samachara
www.samachara.com
‘ಪುತ್ರ ಕಂಟಕ’: ಇನ್‌ಸೈಡ್‌ ಸ್ಟೋರಿ ಆಫ್‌ ಬಿಎಸ್‌ವೈ ಬ್ರೇಕಿಂಗ್ ನ್ಯೂಸ್‌!
ಸುದ್ದಿ ಸಾಗರ

‘ಪುತ್ರ ಕಂಟಕ’: ಇನ್‌ಸೈಡ್‌ ಸ್ಟೋರಿ ಆಫ್‌ ಬಿಎಸ್‌ವೈ ಬ್ರೇಕಿಂಗ್ ನ್ಯೂಸ್‌!

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಟ್ವಿಟ್ಟರ್‌ನಲ್ಲಿ ‘ಬ್ರೇಕಿಂಗ್‌ ನ್ಯೂಸ್‌’ ಕೊಡಲು ಹೋಗಿ ನಗೆಪಾಟಲಿಗೆ ಈಡಾಗಿದ್ದರು. ಏನೋ ದೊಡ್ಡ ವಿಷಯ ಸ್ಫೋಟವಾಗಲಿದೆ ಅಂದುಕೊಂಡವರಿಗೆ ಕೊನೆಗೆ ಸಿಕ್ಕಿದ್ದು ಒಣ ಭಾಷಣ. ಅದರ ಹಿಂದಿನ ಕಹಾನಿ ಇಲ್ಲಿದೆ. 

ಉಗಾದಿಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದವರು ರಾಜಕಾರಣಿ, ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ.

ಶುಕ್ರವಾರ ಸಂಜೆ ಐದು ಗಂಟೆಗೆ ‘ಬ್ರೇಕಿಂಗ್ ನ್ಯೂಸ್’ ಕೊಡುತ್ತೇನೆ ಎಂದು ಗುರುವಾರ ಟ್ವೀಟ್ ಮಾಡುವ ಮೂಲಕ ಅಂತರ್ಜಾಲ ಮಾತ್ರವಲ್ಲ, ಹೊರ ಪ್ರಪಂಚದಲ್ಲೂ ಗಮನ ಸೆಳೆದವರು ಬಿಎಸ್‌ವೈ.

ಈ ಬೆಳವಣಿಗೆ ಮುಖ್ಯವಾಹಿನಿಯ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳ ಬಳಕೆದಾರರು ಶುಕ್ರವಾರ ಸಂಜೆವರೆಗೂ ಬಿಎಸ್‌ವೈ ಬ್ರೇಕಿಂಗ್ ನ್ಯೂಸ್‌ಗಾಗಿ ಕಾದು ಕೂರುವಂತೆ ಮಾಡಿತ್ತು. ರಾಜಕೀಯ ಸಂಚಲನದ ನಿರೀಕ್ಷೆ ಹುಟ್ಟುಹಾಕಿತ್ತು.

ನಂತರ ನಡೆದಿದ್ದು ಇತಿಹಾಸ. ಉಗಾದಿ ರಜೆ ಮೂಡ್‌ಗೆ ತೆರಳುತ್ತಿದ್ದ ಜನವರ್ಗಕ್ಕೆ ಬಿಎಸ್‌ವೈ ನೀಡಿದ್ದು ‘ಬ್ರೇಕಿಂಗ್ ನ್ಯೂಸ್’ ಅಲ್ಲ; ಬದಲಿಗೆ ಭರಪೂರ ಮನೋರಂಜನೆ.

Also read: ಬ್ರೇಕಿಂಗ್‌ ನ್ಯೂಸ್‌; ಸಾಮಾಜಿಕ ಜಾಲತಾಣಗಳಲ್ಲಿ ಬಿಎಸ್‌ವೈ ‘ಸಂತಾ-ಬಂತಾ’!

