ಎನ್‌ಡಿಟಿವಿ ಸಿಎಂ ಸಂದರ್ಶನ: 'ನಾನು ದೇವರನ್ನು ನಂಬುತ್ತೇನೆ...' ಎಂದವರು ಸಿದ್ದರಾಮಯ್ಯ!
ಸುದ್ದಿ ಸಾಗರ

ಎನ್‌ಡಿಟಿವಿ ಸಿಎಂ ಸಂದರ್ಶನ: 'ನಾನು ದೇವರನ್ನು ನಂಬುತ್ತೇನೆ...' ಎಂದವರು ಸಿದ್ದರಾಮಯ್ಯ!

ಇದು ಚುನಾವಣೆಗೂ ಮುನ್ನ ರಾಷ್ಟ್ರೀಯ ವಾಹಿನಿಯೊಂದು ನಡೆಸಿದ ಸಂದರ್ಶನದ ಸಂಪೂರ್ಣ ಮಾಹಿತಿ. ಮುಂಬರುವ ಕರ್ನಾಟಕ ವಿಧಾನಸಸಭಾ ಚುನಾವಣೆಯನ್ನು ಎರಡೂ ರಾಷ್ಟ್ರೀಯ ಪಕ್ಷಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗೆ ಈ ಚುನಾವಣೆಯ ಗೆಲುವು ಅನಿವಾರ್ಯ ಹಾಗೂ ಅಗತ್ಯ ಕೂಡ. ಬಿಜೆಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರನ್ನೇ ಮುಂದಿಡಲು ತೀರ್ಮಾನ ತೆಗೆದುಕೊಂಡಿದೆ. ಕಾಂಗ್ರೆಸ್ ಪಕ್ಷದಲ್ಲಿ ಹಲವು ಮುಖ್ಯಮಂತ್ರಿ ಆಕಾಂಕ್ಷಿಗಳಿದ್ದರೂ, ಸಿಎಂ ಸಿದ್ದರಾಮಯ್ಯ ಅವರೇ, ಚುನಾವಣೆಯ ಮುಂಚೂಣಿ ನಾಯಕರಾಗಲಿದ್ದಾರೆ. ಅಂತಹದೊಂದು ಬೆಳವಣಿಗೆಯನ್ನು ಮಂಗಳವಾರ ಎನ್‌ಡಿಟಿವಿಯಲ್ಲಿ ಪ್ರಸಾರವಾದ ಸಂದರ್ಶನ ಕೂಡ ನಿರೂಪಿಸಿದೆ.

ಇವತ್ತಿಗೆ ಇಡೀ ದೇಶದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವೈಯಕ್ತಿಕ ಮಟ್ಟದಲ್ಲಿ ಟೀಕೆಗಳನ್ನು ಮಾಡುತ್ತಿರುವ ಏಕೈಕ ರಾಜಕಾರಣಿ ಎಂದರೆ ಸಿದ್ದರಾಮಯ್ಯ. ತಮ್ಮ ಎಂದಿನ ಗ್ರಾಮೀಣ ಸೊಗಡಿನ, ಗಡಸು ದನಿಯಲ್ಲಿ ಸಿದ್ದರಾಮಯ್ಯ ಇತ್ತೀಚೆಗೆ ಕೊಂಚ ಹೆಚ್ಚಾಗಿಯೇ ಬಿಜೆಪಿಯ ಮುಂಚೂಣಿ ಜೋಡಿಯನ್ನು ಕಾಲೆಳೆಯುತ್ತಿದ್ದಾರೆ. ಇದರ ಜತೆಗೆ, ಬಿಜೆಪಿಯ ಹಿಂದುತ್ವ ನೀತಿಯ ರಾಜಕಾರಣಕ್ಕೆ ತಮ್ಮದೇ ಪ್ರತಿತಂತ್ರವನ್ನೂ ಹೆಣೆಯುತ್ತಿದ್ದಾರೆ. ಇವೆಲ್ಲವೂ ಎನ್‌ಡಿಟಿವಿ ಸಂದರ್ಶನದಲ್ಲಿ ಮರುಕಳಿಸಿದೆ. ರಾಜ್ಯದಲ್ಲಿ ಕಳೆದ ಐದು ವರ್ಷಗಳ ಕಾಂಗ್ರೆಸ್ ಆಡಳಿತ, ಬಿಜೆಪಿಯ ಹಿಂದುತ್ವದ ರಾಜಕಾರಣ, ಮುಂಬರುವ ವಿಧಾನ ಸಭಾ ಚುನಾವಣೆ, 10 ಪರ್ಸೆಂಟ್ ಸರಕಾರ ಎಂಬ ಟೀಕೆಗೆ ಕಾರಣವಾದ ಹೌಸಿಂಗ್ ಸ್ಕ್ಯಾಮ್, ಸ್ಟೀಲ್ ಬ್ರಿಡ್ಜ್ ಮತ್ತಿತರ ವಿಷಯಗಳ ಕುರಿತು ಸಂದರ್ಶಕಿ, ಎನ್‌ಡಿಟಿವಿ ಪತ್ರಕರ್ತೆ ಸುನೇತ್ರಾ ಚೌಧರಿ ಪ್ರಶ್ನೆಗಳನ್ನು ಮುಂದಿಡುತ್ತಾರೆ. ಅದಕ್ಕೆ ಸಿಎಂ ಸಿದ್ದರಾಮಯ್ಯ ಎಂದಿನಂತೆ ಖಡಕ್  ಶೈಲಿಯಲ್ಲಿಯೇ ಉತ್ತರಿಸಿದ್ದಾರೆ.

