samachara
www.samachara.com
ರಾಹುಲ್ ಗಾಂಧಿ ‘ಟೆಂಪಲ್ ರನ್’ ಮತ್ತು ಸೌಹಾರ್ದತೆಯ ತಾಣ ಖ್ವಾಜಾ ಬಂದೇ ನವಾಜ್ ದರ್ಗಾ
ಸುದ್ದಿ ಸಾಗರ

ರಾಹುಲ್ ಗಾಂಧಿ ‘ಟೆಂಪಲ್ ರನ್’ ಮತ್ತು ಸೌಹಾರ್ದತೆಯ ತಾಣ ಖ್ವಾಜಾ ಬಂದೇ ನವಾಜ್ ದರ್ಗಾ

ವಿಶ್ವನಾಥ್ ಬಿ. ಎಂ

ವಿಶ್ವನಾಥ್ ಬಿ. ಎಂ

ರಾಜ್ಯದ ಮುಂಬರುವ ಚುನಾವಣೆಯನ್ನು ಬಿಜೆಪಿ ಹಿಂದುತ್ವದ ಹೆಸರಿನಲ್ಲಿ ಎದುರಿಸಲು ಮುಂದಾಗಿದೆ, ಆಡಳಿತ ಪಕ್ಷ ಕಾಂಗ್ರೆಸ್ ‘ಹಿಂದೂ ವಿರೋಧಿ’ ಎನ್ನುವ ಆರೋಪದಿಂದ ಮುಕ್ತಗೊಳ್ಳುವ ಪ್ರಯತ್ನ ನಡೆಸುತ್ತಿದೆ.

ಗುಜರಾತ್ ಚುನಾವಣೆಗಾಗಿ ಅಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅಲ್ಲಿ 'ಟೆಂಪಲ್ ರನ್' ನಡೆಸಿದ್ದರು. ಅದನ್ನೇ ಈಗ ಕರ್ನಾಟಕದಲ್ಲಿಯೂ ಮುಂದುವರೆಸುವವರಿದ್ದಾರೆ. ಇದರ ಭಾಗವಾಗಿ ಹೈದರಾಬಾದ್ ಕರ್ನಾಟಕದ ದೇವಸ್ಥಾನ, ಅನುಭವ ಮಂಟಪ, ದರ್ಗಾ ಹಾಗೂ ಮಠಕ್ಕೆ ರಾಹುಲ್ ಗಾಂಧಿ ಶನಿವಾರದಿಂದ ಸೋಮುವಾರದ ನಡುವೆ ಭೇಟಿ ನೀಡಲಿದ್ದಾರೆ.

ಇಲ್ಲಿನ ಕಲಬುರಗಿ ಜಿಲ್ಲೆಯ ಶ್ವಾಜಾ ಬಂದೇ ನವಾಜ್ ದರ್ಗಾ, ಕೊಪ್ಪಳ ಜಿಲ್ಲೆಯ ಹುಲಿಗಮ್ಮ ದೇವಸ್ಥಾನ, ಯಾದಗಿರಿ ಜಿಲ್ಲೆಯ ಗವಿ ಸಿದ್ಧೇಶ್ವರ ಮಠ, ಬೀದರ್ ಜಿಲ್ಲೆಯ ಬಸವ ಕಲ್ಯಾಣಗಳಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರವಾಸ ಮಾಡಲಿದ್ದಾರೆ.ಹೈದ್ರಾಬಾದ್ ಕರ್ನಾಟಕದಲ್ಲಿ ಒಟ್ಟು 40 ವಿಧಾನಸಭಾ ಕ್ಷೇತ್ರಗಳಿವೆ. ಇವುಗಳಲ್ಲಿ ಸದ್ಯ 23 ಸ್ಥಾನಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಈಗಿರುವ ಸ್ಥಾನಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ಮತ್ತಷ್ಟು ಹೊಸ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ವಿಜಯಿಯಾಗುವಂತೆ ನೋಡಿಕೊಳ್ಳುವುದು ರಾಹುಲ್ ಗಾಂಧಿ ಚುನಾವಣಾ ಪೂರ್ವ ಪ್ರವಾಸ ಹಿನ್ನೆಲೆ. ಹೀಗಾಗಿಯೇ, ಸಾರ್ವಜನಿಕ ಸ್ಥಳಗಳ ಜತೆಗೆ, ಮೇಲಿನ ಧಾರ್ಮಿಕ ಕ್ಷೇತ್ರಗಳಿಗೂ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ.

