ಸಾಂದರ್ಭಿಕ ಚಿತ್ರ
ಸುದ್ದಿ ಸಾಗರ

ಬೆಂಗಳೂರು ಚಳಿಯನ್ನೂ ಮೀರಿ ಹೆಚ್ಚುತ್ತಿದೆ ಜಾಗತಿಕ ತಾಪಮಾನ

ಹಸಿರು ಮನೆ ಪರಿಣಾಮದಿಂದ ಹೆಚ್ಚಾಗುತ್ತಿರುವ ತಾಪಮಾನ ನಿಲ್ಲುವುದೆಂದು?

Summary

ಭೂಮಿಯ ದೀರ್ಘಕಾಲೀನ ತಾಪಮಾನ ಏರಿಕೆ ಮುಂದುವರಿದಿದೆ. 2017  ಅತಿಹೆಚ್ಚು ತಾಪಮಾನ ಹೊಂದಿರುವ ವರ್ಷಗಳ ಸಾಲಿನಲ್ಲಿ ಭಾರತವೂ ಸ್ಥಾನ ಪಡೆದಿದೆ.ನಾಸಾ ಮತ್ತು ನ್ಯಾಷನಲ್ ಒಷಿನೊಗ್ರಾಫಿಕ್ ಅಂಡ್ ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್(ಎನ್ಒಎಎ) ಇತ್ತೀಚೆಗೆ ಬಿಡುಗಡೆಗೊಳಿಸಿರುವ ವರದಿ ಈ ಅಂಶವನ್ನು ಬಹಿರಂಗಪಡಿಸಿವೆ. ನಾಸಾ ವಿಜ್ಞಾನಿಗಳ ವಿಶ್ಲೇಷಣೆ ಪ್ರಕಾರ, 2017 ದಾಖಲೆಯ ಎರಡನೇ ಅತಿ ಬಿಸಿಯಾದ ವರ್ಷವಾಗಿದ್ದು, ಭೂಮಿ ಮತ್ತು ಸಮುದ್ರ ಮೇಲ್ಮೈಗಳ ಈಗಿನ ತಾಪಮಾನವು 1.51 ಡಿಗ್ರಿ ಫ್ಯಾರನ್‌ಹೀಟ್ (0.90 ಡಿಗ್ರಿ ಸೆಲ್ಷಿಯಸ್) ತಲುಪಿದೆ. 2016 ಅತೀ ಹೆಚ್ಚು ತಾಪಮಾನವನ್ನು ಹೊಂದಿದ್ದ ವರ್ಷವಾಗಿತ್ತು.

ನ್ಯಾಷನಲ್ ಒಷೆನಿಕ್ ಅಂಡ್ ಅಟ್ಮಾಸ್ಪೀರಿಕ್ ಅಡ್ಮಿನಿಸ್ಟ್ರೇಷನ್(NOAA) ಹೇಳುವಂತೆ 1880ರಿಂದ 2016ವರೆಗಿನ ಭೂಮಿಯ ಮೈಲ್ಮೈ ಸರಾಸರಿ ಉಷ್ಣತೆ 1.71 ಡಿಗ್ರಿ ಫ್ರಾರನ್‌ಹೀಟ್(0.95 ಡಿಗ್ರಿ ಸೆಲ್ಸಿಯಸ್). ಈ ತಾಪಮಾನದ ಬದಲಾವಣೆಯ ವೇಗವು ಪ್ರತಿ ದಶಕಕ್ಕೆ 0.13 ಡಿಗ್ರಿ ಫ್ಯಾರನ್‌ಹೀಟ್(0.07 ಡಿಗ್ರಿ ಸೆಲ್ಸಿಯಸ್)ನಷ್ಟಿದೆ. ಸಾಗರದ ಮೇಲ್ಮೈಗೆ ಹೋಲಿಸಿದರೆ ಭೂಪ್ರದೇಶದ ತಾಪಮಾನ 0.07ಡಿಗ್ರಿ ಫ್ಯಾರನ್‌ಹೀಟ್‌ನಷ್ಟು ಹೆಚ್ಚಳವಾಗುತ್ತಿದೆ.

