samachara
www.samachara.com
'ಬೆಳೆ ಹಾನಿ ಆಗ್ತಾ ಇದೆಯಾ; ಮಂತ್ರ ಪಠಿಸಿ': ಬಿಜೆಪಿ ನಾಯಕನಿಂದ ರೈತರಿಗೆ ಪುಕ್ಕಟೆ ಸಲಹೆ
ಸುದ್ದಿ ಸಾಗರ

'ಬೆಳೆ ಹಾನಿ ಆಗ್ತಾ ಇದೆಯಾ; ಮಂತ್ರ ಪಠಿಸಿ': ಬಿಜೆಪಿ ನಾಯಕನಿಂದ ರೈತರಿಗೆ ಪುಕ್ಕಟೆ ಸಲಹೆ

"ಪ್ರಾಕೃತಿಕ ವಿಕೋಪಗಳಿಂದ ಬೆಳೆಗಳನ್ನು ರಕ್ಷಿಸಲು ದಿನನಿತ್ಯ ಒಂದು ಗಂಟೆ ಹನುಮಾನ್‌ ಚಾಲೀಸಾ ಪಠಿಸಿ," ಎಂದು ಮಧ್ಯ ಪ್ರದೇಶ ಬಿಜೆಪಿ ನಾಯಕ ಹಾಗೂ ಮಾಜಿ ಶಾಸಕ ರಮೇಶ್‌ ಸಕ್ಸೇನಾ ರೈತರಿಗೆ ಉಚಿತ ಸಲಹೆ ನೀಡಿದ್ದಾರೆ. ಈ ರೀತಿಯ ಸಲಹೆ ನೀಡುವ ಮೂಲಕ ಅವರು ಸಹಜವಾಗಿಯೇ ವಿವಾದಕ್ಕೀಡಾಗಿದ್ದಾರೆ. ಜತೆಗೆ, ಅವರ ಹೇಳಿಕೆಯನ್ನಾಧರಿಸಿ ಪರ/ವಿರೋಧದ ಚರ್ಚೆಗಳು ಶುರುವಾಗಿವೆ. ಇದು ಅದರ ಮುಂದುವರಿದ ಭಾಗ... 

ಕಳೆದ ಕೆಲವು ದಿನಗಳಿಂದ ಮಧ್ಯಪ್ರದೇಶದ ಸೆಹೋರ್‌ನಲ್ಲಿ ಅಕಾಲಿಕ ಮಳೆ ಬೀಳುತ್ತಿದ್ದು, ಭಾರಿ ಪ್ರಮಾಣದ ಬೆಳೆಹಾನಿ ಸಂಭವಿಸಿದೆ. ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳುವ ಸಲುವಾಗಿ ರೈತರು ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ, ಬಿಜೆಪಿ ಮಾಜಿ ಶಾಸಕ ರಮೇಶ್ ಸಕ್ಷೇನಾ ರೈತರಿಗೆ ಬೆಳೆ ರಕ್ಷಣೆಯ ಕುರಿತು ಉಚಿತ ಸಲಹೆಯನ್ನು ನೀಡಿದ್ದಾರೆ. ಇವರು 1993 ರಿಂದ 2008ರವರೆಗೆ ಶಾಸಕರಾಗಿ ಜನರನ್ನು ಪ್ರತಿನಿಧಿಸಿದ್ದವರು.