ದರ್ಗಾ ಹಿನ್ನೆಲೆ:

ರಾಹುಲ್ ಗಾಂಧಿ ಭೇಟಿ ನೀಡುತ್ತಿರುವ ನಾಲ್ಕು ಧಾರ್ಮಿಕ ಸ್ಥಳಗಳ ಪೈಕಿ ಕಲಬುರಗಿ ಖ್ವಾಜಾ ಬಂದೇ ನವಾಜ್ ದರ್ಗಾ ಹಲವು ಕಾರಣಗಳಿಗಾಗಿ ಗಮನ ಸೆಳೆಯುತ್ತದೆ. ಇದು ಸೂಫಿ ಪರಂಪರೆಯ ತಾಣ. ವೈವಿಧ್ಯತೆಗೆ ಮತ್ತೊಂದು ಹೆಸರೇ ಕಲಬುರಗಿ. ಈ ಹಿಂದೆ ಇದನ್ನು ಗುಲ್ಬರ್ಗಾ ಎಂದು ಕರೆಯಲಾಗುತ್ತಿತ್ತು. ಪರ್ಷಿಯನ್ ಭಾಷೆಯಲ್ಲಿ ‘ಗುಲ್’ ಎಂದರೆ ಹೂ ‘ಬರ್ಗ’ ಎಂದರೆ ಎಲೆ.  ಗುಲ್ಬರ್ಗ ಎನ್ನುವ ಈ ಹೆಸರು ಹೂವಿನೊಡನೆ ಎಲೆಯ ಇರುವಿಕೆಯನ್ನು ಸೂಚಿಸುತ್ತದೆ. ಇಲ್ಲಿನ ಧಾರ್ಮಿಕ ಜಾತ್ರಾ ಮಹೋತ್ಸವಗಳು ಜಾತಿ ಮತಗಳ ಗಡಿ ದಾಟಿ ಭಾವೈಕ್ಯತೆ ಬೆಸೆಯುವಲ್ಲಿ ಮಹತ್ವ ಪಾತ್ರ ವಹಿಸಿವೆ.

ಇಲ್ಲಿನ ಸೂಫಿ ಸಂತ ಖ್ವಾಜಾ ಬಂದೇ ನವಾಜರ ಸಮಾಧಿಯ ಮೇಲೆ ಕಟ್ಟಿರುವ ಇಂಡೋ– ಸಾರ್ಸೆನಿಕ್ ಶೈಲಿಯ ಸುಂದರ ಕಟ್ಟಡ ಭಕ್ತರ ಹೃದಯಗಳಲ್ಲಿ ಹೆಮ್ಮೆ ಮತ್ತು ಆನಂದವನ್ನುಂಟು ಮಾಡುತ್ತದೆ. ಈ ದರ್ಗಾ ಶಾಂತಿ ಮತ್ತು ಸಹಬಾಳ್ವೆಯ ಸಂಕೇತವಾಗಿದೆ.ಖ್ವಾಜಾ ಬಂದೇ ನವಾಜ ಎಂಬ ಸೂಫಿ ಸಂತನ ದರ್ಗಾಕ್ಕೆ ದಿನನಿತ್ಯವೂ ನೂರಾರು ಜನ, ಧರ್ಮ ಬೇಧ ಮರೆತು ಭೇಟಿ ಕೊಡುತ್ತಾರೆ. ಗುಲಬರ್ಗಾದಲ್ಲಿ ನೋಡಲೇಬೇಕಾದ ಎರಡು ಸ್ಥಳಗಳಲ್ಲಿ ಖ್ವಾಜಾ ಬಂದೇ ನವಾಜ ದರ್ಗಾ ಪ್ರಮುಖ (ಮತ್ತೊಂದು ಶರಣ ಬಸವೇಶ್ವರ ದೇವಾಲಯ).

