ಸುಪ್ರಿಂ ಕೋರ್ಟ್ ಮೌಖಿಕ ಪ್ರಶ್ನೆ: ಅಪರಾಧ ಹಿನ್ನೆಲೆಯ ವ್ಯಕ್ತಿ ರಾಜಕೀಯ ಪಕ್ಷದ ಅಧ್ಯಕ್ಷನಾಗಲು ಹೇಗೆ ಸಾಧ್ಯ?
ಸುದ್ದಿ ಸಾಗರ

ಸುಪ್ರಿಂ ಕೋರ್ಟ್ ಮೌಖಿಕ ಪ್ರಶ್ನೆ: ಅಪರಾಧ ಹಿನ್ನೆಲೆಯ ವ್ಯಕ್ತಿ ರಾಜಕೀಯ ಪಕ್ಷದ ಅಧ್ಯಕ್ಷನಾಗಲು ಹೇಗೆ ಸಾಧ್ಯ?

“ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಮತ್ತು ಭ್ರಷ್ಟಾಚಾರದಲ್ಲಿ ಭಾಗಿಯಾದ ವ್ಯಕ್ತಿ ರಾಜಕೀಯ ಪಕ್ಷವೊಂದರ ಅಧ್ಯಕ್ಷರಾಗಲು ಹೇಗೆ ಸಾಧ್ಯ?” ಎಂದು ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರಾ ಪ್ರಶ್ನಿಸಿದ್ದಾರೆ. ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಎಂಬುವರು ಸಲ್ಲಿಸಿದ್ದ ಸಾ

ರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠ, ರಾಜಕೀಯ ಪಕ್ಷಗಳ ಈ ವ್ಯವಸ್ಥೆಯನ್ನು ಸುಧಾರಿಸಲು ಕೇಂದ್ರ ಸರಕಾರ ಮತ್ತು ಚುನಾವಣಾ ಆಯೋಗ ಮುಂದಾಗಬೇಕು ಎಂದು ಸೋಮವಾರ ಮೌಖಿಕವಾಗಿ ತಿಳಿಸಿದೆ.

“ಅಪರಾಧ ಹಿನ್ನೆಲೆಯ ವ್ಯಕ್ತಿ ರಾಜಕೀಯ ಪಕ್ಷವೊಂದರ ಮುಖ್ಯಸ್ಥನಾಗಿದ್ದುಕೊಂಡು ಚುನಾವಣೆಯಲ್ಲಿ ಯಾವ ಅಭ್ಯರ್ಥಿ ಸ್ಪರ್ಧಿಸಬೇಕೆಂಬುದನ್ನು ನಿರ್ಧರಿಸುವುದು ಪ್ರಜಾಪ್ರಭುತ್ವದಲ್ಲಿ ನಿಸ್ಪಕ್ಷಪಾತ ಚುನಾವಣೆಯ ತತ್ವಕ್ಕೆ ವಿರುದ್ಧವಾದುದಲ್ಲವೇ? ಇಂತಹ ವ್ಯವಸ್ಥೆಯ ಹಿಂದೆ ಇರುವ ತರ್ಕ ಎಂಥದ್ದು?” ಎಂದು ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠದ ನೇತೃತ್ವ ವಹಿಸಿದ್ದ ಮಿಶ್ರಾ ಪ್ರಶ್ನಿಸಿದ್ದಾರೆ.

“ಶಿಕ್ಷೆಗೊಳಗಾದ ವ್ಯಕ್ತಿಯೊಬ್ಬ ರಾಜಕೀಯ ಪಕ್ಷವೊಂದರ ಪ್ರಮುಖ ಸ್ಥಾನದಲ್ಲಿ ಕುಳಿತು ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಎಷ್ಟು ಸರಿ? ಇದು ರಾಜಕೀಯದಲ್ಲಿ ಭ್ರಷ್ಟಾಚಾರ ಇರಬಾರದು ಮತ್ತು ನಿಸ್ಪಕ್ಷಪಾತ ಚುನಾವಣೆ ನಡೆಯಬೇಕು ಎಂಬ ಸುಪ್ರೀಂಕೋರ್ಟ್‌ನ ತೀರ್ಪಿಗೆ ವಿರುದ್ಧವಾದುದು” ಎಂದು ಮಿಶ್ರಾ ಕೇಂದ್ರ ಸರಕಾರ ಮತ್ತು ಚುನಾವಣಾ ಆಯೋಗವನ್ನು ಉದ್ದೇಶಿಸಿ ಹೇಳಿದ್ದಾರೆ.

“ಇದು ವೈಯಕ್ತಿಕವಾಗಿ ಸಾಧ್ಯವಾಗದ್ದನ್ನು ಸಂಘಟನೆ ಮೂಲಕ ಸಾಧಿಸಿಕೊಳ್ಳುವ ವ್ಯವಸ್ಥೆಯಂತಿದೆ. ಯಾರು ಚುನಾವಣೆಗೆ ನೇರವಾಗಿ ಸ್ಪರ್ಧಿಸಲು ಸಾಧ್ಯವಿಲ್ಲವೋ ಅವರು ರಾಜಕೀಯ ಪಕ್ಷಗಳ ಮೂಲಕ ಗುಂಪನ್ನು ರಚಿಸಿಕೊಂಡು ಪರೋಕ್ಷವಾಗಿ ಚುನಾವಣೆಯಲ್ಲಿ ಭಾಗಿಯಾಗಲು ಸದ್ಯದ ವ್ಯವಸ್ಥೆಯಲ್ಲಿ ಸಾಧ್ಯವಿದೆ. ಇದು ಕೆಲವರು ನಿರ್ದಿಷ್ಟ ಉದ್ದೇಶಕ್ಕಾಗಿ ಗುಂಪು ರಚಿಸಿಕೊಂಡು ಆಸ್ಪತ್ರೆ ಅಥವಾ ಶಾಲೆ ಸ್ಥಾಪಿಸುವ ವ್ಯವಸ್ಥೆಯಂತಿದೆ. ಆದರೆ, ಸರಕಾರಿ ವ್ಯವಸ್ಥೆಗೆ ಬಂದಾಗ ವಾಸ್ತವ ಭಿನ್ನವೇ ಆಗಿರುತ್ತದೆ” ಎಂದು ಮಿಶ್ರಾ ಹೇಳಿದ್ದಾರೆ.

ರಾಜಕೀಯ ಭ್ರಷ್ಟಾಚಾರ ತಡೆಯುವ ಉದ್ದೇಶದಿಂದ ರಾಜಕೀಯ ಪಕ್ಷಗಳಲ್ಲಿ ಅಪರಾಧ ಹಿನ್ನೆಲೆಯ ವ್ಯಕ್ತಿಗಳು ಇರದಂತೆ ನಿಯಂತ್ರಿಸಲು ಹೊಸ ಸುಧಾರಣೆ ತರುವಂತೆ ಸುಪ್ರೀಂಕೋರ್ಟ್‌ ಹೇಳಿದೆ. ಇದಕ್ಕೆ ಪ್ರತಿಕ್ರಿಯೆ ನೀಡಲು ಕಾಲಾವಕಾಶ ನೀಡಬೇಕು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್‌ ಪಿಂಕಿ ಆನಂದ್ ನ್ಯಾಯಪೀಠವನ್ನು ಕೋರಿದ್ದಾರೆ.

ಸುಧಾರಣೆಗೆ ಒತ್ತಾಯಿಸಿ ಪಿಐಎಲ್‌

“ಅಪರಾಧ ಹಿನ್ನೆಲೆಯ ವ್ಯಕ್ತಿಗಳು ರಾಜಕೀಯ ಪಕ್ಷ ಸ್ಥಾಪಿಸಿದರೆ ಅಥವಾ ರಾಜಕೀಯ ಪಕ್ಷಗಳ ಪ್ರಮುಖ ಸ್ಥಾನಗಳಲ್ಲಿದ್ದರೆ ಅಂತಹ ರಾಜಕೀಯ ಪಕ್ಷಗಳನ್ನು ಚುನಾವಣಾ ಆಯೋಗ ರದ್ದುಗೊಳಿಸಲು ಸಾಧ್ಯವೇ ಎಂಬ ಬಗ್ಗೆ ಪರಿಶೀಲಿಸಬೇಕು” ಎಂದು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಎಂಬುವರು ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಸುಪ್ರೀಂಕೋರ್ಟ್‌ ಈ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿತ್ತು.

“ಅಪರಾಧ ಹಿನ್ನೆಲೆಯ ವ್ಯಕ್ತಿಗಳು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎನ್ನುವುದಾದರೆ ಅಂತಹ ವ್ಯಕ್ತಿಗಳು ರಾಜಕೀಯ ಪಕ್ಷಗಳ ನಿರ್ಣಾಯಕ ಸ್ಥಾನಗಳಲ್ಲೂ ಇರಬಾರದು ಎಂಬ ನಿಯಮ ತರಬೇಕು” ಎಂದು ಅಶ್ವಿನಿ ಕುಮಾರ್ ಉಪಾಧ್ಯಾಯ ಅರ್ಜಿಯಲ್ಲಿ ಮನವಿ ಮಾಡಿದ್ದರು. ಮೇವು ಹಗರಣದಲ್ಲಿ ಜೈಲು ಸೇರಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್, ಶಿಕ್ಷಕರ ನೇಮಕಾತಿ ಹಗರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ರಾಷ್ಟ್ರೀಯ ಲೋಕದಳ ಪಕ್ಷದ ಮುಖ್ಯಸ್ಥ ಓಂ ಪ್ರಕಾಶ್‌ ಚೌಟಾಲ ಅವರ ಹೆಸರುಗಳನ್ನು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.