ಬಿಎಸ್‌ವೈಯಂತಹ ಹಿರಿಯ ನಾಯಕರು ಯಾಕೆ ಸಾಮಾಜಿಕ ಜಾಲತಾಣಗಳಲ್ಲಿ, ಅದೂ ಚುನಾವಣೆ ಹೊಸ್ತಿಲಲ್ಲಿ ಇರುವಾಗ ಇಂತಹದೊಂದು ಯಡವಟ್ಟು ಮಾಡಿಕೊಂಡರು? ಅವರಿಗೆ ಇಂತಹದೊಂದು ‘ಟುಸ್‌ ಪಟಾಕಿ ಐಡಿಯಾ’ ಕೊಟ್ಟವರು ಯಾರು? ಉಳಿದವರಿಗಿಂತ ಮೊದಲು ‘ಐಟಿ ಪ್ರಾಬಲ್ಯ’ ಮೆರೆದ ಬಿಜೆಪಿ ಪಕ್ಷ ರಾಜ್ಯಾಧ್ಯಕ್ಷರು ಹೇಗೆ ಯಾಮಾರಿದರು?

ಶುಕ್ರವಾರದ ‘ಬ್ರೇಕಿಂಗ್ ನ್ಯೂಸ್’ ಪ್ರಹಸನದ ಬೆನ್ನಲೇ ಇಂತಹ ಹಲವು ಪ್ರಶ್ನೆಗಳು ಹುಟ್ಟಿಕೊಂಡವು. ಅವುಗಳಿಗೆ ಉತ್ತರವನ್ನು ‘ಸಮಾಚಾರ’ ಇಲ್ಲಿ ನೀಡುತ್ತಿದೆ. ಇದು ಇನ್‌ಸೈಡ್ ಸ್ಟೋರಿ ಆಫ್‌ ಬಿಎಸ್‌ವೈ ಬ್ರೇಕಿಂಗ್ ನ್ಯೂಸ್‌.

ತೆರೆ ಹಿಂದಿನ ಕತೆ:

ಇತ್ತೀಚೆಗಷ್ಟೇ ಯಡಿಯೂರಪ್ಪ ಎರಡನೇ ಪುತ್ರ ವಿಜಯೇಂದ್ರ ಚುನಾವಣಾ ಪ್ರಚಾರಕ್ಕೆ ಕಾಲಿಟ್ಟಿದ್ದಾರೆ. ಇಷ್ಟು ದಿನಗಳ ಕಾಲ ಯಡಿಯೂರಪ್ಪ ಟ್ವಿಟರ್‌ ಖಾತೆಯನ್ನು ನೋಡಿಕೊಳ್ಳುತ್ತಿದ್ದವರನ್ನು ಹಠಾತ್ತನೆ ವಿಜಯೇಂದ್ರ ಬದಲಿಸಿದ್ದಾರೆ ಎನ್ನುತ್ತವೆ ಬಿಜೆಪಿ ಪಕ್ಷದ ಮೂಲಗಳು. ಕೇವಲ ಬದಲಿಸಿದ್ದಷ್ಟೇ ಅಲ್ಲ, ಇಡೀ ಸಾಮಾಜಿಕ ಜಾಲತಾಣದ ಜವಾಬ್ದಾರಿಯನ್ನು ಒತ್ತಾಯಪೂರ್ವಕವಾಗಿ ವಿಜಯೇಂದ್ರ ಹೊತ್ತುಕೊಂಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗುವ ಮೂಲಕ ಇತ್ತೀಚೆಗೆ ಹೆಚ್ಚು ಜನರನ್ನು ತಲುಪುತ್ತಿದ್ದಾರೆ. ಆದರೆ ಯಡಿಯೂರಪ್ಪ ಅವರ ಖಾತೆಗಳು ಜನರನ್ನು ತಲುಪುತ್ತಿಲ್ಲ ಎಂಬ ಕಾರಣವೊಡ್ಡಿ ಐಟಿ ಸೆಲ್‌ ಹೊಣೆಯನ್ನು ವಿಜಯೇಂದ್ರ ತಮ್ಮ ತೆಕ್ಕೆಗೆ ಪಡೆದುಕೊಂಡಿದ್ದಾರೆ.

ಪಕ್ಷದ ಉನ್ನತ ಮೂಲಗಳು ತಿಳಿಸುವ ಪ್ರಕಾರ, ಖುದ್ದು ಯಡಿಯೂರಪ್ಪ ಅವರಿಗೂ ತಮ್ಮ ಖಾತೆಯಿಂದ ‘ಬ್ರೇಕಿಂಗ್‌ ನ್ಯೂಸ್‌’ ಕೊಡುತ್ತೀನಿ ಎಂಬ ಟ್ವೀಟ್‌ ಆಗಲಿದೆ ಎಂಬುದು ಗೊತ್ತಿರಲಿಲ್ಲ.