ಸಾಮಾಜಿಕ ಸಾಮರಸ್ಯತೆ, ಕಾಯಕದ ಮಹತ್ವ, ಧಾರ್ಮಿಕ ಸಹಿಷ್ಣುತೆ ಮೊದಲಾದ ಸದ್ಗುಣಗಳನ್ನು ಶರಣರು, ಸೂಫಿಗಳು ಇಲ್ಲಿ ಬೋಧಿಸಿದ್ದಾರೆ. ಇಲ್ಲಿ ವರ್ಷಕ್ಕೊಮ್ಮೆ ಉರುಸು ನಡೆಯುತ್ತದೆ.ಮುಸ್ಲಿಂ ದಿನಚರಿಯ ಪ್ರಕಾರ ಜುಲ್ಖಾದಾ ಮಾಸದ 16ನೇ ದಿನ ಉರುಸ್ ಆಚರಿಸಲಾಗುತ್ತದೆ. ಉರುಸ್ ಎಂದರೆ ಇಲ್ಲಿ ದೇವ ಭಕ್ತ ತನ್ನ ಆರಾಧ್ಯದೈವದೊಂದಿಗೆ ಮಿಲನವಾಗುವ ಸಂದರ್ಭ (ದಿನ) ಎಂದು ನಂಬಲಾಗುತ್ತದೆ. ಇದಕ್ಕೆ ‘ಮಿಲನ್’ ಎಂದು ಕರೆದು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇದರಲ್ಲಿ ಸುಮಾರು ಒಂದು ಕೋಟಿ ಜನ ಜಾತಿ ಮತಗಳ ಬೇಧ ಭಾವ ಮರೆತು ಭಾಗವಹಿಸುತ್ತಾರೆ.  ಬಹುಮಂದಿ ಭಾವುಕರಾಗಿ ಮೈಮರೆತು ನರ್ತಿಸುವುದೇ ಕಣ್ಣಿಗೆ ಹಬ್ಬದಂತೆ.

ವರ್ಷಕ್ಕೊಮ್ಮೆ ನಡೆಯುವ ಇಲ್ಲಿನ ಊರುಸ್ ಉತ್ಸವ ದೇಶ ಮಾತ್ರವಲ್ಲ, ಇಡೀ ಜಗತ್ತಿನ ಗಮನ ಸೆಳೆಯುತ್ತದೆ.“ಜನರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿಯೂ ಇಲ್ಲಿ (ಖ್ವಾಜಾ ಬಂದೇ ನವಾಜ್ ದರ್ಗಾ) ಬರುತ್ತಾರೆ. ಹಲವು ಭಕ್ತರು ಬಂದೇ ನವಾಜರ ಸಮಾಧಿಗೆ ಚಾದರ್, ಹೂವಿನ ಹಾಸಿಗೆ ಹೊದಿಸಿ ಭಕ್ತಿ ಸಮರ್ಪಿಸುತ್ತಾರೆ. ಚಿರಾಗ್ (ಹಣತೆ) ಹೊತ್ತಿಸುವುದು ಇಲ್ಲಿನ ವಿಶಿಷ್ಟ ಸಂಪ್ರದಾಯ. ಎಣ್ಣೆತುಂಬಿಸಿ, ಬತ್ತಿ ಹಾಕಿದ ಹಣತೆಗಳು ದರ್ಗಾ ಆವರಣದಲ್ಲಿ ಸಿಗುತ್ತವೆ. ಹರಕ್ಕೆ ಕಟ್ಟಿಕೊಂಡವರು ಕ್ರಮವಾಗಿ 5, 11, 21, 51 ಹೀಗೆ ಚಿರಾಗ್ ಹೊತ್ತಿಸುತ್ತಾರೆ. ಇದನ್ನು ಪೂರೈಸುವುದರಿಂದ ಮಾಟ-ಮಂತ್ರದಿಂದ ಬಳಲುತ್ತಿದ್ದರೆ, ಅದು ದೂರವಾಗುತ್ತದೆ. ದುಷ್ಟಶಕ್ತಿಗಳು ಉರಿಯುವ ದೀಪದಲ್ಲಿ ಸುಟ್ಟು ಹೋಗುತ್ತವೆ. ಬಾಳಲ್ಲಿ ಬೆಳಕು ಮೂಡಲಿದೆ ಅನ್ನೋ ನಂಬಿಕೆ ಇಲ್ಲಿಗೆ ಬರುವ ಭಕ್ತರದ್ದಾಗಿದೆ,” ಎನ್ನುತ್ತಾರೆ ಕಲಬುರಗಿಯ ಶಾಂತೇಶ್.

