samachara
www.samachara.com
ಮತ್ತೆ ಮಹದಾಯಿ: ರಾಜ್ಯ ಬಂದ್‌ಗೆ ಕರೆ; ಮುಂದುವರಿದ ರೈತರ ಮೊರೆ
ಸುದ್ದಿ ಸಾಗರ

ಮತ್ತೆ ಮಹದಾಯಿ: ರಾಜ್ಯ ಬಂದ್‌ಗೆ ಕರೆ; ಮುಂದುವರಿದ ರೈತರ ಮೊರೆ

ಮಹದಾಯಿ ವಿಷಯಕ್ಕೆ ಸಂಬಂಧಿಸಿ ಗುರುವಾರ ಮತ್ತೆ ಕರ್ನಾಟಕ ಬಂದ್‍ಗೆ ವಾಟಾಳ್ ನಾಗರಾಜ್ ಹಾಗೂ ರೈತ ಸಂಘಟನೆ ಕರೆ ಕೊಟ್ಟಿವೆ.

ರಾಜ್ಯ ಬಂದ್ ಹಿನ್ನೆಲೆಯಲ್ಲಿ ಬಹುತೇಕ ಕನ್ನಡ ಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ; ಚಿತ್ರರಂಗದವರು ಬೆಂಬಲದ ಬಗ್ಗೆ ಇನ್ನೂ ಹೇಳಿಕೆ ಹೊರಬಿದ್ದಿಲ್ಲ. ಈ ಹಿಂದೆ ಯಡಿಯೂರಪ್ಪನವರು ಗೋವಾ ಸಿಎಂ ಜೊತೆ ಮಾತನಾಡಿ 15 ದಿನಗಳಲ್ಲಿ ಈ ಮಹಾದಾಯಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳಿ ಎಡವಟ್ಟು ಮಾಡಿಕೊಂಡಿದ್ದರು. ರೈತರ ಮುಂದೆ ನಿಂತು, ಪರ್ರಿಕರ್ ಕೊಟ್ಟ ಸಮಾಧಾನದ ಪತ್ರ ಓದಿ ರೈತರ ಕೋಪಕ್ಕೆ ಕಾರಣರಾಗಿದ್ದರು. ಆದರೆ ಈಗ ‘ಮಹಾದಾಯಿಗೂ ಮೈಸೂರಿಗೂ ಸಂಬಂಧ ಇಲ್ಲ’ ಎಂದು ಅರಮನೆ ನಗರಿಯಲ್ಲಿ ಪರಿವರ್ತನಾ ಯಾತ್ರೆಗೆ ಮುಂದಾಗಿದ್ದಾರೆ. ಇದು ಕೂಡಾ ಉತ್ತರ ಕರ್ನಾಟಕದ ಭಾಗದ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಫೆ. 6 ರಿಂದ 22ರವರೆಗೆ ಟ್ರಿಬ್ಯೂನಲ್‌ನಲ್ಲಿ ಕೊನೆಯ ವಾದ-ಪ್ರತಿವಾದಕ್ಕೆ ಅವಕಾಶ ಇದೆ. ಆದರೆ, "ನಮಗೆ ಟ್ರಿಬ್ಯೂನಲ್‌ ತೀರ್ಪಿನ ಬಗ್ಗೆ ನಂಬಿಕೆ ಇಲ್ಲ. ಏಕೆಂದರೆ ಅದರ ಮೇಲೆ ಕೇಂದ್ರದ ಕರಿನೆರಳು ಬೀಳುವ ಸಾಧ್ಯತೆ ಇದೆ. ಆ ತೀರ್ಪು ಬರುವ ಮುಂಚೆ ಪ್ರಧಾನಿಗಳು ಮಧ್ಯಸ್ಥಿಕೆವಹಿಸಿ ನಮಗೆ ನ್ಯಾಯ ಕೊಡಸಬೇಕು. ಅದಕ್ಕಾಗಿಯೇ ನಾವು ಹೋರಾಟ ಮಾಡುತ್ತೇವೆ,'' ಎನ್ನುತ್ತಾರೆ ಈ ಭಾಗದ ಹೋರಾಟಗಾರರು.

ಹೀಗಿರುವಾಗಲೇ, ಮಹದಾಯಿ ಹೋರಾಟ ಕಾಂಗ್ರೆಸ್ ಪ್ರೇರಿತ ಎಂಬ ಆರೋಪವೂ ಕೇಳಿ ಬಂದಿದೆ. ಈ ಕುರಿತು ನೇರವಾದ ಪ್ರಶ್ನೆಯನ್ನು ರೈತಸೇನೆಯ ಮುಖಂಡ ಶಂಕರ್ ಅಂಬ್ಲಿ ಮುಂದಿಟ್ಟರೆ, "ಇಲ್ಲ, ನಾನು ಮೊದಲಿನಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡವನು. ನಮ್ಮ ಹೋರಾಟಗಾರರಲ್ಲಿ ಎಲ್ಲಾ ಪಕ್ಷದವರೂ ಇದ್ದಾರೆ. ಅದು ನಮ್ಮ ವೈಯಕ್ತಿಕ. ಆದರೆ ಇಲ್ಲಿ ಮಹದಾಯಿ ಹೋರಟಕ್ಕೆ ನಾವು ಪಕ್ಷ ನೋಡದೇ ನೀರಿಗಾಗಿ ಹೋರಾಟ ಮಾಡುತ್ತೇವೆ. ನಾವು ಬಿಜೆಪಿ ಕಚೇರಿ ಮುಂದೆ ಧರಣಿಗೆ ಕೂತದ್ದು ಯಡಿಯೂರಪ್ಪನವರ ಮಾತಿಗೆ ಸ್ಪಷ್ಟನೆ ಕೇಳಲು ಮಾತ್ರ. ನಾವು ಅವರಿಗೆ ದಿಕ್ಕಾರ ಕೂಡ ಕೂಗಿಲ್ಲ. ಅವರು ಬರುತ್ತಾರೆ ಎಂದು ಎಂದು ಸ್ವಾಗತ ಪತ್ರ ಕೂಡ ನಾವು ತಂದಿದ್ದೆವು. ಆದರೆ ಅವರು ನಮ್ಮ ಮಾತು ಏನು ಕೇಳಿಸಿಕೊಳ್ಳದೇ ಸಿಟ್ಟಿನಲ್ಲಿ ವರ್ತಿಸಿ ಹೊರಟುಹೋದರು. ಅನಂತರ ನಾವು ಎಲ್ಲಾ ಪಕ್ಷಗಳ ಕಚೇರಿಗೂ ಮನವಿ ಪತ್ರ ಕೊಟ್ಟಿದ್ದೇವೆ,'' ಎನ್ನುತ್ತಾರೆ.

ಮಹದಾಯಿ ಹೋರಾಟದ ಕಿಚ್ಚಿನ ಮೂಲ ಇರುವುದು ನವಲುಗುಂದಲ್ಲಿ. ಇಲ್ಲಿನ ಶಾಸಕರು ಕೋನರಡ್ಡಿ. ಇವರು ಪ್ರಚಾರ ಪ್ರಿಯರು ಎಂಬುದು ಅವರ ಮೇಲಿರುವ ಜನಪ್ರಿಯ ಆರೋಪ. ಜತೆಗೆ, ಮಹದಾಯಿ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ ಎಂದು ಕೆಲ ಹೋರಾಟಗಾರರು ಅಪಾದಿಸುತ್ತಾರೆ. "ಅವರು (ಶಾಸಕರು) ಹಸಿರ ವಸ್ತ್ರ ಮೈಮೇಲೆ ಹಾಕಿಕೊಂಡದ್ದು ಇತ್ತೀಚೆಗೆ. ಜುಲೈ 16 2015ಕ್ಕೆ ಸಂಕಲ್ಪ ತಗೆದುಕೊಂಡು ಹೋರಾಟ ಪ್ರಾರಂಭಿಸಿದೆವು. ಆಗ ಲಕ್ಷಗಟ್ಟಲೇ ಜನ ಸೇರಿದ್ದು ನೋಡಿದ ಶಾಸಕರು ತಮ್ಮ ಅಸ್ತಿತ್ವಕ್ಕೆ ಉಳಿಗಾಲ ಇಲ್ಲದಂತಾಗತ್ತೆ ಎಂದು ನಮ್ಮ ಜೊತೆ ಹೋರಾಟಕ್ಕೆ ಬಂದವರು. ಅವರು ತಮ್ಮ ರಾಜಕೀಯ ಅಸ್ತತ್ವಕ್ಕಾಗಿ ಬಂದವರು,'' ಎನ್ನುತ್ತಾರೆ ಶಂಕರ್‌ ಅಂಬ್ಲಿ.

ಇನ್ನೂ ಭಾಗದ ಸಂದಸ, ಬಿಜೆಪಿ ನಾಯಕ ಪ್ರಹ್ಲಾದ್ ಜೋಶಿ ಕೂಡ ಜನರ ಆಶೋತ್ತರಗಳನ್ನು ಅರ್ಥಮಾಡಿಕೊಳ್ಳುತ್ತಿಲ್ಲ ಎಂಬ ಅಸಮಾಧಾನ ಇದೆ. "ಜೋಷಿ ಸುಳ್ಳುಗಾರರು ಹಾಗೂ ಮೋಸಗಾರರು,'' ಎಂದು ಹೋರಾಟಗಾರರು ಬಹಿರಂಗವಾಗಿಯೇ ಆರೋಪಿಸುತ್ತಿದ್ದಾರೆ. "ಜನರಿಗೆ ಮೋಸ ಮಾಡಿರುವ ಕಾರಣಕ್ಕೆ ಮುಂದಿನ ಚುನಾವಣೆಗೆ ಅವಕಾಶ ಕೊಡದಂತೆ ಆಯೋಗಕ್ಕೆ ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ. ಒಂದುವೇಳೆ ಅವರು ಪರಿಗಣಿಸದೇ ಇದ್ದಲ್ಲಿ ನ್ಯಾಯಾಲಯದ ಮೊರೆ ಹೋಗುತ್ತೇವೆ,'' ಎನ್ನುತ್ತಿದ್ದಾರೆ ಮಹದಾಯಿ ಹೋರಾಟಗಾರರು.

ನಮ್ಮ ರಾಜ್ಯದಿಂದ 47 ಟಿಎಂಸಿ ನೀರು ಮಹದಾಯಿ ನದಿಯಲ್ಲಿ ಹರಿದು ಹೋಗುತ್ತದೆ. ಅದರಲ್ಲಿ ರೈತರು ಕೇಳುತ್ತಿರೋದು 36.5 ಟಿಎಂಸಿ ನೀರು ಮಾತ್ರ. ಕುಡಿಯುವ ನೀರಿಗಾಗಿ 7.56 ಟಿಎಂಸಿ ನೀರು, 7 ಟಿಎಂಸಿ ಮಹಾಪೂರ ಬಂದಾಗ ಕೃಷಿಗಾಗಿ ಡ್ಯಾಂಗಳನ್ನು ತುಂಬಿಸಿಕೊಳ್ಳಲು, 1.5 ಟಿಎಂಸಿ ನದಿಯ ಸುತ್ತಲಿನ ಜನರಿಗೆ ಬಳಕೆ ಮಾಡಿಕೊಳ್ಳಲು, 5.25 ಟಿಎಂಸಿ ಕಾಳಿನದಿ ಜಲ ವಿದ್ಯುತ್ ಯೋಜನೆಗೆ, 15 ಟಿಎಂಸಿ ಪವರ್ ಪ್ರೊಜೆಕ್ಟ್‌ಗೆ ಬಳಕೆ ಮಾಡುವ ಯೋಜನೆ ಇದೆ. ಇದರಲ್ಲಿ 14.5 ಟಿಎಂಸಿ ನೀರನ್ನು ಮರಳಿ ನದಿಗೆ ಬಿಡಲಾಗುತ್ತದೆ.

ವಿವಾದದ ಇತಿಹಾಸ:  

ಉತ್ತರ ಕರ್ನಾಟಕದ ಜಿಲ್ಲೆಗಳಾದ ಧಾರವಾಡ, ಬೆಳಗಾವಿ, ಗದಗ, ಬಾಗಲಕೋಟೆಯ ಜನ ಕುಡಿಯುವ ನೀರಿನ ಅಭಾವದಿಂದ ತತ್ತರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ ಕಳಸಾ-ಬಂಡೂರಿ ನಾಲಾ ಜೋಡಣೆ ಕಾಮಗಾರಿಯನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿತ್ತು. ಆದರೆ ಈ ಕಾಮಗಾರಿಯನ್ನು ಗೋವಾ ಸರ್ಕಾರ ವಿರೋಧಿಸುತ್ತಿದ್ದು, ಪ್ರಸ್ತುತ ವಿವಾದವು ನ್ಯಾಯಾಧೀಕರಣದ ಮುಂದಿದೆ. ಹೀಗಾಗಿ ಈ ಭಾಗದ ಜನತೆಗೆ ಕುಡಿಯುವ ನೀರಿನ ಪೂರೈಕೆ ಇನ್ನೂ ಗನಕುಸುಮವಾಗಿಯೇ ಇದೆ.

ಕೆಲವು ವರ್ಷಗಳ ಹಿಂದೆ ನವಲಗುಂದ, ನರಗುಂದ, ಗದಗ ಬಾಗಲಕೋಟೆಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಿತ್ತು. ಹಾಗಾಗಿ ಈ ಸಮಸ್ಯೆಯನ್ನು ಗಂಭೀರವಾಗಿ ತಗೆದುಕೊಂಡ ಗುಳೇದಗುಡ್ಡ ಶಾಸಕ ಬಿ.ಎಂ.ಹೊರಕೇರಿಯವರು ಕಳಸಾ ಬಂಡೂರಿ ನಾಲಾವನ್ನು ಮಲಪ್ರಭಾ ನದಿಗೆ ಸೇರಿಸಿ, ನೀರಿನ ಸಮಸ್ಯೆಯನ್ನು ಪರಿಹರಿಸಬೇಕೆಂದು ಮನವಿ ಮಾಡಿದ್ದರು. ಇದರ ಪರಿಣಾಮವಾಗಿ 1978ರಲ್ಲಿ ಮಹಾದಾಯಿ ಯೋಜನೆ ಸಿದ್ಧವಾಯಿತು.

ಕರ್ನಾಟಕದ ಸುಮಾರು 35 ಕಿ.ಮೀ ಹರಿಯುವ ಮಹದಾಯಿ ನದಿಯು ಕಳಸಾ, ಬಂಡೂರಿ, ಹರಿತಾ, ಚೋರ್ವಾ ಎನ್ನುವ ಹಳ್ಳಗಳು ಸೇರಿಕೊಂಡು ಪಶ್ಚಿಮಾಭಿಮುಖಿಯಾಗಿ ಗೋವಾ ರಾಜ್ಯಕ್ಕೆ ಹರಿದು ಅರಬ್ಬಿ ಸಮುದ್ರವನ್ನು ಸೇರುತ್ತದೆ. ಇದರ ಒಟ್ಟು ಪ್ರಮಾಣ 210 ಟಿಎಂಸಿ. ಹೀಗೆ ವ್ಯರ್ಥವಾಗಿ ಹರಿದು ಸಮುದ್ರ ಸೇರುವ ನೀರಿನಲ್ಲಿ ಕೇವಲ 7.6 ಟಿಎಂಸಿ ನೀರನ್ನು ಕುಡಿಯುವ ನೀರಿನ ಪೂರೈಕೆಗಾಗಿ ಬಳಸಿಕೊಳ್ಳಲು ರಾಜ್ಯ ಸರ್ಕಾರ ಯೋಜನೆಯೊಂದನ್ನು ಹಮ್ಮಿಕೊಂಡಿತ್ತು. ಹೀಗೆ 1978ರಲ್ಲಿ ಸಿದ್ಧಗೊಂಡ ಈ ಯೋಜನೆಗೆ 2002ರಲ್ಲಿ ಕೇಂದ್ರ ಸರ್ಕಾರದಿಂದ ಅನುಮೋದನೆ ದೊರೆತು, ಕಳಸಾ ಬಂಡೂರಿ ನಾಲಾ ಕಾಮಗಾರಿಗೆ ಚಾಲನೆ ನೀಡಲಾಯಿತು. ಈ ಯೋಜನೆಗೆ ತಗಲಿದ ವೆಚ್ಚ 124 ಕೋಟಿ ರೂಪಾಯಿ. ಆಗ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಗಿದ್ದು, ಎಚ್.ಕೆ ಪಾಟೀಲ ನೀರಾವರಿ ಸಚಿವರಾಗಿದ್ದರು.

ಇವರ ಅಧಿಕಾರಾವಧಿಯಲ್ಲಿ ಪ್ರತ್ಯೇಕ ಬ್ಯಾರೇಜನ್ನು ನಿರ್ಮಿಸಿ ಸಮುದ್ರಕ್ಕೆ ಸೇರುತ್ತಿದ್ದ ಕಳಸಾ- 3.5 ಟಿಎಂಸಿ, ಬಂಡೂರಿ-4 ಟಿಎಂಸಿ ನೀರನ್ನು ಮಲಪ್ರಭಾ ನದಿಗೆ ಹರಿಸಲು 2002 ರಲ್ಲಿ ಸಿದ್ಧತೆಗಳು ನಡೆದವು. ನವಲಗುಂದ, ಬದಾಮಿ, ಗದಗ, ರೋಣ, ನಗರಗಳು ಹಾಗೂ 100 ಕ್ಕೂ ಅಧಿಕ ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆ ಕುರಿತು ಅನುಮೋದನೆಗಾಗಿ ಕೇಂದ್ರ ಜಲಸಂಪನ್ಮೂಲ ಇಲಾಖೆಗೆ ಕಳುಹಿಸಲಾಯಿತು. ಅಲ್ಲಿ ಅನುಮೋದನೆ ದೊರೆತರೂ ಗೋವಾ ತಕರಾರು ಎತ್ತಿತು. ಆಗ ಗೋವಾ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರ್ರಿಕರ್ ಕಾಮಗಾರಿಯಿಂದ ಪರಿಸರಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ದೂರಿದರು. ಯೋಜನೆಗೆ ತಡೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಸರ್ವೋಚ್ಚ ನ್ಯಾಯಾಲಯ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಆದೇಶಿಸಿತ್ತು.

ಗೋವಾ ಸಲ್ಲಿಸಿದ ತಗಾದೆಯನ್ನು ಕೂಲಂಕಷವಾಗಿ ಅಧ್ಯಯನ ನಡೆಸಿದ ಜಲಸಂಪನ್ಮೂಲ ಇಲಾಖೆ, ಲಭ್ಯವಿರುವ ಒಟ್ಟು 210 ಟಿಎಂಸಿ ನೀರಿನಲ್ಲಿ 7.56 ಟಿಎಂಸಿ ನೀರನ್ನು ಮಲಪ್ರಭೆಗೆ ತಿರುಗಿಸಿದರೆ ಪರಿಸರಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲವೆಂದು ವರದಿ ನೀಡಿತು. ಇದರ ಅನ್ವಯ 2002ರ ಏಪ್ರಿಲ್‌ನಲ್ಲಿ ಕರ್ನಾಟಕಕ್ಕೆ ಕಾಮಗಾರಿ ನಡೆಸಲು ಅನುಮತಿ ದೊರೆಯಿತು. ಆದರೆ, ಕರ್ನಾಟಕ ಸರ್ಕಾರ ಈ ಕಾಮಗಾರಿ ಪ್ರಾರಂಭಿಸುವಷ್ಟರಲ್ಲಿ ಗೋವಾ ಸರ್ಕಾರ ಯೋಜನೆಯ ಸ್ಥಗಿತಕ್ಕೆ ಮತ್ತೊಮ್ಮೆ ಸುಪ್ರೀಂ ಕೋರ್ಟ್‍ನ ಮೊರೆಹೋಗಿ ನ್ಯಾಯಾಧಿಕರಣ ರಚಿಸುವಂತೆ ಕೇಳಿಕೊಂಡಿತು.

ರೈತ ಸಂಘಟನೆಗಳು ಈ ಕಳಸಾ - ಬಂಡೂರಿ ಯೋಜನೆ ಜಾರಿಗೆ ಹೋರಾಡುತ್ತಲೇ ಬಂದಿದ್ದಾರೆ. ಇತ್ತ ರೈತರು ಹೋರಾಟದಲ್ಲಿ ತೊಡಗಿದರೆ, ರಾಜಕೀಯ ಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತ ರಾಜಕೀಯ ಬೇಳೆಯನ್ನು ಬೇಯಿಸುತ್ತಿದ್ದಾರೆ. ಚುನಾವಣೆಯೂ ಎದುರಿಗೆ ಇರುವುದರಿಂದ ಕನ್ನಡ ಸಂಘಟನೆಗಳು ಕರೆ ನೀಡಿರುವ ಬಂದ್‌ಗೂ ರಾಜಕೀಯ ಬಣ್ಣ ಬಂದಿದೆ. ಆದರೆ, ಇವೆಲ್ಲವುಗಳ ಆಚೆಗೆ, ಈ ಭಾಗದ ಜನರ ನೀರಿನ ಸಂಕಷ್ಟಗಳಿಗೆ ಪರಿಹಾರ ಮಾತ್ರ ಮರೀಚಿಕೆಯಾಗಿದೆ.