣೆ ಮಾಡಿ ರಾಜ್ಯ ಸರಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಆಡಳಿತಾತ್ಮಕ ನ್ಯಾಯ ಮಂಡಳಿ (ಸಿಎಟಿ) ವಜಾಗೊಳಿಸಿದೆ. ಈ ಹಿಂದೆ ವರ್ಗಾವಣೆಗೆ ಮಧ್ಯಂತರ ತಡೆಯನ್ನು ನೀಡಿದ್ದ ಸಿಎಟಿ ಈಗ ಸಿಂಧೂರಿ ವರ್ಗಾವಣೆ ಮಾಡುವ ಹಕ್ಕು ಸರಕಾರಕ್ಕಿದೆ ಎಂಬ ಆದೇಶ ಹೊರಡಿಸಿದೆ.

ಈ ಮೂಲಕ ಕಳೆದ ಒಂದು ತಿಂಗಳಿನಿಂದ ಕೆಲಸವಿಲ್ಲದೇ ಆತಂಕಗೊಂಡಿದ್ದ ಐಎಎಸ್ ಅಧಿಕಾರಿ ಡಿ. ರಂದೀಪ್ ಅವರ ಅತಂತ್ರ ಸ್ಥಿತಿ ಕೊನೆಗೂ ದೂರವಾದಂತಾಗಿದೆ. ರಾಜ್ಯ ಸರಕಾರದ ಆದೇಶದನ್ವಯ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಡಿ. ರಂದೀಪ್ ಅವರು ನಾಳೆ ಹಾಸನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ಧಾರೆ.

ಏನಿದು ಪ್ರಕರಣ?:

ರೋಹಿಣಿ ಸಿಂಧೂರಿ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ 7 ತಿಂಗಳ ಅವಧಿಯಲ್ಲೇ ಸರಕಾರ ಅವರ ವರ್ಗಾವಣೆಗೆ ಆದೇಶ ನೀಡಿತ್ತು. ಈ ಆದೇಶವನ್ನು ತೀವ್ರವಾಗಿ ವಿರೋಧಿಸಿದ್ದ ಸಿಂಧೂರಿ ಸ್ಥಳೀಯ ರಾಜಕೀಯ ವ್ಯಕ್ತಿಗಳನ್ನು, ನೇರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಅರಕಲಗೂಡು ಮಂಜು ಕುರಿತು ದೂರಿದ್ದರು.

ವರ್ಗಾವಣೆ ಕ್ರಮವನ್ನು ಪ್ರಶ್ನಿಸಿ, “3ರಿಂದ 4 ವರ್ಷ ಒಂದೇ ಸ್ಥಳದಲ್ಲಿ ಕೆಸ ನಿರ್ವಹಿಸುತ್ತಿರುವ ಜಿಲ್ಲಾಧಿಕಾರಿಗಳನ್ನು ವರ್ಗಾಯಿಸದ ಸರಕಾರ ನನ್ನ ವರ್ಗಾವಣೆಗೆ ಮುಂದಾಗಿದೆ. ಗಣಿ ಮಾಫಿಯಾ ವಿರುದ್ಧ ಕ್ರಮ ಕೈಗೊಂಡಿದ್ದಕ್ಕಾಗಿ ಸರಕಾರ ವರ್ಗಾವಣೆ ಮಾಡಿದೆ. ಸ್ಥಳೀಯ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಸರಕಾರ ಈ ನಡೆಯನ್ನು ಕೈಗೊಂಡಿದೆ,” ಎಂದು ರೋಹಿಣಿ ಸಿಎಟಿಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಆರೋಪಿಸಿದ್ದರು.

ತಮ್ಮ ವರ್ಗಾವಣೆಯನ್ನು ರೋಹಿಣಿ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ರೊಹಿಣಿ ಪರ ವಕೀಲರು 2 ವರ್ಷಕ್ಕೂ ಮುಂಚೆ ಅಧಿಕಾರಿಗಳನ್ನು ವರ್ಗಾಯಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದರು. ಆಡಳಿತಾತ್ಮಕ ನೀತಿಯ ಅನ್ವಯ, ವರ್ಗಾವಣೆಗೆ ಕನಿಷ್ಟ ಒಂದು ವರ್ಷ ಸೇವಾವಧಿಯಾದರೂ ಆಗಿರಬೇಕು. ಆದರೆ ಸಿಂಧೂರಿ ವರ್ಗಾವಣೆಯಲ್ಲಿ ಕಾನೂನನ್ನು ಗಾಳಿಗೆ ತೂರಲಾಗಿದೆ ಎಂಬ ವಾದವೂ ಕೇಳಿಬಂದಿತ್ತು.

