samachara
www.samachara.com
'ವ್ಯಾಲೆಂಟೈನ್ಸ್‌ ಡೇ ಸ್ಪೆಷಲ್':  ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್‌ಗಳಲ್ಲಿ ಪ್ರೇಮಿಗಳಿಗೆ ಪೊಲೀಸ್‌ ಕಂಪನಿ!
ಸುದ್ದಿ ಸಾಗರ

'ವ್ಯಾಲೆಂಟೈನ್ಸ್‌ ಡೇ ಸ್ಪೆಷಲ್': ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್‌ಗಳಲ್ಲಿ ಪ್ರೇಮಿಗಳಿಗೆ ಪೊಲೀಸ್‌ ಕಂಪನಿ!

ಶರತ್‌ ಶರ್ಮ ಕಲಗಾರು

ಶರತ್‌ ಶರ್ಮ ಕಲಗಾರು

ಫೆಬ್ರವರಿ 14ರಂದು ಪ್ರೇಮಿಗಳ ದಿನಾಚರಣೆಯಂದು ಕಬ್ಬನ್‌ ಪಾರ್ಕ್‌ ಮತ್ತು ಲಾಲ್‌ ಬಾಗ್‌ಗೆ ಭೇಟಿ ನೀಡುವ ಪ್ರೇಮಿಗಳಿಗೆ ರಾಜ್ಯ ಸರಕಾರ 'ಹಾಫ್‌ ನಿಷೇಧ' ಹೇರಲು ನಿರ್ಧರಿಸಿದೆ.

ಈ ಸಂಬಂಧ ಶುಕ್ರವಾರ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮತ್ತು ತೋಟಗಾರಿಕೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಡಾ. ಎಸ್‌.ಎಸ್‌. ಮಲ್ಲಿಕಾರ್ಜುನ್‌ ಸಭೆ ನಡೆಸಿದ್ದಾರೆ. ಈ ಮೂಲಕ ಪ್ರೇಮಿಗಳ 'ಏಕಾಂತ'ವನ್ನು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್‌ ಇಲಾಖೆ 'ಹೈ ಡೆಫಿನಿಷನ್‌' ಸಿಸಿಟಿವಿಯಲ್ಲಿ ನೋಡಲಿದ್ದಾರೆ. ಪ್ರೇಮಿಗಳಿಗೆ ಉದ್ಯಾನವನಗಳಲ್ಲಿ ಪೊಲೀಸರ ಕಂಪೆನಿಯೂ ಇರಲಿದೆ.

ತೋಟಗಾರಿಕಾ ಇಲಾಖೆಯ ಉನ್ನತ ಮೂಲಗಳ ಪ್ರಕಾರ ಪ್ರೇಮಿಗಳ ದಿನಾಚರಣೆ, ಅಂದರೆ ಇದೇ ಫೆಬ್ರವರಿ 14ರಂದು ನಗರದ ಕಬ್ಬನ್‌ ಪಾರ್ಕ್‌ ಮತ್ತು ಲಾಲ್‌ ಬಾಗ್‌ನಲ್ಲಿ ಸುಮಾರು 150ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ನೇಮಕ ಮಾಡಲು ಇಲಾಖೆ ಮುಂದಾಗಿದೆ. ಪ್ರೇಮಿಗಳ ಪಾರ್ಕ್‌ ಪ್ರವೇಶಕ್ಕೆ ನಿರ್ಬಂಧವಿಲ್ಲ. ಆದರೆ ಪೊಲೀಸರ ಕಣ್ಗಾವಲಿನಲ್ಲಿ ಪ್ರೀತಿಯನ್ನು ಹಂಚಿಕೊಳ್ಳಬೇಕಿದೆ. ಅದರ ಜತೆಗೆ ಇಲಾಖೆ, ಕಬ್ಬನ್‌ ಪಾರ್ಕ್‌ ಮತ್ತು ಲಾಲ್‌ ಬಾಗ್‌ನಲ್ಲಿ ತಲಾ 10 ಹೈ ಡೆಫಿನಿಷನ್‌ ಸಿಸಿಟಿವಿಗಳನ್ನು ಅಳವಡಿಸಲು ನಿರ್ಧರಿಸಿದೆ. ಅದರಲ್ಲಿ ಪ್ರೇಮಿಗಳು ಅಸಭ್ಯವಾಗಿ ವರ್ತಿಸುವುದು ಕಾಣಿಸಿದರೆ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಿದೆ. ಇಷ್ಟಕ್ಕೂ ಸಭ್ಯ ಮತ್ತು ಅಸಭ್ಯ ಪದಕ್ಕೆ ಸಾರ್ವತ್ರಿಕ ಮತ್ತು ಒಂದೇ ತೆರನಾದ ವ್ಯಾಖ್ಯಾನ ನೀಡಲು ಸಾಧ್ಯವೇ? ಆ ಬಗ್ಗೆ ಸ್ಪಷ್ಟೀಕರಣ ಲಭ್ಯವಿಲ್ಲ. "ಇಲಾಖೆಯ ಸಿಬ್ಬಂದಿಗೆ ಅಸಭ್ಯ ಅನಿಸಿದರೆ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ," ಎನ್ನುತ್ತಾರೆ ತೋಟಗಾರಿಕೆ ಇಲಾಖೆ ನಿರ್ದೇಶಕರು.

