ಎಡಿಆರ್‌ ವರದಿಯಲ್ಲಿ ಸಿಎಂಗಳ ಆಸ್ತಿಪಾಸ್ತಿ: ಸಿದ್ದರಾಮಯ್ಯ ಬಳಿ ಆಸ್ತಿ ಎಷ್ಟಿದೆ?
ಸುದ್ದಿ ಸಾಗರ

ಎಡಿಆರ್‌ ವರದಿಯಲ್ಲಿ ಸಿಎಂಗಳ ಆಸ್ತಿಪಾಸ್ತಿ: ಸಿದ್ದರಾಮಯ್ಯ ಬಳಿ ಆಸ್ತಿ ಎಷ್ಟಿದೆ?

‘ದೇಶದ 29 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ ಎಲ್ಲ ಮುಖ್ಯಮಂತ್ರಿಗಳ ಪೈಕಿ 25 ಮುಖ್ಯಮಂತ್ರಿಗಳು ಕೋಟ್ಯಧಿಪತಿಗಳಾಗಿದ್ದಾರೆ,’ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ವಿಶ್ಲೇಷಣೆ ಮಾಡಿದ ವರದಿಯೊಂದು ಹೇಳಿದೆ.

ಚುನಾವಣೆಗೆ ಸ್ಪರ್ಧಿಸಿದಾಗ ಅಭ್ಯರ್ಥಿಗಳು ‘ಚುನಾವಣಾ ಆಯೋಗ’ಕ್ಕೆ ಸಲ್ಲಿಸಿದ ಪ್ರಮಾಣ ಪತ್ರದ ಮಾಹಿತಿ ಆಧರಿಸಿ ಈ ವಿಶ್ಲೇಷಣೆ ಮಾಡಲಾಗಿದೆ. ದೇಶದ ಎಲ್ಲಾ ಮುಖ್ಯಮಂತ್ರಿಗಳು ಹೊಂದಿರುವ ಆಸ್ತಿ, ವಿದ್ಯಾರ್ಹತೆ ಮತ್ತು ಅವರ ವಿರುದ್ಧ ಇರುವ ಎಲ್ಲ ಪ್ರಕರಣಗಳು ಇದರಲ್ಲಿವೆ.

ನಲ್ಲಿಯೂ ಈ ಕುರಿತು ಮಾಹಿತಿ ನೀಡಲಾಗಿದೆ. ನ್ಯಾಶನಲ್ ಎಲೆಕ್ಷನ್ ವಾಚ್‌ (NEW) ಸಹಕಾರದೊಂದಿಗೆ ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ADR) ಈ ವರದಿ ಸಿದ್ಧಪಡಿಸಿದೆ.

ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ವರದಿ ಪ್ರಕಾರ, ಆಂಧ್ರಪ್ರದೇಶ ರಾಜ್ಯದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅತಿ ಹೆಚ್ಚು ಆಸ್ತಿ (177 ಕೋಟಿ ಅಧಿಕ ಮೊತ್ತದ ಸ್ವತ್ತು) ಹೊಂದುವ ಮೂಲಕ ಅತಿ ಶ್ರೀಮಂತ ಮುಖ್ಯಮಂತ್ರಿಯಾಗಿ ಎನ್ನಿಸಿಕೊಂಡಿದ್ದಾರೆ. ತ್ರಿಪುರ ರಾಜ್ಯದ ಮಾಣಿಕ್‌ ಸರ್ಕಾರ್‌ ಅತೀ ಕಡಿಮೆ ಆಸ್ತಿ (26 ಲಕ್ಷ ರೂಪಾಯಿ) ಹೊಂದುವ ಮೂಲಕ ಅತ್ಯಂತ ಬಡ ಮುಖ್ಯಮಂತ್ರಿಯಾಗಿದ್ದಾರೆ ಎಂದು ವಿಶ್ಲೇಷಣೆಯಲ್ಲಿ ಹೇಳಲಾಗಿದೆ.