“ಯಡಿಯೂರಪ್ಪ ಅವರ ಗಮನಕ್ಕೇ ತರದೇ ಆ ರೀತಿಯ ಟ್ವೀಟ್‌ ಹಾಕಲಾಗಿದೆ. ಅವರಿಗೆ ಮಾತ್ರವಲ್ಲ, ಪಕ್ಷದ ಯಾರಿಗೂ ತಿಳಿದಿರಲಿಲ್ಲ. ಹೆಚ್ಚು ಜನರನ್ನು ಸೆಳೆಯಲು ಮತ್ತು ಸಂಚಲನ ಮೂಡಿಸಲು ವಿಜಯೇಂದ್ರ ಈ ಕೆಲಸ ಮಾಡಿದ್ದಾರೆ. ನಂತರ ಹಾಕಿರುವ ಟ್ವೀಟನ್ನು ಡಿಲೀಟ್‌ ಮಾಡಿದರೆ ತಪ್ಪು ಅಭಿಪ್ರಾಯ ಮೂಡುತ್ತದೆ ಎಂಬ ಕಾರಣಕ್ಕೆ ಟ್ವೀಟನ್ನು ಡಿಲೀಟ್‌ ಮಾಡಿಲ್ಲ. ಆ ನಂತರ ನಿಮಗೇ ತಿಳಿದಿದೆ, ಸಾಮಾಜಿಕ ಜಾಲತಾಣದಲ್ಲಿ ಯಡಿಯೂರಪ್ಪ ಅವರ ಕಾಲನ್ನು ಸಾಮೂಹಿಕವಾಗಿ ಎಳೆಯಲಾಯಿತು,” ಎಂದು ಬೇಸರದಿಂದ ಹೇಳುತ್ತಾರೆ ಯಡಿಯೂರಪ್ಪ ಆಪ್ತರೊಬ್ಬರು.

ಬಿಜೆಪಿ ಕಾನೂನು ಘಟಕದ ವಕೀಲರೊಬ್ಬರು ಹೇಳುವ ಪ್ರಕಾರ, ಘಟನೆಯನ್ನು ಹೈಕಮಾಂಡ್‌ ಗಂಭೀರವಾಗಿ ಪರಿಗಣಿಸಿದೆ. “ಯಾರಾದರೂ ಒಬ್ಬ ವ್ಯಕ್ತಿಯ ಖಾತೆಯಲ್ಲಿ ಅನುಮತಿ ಪಡೆಯದೇ ಟ್ವೀಟ್‌ ಮಾಡುತ್ತಾರ? ಖಾತೆ ತಂದೆಯದೇ ಆಗಲಿ ಅಥವಾ ಇನ್ಯಾರದೇ ಆಗಲಿ. ಜತೆಗೆ ಬ್ರೇಕಿಂಗ್‌ ನ್ಯೂಸ್‌ ಕೊಡುವಂಥ ವಿಚಾರವಾದರೂ ಇರಬೇಕು. ಇದಕ್ಕಾಗಿಯೇ ಹೈಕಮಾಂಡ್‌ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಪಕ್ಷದ ಕರ್ನಾಟಕ ಬಿಜೆಪಿಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ಯಡಿಯೂರಪ್ಪ ಅವರಿಗೆ ಕರೆ ಮಾಡಿ ಈ ಬಗ್ಗೆ ಉತ್ತರಿಸುವಂತೆ ಕೇಳಿದ್ದಾರೆ,” ಎನ್ನುತ್ತಾರೆ.

ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ತೀವ್ರ ಗೊಂದಲ ಸೃಷ್ಟಿಸಿತ್ತು. ಬಿಜೆಪಿ ನಿಯಮದ ಪ್ರಕಾರ 75 ವರ್ಷ ಮೇಲ್ಪಟ್ಟವರನ್ನು ಮುಖ್ಯಮಂತ್ರಿ ಅಥವಾ ಪ್ರಧಾನ ಮಂತ್ರಿ ಹುದ್ದೆಗೇರಿಸುವುದಿಲ್ಲ. ಅವರನ್ನು ಸಲಹಾ ಸಮಿತಿಗೆ ನೇಮಕ ಮಾಡಲಾಗುತ್ತದೆ.

