samachara
www.samachara.com
'ಮಹದಾಯಿ ಉತ್ತರ ಕರ್ನಾಟಕದ ಸಮಸ್ಯೆ; ದಕ್ಷಿಣದವರು ಪ್ರತಿಭಟಿಸುವ ಅಗತ್ಯವಿಲ್ಲ': ಮಾಜಿ ಸಿಎಂ ಸದಾನಂದಗೌಡ
ಸುದ್ದಿ ಸಾಗರ

'ಮಹದಾಯಿ ಉತ್ತರ ಕರ್ನಾಟಕದ ಸಮಸ್ಯೆ; ದಕ್ಷಿಣದವರು ಪ್ರತಿಭಟಿಸುವ ಅಗತ್ಯವಿಲ್ಲ': ಮಾಜಿ ಸಿಎಂ ಸದಾನಂದಗೌಡ

“ಇದು ಉತ್ತರ ಕರ್ನಾಟಕಕ್ಕೆ ಸಂಬಂಧಪಟ್ಟ ವಿಷಯ. ಆದಕಾರಣ ಇದನ್ನು ಸುಮ್ಮನೇ ರಾಜ್ಯವ್ಯಾಪಿ ವಿಸ್ತರಣೆ ಮಾಡಿಕೊಂಡು ಜನರಿಗೆ ದೊಡ್ಡ ಕಿರುಕುಳ ಕೊಡುವಂತದ್ದು ಅಷ್ಟು ಒಳ್ಳೆ ಸಂಪ್ರದಾಯವಲ್ಲ. ನಿಜ, ನಮ್ಮ ಹಕ್ಕುಗಳ ವಿಷಯ ಬಂದಾಗ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವ ಅವಕಾಶವಿದೆ. ಆದರೆ ಇದು ಉತ್ತರ ಕರ್ನಾಟಕ ಭಾಗಕ್ಕೆ ಸಂಬಂಧಪಟ್ಟ ವಿಷಯವಾಗಿರುವುದರಿಂದ ದಕ್ಷಿಣ ಕರ್ನಾಟಕದ ಜನರು ಅಷ್ಟೊಂದು ಒತ್ತು ಕೊಡುವುದು ಅಗತ್ಯವಿಲ್ಲ ಎಂಬುದು ನನ್ನ ಅನಿಸಿಕೆ,” ಹೀಗಂತ ಹೇಳಿದವರು ಕೇಂದ್ರ ಸಚಿವ, ಮಾಜಿ ಸಿಎಂ, ಹಿರಿಯ ಬಿಜೆಪಿ ನಾಯಕ ಸದಾನಂದ ಗೌಡ.

ಮಹದಾಯಿ ಹೋರಾಟದ ಹಿನ್ನೆಲೆಯಲ್ಲಿ ಗುರುವಾರ ಕರೆ ನೀಡಿರುವ ಬಂದ್ ಹಿನ್ನೆಲೆಯಲ್ಲಿ ಪ್ರತಿಕ್ರಿಯೆಗಾಗಿ 'ಸಮಾಚಾರ' ಗೌಡರನ್ನು ಸಂಪರ್ಕಿಸಿದಾಗ, ಹೀಗೊಂದು ವಿವಾದಾತ್ಮಕ ಹೇಳಿಕೆ ಅವರ ಕಡೆಯಿಂದ ಹೊರಬಿತ್ತು.

“ಕಾವೇರಿ ನದಿ ನೀರಿನ ವಿಷಯ ಬಂದಾಗ, ಯಾವ ಉತ್ತರ ಕರ್ನಾಟಕದವರೂ ದೊಡ್ಡ ರೀತಿಯಲ್ಲಿ ಮಾತನಾಡಲಿಲ್ಲ,” ಎಂದು ಸದಾನಂದಗೌಡರು, ಮಹದಾಯಿ ಹೋರಾಟವನ್ನು ಉತ್ತರ ಕರ್ನಾಟಕಕ್ಕೆ ಸೀಮಿತವಾಗಿ ನೋಡಬೇಕು ಎಂದು ಕಿವಿಮಾತು ಹೇಳಿದರು. ಅವರ ಜತೆಗಿನ ಮಾತುಕತೆಯ ಧ್ವನಿಸುರಳಿ ಇಲ್ಲಿದೆ.

[embed]https://soundcloud.com/samachara-kannada/former-cm-dv-sadandagowda-reaction-to-mahadayi-issue[/embed]

ಈಗಾಗಲೇ ಮಹದಾಯಿ ವಿಚಾರದಲ್ಲಿ ಬಿಜೆಪಿ ಭಾರಿ ಮುಜುಗರಕ್ಕೆ ಕಾರಣವಾಗಿದೆ. ಗೋವಾ ಸಿಎಂ ಮನೋಹರ್‌ ಪರ್ರಿಕರ್ ಅವರ ಮನವೊಲಿಸುವ ಹೊಣೆಗಾರಿಕೆ ಹೊತ್ತುಕೊಂಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪ್ರತಿಭಟನೆಯನ್ನು ಮೈಮೇಲೆ ಎಳೆದುಕೊಂಡಿದ್ದರು. ಸ್ಥಳೀಯ ಬಿಜೆಪಿ ಸಂಸದ ಪ್ರಹ್ಲಾದ್ ಜೋಷಿ ಅವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸುವ ಕೆಲಸವನ್ನೂ ಮಹದಾಯಿ ಹೋರಾಟಗಾರರು ಮಾಡಿದ್ದರು. ಇದೀಗ, ಇನ್ನೊಬ್ಬ ಬಿಜೆಪಿ ಹಿರಿಯ ನಾಯಕ, "ಮಹದಾಯಿ ಉತ್ತರ ಕರ್ನಾಟಕ ವಿಚಾರ,'' ಎನ್ನುವ ಮೂಲಕ ನೀರು ಹಂಚಿಕೆ ವಿವಾದದ ಬಗೆಗೆ ಪಕ್ಷ ಧೋರಣೆ ಹೇಗಿದೆ ಎಂಬುದನ್ನು ಜಾಹೀರು ಮಾಡಿದ್ದಾರೆ.

ಡಿ. ವಿ. ಸದಾನಂದ ಗೌಡ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಹೋರಾಟಗಾರ ಸಾ. ರಾ. ಗೋವಿಂದ್, “ಉತ್ತರ ಕರ್ನಾಟಕ ಬೇರೆಯಲ್ಲ, ದಕ್ಷಿಣ ಕರ್ನಾಟಕ ಬೇರೆಯಲ್ಲ. ಸಮಗ್ರ ಕರ್ನಾಟಕ ಒಂದೇ ಎಂಬುದನ್ನು ಸದಾನಂದ ಗೌಡರೂ ಅರ್ಥಮಾಡಿಕೊಳ್ಳಬೇಕು. ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದವರು. ಈಗ ಕೇಂದ್ರ ಮಂತ್ರಿ. ಅವರ ಬಾಯಲ್ಲಿ; ಆ ಸಮಸ್ಯೆ ಅವರದ್ದು, ಈ ಸಮಸ್ಯೆ ಇವರದ್ದು ಎಂದು ಬರಬಾರದು. ನಾಡಿನ ಸಮಸ್ಯೆ ಎಲ್ಲರಿಗೂ ಒಂದೇ. ಅದಕ್ಕೆ ನಾವೆಲ್ಲ ಸ್ಪಂಧಿಸಬೇಕು. ಸದಾನಂದ ಗೌಡರ ಹೇಳಿಕೆಯನ್ನು ನಾನು ಅತ್ಯಂತ ಕಟುವಾಗಿ ಖಂಡಿಸುತ್ತೇನೆ,” ಎಂದರು.

ನಾಳೆ ಬಂದ್‌ಗೆ ಬಹುತೇಕ ಬೆಂಬಲ:

ಕೆಲವೊಂದು ಕನ್ನಡಪರ ಸಂಘನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸದೇ ಇರುವ ಕುರಿತು ಪ್ರತಿಕ್ರಿಯಿಸಿದ ಸಾ. ರಾ. ಗೋವಿಂದ್, “ ಬಹುತೇಕ ಸಂಘಟನೆಗಳು ಇದಕ್ಕೆ ಬೆಂಬಲ ಸೂಚಿಸಿವೆ. ಆದರೆ ಯಾರೋ ಒಬ್ಬರು ಬೆಂಬಲ ಸೂಚಿಸದಿರುವುದನ್ನು, ಮಾಧ್ಯಮಗಳು 'ಬಹುತೇಕ' ಎಂದು ಹೇಳಬಾರದು,” ಎಂದಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರವೀಣ್ ಶೆಟ್ಟಿ, “ನಾಳೆ ನಡೆಯುವ ಕರ್ನಾಟಕ ಬಂದ್‌ಗೆ ನಮ್ಮ ಬೆಂಬಲವಿದೆ. ಮಹಾದಾಯಿ ಸಮಸ್ಯೆ ಪರಿಹಾರಕ್ಕಾಗಿ ವಾಟಾಳ್ ನಾಗರಾಜ್ ಅವರು ಕರೆ ಕೊಟ್ಟಿದ್ದಾರೆ. ನಾವೂ ಅವರೊಂದಿಗಿದ್ದೇವೆ. ನಾಳೆ ನಾವು ಮೇಕ್ರಿ ಸರ್ಕಲ್‌ನಿಂದ ಬೃಹತ್ ಪ್ರಮಾಣದಲ್ಲಿ ಮೆರವಣಿಗೆ ಕೈಗೊಂಡು ರಾಜಭವನವನ್ನು ಮುತ್ತಿಗೆ ಹಾಕುತ್ತೇವೆ,” ಎಂದು ‘ಸಮಾಚಾರ’ಕ್ಕೆ ಪ್ರತಿಕ್ರಿಸಿದರು.

“ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಮಹದಾಯಿ ನೀರು ಕರ್ನಾಟಕಕ್ಕೆ ತಲುವಂತೆ ಮಾಡಲು ಬೇಗ ಕ್ರಮ ಕೈಗೊಳ್ಳಬೇಕು. ಇದಕ್ಕೆ ಪ್ರಧಾನಿ ಮೋದಿ ಮದ್ಯಪ್ರವೇಶ ಮಾಡಬೇಕು. ಗೋವಾ ಕಾಂಗ್ರೆಸ್‌ ಸರಕಾರದ ಅಧ್ಯಕ್ಷರೂ ಮತ್ತು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಈ ಕುರಿತು ಬಹಿರಂಗ ಹೇಳಿಕೆ ನೀಡಬೇಕು,” ಎಂದು ನಾವು ಪ್ರತಿಭಟನೆಯಲ್ಲಿ ಒತ್ತಾಯಿಸುತ್ತೇವೆ ಎಂದು ಹೇಳಿದರು.

‘ಕನ್ನಡಕ್ಕಾಗಿಯೇ ಇರುವ ಕೆಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸುತ್ತಿಲ್ಲವಲ್ಲ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಕರ್ನಾಟಕ ಬಂದ್‌ಗೆ ಬೆಂಬಲ ಸೂಚಿಸದಿದ್ದರೆ, ಪಬ್ಲಿಸಿಟಿ ಪಡೆಬಹುದೆಂದು ಕೆಲವರು ಅಂದುಕೊಂಡಿದ್ದಾರೆ. ಆದರೆ ಕುಡಿಯುವ ನೀರಿಗಾಗಿ ಎಲ್ಲ ಕನ್ನಡ ಸಂಘಟನೆಗಳು ಒಟ್ಟಿಗೆ ಇರಬೇಕಾಗಿರುವುದು ಅತ್ಯಗತ್ಯ. ರೈತರು ಸಾವಿರಾರು ದಿನಗಳಿಂದ ಹೋರಾಟ ಮಾಡುತ್ತಿದ್ದಾರೆ. ಅವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂಬ ಕಾರಣದಿಂದಲೇ ನಾವೆಲ್ಲ ಇದಕ್ಕೆ ಬೆಂಬಲ ಸೂಚಿಸಿ, ಪ್ರತಿಭಟನೆಗೆ ಇಳಿಯುತ್ತೇವೆ,” ಎನ್ನುತ್ತಾರೆ ಪ್ರವೀಣ್ ಶೆಟ್ಟಿ.

ವಿಧಾನಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ, “ಈಗಾಗಲೇ ನಮ್ಮ ಪಕ್ಷದ ಕಾರ್ಯಾದ್ಯಕ್ಷರು (ದಿನೇಶ್ ಗುಂಡೂರಾವ್) ಬೆಂಬಲ ಸೂಚಿಸುತ್ತೇವೆ ಅಂತ ಹೇಳಿಕೆ ಕೊಟ್ಟಿದ್ದಾರೆ. ಕೆಲವು ಸಂಘ-ಸಂಸ್ಥೆಗಳು ತಮ್ಮ ಹಕ್ಕುಗಳ ಪ್ರತಿಪಾದನೆ ಮಾಡುವುದಕ್ಕಾಗಿ ಬಂದ್‌ಗೆ ಕರೆ ಕೊಟ್ಟಿದ್ದಾರೆ. ನಾವು ನೇರವಾಗಿ ಅವರ ಜೊತೆಗೆ ಬೆಂಬಲ ಸೂಚಿಸದಿದ್ದರೂ, ಅವರ ವಿರುದ್ಧವಂತೂ ನಾವಿಲ್ಲ. ಬಂದ್ ಮಾಡುತ್ತಿರುವವರಿಗೆ ನಮ್ಮ ಸಹಕಾರ ಹಾಗೂ ಸಹಮತವಿದೆ,” ಎಂದರು. ಈ ಮೂಲಕ ನಾಳಿನ ಬಂದ್ ಸರಕಾರಿ ಪ್ರಾಯೋಜಿತ ಎಂಬ ಆರೋಪವನ್ನು ಪರೋಕ್ಷವಾಗಿ ಒಪ್ಪಿಕೊಂಡರು ಉಗ್ರಪ್ಪ.

ಇನ್ನು ಕೇಂದ್ರ ಸಚಿವ ಸದಾನಂದ ಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಸದಾನಂದ ಗೌಡರಿಗೆ ರಾಜ್ಯದ ಸಾಮರಸ್ಯದ ಅರಿವಿದ್ದಿದ್ದರೆ ಹೀಗೆ ಮಾತನಾಡುತ್ತಿರಲಿಲ್ಲ. ಇಡೀ ರಾಜ್ಯವೇ ಒಂದು ಕುಟುಂಬ. ಯಾವುದೇ ಭಾಗದಲ್ಲಿ ಯಾರಿಗೆ ಸಮಸ್ಯೆಯಾದರೂ ಅದನ್ನು ಎಲ್ಲರೂ ಸೇರಿ ಪರಿಹರಿಸಿಕೊಳ್ಳಬೇಕು. ಇಡೀ ರಾಜ್ಯದ ನೆಲ, ಜಲ ಮತ್ತು ಭಾಷೆಗಾಗಿ ಎಲ್ಲರೂ ಒಗ್ಗಟ್ಟಾಗಿ ಅವುಗಳನ್ನು ರಕ್ಷಣೆ ಮಾಡುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ,” ಎಂದರು.

ಮಹದಾಯಿ ಸಮಸ್ಯೆಗೆ ಪರಿಹಾರ ಏನು? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ ಕಾನೂನು ರೀತಿಯಲ್ಲಿ 5 ವರ್ಷಗಳ ಒಳಗೆ ಇದು ಇತ್ಯರ್ಥ ಆಗಬೇಕಿತ್ತು. ಆದರೆ ಅದು ಆಗಿಲ್ಲ. ಇದು ಹಾಗೆ ಮುಂದೂಡಿಕೆ ಆಗುತ್ತಲೇ ಹೋಗುತ್ತಿದೆ. ನಮ್ಮ ರಾಜ್ಯದಲ್ಲಿಯೇ 50 ಟಿಎಂಸಿ ಉತ್ಪಾದನೆ ಆಗುತ್ತದೆ. ಆದರೆ ನಮಗೆ ಆ ನೀರು ಸಿಗದಿದ್ದರೆ ಅನ್ಯಾಯ ಅಲ್ವ? ಈ ಹಿಂದೆ ಇಂದಿರಾ ಗಾಂಧಿ, ನರಸಿಂಹ ರಾವ್ ಮತ್ತು ಅಟಲ್‌ ಬಿಹಾರಿ ವಾಜಪೇಯಿಯವರು ಕೆಲವು ಸಮಸ್ಯೆಗಳ ಬಗ್ಗೆ ಇಚ್ಚಾಶಕ್ತಿ ತೋರಿ ಅವುಗಳನ್ನು ಬಗೆಹರಿಸಿದ್ದಾರೆ; ಹಾಗೆ ಪ್ರಧಾನಿ ಮೋದಿಯವರು ಮೂರು ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ಇತ್ಯರ್ಥ ಮಾಡಬೇಕು. ಇದು ದೇಶದ ಏಕತೆ ಮತ್ತು ಸಮಗ್ರತೆ ದೃಷ್ಟಿಯಿಂದ ಅತ್ಯಗತ್ಯ. ಆದರೆ ಅವರು ಈ ಇಚ್ಛಾಶಕ್ತಿ ತೋರುತ್ತಿಲ್ಲ,” ಎಂದು ಪ್ರತಿಕ್ರಿಯಿಸಿದರು.

ಬಂದ್ ಬಿಸಿ: 

ಸರ್ಕಾರಿ ಶಾಲೆ, ಕಾಲೇಜ್‌ಗಳು ಬಂದ್‌ಗೆ ಬೆಂಬಲ ಸೂಚಿಸಿಲ್ಲ. ಆದರೆ ನಾಳಿನ ಪರಿಸ್ಥಿತಿಯನ್ನು ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಬಹುದು ಎನ್ನಲಾಗಿದೆ. ಕೆಲವು ಖಾಸಗಿ ಶಾಲಾ ಕಾಲೇಜುಗಳ ವತಿಯಿಂದ ಬಂದ್‌ಗೆ ಬೆಂಬಲ ವ್ಯಕ್ತಪಡಿಸಲಾಗಿದೆ. ಈಗಾಗಲೇ ‘ಚಲಚಿತ್ರ ವಾಣಿಜ್ಯ ಮಂಡಳಿ’ಯೂ ಕರ್ನಾಟಕ ಬಂದ್‌ ಕುರಿತು ಬೆಂಬಲ ಸೂಚಿಸಿರುವುದರಿಂದ ಜ.25 ರಂದು ಕನ್ನಡ ಚಲಚಿತ್ರ ಪ್ರದರ್ಶನ ಸ್ಥಗಿತಗೊಳ್ಳಲಿದೆ ಎನ್ನಲಾಗಿದೆ.

ಆದರೆ, ಈ ಬಂದ್‌ನಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಾಗುವ ಲಕ್ಷಣಗಳು ಕಾಣುತ್ತಿವೆ. ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಸೋಮವಾರದಿಂದಲೇ ಆರಂಭಗೊಂಡಿದ್ದು, ಈ ತಿಂಗಳ 31ರವರೆಗೂ ನಡೆಯಲಿದೆ. ನಾಳೆಯೂ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಬೇಕಾಗಿದೆ. ಅಷ್ಟೇ ಅಲ್ಲದೇ, ಮಾಸಿಕ ಪರೀಕ್ಷೆ, ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಗಳೂ  ಶಾಲೆಗಳಲ್ಲಿ ಆರಂಭವಾಗಲಿದೆ. ಒಂದು ವೇಳೆ ಪರೀಕ್ಷೆ ಮುಂದೂಡಿಕೆಯಾದರೆ ಅಧ್ಯಯನದಲ್ಲಿ ಏರುಪೇರಾಗಲಿದೆ ಎಂದು ವಿದ್ಯಾರ್ಥಿಗಳಲ್ಲಿ ಆತಂಕ ವ್ಯಕ್ತವಾಗಿದೆ.