samachara
www.samachara.com
‘ಮಾನವ ಗುರಾಣಿ’ ಫಾರೂಕ್‌ ಅಹ್ಮದ್ ದಾರ್‌: ಸೇನೆಯ ನಿರ್ಧಾರ; ಬದುಕು ದುಸ್ಥರ 
ಸುದ್ದಿ ಸಾಗರ

‘ಮಾನವ ಗುರಾಣಿ’ ಫಾರೂಕ್‌ ಅಹ್ಮದ್ ದಾರ್‌: ಸೇನೆಯ ನಿರ್ಧಾರ; ಬದುಕು ದುಸ್ಥರ 

“ನನ್ನನ್ನು ಗ್ರಾಮದಿಂದಲೂ ಬಹಿಷ್ಕರಿಸಿದ್ದು, ಯಾರೂ ಕೂಡ ನನಗೆ ಸಹಾಯ ಮಾಡುತ್ತಿಲ್ಲ. ನನ್ನ ತಾಯಿ ಹೃದಯ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರ ಚಿಕಿತ್ಸೆಗೆ ಹಣ ಹೊಂದಿಸಲು ಆಗುತ್ತಿಲ್ಲ,” ಎಂದು ಫಾರೂಕ್ ಅಹ್ಮದ್ ದಾರ್ ಅಳಲು ತೋಡಿಕೊಂಡಿದ್ದಾರೆ.

samachara

samachara

ಸೋಮವಾರಕ್ಕೆ ಸರಿಯಾಗಿ ವರ್ಷದ ಹಿಂದೆ ಕಾಶ್ಮೀರದಲ್ಲಿ ಭಾರತೀಯ ಸೇನೆ ಸ್ವಯಂ ರಕ್ಷಣೆ ನೆಪ ಮುಂದಿಟ್ಟು ಜೀಪಿಗೆ ‘ಮಾನವ ಗುರಾಣಿ’ಯನ್ನು ಬಳಸಿತ್ತು.

ಸೇನಾ ಪಡೆಗಳ ಮೇಲೆ ವ್ಯಾಪಕ ಕಲ್ಲು ತೂರಾಟಗಳು ನಡೆಯುತ್ತಿದ್ದ ಸಮಯ ಅದು. ಮೇಜರ್ ಲೀತುಲ್ ಗೊಗೊಯ್ ಸೇನೆಯ ಜೀಪ್‌ಗೆ ಫಾರೂಕ್ ಅಹ್ಮದ್ ದಾರ್‌ ಸ್ಥಳೀಯಯೊರಬ್ಬರನ್ನು ಕಟ್ಟಿದ್ದ ಚಿತ್ರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಂಚಲ್ಪಟ್ಟಿದ್ದವು.

ವರ್ಷ ಕಳೆದ ಮೇಲೆ ಫಾರೂಕ್ ಅಹ್ಮದ್ ದಾರ್ ಪರಿಸ್ಥಿತಿ ಹೇಗಿದೆ? ನಾನಾ ಮಾಧ್ಯಮಗಳು ಈ ಕುರಿತಾದ ತಳಮಟ್ಟದ ವರದಿ ನೀಡಿವೆ.

ಅವುಗಳ ಮುಂದೆ ತಮ್ಮ ಸಂಕಷ್ಟವನ್ನು ತೋಡಿಕೊಂಡಿರುವ “ಭಾರತೀಯ ಸೇನೆ ನನ್ನನ್ನು ಮಾನವ ಗುರಾಣಿಯಾಗಿ ಬಳಸಿಕೊಂಡ ಬಳಿಕ ಸ್ಥಳೀಯರು ಯಾರೂ ಕೂಡ ನನಗೆ ಕೆಲಸ ನೀಡುತ್ತಿಲ್ಲ, ಕೆಲಸ ಮಾಡಲು ಕನಿಷ್ಟ ಪಕ್ಷ ದಿನಗೂಲಿಯೂ ಸಿಗುತ್ತಿಲ್ಲ,” ಎಂದು ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಚಿಲ್ ಗ್ರಾಮದ ನಿವಾಸಿಯಾಗಿರುವ ಫಾರೂಕ್ ತಿಳಿಸಿದ್ದಾರೆ.

ಫಾರೂಕ್‌ ಅಹ್ಮದ್ ದಾರ್ ನಿದ್ರಾಹೀನತೆ ಮತ್ತು ಖಿನ್ನತೆಯಿಂದ ಬಳಲುತ್ತಿದ್ದು, ಕನಿಷ್ಠ ತಮ್ಮ ಆರೋಗ್ಯದ ಚಿಕಿತ್ಸಾ ವೆಚ್ಚಕಾಗುವಷ್ಟೂ ದುಡಿಯಲೂ ಸಾಧ್ಯವಾಗುತ್ತಿಲ್ಲ. “ಕೊನೆಯ ಪಕ್ಷದಲ್ಲಿ ಮಲ ಎತ್ತುವ ಕೆಲಸವೂ ಅವರಿಗೆ ಸಿಗುತ್ತಿಲ್ಲ,” ಎಂದು 28 ವರ್ಷದ ಫಾರೂಕ್ ಅಹ್ಮದ್ ದಾರ್ ಹೇಳಿದ್ದಾರೆ.

“ಮನುಷ್ಯರನ್ನು ಗುರಾಣಿಯಾಗಿ ಬಳಸಲು ದೇಶದ ಯಾವ ಕಾನೂನು ಅವಕಾಶ ನೀಡುತ್ತದೆ. ಜೀಪಿನ ಮುಂಭಾಗಕ್ಕೆ ಕಟ್ಟಿ ಹಾಕಲು ನಾನು ಪ್ರಾಣಿಯೇ?” ಹೀಗೆಂದು ಆವತ್ತು ಪ್ರಶ್ನಿಸಿದ್ದರು ಫಾರೂಕ್ ಅಹ್ಮದ್ ದಾರ್. ಇವತ್ತು ಅವರ ಸ್ಥಿತಿ ಪ್ರಾಣಿಗಳಿಗಿಂತ ಕಡೆಯಾಗಿ ಹೋಗಿದೆ.

ಆವತ್ತು ನಡೆದದ್ದೇನು?:

ಆವತ್ತು 2017ರ ಏಪ್ರಿಲ್ 9. ಮೇಜರ್ ಲೀತುಲ್ ಗೊಗೊಯ್ ನೇತೃತ್ವದ ತಂಡವು ಫಾರೂಕ್ ಅಹ್ಮದ್ ದಾರ್ ಎನ್ನುವ ಯುವಕನನ್ನು ಕೇಂದ್ರ ಕಾಶ್ಮೀರದ ಬಡ್ಗಮ್ ಜಿಲ್ಲೆಯಲ್ಲಿ ಕಲ್ಲೆಸೆಯುವವರಿಂದ ರಕ್ಷಣೆ ಪಡೆಯುವ ಸಲುವಾಗಿ ಸೇನೆಯ ಜೀಪಿಗೆ ಕಟ್ಟಿ ಮಾನವ ಗುರಾಣಿಯಾಗಿ ಬಳಸಿಕೊಂಡಿದ್ದರು.

ಅಂದು ಶ್ರೀನಗರದಲ್ಲಿ ಲೋಕಸಭಾ ಚುನಾವಣೆ ನಡೆದಿತ್ತು. ಫಾರೂಕ್‌ ಅಹ್ಮದ್ ದಾರ್ ಮತ ಚಲಾಯಿಸಲು ಹೋಗಿದ್ದರು. ಪ್ರತ್ಯೇಕತಾವಾದಿಗಳು ಮತದಾನ ಬಹಿಷ್ಕರಿಸಿದ್ದರು. ಆದರೆ ಮತದಾನ ಮುಗಿಸಿ ಬರುವಾಗ ಸೇನೆಯು ಫಾರೂಕ್ ದಾರ್‌ನನ್ನು ಕಲ್ಲು ತೂರಾಟಗಾರರ ನಾಯಕ ಎಂದೇ ಆರೋಪ ಮಾಡಿತ್ತು.

“ವ್ಯಕ್ತಿಯೊಬ್ಬ ಕಲ್ಲು ತೂರಾಟಗಾರರಿಗೆ ಉತ್ತೇಜಿಸುತ್ತಿದ್ದ. ಅಲ್ಲಿದ್ದ ಪೊಲೀಸರು ಮತ್ತು ಜನರನ್ನು ರಕ್ಷಿಸಲೆಂದು ನಾನು ಧ್ವನಿವರ್ಧಕದಲ್ಲಿ ಎಚ್ಚರಿಕೆ ಕೊಟ್ಟೆ. ಆದರೂ, ಪ್ರತಿಭಟನಾಕಾರರು ಮಣಿಯಲಿಲ್ಲ. ಆಗ ಸ್ಥಳೀಯರು, ಅರೆಸೇನಾ ಪಡೆಯ ಸಿಬ್ಬಂದಿ ಹಾಗೂ ಮತಗಟ್ಟೆ ಸಿಬ್ಬಂದಿಯನ್ನು ರಕ್ಷಿಸುವುದೊಂದೇ ನನ್ನ ಗುರಿಯಾಗಿತ್ತು. ಹೀಗಾಗಿ ಆಗ ಫಾರೂಕ್‌ ಅಹ್ಮದ್ ದಾರ್‌ನನ್ನು ಜೀಪಿಗೆ ಕಟ್ಟುವ ಯೋಚನೆ ಹೊಳೆಯಿತು. ಕೂಡಲೇ ಆತನನ್ನು ಹಿಡಿದು ಜೀಪಿಗೆ ಕಟ್ಟಿದೆವು. ನಂತರ ಕಲ್ಲುತೂರಾಟಗಾರರು ಸುಮ್ಮನಾದರು. ನನ್ನ ಕ್ರಮದಿಂದಾಗಿ 12ಕ್ಕೂ ಹೆಚ್ಚು ಮಂದಿಯ ಜೀವ ಉಳಿಯಿತು,” ಎಂದಿದ್ದರು ಮೇಜರ್‌ ಲೀತುಲ್ ಗೊಗೋಯ್‌.

ಘಟನೆ ಖಂಡಿಸಿ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಕಾಶ್ಮೀರ ಮಾನವ ಹಕ್ಕು ಆಯೋಗದ ಸಮಿತಿ ತೀರ್ಪು ನೀಡಿತ್ತು.

“ಮನುಷ್ಯರಾಗಿ ಇಂತಹ ಹೀನ ಕೃತ್ಯಗಳನ್ನು ಸಹಿಸಲಸಾಧ್ಯ. ದೇಶದಲ್ಲಿ ಶಾಂತಿ ಸುವ್ಯವಸ್ಥೆ ರಕ್ಷಣೆಗೆ ಹಲವು ಕಾನೂನುಗಳಿವೆ. ನಾಗರಿಕ ಸಮಾಜದಲ್ಲಿ ಆರೋಪಿಯನ್ನು ಹೀಗೆ ಹೀನಾಯವಾಗಿ ನಡೆಸಿಕೊಳ್ಳುವುದು ಸರಿಯಲ್ಲ,” ಎಂದು ಮಾನವ ಹಕ್ಕು ಆಯೋಗದ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಬಿಲಾಲ್ ನಜ್ಕಿ ಹೇಳಿದ್ದರು.

ಆದರೆ, ಫಾರೂಕ್ ಅಹ್ಮದ್ ದಾರ್‌ಗೆ 10 ಲಕ್ಷ ಪರಿಹಾರ ನೀಡಲು ಪಿಡಿಪಿ-ಬಿಜೆಪಿ ಸರಕಾರವು ತಿರಸ್ಕರಿಸಿತ್ತು. ಅಷ್ಟು ಮೊತ್ತದ ಪರಿಹಾರ ನೀಡಬೇಕು ಎನ್ನುವ ಯಾವುದೇ ನಿಯಮಗಳು ಇಲ್ಲ ಎಂದು ಸರಕಾರವು ಹೇಳಿತ್ತು.

ಆದರೆ ‘ಇಂಟರ್ನ್ಯಾಷನಲ್ ಫೋರಮ್ ಫಾರ್ ಜಸ್ಟಿಸ್ ಅಂಡ್ ಹ್ಯೂಮನ್ ರೈಟ್ಸ್’ ಮುಖ್ಯಸ್ಥ ಮೊಹಮ್ಮದ್ ಆಸನ್ ಅಂಟೂ, ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಫಾರೂಕ್ ಅಹ್ಮದ್ ದಾರ್‌ಗೆ ಪರಿಹಾರ ರೂಪದಲ್ಲಿ ಹಣ ನೀಡದಿರುವ ಕುರಿತು ಪರಾಮರ್ಶೆ ಅರ್ಜಿ ಸಲ್ಲಿಸಿದ್ದಾರೆ.

“ಕೆಲವು ಸಂಘಟನೆಗಳ ಮತ ಬಹಿಷ್ಕಾರದ ಹೊರತಾಗಿಯೂ ಮತದಾನದ ಹಕ್ಕು ಚಲಾಯಿಸಲು ಹೋಗಿದ್ದೆ. ಆದರೆ ನನ್ನನ್ನು ಸೇನಾಧಿಕಾರಿಗಳು ಕಲ್ಲು ತೂರಾಟಗಾರ ಎಂದು ಆರೋಪಿಸಿ, ಬಂಧಿಸಿ ತಮ್ಮ ಕಾರಿಗೆ ಗುರಾಣಿಯಾಗಿ ಕಟ್ಟಿದರು. ಘಟನೆ ಬಳಿಕ ನನ್ನ ಜೀವನವೇ ನರಕವಾಗಿ ಮಾರ್ಪಟ್ಟಿದೆ,” ಎನ್ನುತ್ತಾರೆ ಫಾರೂಕ್.

ಅಲ್ಲದೇ, “ನನಗೆ ನಿದ್ರೆ ಮಾಡಲು ಆಗುತ್ತಿಲ್ಲ. ನನ್ನನ್ನು ಗ್ರಾಮದಿಂದಲೂ ಬಹಿಷ್ಕರಿಸಿದ್ದು, ಯಾರೂ ಕೂಡ ನನಗೆ ಸಹಾಯ ಮಾಡುತ್ತಿಲ್ಲ. ನನ್ನ ತಾಯಿ ಫಿಜಾ ಬೇಗಮ್ ಹೃದಯ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರ ಚಿಕಿತ್ಸೆಗೆ ಹಣ ಹೊಂದಿಸಲು ಆಗುತ್ತಿಲ್ಲ,” ಎಂದು ಫಾರೂಕ್ ಅಹ್ಮದ್ ದಾರ್ ಅಳಲು ತೋಡಿಕೊಂಡಿದ್ದಾರೆ.