ವಿಚಾರಣೆಯನ್ನು ನಡೆಸಿದ ನ್ಯಾಯಾಲಯ, ಅವಧಿಗೂ ಮುನ್ನ ಅಧಿಕಾರಿಗಳನ್ನು ಸರಕಾರ ಇಚ್ಚಿಸಿದಂತೆ ವರ್ಗಾಯಿಸಲು ಸಾಧ್ಯವಿಲ್ಲ ಎಂದಿತ್ತು. ವರ್ಗಾವಣೆಯ ಹಿಂದಿರುವ ರಾಜಕೀಯ ಹಿತಾಸಕ್ತಿಯೇನು ಎನ್ನುವುದನ್ನು ಬಯಲಿಗೆಳೆಯುವಂತೆ ಅಧಿಕಾರಿಗಳಿಗೆ ಸೂಚಿಸಿತ್ತು. ವರ್ಗಾವಣೆ ಮಾಡದಂತೆ ನೀಡಿದ್ದ ತಡೆಯಾಜ್ಞೆಯನ್ನು ವಿಸ್ತರಿಸಿತ್ತು.

ನಂತರದ ದಿನಗಳಲ್ಲಿ ಮತ್ತೆ ರೋಹಿಣಿ ಸಿಂಧೂರಿಯವರ ವರ್ಗಾವಣೆ ವಿಷಯ ಮುನ್ನಲೆಗೆ ಬಂದಿತ್ತು. ಮಾರ್ಚ್ 7ರಂದು ರಾಜ್ಯ ಸರಕಾರ ರೋಹಿಣಿ ಸಿಂಧೂರಿ ಸೇರಿದಂತೆ 11 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು. ಮಾರ್ಚ್ 8ರಂದು ರೋಹಿಣಿ ಸಿಂಧೂರಿ ಅವರು ಸಿಎಟಿಯಲ್ಲಿ ವರ್ಗಾವಣೆ ಆದೇಶವನ್ನು ಪ್ರಶ್ನೆ ಮಾಡಿದ್ದರು.

ಕೇಂದ್ರ ಆಡಳಿತಾತ್ಮಕ ನ್ಯಾಯ ಮಂಡಳಿಯ ವರ್ಗಾವಣೆ ಕುರಿತಾದ ತೀರ್ಪನ್ನು ಪ್ರಶ್ನಿಸಿ, ಸಿಂಧೂರಿ ಹೈಕೋರ್ಟ್‌ಗೆ ರಿಟ್‌ ಅರ್ಜಿಯನ್ನು ಸಲ್ಲಿಸಿದ್ದರು. ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಬಿ.ಎಂ.ಶ್ಯಾಮಪ್ರಸಾದ್‌ ಅವರ ವಿಭಾಗೀಯ ಪೀಠ ರೋಹಿಣಿ ಸಿಂಧೂರಿಯವರ ಅರ್ಜಿಯ ವಿಚಾರಣೆ ನಡೆಸಿತ್ತು. ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯ ಆದೇಶವನ್ನು ರದ್ದುಪಡಿಸಿದ್ದು, ಮತ್ತೊಮ್ಮೆ ಅರ್ಜಿ ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಿತ್ತು.

ಏಪ್ರಿಲ್‌ 2ರಂದು ರೋಹಿಣಿ ಸಿಂಧೂರಿ ದಾಖಲಿಸಿದ್ದ ಅರ್ಜಿಯನ್ನು ಮರುಪರಿಶೀಲಿಸಿದ್ದ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ, ಮುಂದಿನ ಆದೇಶ ದೊರೆಯುವವರೆಗೂ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕು ಎಂದು ಆದೇಶಿಸಿತ್ತು.

