ಅಧುನಿಕ ವ್ಯವಸ್ಥೆಗಳ ಮಧ್ಯೆಯೇ ಕೈಚಳಕ ತೋರಿಸಿದ ಅಧಿಕಾರಿಗಳು
ಸುದ್ದಿ ಸಾಗರ

ಅಧುನಿಕ ವ್ಯವಸ್ಥೆಗಳ ಮಧ್ಯೆಯೇ ಕೈಚಳಕ ತೋರಿಸಿದ ಅಧಿಕಾರಿಗಳು

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣದಲ್ಲಿ ನೀರವ್‌ ಮೋದಿಗೆ ಸಹಕರಿಸಿರುವುದು ಅದೇ ಬ್ಯಾಂಕ್‌ನ ಅಧಿಕಾರಿಗಳು.  ವಂಚನೆಯಲ್ಲಿ ಅವರ ಪಾತ್ರವೇನು? ತಿಳಿಯಲು ಮುಂದೆ ಓದಿ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಮುಂಬೈನಲ್ಲಿರುವ ಬ್ರಾಡಿ ಹೌಸ್‌ ಶಾಖೆಯಲ್ಲಿ 11,300 ಕೋಟಿ ರೂ ಮೌಲ್ಯದ  ಮೋಸದ ವಹಿವಾಟು ನಡೆದಿರುವ ಸಂಗತಿ, ಈಗ ದೇಶದ ಇತರೆ ಬ್ಯಾಂಕ್‌ಗಳು ತಮ್ಮ ದಾಖಲೆಗಳನ್ನು ಮತ್ತೆ ಪರಿಶೀಲಿಸುವಂತೆ ಮಾಡಿದೆ. ನೀರವ್ ಮೋದಿ ವ್ಯವಹರಿಸುತ್ತಿದ್ದ ಬೇರೆ ಬ್ಯಾಂಕ್‌ಗಳಲ್ಲೂ ಕೂಡ ಇದೇ ರೀತಿಯ ವಂಚನೆ ನಡೆದಿದ್ದು, ಮೋಸದ ವಹಿವಾಟಿನ ಒಟ್ಟು ಮೊತ್ತ 20,000 ಕೋಟಿ ರೂ ದಾಟಿದೆ. ಪಂಜಾಬ್ ಬ್ಯಾಷನಲ್ ಬ್ಯಾಂಕ್ ದಾಖಲಿಸಿದ್ದ ಮೊಕದ್ದಮೆಗೆ ಸಂಬಂಧಿಸಿದಂತೆ ಪೊಲೀಸರು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ವಿದೇಶಿ ವಿನಿಮಯ ವಿಭಾಗದ ನಿವೃತ್ತ ಉಪವ್ಯವಸ್ಥಾಪಕ ಗೋಕುಲ್‌ನಾಥ್‌ ಶೆಟ್ಟಿ ಎಂಬುವವರನ್ನು ಬಂಧಿಸಿದ್ದಾರೆ.

ಹಗರಣ ಕುರಿತಾಗಿ ವಿವರಣೆ ನೀಡುತ್ತಾ, ಕಿರಿಯ ದರ್ಜೆಯ ಬ್ಯಾಂಕ್ ಶಾಖೆಯ ಸಿಬ್ಬಂಧಿಗಳು ಬ್ಯಾಂಕ್‌ ಪರವಾಗಿ ನೀರವ್‌ ಮೋದಿ ಗ್ರೂಪ್‌ಗೆ ಸೇರಿದ ಕೆಲವು ಕಂಪನಿಗಳಿಗೆ ಅನಧಿಕೃತವಾದ ಎಲ್‌ಓಯುಗಳನ್ನು ನೀಡಿ ವಂಚನೆ ಎಸಗಿದ್ದಾರೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೇಳಿದೆ. ಈ ಮೋಸದ ವ್ಯವಹಾರವು ಭಾರತೀಯ ಬ್ಯಾಂಕ್‌ಗಳ ಸಾಗರೋತ್ತರ ಶಾಖೆಗಳೊಂದಿಗೆ ನಡೆದಿದೆ. ವಂಚನೆಯನ್ನು ಮರೆಮಾಚುವ ಕಾರಣಕ್ಕೆ ಸಿಬಿಎಸ್‌ ವ್ಯವಸ್ಥೆಯ (Core Banking Solutions) ಮುಖಾಂತರ ವ್ಯವಹಾರ ನಡೆಸಿಲ್ಲ ಎಂದು ಬ್ಯಾಂಕ್‌ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೇಳಿದ್ದು, ಜನವರಿಯಲ್ಲಿ ಎರಡು ಎಲ್‌ಓಯುಗಳ ಮೇಲಿನ ಹಣ ಪಾವತಿಸುವ ಅಗತ್ಯ ಬಂದಾಗ ಈ ಕುರಿತು ತನಿಖೆ ಆರಂಭಿಸಿತ್ತು.

