samachara
www.samachara.com
ಅನಂತ್‌ಕುಮಾರ್‌ ಹೆಗಡೆ ಅಲ್ಲ, ಯಾರಿಂದಲೂ ಸಂವಿಧಾನ ಬದಲಿಸಲು ಸಾಧ್ಯವಿಲ್ಲ: ಬಿಎಸ್‌ವೈ
ಸುದ್ದಿ ಸಾಗರ

ಅನಂತ್‌ಕುಮಾರ್‌ ಹೆಗಡೆ ಅಲ್ಲ, ಯಾರಿಂದಲೂ ಸಂವಿಧಾನ ಬದಲಿಸಲು ಸಾಧ್ಯವಿಲ್ಲ: ಬಿಎಸ್‌ವೈ

‘ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು’ ಎಂಬಂತೆ ಸಂಸದ ಅನಂತ್‌ ಕುಮಾರ್‌ ಹೆಗಡೆ ಹೇಳಿಕೆ ಬಿಜೆಪಿಯನ್ನುಇವತ್ತಿಗೂ ಕಾಡುತ್ತಲೇ ಇದೆ.

samachara

samachara

“ಸಂವಿಧಾನ ಬದಲಿಸುತ್ತೇವೆ, ನಾವು ಬಂದಿರುವುದೇ ಸಂವಿಧಾನ ಬದಲಿಸಲು” ಎಂಬ ಸಂಸದ ಅನಂತ್‌ಕುಮಾರ್‌ ಹೆಗಡೆ ಹೇಳಿಕೆ ಬಿಜೆಪಿ ಪಾಲಿಗೆ ನಿತ್ಯದ ತಲೆನೋವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಕೂಡಾ ಹೆಗಡೆ ಹೇಳಿಕೆಯಿಂದ ಮುಜುಗರ ಅನುಭವಿಸಿದ ಘಟನೆ ಶನಿವಾರ ನಡೆದಿದೆ.

ಸಂವಿಧಾನ ವಿರೋಧಿ ಹಾಗೂ ದಲಿತ ವಿರೋಧಿ ಹೇಳಿಕೆಗಳಿಂದ ಪಕ್ಷಕ್ಕೆ ಮುಜುಗರ ತರುತ್ತಿದ್ದ ಅನಂತಕುಮಾರ್‌ ಹೆಗಡೆ ಸದ್ಯ ಸುದ್ದಿಯಲ್ಲಿಲ್ಲ. ಆದರೆ, ಚುನಾವಣೆಗೆ ದಿನಗಣನೆ ಶುರುವಾಗಿರುವ ಹೊತ್ತಿನಲ್ಲಿ ಪಕ್ಷದ ಮುಖಂಡರು ಜನರಿಂದ ದೂರ ಉಳಿಯುವುದು ಸಾಧ್ಯವಿಲ್ಲ.

ಶನಿವಾರ (ಏ.14) ಅಂಬೇಡ್ಕರ್‌ ಜಯಂತಿ ಹಿನ್ನೆಲೆಯಲ್ಲಿ ಯಡಿಯೂರಪ್ಪ ದಲಿತರ ಮನೆಗಳಿಗೆ ಭೇಟಿ ನೀಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಮೈಲನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಅವರು, ದಲಿತ ಕಾಲೋನಿಯಲ್ಲಿರುವ ಬಿಜೆಪಿ ಕಾರ್ಯಕರ್ತರೊಬ್ಬರ ಮನೆಯಲ್ಲಿ ತಿಂಡಿ ಮಾಡಿದರು.

ದಲಿತರ ಮನೆಯಲ್ಲಿ ಹೋಟೆಲ್‌ ಉಪ್ಪಿಟ್ಟು?

ಅಂಬೇಡ್ಕರ್‌ ಜಯಂತಿಯಂದು ದಲಿತರ ಮನೆಯಲ್ಲಿ ತಿಂಡಿ ತಿಂದು ದಲಿತರ ಮನವೊಲಿಸುವ ಯಡಿಯೂರಪ್ಪ ಪ್ರಯತ್ನ ಫಲ ಕೊಟ್ಟಿಲ್ಲ. ಹೋಟೆಲ್‌ನಿಂದ ತಂದಿದ್ದ ಉಪ್ಪಿಟ್ಟು ತಿಂದ ಯಡಿಯೂರಪ್ಪ ದಲಿತರ ಮನೆಯಲ್ಲಿ ಉಪಾಹಾರ ಸೇವನೆ ಮಾಡಿದ ನಾಟಕವಾಡಿದ್ದಾರೆ ಎನ್ನುವ ಮಾತುಗಳೂ ಕೇಳಿ ಬಂದಿವೆ.