ಪ್ರೇಮಿಗಳ ದಿನಾಚರಣೆ:

ಪ್ರತಿ ಬಾರಿ ಪ್ರೇಮಿಗಳ ದಿನಾಚರಣೆ ಬಂದಾಗಲೂ ಪರ ವಿರೋಧದ ಚರ್ಚೆಗಳು ಆರಂಭವಾಗುತ್ತವೆ. ಅಸಲಿಗೆ ಅದು ಪ್ರೀತಿಸುವ ಎರಡು ಜೀವಗಳಿಗೆ ಸಂಬಂಧಿಸಿದ ಖಾಸಗಿ ವಿಚಾರ ಎಂಬ ಸಾಮಾನ್ಯ ಸೂಕ್ಷ್ಮತೆಯನ್ನೂ ಅರಿಯುವ ಪ್ರಯತ್ನ ನಡೆಯುವುದಿಲ್ಲ. ಬಲಪಂಥೀಯ ಸಂಘಟನೆಗಳು ಪ್ರೇಮಿಗಳ ದಿನಾಚರಣೆ ಭಾರತೀಯ ಸಂಪ್ರದಾಯವಲ್ಲ, ಅದಕ್ಕಾಗಿ ಆಚರಣೆ ಮಾಡಬಾರದು ಎಂಬ ವಾದ ಮಂಡಿಸುತ್ತಾರೆ. ಪ್ರಗತಿಪರ ಚಿಂತಕರು ಪ್ರೇಮಿಗಳ ದಿನವನ್ನು ಆಚರಿಸುವುದರಿಂದ ತಪ್ಪೇನು ಎಂದು ಪ್ರಶ್ನಿಸುತ್ತಾರೆ. ಅದೆಲ್ಲದರ ನಡುವೆ ಪ್ರೀತಿ, ಪ್ರೇಮ ಅರಳುವ, ಮುರುಟುವ ಪ್ರಕ್ರಿಯೆ ಮೂಲಕವೇ ಹಾದುಕೊಂಡು ಬರುತ್ತಿದೆ.

ಈ ಹಿಂದೆ ಹೊಸ ವರ್ಷದ ಆಚರಣೆಗೆ ಸನ್ನಿ ಲಿಯೋನಿ ಆಗಮನಕ್ಕೆ ನಿರ್ಬಂಧ ಹೇರಲಾಗಿತ್ತು. ಇದು ಸಾಮಾಜಿಕ ಚರ್ಚೆಯ ಕೇಂದ್ರವಾಗಿತ್ತು. ಪ್ರಗತಿಪರ ಸರಕಾರ ಎನ್ನಿಸಿಕೊಂಡು ಸಿದ್ದರಾಮಯ್ಯ ಸರಕಾರ ಈ ವಿಚಾರದಲ್ಲಿ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಒಳಪಟ್ಟಿತ್ತು. ಕೊನೆಗೆ, ಇದೇ ನೆಪದಲ್ಲಿ ಹಣ ಮಾಡಲು ಹೊರಟ ಆರೋಪವನ್ನು ಕರ್ನಾಟಕ ರಕ್ಷಣಾ ವೇದಿಕೆ ಹೊತ್ತುಕೊಂಡಿತ್ತು. 'ಇಂಡಿಯಾ ಟುಡೆ' ಈ ಕುರಿತು ಕುಟುಕು ಕಾರ್ಯಾಚರಣೆಯೊಂದನ್ನು ಬಿಡುಗಡೆ ಮಾಡಿತ್ತು.