ಏನಿದು ‘ಎಲ್‌ಓಯು’?

'ಎಲ್‌ಓಯು'ನ ವಿಸ್ತೃತ ರೂಪ 'ಲೆಟರ್‌ ಆಫ್ ಅಂಡರ್‌ಟೇಕಿಂಗ್'. ಇದು ಬ್ಯಾಂಕ್‌ಗಳು ನೀಡುವ ಖಾತರಿ ಪತ್ರವಾಗಿದ್ದು, ಸಾಗರೋತ್ತರ ಅಮದು ಪಾವತಿಗೆ ಈ ಪತ್ರ ಬಳಕೆಯಾಗುತ್ತದೆ. ಎಲ್‌ಓಯು ನೀಡುವುದೆಂದರೆ ತನ್ನ ಗ್ರಾಹಕ ಬೇರೆ ಬ್ಯಾಂಕ್‌ಗಳಿಂದ ಪಡೆದ ಸಾಲಕ್ಕೆ ತಾನು ಹೊಣೆಗಾರನೆಂದು ಹೇಳಿಕೊಳ್ಳುವುದು. ಎಲ್‌ಓಯು ನೀಡಿದರೆ ಅಮದು ವ್ಯವಹಾರದಲ್ಲಿ ತನ್ನ ಗ್ರಾಹಕನ ಪರವಾಗಿ ಖಾತರಿ ನೀಡಿ ಸಾಲವನ್ನು ದೊರಕಿಸಿಕೊಡುವುದು ಬ್ಯಾಂಕ್‌ನ ಕರ್ತವ್ಯವಾಗಿರುತ್ತದೆ. ಸಾಲವನ್ನು ನೀಡುವುದು ಮತ್ತೊಂದು ವಿದೇಶೀ ಅಥವಾ ವಿದೇಶದಲ್ಲಿ ಶಾಖೆ ಹೊಂದಿರುವ ದೇಶೀಯ ಬ್ಯಾಂಕ್‌.

ಒಂದು ವೇಳೆ ಎಲ್‌ಓಯು ಪಡೆದು ಬೇರೆ ಬ್ಯಾಂಕ್‌ನಿಂದ ಸಾಲ ಪಡೆದ ತನ್ನ ಗ್ರಾಹಕ ಸಾಲವನ್ನು ಮರುಪಾವತಿ ಮಾಡದಿದ್ದಲ್ಲಿ ಅಸಲಿನ ಜೊತೆಗೆ ಬಡ್ಡಿಯನ್ನೂ ಕೂಡ ಸೇರಿಸಿ ಕೊಡುವುದಾಗಿ ಎಲ್‌ಓಯುನಲ್ಲಿ ವಾಗ್ದಾನ ಮಾಡಲಾಗಿರುತ್ತದೆ. ಈ ಪ್ರಕ್ರಿಯೆಯಲ್ಲಿ ಎಲ್‌ಓಯುವನ್ನು ನೀಡುವ ಬ್ಯಾಂಕ್‌, ಸ್ವೀಕರಿಸುವ ಬ್ಯಾಂಕ್‌, ರಫ್ತು ಮತ್ತು ಅಮದುದಾರರು ಭಾಗಿಯಾಗಿರುತ್ತಾರೆ.

ಇಂತಹದೇ ಅಧಿಕೃತವಲ್ಲದ ಎಲ್‌ಓಯುಗಳನ್ನು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹೆಸರಿನಲ್ಲಿ ನಿಡಲಾಗಿತ್ತು. ಬ್ಯಾಂಕ್‌ನ ಅಧಿಕಾರಿಗಳು ಅಗತ್ಯವಿರುವ ಯಾವುದೇ ಮಂಜೂರಾತಿಗಳನ್ನು ಪಡೆಯದೇ ನೀರವ್‌ ಮೋದಿಯ ಕೆಲವು ಕಂಪನಿಗಳಿಗೆ ಎಲ್‌ಓಯು ನಿಡಿದ್ದರು. ಆ ಎಲ್‌ಓಯುಗಳು ಅಧಿಕೃತವೆಂದು ತಿಳಿದು ಹಲವು ಭಾರತೀಯ ಬ್ಯಾಂಕ್‌ಗಳ ಸಾಗರೋತ್ತರ ಶಾಖೆಗಳು ವಿದೇಶೀ ವಿನಿಮಯ ಸಾಲವನ್ನು ನೀಡಿದ್ದವು.

‘ಸ್ವಿಫ್ಟ್‌’ ಎಂದರೇನು?

'ಸ್ವಿಫ್ಟ್‌'ನ ವಿಸ್ತೃತ ರೂಪ 'ಸೊಸೈಟಿ ಫಾರ್ ವರ್ಡ್ಲ್‌ವೈಲ್ಡ್‌ ಇಂಟರ್‌ಬ್ಯಾಂಕ್ ಫೈನಾನ್ಷಿಯಲ್‌ ಟೆಲಿ-ಕಮ್ಯುನಿಕೇಷನ್‌  ಸಿಸ್ಟಮ್‌'. ಯಾವುದಾದರೂ ಬ್ಯಾಂಕ್‌ ಎಲ್‌ಓಯುವನ್ನು ಹೊಂದಿರುವ ವ್ಯಕ್ತಿಗೆ ಸಾಲ ನೀಡುವಾಗ ಈ ಕುರಿತು ಎಲ್ಓಯು ನೀಡಿದ ಬ್ಯಾಂಕ್‌ಗೆ ಸಂದೇಶವನ್ನು ನೀಡುತ್ತದೆ. ತಾನು ನೀಡಿರುವ ಎಲ್‌ಓಯುವನ್ನು ಬಳಸಿ ಸಾಲ ಪಡೆಯುತ್ತಿರುವ ಮಾಹಿತಿಯು ಎಲ್‌ಓಯುವನ್ನು ವಿತರಿಸಿದ ಬ್ಯಾಂಕ್‌ಗೆ ಈ ಮೂಲಕ ದೊರೆಯುತ್ತದೆ. ಈ ಸಂದೇಶವನ್ನು ಪಡೆದ ನಂತರ ಎಲ್‌ಓಯು ನೀಡಿದ ಬ್ಯಾಂಕ್‌ ಇದು ತನ್ನದೇ ಎಲ್‌ಓಯು ಎಂಬುದನ್ನು ಖಾತರಿ ಪಡಿಸಬೇಕು.

ಹೀಗೆ ಖಾತರಿ ಪಡಿಸಲು ಬ್ಯಾಂಕ್‌ ತನ್ನ ಸ್ವಿಫ್ಟ್ ಕೋಡ್, ಖಾತೆ ಸಂಖ್ಯೆ ತುಂಬಿ ಒಂದಷ್ಟು  ಗೌಪ್ಯ ಮಾಹಿತಿಗಳನ್ನು ನೀಡಬೇಕು. ಈ ಕೋಡ್, ಪ್ರಕ್ರಿಯೆ ಎಲ್ಲಾ ತಿಳಿದಿರುವುದು ಬ್ಯಾಂಕ್‌ನ ಅಧಿಕಾರಿಗಳಿಗಷ್ಟೇ. ಇಲ್ಲಿ ಮೂರು ಹಂತದ ಭದ್ರತೆ ಇರುತ್ತದೆ. ಮೊದಲು ಎಲ್‌ಓಯು ನೀಡಲ್ಪಟ್ಟಿರುವ ಶಾಖೆಯ ನಿರ್ವಾಹಕ ಒಮ್ಮೆ ಪರಿಶೀಲಿಸಿ ಅಗತ್ಯ ಮಾಹಿತಿಗಳನ್ನು ತುಂಬಿ ಕಳುಹಿಸುತ್ತಾನೆ. ಅವನ ನಂತರ ಮತ್ತೊಬ್ಬ ಪರೀಕ್ಷಕನಿರುತ್ತಾನೆ. ಕೊನೆಗೆ ಮತ್ತೊಬ್ಬ ಮೇಲಾಧಿಕಾರಿ ಪರಿಶೀಲನೆ ನಡೆಸುತ್ತಾನೆ. ಈ ಮೂರು ಹಂತಗಳನ್ನು ದಾಟಿದ ಮೇಲಷ್ಟೇ ಸಾಲ ನೀಡುವಂತೆ ಸೂಚಿಸಲಾಗುತ್ತದೆ.

ಕೋರ್‌ ಬ್ಯಾಂಕಿಂಗ್‌ ವ್ಯವಸ್ಥೆ ಎಂದರೆ?

ಗ್ರಾಹಕನೊಬ್ಬನಿಗೆ ಖಾತೆ ಹೊಂದಿರುವ ಶಾಖೆಯಲ್ಲಷ್ಟೇ ಅಲ್ಲದೇ ಇತರೆ ಶಾಖೆಗಳಲ್ಲೂ ಸಹ ವ್ಯವಹಾರ ನಿರ್ವಹಿಸಲು ಸಲಭವಾಗಿಸುವ ನಿಟ್ಟಿನಲ್ಲಿ ಈ ಕೋರ್‌ ಬ್ಯಾಂಕಿಂಗ್ ವ್ಯವಸ್ಥೆ ಕೆಲಸ ಮಾಡುತ್ತದೆ. ಈ ವ್ಯವಸ್ಥೆಯ ಮೂಲಕ ಪ್ರಪಂಚದ ಯಾವುದೇ ಮೂಲೆಯಲ್ಲಿರುವ ಶಾಖೆಯಲ್ಲಿ ಕೂಡ ವಹಿವಾಟು ನಿರ್ವಹಿಸಲು ಸಾಧ್ಯವಿದೆ. ಈ ವ್ಯವಸ್ಥೆ ಅಸ್ಥಿತ್ವಕ್ಕೆ ಬಂದ ನಂತರ ಶಾಖೆಯ ಗ್ರಾಹಕರು ಎನ್ನುವುದಕ್ಕಿಂದ ಒಂದು ಬ್ಯಾಂಕ್‌ ಗ್ರಾಹಕರು ಎನ್ನು ಪರಿಪಾಠ ಆರಂಭವಾಗಿದೆ.  ಯಾವುದೋ ಮೂಲೆಯಲ್ಲಿರುವ ಶಾಖೆಯಲ್ಲಿ ವ್ಯವಹಾರ ನಡೆದರೂ ಸಹ ಈ ವ್ಯವಸ್ಥೆಯ ಮೂಲಕ ಅದು ಎಲ್ಲಾ ಶಾಖೆಗಳನ್ನು ತಲುಪುತ್ತದೆ. ವ್ಯವಹಾರ ನಡೆದ ದಿನ, ಸಮಯ ಎಲ್ಲವೂ ಕೂಡ ದಾಖಲಾಗುತ್ತದೆ.

ಈ ಕಾರಣಕ್ಕಾಗಿಯೇ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಅಧಿಕಾರಿಗಳು ವಂಚನೆ ಎಸಗುವಲ್ಲಿ ಈ ವ್ಯವಸ್ಥೆಯ ಸಹವಾಸವೇ ಬೇಡವೆಂದು ದೂರ ಉಳಿದಿದ್ದಾರೆ. ಆದ್ದರಿಂದ ಪ್ರಕರಣ ಬೆಳಕಿಗೆ ಬರಲು ಇಷ್ಟು ದಿನ ಬೇಕಾಯಿತು.

ಬೇಲಿಯೇ ಎದ್ದು ಹೊಲ ಮೆದ್ದ ಪ್ರಕರಣವಿದು. ಇಷ್ಟೆಲ್ಲಾ ಅಧುನಿಕ ವ್ಯವಸ್ಥೆಯ ನಡುವೆಯೂ ಕೂಡ ಬರೋಬ್ಬರಿ 11,300 ಕೋಟಿ ಮೊತ್ತದ ಹಣವನ್ನು ವಂಚಿಸಿರುವ ಬ್ಯಾಂಕ್‌ ಅಧಿಕಾರಿಗಳು ಬ್ಯಾಂಕ್‌ಗಳ ಮೇಲೆಯೇ ಸಂಶಯ ಮೂಡುವಂತೆ ಮಾಡಿದ್ದಾರೆ. ಉದ್ಯಮಿ ನೀರವ್‌ ಮೋದಿಯ ವಂಚನೆ ಇಡೀ ವಿಶ್ವಕ್ಕೆ ತಿಳಿದಿದೆ. ಇದರ ಮಧ್ಯೆ ಈ ಕೋಟಿಗಟ್ಟಲೆ ಹಣದ ಕುರಿತಾಗಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ನಡೆ ಏನು ಎಂಬುದನ್ನು ಕಾದು ನೋಡಬೇಕಿದೆ.

ಚಿತ್ರಕೃಪೆ : NDTV.com