"ಮುಂದಿನ 4-5 ದಿನಗಳಲ್ಲಿ ಈ ನೈಸರ್ಗಿಕ ವಿಕೋಪ ಮುಂದುವರಿಯಲಿದೆ ಎಂದು ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ. ಈ ತರಹದ ನೈಸರ್ಗಿಕ ವಿಕೋಪಗಳ ವಿರುದ್ಧ ಹನುಮಾನ್ ಚಾಲೀಸಾ ರಕ್ಷಣೆ ನೀಡುತ್ತದೆ. ಹನುಮಾನ್ ಚಾಲೀಸಾವನ್ನು ಪ್ರತಿ ಹಳ್ಳಿಯಲ್ಲಿ ರೈತರು ಗುಂಪಾಗಿ ಒಂದು ಗಂಟೆಯವರೆಗೆ ಪಠಣ ಮಾಡುವುದರಿಂದ ಈ ನೈಸರ್ಗಿಕ ವಿಕೋಪವನ್ನು ತಡೆಗಟ್ಟುತ್ತದೆ. ಹನುಮಾನ್ ಚಾಲೀಸಾ ಪಠಣ ಮಾಡುವುದರಿಂದ ಯಾವುದೇ ಚಂಡಮಾರುತ, ಭಾರೀ ಮಳೆ ಮತ್ತು ಆಲಿಕಲ್ಲು ಮಳೆ ಬರುವುದಿಲ್ಲ ಎಂದು ನಾನು ಖಚಿತವಾಗಿ ಹೇಳುತ್ತೇನೆ," ಎಂದು ರೈತರಲ್ಲಿ ಮನವಿ ಮಾಡುವುದರ ಜೊತೆಗೆ ಚಾಲೆಂಜ್ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮದ್ಯ ಪ್ರದೇಶ ರಾಜ್ಯದ ಕೃಷಿ ಸಚಿವ ಬಾಲಕೃಷ್ಣ ಪಾಟೀದಾರ್, "ಇದು ಧಾರ್ಮಿಕ ನಂಬಿಕೆಯಾಗಿದ್ದು, ಯಾರಾದರೂ ಹನುಮಾನ್ ಚಾಲೀಸಾ ಪಠಿಸಲು ಇಷ್ಟಪಟ್ಟರೆ ಅದರಲ್ಲಿ ಯಾವುದೇ ತಪ್ಪಿಲ್ಲ. ಈ ತರಹದ ಭಕ್ತಿ ಸ್ತುತಿಗಳನ್ನು ಪಠಣ ಮಾಡುವುದರಿಂದ ರೈತರ ಅಂತಃಶಕ್ತಿ ಹೆಚ್ಚುತ್ತದೆ," ಎಂದಿದ್ದಾರೆ.

ಮಧ್ಯಪ್ರದೇಶದ ಸೇಹೋರ್‌ ಕ್ಷೇತ್ರದ ಮಾಜಿ ಶಾಸಕನಾದ ರಮೇಶ್ ಸಕ್ಸೇನಾ, ಆವರ ಈ ಮಾತುಗಳನ್ನು ವಿಡಿಯೋದಲ್ಲಿ ರೆಕಾರ್ಡ್‌ ಮಾಡಿ, ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಡಲಾಗಿದೆ. ಟ್ವೀಟರ್‌ನಲ್ಲಿ ಈ ವಿಡೀಯೋ ನೋಡಿದವರು ರಮೇಶ್ ಸಕ್ಸೇನಾ ಮಾತುಗಳು ಹಾಸ್ಯಾಸ್ಪದ ಎಂದು ಟೀಕಿಸಿದ್ದಾರೆ. ಪ್ರತಿಕ್ರಿಯೆ ರೂಪದ ಕೆಲವು ಟ್ವೀಟ್‌ಗಳು ಇಲ್ಲಿವೆ...

ಹಾಗಾದರೆ ಬಿಜೆಪಿ ಸರಕಾರ ನಮಗೆ ಬೇಡ ಎಂದು ಗುರ್ಮಿತ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಹೊಸ ಶೋ, ಕಾಮಿಡಿ ನೈಟ್ಸ್ ವಿಥ್ ರಮೇಶ್ ಸಕ್ಸೇನಾ ಎಂದು ಸುಶಾಂತ್ ದೇಖಲೆ ಟ್ವೀಟ್ ಮಾಡಿದ್ದಾರೆ.