‘ಅಂಬೇಡ್ಕರ್‌ಗೆ ಭಾರತ ರತ್ನ ಕೊಟ್ಟಿದ್ದು ನಾವು’

ಉಪಾಹಾರ ಪ್ರಹಸನದ ಬಳಿಕ ನೆಲಮಂಗಲದಲ್ಲಿ ಅಂಬೇಡ್ಕರ್‌ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಯಡಿಯೂರಪ್ಪ, ‘ಅಂಬೇಡ್ಕರ್‌ ಅವರಿಗೆ ಭಾರತ ರತ್ನ ಕೊಟ್ಟಿದ್ದು ನಮ್ಮ (ಬಿಜೆಪಿ) ಸರ್ಕಾರ. ಅಂಬೇಡ್ಕರ್ ಬಗ್ಗೆ ಸಂಸತ್ತಿನಲ್ಲಿ 2 ದಿನಗಳ ಕಾಲ ಪರಿಚಯ ಮಾಡುವ ಸಂಕಲ್ಪವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದರು’ ಎಂದರು.

ಯಡಿಯೂರಪ್ಪ ಮಾತಿನ ನಡುವೆ ಸಾರ್ವಜನಿಕರೊಬ್ಬರು, “ಸಂವಿಧಾನ ಬದಲಿಸಲೆಂದೇ ನಾವು ಅಧಿಕಾರಕ್ಕೆ ಬಂದಿರುವುದು ಎಂದಿದ್ದ ಸಂಸದ ಅನಂತ್‌ಕುಮಾರ್ ಹೆಗಡೆ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ?,” ಎಂದು ಪ್ರಶ್ನಿಸಿದರು.

‘ಸಂವಿಧಾನ ಬದಲಿಸಲು ಸಾಧ್ಯವಿಲ್ಲ’

ಈ ಪ್ರಶ್ನೆಯಿಂದ ಮುಜುಗರಕ್ಕೀಡಾದ ಯಡಿಯೂರಪ್ಪ, “ಅನಂತ್‌ಕುಮಾರ್‌ ಹೆಗಡೆ ಅಲ್ಲ, ಯಾರೇ ಆದರೂ ಸಂವಿಧಾನವನ್ನು ಬದಲಿಸಲು ಸಾಧ್ಯವಿಲ್ಲ. ನಮ್ಮ ಸಂವಿಧಾನವು ವಿಶ್ವದಲ್ಲೇ ಶ್ರೇಷ್ಠವಾದದ್ದು. ಅದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಅಲ್ಲದೇ ಆ ಹೇಳಿಕೆಯ ಬಗ್ಗೆ ಕ್ಷಮೆ ಕೇಳುವಂತೆ ಅವರಿಗೆ ಮೋದಿ ಸೂಚಿಸಿದ್ದಾರೆ. ಅದೇ ಪ್ರಕಾರ ಅನಂತ್‌ಕುಮಾರ್ ಹೆಗಡೆ ಕ್ಷಮೆಯನ್ನೂ ಯಾಚಿಸಿದ್ದಾರೆ” ಎಂದಿದ್ದಾರೆ.

ಅಮಿತ್ ಷಾ ಗೂ ದಿಕ್ಕಾರ

ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮುಂದೆಯೇ ದಲಿತ ಮುಖಂಡರು ಅನಂತ್‌ಕುಮಾರ್ ಹೆಗಡೆ ಹೇಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಬಿಜೆಪಿ ಮತ್ತು ಅಮಿತ್ ಶಾಗೆ ಧಿಕ್ಕಾರ ಕೂಗಿದ್ದರು.