ಸಂದರ್ಶನದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು? ಇಲ್ಲಿದೆ ಪೂರ್ಣಪಾಠ…

ಸುನೇತ್ರಾ ಚೌಧರಿ

: ಬಿಜೆಪಿಯು 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ‘ಕಾಂಗ್ರೆಸ್ ಮುಕ್ತ ಭಾರತ’ ಮಾಡುತ್ತೇವೆ ಎನ್ನುತ್ತಿದ್ದಾರೆ. ಇತ್ತೀಚೆಗೆ ಈಶಾನ್ಯ ಭಾರತದಲ್ಲಿ ನಡೆದ ಚುನಾವಣೆಗಳನ್ನು ಗಮನಿಸಿದಾಗ ನಿಜ ಎನಿಸುತ್ತದೆ. ಈಗ ಅವರು ದಕ್ಷಿಣ ಭಾರತಕ್ಕೆ ಲಗ್ಗೆ ಇಟ್ಟು, ಕರ್ನಾಟಕವನ್ನು ಟಾರ್ಗೆಟ್ ಮಾಡುತ್ತಿದ್ದಾರೆಯೇ? ಇದರಿಂದ ನೀವು ಒತ್ತಡವನ್ನು ಅನುಭವಿಸುತ್ತಿದ್ದೀರಾ?

ಸಿದ್ದರಾಮಯ್ಯ

: ಇಲ್ಲ. ಅದರಿಂದ ನಾನು ಯಾವುದೇ ಒತ್ತಡವನ್ನು ಅನುಭವಿಸುತ್ತಿಲ್ಲ. ಈ ಐದು ವರ್ಷಗಳಲ್ಲಿ ನಾವು ಜನರ ನಿರೀಕ್ಷೆಗಳನ್ನು ಸಾಕಷ್ಟು ಪೂರೈಸಿದ್ದೇವೆ. ರಾಜ್ಯದ ಜನರು ನಮಗೆ ಆಶೀರ್ವಾದ ಮಾಡುತ್ತಾರೆ ಎಂಬ ಭರವಸೆ ಖಂಡಿತ ಇದೆ. ನಾವೇ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ. ಹಾಗಾಗಿ ನನಗೆ ಯಾವುದೇ ಟೆನ್ಷನ್‌ಗಳು ಮತ್ತು ಭಯವೂ ಇಲ್ಲ.

