samachara
www.samachara.com
ಶರಾವತಿಯ 'ಭೂಗತ ಜಲವಿದ್ಯುತ್': ಗಾಯದ ಮೇಲೆ ಬರೆ ಎಳೆಯಲಿರುವ ಅಭಿವೃದ್ಧಿ ಯೋಜನೆ!
ಸುದ್ದಿ ಸಾಗರ

ಶರಾವತಿಯ 'ಭೂಗತ ಜಲವಿದ್ಯುತ್': ಗಾಯದ ಮೇಲೆ ಬರೆ ಎಳೆಯಲಿರುವ ಅಭಿವೃದ್ಧಿ ಯೋಜನೆ!

ಶರಾವತಿ ಕಣಿವೆಯಲ್ಲಿ ಅಲೋಚನೆ ಮಾಡಿರುವ 'ಭೂಗತ ಜಲ ವಿದ್ಯುತ್ ಯೋಜನೆ'ಗೆ ಸ್ಥಳೀಯ ಮಟ್ಟದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. 2000 ಮೆಘಾವ್ಯಾಟ್‌ ಉತ್ಪಾದನೆಯ ಗುರಿಯನ್ನು ಹೊಂದಿರುವ ಯೋಜನೆಯಿಂದ 'ಲಾಭಕ್ಕಿಂತ ನಷ್ಟವೇ ಹೆಚ್ಚು' ಎಂದು ತಳಮಟ್ಟದಲ್ಲಿ ಲಭ್ಯವಾಗುತ್ತಿರುವ ಮಾಹಿತಿ ಹೇಳುತ್ತಿದೆ.

ಶರಾವತಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವ ಗೇರುಸೊಪ್ಪಾ ಕಣಿವೆ, ಕೋಗಾರ ಘಾಟ್ ಸೇರಿದಂತೆ ಇಡೀ ಶರಾವತಿ ಕಣಿವೆ ಹಲವು ಅದ್ಭುತ ಜೀವ ವೈವಿಧ್ಯ ಸಂಕುಲಗಳ ತಾಣ. ಇಲ್ಲಿನ ಕೋಟೆಗುಡ್ಡ, ಭೂತಪ್ಪನ ಗುಡ್ಡ, ದುಗ್ಲಘಟ್ಟ, ದಬಾರೆ, ಕಂಗಲಘಾಟ, ಬ್ಯಾಗೋಡಿಗುಡ್ಡ, ಹೀರೇಗುಡ್ಡ, ಬಾಗಚಗುಡ್ಡ, ಪಾಂಡಕನ ಗುಡ್ಡ, ಅಂಬೇ ಪಾಲಗುಡ್ಡಗಳು ಜಲ ವಿದ್ಯುತ್ ಯೋಜನೆಯ ಪೈಪ್‍ಲೈನ್, ರಸ್ತೆ, ಪವರ್‌ಹೌಸ್‌, ತಂತಿಮಾರ್ಗಗಳಿಂದ ಛಿದ್ರವಾಗಲಿವೆ. ಕರ್ನಾಟಕ ಪವರ್ ಕಾರ್ಪೋರೇಶನ್ ಶರಾವತಿ ಕಣಿವೆಯ ಗೇರುಸೊಪ್ಪಾ ಜಲಾಶಯದಿಂದ ನೀರನ್ನು ಪಂಪ್ ಮಾಡಿ ಬೃಹತ್ ಟನಲ್ ಮೂಲಕ ಭೂಗತ ಪವರ್‌ಹೌಸ್‌ಗೆ ತಂದು 2000 ಮೆಘಾವ್ಯಾಟ್ ವಿದ್ಯುತ್ ಉತ್ಪಾದಿಸುವ ಯೋಜನೆ ಇದು ಎಂದು ಹೇಳುತ್ತಿದೆ.

