samachara
www.samachara.com
ಸಿದ್ದೇಶ್ವರ ಸ್ವಾಮೀಜಿ (ಕೃಪೆ: ಯೂಟ್ಯೂಬ್) 
ಸುದ್ದಿ ಸಾಗರ

‘ಪದ್ಮಶ್ರೀ’ಯನ್ನು ವಿನಮ್ರವಾಗಿ ನಿರಾಕರಿಸಿದ ವಿಜಯಪುರ ಸಂತ: ಸಿದ್ದೇಶ್ವರ ಸ್ವಾಮಿ ಎಂಬ ಆಧ್ಯಾತ್ಮಿಕ ಚೇತನದ ಕುರಿತು...

"ಭಾರತ ಸರಕಾರ ನೀಡುವ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಗಳ ಮೇಲೆ ನನಗೆ ಅಪಾರ ಗೌರವವಿದೆ. ಪದ್ಮಶ್ರೀ ಪ್ರಶಸ್ತಿ ಘೋಷಿಸಿದ್ದಕ್ಕೆ ಧನ್ಯವಾದಗಳು. ಆದರೆ ನಾನೊಬ್ಬ ಸರಳ ವ್ಯಕ್ತಿ. ಸಾಮಾನ್ಯ ಜೀವನ ನಡೆಸುತ್ತ, ಆಧ್ಯಾತ್ಮಿಕ ಬೋಧನೆಯ ಮೂಲಕ ಜನರ ಜೀವನ ಉದಾತ್ತಗೊಳಿಸುವುದು ಉದ್ದೇಶ ನನ್ನದು. ಹಾಗಾಗಿ ಪ್ರಶಸ್ತಿಗಳ ಅವಶ್ಯತೆಯು ನನಗಿಲ್ಲ. ಎಲ್ಲ ಗೌರವಾಧರಗಳೊಂದಿಗೆ ಈ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದೇನೆ. ಅನ್ಯಥಾ ಭಾವಿಸದಿರಿ,” ಎಂದವರು ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ.

ಸಿದ್ದೇಶ್ವರ ಸ್ವಾಮೀಜಿಯವರು ತಮಗೆ ನೀಡಿದ ಪದ್ಮಶ್ರೀ ಪ್ರಶಸ್ತಿಯನ್ನು ತಿರಸ್ಕರಿಸಿ ಬರೆದ ಪತ್ರ
ಸಿದ್ದೇಶ್ವರ ಸ್ವಾಮೀಜಿಯವರು ತಮಗೆ ನೀಡಿದ ಪದ್ಮಶ್ರೀ ಪ್ರಶಸ್ತಿಯನ್ನು ತಿರಸ್ಕರಿಸಿ ಬರೆದ ಪತ್ರ

ಸಿದ್ದೇಶ್ವರ ಸ್ವಾಮೀಜಿಯವರನ್ನು ಜನರು ಸಾಮಾನ್ಯವಾಗಿ ‘ಬುದ್ದೀಜಿ’ ಮತ್ತು 'ಅಪ್ಪಾಜೀ' ಎಂದೇ ಪ್ರೀತಿ ಹಾಗೂ ಗೌರವದಿಂದ ಸಂಬೋಧಿಸುತ್ತಾರೆ. ಇವರ ಪ್ರವಚನವನ್ನು ಆಲಿಸಲು ದೂರದೂರುಗಳಿಂದ ಜನರು ಆಗಮಿಸುತ್ತಾರೆ. ಅವರಲ್ಲಿ ಅನೇಕರು ಸ್ವಾಮೀಜಿಯ ಪ್ರವಚನ ಕೇಳಿ ತಮ್ಮ ದುಷ್ಟ ಚಟಗಳನ್ನು ಬಿಟ್ಟು ಉತ್ತಮ ಜೀವನವನ್ನೂ ನಡೆಸುತ್ತಿರುವವರೂ ಇದ್ದಾರೆ.