ಆದರೆ ಈ ಬಾರಿ ಸೂಕ್ತ ನಾಯಕತ್ವದ ಕೊರತೆಯ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರೇ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. “ದೇವರು ಕೊಟ್ಟರೂ, ಪೂಜಾರಿ ಕೊಡಲಿಲ್ಲ,” ಎಂಬ ಗಾದೆಯಂತೆ, ಮಕ್ಕಳ ಕೆಲಸದಿಂದ ಯಡಿಯೂರಪ್ಪ ಕಾಲಿನ ಮೇಲೆ ಕಲ್ಲು ಹಾಕಿಕೊಳ್ಳಲಿದ್ದಾರಾ ಎಂಬ ಪ್ರಶ್ನೆಯೂ ಬಿಜೆಪಿ ಆಪ್ತ ವಲಯದಲ್ಲಿ ಚರ್ಚೆಗೆ ಬಂದಿದೆ. ಈ ಹಿಂದೆ ಚೆಕ್‌ ಮೂಲಕ ತಮ್ಮ ಒಡೆತನದ ಪ್ರೇರಣಾ ಟ್ರಸ್ಟ್‌ಗೆ ದೇಣಿಗೆ ಪಡೆದು ಜೈಲು ಪಾಲಾದವರು ಬಿಎಸ್‌ವೈ. ಆ ಬೆಳವಣಿಗೆ ಹಿಂದೆಯೂ ಇದ್ದವರು ಯಡಿಯೂರಪ್ಪ ಪುತ್ರರೇ ಎಂಬ ಸುದ್ದಿ ಹರಡಿದತ್ತು.

ಪ್ರಕಾಶ್‌ ಜಾವಡೇಕರ್‌ ಯಡಿಯೂರಪ್ಪ ಅವರಿಗೆ ಮಕ್ಕಳನ್ನು ನಿಯಂತ್ರಿಸುವಂತೆ ಎಚ್ಚರಿಸಿದ್ದಾರೆ. ಚುನಾವಣೆ ಹತ್ತಿರವಾಗುತ್ತಿರುವ ದಿನಗಳಲ್ಲಿ ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡಬೇಕು ಎಂದು ಕಿವಿಮಾತು ಹೇಳಿದ್ದಾರೆ. ಜತೆಗೆ ವಿಜಯೇಂದ್ರ ಅವರನ್ನು ಸಾಮಾಜಿಕ ಜಾಲತಾಣದ ಜವಾಬ್ದಾರಿಯಿಂದ ಕೈ ಬಿಡುವಂತೆ ತಿಳಿಸಿದ್ದಾರೆ.

“ಮೊದಲೇ ಪಕ್ಷದಲ್ಲಿ ಯಡಿಯೂರಪ್ಪ ಅವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಿರುವುದು ಬಿನ್ನಾಭಿಪ್ರಾಯಗಳನ್ನು ಸೃಷ್ಟಿಸಿದೆ. ಪಕ್ಷದೊಳಗೆ ಹಲವು ಶತ್ರುಗಳಿದ್ದಾರೆ. ಅವಕಾಶ ಸಿಕ್ಕರೆ ರಾಜಕೀಯ ಜೀವನವನ್ನು ಮುಗಿಸಿಬಿಡಲು ಹೊಂಚುಹಾಕುತ್ತಿದ್ದಾರೆ. ಇನ್ನೊಮ್ಮೆ ಮಕ್ಕಳು ಮಾಡುವ ತಪ್ಪಿನಿಂದ ಯಡಿಯೂರಪ್ಪ ತೊಂದರೆ ಅನುಭವಿಸಿದರೂ ಆಶ್ಚರ್ಯವಿಲ್ಲ”
ಬಿಜೆಪಿ ಕಾನೂನು ವಿಭಾಗದ ಸದಸ್ಯರು

ಕಾಂಗ್ರೆಸ್ ಮುಖಂಡ ವೀರಪ್ಪ ಮೊಯಿಲಿ ಮತ್ತು ಅವರ ಮಗ ಹರ್ಷ ಮೊಯಿಲಿ ಅವರ ಟ್ವಿಟರ್‌ ಖಾತೆಗಳಿಂದ ಟ್ವೀಟ್‌ ಆಗಿದ್ದ ಕಾಂಗ್ರೆಸ್‌ನಲ್ಲಿನ ಟಿಕೆಟ್‌ ಹಂಚಿಕೆ ಕುರಿತ ಅಸಮಾಧಾನಕ್ಕೂ, ಬಿಎಸ್‌ವೈ ಬ್ರೇಕಿಂಗ್‌ ನ್ಯೂಸ್‌ಗೂ ಸಂಬಂಧವಿರಬಹುದು ಎಂಬ ಮಾತುಗಳು ಪತ್ರಕರ್ತರಲ್ಲಿ ಹರಿದಾಡಿದ್ದವು. ವೀರಪ್ಪ ಮೊಯಿಲಿ ಅವರ ಟ್ವೀಟ್‌ ಅನ್ನು ರೀಟ್ವೀಟ್‌ ಮಾಡಿದ್ದ ಬಿಎಸ್‌ವೈ, ‘ಕಾಂಗ್ರೆಸ್‌ ಒಳಗಿರುವವರು ಈಗಲಾದರೂ ಸತ್ಯ ಹೊರಹಾಕುತ್ತಿದ್ದಾರೆ. ಮೊಯಿಲಿ ಸತ್ಯ ಮಾತಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರದ್ದು ಕಾಂಟ್ರಾಕ್ಟರ್‌ಗಳಿಂದ 10 ಪರ್ಸೆಂಟ್‌ ಕಮಿಷನ್‌ ಪಡೆಯುವ ಸರಕಾರ ಎಂಬುದನ್ನು ಆ ಪಕ್ಷದ ಒಳಗಿನವರೇ ಹೇಳಿದ್ದಾರೆ’ ಎಂದು ಬರೆದಿದ್ದರು.

ಗುರುವಾರ ಬೆಳಿಗ್ಗೆ ಸದ್ದು ಮಾಡಿದ್ದ ಮೊಯಿಲಿ ಟ್ವೀಟ್‌ ಸುದ್ದಿ ಅಷ್ಟೇ ಬೇಗ ತಣ್ಣಗೂ ಆಯಿತು. ಈ ಸುದ್ದಿ ರಾಜಕೀಯವಾಗಿ ತಲ್ಲಣ ಉಂಟುಮಾಡುತ್ತದೆ ಎಂಬ ನಿರೀಕ್ಷೆಯ ಬೆನ್ನಲ್ಲೇ ವೀರಪ್ಪ ಮೊಯಿಲಿ ಮತ್ತು ಹರ್ಷ ಮೊಯಿಲಿ ಇಬ್ಬರ ಟ್ವಿಟರ್‌ ಖಾತೆಗಳಿಂದಲೂ ಈ ಟ್ವೀಟ್‌ ಡಿಲೀಟ್‌ ಆಗಿತ್ತು. ಅಲ್ಲದೆ ವೀರಪ್ಪ ಮೊಯಿಲಿ ತಮ್ಮ ಖಾತೆ ಹ್ಯಾಕ್‌ ಆಗಿದೆ, ನಾನು ಹಾಗೆ ಟ್ವೀಟ್‌ ಮಾಡಿಲ್ಲ ಎಂದು ಹೇಳಿಕೆಯನ್ನೂ ನೀಡಿದ್ದರು. ಅಲ್ಲದೆ ಟ್ವೀಟ್‌ ಸುದ್ದಿ ತಣ್ಣಗಾಗಿತ್ತು.