ಅನಂತಕುಮಾರ್‌ ಹೆಗಡೆ ಸಂವಿಧಾನ ಬದಲಿಸುವ ಬಗ್ಗೆ, ದಲಿತ ಹೋರಾಟಗಾರರ ಬಗ್ಗೆ, ಜಾತ್ಯತೀತರ ಬಗ್ಗೆ ಆಡಿದ್ದ ಮಾತುಗಳನ್ನೂ ಪ್ರಸ್ತಾಪಿಸಿದ್ದ ದಲಿತ ಮುಖಂಡರು ಹೆಗಡೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದ್ದರು. ಆಗ ಅಮಿತ್ ಷಾ, “ಹೆಗಡೆ ಹೇಳಿಕೆಗೂ ಬೆಜಪಿಗೂ ಸಂಬಂಧವಿಲ್ಲ” ಎಂದು ಹೇಳಿದ್ದರು.

Also read: ‘ರೀಲ್’ ಸಂವಾದದಲ್ಲಿ ‘ರಿಯಲ್’ ಪ್ರಶ್ನೆಗಳು: ತಬ್ಬಿಬ್ಬಾದ ಶಾ ಮತ್ತು  ರೈಲ್ವೆ ಇಲಾಖೆ!

ಅನಂತ್ ಕುಮಾರ್ ಹೇಳಿದ್ದಿಷ್ಟು:

ಕೊಪ್ಪಳದ ಯಲಬುರ್ಗಾ ತಾಲೂಕಿನ ಕುಕನೂರಿನಲ್ಲಿ ನಡೆದಿದ್ದ ಬ್ರಾಹ್ಮಣ ಯುವ ಪರಿಷತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹೆಗಡೆ, “ಇವತ್ತೊಂದು ಹೊಸ ಸಂಪ್ರದಾಯ ಬಂದಿದೆ. ಜಾತ್ಯಾತೀತರು ಅಂತ. ನಾನೊಬ್ಬ ಮುಸ್ಲಿಂ, ಕ್ರೈಸ್ತ, ಲಿಂಗಾಯತ, ಬ್ರಾಹ್ಮಣ….ನಾನೊಬ್ಬ ಹಿಂದು ಎಂದು ಹೇಳಿದರೆ ನನಗೆ ನಿಜಕ್ಕೂ ಬಾರೀ ಖುಷಿಯಾಗುತ್ತದೆ. ಯಾಕಂದ್ರೆ ಅವನಿಗೆ ಅವನ ರಕ್ತದ ಪರಿಚಯವಿದೆ ಅಂತ ಅರ್ಥ” ಎಂದಿದ್ದರು.

“ಆದರೆ ಈ ಜಾತ್ಯಾತೀತರು ಎಂದು ಕರೆದುಕೊಳ್ಳುತ್ತಾರಲ್ಲ, ಅವರಿಗೆ ಯಾರು ಅಂತ ಕರೆಯಬೇಕು ಅಂತ ಗೊತ್ತಾಗುವುದಿಲ್ಲ. ಅಪ್ಪ ಅಮ್ಮನ ರಕ್ತದ ಗುರುತು ಇಲ್ಲದೇ ಇರುವಂತಹ ರಕ್ತವನ್ನು ಜಾತ್ಯತೀತರು ಅಂತ ಕರೆದುಕೊಳ್ಳುತ್ತಾರೆ ಇವರು. ತಮ್ಮ ಗುರುತೇ ತಮಗಿರುವುದಿಲ್ಲ ಅವರಿಗೆ. ಮಾತೆತ್ತಿದರೆ ದೊಡ್ಡ ವಿಚಾರವಾದಿಗಳು. ಜಾತ್ಯಾತೀತರು, ಅಪ್ಪ ಅಮ್ಮನ ಪರಿಚಯವಿಲ್ಲ ನನ್ ಮಕ್ಕಳಿಗೆ ಆದರೂ ದೊಡ್ಡ ವಿಚಾರವಾದಿಗಳಂತೆ. ದಯವಿಟ್ಟು ಇಲ್ಲಿ ಯಾರೂ ಕೂಡ ಜಾತ್ಯಾತೀತರು ಇಲ್ಲ ಅಂತ ನಾನು ಭಾವಿಸುತ್ತೇನೆ.”