ಒಂದು ತಿಂಗಳ ಕಾಲ ರೋಹಿಣಿ ಸಿಂಧೂರಿ ನಡೆಸಿದ್ದ ಹೋರಾಟ ಈಗ ಅಂತ್ಯಗೊಂಡಿದೆ. ಅದು ರೋಹಿಣಿ ಸಿಂಧೂರಿಯ ವಿರುದ್ಧವಾದ ತೀರ್ಪಿನಲ್ಲಿ. ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಮಂಡಳಿ, ಆಡಳಿತಾತ್ಮಕ ಕಾರಣಗಳಿಗಾಗಿ ಸರಕಾರ ರೊಹಿಣಿಯವರನ್ನು ವರ್ಗಾಯಿಸಿದೆ ಎಂಬ ಅಂಶವನ್ನು ಸರಿ ಎಂದು ಭಾವಿಸಿದೆ. ಸದ್ಯ ರೋಹಿಣಿ ಸಿಂಧೂರಿಯವರ ಅರ್ಜಿ ವಜಾಗೊಂಡಿದೆ.

ರಂದೀಪ್‌ಗೆ ಕೊನೆಗೂ ಸಿಕ್ಕ ಪೋಸ್ಟಿಂಗ್‌:

ಕಳೆದೊಂದು ತಿಂಗಳಿನಿಂದ ಪೋಸ್ಟಿಂಗ್‌ ಇಲ್ಲದೇ ಖಾಲಿ ಕುಳಿತಿದ್ದ ಐಎಎಸ್‌ ಅಧಿಕಾರಿ ರ‌ಂದೀಪ್‌ಗೆ ಅಂತಿಮವಾಗಿ ಪೋಸ್ಟಿಂಗ್‌ ಸಿಕ್ಕಿದೆ. ಮೈಸೂರು ಡಿಸಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರಂದೀಪ್‌ರನ್ನು ರಾಜ್ಯ ಸರಕಾರ ಹಾಸನಕ್ಕೆ ವರ್ಗಾವಣೆ ಮಾಡಿತ್ತು. ರಂದೀಪ್‌ರಿಂದ ತೆರವಾದ ಮೈಸೂರು ಡಿಸಿ ಸ್ಥಾನಕ್ಕೆ ಐಎಎಸ್‌ ಅಧಿಕಾರಿ ಶಿವಕುಮಾರ್‌ರನ್ನು ಪೋಸ್ಟ್‌ ಮಾಡಲಾಗಿತ್ತು. ಇತ್ತ ರಂದೀಪ್‌ ರೋಹಿಣಿ ಸಿಂಧೂರಿ ವರ್ಗಾವಣೆಯಾದ ಹಾಸನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲು ಹೊರಟಿದ್ದರು.

ಆದರೆ ಮಾರ್ಗ ಮಧ್ಯದಲ್ಲಿ ರೋಹಿಣಿ ಸಿಂಧೂರಿಯವರ ಸಂದೇಶ ರಂದೀಪ್‌ಗೆ ಬಂದಿತ್ತು. ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯಿಂದ ವರ್ಗಾವಣೆ ತಡೆ ಆಜ್ಞೆ ಸಿಕ್ಕಿರುವುದಾಗಿ ಸಿಂಧೂರಿ ತಿಳಿಸಿದ್ದರು. ಇತ್ತ ಮೈಸೂರಿನಲ್ಲಿ ಶಿವಕುಮಾರ್‌ ಅಧಿಕಾರ ಸ್ವೀಕರಿಸಿದ್ದರು. ಅತ್ತ ಹಾಸನದಲ್ಲೇ ಸಿಂಧೂರಿ ಮುಂದುವರೆದಿದ್ದರು. ಈ ಹಿನ್ನೆಲೆಯಲ್ಲಿ ರಂದೀಪ್‌ ಪೋಸ್ಟಿಂಗ್‌ ಇಲ್ಲದೇ ಕೂರುವಂತಾಗಿತ್ತು. ಇದೀಗ ರಂದೀಪ್‌ಗೆ ಮತ್ತೆ ಪೋಸ್ಟಿಂಗ್‌ ಸಿಕ್ಕಿದ್ದು ಬುಧವಾರ ಹಾಸನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಪೋಸ್ಟಿಂಗ್‌ ಇಲ್ಲದ ಒಂದು ತಿಂಗಳ ನಡುವೆ, ಪತ್ರಕರ್ತರೊಬ್ಬ ಜತೆ ನಡೆದ ವೃತ್ತಾಂತಗಳ ಬಗ್ಗೆ ರಂದೀಪ್‌ ಮಾತನಾಡಿದ್ದರು.