ಮೊಯಿಲಿ ಟ್ವೀಟ್‌ ಸುದ್ದಿ ತಣ್ಣಗಾಗುತ್ತಿದ್ದಂತೆ ಬಿಎಸ್‌ವೈ ಘೋಷಿಸಿದ್ದ ‘ಬ್ರೇಕಿಂಗ್‌ ನ್ಯೂಸ್‌’ ಮೇಲೆ ಮತ್ತೆ ಮಾಧ್ಯಮಗಳ ನಿರೀಕ್ಷೆ ಹೆಚ್ಚಾಗಿತ್ತು. ಬಿಎಸ್‌ವೈ ಸಂಜೆ 5 ಗಂಟೆಗೆ ಏನು ಬ್ರೇಕ್‌ ಮಾಡಲಿದ್ದಾರೆ ಎಂದು ಕಾತರಿಸುತ್ತಿದ್ದವರಿಗೆ ಕೊನೆಗೆ ಸಿಕ್ಕಿದ್ದು ಬಿಎಸ್‌ವೈ ಫೇಸ್‌ಬುಕ್‌ ಮತ್ತು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ರಾಜ್ಯ ಸರಕಾರದ ವೈಫಲ್ಯಗಳ ಹಳೆಯ ಪ್ರವರ.

‘ಸಮಾಚಾರ’ಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಐಟಿ ಸೆಲ್‌ನ ಸದಸ್ಯ ಯಶಸ್‌, “@BSYeddyurappa ಖಾತೆಯನ್ನು ನಮ್ಮ ತಂಡ ನಿರ್ವಹಣೆ ಮಾಡುವುದಿಲ್ಲ. ರಾಜನೀತಿ ಎಂಬ ತಂಡವೊಂದು ಅದನ್ನು ನೋಡಿಕೊಳ್ಳುತ್ತದೆ. ಬ್ರೇಕಿಂಗ್‌ ನ್ಯೂಸ್‌ ಟ್ವೀಟ್‌ ಬಗ್ಗೆ ನಮಗೂ ಮಾಹಿತಿ ಇಲ್ಲ,” ಎಂದರು.

ಪ್ರತಿಕ್ರಿಯೆಗಾಗಿ ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ಮತ್ತು ಬಿ. ವೈ. ರಾಘವೇಂದ್ರರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತಾದರು ಸಾಧ್ಯವಾಗಲಿಲ್ಲ.

ಬದಲಾದ ಕಾಲ:

ಚುನಾವಣೆಯ ಪ್ರಚಾರ ತಂತ್ರಗಳು ಬದಲಾದ ಇಂದಿನ ದಿನಗಳಲ್ಲಿ ರಾಜಕಾರಣಿಗಳು ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದಾರೆ. ಯುವ ರಾಜಕಾರಣಿಗಳು ಮಾತ್ರವಲ್ಲ, ಹಿರಿಯ ನಾಯಕರು ಕೂಡ ಟ್ವಿಟ್ಟರ್‌ ಮತ್ತು ಫೇಸ್‌ಬುಕ್‌ ಹಿಂದೆ ಬಿದ್ದಿದ್ದಾರೆ. ಈ ಕಾರಣಕ್ಕಾಗಿಯೇ ಪ್ರತ್ಯೇಕ ತಂತ್ರಜ್ಞಾನ ಸ್ನೇಹಿ ಯುವಕರ ತಂಡವನ್ನು ಕಟ್ಟಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಾದ ಬಿ. ಎಸ್‌. ಯಡಿಯೂರಪ್ಪ, ಕುಮಾರಸ್ವಾಮಿ ಆದಿಯಾಗಿ ಹಲವು ಹಿರಿಯ ನಾಯಕರು ತಮ್ಮದೇ ಆದ ‘ಐಟಿ ಸೆಲ್‌’ಗಳನ್ನು ಹೊಂದಿದ್ದಾರೆ.

ನಾಯಕರ ಪ್ರತಿ ಟ್ವೀಟ್‌ ಕೂಡ ಸುದ್ದಿಯಾಗುತ್ತಿದೆ. ರಾಜಕೀಯ ಲೆಕ್ಕಾಚಾರಗಳಿಗೆ ಅನುವು ಮಾಡಿಕೊಡುತ್ತಿದೆ. ಅಂತಹ ಸಮಯದಲ್ಲಿ ಕೊಂಚ ಯಾಮಾರಿದರೂ ಏನಾಗಬಹುದು ಎಂಬುದಕ್ಕೆ ಈಗ ಬಿಎಸ್‌ವೈ ಟ್ವೀಟ್ ಮಾದರಿಯಾಗಿದೆ.