ಅತೀ ಹೆಚ್ಚು ಆಸ್ತಿ ಹೊಂದಿದ ಮುಖ್ಯಮಂತ್ರಿಗಳು:

 • ಚಂದ್ರಬಾಬು ನಾಯ್ಡು, ಆಂಧ್ರ ಪ್ರದೇಶ, ಟಿಡಿಪಿ 177 ಕೋಟಿ
 • ಪೆಮಾ ಖಂಡು, ಅರುಣಾಚಲ ಪ್ರದೇಶ, ಬಿಜೆಪಿ, 129 ಕೋಟಿ
 • ಅಮರಿಂದರ್‌ ಸಿಂಗ್‌, ಪಂಜಾಬ್‌, ಕಾಂಗ್ರೆಸ್‌, 48 ಕೋಟಿ

ಅತೀ ಕಡಿಮೆ ಆಸ್ತಿ ಹೊಂದಿದ ಮುಖ್ಯಮಂತ್ರಿಗಳು:

 • ಮಾಣಿಕ್‌ ಸರ್ಕಾರ್‌, ತ್ರಿಪುರಾ, ಸಿಪಿಎಂ, 26 ಲಕ್ಷ
 • ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ, ಟಿಎಂಸಿ, 30 ಲಕ್ಷ
 • ಮೆಹಬೂಬಾ ಮುಫ್ತಿ, ಜಮ್ಮು ಮತ್ತು ಕಾಶ್ಮೀರ, ಪಿಡಿಪಿ, 55 ಲಕ್ಷ

ಕರ್ನಾಟಕದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ, ಒಟ್ಟಾರೆ 13 ಕೋಟಿಗಿಂತಲೂ ಅಧಿಕ (13,61,24,398ರೂ) ಮೊತ್ತದ ಆಸ್ತಿ ಹೊಂದುವ ಮೂಲಕ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ. ಆದರೆ ವಿಶೇಷವೆಂದರೆ ಇವರ ವಿರುದ್ಧ ಯಾವುದೇ ‘ಕ್ರಿಮಿನಲ್ ಪ್ರಕರಣ’ಗಳು ದಾಖಲಾಗಿಲ್ಲ. ಆದರೆ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್‌ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಸೇರಿದಂತೆ ಒಟ್ಟು 11 ಮುಖ್ಯಮಂತ್ರಿಗಳ ವಿರುದ್ಧ ಅಪರಾಧ ಪ್ರಕರಣಗಳಿವೆ. ಅದರಲ್ಲಿ 8 ಮುಖ್ಯಮಂತ್ರಿಗಳ ವಿರುದ್ಧ ಗಂಭೀರ ಪ್ರಕರಣಗಳು ದಾಖಲಾಗಿವೆ ಎನ್ನುತ್ತದೆ ಎಡಿಆರ್ ವರದಿ.


    (<strong>ಅಪರಾಧ ಪ್ರಕರಣ ಇಲ್ಲದವರು: </strong>20 (65%),  <strong>ಅಪರಾಧ ಪ್ರಕರಣ ಇರುವವರು: </strong>11 (35%) ಕೃಪೆ: ಎಡಿಆರ್)
(ಅಪರಾಧ ಪ್ರಕರಣ ಇಲ್ಲದವರು: 20 (65%),  ಅಪರಾಧ ಪ್ರಕರಣ ಇರುವವರು: 11 (35%) ಕೃಪೆ: ಎಡಿಆರ್)

ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್‌ ವಿರುದ್ಧ ಅತಿಹೆಚ್ಚು (22) ಪ್ರಕರಣಗಳು ದಾಖಲಾಗಿವೆ.ಅವುಗಳಲ್ಲಿ 3 ಗಂಭೀರ ಪ್ರಕರಣಗಳಿವೆ. ಪಟ್ಟಿಯ ನಂತರದ ಸ್ಥಾನದಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ 11 ಪ್ರಕರಣಗಳು, ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ 10 ಪ್ರಕರಣಗಳು ದಾಖಲಾಗಿವೆ. ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಕೊಲೆ, ಕೊಲೆ ಯತ್ನ ಮತ್ತು ಗಲಭೆ ಪ್ರಕರಣಗಳು ದಾಖಲಾಗಿವೆ. 1991ರ ನವೆಂಬರ್‌ನಲ್ಲಿ ಬಿಹಾರದ ರೌಲಿ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ನಿತೀಶ್‌ ಆರೋಪಿಯಾಗಿದ್ದಾರೆ. ಕೇಜ್ರಿವಾಲ್‌ ವಿರುದ್ಧ ದಾಖಲಾದ ಹತ್ತು ದೂರುಗಳ ಪೈಕಿ, ನಾಲ್ಕು ಗಂಭೀರ ಪ್ರಕರಣಗಳಿವೆ. ಪಿಣರಾಯಿ ವಿಜಯನ್‌ ವಿರುದ್ಧ 11 ದೂರು ದಾಖಲಾಗಿದ್ದು, ಅದರಲ್ಲಿ ಒಂದು ಗಂಭೀರ ಸ್ವರೂಪದ್ದಾಗಿದೆ.