ಇದೀಗ, ಪ್ರೇಮಿಗಳ ದಿನದಂದು, ಬೆಂಗಳೂರಿನ ಎರಡು ಬೃಹತ್ ಉದ್ಯಾನವನಗಳಿಗೆ ತೋಟಗಾರಿಕೆ ಇಲಾಖೆ ಬಾಗಶಃ ನಿರ್ಬಂಧ ಹೇರಲು ಹೊರಟಿದೆ.

ವಿಧಾನ ಪರಿಷತ್‌ ಸದಸ್ಯ ಮತ್ತು ಕಾಂಗ್ರೆಸ್‌ ಮುಖಂಡ ವಿ. ಎಸ್. ಉಗ್ರಪ್ಪ ಇಲಾಖೆಯ ಈ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಾರೆ. 'ಸಮಾಚಾರ'ದ ಜತೆ ಮಾತನಾಡಿದ ಅವರು, "ಲಾಲ್‌ ಬಾಗ್‌ ಮತ್ತು ಕಬ್ಬನ್‌ ಪಾರ್ಕ್‌ನಲ್ಲಿ ರಕ್ಷಣೆಯ ದೃಷ್ಟಿಯಿಂದ ಸಂಬಂಧಪಟ್ಟ ಇಲಾಖೆ ಮತ್ತು ಪೊಲೀಸ್‌ ಇಲಾಖೆ ಕ್ರಮ ಕೈಗೊಳ್ಳಬೇಕು ಎಂಬ ಸಾರ್ವಜನಿಕರ ಒತ್ತಾಯದ ಹಿನ್ನೆಲೆಯಲ್ಲಿ ಸಿಸಿ ಕ್ಯಾಮೆರಾ ಮತ್ತು ಪೊಲೀಸ್‌ ರಕ್ಷಣೆ ನೀಡಿರುವುದು ಜನರ ಹಿತಕ್ಕಾಗಿ ಮಾಡಲಾಗಿದೆ. ಪಾರ್ಕಿನಲ್ಲಿ ಓಡಾಡುವ ವಾಕರ್ಸ್‌ ಮತ್ತು ಹಿರಿಯ ನಾಗರಿಕರಿಗೆ ಭದ್ರತೆ ಒದಗಿಸುವ ದೃಷ್ಟಿಯಿಂದ ತೆಗೆದುಕೊಂಡಿರುವ ಕ್ರಮ. ಅದರ ಜತೆಗೆ ಪ್ರೇಮಿಗಳ ದಿನಾಚರಣೆಯ ದಿನ ಯಾವುದೇ ದುಷ್ಕೃತ್ಯಗಳು ನಡೆಯಬಾರದು ಎಂಬ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದು ಸಮಾಜಮುಖಿಯಾದ ಕ್ರಮ ಆಗಿರುತ್ತದೆ. ಇದರಿಂದ ಯಾರಿಗೂ ತೊಂದರೆ ಆಗುವುದಿಲ್ಲ," ಎಂದಿದ್ದಾರೆ.

ಮುಂದುವರೆದ ಅವರು, "ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಲು ಮತ್ತು ವಿಶ್ರಾಂತಿ ಪಡೆಯಲು ಅವಕಾಶವಿದೆ. ಆದರೆ ಮಿತಿಯನ್ನು ಮೀರಿ ಉಪದ್ರವ ಸೃಷ್ಟಿ  ಮಾಡುವುದನ್ನು ತಡೆಯುವುದಕ್ಕೆ ಈ ರೀತಿಯ ಯೋಜನೆಯನ್ನು ಬಹುಶಃ ರೂಪಿಸಿದ್ದಾರೆ. ಎಲ್ಲೆಯನ್ನು ಮೀರಿ ನಡೆದುಕೊಳ್ಳುವ ಪ್ರವೃತ್ತಿಯಿಂದ ಎಲ್ಲೋ ಒಂದು ಕಡೆ ಯುವಜನರ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ. ಅದನ್ನು ತಡೆಯಲು ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಪ್ರೇಮಿಗಳ ದಿನಾಚರಣೆ ಅವರ ವೈಯಕ್ತಿಕ ಆಚರಣೆ. ಮನೆಯಲ್ಲಿ ಆಚರಿಸುವುದು ಬೇರೆ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಇತಿಮಿತಿ ಮೀರಿ ವರ್ತಿಸುವುದು ತಪ್ಪು," ಎನ್ನುತ್ತಾರೆ ಉಗ್ರಪ್ಪ.