ಎಲ್ಲಾ ರೈತರೂ ಈ ವಿಧಾನವನ್ನು ಪ್ರಯತ್ನಿಸಬೇಕೆಂದು ಕೇಳಿಕೊಳ್ಳುತ್ತೇನೆ. ಒಂದು ವೇಳೆ ಅದು ಕೆಲಸ ಮಾಡದಿದ್ದರೆ, ಬಿಜೆಪಿ ಶಾಸಕ ರಮೇಶ್ ಸಕ್ಸೇನಾ ಅವರೇ ರೈತರಿಗಾದ ಎಲ್ಲಾ ನಷ್ಟವನ್ನು ಮರುಪಾವತಿಸಬೇಕು ಎಂದು ಲೇಖಕ ಆದಿತ್ಯ ಮೆನನ್ ಟ್ವೀಟ್ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್ ಸೇರಿದಂತೆ ಉತ್ತರ ಭಾರತದ ರಾಜ್ಯಗಳು ಸೋಮವಾರ ಕೆಲವು ಭಾಗಗಳಲ್ಲಿ ಮಂಜು ಸುರಿಯುತ್ತಿದೆ. ಡೆಹ್ರಾಡೂನ್ ಮತ್ತು ಇತರ ಪ್ರದೇಶಗಳಿಂದ ಮಳೆಯಾದ ವರದಿಯಾಗಿದೆ. ಅಷ್ಟೇ ಅಲ್ಲದೇ, ಕಳೆದ ಭಾನುವಾರದಂದು, ಮಹಾರಾಷ್ಟ್ರದ ಕೇಂದ್ರ ಭಾಗದ, ಮರಾಠವಾಡ ಮತ್ತು ವಿದರ್ಭದ ಪ್ರದೇಶಗಳಲ್ಲಿ ಬಿದ್ದ ಭಾರೀ ಗುಡುಗು ಮಿಂಚಿನ ಮೂಲಕ ಸುರಿದ ಆಲಿಕಲ್ಲು ಮಳೆಯಿಂದ ಮೂವರು ಮೃತಪಟ್ಟಿದ್ದಾರೆ. ಜತೆಗೆ, ಇದರಿಂದ ದ್ರಾಕ್ಷಿಗಳು, ಹತ್ತಿ, ಮತ್ತು ಗೋಧಿ ಬೆಳೆ ಸೇರಿದಂತೆ ಇತರ ಬೆಳೆಗಳು ಹಾನಿಗೀಡಾಗಿವೆ ಎಂದು ವರದಿಯಾಗಿದೆ. ಇಂತಹ ಸಮಯದಲ್ಲಿ ಪರಿಹಾರ ರೂಪದಲ್ಲಿ ಹನುಮಾನ್‌ ಮಂತ್ರಗಳನ್ನು ಮುಂದಿಟ್ಟ ಬಿಜೆಪಿ ನಾಯಕರ ಅಲೋಚನೆ ಹಾಸ್ಯಾಸ್ಪದವಾಗಿದೆ.

ಏನಿದು ಹನುಮಾನ್ ಚಾಲೀಸಾ?

"ಹನುಮಾನ್ ಚಾಲೀಸ್ ಪಠಣ ಮಾಡುವ ಮೂಲಕ ಹನುಮಂತನನ್ನು ಒಲಿಸಿಕೊಳ್ಳಬಹುದು. ಪ್ರತಿದಿನ ಹನುಮಾನ್ ಚಾಲೀಸ್ ಓದುವ ವ್ಯಕ್ತಿಗೆ ಯಾವುದೇ ಕಷ್ಟ, ದುಃಖ ಬರುವುದಿಲ್ಲ. ಹನುಮಂತನ ಭಕ್ತರು ಹನುಮಾನ್ ಚಾಲೀಸ್‌ ಪುಸ್ತಕವನ್ನು ಭಕ್ತರಿಗೆ ಹಂಚುವ ಮೂಲಕ ಹನುಮಂತನ ಕೃಪೆಗೆ ಪಾತ್ರರಾಗಿ, ಅವರಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ಹಾಗೆ ಉಳಿದ ಭಕ್ತರಿಗೂ ಪುಣ್ಯ ಮಾಡಲು ಅವಕಾಶ ನೀಡಿದಂತಾಗುತ್ತದೆ.  ನೀಡಿದ ಪುಸ್ತಕವನ್ನು ಎಷ್ಟು ಭಕ್ತರು ಓದುತ್ತಾರೋ ಅಷ್ಟು ಪಟ್ಟು ಪುಣ್ಯ, ಧನ, ಸಂತೋಷ ನಮಗೆ ಪ್ರಾಪ್ತಿಯಾಗುತ್ತೆ," ಎನ್ನುವುದು ಹನುಮಾನ್ ಭಕ್ತರೊಬ್ಬರ ನಂಬಿಕೆಯಾಗಿದೆ.

ಹನುಮಾನ್ ಚಾಲೀಸ ಎಂದರೆ ಹನುಮಾನ್ ಮೇಲಿನ ನಲವತ್ತು ಶ್ಲೋಕಗಳು. ಇದು ಒಂದು ಭಕ್ತಿ ಗೀತೆಯಾಗಿದ್ದು, ಭಗವಾನ್ ಹನುಮಂತನನ್ನು ಭಕ್ತಿಯಿಂದ ಆಧರಿಸಿ ಬರೆದ ಒಂದು ಪದ್ಯವಾಗಿದೆ. ಇದು ತುಳಸೀದಾಸ ಅವರಿಂದ ಹಿಂದಿ ಭಾಷೆಯಲ್ಲಿ ರಚಿತವಾಗಿದೆ. ತುಳಸೀದಾಸರೇ ಬರೆದ 'ರಾಮಚರಿತ ಮಾನಸ'ವೇ ಇದರ ಮೂಲಗ್ರಂಥವಾಗಿದೆ ಎನ್ನುತ್ತದೆ ವಿಕೀಪಿಡೀಯ ಮಾಹಿತಿ.

ಹನುಮಾನ್ ಬ್ರಹ್ಮಚಾರಿ ದೇವರು. ಹಿಂದೂಗಳಿಗೆ ಆಧುನಿಕ ಕಾಲದಲ್ಲೂ ಹನುಮಾನ್ ಚಾಲೀಸಾ ಅತ್ಯಂತ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಅವರಲ್ಲಿ ಕೆಲವರು ಪ್ರತಿದಿನ ಹನುಮಾನ್ ಚಾಲೀಸಾ ಪ್ರಾರ್ಥನೆಯನ್ನು ಪ್ರತಿ ವಾರ, ಸಾಮಾನ್ಯವಾಗಿ ಮಂಗಳವಾರ, ಶನಿವಾರ ಅಥವಾ ಭಾನುವಾರದ ದಿನಗಳದಂದು ಪಠಿಸುತ್ತಾರೆ. ಇದರ ಪದ್ಯದ 38 ಶ್ಲೋಕ ಹೇಳುವಂತೆ, 'ಯಾರು ಹನುಮಾನ್ ಚಾಲೀಸಾವನ್ನು 100 ದಿನಗಳಿಗೆ 100 ಬಾರಿ ಹೇಳುವರೋ, ಅವರು ಹುಟ್ಟು ಮತ್ತು ಸಾವುಗಳ ಚಕ್ರದಿಂದ ಮುಕ್ತರಾಗಿ, ದಿವ್ಯವಾದ ಮಹಾಸುಖವನ್ನು ಅನುಭವಿಸುತ್ತಾರೆ,' ಎಂಬ ನಂಬಿಕೆಯಿದೆ.

ಹನುಮಾನ್ ಚಾಲೀಸ ನಂಬಿಕೆಯಾದರೆ, ರೈತರನ್ನು ಸಂಕಷ್ಟಕ್ಕೆ ದೂಡಿರುವ ಪ್ರಕೃತಿ ವಿಕೋಪ ವಾಸ್ತವ. ನಂಬಿಕೆಗಳು ವಾಸ್ತವದ ಸಮಸ್ಯೆಗಳಿಗೆ ಪರಿಹಾರ ನೀಡುವ ಹಾಗಿದ್ದಿದ್ದರೆ ದೇಶದ ಅದೆಷ್ಟೋ ಸಮಸ್ಯೆಗಳು ಇಷ್ಟೊತ್ತಿಗಾಗಲೇ ಪರಿಹಾರ ಕಾಣಬೇಕಿತ್ತು.