    (ಅಪರಾಧ ಪ್ರಕರಣಗಳನ್ನು ಘೋಷಿಸಿಕೊಂಡ ರಾಜ್ಯವಾರು ಮುಖ್ಯಮಂತ್ರಿಗಳು, ಕೃಪೆ: ಎಡಿಆರ್)
(ಅಪರಾಧ ಪ್ರಕರಣಗಳನ್ನು ಘೋಷಿಸಿಕೊಂಡ ರಾಜ್ಯವಾರು ಮುಖ್ಯಮಂತ್ರಿಗಳು, ಕೃಪೆ: ಎಡಿಆರ್)

ದೇಶದ ಎಲ್ಲ ಮುಖ್ಯಮಂತ್ರಿಗಳ ಪೈಕಿ,  ಕೇವಲ ಮೂರು ಜನ ಮಹಿಳಾ ಮುಖ್ಯಮಂತ್ರಿಗಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಮೆಹಬೂಬಾ ಮುಫ್ತಿ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಮತ್ತು ರಾಜಸ್ಥಾನದ ವಸುಂಧರಾ ರಾಜೇ. ಉಳಿದಂತೆ 28 ಮುಖ್ಯಮಂತ್ರಿಗಳು ಪುರುಷರೇ ಎನ್ನುತ್ತದೆ ಎಡಿಆರ್ ವರದಿ.


    (ಶೇ.90 ರಷ್ಟು ಮುಖ್ಯಮಂತ್ರಿಗಳು ಗಂಡಸರು, ಉಳಿದ ಶೇ.10 ರಷ್ಟು ಮುಖ್ಯಮಂತ್ರಿಗಳು ಹೆಂಗಸರು, ಕೃಪೆ: ಎಡಿಆರ್)
(ಶೇ.90 ರಷ್ಟು ಮುಖ್ಯಮಂತ್ರಿಗಳು ಗಂಡಸರು, ಉಳಿದ ಶೇ.10 ರಷ್ಟು ಮುಖ್ಯಮಂತ್ರಿಗಳು ಹೆಂಗಸರು, ಕೃಪೆ: ಎಡಿಆರ್)

ಇನ್ನು ಮುಖ್ಯಮಂತ್ರಿಗಳ ಶಿಕ್ಷಣದ ಹಿನ್ನೆಲೆಯನ್ನು ಗಮನಿಸಿದಾಗ, ಮೂವರು 12ನೇ ತರಗತಿ ಪಾಸಾದವರು, 12 ಜನ ಪದವೀಧರರು, 10 ಜನ ವೃತ್ತಿಪರ ಪಧವೀದರರು, ಐವರು ಸ್ನಾತಕೋತ್ತರ ಪದವೀಧರರು, ಒಬ್ಬರು ಡಾಕ್ಟರೇಟ್‌ ಪಡೆದವರಿದ್ದಾರೆ ಎನ್ನುತ್ತದೆ ಎಡಿಆರ್ ವಿಶ್ಲೇಷಣಾ ವರದಿ.


    (ರಾಜ್ಯವಾರು ಮುಖ್ಯಮಂತ್ರಿಗಳ ಶಿಕ್ಷಣದ ಹಿನ್ನೆಲೆ, ಕೃಪೆ: ಎಡಿಆರ್)
(ರಾಜ್ಯವಾರು ಮುಖ್ಯಮಂತ್ರಿಗಳ ಶಿಕ್ಷಣದ ಹಿನ್ನೆಲೆ, ಕೃಪೆ: ಎಡಿಆರ್)

ಇನ್ನು ವಯಸ್ಸಿನವಾರು ಮುಖ್ಯಮಂತ್ರಿಗಳ ಪಟ್ಟಿಯಲ್ಲಿ, ಪಂಜಾಬ್‌ನ ಅಮರಿಂದರ್‌ ಸಿಂಗ್‌ ಪಂಜಾಬ್‌ 74 ವರ್ಷ, ಕೇರಳದ ಪಿಣರಾಯಿ ವಿಜಯನ್‌ 72 ವರ್ಷ, ಮಿಜೋರಾಮ್‌ನ ಲಾಲ್‌ ಥನ್‌ಹವ್ಲಾ  71 ವರ್ಷದವರಾಗಿದ್ದಾರೆ. ಅತ್ಯಂತ ಕಿರಿಯ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ, ಅರುಣಾಚಲ ಪ್ರದೇಶದ ಪೆಮಾ ಖಂಡು 35 ವರ್ಷ, ಮಹಾರಾಷ್ಟ್ರದ ದೇವೇಂದ್ರ ಫಡಣವೀಸ್‌ 44 ವರ್ಷ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ 45 ವರ್ಷದವರಾಗಿದ್ದಾರೆ.


    (ವಯಸ್ಸಿನ ವಾರು ಮುಖ್ಯಮಂತ್ರಿಗಳು, ಕೃಪೆ: ಎಡಿಆರ್)
(ವಯಸ್ಸಿನ ವಾರು ಮುಖ್ಯಮಂತ್ರಿಗಳು, ಕೃಪೆ: ಎಡಿಆರ್)

ಎಡಿಆರ್ ಏನಿದು?

ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಅನ್ನು ಸಂಕ್ಷಿಪ್ತವಾಗಿ ಎಡಿಆರ್ ಎನ್ನಲಾಗುತ್ತದೆ. ಎಡಿಆರ್ 1999ರಲ್ಲಿ ಸ್ಥಾಪನೆಯಾಗಿದೆ. ಅಹಮದಾಬಾದ್‌ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‌ನ (ಐಐಎಂ) ಪ್ರಾಧ್ಯಾಪಕರ ಗುಂಪು ಇದನ್ನು ಹುಟ್ಟು ಹಾಕಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನಲೆ, ಆರ್ಥಿಕ ವಿವರ ಮತ್ತು ಶೈಕ್ಷಣಿಕ ಹಿನ್ನೆಲೆಗೆ ಸಂಬಂಧಪಟ್ಟಂತ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು 1999ರಲ್ಲಿ ಎಡಿಆರ್ ತಂಡ ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿತ್ತು. ಇದೇ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಅಪರಾಧ, ಆರ್ಥಿಕ ಮತ್ತು ಶೈಕ್ಷಣಿಕ ಹಿನ್ನೆಲೆಯ ವಿವರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವ ಅಫಿಡವಿಟ್‌ನಲ್ಲಿ ನಮೂದಿಸಿರಬೇಕು ಎಂದು 2002ರಿಂದಲೇ ಕಡ್ಡಾಯ ಮಾಡಿತು.

2002ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಎಡಿಆರ್ ಮೊದಲ ಚುನಾವಣಾ ವೀಕ್ಷಣೆ ಮತ್ತು ವಿಶ್ಲೇಷಣೆ ನಡೆಸಿತು. ಈ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಹಿನ್ನೆಲೆಯ ಬಗ್ಗೆ ವಿವರವಾದ ಮಾಹಿತಿಯನ್ನೊಳಗೊಂಡಂತೆ ವಿಶ್ಲೇಷಣೆಯನ್ನು ಮತದಾರರಿಗೆ ನೀಡಿತು. ಉತ್ತಮ ಅಭ್ಯರ್ಥಿಯನ್ನು ಆಯ್ತೆಕೆ ಮಾಡಲು ಮತದಾರಿಗೆ ಇದು ಸಹಾಯವಾಗುತ್ತದೆ ಎನ್ನುವುದೇ ಎಡಿಆರ್‌ ಆಶಯವಾಗಿದೆ. 2002ರಿಂದಲೇ ಎಡಿಆರ್ ನ್ಯಾಶನಲ್ ಎಲೆಕ್ಷನ್ ವಾಚ್‌ ಸಹಯೋಗದೊಂದಿಗೆ ಎಲ್ಲಾ ರಾಜ್ಯ ಮತ್ತು ಸಂಸತ್ ಚುನಾವಣೆಗಳಿಗೆ ಚುನಾವಣಾ ವೀಕ್ಷಣೆ ಮತ್ತು ವಿಶ್ಲೇಷಣೆಗಳನ್ನು ನಡೆಸುತ್ತ ಬಂದಿದೆ. ಈ ಮೂಲಕ ರಾಷ್ಟ್ರದ ರಾಜಕೀಯ ಮತ್ತು ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುವ ಗುರಿಯನ್ನು ಅದು ಹೊಂದಿದೆ. ಆಡಳಿತವನ್ನು ಸುಧಾರಿಸುವುದು ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸುವುದೇ ಎಡಿಆರ್‌ನ ಪ್ರಬಲ ಉದ್ದೇಶವಾಗಿದೆ.