ಇನ್ನು ಹಲವು ಭಕ್ತರು ಬಂದೇ ನವಾಜರ ಸಮಾಧಿಗೆ ಚಾದರ್, ಹೂವಿನ ಹಾಸಿಗೆ ಹೊದಿಸಿ ತಮ್ಮ ಭಕ್ತಿಯನ್ನು ವ್ಯಕ್ತಪಡಿಸುತ್ತಾರೆ . ಹಸಿರು, ಕೆಂಪು, ಕೇಸರಿ ಗಾಢವರ್ಣಗಳ ವಿವಿಧ ಬಗೆಯ ವಸ್ತ್ರ ಹಾಗೂ ಹೂ ಹೊದಿಕೆಯ ಚದರ್‌ಗಳು ನೀಡಲಾಗುತ್ತದೆ. ಗೋಧಿ ಕಣಜದಿಂದ ಮಾಡಿದ ಮಾದಲಿಯನ್ನೂ ನೈವೇದ್ಯವಾಗಿ ಸಮರ್ಪಿಸಿ, ಪ್ರಸಾದ ರೂಪಾದಲ್ಲಿ ಅದನ್ನು ಭಕ್ತರು ಸೇವಿಸುತ್ತಾರೆ. ಅಲ್ಲದೇ, 'ದೆವ್ವ-ಭೂತ ಹಿಡಿದವರು ಇಲ್ಲಿಗೆ ಬಂದು ಒಂದು ದಿನ ತಂಗಿ (ಇದ್ದು) ಹೋದರೆ ಅಂತವರ ಕಷ್ಟ ನಿವಾರಣೆ ಆಗುತ್ತಂತೆ. ಇದು ಕಳೆದ 6 ಶತಮಾನಗಳಿಗಿಂತಲೂ ಹೆಚ್ಚು ಕಾಲದಿಂದ ನಡೆದುಕೊಂಡು ಬಂದಿದೆ. ನಂಬಿ ಬಂದ ಭಕ್ತರಿಗೆ ಖ್ವಾಜಾ ಬಂದೇ ನವಾಜರು ಕೈಬಿಡುವುದಿಲ್ಲ,' ಎನ್ನುವುದು ಇಲ್ಲಿಗೆ ಬರುವ ಭಕ್ತರ ನಂಬಿಕೆಯಾಗಿದೆ.


       ಕಲಬುರಗಿಯ ಖ್ವಾಜಾ ಬಂದೇ ನವಾಜ್ ದರ್ಗಾ.
ಕಲಬುರಗಿಯ ಖ್ವಾಜಾ ಬಂದೇ ನವಾಜ್ ದರ್ಗಾ.

