'ಕ್ಷಮಿಸು ದೇವಿ': ಶಿರಸಿ ಮಾರಿಕಾಂಬೆ ಹೆಸರು, 'ಗುಮ್ಮ'ರ ಕಾರುಬಾರು; ಇಲ್ಲೀಗ ಮರಗಳ ಮಾರಣಹೋಮದ್ದೇ ಪುಕಾರು!
ಸುದ್ದಿ ಸಾಗರ

'ಕ್ಷಮಿಸು ದೇವಿ': ಶಿರಸಿ ಮಾರಿಕಾಂಬೆ ಹೆಸರು, 'ಗುಮ್ಮ'ರ ಕಾರುಬಾರು; ಇಲ್ಲೀಗ ಮರಗಳ ಮಾರಣಹೋಮದ್ದೇ ಪುಕಾರು!

ಶಿರಸಿಯಲ್ಲೀಗ ಮಾರಿಕಾಂಬಾ ದೇವಿ ಜಾತ್ರೆಯ ಸಂಭ್ರಮ ಮನೆ ಮಾಡಿದೆ. ಅದೇ ವೇಳೆ, ಜಾತ್ರೆ ನೆಪದಲ್ಲಿ ಮರಗಳ ಕಡಿತಲೆಗೂ ಸಿದ್ಧತೆಗಳು ನಡೆಯುತ್ತಿವೆ. ಒಂದು ಕಡೆ ಧಾರ್ಮಿಕ ನಂಬಿಕೆ, ಮತ್ತೊಂದು ಕಡೆ ಅದನ್ನು ಬಳಸಿಕೊಂಡು ಪ್ರಕೃತಿಯ ಹಗಲು ದರೋಡೆಯ ಆರೋಪಗಳೀಗ ಸ್ಥಳೀಯ ಮಟ್ಟದಲ್ಲಿ ಕೇಳಿ ಬರುತ್ತಿವೆ. 

ಇಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ಮಾರಿಕಾಂಬ ಜಾತ್ರೆ ನಡೆಯುತ್ತದೆ. ಈ ವರ್ಷದ ಜನವರಿ 10ರಿಂದಲೇ ಜಾತ್ರೆಗಾಗಿ ಪೂರ್ವ ತಯಾರಿಗಳು ಆರಂಭವಾಗಿವೆ. ಎಲ್ಲವೂ ದೇವಸ್ಥಾನ ಮಂಡಳಿ ಪ್ರಕಟಿಸಿದಂತೆ ನಡೆದರೆ, ಫೆ. 20ಕ್ಕೆ ದೇವರ ರಥಕ್ಕಾಗಿ ಕಾಡಿನಿಂದ 'ಮರ ತರುವ' ಕೆಲಸ ನಡೆಯಲಿದೆ. ಈ ನೆಪದಲ್ಲಿ ಕಾನನದ ದೊಡ್ಡ ಮರಗಳ ಆಹುತಿಯಾಗಲಿದೆ. ಆದರೆ, ಇದೊಂದು ಧಾರ್ಮಿಕ ಸಂಹಿತೆ ರೂಪದಲ್ಲಿ ನಡೆದುಕೊಂಡು ಬಂದ ಸಂಪ್ರದಾಯವಾಗಿರುವುದರಿಂದ, ವಿರೋಧಗಳಿದ್ದರೂ ಅದರ ದನಿ ಕ್ಷೀಣವಾಗಿದೆ.

“ನಾವು ವಿರೋಧಿಸಿದರೆ ಅಮ್ಮ ಮುನಿಯುವಳೆಂದು ಹೆದರಿಸುತ್ತಾರೆ. ವಿರೋಧಿಸದಿದ್ದರೆ ಕಾಡು ಸರ್ವನಾಶವಾಗುತ್ತದೆ. ಏಕೆಂದರೆ ದಟ್ಟ ಕಾನನದಲ್ಲಿ ಒಂದು ಮಹಾ ವೃಕ್ಷವನ್ನು ಕಡಿದು ಕೆಡವಿದಾಗ, ಅದು ಬೀಳುವ ರಭಸಕ್ಕೆ ನೂರಾರು ಉತ್ತಮ ಜಾತಿಯ ಗಿಡಗಳು ನಾಶವಾಗುತ್ತದೆ. ಕಡಿದ ಮರಗಳನ್ನು ಸಾಗಿಸುವಾಗ ಇನ್ನಷ್ಟು ಗಿಡಗಳು ನಾಶವಾಗುತ್ತವೆ,” ಎನ್ನುತ್ತಾರೆ ಸ್ಥಳೀಯರು ಹಾಗೂ ಗ್ರಾಮ ಅರಣ್ಯ ಸಮಿತಿ ಸದಸ್ಯರು.

ಧಾರ್ಮಿಕ ಭಾವನೆಗಳನ್ನು ಬಳಸಿಕೊಂಡು ಲಾಭ ಮಾಡುಕೊಳ್ಳುವುದು ಈ ದೇಶಕ್ಕೆ ಹೊಸತೇನಲ್ಲ. ಧಾರ್ಮಿಕ ಕೇಂದ್ರಗಳಲ್ಲಿ ಕೆಲವೇ ಜನರಿಂದ ನಡೆಯುವ ಅನ್ಯಾಯಗಳ ಕತೆಗಳಿಗೂ ಇಲ್ಲಿ ಬರ ಇಲ್ಲ. ಶಿರಸಿಯ ಮಾರಿಕಾಂಬೆಯ ಜಾತ್ರೆ ನೆಪದಲ್ಲಿಯೂ, ಒಂದಷ್ಟು ಜನ ಮರಗಳನ್ನು ಕಡಿತಲೆ ಮಾಡಿ, ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಸ್ಥಳೀಯರ ಗಂಭೀರ ಆರೋಪ. ಅಮ್ಮನ ಜಾತ್ರೆ ಸಮಯದಲ್ಲಿ ಬೇಕಾಗುತ್ತದೆ ಎನ್ನಲಾದ ಪ್ರಮಾಣಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ವೃಕ್ಷಗಳನ್ನು ಜಾತ್ರೆಯ ನೆಪವೊಡ್ಡಿ ಕಡಿಯಲಾಗುತ್ತಿದೆ. ಇದಕ್ಕೆ ಪ್ರತಿ ಎರಡು ವರ್ಷಗಳಿಗೊಮ್ಮೆ ಇಲ್ಲಿನ ಸ್ಥಳೀಯರು, ದೇವಿಯ ನಿಜವಾದ ಭಕ್ತಾಧಿಗಳು ಸಾಕ್ಷಿಯಾಗುತ್ತಲೇ ಬಂದಿದ್ದಾರೆ.

ದೇವಿಗೆ ಯಾಕೆ ಮರ ಬೇಕೆ?: 

ಅಮ್ಮನ ಜಾತ್ರೆಯ ಪೂರ್ವದಲ್ಲಿ ಕಾಡಿನಿಂದ ಮರ ಕಡಿದು ತಂದು ರಥಕ್ಕೆ ಉಪಯೋಗಿಸುವುದು ಒಂದು ಧಾರ್ಮಿಕ ಪ್ರಕ್ರಿಯೆಯಾಗಿ ಇಲ್ಲಿ ನಡೆದು ಬಂದಿದೆ. ಆದರೆ ಈ ಪ್ರಕ್ರಿಯೆಗೆ ಹೆಚ್ಚಿನ ಪ್ರಮಾಣದಲ್ಲಿ ಮರಗಳು ಬೇಕಾಗುವುದಿಲ್ಲ. ತಾರೆ ಮರದ ಒಂದು ಪೀಸು ಮಾತ್ರ ಸಾಕೆಂಬುದು ಸ್ಥಳೀಯರ ಅಭಿಪ್ರಾಯ. ಹಿಂದೊಮ್ಮೆ ಕಟ್ಟಿಗೆಯಿಂದ ಅಮ್ಮನ ದೇವಸ್ಥಾನ ನಿರ್ಮಿಸಿದ್ದ ಕಾಲವಿತ್ತಂತೆ. ಆ ಸಂದರ್ಭದಲ್ಲಿ ಅಮ್ಮನ ಗುಡಿಯು ಬೆಂಕಿಬಿದ್ದು ಸುಟ್ಟುಹೋದ ಘಟನೆಯೂ ನಡೆದಿತ್ತಂತೆ. ಆ ಸಂದರ್ಭದಲ್ಲಿ ಬಹುಷಃ ಮರದ ದಿಮ್ಮಿಗಳನ್ನು ಕಡಿದು ತಂದು ಹೊಸದಾಗಿ ಅಮ್ಮನ ಗುಡಿ ಮತ್ತು ರಥ ನಿರ್ಮಿಸಿ ಜಾತ್ರೆ ಮಾಡಿದ್ದಿರಬಹುದು ಎನ್ನುತ್ತಾರೆ ಹಿರಿಯರು. ಆದರೆ ಈಗ್ಗೆ ದೇವಸ್ಥಾನದ ಒಳಭಾಗವನ್ನಾಗಲೀ ಅದಕ್ಕೆ ಸಂಬಂಧಿಸಿದ ಮನೆಗಳನ್ನಾಗಲೀ ಜಾತ್ರೆಯ ಸಂದರ್ಭದಲ್ಲಿ ಹೊಸದಾಗಿ ನಿರ್ಮಿಸುವ ಪರಿಸ್ಥಿತಿ ಇರುವುದಿಲ್ಲ. ಆದರೆ ಮರಗಳ ಕಡಿತಲೆಗೆ ಮಾತ್ರ ಕಡಿವಾಣ ಬಿದ್ದಿಲ್ಲ.

ಶಿರಸಿಯ ಪೂರ್ವಭಾಗದಲ್ಲಿ ಪಟ್ಟಣದಿಂದ ಸುಮಾರು 6-8 ಕಿ. ಮೀ., ದೂರದಲ್ಲಿ ದಟ್ಟ ಮಳೆಯ ಕಾಡು ಪ್ರಾರಂಭವಾಗುತ್ತದೆ. ಈ ಭಾಗದ ಕಾಡು ಅತ್ಯುತ್ತಮವಾಗಿದ್ದು ದೊಡ್ಡ ಪಾರಂಪರಿಕ ವೃಕ್ಷಗಳಿಂದ ಕೂಡಿದೆ. ಈ ಕಾಡಿನ ಮಹತ್ವವನ್ನು ಅರಿತಿದ್ದ ಅಂದಿನ ಬ್ರಿಟಿಷ್ ಸರಕಾರ ಇದರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಂಡಿತ್ತು. ನಂತರದಲ್ಲೂ ಇದು 'ಕಾಯ್ದಿಟ್ಟ ಅರಣ್ಯ'ವೆಂದು ಘೋಷಿಸಲ್ಪಟ್ಟಿತು. ಇದರ ಒಂದು ಸಂಪದ್ಭರಿತ ಭಾಗವೇ ಬಿಕ್ಕನಳ್ಳಿ ಎಂಬ ಗ್ರಾಮ.

ಇಲ್ಲಿ ಶತಮಾನ ಕಂಡ ಸಮೃದ್ದವಾಗಿ ಬೆಳೆದ ಅತ್ಯತ್ತಮ ಮರಗಳಿವೆ. ನಂದಿ, ತಾರೆ, ಮತ್ತಿ, ಬನಾಟೆ, ಹೊನಾಲು, ಹೊನ್ನೆ, ನೇರಲು, ತಾಳೆ, ವಾಟೆ, ದಾಲ್ಚಿನ್ನಿ, ಶ್ರೀಗಂಧ, ನೆಲ್ಲಿ, ಉಪ್ಪಾಗೆ, ಕಾಡು ಮಾವು ಮುಂತಾದ ಅತ್ಯಂತ ಹೆಚ್ಚು ಇಂಗಾಲದ ಡೈ ಆಕ್ಸೈಡನ್ನು ಪುನರ್ ಸ್ಥಿರೀಕರಣಗೊಳಿಸುವಲ್ಲಿ ಜಾಗತಿಕ ಮಾನ್ಯತೆ ಪಡೆದ ಮಹಾ ವೃಕ್ಷಗಳು ಹೇರಳವಾಗಿವೆ.

ಈ ಭಾಗದ ಅರಣ್ಯದಿಂದ ಮರಗಳನ್ನು ಕಡಿದು ಸಾಗಿಸುತ್ತಿರುವುದಕ್ಕೆ ದೊಡ್ಡ ಹಿನ್ನೆಲೆ ಏನೂ ಇಲ್ಲ ಎಂಬುದು ಗಮನಾರ್ಹ. ಈಗಾಗಲೇ ಮಾರಿಕಾಂಬ ಜಾತ್ರೆ ನೆಪದಲ್ಲಿ ಕೆಲವೊಂದು ಮರಗಳ ಕಡಿತಲೆಗೆ ಮಾರ್ಕಿಂಗ್‌ ಮಾಡಲಾಗಿದೆ. ಧಾರ್ಮಿಕತೆಯ ಹೆಸರಿನಲ್ಲಿ ಹೀಗೆ ಮರಗಳನ್ನು ಕಡಿಯುವುದರಿಂದ ಅರಣ್ಯ ನಾಶ ಖಂಡಿತ ಎನ್ನುತ್ತಾರೆ ಸ್ಥಳೀಯರು. ಬಿಕ್ಕನಳ್ಳಿಯಲ್ಲಿ ಅರಣ್ಯ ಸಮಿತಿಯೊಂದು ಕಾರ್ಯ ನಿರ್ವಹಿಸುತಿದೆ. ಕಾಡಿನಿಂದ ಸ್ವಂತ ಬಳಕೆಗೆ ಕಟ್ಟಿಗೆ ಒಯ್ಯುತ್ತಿದ್ದ ಜನರಿಗೆ ತಿಳಿಹೇಳಿ ಅರಣ್ಯ ಸಂರಕ್ಷಣೆಯನ್ನು ಸಮಿತಿ ಮಾಡುತ್ತಿದೆ. ಕಿರು ಅರಣ್ಯ ಉತ್ಪನ್ನಗಳನ್ನೂ ಸರಕಾರದ ಆದೇಶದಂತೆ ನಿರ್ವಹಿಸಲಾಗುತ್ತಿದೆ. ಈಗ, ಜಾತ್ರೆಗಾಗಿ ಅಗತ್ಯಕ್ಕಿಂತ ಹೆಚ್ಚಿನ ಮರ ಕಡಿದು ಒಯ್ಯಲು ಗ್ರಾಮ ಅರಣ್ಯ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಆದರೆ ಇವರ ವಿರೋಧಕ್ಕೆ ಕ್ಯಾರೇ ಎನ್ನದ ದೇವಸ್ಥಾನ ಆಡಳಿತದ ಮಂಡಳಿ ಚುಕ್ಕಾಣಿ ಹಿಡಿದವರು, ಮರಗಳ ಮಾರ್ಕಿಂಗ್ ಮಾಡಿದೆ. ಕೇಳಿದರೆ, 'ನಮಗೆ ಇಲಾಖೆಯ ಪರ್ಮಿಶನ್' ಇದೆ ಎನ್ನುತ್ತಾರಂತೆ. ಆದರೆ, ಇವರ ಮಾರ್ಕಿಂಗ್ ಸಮಯದಲ್ಲಿ ಇಲಾಖೆಗೆ ಸಂಬಂಧಪಟ್ಟವರು ಇರಲಿಲ್ಲ ಎಂಬುದು ಸ್ಥಳೀಯ ಗ್ರಾಮಸ್ಥರ ಹೇಳಕೆ.

"12 ಮೀಟರ್‍ಗಳಿಗಿಂತ ಎತ್ತರವಿರುವ ದೊಡ್ಡ ಮರಗಳನ್ನೇ ಉರುಳಿಸುತ್ತಾರೆ. ಪ್ರತಿ ಮರದಿಂದಲೂ 2 ಮೀಟರ್‍ಗಳ 5-6 ತುಂಡುಗಳನ್ನು ಮಾಡುತ್ತಾರೆ. ಕಾಡಿನ ಮಧ್ಯದ ಮರಗಳನ್ನು ಕಡಿದರೆ ಅದನ್ನು ಉರುಳಿಸುವಾಗ ಮತ್ತು ಸಾಗಾಟದ ರಸ್ತೆಗಾಗಿ ಕಾಡು ನಾಶವಾಗುವುದನ್ನು ತಪ್ಪಿಸಲು ಈಗಿರುವ ರಸ್ತೆಯ ಬದಿಯಲ್ಲಿನ ಮರಗಳನ್ನೇ ಕಟಾವು ಮಾಡಲು ಗ್ರಾಮಸ್ಥರು ಕೇಳಿಕೊಂಡಾಗ್ಯೂ ಕಾಡಿನ ಮಧ್ಯದ ಮರಗಳನ್ನೇ ಕಡಿದು ಸಾಗಿಸುತ್ತಾರೆಂದು," ಸ್ಥಳೀಯರು ಅಳಲು ತೋಡಿಕೊಳ್ಳುತ್ತಾರೆ.

ಹೀಗೆ ಕಡಿದ ಮರಗಳನ್ನು ಚಕ್ಕಡಿ ಗಾಡಿಗಳಲ್ಲೇ ಒಯ್ಯಲಾಗುತ್ತದೆ. ಸಾಗಾಟ ಮಾಡಿದ್ದಕ್ಕೆ ಪ್ರತಿ ಗಾಡಿಯವನಿಗೂ ಎರಡು ಮೂಗುದಾರದ ಹುರಿ, ಅವಲಕ್ಕಿ, ಚಹ ನೀಡಲಾಗುತ್ತದೆ. ಆದರೆ ಕಟಾವು ಮಾಡಿದ ಮರಗಳನ್ನು ಅಮ್ಮನ ದೇವಸ್ತಾನಕ್ಕೆ ಒಯ್ಯದೇ ಶಿರಸಿ- ಬನವಾಸಿ ರಸ್ತೆಯ ಹಳೆಯ ಮಿಲ್ಲೊಂದಕ್ಕೆ ಒಯ್ಯಲಾಗುತ್ತದೆ. ಅಲ್ಲಿಂದ ದೇವಸ್ಥಾನಕ್ಕೆ ಎಷ್ಟು ಮರ ಸಂದಾಯವಾಗುತ್ತದೆ? ನಿಜವಾಗಿಯೂ ದೇವಸ್ಥಾನಕ್ಕೆ ಬೇಕಾದ್ದೆಷ್ಟು? ಹೆಚ್ಚಿನದು ಯಾರ ಪಾಲಾಗುತ್ತದೆ? ಎಂಬುದು ಮಾತ್ರ ನಿಗೂಢವಾಗಿಯೇ ಉಳಿದಿದೆ. ಹಿಂದೆ, ಮಹಾತ್ಮ ಗಾಂಧಿ ಭೇಟಿ ನೀಡುವ ಮೂಲಕ ಕೋಣನ ಬಲಿ ನಿಲ್ಲಿಸಿದ್ದು ಇಲ್ಲಿನ ಇತಿಹಾಸ. ಇದೀಗ, ಮರಗಳ ಬಲಿಯನ್ನು ನಿಲ್ಲಿಸುವವರಾರು? ದೇಶದ ಬಗ್ಗೆ ಚಿಂತೆ ಮಾಡುವ ಇಲ್ಲಿನ ಸ್ಥಳೀಯ ಸಂಸದ, ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಅವರ ಗಮನಕ್ಕಿಷ್ಟು...