“ನಿಮ್ಮ ಜಾತಿ ಜೊತೆ ಗುರುತಿಸಿಕೊಳ್ಳುತ್ತೀರೋ, ನಿಮ್ಮ ಕುಲದ ಜೊತೆ ಗುರುತಿಸಿಕೊಳ್ಳುತ್ತೀರೋ, ಗುರುತಿಸಿಕೊಳ್ಳಿ ಸ್ವಾಮಿ. ನಿಮಗೆ ನಿಮ್ಮ ರಕ್ತದ ಪರಿಚಯವಿದೆ. ನಿಮ್ಮ ಕಾಲುಮುಟ್ಟಿ ನಮಸ್ಕಾರ ಮಾಡ್ತೀನಿ. ಆದರೆ ಜಾತ್ಯಾತೀತರು ಎಂದು ಕರೆದರೆ ಮಾತ್ರ ಸ್ವಲ್ಪ ಸಂಶಯ ಬರುತ್ತದೆ ನೀವು ಯಾರು ಅಂತ? ಸಂವಿಧಾನ ಕಾಲಕ್ಕೆ ತಕ್ಕಂತೆ ಅದೆಷ್ಟೋ ಬಾರಿ ಬದಲಾಗಿದೆ. ಮುಂದಿನ ಬಾರಿಯೂ ಅದು ಬದಲಾಗುತ್ತೆ. ಆ ಸಂವಿಧಾನವನ್ನು ಬದಲಾಯಿಸುವುದಕ್ಕೋಸ್ಕರವೇ ನಾವಿರೋದು, ನಾವು ಬಂದಿರುವುದು, ಬದಲಾಯಿಸ್ತೀವಿ...,” ಎಂದು ಹೇಳಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು.

Also read: ಬುದ್ದಿಜೀವಿಗಳು ಗಂಜಿ ಗಿರಾಕಿಗಳು, ಮಾಧ್ಯಮ ಪ್ರೆಸ್ಟಿಟ್ಯೂಟ್ಸ್‌, ಸಂವಿಧಾನ- ಡೋಂಟ್‌ ಟಚ್‌!

ದೂರ ಸರಿದು ನಿಂತಿದ್ದ ಬಿಜೆಪಿ:

ಅನಂತ್ ಕುಮಾರ್ ಹೆಗಡೆ ನೀಡಿದ್ದ ಸಂವಿಧಾನ ಬದಲಾವಣೆಯ ಕುರಿತು ಯಾವೊಬ್ಬ ಬಿಜೆಪಿ ನಾಯಕನೂ ಸಮರ್ಥನೆಗೆ ಇಳಿಯಲಿಲ್ಲ. ಬಿಜೆಪಿಯು ತನಗೂ ಅನಂತ್ ಕುಮಾರ್ ಹೇಳಿಕೆಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ದೂರ ಸರಿದು ನಿಂತಿತ್ತು.

Also read: 'ಹೆಗಡೆ ಹೇಳಿಕೆ ವಿವಾದ': ಸಂಸತ್‌ನಲ್ಲಿ ಗದ್ದಲ; ಸಾಗರದಲ್ಲಿ ದೂರು ದಾಖಲು

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಹ, “ಕೇಂದ್ರ ಸರಕಾರವು ಅನಂತ್‌ಕುಮಾರ್ ಹೆಗಡೆ ಹೇಳಿಕೆಯನ್ನು ಬೆಂಬಲಿಸುವುದಿಲ್ಲ,” ಎಂದಿದ್ದರು. ಕರ್ನಾಟಕದ ಬಿಜೆಪಿ ಘಟಕ ಕೂಡ ಹೆಗಡೆ ಹೇಳಿಕೆಗೂ, ತನಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಅಂತರ ಕಾಯ್ದುಕೊಂಡಿತ್ತು. ಆದರೆ, ‘ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು’ ಎಂಬಂತೆ ಹೆಗಡೆ ಹೇಳಿಕೆ ಬಿಜೆಪಿಯನ್ನು ಕಾಡುತ್ತಲೇ ಇದೆ.

Also read: ‘ಬಾಟಲಿ ಹಳೇದೆ, ಕುಡಿಸಲು ಬಂದವರು ಹೊಸಬರು ಅಷ್ಟೆ’: ಸಂವಿಧಾನ ತಿದ್ದುಪಡಿ ಅಜೆಂಡಾ ಮತ್ತು ಮಾಧ್ಯಮಗಳ ಗಳಗಂಟ!