ಸುನೇತ್ರಾ ಚೌಧರಿ

: ‘ನಾಸ್ತಿಕ ಮುಖ್ಯಮಂತ್ರಿ’ ಅಂತ ನಿಮ್ಮನ್ನು ಬಿಂಭಿಸಲಾಗಿದೆ. ನೀವು ಹೇಗೆ ಹಿಂದುತ್ವದ ಪರವಾದ ಅಭಿಯಾನ ಮಾಡಲು ಸಾಧ್ಯ? ಬಿಜೆಪಿಗೆ ಹಿಂದುತ್ವದ ‘ಸ್ಟಾರ್ ಕ್ಯಾಂಪೇನರ್’ ಯೋಗಿ ಆದಿತ್ಯನಾಥ್  ಇದ್ದಾರೆ. ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿಯು ದೇಶದಾದ್ಯಂತ ಜನಪ್ರಿಯತೆಯನ್ನೂ ಪಡೆದಿದ್ದಾರೆ.

ಸಿದ್ದರಾಮಯ್ಯ

: ಕಳೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಜನಪ್ರಿಯರಾಗಿದ್ದರು ನಿಜ, ಆದರೆ ಅವರ ಜನಪ್ರಿಯತೆ ಇವತ್ತಿಗೆ ಇಲ್ಲ. ಅವರ ಜನಪ್ರಿಯತೆ ಬರುಬರುತ್ತ ಕಡಿಮೆಯಾಗುತ್ತ ಹೋಗುತ್ತಿದೆ. ರಾಜಸ್ಥಾನದಲ್ಲಿನ ಉಪಚುನಾವಣೆಯ ಫಲಿತಾಂಶದಿಂದ ಇದು ಸಾಭೀತಾಗಿದೆ. ಈಗ ಮೋದಿಯವರೇ ಪ್ರಧಾನಿಯಾಗಿದ್ದರೂ, ವಸುಂದರಾ ರಾಜೇ ರಾಜಸ್ಥಾನದ ಮುಖ್ಯಮಂತ್ರಿಯಾಗಿದ್ದರೂ, ಅವರು ರಾಜಸ್ಥಾನದ ಉಪಚುನಾವಣೆಯಲ್ಲಿ ಸೋತಿದ್ದಾರೆ. ಮೋದಿಯವರ ಜನಪ್ರಿಯತೆ ಕ್ಷೀಣಿಸುತ್ತಿದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನೂ ಒಳಗೊಂಡಂತೆ ಬಿಜೆಪಿಯವರು ಹುಸಿ ಹಿಂದೂಗಳು. ಹಿಂದುತ್ವ ದ್ವೇಷವನ್ನು ಭಿತ್ತುವುದನ್ನು, ವಿಭಜನೆ ರಾಜಕಾರಣವನ್ನು ಮತ್ತು ಇತರ ಧರ್ಮದವರನ್ನು ದ್ವೇಷಿಸುವವುದನ್ನು ಯಾವತ್ತೂ ಬೋಧಿಸಿಲ್ಲ. ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ‘ಹಿಂದುತ್ವ’ದ ಹೆಸರಿನಲ್ಲಿನ ರಾಜಕಾರಣ ಕೆಲಸ ಮಾಡುವುದಿಲ್ಲ. ಯಾಕೆಂದರೆ ಕರ್ನಾಟಕ ಅತ್ಯಂತ ಭಿನ್ನ ರಾಜ್ಯ. ಕರ್ನಾಟಕದ ಮತದಾರರು ವಿವೇಚನೆಯುಳ್ಳವರಾಗಿದ್ದಾರೆ. ಅಷ್ಟೇ ಅಲ್ಲದೇ, 12ನೇ ಶತಮಾನದ ಸಾಮಾಜಿಕ ಕ್ರಾಂತಿಕಾರಿ ಬಸವಣ್ಣ ಅವರ ಭೂಮಿಯಿದು. ಹಾಗಾಗಿ ಬಿಜೆಪಿಯ ವಿಭಜನೆಯ ರಾಜಕೀಯ ಇಲ್ಲಿ ನಡೆಯುವುದಿಲ್ಲ. ನಾವು ಸಾಮಾಜಿಕ ನ್ಯಾಯ, ಸಮಾನತೆಗಾಗಿ ಕೆಲಸ ಮಾಡಿದ್ದೇವೆ. ಇದು ಕಾಂಗ್ರೆಸ್‌ಗೆ ಸಹಾಯ ಮಾಡುತ್ತವೆ.

ಸುನೇತ್ರಾ ಚೌಧರಿ

: ‘ಹಿಂದುತ್ವ’ದ ವಿರುದ್ಧ ದೊಡ್ಡ ಅಸ್ತ್ರವನ್ನಾಗಿ ‘ಕನ್ನಡ ಅಸ್ಮಿತೆ’ಯನ್ನು ನೀವು ಬಳಸುತ್ತಿದ್ದೀರೀ ಅಲ್ಲವೇ?

ಸಿದ್ದರಾಮಯ್ಯ

: ಹೌದು. ನಾನು ಕನ್ನಡಿಗ. ಕನ್ನಡವನ್ನು ಮತ್ತು ಕನ್ನಡ ನೆಲವನ್ನು ನಾನು ಪ್ರೀತಿಸುತ್ತೇನೆ. ಕನ್ನಡಿಗನಾಗಿರುವುದಕ್ಕೆ ನನಗೆ ಹೆಮ್ಮೆಯಿದೆ. ಆದರೆ ನಾನು ಒಟ್ಟರೆಯಾಗಿ ಹಿಂದಿ ಅಥವಾ ಯಾವುದೇ ಭಾಷೆಯನ್ನು ವಿರೋಧಿಸುವುದಿಲ್ಲ.  ಆದರೆ ಕನ್ನಡಕ್ಕೆ ಪ್ರಮುಖ್ಯತೆ ಇರಬೇಕು ಎಂದು ಬಯಸುತ್ತೇನೆ. ಸಿಬಿಎಸ್‌ಸಿ ಶಾಲೆಯಲ್ಲಿ ಕನ್ನಡ ಕಡ್ಡಾಯ ಮಾಡಿದ್ದು; ಅವರೂ ಕನ್ನಡ ಕಲಿಯಬೇಕೆಂದು. ನಾವು ಕನ್ನಡದ ಪರ ಇದ್ದೇವೆ. ಅದರಲ್ಲಿ ಯಾವುದೇ ಸಂದೇಹವಿಲ್ಲ.

ಸುನೇತ್ರಾ ಚೌಧರಿ

: ‘ಸಿಎಂ ಸಿದ್ದರಾಮಯ್ಯ ನಾಸ್ತಿಕರು. ಹಾಗಾಗಿ ದೇವರನ್ನು ನಂಬುವುದಿಲ್ಲ,’ ಎನ್ನುತ್ತಾರೆ. ಇದು ನಿಜವೇ?

ಸಿದ್ದರಾಮಯ್ಯ

: ಇಲ್ಲ, ನಾನು ದೇವರನ್ನು ನಂಬುತ್ತೇನೆ. ನನ್ನ ಕ್ಷೇತ್ರದಲ್ಲಿನ ದೇವಸ್ಥಾನಗಳಿಗೆ ಹೋಗುತ್ತೇನೆ. ಮೈಸೂರಿನ ಚಾಮುಂಡಿ ದೇವಸ್ಥಾನಕ್ಕೂ ಭೇಟಿ ನೀಡಿದ್ದೇನೆ. ಆದರೆ ಪ್ರತಿದಿನವೂ ನಾವು ದೇವಸ್ಥಾನಕ್ಕೆ ಹೋಗಲೇಬೇಕು ಎಂದೇನೂ ಇಲ್ಲ. ದೇವರು ನಮ್ಮಲ್ಲಿಯೇ ಇದ್ದಾನೆ.  ಜನರಿಗೆ ಒಳ್ಳೆಯದನ್ನು ಮಾಡುವುದೇ ದೇವರು ಎಂದು ನಾನು ಬಲವಾಗಿ ನಂಬಿದ್ದೇನೆ.

ಸುನೇತ್ರಾ ಚೌಧರಿ

: ರಾಹುಲ್ ಗಾಂಧಿ ಕರ್ನಾಟಕದ ಬಹುತೇಕ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರಲ್ಲ?

ಸಿದ್ದರಾಮಯ್ಯ

: ರಾಹುಲ್ ಗಾಂಧಿಯವರು ಇದೇ ಮೊದಲ ಬಾರಿಗೆ ಏನೂ ದೇವಸ್ಥಾನಕ್ಕೆ ಹೋಗುತ್ತಿಲ್ಲ. ಅವರು ಈ ಮೊದಲು ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಆದರೆ ಚುನಾವಣೆಯ ಕಾರಣದಿಂದ ಅದನ್ನು ದೊಡ್ಡ ವಿಷಯವನ್ನಾಗಿ ಮಾಡಿದರು. ನಾನು ದೇವಸ್ಥಾನ, ಮಸೀದಿ ಮತ್ತು ಚರ್ಚ್ ಎಲ್ಲದಕ್ಕೂ ಹೋಗುತ್ತೇನೆ. ನಾನು ‘ಮಾನವೀಯತೆ ಇರುವ ಹಿಂದೂ’, ಆದರೆ ಅವರು (ಬಿಜೆಪಿಯವರು) ‘ಮಾನವೀಯತೆ ಇಲ್ಲದ ಹಿಂದೂಗಳು’. ಮನುಷ್ಯರು ಅಂತ ನೋಡಿ ನಾನು ಎಲ್ಲರನ್ನೂ ಪ್ರೀತಿಸುತ್ತೇನೆ.

ಸುನೇತ್ರಾ ಚೌಧರಿ

: ಸಿದ್ದರಾಮಯ್ಯ ಅವರ  ಆಡಳಿತದಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗಿವೆ. ಇದು ನಿಮ್ಮ ಸರಕಾರಕ್ಕೆ ತೊಂದರೆಯಲ್ಲವೇ?

ಸಿದ್ದರಾಮಯ್ಯ

: 16 ವರ್ಷಗಳಲ್ಲಿ 13 ವರ್ಷಗಳ ಕಾಲ ಬರಗಾಲ ಕರ್ನಾಟಕಕ್ಕೆ ಬಂದಿದೆ. 2015-16 ಮತ್ತು 2016-17 ಸಾಲಿನಲ್ಲಿ ದೊಡ್ಡ ಮಟ್ಟದ ಬೀಕರ ಬರಗಾಲ ಎದುರಾಗಿತ್ತು. ಯಾವುದೇ ಆತ್ಮಹತ್ಯೆಗಳೇ ಆಗಿಲ್ಲ ಎಂದು ನಾನು ಹೇಳುವುದಿಲ್ಲ. ಈ ಅವಧಿಯಲ್ಲಿ ಕೆಲವು ಆತ್ಮಹತ್ಯೆಗಳಾಗಿವೆ. ಆದರೆ 2017-18ರ ಸಾಲಿನಲ್ಲಿ ಇದು ನಿಯಂತ್ರಣಕ್ಕೆ ಬಂದಿದೆ.

ಸುನೇತ್ರಾ ಚೌಧರಿ

: ಹೌಸಿಂಗ್ ಸ್ಕ್ಯಾಮ್ ಮತ್ತು ಕಾಂಗ್ರೆಸ್ ನಾಯಕರ ಮೇಲೆ ಐಟಿ ರೈಡ್ ಕುರಿತು ನಿಮ್ಮ ಪ್ರತಿಕ್ರಿಯೆ?

ಸಿದ್ದರಾಮಯ್ಯ

: ಐಟಿ ರೈಡ್ ಆಗಿದೆ ಅಂದರೆ ಅವರು ಭ್ರಷ್ಟರಾಗಿದ್ದಾರೆ ಎಂದಲ್ಲ. ನಮ್ಮ ಪಕ್ಷದ ನಾಯಕರು ಭ್ರಷ್ಟರು ಎಂದು ಐಟಿ ಇಲಾಖೆ ಎಲ್ಲಿಯೂ ಯಾವುದೇ ಹೇಳಿಕೆ ಕೊಟ್ಟಿಲ್ಲ. ಬಿಜೆಪಿಯುವರು ಸುಮ್ಮನೇ ಆರೋಪ ಮಾಡುತ್ತಾರೆ. ಆದರೆ ಆರೋಪವನ್ನು ಸಾಭೀತುಪಡಿಸಲು ಅವರು ವಿಫಲರಾಗಿದ್ದಾರೆ. 5 ವರ್ಷಗಳಲ್ಲಿ ಯಾವುದೇ ಹಗರಣ ನಮ್ಮ ಸರಕಾರದಲ್ಲಿ ನಡೆದಿಲ್ಲ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೊದಿಯೂ ನಮ್ಮ ಸರಕಾರದ ಮೇಲೆ ಸುಳ್ಳು ಆರೋಪವನ್ನು ಮಾಡಿದ್ದಾರೆ. ಹೌಸಿಂಗ್ ಸ್ಕ್ಯಾಮ್ ಬಗ್ಗೆ ದಾಖಲೆ ಇದ್ದರೆ ತೋರಿಸಲಿ, ಅವರು(ಬಿಜೆಪಿ) ನಮ್ಮ ವಿರೋಧ ಪಕ್ಷದವರು, ಹಾಗಾಗಿ ಈ ಥರಹದ ಹೇಳಿಕೆಗಳನ್ನು ಮಾಡುತ್ತಾರೆ ಅಷ್ಟೇ.

ಸುನೇತ್ರಾ ಚೌಧರಿ

: ‘ಸ್ಟೀಲ್ ಬ್ರಿಡ್ಜ್’ ನಿರ್ಮಾಣಕ್ಕೆ ಸ್ಥಳೀಯರ ವಿರೋಧವಿದೆ. ಭ್ರಷ್ಟಾಚಾರವೂ ನಡೆದಿದೆ ಎನ್ನುತ್ತಿದೆ ಬಿಜೆಪಿ?

ಸಿದ್ದರಾಮಯ್ಯ

: ‘ಸ್ಟೀಲ್ ಬ್ರಿಡ್ಜ್’ ನಿರ್ಮಾಣದ ಯೋಜನೆ ಬಿಜೆಪಿ ಸರಕಾರ ಇದ್ದಾಗಲೇ ಪ್ರಸ್ತಾವ ಮಾಡಿದ್ದು. ನಾವು ಇದನ್ನು ಜಾರಿಯೂ ಮಾಡಿಲ್ಲ. ಆದರೆ ಟೆಂಡರ್ ಮಾತ್ರ ಕರೆದಿದ್ದೇವೆ. ಸ್ಟೀಲ್ ಬ್ರಿಡ್ಜ್ ನಿರ್ಮಾಣದ ಕುರಿತು ಎರಡು ಗುಂಪುಗಳಿವೆ. ಅದರಲ್ಲಿ ಒಂದು ಗುಂಪು ಸ್ಟೀಲ್ ಬ್ರಿಡ್ಜ್ ನಿರ್ಮಾಣದ ವಿರುದ್ಧವಿದೆ. ಮತ್ತೊಂದು ನಿರ್ಮಾಣದ ಪರವಿದೆ. ಈ ವಿಷಯದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ತಡೆ ನೀಡಿದೆ. ಹಾಗಾಗಿ, ನಾವು ಅದನ್ನು ಕೈಬಿಟ್ಟಿದ್ದೇವೆ. ಇಲ್ಲಿ ಭ್ರಷ್ಟಾಚಾರದ ವಿಷಯವೇನಾದರೂ ಎಲ್ಲಿದೆ?

ಸುನೇತ್ರಾ ಚೌಧರಿ:

ಬೆಳ್ಳಂದೂರ ಕೆರೆಯಲ್ಲಿ ಯಾವಾಗಲೂ ಬೆಂಕಿ ಕಾಣಿಸಿಕೊಳ್ಳುತ್ತದೆ. ಈ ಕುರಿತು ನಿಮ್ಮ ಸರಕಾರ ಏನು ಕ್ರಮ ಕೈಗೊಂಡಿದೆ?

ಸಿದ್ದರಾಮಯ್ಯ:

ಹೌದು, ಅಲ್ಲಿ ಕೆಲವೊಂದಿಷ್ಟು ಸಮಸ್ಯೆ ಇದೆ. ಅದನ್ನು ಸ್ವಚ್ಛಗೊಳಿಸಿ, ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದ್ದೇವೆ.

ಸುನೇತ್ರಾ ಚೌಧರಿ

: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಅವರ ಮಕ್ಕಳ ಹೆಸರನ್ನು ನೋಡಿದಾಗ ಕಾಂಗ್ರೆಸ್ ಕುಟುಂಬ ರಾಜಕಾರಣ ಮಾಡುತ್ತಿದೆ ಎನಿಸುತ್ತಿದೆ. ಇದು ಬಿಜೆಪಿಯವರ ಟೀಕೆಗೆ ಅಸ್ತ್ರವಾದಂತಲ್ಲವೇ?