ಈ ಹಿಂದೆ ಕರ್ನಾಟಕ ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್ ಪ್ರಕಟಿಸಿತ್ತು. ಅದನ್ನೂ ಶ್ರೀಗಳು ಸ್ವೀಕರಿಸಿರಲಿಲ್ಲ. ಹೀಗೆ ತಮಗೆ ಸಂದ ಎಷ್ಟೋ ಪ್ರಶಸ್ತಿ ಮತ್ತು ಪುರಸ್ಕಾರಗಳನ್ನು ಅವರು ವಿನಮೃವಾಗಿಯೇ ನಿರಾಕರಿಸಿದ್ದಾರೆ. ಇದಕ್ಕೆ ಕಾರಣವೇನು? ಎಂಬ ಪ್ರಶ್ನೆಗೆ, “ಅವರು ಆಧ್ಯಾತ್ಮ, ಆದರ್ಶ ಮತ್ತು ನೈತಿಕತೆ ಬಗ್ಗೆ ಕೇವಲ ಬೋಧನೆ ಮಾಡುವುದಷ್ಟೇ ಅಲ್ಲ. ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ನುಡಿದಂತೆ ನಡೆಯುವ ಮತ್ತು ನಡೆದಂತೆಯೇ ನುಡಿಯುವ ವ್ಯಕ್ತಿತ್ವ ಅವರದು,” ಎಂದು ಸ್ವಾಮೀಜಿಯನ್ನು ಹತ್ತಿರದಿಂದ ಕಂಡಿರುವವರೊಬ್ಬರು ಹೇಳುತ್ತಾರೆ.

ಸಿದ್ಧೇಶ್ವರ ಸ್ವಾಮೀಜಿಯವರ ಪ್ರವಚನ ಸದ್ಯ ಕಲಬುರ್ಗಿಯಲ್ಲಿ ನಡೆಯುತ್ತಿದೆ. ಜಾತಿ ಮತಗಳ ಬೇಧ ಭಾವವಿಲ್ಲದೇ ಅನೇಕರು ಪ್ರವಚನಕ್ಕೆ ಬರುತ್ತಾರೆ. ಈ ಪ್ರವಚನದ ‘ಆಡೀಯೋ ರೆಕಾರ್ಡ್’ ಅನ್ನು ‘ಸಿದ್ದೇಶ್ವರ ಗುರುವೇ ನಮಃ,’ ಎಂಬ ವಾಟ್ಸಾಪ್‌ ಗ್ರುಪ್‌ನಲ್ಲಿ ಪ್ರತಿದಿನವೂ ಹಂಚಿಕೊಳ್ಳಲಾಗುತ್ತದೆ. ಈ ಮೂಲಕ ಪ್ರವಚನದ  ಸ್ಥಳಕ್ಕೆ ಹೋಗಿ ಕೇಳಲು ಸಾಧ್ಯವಾಗದಿರುವವರಿಗೆ, ಶ್ರೀಗಳ ಮಾತುಗಳು ತಲುಪಬೇಕು ಎಂಬುದು ಸ್ವಾಮೀಜಿ ಆಪ್ತರ ಮನದಾಶಯ.

'ಪದ್ಮಶ್ರೀ' ಪ್ರಶಸ್ತಿಯ ಸ್ವೀಕಾರದ ಕುರಿತು ಸ್ವಾಮೀಜಿ ಭಕ್ತರಲ್ಲಿ (ಆಪ್ತರಲ್ಲಿ) ಮೊದಲೇ ಸ್ಪಷ್ಟ ಅಭಿಪ್ರಾಯವಿತ್ತು. ಪ್ರಶಸ್ತಿ ಘೋಷಣೆಯಾಗಿದೆ ಎಂದು ಸುದ್ದಿ ಮಾಧ್ಯಮಗಳ ಮೂಲಕ ತಿಳಿಯುತ್ತಿದ್ದಂತೆಯೇ ಅವರು, “ಈ ಪ್ರಶಸ್ತಿಯನ್ನು ಸ್ವಾಮೀಜಿ ವಿನಮ್ರವಾಗಿಯೇ ನಿರಾಕರಿಸುತ್ತಾರೆ,” ಎಂದು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ಅದರಂತೆಯೇ ಶುಕ್ರವಾರ (ಡಿ.26) ಪತ್ರದ ಮೂಲಕ ತಮ್ಮ ಅಭಿಪ್ರಾಯವನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿದ್ದಾರೆ ಸ್ವಾಮೀಜಿ.

ಪ್ರತಿಕ್ರಿಯೆಗಳು:

“ನಮ್ಮ ರಾಷ್ಟ್ರದ ಅತ್ಯುನ್ನತ ನಾಗರಿಕ ಗೌರವ ಪದ್ಮ ಪ್ರಶಸ್ತಿಗಳಿಗೆ ಹಾತೊರೆಯುವ ಈ ಕಾಲ ಘಟ್ಟದಲ್ಲಿ, ದೊರೆತ ಪ್ರಶಸ್ತಿಯನ್ನು ಸದುವಿನಯತೆಯಿಂದ ದೂರ ಸರಿಸಿದ, ಇವೆಲ್ಲವುಗಳನ್ನು ಮೀರಿದ ಬಹು ಎತ್ತರದ ಪರಿಪೂರ್ಣರು ಶಿವಯೋಗಿ ಸಿದ್ಧೇಶ್ವರರು. ‘ಶಿವಯೋಗಿ ಸಾಕ್ಷಾತ್ ಶಿವನಾದ ಕಾರಣದಿ ಅವನಿ ಭೋಗಗಳವಗೆ ತೃಣಗಾಂಬವು’ ಎಂಬುದನ್ನು ದಿಟಗೊಳಿಸಿದ ಈ ಮಹಾತ್ಮರಿಗೆ ಭಕ್ತಿ ಗೌರವ ತುಂಬಿದ ಅನಂತಾನಂತ ಪ್ರಣಾಮಗಳು,”
-ಅಜ್ಜಂಪುರ ಶೆಟ್ರು, ಸ್ವಾಮೀಜಿಯವರ ಭಕ್ತ
“ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಶ್ರೀಗಳು ಯುಗಾವತಾರಿಗಳು. ನುಡಿದಂತೆ ನಡೆದ ಮಹಾತ್ಮರು. ಅಂಥವರಿಗೆ ಪ್ರಶಸ್ತಿ ಕೊಟ್ಟು ಗೌರವಿಸುತ್ತೇವೆ ಎನ್ನುವುದು ಸರಕಾರದ ಹುಚ್ಚುತನ. ಯಾಕೆಂದರೆ, ಅವರ ಜ್ಞಾನದ ವಿಸ್ತಾರಕ್ಕೆ ಆಕಾಶದ ವಿಸ್ತಾರವು ನಿಶೂನ್ಯವಾಗುತ್ತದೆ. ಒಂದು ವೇಳೆ ಹನ್ನೆರಡನೆಯ ಶತಮಾನದ ಬಸವಣ್ಣನವರಾಗಲೀ, ಅಲ್ಲಮರಾಗಲೀ ಇದ್ದಿದ್ದರೆ, ಅಪ್ಪಾಜಿಯವರನ್ನು ನೋಡಿ ಅಚ್ಚರಿಪಟ್ಟು, ಗೌರವ ಸಲ್ಲಿಸುತ್ತಿದ್ದರು,”
-ಪರಶುರಾಮ್, ಶ್ರೀ ಸಿದ್ದೇಶ್ವರ ಸ್ವಾಮೀಜಿ ಭಕ್ತರು
ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದ ಚಿತ್ರ
ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದ ಚಿತ್ರ
“ಪರಮ ಪೂಜ್ಯರಿಗೆ ನೋಬೆಲ್ ಕೊಟ್ಟರೂ ಅನಂತ ನಕ್ಷತ್ರಗಳ ನಡುವೆ ಶೋಭಿಸುವ ಚಂದ್ರನಂತಿರುವ ಅವರಿಗೆ ಸಮವಲ್ಲ. ಅಂತಹ ವ್ಯಕ್ತಿತ್ವ ಪೂಜ್ಯ ಅಪ್ಪಾಜಿಯವರದು. ಅವರು ‘ಪದ್ಮಶ್ರೀ’ ಪ್ರಶಸ್ತಿಯನ್ನು ನಯವಾಗಿ ನಿರಾಕರಿಸಿದ್ದನ್ನು ನೋಡಿದರೆ, ಯಾವ ಪ್ರಶಸ್ತಿಗಳಿಗೂ ಆಶೆ ಪಡದ ಅತ್ಯಂತ ಸರಳತೆಯ ಜೀವಿ,”
-ಶ್ರೀ ಸಿ.ಎಸ್.ನಂದವಾಡಗಿ
“ಗುರುಗಳು ಯಾವ ಪ್ರಶಸ್ತಿ ಸ್ವಿಕರಿಸುವುದಿಲ್ಲ ಎಂದು ನನಗೆ ಮೊದಲೇ ಅನಿಸಿತ್ತು. ಈಗ ಅವರು ಪ್ರಶಸ್ತಿಯ ನಿರಾಕರಿಸಿದ್ದಾರೆ. ಈ ಹಿಂದೆ ಧಾರವಾಡ ವಿಶ್ವವಿದ್ಯಾಲಯ ‘ಡಾಕ್ಟರೇಟ್’ ಕೊಟ್ಟಾಗಲೂ ಅವರು ಅದನ್ನು ನಿರಾಕರಿಸಿದ್ದರು. ತಮ್ಮ ಪ್ರವಚನದಲ್ಲಿ ಮನುಷ್ಯ ಪ್ರಶಸ್ತಿ, ಕೀರ್ತಿ ವಾರ್ತೆಗಳ ಹಿಂದೆ ಬೀಳಬಾರದು ಎಂದು ಬೋಧಿಸುತ್ತಾರೆ.ಅವರ ಮಾತಿಗೆ ತಲೆದೂಗದವರೇ ಇಲ್ಲ,”
-ವಿರುಪಾಕ್ಷ ಚಾಕಲಬ್ಬಿ, ಆಧ್ಯಾತ್ಮ ಜಿಜ್ಞಾಸು
“ಪ್ರಾನ್ಸ್ ಅಧ್ಯಕ್ಷ ಆಗಲು ಕರೆದಾಗ ಓಶೋ ನಿರಾಕರಿಸಿದರು, ಜೆ. ಕೃಷ್ಣಮೂರ್ತಿ 6 ರಾಷ್ಟ್ರಗಳು ನೀಡಲು ಮುಂದಾಗಿದ್ದ ಡಾಕ್ಟರೇಟ್ ನಿರಾಕರಿಸಿದರು, ಜೀನ್ ಪಾಲ್ ಸಾರ್ತ್ರೆ ನೋಬೆಲ್ ಪಾರಿತೋಷಕ ನಿಕಾಕರಿಸಿದರು. ಅವರ ಸಾಲಿಗೆ ಸಿದ್ದೇಶ್ವರರು ಸೇರಿದರು,”
-ಅರುಣ್ ಹಂಶಿ, ಶಿಕ್ಷಕರು
“ಸಿದ್ದೇಶ್ವರ ಸ್ವಾಮೀಜಿಯ ನಿರ್ಧಾರ ಸ್ವಾಗತಾರ್ಹ. ಇದನ್ನೇ ನಾನು ಅವರಿಂದ ನಿರೀಕ್ಷೆ ಮಾಡಿದ್ದೆ. ಅವರು ಇತರ ಸ್ವಾಮೀಜಿಗಳಿಗೂ ಮಾದರಿ. ಕೆಲವು ಸ್ವಾಮೀಜಿಗಳು ಪ್ರಶಸ್ತಿಗಾಗಿ ಹೊಡೆದಾಡುತ್ತಾರೆ. ಇದು ಅಸಹ್ಯ ಹುಟ್ಟಿಸುತ್ತೆ. ಸಂತರು ಸಾಮಾನ್ಯ ಮಾನವರಂತೆ ಪ್ರಶಸ್ತಿಗಳಿಗೆ ಆಶೆ ಪಡಬಾರದು,”
-ಜಯದೇವ್ ಪೂಜಾರ್, ಓಶೋ ಧ್ಯಾನ ಕೇಂದ್ರ ಧಾರವಾಡ 

ಶ್ರೀ ಸಿದ್ದೇಶ್ವರ ಸ್ವಾಮೀಜಿ ಕುರಿತು:

ಶ್ರೀ ಸಿದ್ದೇಶ್ವರ ಸ್ವಾಮಿಜಿ ಜನಿಸಿದ್ದು 1941 ಅಕ್ಟೋಬರ್ 24 ರಂದು. ವಿಜಯಪುರ ಜಿಲ್ಲೆಯ ಬಿಜ್ಜರಗಿ ಗ್ರಾಮದಲ್ಲಿ. ಅವರದ್ದು ರೈತ ಕುಟುಂಬದ ಹಿನ್ನೆಲೆ. ಆಗ ಮತ್ತು ಈಗಲೂ ವಿಜಯಪುರದ ಜ್ಞಾನಯೋಗಾಶ್ರಮ ಜನತೆಗೆ ಜ್ಞಾನದಾಸೋಹ ನೀಡುವ ವಿಶಿಷ್ಟ ಕೇಂದ್ರ. ನಿಸ್ವಾರ್ಥ ಸೇವೆಗೆ ಅದು ಹೆಸರುವಾಸಿ.

ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮಠದ ಜವಾಬ್ದಾರಿ ವಹಿಸಿಕೊಂಡು ಪ್ರವಚನ ನೀಡುತ್ತಿದ್ದರು. ಗ್ರಾಮೀಣ ಪ್ರದೇಶದ ಮಕ್ಕಳು ವಿದ್ಯೆಗಾಗಿ ಕಷ್ಟಪಡುತ್ತಿದ್ದುದನ್ನು ಗಮನಿಸಿ, ಅವರಿಗಾಗಿ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿದರು. ಊಟ, ವಸತಿಗಳಿಗೆ ವ್ಯವಸ್ಥೆ ಮಾಡಿದರು. ಸಾವಿರಾರು ಮಕ್ಕಳು ವಿದ್ಯಾವಂತರಾದರು. ಹಾಗೆ ವಿದ್ಯೆ ಕಲಿಯಲು ಬಂದ ಸಾವಿರಾರು ಮಕ್ಕಳಲ್ಲಿ ಶ್ರೀ ಸಿದ್ದೇಶ್ವರರೂ ಒಬ್ಬರು. ಹೀಗೆ ಮಲ್ಲಿಕಾರ್ಜುನ ಸ್ವಾಮಿಗಳ ಸಂಪರ್ಕಕ್ಕೆ ಬರುತ್ತಾರೆ ಶ್ರೀಗಳು.

ಮಲ್ಲಿಕಾರ್ಜುನ್ ಸ್ವಾಮೀಜಿಗಳ ಪ್ರವಚನಗಳಿಂದ ಪ್ರಭಾವಿತರಾದ ಸಿದ್ದೇಶ್ವರರು,  1960 ರಲ್ಲಿ ಮಲ್ಲಿಕಾರ್ಜುನ್ ಸ್ವಾಮೀಜಿಗಳು ಕೊಲ್ಲಾಪುರದಲ್ಲಿ ವೇದಾಂತದ ಕುರಿತು ಪ್ರವಚನ ನೀಡಿದಾಗ ಅದನ್ನು ಸಂಗ್ರಹಿಸಿ, 'ಸಿದ್ದಾಂತ ಶಿಖಾಮಣಿ' ಎಂಬ ಹೆಸರಿನಲ್ಲಿ ಪುಸ್ತಕ ಹೊರ ತಂದರು. ಆಗ ಸಿದ್ದೇಶ್ವರರ ವಯಸ್ಸು ಕೇವಲ ಹತ್ತೊಂಬತ್ತು. ಮಲ್ಲಿಕಾರ್ಜುನ ಗುರುಗಳಿಲ್ಲದಾಗ ಇವರೇ ಪ್ರವಚನ ನೀಡಲು ಆರಂಭಿಸಿದರು. ಜನ ಅವರ ಮಾತುಗಳನ್ನು ಮಂತ್ರಮುಗ್ಧವಾಗಿ ಆಲಿಸುತ್ತಿದ್ದರು.

ತಮ್ಮ ಗುರುಗಳಿಂದಲೇ ಮಹಾನ್ ಶಿಷ್ಯ ಎನಿಸಿಕೊಂಡರು ಶ್ರೀ ಸಿದ್ದೇಶ್ವರರು. ‌ಆಧ್ಯಾತ್ಮ, ಪ್ರವಚನಗಳ ಜೊತೆಗೆ ತಮ್ಮ ವಿದ್ಯಾಭ್ಯಾಸವನ್ನೂ ಮುಂದುವರೆಸಿದ ಅವರು, ಕರ್ನಾಟಕ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ನಂತರ ಕೊಲ್ಹಾಪುರ ವಿಶ್ವವಿದ್ಯಾನಿಲಯದಿಂದ ತತ್ವಶಾಸ್ತದಲ್ಲಿ ಎಂ.ಎ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಾಸಾದರು.  ಆಧ್ಯಾತ್ಮದ ಬಗ್ಗೆ ತುಂಬ ಆಳವಾದ ಅಧ್ಯಯನ ಮತ್ತು ಚಿಂತನೆಗಳನ್ನು ನಡೆಸಿರುವರು. ಕನ್ನಡ, ಸಂಸ್ಕೃತ, ಇಂಗ್ಲಿಷ್, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಅವರು ನಿಷ್ಣಾತರು. ಉಪನಿಷತ್ತುಗಳ ಕುರಿತಾಗಿ ಹಲವಾರು ಕೃತಿಗಳನ್ನು ಬರೆದಿದ್ದಾರೆ.

ಅಲ್ಲಮ ಪ್ರಭುಗಳ ವಚನಗಳ ಕುರಿತು ಸುಮಾರು ಎಂಟು ವರ್ಷಗಳ ಕಾಲ ಆಳವಾದ ಸಂಶೋಧನೆ ನಡೆಸಿ, ' ಅಲ್ಲಮ ಪ್ರಭುಗಳ ‘ವಚನಗಳ ನಿರ್ವಚನ’ವನ್ನು ಬರೆದರು. ಇದು ಅನೇಕ ಕಡೆಗಳಲ್ಲಿ ಆಕರ ಗ್ರಂಥವಾಗಿದೆ.ಶ್ರೀಗಳ ಪ್ರವಚನ ಉತ್ತರ ಕರ್ನಾಟಕದಲ್ಲಿ ಇರುವದೇ ಹೆಚ್ಚು, ಗ್ರಾಮ್ಯಭಾಷಾ(ಆಡುಭಾಷೆ) ಶೈಲಿಯಲ್ಲಿಯೇ ಅವರ ಪ್ರವಚನ ಇರುತ್ತವೆ. ಸಾಮಾನ್ಯರಿಗೂ ಅರ್ಥವಾಗುವಂತೆ ಹೇಳುವ ಕಲೆ ಶ್ರೀಗಳಿಗೆ ಸಿದ್ದಿಸಿದೆ. ಪ್ರವಚನ ಮಧ್ಯದಲ್ಲಿ ಹಲವಾರು ಕಥೆ ಮತ್ತು ಉಪಕಥೆಗಳನ್ನು ಅವರು ಹೇಳುತ್ತಾರೆ. ಹೀಗೆ ಅವರು ಇಲ್ಲಿಯವರೆಗೆ ಸುಮಾರು 400ಕ್ಕೂ ಹೆಚ್ಚು ಕಥೆಗಳನ್ನು ತಮ್ಮ ಪ್ರವಚನದಲ್ಲಿ ಹೇಳಿದ್ದಾರೆ.

“ಕಳೆದ ಹದಿನೈದು ವರ್ಷಗಳಿಂದ ಅವರ ಪ್ರವಚನಗಳನ್ನು ಆಲಿಸುತ್ತಿದ್ದೇನೆ. ಪ್ರವಚನ ಪುಸ್ತಕಗಳ ಮುಕ್ಕಾಲು ಭಾಗ ಓದಿದ್ದೇನೆ. ಸಾವಿರಾರು ಗಂಟೆಗಳ ಆಡಿಯೋಗಳನ್ನು ಸಂಗ್ರಹಿಸಿ ಕೇಳಿದ್ದೇನೆ.‌ ಅವರು ಹೇಳಿದ ಕಥೆಗಳ ಮೂಲವನ್ನು ಸ್ಪಷ್ಟವಾಗಿ ಹೇಳುತ್ತೇನೆ. ಅವರು ಕೆಲವು ಬಾರಿ ಆಂಗ್ಲ ಮತ್ತು ಸಂಸ್ಕೃತದ ನುಡಿಮುತ್ತುಗಳನ್ನು ಹೇಳಿ ಕೇಳುಗರಿಗೆ ಆಸಕ್ತಿಯನ್ನು ಉಂಟು ಮಾಡುತ್ತಾರೆ,”
-ವಿರುಪಾಕ್ಷ ಚಾಕಲಬ್ಬಿ

ಬಿಜಾಪುರ ಜ್ಞಾನಯೋಗಾಶ್ರಮದ ಅಧ್ಯಕ್ಷರಾದ ನಂತರ, ಶ್ರೀ ಸಿದ್ಧೇಶ್ವರರು ತಮ್ಮ ಗುರುಗಳ ಮಾರ್ಗದರ್ಶನದಲ್ಲೇ ಆಶ್ರಮದ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಅವರು ಪ್ರವಚನ ನೀಡಲು ಪ್ರಾರಂಭಿಸಿದ ದಿನದಿಂದಲೇ ನಿರ್ದಿಷ್ಟ ಮಠದ ಮಠಾಧೀಶರಾಗಿ ಉಳಿಯಲಿಲ್ಲ. ವಿಜಯಪುರದ ಮಠಕ್ಕೆ ಬೇರೆ ಸ್ವಾಮಿಗಳನ್ನು ನೇಮಿಸಿದ್ದಾರೆ ಅವರ ಹೆಸರು ಶಾಂತ ಮಲ್ಲಿಕಾರ್ಜುನ ಸ್ವಾಮಿ. ಸದ್ಯ ಇವರೇ ಮಠಾಧೀಶರಾಗಿದ್ದಾರೆ.

ಸಿದ್ದೇಶ್ವರ ಸ್ವಾಮೀಜಿ ತಮ್ಮ ಬಗ್ಗೆ ಪ್ರಚಾರವನ್ನು ಯಾವತ್ತೂ ಬಯಸಿದವರಲ್ಲ. ಮಾದ್ಯಮಗಳಿಂದ ಆದಷ್ಟು ದೂರವೇ ಉಳಿದಿದ್ದಾರೆ. ರಾಜಕೀಯದಿಂದಲೂ ತುಂಬ ಅಂತರವನ್ನು ಕಾಯ್ದುಕೊಂಡಿದ್ದಾರೆ. ಆದರೆ ಪ್ರವಚನದ ಮಾತುಗಳನ್ನು ಅವರ ಆಪ್ತರು ಸಂಗ್ರಹಿಸಿ ಅದಕ್ಕೆ ಬರಹದ ರೂಪ ಕೊಡುತ್ತಾರೆ. ಅದೇ ಬರಹಗಳನ್ನು ಕನ್ನಡದ ಪ್ರಮುಖ ಪತ್ರಿಕೆಗಳು ಆಧ್ಯಾತ್ಮದ ವಿಭಾಗದಲ್ಲಿ ಪ್ರಕಟ ಮಾಡುತ್ತವೆ. ಈ ಮೂಲಕ ಜನರಿಗೆ ಅವರ ಮಾತುಗಳನ್ನು ತಲುಪಿಸುತ್ತಿವೆ.