ಒಳ್ಳೆಯ ಬಜೆಟ್ ಭರ್ಜರಿ ಚುನಾವಣಾ ಫಲಿತಾಂಶ ತಂದುಕೊಡುವ ವಿಶ್ವಾಸವೇನೂ ಇಲ್ಲ
ಸುದ್ದಿ ಸಾಗರ

ಒಳ್ಳೆಯ ಬಜೆಟ್ ಭರ್ಜರಿ ಚುನಾವಣಾ ಫಲಿತಾಂಶ ತಂದುಕೊಡುವ ವಿಶ್ವಾಸವೇನೂ ಇಲ್ಲ

ಒಂದಷ್ಟು ರಾಜಕೀಯ ಲೆಕ್ಕಾಚಾರಗಳು ದೇಶದ ಅರ್ಥವ್ಯವಸ್ಥೆಯನ್ನು ಮೇಲೆತ್ತಬಲ್ಲವು ಹಾಗೂ ರಾಜಕೀಯವಾಗಿ ಗೆಲುವು ತಂದುಕೊಡಬಲ್ಲವು ಎಂಬ ತಂತ್ರಗಾರಿಕೆಯು ಮುಂದಿರುವ ವಿಧಾನಸಭಾ ಚುನಾವಣೆಗಳು ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡಲಿದೆಯೇ?

ಮುಂಬರುವ ಚುನಾವಣೆಗಳ ಫಲಿತಾಂಶಕ್ಕೂ ಕಳೆದ ವಾರ ಮಂಡನೆಯಾದ ಕೇಂದ್ರ ಬಜೆಟ್‌ಗೂ ಸಂಬಂಧ ಕಲ್ಪಿಸಿ ಸಾಕಷ್ಟು ವಿಶ್ಲೇಷಣೆಗಳು ನಡೆದಿವೆ. ಆದರೆ, ಚುನಾವಣೆಯನ್ನು ಮುಂದಿಟ್ಟುಕೊಂಡು ಬಜೆಟ್ ಮೂಲಕ ಜನಪ್ರಿಯ ಘೋಷಣೆಗಳನ್ನು ಮಾಡಿದರೂ ಅದು ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷಕ್ಕೆ ಉತ್ತಮ ಫಲಿತಾಂಶ ತಂದುಕೊಡುತ್ತದೆ ಎಂಬ ವಿಶ್ವಾಸವೇನೂ ಇಲ್ಲ. ಬಜೆಟ್ ಘೋಷಣೆಗಳು ಹಾಗೂ ಚುನಾವಣಾ ಫಲಿತಾಂಶ ಕೆಲವೊಮ್ಮೆ ತದ್ವಿರುದ್ಧವಾಗಿರುವ ಸಾಧ್ಯತೆಗಳೂ ಇವೆ. ಇದಕ್ಕೆ ಸಾಕ್ಷಿ ಕಳೆದ ದಶಕದಲ್ಲಿ ಮಂಡನೆಯಾದ ಚುನಾವಣಾ ಪೂರ್ವ ಬಜೆಟ್‌ಗಳು ಮತ್ತು ನಂತರ ಬಂದಿರುವ ಚುನಾವಣಾ ಫಲಿತಾಂಶಗಳು….

2002ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ರಾಜಕೀಯ ಲೆಕ್ಕಾಚಾರಗಳಿಗೆ ಪೂರಕವಾಗುವಂಥ ಆರ್ಥಿಕ ನೀತಿ ಜಾರಿಗೆ ತರಲು ಯತ್ನಿಸಿತ್ತು. ಆದರೆ, ಆ ವರ್ಷದ ಬಜೆಟ್‌ಗೆ ರಾಜಕೀಯ ಲೆಕ್ಕಾಚಾರಗಳ ಲಾಭ ಸಿಗಲಿಲ್ಲ. ಅದರ ಮುಂದಿನ ವರ್ಷ 2003ರ ಫೆಬ್ರುವರಿಯಲ್ಲಿ ಅಂದಿನ ಕೇಂದ್ರ ವಿತ್ತ ಸಚಿವ ಜಸ್ವಂತ್ ಸಿಂಗ್ ಎಲ್ಲರನ್ನೂ ಓಲೈಸುವ, ಮಧ್ಯಮ ವರ್ಗಕ್ಕೆ ಹೆಚ್ಚು ಸೌಲಭ್ಯಗಳನ್ನು ನೀಡುವಂಥ ಬಜೆಟ್ ಮಂಡಿಸಿದ್ದರು.