ಸಿದ್ದರಾಮಯ್ಯ

: ನನ್ನ ಮಗನೂ ರಾಜಕೀಯದಲ್ಲಿ ಸಕ್ರಿಯನಾಗಿದ್ದಾನೆ. ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾನೆ. ಜನರು ಅವನ ಹೆಸರನ್ನು ಹೇಳಿ ಚುನಾವಣೆಗೆ ನಿಲ್ಲಿಸುವಂತೆ ಮಾಡಿದರು. ಹಾಗಾಗಿ ಆತ ರಾಜಕೀಯದಲ್ಲಿದ್ದಾನೆ. ಜನರೇ ಹೀಗೆ ಹೇಳಿ ಒಪ್ಪಿಕೊಂಡರೆ ಯಾವುದೇ ಸಮಸ್ಯೆಯೇ ಇಲ್ಲ.

ಸುನೇತ್ರಾ ಚೌಧರಿ

: ಬಿಜೆಪಿಯವರು ನಿಮ್ಮ ವಾಚ್ ಮೇಲೆಯೂ ತುಂಬ ಟೀಕೆಗಳನ್ನು ಮಾಡಿದರಲ್ಲವೇ?

ಸಿದ್ದರಾಮಯ್ಯ

: ದುಬೈನಲ್ಲಿರುವ ನನ್ನ ಫ್ರೆಂಡ್ ಕೊಟ್ಟಿದ್ದ ವಾಚ್ ಅದು. ಆದರೆ ಅದನ್ನೇ ಬಿಜೆಪಿ ದೊಡ್ಡ ವಿಷಯ ಮಾಡಿತು. ಆ ವಾಚು 10-15 ಲಕ್ಷದದ್ದು ಮಾತ್ರ. ಆದರೆ 70 ಲಕ್ಷ ಆಗುತ್ತದೆ ಎಂದೆಲ್ಲ ಬಿಜೆಪಿಯು ಸುಳ್ಳು ಸುಳ್ಳು ಆರೋಪ ಮಾಡಿತು. ರಾಹುಲ್ ಜಾಕೆಟ್, ಪ್ರೈಮ್ ಮಿನಿಸ್ಟರ್‌ ಮೋದಿ ಸೂಟ್,  ಸಿದ್ದರಾಮಯ್ಯ ವಾಚ್ ಇವೆಲ್ಲ ಮುಖ್ಯವೇ ಅಲ್ಲ. ನಾವು ಬಡ ಜನರಿಗೆ ಏನು ಮಾಡಿದ್ದೇವೆ? ಸಮಾಜದಿಂದ ನಿರ್ಲಕ್ಷಿತರಾದ ಸಮುದಾಯಕ್ಕೆ ಏನು ಮಾಡಿದ್ದೇವೆ? ಕೆಳ ವರ್ಗದ ಸಮುದಾಯಕ್ಕೆ ನಾವು ಏನು ಮಾಡಿದ್ದೇವೆ? ಜನರ ಅಭಿವೃದ್ಧಿ ಮಾಡಿದ್ದೇವೆ ಇಲ್ಲವೋ ಎಂಬುದೇ  ಮುಖ್ಯ ಹೊರತು ಬೇರೆಯವಲ್ಲ.

ಸುನೇತ್ರಾ ಚೌಧರಿ

: ನೀವು ಮುಂದಿನ ಮುಖ್ಯಮಂತ್ರಿಯಾಗುತ್ತೀರಿ ಎಂಬ ಆತ್ಮವಿಶ್ವಾಸ ಹೊಂದಿದ್ದೀರಾ?

ಸಿದ್ದರಾಮಯ್ಯ

: ನಾನು ನೂರಕ್ಕೆ ನೂರರಷ್ಟು ಆತ್ಮವಿಶ್ವಾಸ ಹೊಂದಿದ್ದೇನೆ; ಮತ್ತೆ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ. ಟಿಕೆಟ್ ಹಂಚಿಕೆಯನ್ನು ಪಕ್ಷದ ಶಾಸಕಾಂಗ ಸಮಿತಿ ಹಾಗೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನನಗೆ ವಿಶ್ವಾಸ ಇದೆ, ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತೆ.