ಸಾಂಧರ್ಬಿಕ ಚಿತ್ರ
ಸುದ್ದಿ ಸಾಗರ

ಮುಂದುವರಿದ ತಾಲಿಬಾನಿಗಳ ‘ಧರ್ಮಯುದ್ಧ’: ರಕ್ತಕ್ಕೆ ರಕ್ತವೇ ಉತ್ತರವಾದಾಗ...

ನಿರಂತರ ದಾಳಿಯಿಂದ ತತ್ತರಿಸುತ್ತಿರುವ ಆಫ್ಘಾನಿಸ್ತಾನ.

ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮತ್ತೆ ಮುಂದುವರೆದಿದ್ದು, ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ನಿನ್ನೆ (ಭಾನುವಾರ) ಕಾಬೂಲ್‌ನ ಸೇನಾ ನೆಲೆಯ ಮೇಲೆ ದಾಳಿ ನಡೆಸಿದ ತಾಲಿಬಾನ್‌ನ ಐದು ಶಸ್ತ್ರದಾರಿ ಉಗ್ರಗಾಮಿಗಳು, 5 ಸೈನಿಕರನ್ನು ಕೊಂದು, ಹತ್ತು ಸೈಕರಿಗೆ ಗಾಯಗೊಳಿಸಿದ್ದರು. ಇದರ ಹಿಂದಿನ ದಿನವೇ ಆಂಬುಲೆನ್ಸ್‌ನಲ್ಲಿ ಸಿಡಿಮದ್ದುಗಳನ್ನು ತಂದಿದ್ದ ಉಗ್ರರು ಚೆಕ್‌ಪೋಸ್ಟ್‌ ಒಂದರ ಬಳಿ ಸ್ಪೋಟಿಸಿದ್ದರಿಂದಾಗಿ ಮೃತಪಟ್ಟವರ ಸಂಖ್ಯೆ 103 ದಾಟಿದೆ. ದಾಳಿ ನಡೆದ ದಿನವನ್ನು ಆಫ್ಘಾನಿಸ್ತಾನ ಸರಕಾರ ‘ರಾಷ್ಟ್ರೀಯ ಶೋಕದಿನಾಚಾರಣೆ’ಯನ್ನಾಗಿ ಘೋಷಿಸಿದೆ. ಶನಿವಾರ ನಡೆದ ದಾಳಿಯಲ್ಲಿ 30 ಪೋಲಿಸ್ ಅಧಿಕಾರಿಗಳು ಸೇರಿ ಒಟ್ಟು 235 ಜನರು ಗಾಯಗೊಂಡಿದ್ದಾರೆ. ಒಂದು ವಾರದ ಹಿಂದೆಯಷ್ಟೇ ಕಾಬೂಲ್‌ನ ಹೆಸರಾಂತ ಹೋಟೆಲ್‌ನಲ್ಲಿ ದಾಳಿ ನಡೆಸಿದ ತಾಲಿಬಾನಿಗಳು, 5 ಮಂದಿಯನ್ನು ಕೊಂದಿದ್ದರು.

ದಾಳಿಯ ಬಳಿಕ ದೇಶಾದ್ಯಂತ ಧ್ವಜಗಳನ್ನು ಅರ್ಧಕ್ಕಿಳಿಸಿ ಹಾರಿಸಲಾಗಿದ್ದು, ಇಂದು(ಸೋಮವಾರ) ಸಾರ್ವಜನಿಕ ರಜೆಯನ್ನು ಘೋಷಿಸಲಾಗಿದೆ. ಮಂಗಳವಾರವನ್ನು ಘಟನೆಯ ಸಂತ್ರಸ್ತರಿಗಾಗಿ ಪ್ರಾರ್ಥನಾ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಆಫ್ಘಾನಿಸ್ತಾನದ ಅಧ್ಯಕ್ಷೀಯ ವಕ್ತಾರ ‍ಷಾ ಹುಸೇನ್ ಮುರ್ಟಾಝವಿ ಹೇಳಿದ್ದಾರೆ.

ತಾಲಿಬಾನ್‌ನ ರಕ್ತ ಚರಿತ್ರೆ:

ಪರ್ಷಿಯನ್ ಮೂಲದ ಪದ ತಾಲಿಬಾನ್. ಇದರ ಅರ್ಥ ‘ವಿದ್ಯಾರ್ಥಿ, ಜ್ಞಾನದ ಅನ್ವೇಷಕ,’ ಎಂದಾಗುತ್ತದೆ. ತನ್ನನ್ನು ತಾನು ‘ಇಸ್ಲಾಮಿಕ್ ಎಮಿರೇಟ್ಸ್ ಆಫ್ ಆಫ್ಘಾನಿಸ್ತಾನ್’(IEA) ಎಂದು ಕರೆದುಕೊಳ್ಳುವ ತಾಲಿಬಾನ್, ಸುನ್ನಿ ಮುಸ್ಲಿಂರ ಮೂಲಭೂತವಾದಿ ಸಂಘಟನೆ. ಜಿಹಾದ್ ಹೆಸರಿನಲ್ಲಿ ದೇಶದೊಳಗೆ ಬಂಡಾಯ ನಡೆಸುತ್ತಿರುವ ತಾಲಿಬಾನ್ ನಾಯಕತ್ವವನ್ನು 2016ರಿಂದ ಮೌಲ್ವಿ ಹಿಬತ್ ಉಲ್ಲಾ ಅಖುಂಡ್ಜಡಾ ವಹಿಸಿದ್ದಾರೆ.ತಾಲಿಬಾನ್‌ನ ಹುಟ್ಟಿಗೆ ಕಾರಣವಾಗಿದ್ದು ಆಫ್ಘಾನ್‌ನಲ್ಲಿನ ಅಂತರ್ಯುದ್ಧಗಳು. 1994ರ ವೇಳೆಗೆ ಅಸ್ಥಿತ್ವಕ್ಕೆ ಬಂದ ತಾಲಿಬಾನ್‌ ಸಂಘಟನೆಯಲ್ಲಿ ಪಾಕಿಸ್ತಾನದ ಧಾರ್ಮಿಕ ತರಭೇತಿ ಕೇಂದ್ರದ ವಿದ್ಯಾರ್ಥಿಗಳ ಕೊಡುಗೆ ದೊಡ್ಡದು ಎಂದು ವರದಿಗಳು ಹೇಳುತ್ತವೆ. 1996ರಿಂದ 2001ರವರೆಗೂ ತಾಲಿಬಾನ್ ಆಫ್ಘಾನಿಸ್ಥಾನದ ಸುಮಾರು ಮುಕ್ಕಾಲು ಭಾಗದಷ್ಟು ಭೂಪ್ರದೇಶದಲ್ಲಿ ಆಡಳಿತ ನಡೆಸಿ, ‘ಷರಿಯಾ’, ಇಸ್ಮಾಮಿಕ್ ಕಾನೂನುಗಳನ್ನು ಜನರ ಮೇಲೆ ಹೇರಿತ್ತು. ತಾಲಿಬಾನ್ ಅಧಿಕಾರ ಪಡೆದ ನಂತರದ ದಿನಗಳಿಂದ ಆಫ್ಘಾನಿಸ್ತಾನ ಕಠೋರ ದಿನಗಳನ್ನು ಎದುರಿಸುತ್ತಿದೆ. ದೇಶದೊಳಗಿನ ಮೂಲಸೌಕರ್ಯಗಳು, ಆರ್ಥಿಕತೆ ಧ್ವಂಸವಾಗಿದೆ. ನೀರು, ವಿದ್ಯುತ್, ದೂರವಾಣಿ, ರಸ್ತೆ ಯಾವುದೂ ಸರಿಯಾಗಿಲ್ಲ. ವಿಶ್ವದಲ್ಲೇ ಅತಿಹೆಚ್ಚು ಶಿಶು ಮರಣ ದರವನ್ನು ಹೊಂದಿರುವ ಆಫ್ಘಾನಿಸ್ತಾನದಲ್ಲಿ ಶೇ.25ರಷ್ಟು ಮಕ್ಕಳು ಐದು ವರ್ಷ ಪೂರೈಸುವ ಮೊದಲೇ ಸಾವನ್ನಪ್ಪುತ್ತವೆ. ಆಫ್ಘಾನ್ ಸರಕಾರವು ತಾಲಿಬಾನ್ ಜೊತೆ ಮಾತುಕತೆ ನಡೆಸಿದರಷ್ಟೇ ಭವಿಷ್ಯದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ ಎನ್ನುವ ಮಾತುಗಳಿವೆ.

2014ರ ವೇಳೆಗೆ ಪಾಕಿಸ್ತಾನಕ್ಕೂ ತನ್ನ ಪ್ರಭಾವವನ್ನು ವಿಸ್ತಿರಿಸಿಕೊಂಡಿರುವ ತಾಲಿಬಾನ್, ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದ ವಾಯುವ್ಯ ಪ್ರದೇಶಗಳನ್ನು ನಿಯಂತ್ರಿಸುತ್ತಿದೆ. ಪಾಕಿಸ್ತಾನವನ್ನು ಅಸ್ತಿರಗೊಳಿಸುವುದಾಗಿ ಬೆದರಿಸಿರುವುದರ ಜೊತೆಗೆ ದೇಶಾದ್ಯಂತ ಆಗಾಗ್ಗೆ ಬಾಂಬ್ ದಾಳಿಗಳನ್ನು ನಡೆಸುತ್ತಿದೆ.ಇಸ್ಲಾಮಿಕ್ ಮೂಲಭೂತ ಸಿದ್ದಾಂತಗಳನ್ನು ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ತಾಲಿಬಾನ್‌ಗೆ ಸೌದಿ ಅರೇಬಿಯಾದಿಂದ ಹಣ ಬರುತ್ತಿದೆ ಎನ್ನಲಾಗುತ್ತದೆ. ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನಗಳ ಪಶ್ತೂನ್ ಪ್ರದೇಶದಲ್ಲಿ ಅಧಿಕಾರ ಗಳಿಸಿ ಕಠಿಣ ಇಸ್ಲಾಮಿಕ್ ಕಾನೂನುಗಳನ್ನು ಜಾರಿಗೆ ತಂದು ಶಾಂತಿ ಸ್ಥಾಪಿಸಬೇಕೆಂಬುದು ತಾಲಿಬಾನ್‌ನ ಉದ್ದೇಶ.

ಈ ನಿಟ್ಟಿನಲ್ಲಿ ಕೊಲೆಗಾರರಿಗೆ, ತಪ್ಪಿತಸ್ಥರಿಗೆ ಸಾರ್ವಜನಿಕ ಮರಣದಂಡನೆಯಂತಹ ಶಿಕ್ಷೆಗಳನ್ನು ತಾಲಿಬಾನ್ ಪರಿಚಯಿಸುತ್ತಿದೆ. ಪುರುಷರು ಗಡ್ಡವನ್ನು ಬೆಳಸುವಂತೆ, ಮಹಿಳೆಯರು ಕಡ್ಡಾಯವಾಗಿ ಬುರ್ಖಾ ಧರಿಸುವಂತೆ ಆಧೇಶಿಸಿದೆ. ತಾಲಿಬಾನ್ ಪ್ರಾಬಲ್ಯ ಹೊಂದಿರುವ ಪ್ರದೇಶಗಳಲ್ಲಿ 10 ವರ್ಷ ಪೂರೈಸಿದ ಹೆಣ್ಣು ಮಕ್ಕಳು ಶಾಲೆಗೆ ಹೋಗುವಂತಿಲ್ಲ. ಟೆಲಿವಿಷನ್, ಸಂಗೀತ, ಸಿನಿಮಾ ಎಲ್ಲವೂ ಬಂದ್.ಉಗ್ರರ ಸ್ವರ್ಗ ಎಂದೇ ಕರೆಸಿಕೊಳ್ಳುತ್ತಿರುವ ಪಾಕಿಸ್ಥಾನದ ಮೇಲೆ ತಾಲಿಬಾನ್‌ನ ನಿರ್ಮಾತೃ ಎಂಬ ಅರೋಪವಿದೆ. ಪಾಕಿಸ್ತಾನ ಈ ಆರೋಪವನ್ನು ಅಲ್ಲಗೆಳೆಯುತ್ತಿದೆಯಾದರೂ ಯುಎಇ ಮತ್ತು ಅರಬ್‌ಗಳೊಂದಿಗೆ ಪಾಕಿಸ್ತಾನದ ಹೆಸರೂ ಕೇಳಿ ಬರುತ್ತಿರುತ್ತದೆ. ಆದರೂ ಕೂಡ ಪಾಕಿಸ್ತಾನ ತಾಲಿಬಾನ್ ಉಗ್ರರನ್ನು ಮಣಿಸುವ ನಿಟ್ಟಿನಲ್ಲಿ ದಿಟ್ಟ ಕ್ರಮಗಳನ್ನೇ ಕೈಗೊಳ್ಳುತ್ತಿದ್ದು, ಸಧ್ಯದ ಪಾಕ್ ಪ್ರಧಾನಿ ನವಾಜ್ ಶರೀಫ್, ಮಾತುಕತೆಯ ಮುಖಾಂತರ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದ್ದಾರೆ.

ಪಾಕಿಸ್ತಾನದ ಮೂರು ತಾಲಿಬಾನಿ ನಾಯಕರನ್ನು ಅಮೆರಿಕಾ ಡ್ರೋನ್ ದಾಳಿಯ ಮುಖಾಂತರ ಹೊಡೆದುರುಳಿಸಿತ್ತು. ಈ ಹಿನ್ನಡೆಗಳ ಹೊರತಾಗಿಯೂ ಕರಾಚಿಯಲ್ಲಿ ಉಗ್ರಗಾಮಿಗಳ ಪ್ರಭಾವವು ಹೆಚ್ಚಾಗಿದೆ ಎನ್ನುವುದಕ್ಕೆ ಪುರಾವೆಗಳಿವೆ. ಶಾಲಾ ಬಾಲಕಿ ಮಲಾಲಾ ಯುಸುಫ್‌ಜಾಯ್‌ ಮೇಲೆ ಗುಂಡಿನ ದಾಲಿ ನಡೆದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.ತಾಲಿಬಾನ್ ತನ್ನ ಹೆಸರನ್ನು ಪ್ರಪಂಚದಾದ್ಯಂತ ಹರಡಲು ಸಾಧ್ಯವಾಗಿದ್ದು 2001ರಲ್ಲಿ ನಡೆಸಿದ ವರ್ಲ್ಡ್ ಟ್ರೇಡ್ ಸೆಂಟರ್‌ ಮೇಲಿನ ದಾಳಿಯಿಂದ.  ಈ ದಾಳಿಯ ವಕ್ತಾರನಾಗಿದ್ದ ಒಸಾಮಾ ಬಿನ್ ಲಾಡೆನ್‌ಗೆ ಆಶ್ರಯ ಒದಗಿಸದೆಯೆಂದು ಅಫ್ಘಾನಿಸ್ತಾನದ ಮೇಲೆ ಆರೋಪ ಹೊರಿಸಲಾಗಿತ್ತು. ಈ ಘಟನೆಯ ನಂತರ ತಾಲಿಬಾನ್ ಅಫ್ಘಾನ್‌ನ ಅಧಿಕಾರದಿಂದ ಕೆಳಗಿಳಿದಿತ್ತು. ಆದರೆ ಅದರ ನಾಯಕ ಮುಲ್ಲಾ ಮಹಮ್ಮದ್ ಉಮರ್‌ರನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಇತ್ತಿಚಿನ ವರ್ಷಗಳಲ್ಲಿ ಮತ್ತೆ ಪ್ರಾಬಲ್ಯವನ್ನು ಪಡೆದಿರುವ ತಾಲಿಬಾನ್, ಆಫ್ಘಾನಿಸ್ತಾನಕ್ಕಿಂತ ಪಾಕ್‌ನಲ್ಲಿ ಹೆಚ್ಚು ಪ್ರಾಬಲ್ಯತೆ ಮೆರೆಯುತ್ತಿದೆ. ಇನ್ನುಳಿದ ಉಗ್ರಗಾಮಿ ಸಂಘಟನೆಗಳೊಂದಿಗೆ ತಾಲಿಬಾನ್‌ಗೆ ಸಡಿಲವಾದ ಹೊಂದಾಣಿಕೆಯಿದೆ ಎಂದು ಸ್ಥಳಿಯರು ಅಭಿಪ್ರಾಯಿಸುತ್ತಾರೆ.

ಆಫ್ಘಾನ್ – ತಾಲಿಬಾನ್:

ಆಫ್ಘಾನ್‌ನ ನೈಋತ್ಯ ಭಾಗದಿಂದ ತಮ್ಮ ಅಸ್ಥಿತ್ವವನ್ನು ಸ್ಥಾಪಿಸುತ್ತಾ ಹೋದ ತಾಲಿಬಾನ್, 1995ರಲ್ಲಿ ಇರಾನ್‌ನ ಗಡಿಗೆ ಹೊಂದಿಕೊಂಡಿದ್ದ ಹೆರಾಟ್ ಪ್ರಾಂತ್ಯವನ್ನು ವಶಪಡಿಸಿಕೊಂಡಿತ್ತು. ಒಂದು ವರ್ಷದ ಅವಧಿಯೊಳಗೆ ಅಧ್ಯಕ್ಷ ಬುಹ್ರಾಬುದ್ದೀನ್ ಸರಕಾರವನ್ನು ಉರುಳಿಸಿ, ರಾಜಧಾನಿ ಕಾಬೂಲ್‌ಅನ್ನು ಆಕ್ರಮಿಸಿತು. 1998ರ ವೇಳೆ ಶೇ.90ರಷ್ಟು ಆಫ್ಘಾನಿಸ್ತಾನ್ ತಾಲಿಬಾನಿಗಳ ಕೈಯಲ್ಲಿತ್ತು. ನಂತರದಲ್ಲಿ 2001ರ ವೇಳೆಗೆ ನಡೆಸಿದ ಬುಧ್ಧ ವಿಗ್ರಹಗಳ ಧ್ವಂಸವು ವಿಶ್ವದಾದ್ಯಂತ ಟೀಕೆಗೆ ಗುರಿಯಾಗಿತ್ತು. ಇದು ತಾಲಿಬಾನಿಗಳ ಸಂಸ್ಕೃತಿಯ ವಿನಾಶಕ್ಕೆ ಹಿಡಿದ ಕನ್ನಡಿ. ಅದೇ ವರ್ಷದ ಅಕ್ಟೋಬರ್‌ನಲ್ಲಿ ಅಮೆರಿಕಾ ಸೇನೆ ನಡೆಸಿದ ಆಫ್ಘಾನ್ ಆಕ್ರಮಣದಿಂದಾಗಿ ತಾಲಿಬಾನ್ ಸರಕಾರ ನೆಲಕ್ಕುರುಳಿತ್ತು. ಅದರ ನಾಯಕರೆಲ್ಲರೂ ತಲೆಮರೆಸಿಕೊಂಡಿದ್ದರು. ಅಂದಿನಿಂದ ಆಫ್ಘಾನ್‌ನಲ್ಲಿ ಆಂತರಿಕ ಕಲಹ ಮುಗಿಲು ಮುಟ್ಟಿದೆ. ಹೆಚ್ಚಿನ ಸಂಖ್ಯೆಯ ವಿದೇಶಿ ಪಡೆಗಳು ನೆಲೆಸಿದ್ದರೂ ಸಹ ತಾಲಿಬಾನ್ ತನ್ನ ಪ್ರಭಾವವನ್ನು ಸ್ಥಿರಗೊಳಿಸುತ್ತಿದೆ. ಹಿಂಸಾಚಾರ ಮೇಲಕ್ಕೇರುತ್ತಿದೆ. ಅಧಿಕಾರ ಕಳೆದುಕೊಂಡ ಕಾರಣದಿಂದಾಗಿ ತಾಲಿಬಾನ್ ತನ್ನ ಶಕ್ತಿಯನ್ನೆಲ್ಲಾ ಉಪಯೋಗಿಸಿ ದೇಶದ ಅನೇಕ ಭಾಗಗಳನ್ನು ಅಸ್ಥಿರಗೆತೆ ಗುರಿಪಡೆಸಿದೆ. 2012ರಲ್ಲಿ ನ್ಯಾಟೋ ಕ್ಯಾಂಪ್‌ ಬೇಸ್‌ ಮೇಲೆ ನಡೆಸಿದ ದಾಳಿ ದೊಡ್ಡ ದಾಳಿಯೆಂದು ಪರಿಗಣಿಸಲ್ಪಟ್ಟಿದ್ದು, ನಿರಂತರವಾಗಿ ದಾಳಿಗಳು ನಡೆಯುತ್ತಲೇ ಇವೆ. ಅದೇ ವರ್ಷ ಅಮೆರಿಕಾ ತಾನು ಬಂಧಿಸಿದ್ದ 3000ಕ್ಕಿಂತಲೂ ಅಧಿಕ ತಾಲಿಬಾನ್ ಉಗ್ರರನ್ನು ಆಫ್ಘಾನ್ ಸರಕಾರವ ವಶಕ್ಕೆ ನೀಡಿತ್ತು. ಇಂದು ಆಫ್ಘಾನಿಸ್ತಾನದಲ್ಲಿ ಅಮೆರಿಕಾ 10000ಕ್ಕೂ ಅಧಿಕ ಸೈನಿಕ ತುಕಡಿಗಳನ್ನು ನಿಯೋಜಿಸಿದೆ. ಅದೇ ಮಟ್ಟಕ್ಕೆ ತಾಲಿಬಾನ್ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವಲ್ಲಿ ನಿರತವಾಗಿದೆ.

ಇಸ್ಲಾಂ ಮೂಲಭೂತವಾದವನ್ನು ಹೇರಲು ತನ್ನೆಲ್ಲಾ ಶಕ್ತಿ ಮೀರಿ ಪ್ರತ್ನಿಸುತ್ತಿರುವ ತಾಲಿಬಾನ್‌, ತನ್ನ ನೆಲೆಯನ್ನು ಭದ್ರಗೊಳಿಸಿಕೊಳ್ಳುತ್ತಿರುವ ಸಮಯದಲ್ಲೇ ಇತರೆ ದೇಶಗಳು ಅದರ ವಿರುದ್ಧ ದನಿಯೆತ್ತಿವೆ. ಭಯೋತ್ಪಾದಕತೆಯನ್ನು ಮುರಿಯುವ ಬಲಿಷ್ಟ ರಾಷ್ಟ್ರಗಳ ನಿರ್ಣಯಕ್ಕೆ ಭಾರತವೂ ಕೈಜೋಡಿಸಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಉಗ್ರರನ್ನು ಮಟ್ಟ ಹಾಕಬೇಕಿರುವುದು ಸಧ್ಯದ ತುರ್ತು. ಆದರೆ ರಕ್ತಕ್ಕೆ ರಕ್ತವೇ ಉತ್ತರವಾಗುತ್ತಾ ಸಾಗಿದರೆ, ಶಾಂತಿ ಸ್ಥಾಪನೆಯಾಗುತ್ತದೆಯೇ ಎಂಬುದನ್ನು ಚಿಂತಿಸಬೇಕಿದೆ.