ಈ ಬಜೆಟ್ ನಗರ ಪ್ರದೇಶದ ಜನತೆ ಬಿಜೆಪಿ ಪಕ್ಷದ ಬಗ್ಗೆ ಸ್ವಲ್ಪ ಪ್ರಮಾಣದ ಒಲವು ತೋರುವಂತೆ ಮಾಡಿತ್ತು. ಆದರೆ, 2004ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ತೀವ್ರ ಸೋಲನ್ನು ಅನುಭವಿಸಬೇಕಾಯಿತು. ಅಂದರೆ ಜಸ್ವಂತ್ ಸಿಂಗ್ ಬಜೆಟ್ ಮೂಲಕ ಬಿಜೆಪಿ ಅಂದು ಪ್ರಯೋಗಿಸಿದ ಚುನಾವಣಾ ದಾಳದ ತಂತ್ರಗಾರಿಕೆ 2004ರ ಜನಾದೇಶದಲ್ಲಿ ಫಲನೀಡಲಿಲ್ಲ.2003/04ರ ಈ ಪಾಠವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ, ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮರೆತಿಲ್ಲ. ಅಥವಾ ಆ ಹಳೆಯ ಲೆಕ್ಕಾಚಾರದ ಫಲಿತಾಂಶವನ್ನು ತಲೆಯಲ್ಲಿಟ್ಟುಕೊಂಡೇ ಅವರು ಮುಂದಿನ ರಾಜಕೀಯ ಲೆಕ್ಕಾಚಾರಗಳನ್ನು ರೂಪಿಸುತ್ತಿರಲೂಬಹುದು.

ಹೀಗಾಗಿಯೇ 2019ರ ಲೋಕಸಭಾ ಚುನಾವಣೆಯ ಗೆಲುವಿಗಾಗಿ ಬೇಕಾದ ಎಲ್ಲಾ ಸಿದ್ಧತೆಗಳನ್ನು ಕಳೆದ ನಾಲ್ಕು ವರ್ಷಗಳಿಂದಲೂ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿಕೊಂಡು ಬರುತ್ತಿದೆ. ಮೋದಿ ಸರ್ಕಾರದ ಆರ್ಥಿಕತೆಯ ಆದ್ಯತೆಗಳನ್ನು ಗಮನಿಸಿದರೆ ಸಮಾಜದ ತಳ ವರ್ಗ, ನಗರ ಮತ್ತು ಗ್ರಾಮಗಳ ಬಡಜನರು, ನಗರ ಪ್ರದೇಶಗಳ ಕೆಳ ಮಧ್ಯಮ ವರ್ಗಕ್ಕೆ ಹೆಚ್ಚು ಸೌಲಭ್ಯಗಳನ್ನು ನೀಡುವ ಯೋಜನೆಗಳನ್ನು ಜಾರಿಗೆ ತಂದಿರುವುದನ್ನು ಕಾಣಬಹುದು. ಉಚಿತ ವಿದ್ಯುತ್, ಉಚಿತ ಎಲ್‌ಪಿಜಿ ಸಂಪರ್ಕ, ಉಚಿತ ಬ್ಯಾಂಕ್ ಖಾತೆ, ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ಸೌಲಭ್ಯಗಳ ನೆರವು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ, ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಸೌಲಭ್ಯ, ಜನರ ಕೈಗೆಟಕುವ ವಸತಿ ಯೋಜನೆಗಳು, ವೈದ್ಯಕೀಯ ವಿಮಾ ಯೋಜನೆಗಳು – ಹೀಗೆ ತಳ ವರ್ಗ ಹಾಗೂ ಕೆಳ ಮಧ್ಯಮ ವರ್ಗವನ್ನು ಗುರಿಯಾಗಿಸಿಕೊಂಡ ಜನಪ್ರಿಯ ಯೋಜನೆಗಳನ್ನು ಮೋದಿ ಸರ್ಕಾರ ಜಾರಿಗೆ ತಂದಿದೆ. ಈ ಬಾರಿಯ ಬಜೆಟ್‌ನಲ್ಲಿ ಎಲ್ಲರಿಗೂ ಗುಣಮಟ್ಟದ ವೈದ್ಯಕೀಯ ಸೌಲಭ್ಯ ನೀಡುವ ಆರೋಗ್ಯ ಯೋಜನೆಯನ್ನು ಘೋಷಿಸಲಾಗಿದೆ. ದೇಶದ ಹೆಚ್ಚಿನ ಸಂಖ್ಯೆಯ ಜನರನ್ನು ಸೆಳೆಯುವ ಉದ್ದೇಶವನ್ನಿಟ್ಟುಕೊಂಡು ಈ ಯೋಜನೆ ಘೋಷಣೆಯಾಗಿದೆ.

ಆರ್ಥಿಕ ಅಭಿವೃದ್ಧಿ ಯಾವಾಗ ಬೇಕಾದರೂ ಬದಲಾಗಬಹುದು ಹಾಗೂ ಕಡಿಮೆ ಆದಾಯವಿರುವ ದೇಶದ ಬಹುಸಂಖ್ಯಾತ ಜನರಿಗೆ ಅಗತ್ಯವಿರುವ ಯೋಜನೆಗಳನ್ನು ಯಶಸ್ವಿಯಾಗಿ ತಲುಪಿಸಿದರೆ ಅದು ಪಕ್ಷಕ್ಕೆ ಹೆಚ್ಚಿನ ಲಾಭ ತಂದುಕೊಡುತ್ತದೆ ಎಂಬುದು ಮೋದಿ ಸರ್ಕಾರಕ್ಕೆ ಈಗಾಗಲೇ ಮನವರಿಕೆಯಾಗಿರುವಂತಿದೆ. 2003/04ರ ಪಾಠದ ಹಿನ್ನೆಲೆಯಲ್ಲಿ ಬಿಜೆಪಿ 2015-17ರ ಆರ್ಥಿಕ ಮತ್ತು ರಾಜಕೀಯ ಲೆಕ್ಕಾಚಾರಗಳನ್ನು ಹಾಕಿತ್ತು. 2015 ಬಿಜೆಪಿ ಪಕ್ಷಕ್ಕೆ ಅತ್ಯಂತ ಕೆಟ್ಟ ವರ್ಷವಾಗಿತ್ತು. ಹವಾಮಾನ ವೈಪರೀತ್ಯ ಮತ್ತು ಆಹಾರ ಧಾನ್ಯಗಳ ಬೆಲೆಯಲ್ಲಿ ವಿಪರೀತ ಏರಿಕೆ ಕಂಡುಬಂದಿತ್ತು. ಮತ್ತೊಂದೆಡೆ ದೇಶದ ಅರ್ಥ ವ್ಯವಸ್ಥೆಯೂ ಅಸ್ಥಿರವಾಗಿತ್ತು. ಆ ವರ್ಷ ಗುಜರಾತ್‌ನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಮುಖಭಂಗ ಅನುಭವಿಸಿತ್ತು. ಇದು ಬಿಜೆಪಿ ತನ್ನ ಭವಿಷ್ಯದ ಬಗ್ಗೆ ಗಂಭೀರವಾಗಿ ಯೋಚಿಸುವಂತೆ ಮಾಡಿತ್ತು.2016-17ರಲ್ಲಿ ಬಿಜೆಪಿ ಪಕ್ಷದ ಪರಿಸ್ಥಿತಿ ತೀರಾ ಭಿನ್ನವಾಗಿತ್ತು. ಉತ್ತರ ಪ್ರದೇಶ ಮತ್ತು ಅಸ್ಸಾಂನಲ್ಲಿ ಬಿಜೆಪಿ ಪಕ್ಷ ಭರ್ಜರಿ ಜಯ ಗಳಿಸಿತ್ತು. ಆದರೆ, ಮೋದಿ ತವರು ಗುಜರಾತ್‌ನಲ್ಲಿ 2017ರ ವಿಧಾನಸಭಾ ಚುನಾವಣೆಯಲ್ಲಿ ಅಮೋಘ ಎಂದು ಹೇಳಿಕೊಳ್ಳುವಂಥ ಗೆಲುವು ಬಿಜೆಪಿಗೆ ದಕ್ಕಲಿಲ್ಲ. ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲೂ ಬಿಜೆಪಿಗೆ ನಿರೀಕ್ಷಿತ ಸ್ಥಾನಗಳು ಸಿಗಲಿಲ್ಲ.

ಜಿಎಸ್‌ಟಿ ಮತ್ತು ನೋಟುರದ್ಧತಿಯ ನೇರ ಪರಿಣಾಮ ಬಿಜೆಪಿಯ ಈ ಹಿನ್ನಡೆಗೆ ಕಾರಣವಾಗಿತ್ತು. ಅಲ್ಲದೆ ದಲಿತರು, ಇತರೆ ಹಿಂದುಳಿದ ವರ್ಗ (ಒಬಿಸಿ) ಮತ್ತು ಅಲ್ಪಸಂಖ್ಯಾತರನ್ನು ಬಿಜೆಪಿ ಕಡೆಗಣಿಸಿದ್ದರ ಪರಿಣಾಮ ಈ ಚುನಾವಣೆಯ ಮೇಲಾಗಿತ್ತು. ಒಟ್ಟು 182 ಸ್ಥಾನಗಳಿರುವ ಗುಜರಾತ್‌ನಲ್ಲಿ ಬಿಜೆಪಿ 99 ಸ್ಥಾನಗಳಲ್ಲಿ ಗೆಲುವು ಕಂಡಿದ್ದರೆ ಕಾಂಗ್ರೆಸ್‌ 77 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು. 6 ಸ್ಥಾನಗಳಲ್ಲಿ ಇತರರು ಜಯಗಳಿಸಿದ್ದರು. ಗುಜರಾತ್‌ನಲ್ಲಿ 2012ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ 115 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆಗ ಕಾಂಗ್ರೆಸ್‌ 61 ಸ್ಥಾನಗಳಲ್ಲಿ ಗೆದ್ದಿತ್ತು. ಬಿಜೆಪಿ ಅಧಿಕಾರದಲ್ಲಿದ್ದ, ಪ್ರಧಾನಮಂತ್ರಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ತವರಾಗಿದ್ದ ಗುಜರಾತ್‌ನಲ್ಲಿ2017ರ ಚುನಾವಣೆಯ ಗೆಲುವು ಹೆಚ್ಚು ಸಿಹಿಯನ್ನೇನೂ ತರಲಿಲ್ಲ. ಹಿಂದಿನ ಚುನಾವಣೆಗೆ ಹೋಲಿಸಿದರೆ ಈ ಬಾರಿ ಬಿಜೆಪಿ 16 ಸ್ಥಾನಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಂತಾಗಿದೆ.

ಬಿಜೆಪಿ ಗುಜರಾತ್‌ನಲ್ಲಿ ಮೇಲ್ಜಾತಿ ಹಾಗೂ ಪಟೇಲ್ ಸಮುದಾಯದ ಮತಗಳನ್ನು ಕಳೆದುಕೊಂಡರೂ ದಲಿತರು, ಬುಡಕಟ್ಟು ಜನರು ಮತ್ತು ಸ್ವಲ್ಪಮಟ್ಟಿಗೆ ಅಲ್ಪಸಂಖ್ಯಾತ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ನಗರ ಪ್ರದೇಶಗಳಲ್ಲಿ ಬಿಜೆಪಿ ಮತಗಳಿಕೆಗೆ ಕಾರಣವಾಗಿದ್ದು ಮಧ್ಯಮ ವರ್ಗ ಹಾಗೂ ವ್ಯಾಪಾರಿ ವರ್ಗವನ್ನು ಗುರಿಯಾಗಿಸಿಕೊಂಡಿದ್ದು ಮತ್ತು ಬಡವರ ಕಡೆಗೆ ಹೆಚ್ಚು ಗಮನ ಹರಿಸಿದ್ದು. ಆದರೆ, ಈ ಅಂಶಗಳೆಲ್ಲವೂ ಕಳೆದ ವಾರ ಮಂಡನೆಯಾದ ಬಜೆಟ್‌ನಲ್ಲಿತ್ತೇ? ಗ್ರಾಮೀಣಾಭಿವೃದ್ಧಿ, ಕೆಳ ಮಧ್ಯಮ ವರ್ಗವನ್ನು ಗುರಿಯಾಗಿಸಿಕೊಂಡಿದ್ದರೂ ಈ ಬಾರಿಯ ಬಜೆಟ್‌ನಲ್ಲಿ ನಗರ ಪ್ರದೇಶದ ಮಧ್ಯಮ ವರ್ಗ ಹಾಗೂ ಸಂಬಳ ಪಡೆಯುವ ವರ್ಗವನ್ನು ಕಡೆಗಣಿಸಲಾಗಿದೆ. ಆದರೆ, ಬಜೆಟ್‌ ಮೂಲಕ ಸರ್ಕಾರ ಬಡಜನರ ಬಗೆಗಿನ ಕಾಳಜಿಯನ್ನು ಪ್ರದರ್ಶಿಸುವ ಪ್ರಯತ್ನ ಮಾಡಿದೆ. ಇನ್ನಷ್ಟು ಹೆಚ್ಚು ಉಚಿತ ಎಲ್‌ಪಿಜಿ ಸಂಪರ್ಕ, ಹೊಸ ಆರೋಗ್ಯ ಯೋಜನೆ, ಬಡವರಿಗಾಗಿ ಇನ್ನಷ್ಟು ವಸತಿ ಯೋಜನೆಗಳು, ಗ್ರಾಮೀಣಾಭಿವೃದ್ಧಿಯ ಯೋಜನೆಗಳು ಬಿಜೆಪಿಗೆ ಸಹಕಾರಿಯಾಗಬಲ್ಲವು. ಬಡವರಲ್ಲಿ ಬಿಜೆಪಿ ಬಗ್ಗೆ ಒಲವು ಮೂಡುವಂತೆ ಮಾಡಲು ಇಂಥ ಜನಪ್ರಿಯ ಯೋಜನೆಗಳು ನೆರವಾಗಬಲ್ಲವು.

ಬಿಜೆಪಿ ಬಡಜನರೊಂದಿಗಿದೆ ಎಂದು ತೋರಿಸಿಕೊಳ್ಳುವ ಪ್ರಯತ್ನವನ್ನು ಪಕ್ಷ ಇತ್ತೀಚೆಗೆ ಹೆಚ್ಚಾಗಿ ಮಾಡುತ್ತಿದೆ. ನರೇಂದ್ರ ಮೋದಿ ಅವರ ಇತ್ತೀಚಿನ ಭಾಷಣಗಳೂ ಕೂಡಾ ಈ ಅಂಶವನ್ನು ಎತ್ತಿತೋರುತ್ತಿವೆ. ಜನಪ್ರಿಯ ಯೋಜನೆಗಳ ಮೂಲಕ ಬಡ ಹಾಗೂ ಕೆಳ ಮಧ್ಯಮ ವರ್ಗದವರನ್ನು ಒಲಿಸಿಕೊಳ್ಳುವ ಹಾಗೂ ಶ್ರೀಮಂತರನ್ನು ತೆರಿಗೆ ಮತ್ತು ಐಟಿ ದಾಳಿಗಳ ಮೂಲಕ ನಿಯಂತ್ರಿಸುವ ಅಸ್ತ್ರವನ್ನು ಮೋದಿ ಅಲ್ಲಲ್ಲಿ ಪ್ರಯೋಗಿಸುತ್ತಿದ್ದಾರೆ. ಈ ಮೂಲಕ ಇಂದಿರಾ ಗಾಂಧಿ ತಮ್ಮ ಆಡಳಿತಾವಧಿಯಲ್ಲಿ ಮಾಡಿದ್ದ ಚುನಾವಣಾ ಪಟ್ಟುಗಳನ್ನು ಮೋದಿ ಈಗ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ. ಆದರೆ, ಒಂದಷ್ಟು ರಾಜಕೀಯ ಲೆಕ್ಕಾಚಾರಗಳು ದೇಶದ ಅರ್ಥವ್ಯವಸ್ಥೆಯನ್ನು ಮೇಲೆತ್ತಬಲ್ಲವು ಹಾಗೂ ಒಂದಷ್ಟು ಆರ್ಥಿಕ ಲೆಕ್ಕಾಚಾರಗಳು ರಾಜಕೀಯವಾಗಿ ಗೆಲುವು ತಂದುಕೊಡಬಲ್ಲವು ಎಂಬ ತಂತ್ರಗಾರಿಕೆಯು ಮುಂದಿರುವ ವಿಧಾನಸಭಾ ಚುನಾವಣೆಗಳು ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡಲಿದೆಯೇ?

ಮಾಹಿತಿ ಮೂಲ: ದಿ ಎಕನಾಮಿಕ್ಸ್ ಟೈಮ್ಸ್