ಎಲ್ಲರೂ ಒಂದೇ, ಪ್ರೇಮಿಗಳು ಮಾತ್ರ ಬೇರೆ: 


       ಚಿತ್ರಗಳು ಸಾಂದರ್ಭಿಕ
ಚಿತ್ರಗಳು ಸಾಂದರ್ಭಿಕ

ರಾಜಕೀಯ ಹೋರಾಟದಲ್ಲಿ ಮುಳುಗಿರುವ ಪ್ರತಿಪಕ್ಷ ಬಿಜೆಪಿ ಕೂಡ ಪ್ರೇಮಿಗಳ ದಿನಾಚರಣೆ ದಿನ ತೋಟಗಾರಿಕೆ ಇಲಾಖೆ ತೆಗೆದುಕೊಳ್ಳಲು ಹೊರಟ ಈ ಕ್ರಮವನ್ನು ಸ್ವಾಗತಿಸುತ್ತದೆ. 'ಸಮಾಚಾರ'ದ ಜತೆ ಮಾತನಾಡಿದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸವನ್ನು ಪೊಲೀಸರು ಮಾಡಬೇಕು ಎಂದರು. "ಲಾಲ್‌ ಬಾಗ್‌ ಮತ್ತು ಕಬ್ಬನ್‌ ಪಾರ್ಕಿನಲ್ಲಿ ಯುವಕ ಅಥವಾ ಯುವತಿಯ ಮೇಲೆ ಹಲ್ಲೆಗಳಾಗುವ ಸಾಧ್ಯತೆಯಿರುತ್ತದೆ. ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿರುವುದು ಎಲ್ಲರಿಗೂ ತಿಳಿದ ವಿಚಾರ. ಪಾರ್ಕ್‌ಗಳಲ್ಲಿ ಎಷ್ಟೋ ಬಾರಿ ಯುವತಿಯರ ಜತೆ ಅಸಭ್ಯವಾಗಿ ವರ್ತಿಸಿದ ಪ್ರಕರಣಗಳು ನಡೆದಿವೆ. ಕೆಲವೊಂದು ವರದಿಯಾಗಿದೆ ಆದರೆ ಹಲವು ಬಾರಿ ಯುವತಿಯರು ಹೆದರಿಕೆಯಿಂದ ದೂರನ್ನೇ ನೀಡಿಲ್ಲ. ಜತೆಗೆ ಫೆಬ್ರವರಿ 14ರಂದು ಪ್ರೇಮಿಗಳ ದಿನಾಚರಣೆಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಮಿಗಳು ನೆರೆಯುತ್ತಾರೆ. ಹೆಚ್ಚಿನ ಪೊಲೀಸ್‌ ಭದ್ರತೆ ಹಾಕಿರುವುದು ಒಳ್ಳೆಯದು," ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತೋಟಗಾರಿಕೆ ಇಲಾಖೆ ನಿರ್ದೇಶಕ ಮಹಾಂತೇಶ್‌ ಮುಂಡಗೋಡ್‌ ತಾವು ಹೊರಡಿಸಿರುವ ಸುತ್ತೋಲೆಯ ಕುರಿತು ಸ್ಪಷ್ಟನೆ ನೀಡುವುದು ಹೀಗೆ; "ಪ್ರೇಮಿಗಳ ದಿನಾಚರಣೆಯ ದಿನ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬ ಉದ್ದೇಶದಿಂದ ಪೊಲೀಸ್‌ ಮತ್ತು ತೋಟಗಾರಿಕೆ ಇಲಾಖೆಯ ಸಿಬ್ಬಂದಿಯನ್ನು ಕಬ್ಬನ್‌ ಪಾರ್ಕ್‌ ಮತ್ತು ಲಾಲ್‌ ಬಾಗ್‌ನಲ್ಲಿ ನೇಮಿಸಲಾಗುತ್ತಿದೆ. ಇದು ಕೇವಲ ಮುಂಜಾಗೃತಾ ಕ್ರಮವಾಗಿದ್ದು, ಪ್ರೇಮಿಗಳಿಗೆ ನಿಷೇಧ ಹೇರಿಲ್ಲ. ಅಸಭ್ಯವಾಗಿ ವರ್ತಿಸುವರ ಮೇಲೆ ಕ್ರಮ ಜರುಗಿಸಲಾಗುವುದು. ಹಾಗಂತ ಇದರಿಂದ ಯಾರಿಗೂ ತೊಂದರೆ ಆಗುವುದಿಲ್ಲ," ಎಂದು ಪ್ರತಿಕ್ರಿಯಿಸಿದರು.

ಈ ಮೂಲಕ ಇದು ಸಂಪೂರ್ಣ ನಿಷೇಧ ಅಲ್ಲ, ಬದಲಿಗೆ ಕಣ್ಗಾವಲಿನ ವ್ಯವಸ್ಥೆ ಅಷ್ಟೆ ಎಂದವರು ಸಮರ್ಥನೆ ಮಾಡಿಕೊಳ್ಳುತ್ತಾರೆ.

ಸುಪ್ರೀಂ ಕೋರ್ಟ್‌ ವಕೀಲರಾದ ಕೆ.ವಿ. ಧನಂಜಯ್‌ ಪ್ರಕಾರ, ಸರಕಾರ ಸಾರ್ವಜನಿಕ ಸ್ಥಳದ ಮೇಲೆ ನಿಗಾವಹಿಬಹುದು ಮತ್ತು ಅದು ಕಾನೂನಿನಲ್ಲಿ ಸಿಂಧುವೇ ಆಗಿದೆ. ಅದರೆ, "ಭಾರತ ಒಂದು ಬಡ ರಾಷ್ಟ್ರ. ಪ್ರೇಮಿಗಳಿಗೆ ಖಾಸಗಿ ಸ್ಥಳಗಳು ಇರುವುದು ಕಡಿಮೆ. ಕಾನೂನಾತ್ಮಕವಾಗಿ ಚಿಂತಿಸುವುದಾದರೆ, ಸರಕಾರಕ್ಕೆ ಪಾರ್ಕ್‌ಗಳಲ್ಲಿ ಸಿಸಿಟಿವಿ ಮತ್ತು ಬಂದೋಬಸ್ತ್‌ ಮಾಡುವ ಹಕ್ಕಿದೆ. ನೈತಿಕವಾಗಿ ಚಿಂತಿಸಿದರೆ ಸರಕಾರದ ಕ್ರಮ ಬೇಸರ ಮೂಡಿಸುತ್ತದೆ," ಎನ್ನುತ್ತಾರೆ.

ಜನವಾದಿ ಮಹಿಳಾ ಸಂಘಟನೆಯ ಕೆ. ಎಸ್‌. ವಿಮಲಾ, ಸರಕಾರದ ಕ್ರಮವನ್ನು ತೀವ್ರವಾಗಿ ಖಂಡಿಸುತ್ತಾರೆ. " ಇಲಾಖೆ ತೆಗೆದುಕೊಂಡಿರುವ ಕ್ರಮ ತಪ್ಪು ಸಿಸಿಟಿವಿ ಮೂಲಕ ಭದ್ರತೆ ಎಂಬುದೇ ಹಾಸ್ಯಾಸ್ಪದ. ಜೊತೆಗೆ ಪ್ರೇಮಿಗಳ ದಿನಕ್ಕಾಗಿ ಎಂಬುದು ಇನ್ನೂ ಖಂಡನಾರ್ಹ. ಶ್ರಿರಾಮ ಸೇನೆಯಂಥಹ ಸಂಘಟನೆಗಳು ಭೌತಿಕವಾಗಿ ಮಾಡಿದ್ದನ್ನು ಇವರು ಕ್ಯಾಮರಾ ಕಣ್ಣುಗಳಿಂದ ಮಾಡಲು ಹೊರಟಂತಿದೆ," ಎನ್ನುತ್ತಾರೆ.