ಯಾರು ಈ ಖ್ವಾಜಾ ಬಂದೇ ನವಾಜ್?:

ಖ್ವಾಜಾ ಬಂದೇ ನವಾಜರ ಮೂಲ ಹೆಸರು ಸೈಯ್ಯದ್ ಮಹ್ಮದ್ ಹುಸೇನಿ. ಅವರು ಹುಟ್ಟಿದ್ದು ದೆಹಲಿಯಲ್ಲಿ. ಬಹಮನಿ ಸುಲ್ತಾನ ಫಿರೋಜ್ ಷಾ ಆಮಂತ್ರಣದ ಮೇರೆಗೆ ಗುಲ್ಬರ್ಗಕ್ಕೆ ಬಂದು 22ವರ್ಷಗಳ ಕಾಲ ನೆಲೆಸಿದರು. ಸುಮಾರು 105 ವರ್ಷಗಳ ಕಾಲ ಬದುಕಿದ ಅವರು ಜನರಿಗೆ ಸೌಹಾರ್ಧತೆ ಬಗ್ಗೆ ಬೋಧನೆ ಮಾಡಿದರು. ಸೂಫಿ ಸಂತರಾಗಿ ಪ್ರಖ್ಯಾತಿಯನ್ನು ಪಡೆದರು. ಜನರನ್ನು ಶಾಂತಿಯತ್ತ, ಪ್ರೇಮದತ್ತ ಹಾಗೂ ಸೌಹಾರ್ದತೆಯತ್ತ ಚಲಿಸುವಂತೆ ಪ್ರೇರೇಪಿಸಿದರು. ಅವರ ಸಮಾಧಿಯು ಇಂದಿಗೂ ಸಮನ್ವಯದ ಕಲ್ಪನೆಗೆ ಬದ್ಧವಾಗಿರುವ ಕ್ಷೇತ್ರವಾಗಿದೆ.

ಇಲ್ಲಿ ಬೃಹತ್ ಗಾತ್ರದ ಗ್ರಂಥಾಲಯವೂ ಇದೆ. ಅದರಲ್ಲಿ ಉರ್ದು, ಪರ್ಷಿಯನ್ ಹಾಗೂ ಅರೆಬಿಕ್ ಭಾಷೆಯ ಸುಮಾರು 10,000 ಗ್ರಂಥಗಳಿವೆ. ಖ್ವಾಜಾ ಬಂದೇ ನವಾಜ್ ಅವರನ್ನು ಮತ್ತು ಸೂಫಿ ಪರಂಪರೆಯನ್ನು ಅಧ್ಯಯನ ಮಾಡಲು ದೇಶ ವಿದೇಶದಿಂದ ಬರುವವರಿಗೆ ತತ್ವಜ್ಞಾನಿಗಳಿಗೆ ಮತ್ತು ಅಧ್ಯಯನಾಕಾಂಕ್ಷಿಗಳಿಗೆ ಪ್ರಮುಖ ಕೇಂದ್ರವಾಗಿದೆ.ಖ್ವಾಜಾ ಬಂದೇ ನವಾಜ್ ದರ್ಗಾದ ಕಟ್ಟಡ ಸುಮಾರು 600 ವರ್ಷಗಳಿಂದ ತನ್ನ ಸೌಂದರ್ಯ ಕಳೆದುಕೊಳ್ಳದೆಯೇ ನಳನಳಿಸುತ್ತಿದೆ ಎಂಬುದೇ ವಿಶೇಷ. ಇಲ್ಲಿ ಶ್ವೇತ ಶುಭ್ರ ಗುಮ್ಮಟಗಳಿವೆ. ಇವು ತುಂಬ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿವೆ. ಬಹಮನಿ ಸಾಮ್ರಾಜ್ಯದ ಹಸನ್‌ಗಂಗು ಸುಲ್ತಾನ್ ಈ ಮೂಲ ಕಟ್ಟಡವನ್ನು ನಿರ್ಮಿಸಿದರು ಎನ್ನುತ್ತವೆ ಇತಿಹಾಸದ ಪಠ್ಯಗಳು.

ಅವರ ನಂತರ ಬಂದ ಸುಲ್ತಾನರು ಇದನ್ನು ಅಭಿವೃದ್ಧಿಪಡಿಸುತ್ತ ಬಂದರು. ಈ ಬೃಹತ್ ದರ್ಗಾದಲ್ಲಿ ಭಕ್ತರ ವಸತಿ ವ್ಯವಸ್ಥೆಗಾಗಿ 100 ಕೋಣೆಗಳಿವೆ. ಗಾಢವಾದ ಬಣ್ಣಗಳನ್ನು ಒಳಾಂಗಣದ ವಿನ್ಯಾಸಕ್ಕೆ ಬಳಸಲಾಗಿದೆ.“ದರ್ಗಾಕ್ಕೆ ಭಕ್ತರು ಸಲ್ಲಿಸಿದ ಕಾಣಿಕೆ ಹಣವನ್ನು ಖಾಜಾ ಬಂದೇ ನವಾಜ್ ಶಿಕ್ಷಣ ಸಂಸ್ಥೆಯ ಉನ್ನತಿಗೆ ಬಳಸಲಾಗುತ್ತದೆ. ಈ ದರ್ಗಾದಲ್ಲಿ ಬಂದೇ ನವಾಜ್ ಸಂತರ ದರ್ಗಾ ಹಾಗೂ ಭಕ್ತರ ನಡುವೆ ಯಾವುದೇ ಮಧ್ಯವರ್ತಿಗಳಿಲ್ಲ. ಹರಕೆ, ಭಕ್ತಿ ಸಮರ್ಪಣೆಗೆ  ಯಾವ ವಿಶೇಷ ದಿನಗಳೂ ಇಲ್ಲಿಲ್ಲ. ಎಲ್ಲ ದಿನಗಳಲ್ಲೂ ದರ್ಗಾ ದರ್ಶನಕ್ಕೆ ಅವಕಾಶವಿದೆ. ಬೆಳಗಿನ ಜಾವದ 5ರಿಂದ ತಡರಾತ್ರಿ 11ರವರೆಗೆ ದರ್ಗಾ ಬಾಗಿಲು ತೆರೆದಿರುತ್ತದೆ,” ಎನ್ನುತ್ತಾರೆ ಕಲಬರುಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ವಿರುಪಾಕ್ಷ ಅಳವಂಡಿ.

ಕರ್ನಾಟಕ ಅಷ್ಟೇ ಅಲ್ಲದೇ, ಆಂಧ್ರ ಪ್ರದೇಶ, ಗುಜರಾತ್, ರಾಜಸ್ತಾನ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳು, ವಿದೇಶಗಳಿಂದಲೂ ವರ್ಷವಿಡೀ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ವಿಶ್ವದೆಲ್ಲೆಡೆಯಿಂದ ಭಕ್ತರು ಬಂದು ಸುಗಂಧ ಪರಿಮಳದೊಂದಿಗೆ ಸೇವೆ ಸಲ್ಲಿಸುತ್ತಾರೆ. ಹೀಗೆ ಜಾತಿ, ಮತ ಮತ್ತು ಗಡಿಯನ್ನು ಮೀರಿ ಈ ದರ್ಗಾ ಜನರನ್ನು ಸೆಳೆಯುತ್ತದೆ. ಜನರ ಮದ್ಯ ಪರಸ್ಪರ ಪ್ರೀತಿ, ಪ್ರೇಮ ಮತ್ತು ಸೌಹಾರ್ದ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.ಸದ್ಯ ರಾಹುಲ್ ಗಾಂಧಿ ಇಲ್ಲಿಗೆ ಭೇಟಿ ನೀಡುವ ಮೂಲಕ ಕಾಂಗ್ರೆಸ್ ಪಕ್ಷದ ಪಾಲಿಗೆ ಹೈದ್ರಬಾದ್ ಕರ್ನಾಟಕ ಉತ್ತಮ ಬೆಳೆ ನೀಡುವ ನಿರೀಕ್ಷೆಯಲ್ಲಿದ್ದಾರೆ. ಅವರ ಪ್ರವಾಸದ ಪರಿಣಾಮಗಳು ಮುಂದಿನ ವಾರದಲ್ಲಿ ನಿಚ್ಚಳವಾಗಲಿವೆ.