ಯೋಜನೆ ಅನುಷ್ಠಾನ ಹೇಗೆ?: 

ಪವರ್‌ಹೌಸ್‍ನಿಂದ ನೀರನ್ನು ತಲಕಳಲೆ ಜಲಾಶಯಕ್ಕೆ ಬಿಡಲಾಗುತ್ತದೆ. ಶರಾವತಿ ಅಭಯಾರಣ್ಯದಿಂದ 3.4 ಕಿ.ಮೀ ದೂರದಲ್ಲಿ ಈ ಯೋಜನೆ ಬರಲಿದೆ. ಅಂದಾಜು ವೆಚ್ಚ 5,500 ಕೋಟಿ ರೂ. ಇದು ದೇಶದಲ್ಲೇ ಅತಿದೊಡ್ಡ ನೀರನ್ನು ಎತ್ತಿ ಸಂಗ್ರಹಿಸಿ ವಿದ್ಯುತ್ ಉತ್ಪಾದಿಸುವ ಯೋಜನೆ ಎನ್ನಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆ ಹಾಗೂ ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ಈ ಹೊಸ ಯೋಜನೆ ಬರಲಿದೆ. ವ್ಯಾಪ್‍ಕೋಸ್ ಲಿಮಿಟೆಡ್ ಸಂಸ್ಥೆ ಇದಕ್ಕಾಗಿಯೇ ಫೀಸಿಬಿಲಿಟಿ ರಿಪೋರ್ಟ್‌ ತಯಾರಿಸಿದೆ. ಭೂಗತ ಜಲವಿದ್ಯುತ್ ಯೋಜನೆಗೆ ಬೇಕಾದ ನೀರಿನ ಲಭ್ಯತೆ ಶರಾವತಿಯಲ್ಲಿದೆ ಎಂದು ಕೆಪಿಸಿ ವರದಿ ಹೇಳುತ್ತದೆ.

400 ಕಿಲೋ ವ್ಯಾಟ್‌ ಸಾಮರ್ಥ್ಯದ ವಿದ್ಯುತ್ ತಂತಿ ಮಾರ್ಗ (60 ಕಿ.ಮೀ ಉದ್ದದ)ವನ್ನು ಇದಕ್ಕಾಗಿ ನಿರ್ಮಿಲಾಗುತ್ತದೆ. ರಾಷ್ಟ್ರೀಯ ವನ್ಯ ಜೀವಿ ಮಂಡಳಿ ಇದಕ್ಕೆ ಅನುಮತಿ ನೀಡಬೇಕಿದೆ. ಗೇರುಸೊಪ್ಪದಿಂದ ತಲಕಳಲೆವರೆಗೆ ಒಟ್ಟು 6 ಟನೆಲ್ ನಿರ್ಮಾಣ ಮಾಡಬೇಕು. ಈ ಎಲ್ಲ ಟನೆಲ್‍ಗಳ ಒಟ್ಟೂ ಉದ್ದ ಸುಮಾರು 15 ಕಿ. ಮೀ ಇರುತ್ತದೆ. ವಾರ್ಷಿಕ ಮಳೆ ಪ್ರಮಾಣ ತಲಕಳಲೆ ಪ್ರದೇಶದಲ್ಲಿ 3175 ಮೀ.ಮೀ ಇದ್ದು, ಗೇರುಸೊಪ್ಪಾದಲ್ಲಿ 4445 ಮೀ. ಮೀ. ಇರುತ್ತದೆ ಎಂದು ಕೆಪಿಸಿ ವರದಿ ಹೇಳಿದೆ. ಏಪ್ರಿಲ್ 2017 ರಲ್ಲಿ ಈ ಕುರಿತಾದ ವರದಿ ಪ್ರಕಟವಾಗಿದೆ. ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಕೇಂದ್ರ ಪರಿಸರ ಇಲಾಖೆಯ 'ನದಿ ಕಣಿವೆ ಮತ್ತು ಜಲವಿದ್ಯುತ್ ಯೋಜನೆ' ಕುರಿತ ತಜ್ಞ ಪರಿಶೀಲನಾ ಸಮಿತಿ ಈ ಯೋಜನೆಗೆ ಅನುಮತಿ ನೀಡಿದೆ.

ಯೋಜನೆಯ ಪರಿಣಾಮಗಳು:

ಒಂದು ವೇಳೆ ಅಂದುಕೊಂಡಂತೆ ಯೋಜನೆ ಜಾರಿಯಾಗಿದ್ದೇ ಆದರೆ, 800 ಎಕರೆ ಅರಣ್ಯ ನಾಶವಾಗಲಿದೆ. ಒಟ್ಟೂ 15 ಕಿ.ಮೀ ಉದ್ದದ 10 ಮೀ ಅಗಲದ ಟನೆಲ್‍ಗಳ ನಿರ್ಮಾಣಕ್ಕಾಗಿ 140 ಎಕರೆ ಅರಣ್ಯ ನಾಶವಾಗಲಿದೆ. ಪವರ್‍ಹೌಸ್ ನಿರ್ಮಾಣಕ್ಕಾಗಿ ಸುಮರು 60 ಎಕರೆ ನಾಶವಾಗಲಿದೆ. ಈ ಎಲ್ಲ ಕಾಮಗಾರಿಗಾಗಿ ದಟ್ಟ ಅರಣ್ಯದಲ್ಲಿ ಸುಮಾರು 20 ಕಿ. ಮೀ ಉದ್ದದ ರಸ್ತೆ ನಿರ್ಮಾಣಕ್ಕಾಗಿ 110 ಎಕರೆ ಅರಣ್ಯ ನಾಶವಾಗಲಿದೆ. 60 ಕಿ.ಮೀ ಉದ್ದದ ಬೃಹತ್ ತಂತಿಮಾರ್ಗ ನಿರ್ಮಾಣಕ್ಕೆ 490 ಎಕರೆ ಅರಣ್ಯ ನಾಶವಾಗಲಿದೆ.

ಗೇರುಸೊಪ್ಪಾದಿಂದ 500 ಮೀ ಎತ್ತರಕ್ಕೆ ನೀರನ್ನು ಪಂಪ್ ಮಾಡಿ, ಪವರ್‍ಹೌಸ್‍ಗೆ ತರಬೇಕು. ನಂತರ ತಲಕಳಲೆ ಜಲಾಶಯಕ್ಕೆ ಟನೆಲ್ ಮೂಲಕ ನೀರು ಬಿಡಬೇಕು. ರಸ್ತೆ, ಟನೆಲ್‍ಗಳಿಗಾಗಿ, ಪವರ್‍ಹೌಸ್‍ಗಾಗಿ, ಕಾಡುನಾಶ ಮಾಡುವುದರಿಂದ ಶರಾವತಿ ಕಣಿವೆ ಇಬ್ಭಾಗ ಮಾಡಿದಂತೆ ಆಗುತ್ತದೆ. ವನ್ಯಜೀವಿಗಳ ಕಾರಿಡಾರ್ ಇಬ್ಭಾಗವಾಗಲಿದೆ. ಸುಮಾರು 1,00,000 (ಒಂದು ಲಕ್ಷ) ಮರ ಗಿಡಗಳ ಮಾರಣ ಹೋಮವಾಗಲಿದೆ. ಕಾರ್ಗಲ್‍ನಿಂದ ಕಾನೂರು, ಕೋಗಾರ್‌ವರೆಗೆ, ಮಾವಿನಗುಂಡಿಯಿಂದ ಗೇರುಸೊಪ್ಪದವರೆಗೆ ವನ್ಯ ಜೀವಿಗಳು ಅತಂತ್ರವಾಗಲಿವೆ.

ಈಗಾಗಲೇ, ಶರಾವತಿ ಕಣಿವೆಯಲ್ಲಿ 5 ಜಲಾಶಯಗಳು ಇವೆ. ಮುಳುಗಡೆ, ಪುನರ್‍ವಸತಿ, ವಿದ್ಯುತ್ ತಂತಿ ಮಾರ್ಗಕ್ಕಾಗಿ ಎರಡು ಲಕ್ಷ ಎಕರೆ ಅರಣ್ಯ ನಾಶವಾಗಿದೆ. ಗೇರು ಸೊಪ್ಪಾ (ಟೇಲರೇಸ್) ಜಲವಿದ್ಯುತ್ ಯೋಜನೆಗಾಗಿ 1000 ಹೆಕ್ಟೇರ್ ಅರಣ್ಯ ನಾಶವಾಗಿದೆ. 20 ವರ್ಷ ಹಿಂದೆ ರಾಜ್ಯ ಉಚ್ಛನ್ಯಾಯಾಲಯ ಶರಾವತಿ ಟೇಲರೇಸ್ ಯೋಜನೆಗೆ ತಡೆ ಆಜ್ಞೆ ನೀಡಿತ್ತು.

ಕೆಪಿಸಿ ಪ್ರಾಯೋಜಿಸಿದ ಶರಾವತಿ ಕಣಿವೆಯ ಸಮಗ್ರ ಪರಿಸರ ಅಧ್ಯಯನ ನಡೆಸಿದ ಭಾರತೀಯ ವಿಜ್ಞಾನ ಸಂಸ್ಥೆ 2002ರಲ್ಲಿ ವರದಿ ನೀಡಿದೆ. “ಶರಾವತಿ ಕಣಿವೆ ಅರಣ್ಯವು ಬೃಹತ್ ಜಲ ವಿದ್ಯುತ್ ಯೋಜನೆಗಳು, ಗಣಿಗಾರಿಕೆ, ಏಕಜಾತಿ ನೆಡುತೋಪು, ಅತಿಕ್ರಮಣಗಳಿಂದ ತುಂಡು ತುಂಡಾಗಿದೆ. ಕಣಿವೆ, ಇನ್ನಷ್ಟು ಛಿದ್ರವಾಗಲು ಅವಕಾಶ ಬೇಡ, ಹೊಸ ಅರಣ್ಯ ನಾಶಿ ಯೋಜನೆಗಳು ಶರಾವತಿ ಕಣಿವೆಯಲ್ಲಿ ಬಂದರೆ ವಿನಾಶವೇ ಹೊರತು ಅಭಿವೃದ್ಧಿ ಅಲ್ಲ” ಎಂದು ಹೇಳಿತ್ತು.

ಉ. ಕ. ಜಿಲ್ಲೆಯ ಪರಿಸರ ಧಾರಣಾ ಸಾಮರ್ಥ್ಯ ಅಧ್ಯಯನದಲ್ಲಿ; ಶರಾವತಿ, ಕಾಳಿ ಇತರ ಕಣಿವೆಗಳಲ್ಲಿ ಬೃಹತ್ ಯೋಜನೆಗಳನ್ನು ಜಿಲ್ಲೆ ಸಹಿಸದು ಎನ್ನಲಾಗಿದೆ. ಕರ್ನಾಟಕ ಜೀವವೈವಿಧ್ಯ ಮಂಡಳಿ ಪ್ರಾಯೋಜಿಸಿದ ಅಧ್ಯಯನವನ್ನು ಭಾರತೀಯ ವಿಜ್ಞಾನ ಸಂಸ್ಥೆ 2010 ರಿಂದ 2014ರ ವರೆಗೆ ನಡೆಸಿ ವರದಿ ನೀಡಿದೆ.

ಲಾಭ- ನಷ್ಟದ ಲೆಕ್ಕಾಚಾರ:

2000 ಮೆ.ವ್ಯಾ. ಜಲವಿದ್ಯುತ್ ಯೋಜನೆಯಲ್ಲಿ ವಿದ್ಯುತ್ ಉತ್ಪಾದಿಸುವುದು ದಿನಕ್ಕೆ 6 ತಾಸು ಮಾತ್ರ. ಇದು ಬಹಳ ವೆಚ್ಚದಾಯಕ ಯೋಜನೆ. ಇದಕ್ಕಿಂತ ಉ.ಕ ಜಿಲ್ಲೆ, ಶಿವಮೊಗ್ಗ ಜಿಲ್ಲೆಯಲ್ಲಿ ಸೌರಶಕ್ತಿ ಸ್ಥಾವರ ಸ್ಥಾಪನೆ ಮಾಡಿ ಎಂದು ಇಂಧನ ತಜ್ಞ ಡಾ. ಶಂಕರ್ ಶರ್ಮಾ ಅಭಿಪ್ರಾಯಪಡುತ್ತಾರೆ. ಪಶ್ಚಿಮಘಟ್ಟದಲ್ಲಿ ಭೂಗತ ಜಲವಿದ್ಯುತ್ ಯೋಜನೆ ಸಾಧು ಅಲ್ಲವೇ ಅಲ್ಲ ಎಂದು ವೃಕ್ಷಲಕ್ಷ ವರದಿ ಹೇಳಿದ್ದನ್ನು ಅವರು ಪ್ರಸ್ತಾಪಿಸುತ್ತಾರೆ.

"ಶರಾವತಿ ಅಭಯಾರಣ್ಯ ಗೇರುಸೊಪ್ಪಾ ಕಣಿವೆ, ಕೋಗಾರ ಘಾಟ್‌, ಸೇರಿದಂತೆ ಇಡೀ ಶರಾವತಿ ಕಣಿವೆ ಹಲವು ಅದ್ಭುತ ಜೀವ ವೈವಿಧ್ಯ ಸಂಕುಲಗಳ ತಾಣ. ಶರಾವತಿ ಕಣಿವೆಯ ಕೋಟೆಗುಡ್ಡ, ಭೂತಪ್ಪನ ಗುಡ್ಡ, ದುಗ್ಲಘಟ್ಟ, ದಬಾರೆ, ಕಂಗಲಘಾಟ, ಬ್ಯಾಗೋಡಿಗುಡ್ಡ, ಹೀರೇಗುಡ್ಡ, ಬಾಗಚಗುಡ್ಡ, ಪಾಂಡಕನ ಗುಡ್ಡ, ಅಂಬೇ ಪಾಲಗುಡ್ಡಗಳನ್ನು ಪೈಪ್‍ಲೈನ್, ರಸ್ತೆ, ಪವರ್‍ಹೌಸ್, ತಂತಿಮಾರ್ಗದಿಂದ ಕೊಚ್ಚಿ ಛಿದ್ರ ಮಾಡಬಾರದು. ಭೂಗತ ಜಲವಿದ್ಯುತ್ ಯೋಜನೆ ನಿರ್ಮಾಣ ವನ್ಯ ಜೀವಿಗಳಿಗೆ ಭಾರೀ ಆಪತ್ತು ತರಲಿದೆ” ಎಂದು ವರದಿ ಅಭಿಪ್ರಾಯ ನೀಡಿತ್ತು.

ಶರಾವತಿ ಕಣಿವೆ ರಾಂಪತ್ರೆ ಜಡ್ಡಿ, ಕತ್ತಲೆಕಾನು, ಕೊಡಚಾದ್ರಿ, ಸಿಂಗಲಿಕ, ಬೆತ್ತ, ಸಿಸ್ಟೋರಾ ಶರಾವತಿ ಯನ್ಸಿಸ್ ಎಂಬ ಮೀನುಜಾತಿ, ಫಿಲಾಟಸ್ ನೀಲನೇತ್ರ ಎಂಬ ಕಪ್ಪೆ ಜಾತಿ, ಮರ ಅರಿಶಿಣ, ಸೀತಾ ಅಶೋಕ ಹೀಗೆ ಅಮೂಲ್ಯ ಜೀವ ಸಂಕುಲ ಹೊಂದಿದೆ ಎಂದು ವೃಕ್ಷಲಕ್ಷ ಹೇಳಿದೆ.

ಶರಾವತಿ ಅಭಯಾರಣ್ಯ, ಕಣಿವೆಯ ರೈತರು, ವನವಾಸಿಗಳ ಮುಳುಗಡೆ, ವಿದ್ಯುತ್, ಸಂಪರ್ಕ ಸಾಧನ, ವನ್ಯ ಜೀವಿಗಳಿಂದ ಬೆಳೆ ಹಾನಿ ಇತ್ಯಾದಿ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕಿದೆ. ಆದರೆ ಹೊಸ ಯೋಜನೆ ಮೂಲಕ ಇನ್ನಷ್ಟು ಅರಣ್ಯ ನಾಶ ಮಾಡಿದರೆ ವನ್ಯ ಜೀವಿಗಳು ಕಣಿವೆಯಿಂದ ಹಳ್ಳಿಗಳಿಗೇ ದಾಳಿ ಇಡಲಿವೆ. ಈಗಲೇ ಇರುವ ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆಯೂ ಇದೆ.

“ಶರಾವತಿ ಕಣಿವೆಯಲ್ಲಿ ಆಗಿರುವ ಪರಿಸರ ಅವಘಡ ಸಾಕು. ಪುನಃ ಭಾರೀ ಯೋಜನೆ ಹೆಸರಲ್ಲಿ ಇಲ್ಲಿಗೆ ಬರಬೇಡಿ," ಎನ್ನುತ್ತಾರೆ ಅನಂತ ಹೆಗಡೆ ಅಶೀಸರ. ಇವರ ಮುಂದಾಳತ್ವದಲ್ಲಿ ವೃಕ್ಷಲಕ್ಷ ಆಂದೋಲನ ಸಂಬಂಧಪಟ್ಟವರಿಗೆ ಈಗಾಗಲೇ ನಿಯೋಗದ ಮೂಲಕ ಮನವಿ ಸಲ್ಲಿಸಿದ್ದಾರೆ.