ಲಂಚಮುಕ್ತ ಕರ್ನಾಟಕ ವೇದಿಕೆಯ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ, "ಅಸಭ್ಯ ವರ್ತನೆ ಅಂದರೆ ಏನು? ಅದರ ಸ್ಪಷ್ಟ ನಿಯಮಗಳನ್ನು ಇಲಾಖೆ ಪ್ರಚುರ ಪಡಿಸಬೇಕು. ಮತ್ತು ಪ್ರೇಮಿಗಳ ದಿನಾಚರಣೆ ಆಗಲಿ ಅಥವಾ ಯಾವುದೇ ದಿನಾಚರಣೆ ಆಗಲೀ, ಬಹುತೇಕ ಜನರಿಗೆ ಮುಜುಗರ ಆಗುವಂತ ನಡವಳಿಕೆ ಸರಿಯಾದುದಲ್ಲ. ಅದೇ ಸಂದರ್ಭದಲ್ಲಿ ಪ್ರೇಮದ ಮತ್ತು ಯೌವನದ ಎಲ್ಲಾ ಬಾಹ್ಯ ಅಭಿವ್ಯಕ್ತಿಗಳು, ಅಸಭ್ಯವೂ, ಅಶ್ಲೀಲವೂ ಅಲ್ಲ. ಜನರು ಸಹ ಇದನ್ನು ತೆರೆದ ಮನಸ್ಸಿನಿಂದ ನೋಡಬೇಕು. ಪ್ರೇಮಿಗಳು ಕೇವಲ ಪ್ರೇಮಿಗಳ ದಿನಾಚರಣೆಯ ದಿನವಷ್ಟೇ ಅಲ್ಲದೇ ಸದಾ ತಮ್ಮ ನೈಜ ಪ್ರೇಮವನ್ನು ಸಂಭ್ರಮಿಸಬೇಕು ಮತ್ತು ಗೌರವಿಸಬೇಕು," ಎಂದರು.

ಸರಕಾರದ ಕ್ರಮವನ್ನು ಸ್ವಾಗತಿಸಿದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌, ಪ್ರೇಮಿಗಳ ದಿನದ ಆಚರಣೆಯನ್ನು ಎಂದಿನಂತೆ ವಿರೋಧಿಸಿದ್ದಾರೆ. "ಒಂದು ದೃಷ್ಟಿಯಿಂದ ಒಳ್ಳೆಯದೇ ಆಯಿತು. ಯಾವುದೋ ಸ್ವೇಚ್ಚಾಚಾರ ಮತ್ತು ಅಸಭ್ಯತೆ, ಅನೈತಿಕತೆಗೆ ಅವಕಾಶ ಕೊಡಬಾರದು. ಅದಕ್ಕಾಗಿ ಸರಕಾರವೇ ಚಿಂತಿಸಿ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ. ಪ್ರೇಮಿಗಳ ದಿನಾಚರಣೆಯನ್ನು ನಾವು ಒಪ್ಪುವುದೇ ಇಲ್ಲ. ಬೆಳಗಾವಿ ಧಾರವಾಡ, ಬಳ್ಳಾರಿ ಮುಂತಾದ ಭಾಗದಲ್ಲಿ ಮಾತಾಪಿತೃಗಳ ಪೂಜೆ ಮಾಡುವ ದಿನವನ್ನಾಗಿ ಫೆಬ್ರವರಿ 14ನ್ನು ಆಚರಿಸುವ ಕೆಲಸ ಮಾಡುತ್ತಿದ್ದೇವೆ," ಎನ್ನುತ್ತಾರೆ.

ಯಾವುದು ಅಸಭ್ಯ?:


       ಚಿತ್ರ ಕೃಪೆ: ಬೆಂಗಳೂರು ಮಿರರ್‌
ಚಿತ್ರ ಕೃಪೆ: ಬೆಂಗಳೂರು ಮಿರರ್‌

ಸಾರ್ವಜನಿಕ ಸ್ಥಳಗಳಲ್ಲಿ ಚುಂಬಿಸುವುದು, ಆಲಂಗಿಸುವುದು, ಅವಾಚ್ಯ ಶಬ್ದಗಳ ಬಳಕೆ ಮಾಡುವುದು, ಖಾಸಗಿ ಅಂಗಾಗಳನ್ನು ಮುಟ್ಟುವುದು ಅಥವಾ ಚುಂಬಿಸುವುದನ್ನು ಸೇರಿದಂತೆ ಇನ್ನೂ ಕೆಲ ಅಂಶಗಳನ್ನು ಅಶ್ಲೀಲ ಎಂದು ಕರೆಯಲಾಗುತ್ತದೆ. ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಈ ಮೇಲಿನ ಘಟನೆಗಳಾದಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 294ರ ಅಡಿಯಲ್ಲಿ ಕ್ರಮ ಕೈಗೊಳ್ಳಬಹುದು. ಆದರೆ ಪ್ರಜ್ಞಾವಂತ ವರ್ಗವೊಂದು ಇದನ್ನು ವಿರೋಧಿಸುತ್ತಲೇ ಬಂದಿದೆ. ಸಾರ್ವಜನಿಕವಾಗಿ ಪ್ರೇಮಿಗಳು ಮುತ್ತಿಡುವುದು, ಆಲಂಗಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯವೇ ಹೊರತು, ಅಶ್ಲೀಲ ಅಥವಾ ಅಸಭ್ಯವಲ್ಲ ಎಂಬ ವಾದವಿದೆ.

ಕೋರಾ ಜಾಲತಾಣದಲ್ಲಿ ರಿಷಿ ಸೆಹಗಲ್‌ ಎಂಬ ವಕೀಲರೊಬ್ಬರು ಅಸಭ್ಯತೆ ಮತ್ತು ಸಾರ್ವಜನಿಕ ಸ್ಥಳದಲ್ಲಿ ಪ್ರೇಮಿಗಳಿಗೆ ಹೇರಿರುವ ನಿರ್ಬಂಧದ ಬಗ್ಗೆ ಕೇಳಿರುವ ಪ್ರಶ್ನೆಯೊಂದಕ್ಕೆ ಹೀಗೆ ಉತ್ತರಿಸುತ್ತಾರೆ. "ಸಂವಿಧಾನದ ವಿಧಿ 19 (1)ರ ಅನ್ವಯ ಸಾರ್ವಜನಿಕ ಸ್ಥಳಗಳಲ್ಲಿ ಚುಂಬಿಸುವುದು ಮತ್ತು ಆಲಿಂಗನ ಮಾಡುವುದು ಪ್ರತಿಯೊಬ್ಬರ ಹಕ್ಕಾಗಿದೆ. ಅದು ವ್ಯಕ್ತಿಯ ಖಾಸಗಿ ವಿಚಾರ ಮತ್ತು ಸಾಂವಿಧಾನಿಕ ಹಕ್ಕು. ಪ್ರೇಮಿಗಳು ಏನು ಮಾಡುತ್ತಿದ್ದಾರೆ ಎಂಬುದನ್ನು ಮೂರನೇ ವ್ಯಕ್ತಿ ನೋಡುವುದು ಕಾನೂನಿನಲ್ಲಿ ಅಪರಾಧ. ನೈತಿಕ ಪೊಲೀಸ್‌ ಗಿರಿ ಮಾಡುವುದು ಕೂಡ ದೊಡ್ಡ ಅಪರಾಧ".

ಈ ಬಗ್ಗೆ ಕಾನೂನು ಸಮರಗಳೂ ಕೂಡ ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿದ್ದು, ಅಸಭ್ಯತೆಯ ವ್ಯಾಖ್ಯಾನ ಮತ್ತು ಏಕಾಂತದ ಸ್ವಚ್ಛಂದದ ವಾತಾವರಣದ ಚರ್ಚೆಗೆ ತಾರ್ಕಿಕ ಅಂತ್ಯ ಸಿಗಬೇಕಿದೆ.

ಸದ್ಯದ ಬೆಳವಣಿಗೆಯನ್ನು ಗಮನಿಸಿದಾಗ 'ಪ್ರೇಮಿಗಳು ವರ್ಸಸ್‌ ವ್ಯವಸ್ಥೆ' ಎಂಬ ವಾತಾವರಣ ಸೃಷ್ಟಿಯಾಗಿರುವುದು ಕಾಣುತ್ತದೆ. ಪ್ರೇಮಿಗಳ ಏಕಾಂತಕ್ಕೆ ಧಕ್ಕೆ ತರಲು ಮತ್ತು ಖಾಸಗೀಯತೆಯ ಹಕ್ಕನ್ನು ಹರಣ ಮಾಡಲು ಪಕ್ಷಾತೀತವಾಗಿ ಕಾಂಗ್ರೆಸ್‌, ಬಿಜೆಪಿ, ಹಿಂದುತ್ವವಾದಿ ಸಂಘಟನೆಗಳು ಟೊಂಕ ಕಟ್ಟಿ ನಿಂತಿದ್ದಾರೆ. ಇದು ನಡೆಯುತ್ತಿರುವುದು ಪ್ರಗತಿಪರ ಎನ್ನಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಆಡಳಿತದಲ್ಲಿ.