ಕಾರು ಓಡಿಸುತ್ತಿರುವ ವಿಶೇಷ ಚೇತನ ಹನುಮಂತ 
ಸುದ್ದಿ ಸಾಗರ

‘ಕೈಗಳಿವೆ, ಬೆರಳುಗಳಿಲ್ಲ; ಕಾರ್ ಓಡಿಸ್ತೀನಿ, ಡಿಎಲ್‌ ಇಲ್ಲ’: ವಿಶೇಷ ಚೇತನರೊಬ್ಬರ ಕಥೆ

“ನಮ್ಮ ತಂದೆ ಬಂಡೆ ಒಡೆಯುವ ಕೆಲಸ ಮಾಡುತ್ತಿದ್ದರು. ಅದಕ್ಕಾಗಿ ಸಿಡಿಮದ್ದುಗಳನ್ನು ಬಳಸುತ್ತಿದ್ದರು. ಒಮ್ಮೆ ಡೈನಾಮೈಟ್‌ನ್ನು ಮನೆಯಲ್ಲಿ ಇಟ್ಟಿದ್ದರು. ಆಗ ನನಗೆ ಅದರ ಬಗ್ಗೆ ಏನೂ ಗೊತ್ತಿರಲಿಲ್ಲ. ಅದರ ಅಪಾಯವೇ ತಿಳಿದಿರಲಿಲ್ಲ. ಸ್ನೇಹಿತರೆಲ್ಲರೂ ಅದರ ಜೊತೆಗೆ ಆಟ ಆಡಲು ಪ್ರಾರಂಭಿಸಿದೆವು. ಅದೊಂದು ದುರಾದೃಷ್ಟದ ದಿನ. ಡೈನಾಮೈಟ್‌ ಸಿಡಿದು ನನ್ನ ಎರಡೂ ಕೈಗಳನ್ನು ಕಳೆದುಕೊಳ್ಳಬೇಕಾಯಿತು. ಆವತ್ತಿನ ಅಪಘಾತ ನನಗೆ ಇನ್ನೂ ಕಣ್ಮುಂದೆ ಕಟ್ಟಿದಂತಿದೆ,” ಎಂದರು ಹನುಮಂತ.

ಹೀಗೆ ಹೇಳುವಾಗ ಅವರ ಕಣ್ಣುಗಳಲ್ಲಿ ಸಣ್ಣ ನೀರಿನ ಪೊರೆ ಇತ್ತು; ಮಾತುಗಳು ಹೃದಯದಿಂದ ಹೊರಡುತ್ತಿದ್ದವು. ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಕಂಪ್ಯೂಟರ್ ಸೇಲ್ಸ್‌ ಮತ್ತು ಸರ್ವೀಸ್ ಅಂಗಡಿ ಇಟ್ಟುಕೊಂಡಿದ್ದಾರೆ ಹನುಮಂತ. ಸವಿತಾ ಕಂಪ್ಯೂಟರ್ಸ್‌ ಅಂತ ಹೆಸರಿಟ್ಟಿದ್ದಾರೆ. ಸವಿತಾ ಅವರ ಹೆಂಡತಿ ಹೆಸರು.

ಚಿಕ್ಕವಯಸ್ಸಿನಲ್ಲಿ ದುಡಿಮೆಗೆ ಅಗತ್ಯವಾದ ಎರಡೂ ಕೈಗಳನ್ನು ಬಾಗಶಃ ಕಳೆದುಕೊಂಡವರು, ಇವತ್ತು ಬದುಕಿನ ಹಾದಿಯನ್ನು ಕಂಡುಕೊಂಡಿದ್ದಾರೆ. ದೈಹಿಕವಾಗಿ ಎಲ್ಲ ಸರಿಯಿರುವವರೇ ಅನೇಕರು ಏನೂ ಸಾಧಿಸಲಾಗದೇ ಕುಳಿತಿರುವವರ ಮದ್ಯ ಹನುಮಂತ ವಿಭಿನ್ನವಾಗಿ ನಿಂತಿದ್ದಾರೆ. ಹಾಗಂತ ಇದು ವಿಲಕಚೇತನರೊಬ್ಬರ ಸಾಧನೆ ಸ್ಟೋರಿ ಮಾತ್ರವೇ ಅಲ್ಲ.

ಹನುಮಂತ ಹುಟ್ಟಿದ್ದು 1984ರಲ್ಲಿ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆ ಹತ್ತಿರದ ನಾಣಾಪುರ ಅವರೂರು. ಕಡು ಬಡತನದ ಹಿನ್ನಲೆ ಅವರದ್ದು. ಮದ್ದು ಸಿಡಿದು ಕೈಗಳು ಊನವಾದ ನಂತರ, ಹನುಮಂತನಿಗೆ ಚಿಕಿತ್ಸೆ ಕೊಡಿಸಲು ಕುಟುಂಬದ ಬಳಿ ದುಡ್ಡಿರಲಿಲ್ಲ. ಹೀಗಾಗಿ ಸಮಸ್ಯೆಯ ನಡುವೆಯೇ ಬದುಕುವುದು ಅವರಿಗೆ ಅನಿವಾರ್ಯವೇ ಆಯಿತು. ಕೊನೆಗವರು ಅದನ್ನೇ ಸವಾಲಾಗಿ ಸ್ವೀಕರಿಸಿದರು ಕೂಡ.

ಶಾಲೆಯ ಮೆಟ್ಟಿಲನ್ನೇ ಹತ್ತದ ಹನುಮಂತ, ‘ದುರ್ಘಟನೆ’ ನಡೆದ ನಂತರ ದೂರ ಶಿಕ್ಷಣದ ಮೂಲಕ ಎಸ್‌ಎಸ್‌ಎಲ್‌ಸಿ ಮುಗಿಸಿಕೊಂಡರು. ತದನಂತರ ಎರಡು ವರ್ಷಗಳಲ್ಲಿ ಪಿಯುಸಿ ಮುಗಿಸಿದರು. ಟಿಸಿಎಚ್‌ ಕಲಿಯಬೇಕೆಂಬ ಬಯಕೆಯಿದ್ದರೂ ಹಣದ ಸಮಸ್ಯೆಯಿಂದ ಕಲಿಯಲು ಸಾಧ್ಯವಾಗಲಿಲ್ಲ.

ಕೆಲಸವನ್ನು ಹುಡುಕಿಕೊಂಡು ಬಂದಿದ್ದು ಬೆಂಗಳೂರಿಗೆ; ಅದು ನಡೆದುಕೊಂಡು. ಹಾಗೆ ಬಂದವರು ಮಲ್ಲೇಶ್ವರ ಮುಖ್ಯರಸ್ತೆಯಲ್ಲಿ ‘ಕೆಲಸ ಕೊಡಿ’ ಎಂದು ಕೇಳಿಕೊಂಡು ಹೋದರು. ಎರಡೂ ಕೈಗಳ ಸಮಸ್ಯೆಯನ್ನು ನೋಡಿ  ಕೆಲಸ ನೀಡಲು ಅಲ್ಲಿದ್ದವರು ಯಾರೂ ಮುಂದೆ ಬರಲಿಲ್ಲ.

ಅಂತಹ ಸಮಯದಲ್ಲಿ ಅವರಿಗೆ ಸಿಕ್ಕಿದ್ದು ದೇವಯ್ಯ ಪಾರ್ಕ್‌ ಹತ್ತಿರದ ವಿನಾಯಕ್ ಎಂಟರ್‌ಪ್ರೈಸ್ ಸೈಬರ್ ಸೆಂಟರ್‌ ಮಾಲೀಕರು. ಕೈಗಳು ಇಲ್ಲದಿದ್ದರೇನಂತೆ, ಬದುಕಲು ಅವಕಾಶ ಇಲ್ಲಿದೆ ಎಂದು ಕರೆದುಕೊಂಡು ಹೋಗಿ ಕೆಲಸ ನೀಡಿದರು, ಬದುಕುವ ಕಲೆಯನ್ನು ಹೇಳಿಕೊಟ್ಟರು.

“ನಾನು ಬೆಂಗಳೂರಿಗೆ ಬಂದು 12 ವರ್ಷಗಳಾಯಿತು. ಮೊದಲಿಗೆ ಬಂದಾಗ ಇಲ್ಲಿ ಕೆಲಸಕ್ಕಾಗಿ ಸಾಕಷ್ಟು ಅಲೆದಿದ್ದೇನೆ. ನನ್ನ ಕೈಗಳನ್ನು ನೋಡಿ ಯಾರೂ ಕೆಲಸ ಕೊಡಲು ಮುಂದೆ ಬರಲಿಲ್ಲ. 6 ವರ್ಷಗಳ ಕಾಲ ಕಂಪ್ಯೂಟರ್ ಸರ್ವೀಸ್ ಮಾಡುವುದನ್ನೇ ಕಲಿತಿದ್ದ ನಾನು, ಸ್ವತಃ ನನ್ನದೇ ಅಂಗಡಿಯೊಂದನ್ನು ಪ್ರಾರಂಭಿಸಬೇಕೆಂಬ ಆಲೋಚನೆ ಬಂತು. ಮುಂದೊಂದು ದಿನ ಅದು ಕಾರ್ಯರೂಪಕ್ಕೆ ತಂದೆ,” ಎಂದು ಇವತ್ತು ಉತ್ಸಾಹದಿಂದಲೇ ಹೇಳುತ್ತಾರೆ ಹನುಮಂತ.

“ನನ್ನ ಕೈಗಳು ಊನವಾದ ನಂತರ, ದೈಹಿಕವಾಗಿ ನನಗೆ ‘ನ್ಯೂನ್ಯತೆ’ ಉಂಟಾದರೂ, ಮಾನಸಿಕವಾಗಿ ನಾನು ಸದೃಢನಾಗಿದ್ದೆ. ಏನಾದರೂ ಸಾಧಿಸಬೇಕೆಂಬ ‘ಮನೋಬಲ’ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿತ್ತು. ಅದೇ ಛಲ ನನ್ನನ್ನು ಸ್ವಾಭಿಮಾನದಿಂದ ದುಡಿದು ಬದುಕಲು ಕಾರಣವಾಯಿತು,” ಎಂದು ಆನಂದ ಬಾಷ್ಪದ ಮೂಲಕವೇ ಹಳೆಯ ನೆನಪುಗಳನ್ನು ಮೆಲಕು ಹಾಕಿದರವರು.

ಹನುಮಂತ ಅವರ ಕೈಗಳು ಹೀಗಿವೆ
ಹನುಮಂತ ಅವರ ಕೈಗಳು ಹೀಗಿವೆ
“ಬೆಂಗಳೂರಿನಲ್ಲಿ ತುಂಬ ತರಹದ ಕೆಲಸಗಳು ಸಿಗುತ್ತವೆ. ಇಲ್ಲಿ ಯಾವುದಾದರೂ ಒಂದು ಕೆಲಸವನ್ನು ಸರಿಯಾಗಿ ಶೃದ್ಧೆಯಿಂದ ಮಾಡುತ್ತ ಹೋಗಬೇಕು. ಕೆಲವು ವರ್ಷಗಳ ತನಕ ಕೆಲಸ ಮಾಡಿದರೆ, ಆ ಕೆಲಸದಲ್ಲಿ ಪರಿಣತಿ ತಂತಾನೇ ಬರುತ್ತದೆ. ಏನೂ ಆಗುವುದಿಲ್ಲ ಎಂದು ಸುಮ್ಮನೇ ಕೂರುವುದಕ್ಕಿಂತ ಏನಾದರೂ ಮಾಡಬೇಕು ಎಂದು ಹೊರಟಾಗಲೇ ನಾವು ಅನೇಕ ಸವಾಲುಗಳನ್ನು ಎದುರಿಸುತ್ತೇವೆ. ಆ ಸವಾಲುಗಳನ್ನು ಮೆಟ್ಟಿ ನಿಂತಾಗಲೇ ಸಾಧಿಸಲು ಸಾಧ್ಯ. ಕಷ್ಟಗಳನ್ನು ಎದುರಿಸಿ ನಿಂತರೆ, ಬದುಕಿನ ಮುಂದಿನ ಹಾದಿ ಸುಗಮವಾಗುತ್ತದೆ,”
-ಹನುಮಂತ, ವಿಶೇಷ ಚೇತನ

ಕಂಪ್ಯೂಟರ್‌ ರಿಪೇರಿ ಕೆಲಸ ಮಾಡುವಾಗ, ಬೇರೆ ಬೇರೆ ಸ್ಥಳಗಳಿಗೆ ಹೋಗಬೇಕಾಗಿ ಬರುತ್ತಿತ್ತು. ಆಗ ಬಸ್‌ಗಳಲ್ಲಿ ಓಡಾಟ ಅವರಿಗೆ ತುಂಬ ಕಷ್ಟವೆನಿಸುತ್ತಿತ್ತು. ಇದನ್ನೇ ಅವರು ಸವಾಲಾಗಿ ಸ್ವೀಕರಿಸಿ ದ್ವಿಚಕ್ರ ವಾಹನ ಒಡಿಸುವುದನ್ನು ಕಲಿಯಲು ಪ್ರಾರಂಭಿದರು. ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ. ಕೊನೆಗೆ ಕಾರನ್ನು ಓಡಿಸುವುದನ್ನು ಕಲಿತರು. ಒಂದು ತಿಂಗಳ ತರಬೇತಿ ಅವರಿಗೆ ಸಹಾಯ ಮಾಡಿತು. ಬೆರಳುಗಳು ಇಲ್ಲದ ಕೈ, ಕಾರು ಓಡಿಸಲು ಅವರಿಗೆ ಸಮಸ್ಯೆ ಎನ್ನಿಸಲಿಲ್ಲ.

ಕಂಪ್ಯೂಟರ್ ರಿಪೇರಿ ಮಾಡುವುದನ್ನು ಕಲಿಯಲು ಹನುಮಂತ ಒಮ್ಮೆ ಟ್ರೀನಿಂಗ್ ಕ್ಲಾಸ್‌ಗೆ ಹೋಗಿದ್ದರು. ಆದರೆ ಟ್ರೇನಿಂಗ್ ಹೇಳಿಕೊಡಲು ಅಲ್ಲಿ ಕೇಳಿದ್ದು 40,000ರೂ ಹಣ. ಆಗ ಇವರಿಗೆ ದೊರೆಯುವ ಸಂಬಳವೇ ಒಂದೂವರೆ ಸಾವಿರ ರೂಪಾಯಿ. ತರಬೇತಿ ತೆಗೆದುಕೊಳ್ಳಲೂ ಹಣವಿಲ್ಲದೇ ಸುಮ್ಮನಾಗುತ್ತಾರೆ. ಕೊನೆಗೆ ತಾವು ಕೆಲಸ ಮಾಡುತ್ತಿದ್ದ ಅಂಗಡಿಯಲ್ಲಿಯೇ ಇಚ್ಛಾಶಕ್ತಿಯಿಂದ ಕಂಪ್ಯೂಟರ್‌ ರಿಪೇರಿಯನ್ನು ಕಲಿಯುತ್ತಾರೆ. ಕೆಲವು ವರ್ಷಗಳ  ನಂತರ ಅದು ಮುಚ್ಚಿದಾಗ ತಾವೇ ಸ್ವತಃ ಅಂಗಡಿ ಪ್ರಾರಂಭಿಸಿದರು. ಅಲ್ಲಿ ಕೆಲಸ ಬಿಡುವ ವೇಳೆಗೆ ನಾಲ್ಕೂವರೆ ಸಾವಿರ ಸಂಪಾದನೆ ಮಾಡುತ್ತಿದ್ದವರು, ಈಗ 40 ರಿಂದ 50 ಸಾವಿರ ಹಣವನ್ನು ದುಡಿಯುತ್ತಿದ್ದಾರೆ.

ಪರವಾನಗಿ ನೀಡಲು ಮನವಿ:

ಕಂಪ್ಯೂಟರ್ ಆಪರೇಟ್ ಮಾಡುತ್ತಿರುವ ಹನುಮಂತ
ಕಂಪ್ಯೂಟರ್ ಆಪರೇಟ್ ಮಾಡುತ್ತಿರುವ ಹನುಮಂತ

ಅಸಲಿ ಕತೆ ಇರುವುದು ಇಲ್ಲಿ. ಹನುಮಂತ ಇವತ್ತು ಸರಕಾರದ ಮುಂದೆ ವಿಶೇಷಚೇತನರಿಗೆ ನೀಡುವ ಮಾಶಾಸನ ಕೊಡಿ ಎಂದು ಕೈ ಒಡ್ಡಲಿಲ್ಲ. ಬದಲಿಗೆ, ದುಡಿಮೆಯ ಹಾದಿಯನ್ನು ಕಂಡುಕೊಳ್ಳುವ ಮೂಲಕ ಸ್ವಾವಲಂಭಿಯಾಗಿದ್ದಾರೆ. ಅಷ್ಟೇ ಅಲ್ಲ, ಅವರೀಗ ತೆರಿಗೆ ಕಟ್ಟುವ ಮೂಲಕ ಸರಕಾರದ ಬೊಕ್ಕಸಕ್ಕೆ ತಮ್ಮದೇ ದುಡಿಮೆಯಲ್ಲಿ ಹಣವನ್ನೂ ನೀಡುತ್ತಿದ್ದಾರೆ. ಜತೆಗೆ, "ನನಗೊಂದು ನಾಲ್ಕು ಚಕ್ರ ವಾಹನ ಚಾಲನೆ ಮಾಡಲು ಪರವಾನಗಿ ನೀಡಿ," ಎನ್ನುತ್ತಿದ್ದಾರೆ.

ಈ ಹಿಂದೆ, ಹನುಮಂತ ಅವರನ್ನು ಮೊದಲ ಬಾರಿ ಭೇಟಿ ಆದಾಗ, 'ಸಮಾಚಾರ'ವೇ ಮುಂದೆ ನಿಂತು ಪ್ರಾದೇಶಿಕ ಸಾರಿಗೆ ಅಧಿಕಾರಿಯೊಬ್ಬರ ಬಳಿ ಕಳುಹಿಸಿಕೊಡಲಾಗಿತ್ತು. 'ನೀವು ಕಾರು ಓಡಿಸಲು ದೈಹಿಕವಾಗಿ ಸಮರ್ಥರು ಎಂಬುದನ್ನು ನಿರೂಪಿಸಲು ವೈದ್ಯಕೀಯ ಪ್ರಮಾಣ ಪತ್ರ ತನ್ನಿ' ಎಂಬುದು ಅವರ ಉತ್ತರವಾಗಿತ್ತು.

ಸರಕಾರಿ ವೈದ್ಯರೊಬ್ಬರ ಬಳಿ ಪ್ರಮಾಣ ಪತ್ರಕ್ಕೆ ಕೋರಿಕೆ ಸಲ್ಲಿಸಿದರೆ, 'ಇದು ಕಷ್ಟ. ಕಾನೂನಿನಲ್ಲಿ ಅವಕಾಶ ಇಲ್ಲ. ಯಾವುದಾದರೂ ನ್ಯಾಯಾಲಯದಲ್ಲಿ ಒಂದು ಆದೇಶ ಪಡೆದುಕೊಳ್ಳಿ' ಎಂಬ ಉತ್ತರ ಬಂತು. ಈ ದೇಶದಲ್ಲಿ ನ್ಯಾಯಾಲಯದ ಪ್ರಕ್ರಿಯೆಗಳು ಹೇಗೆ ನಡೆಯುತ್ತವೆ, ಎಷ್ಟು ಸಮಯ ತೆಗೆದುಕೊಳ್ಳುತ್ತವೆ ಎಂಬ ಗೊತ್ತೇ ಇದೆ.

“ನಿಮಗೆ ಕೈಗಳಿಲ್ಲ. ಕಾರಿನ ಸ್ಟೇರಿಂಗ್ ಹೇಗೆ ಹಿಡಿಯುತ್ತೀರಾ? ಎಂದು ಪ್ರಶ್ನಿಸುತ್ತಾರೆ ಹೊರತು, ನಾನು ಕಾರನ್ನು ಸಲೀಸಾಗಿ ಓಡಿಸುವುದನ್ನು ಯಾರೂ ನೋಡಲು ತಯಾರಿಲ್ಲ. ಕಾನೂನನ್ನು ಮುಂಡಿಟ್ಟು, ನನ್ನ ಕ್ರಿಯಾಶೀಲತೆಯನ್ನು ಒಪ್ಪದೆ ಹೋಗುತ್ತಾರೆ. ಇದು ನನ್ನೊಳಗಿನ ಆತ್ಮವಿಶ್ವಾಸವನ್ನೇ ಕುಗ್ಗುವಂತೆ ಮಾಡುತ್ತಿದೆ,'' ಎನ್ನುತ್ತಾರೆ ಹನುಮಂತ.

ಹೆಚ್ಚು ಕಡಿಮೆ ಇದೇ ಮಾದರಿಯ ಆದರೆ ಎರಡೂ ಕೈಗಳೇ ಇಲ್ಲದ ಪ್ರಕರಣವೊಂದರಲ್ಲಿ ಇಂದೋರ್‌ನಲ್ಲಿ ವಿಶೇ‍‍ಷಚೇತನರೊಬ್ಬರಿಗೆ ಡಿಎಲ್‌ ನೀಡಲಾಗಿದೆ. ಅವರ ಹೆಸರು ವಿಕ್ರಂ ಅಗ್ನಿಹೋತ್ರಿ ಎಂದು ವರದಿಗಳು ಹೇಳುತ್ತವೆ. ಆದರೆ ನಮ್ಮ ರಾಜ್ಯದಲ್ಲಿ ಅದು ಯಾಕೆ ಸಾಧ್ಯವಾಗುವುದಿಲ್ಲ? ಮನುಷ್ಯನ ಚೈತನ್ಯಕ್ಕಿಂತ ಕಾನೂನು ದೊಡ್ಡದಾಗುತ್ತಾ?

“ ಸಾರಿಗೆ ನಿಯಮಗಳನ್ನು ಅಧಿಕಾರಿಗಳು ಫಾಲೋ ಮಾಡಲಿ. ಅದು ಒಳ್ಳೆಯದೇ. ಆದರೆ ಕೈಗಳಿಲ್ಲ ಎಂಬ ಒಂದೇ ಕಾರಣವೇ ಅಪಘಾತಕ್ಕೆ ಕಾರಣವಾಗುತ್ತದೆ ಎಂಬ ನೆಪವೊಡ್ಡಿ ತಿರಸ್ಕಾರ ಮಾಡಬಾರದು. ಕೈಗಳಿರುವವರಿಗೆ ಮಾತ್ರ ಚಾಲನಾ ಪರವಾನಗಿ ಕೊಟ್ಟಿರುತ್ತಾರೆ. ಅವರಲ್ಲಿ ಯಾರಿಗೂ ಇಲ್ಲಿಯವರೆಗೆ ಅಪಘಾತವೇ ಆಗಿಲ್ಲವೇ?,'' ಎಂದು ಪ್ರಶ್ನಿಸುತ್ತಾರೆ ಹನುಮಂತ.

ಹನುಮಂತ ಅವರ ಸಮಸ್ಯೆ ಕುರಿತು ಸಾರಿಗೆ ಇಲಾಖೆ ಆಯುಕ್ತ ಬಿ. ದಯಾನಂದ್ ಅವರ ಗಮನಕ್ಕೆ ತರುವ ಪ್ರಯತ್ನ ಮಾಡಲಾಯಿತಾದರೂ, ಅವರು ಸಂಪರ್ಕಕ್ಕೆ ಲಭ್ಯರಾಗಲಿಲ್ಲ.