ಹಸಿರುಮನೆ ಪರಿಣಾಮ:

ಹಲವು ಅನಿಲಗಳು ವಾತಾವರಣದಲ್ಲಿ ಹೆಚ್ಚಾಗುವ ಕಾರಣದಿಂದ ಗ್ರಹದ ಅಥವಾ ಉಪಗ್ರಹದ ಮೇಲ್ಮೈ ತಾಪಮಾನ ಅಧಿಕವಾಗುವುದೇ ಹಸಿರು ಮನೆ ಪರಿಣಾಮ. ಇಂದು ತಾಪಮಾನದ ಏರಿಕೆಗೆ ಮುಖ್ಯಕಾರಣವಾಗುತ್ತಿರುವುದು ಪಳೆಯುಳಿಕೆ ಇಂಧನಗಳ ದಹನ. ಹಸಿರುಮನೆ ಪರಿಣಾಮವನ್ನು ಉಂಟು ಮಾಡುವ ಮೂಲಕ ಈ ಹೈಡ್ರೋ ಕಾರ್ಬನ್‌ಗಳು ಭೂಮಿ ಬಿಸಿಯಾಗಲು ಕಾರಣವಾಗುತ್ತಿವೆ. ಭೂಮಿಯ ಮೇಲಿನ ತಾಪಮಾನ ಹಾಗೂ ಭೂಮಿಗೆ ತಲುಪುವ ಸೂರ್ಯನ ವಿಕಿರಣಗಳ ನಡುವಿನ ಪರಸ್ಪರ ಕ್ರಿಯೆಯಿಂದ ಈ ಹಸಿರುಮನೆ ಪರಿಣಾಮ ಉಂಟಾಗುತ್ತದೆ.

ಕೈಗಾರಿಕಾ ಕ್ರಾಂತಿ ಆರಂಭದಿಂದಲೂ ವಾತಾವರಣದಲ್ಲಿನ ಅನಿಲಗಳ ಅಸಮತೋಲನ ವೇಗವಾಗಿ ಬದಲಾಗುತ್ತಿದೆ. ಕಲ್ಲಿದ್ದಲು, ತೈಲಗಳಂತ ಪಳೆಯುಳಿಕೆಗಳ ದಹನದ ಪರಿಣಾಮವಾಗಿ ನೀರಾವಿ, ಕಾರ್ಬನ್ ಡೈ ಆಕ್ಸೈಡ್(CO2), ಮೀಥೇನ್(CH4), ಓಝೋನ್ ಮತ್ತು ನೈಟ್ರಸ್ ಆಕ್ಸೈಡ್(N2O)ಗಳು ಉತ್ಪತ್ತಿಯಾಗುತ್ತವೆ; ಇವು ಹಸಿರುಮನೆ ಪರಿಣಾಮವನ್ನು ಉಂಟುಮಾಡುವ ಪ್ರಾರ್ಥಮಿಕ ಅನಿಲಗಳು.ಇಂಗಾಲದ ಡೈ ಆಕ್ಸೈಡ್ ಸಾಮಾನ್ಯವಾದ ಹಸಿರುಮನೆ ಅನಿಲ. ಸುಮಾರು 8 ಲಕ್ಷ ವರ್ಷಗಳ ಹಿಂದಿನಿಂದ ಹಿಡಿದು ಕೈಗಾರಿಕಾ ಕ್ರಾಂತಿಯ ಆರಂಭದವರೆಗೂ ವಾತಾವರಣದಲ್ಲಿ ಇದರ ಉಪಸ್ಥಿತಿಯು 280 ಪಿಪಿಎಂ. ಕೇವಲ 2 ಶತಮಾನಗಳ ಅವಧಿಯಲ್ಲಿ ಇದರ ಮಟ್ಟವು 400 ಪಿಪಿಎಂನಷ್ಟು ಏರಿಕೆಯಾಗಿದೆ. (PPM-parts per million, ಅಂದರೆ ವಾತಾವರಣದಲ್ಲಿರುವ ಪ್ರತಿ ದಶಲಕ್ಷ ಗಾಳಿಯ ಕಣಗಳಲ್ಲಿ 400 ಅಣುಗಳು ಇಂಗಾಲದ ಡೈ ಆಕ್ಸೈಡ್ ಆಗಿರುತ್ತವೆ.)ಸ್ಕ್ರಿಪ್ಸ್ ಇನ್ಸ್ಟಿಟ್ಯೂಷನ್ ಆಫ್ ಓಷನೋಗ್ರಫಿ ಪ್ರಕಾರ ಸುಮಾರು 3-5 ಮಿಲಿಯನ್ ವರ್ಷಗಳ ಹಿಂದೆ ಸಂಭವಿಸಿದ್ದ ‘ಪ್ಲಿಯೋಸೀನ್ ಯುಗ’ದಿಂದೀಚೆಗೆ co2 ಪ್ರಮಾಣ ಏರಿಕೆಯಾಗಿರಲಿಲ್ಲ. ಅಮೆರಿಕಾದ ಪರಿಸರ ಸಂರಕ್ಷಣಾ ಏಜೆನ್ಸಿ(US EPA) ಹೇಳುವಂತೆ, 2015ರಲ್ಲಿ ಅಮೆರಿಕಾದಲ್ಲಿ ಹಸಿರುಮನೆ ಪರಿಣಾಮದಿಂದ ಹೊರಬಂದ ಅನಿಲಗಳಲ್ಲಿ ಕಾರ್ಬನ್ ಡೈ ಆಕ್ಸೈಡ್‌ನ ಪ್ರಮಾಣ ಶೇ.82ಕ್ಕೆ ಏರಿಕೆಯಾಗಿತ್ತು.

ಹಲವಾರು ಮಾರ್ಗಗಳ ಮುಖಾಂತರ CO2 ವಾತಾವರಣದೊಳಗೆ ಪ್ರವೇಶ ಪಡೆಯುತ್ತದೆ. ಒಟ್ಟಾರೆ CO2 ಉತ್ಪಾದನೆಯ ಸಿಂಹಪಾಲು ಅಮೆರಿಕಾದ್ದು. US EPAನ 2015ರ ವರದಿ ಹೇಳುವಂತೆ, ಅಮೆರಿಕಾ ತನ್ನ ಪಳಿಯುಳಿಕೆ ಇಂಧನಗಳ ದಹನದಿಂದ(ವಿದ್ಯುತ್ ಉತ್ಪಾದನೆ ಸೇರಿದಂತೆ) ವಾರ್ಷಿಕವಾಗಿ ಸುಮಾರು 5.5 ಶತಕೋಟಿ ಟನ್‌ಗಳಷ್ಟು ಕಾರ್ಬನ್ ಡೈಆಕ್ಸೈಡ್‌ಅನ್ನು ವಾತಾವರಣಕ್ಕೆ ಸೇರಿಸುತ್ತಿದೆ. ಅದಲ್ಲದೇ, ಉಕ್ಕು ಮತ್ತು ಕಬ್ಬಿಣ ತಯಾರಿಕೆ, ಸಿಮೆಂಟ್ ಉತ್ಪಾದನೆ, ತ್ಯಾಜ್ಯ ಸುಡುವಿಕೆ ಇತ್ಯಾದಿಗಳಿಂದ ಅಮೆರಿಕಾ ಪ್ರತಿವರ್ಷ ಸುಮಾರು 6 ಶತಕೋಟಿ ಟನ್‌ CO2 ಬಿಡುಗಡೆಗೊಳಿಸುತ್ತಿದೆ.

ವಿಪರೀತ CO2 ಉತ್ಪಾದನೆಯಲ್ಲಿ ಅರಣ್ಯನಾಶದ ಪಾತ್ರವೂ ದೊಡ್ಡದು. ಡ್ಯೂಕ್ ವಿಶ್ವವಿದ್ಯಾಲಯದ ಸಂಶೋಧನೆಯು CO2 ಉತ್ಪಾದನೆಯ ಎರಡನೇ ಅತಿದೊಡ್ಡ ಮಾನವ ನಿರ್ಮಿತ ಮೂಲವೆಂದರೆ, ಅದು ಅರಣ್ಯನಾಶ ಎನ್ನುತ್ತದೆ. ಮರಗಳು ಕೊಲ್ಲಲ್ಪಟ್ಟಾಗ, ಅವು ದ್ಯುತಿಸಂಶ್ಲೇಷಣೆಯ ಸಮಯದಲ್ಲಿ ಸಂಗ್ರಹಿಸಿದ ಇಂಗಾಲವನ್ನು ಬಿಡುಗಡೆ ಮಾಡುತ್ತವೆ. 2010 ರ ಜಾಗತಿಕ ಫಾರೆಸ್ಟ್ ರಿಸೋರ್ಸಸ್ ಅಸೆಸ್ಮೆಂಟ್ ಪ್ರಕಾರ, ಅರಣ್ಯನಾಶವು ಸುಮಾರು ಒಂದು ಶತಕೋಟಿ ಟನ್‌ಗಳಷ್ಟು ಇಂಗಾಲವನ್ನು ಪ್ರತಿವರ್ಷ ವಾತಾವರಣಕ್ಕೆ ಬಿಡುಗಡೆ ಮಾಡುತ್ತದೆ.

ಹಸಿರು ಮನೆ ಪರಿಣಾಮದ ಎರಡನೇ ಸಾಮಾನ್ಯ ಅನಿಲ ಮೀಥೇನ್. ಆದರೆ, ಶಾಖ ಉಂಟುಮಾಡುವುದರಲ್ಲಿ ಮೊದಲನೇ ಸ್ಥಾನ ಪಡೆದಿದೆ.  ಇಪಿಎ ಪ್ರಕಾರ, 2012 ರಲ್ಲಿ ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿ ಸುಮಾರು 9 ಪ್ರತಿಶತದಷ್ಟು ಪಾಲನ್ನು ಮೀಥೇನ್ ಹೊಂದಿತ್ತು. 100 ವರ್ಷಗಳ ಅವಧಿಯಲ್ಲಿ ಹವಾಮಾನ ಬದಲಾವಣೆಯ ಮೇಲೆ ಇಂಗಾಲದ ಡೈಆಕ್ಸೈಡ್‌ಗಿಂತ ಮೀಥೇನ್‌ನ ಪ್ರಭಾವ 20 ಪಟ್ಟು ಹೆಚ್ಚು ಎಂದು ಇಪಿಎ ಹೇಳುತ್ತದೆ. ಮೀಥೇನ್ ಅನೇಕ ನೈಸರ್ಗಿಕ ಮೂಲಗಳಿಂದ ಬಿಡುಗಡೆಯಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪರಿಸರದಲ್ಲಿ ಮಾನವನ ಹಸ್ತಕ್ಷೇಪವು ಮೀಥೇನ್ ಉತ್ಪಾದನೆಯನ್ನು ಮಿತಿಮೀರಿ ಜಾಸ್ತಿಯಾಗಿಸಿದೆ. ಇಪಿಎ ವರದಿ ಹೇಳುವಂತೆ, 1990ರಿಂದ 2012ರ ಅವಧಿಯಲ್ಲಿ ಉತ್ಪಾದನೆಯಾದ ಮೀಥೇನ್‌ನ ಪ್ರಮಾಣದಲ್ಲಿ ಮಾನವನ ಕೊಡುಗೆ ಶೇ.60%ರಷ್ಟು.

ಜಾಗತಿಕ ತಾಪಮಾನದ ಪರಿಣಾಮಗಳೇನು?

ಈ ತಾಪಮಾನದ ಮಿತಿಮೀರಿದ ಏರಿಕೆಯು ಭೂಮಿಯನ್ನಷ್ಟೇ ಬಿಸಿಗೊಳಿಸದೆ, ವಿಜ್ಞಾನಿಗಳು, ನೀತಿ ನಿರೂಪಕರ ತಲೆಗಳನ್ನೂ ಬಿಸಿಯಾಗಿಸುತ್ತಿದೆ. ಅಳೆತೆ ಮೀರುತ್ತಿರುವ ಉಷ್ಣತೆ ಗಂಭೀರ ಸ್ವರೂಪದ ಹಿಮಪಾತಕ್ಕೆ ಕಾರಣವಾಗುತ್ತಿದೆ. ಹಿಮವನ್ನು ಕರಗಿಸಿ, ಶುಷ್ಕ ಪ್ರದೇಶಗಳನ್ನು ಒಣಗಿಸಿ, ಸಾಗರದ ಸೂಕ್ಷ್ಮ ಸಮತೋಲನಕ್ಕೆ ಅಡ್ಡಿಪಡಿಸಿ ವಾತಾವರಣದಲ್ಲಿ ಉಲ್ಭಣಗಳನ್ನು ಸೃಷ್ಟಿಸುತ್ತಿದೆ. ಈಗ ಸ್ಪಷ್ಟವಾಗಿ ಗೋಚರಿಸುತ್ತಿರುವ ಪರಿಣಾಮವೆಂದರೆ, ಹಿಮನದಿ ಹಾಗೂ ಸಮುದ್ರದೊಳಗಿನ ಮಂಜು ಕರಗುವಿಕೆ. ವರದಿಗಳ ಪ್ರಕಾರ ತಾಪಮಾನದ ಏರಿಕೆಯು ಹಿಮನದಿಗಳನ್ನು ಕರಗಿಸಿಬಲ್ಲ ಸಾಧ್ಯತೆಗಳು ಶೇ. 99ರಷ್ಟಿದೆ. ಮೊಂಟಾನಾದ ಗ್ಲೇಸಿಯರ್ ನ್ಯಾಷನಲ್ ಪಾರ್ಕ್ 1800ರ ಅಂತ್ಯದಲ್ಲಿ 150 ಹಿಮನದಿಗಳನ್ನು ಹೊಂದಿತ್ತು, ಇಂದು ಅಲ್ಲಿನ ಹಿಮನದಿಗಳ ಸಂಕ್ಯೆ ಕೇವಲ 26. ಉತ್ತರ ಧ್ರುವದಲ್ಲಿನ ತಾಪಮಾನವು ಮಧ್ಯಮ ಅಕ್ಷಾಂಶಗಳಿಗಿಂತಲೂ ಎರಡು ಪಟ್ಟು ಹೆಚ್ಚಾಗಿದೆ. ಈಗಾಗಲೇ ಇರುವ ಒಣ ಪ್ರದೇಶಗಳು ಮತ್ತಷ್ಟು ಒಣಗಲಿವೆ. ಶುಷ್ಕ ಪ್ರದೇಶಗಳೂ ಕೂಡ ತನ್ನ ತೇವಾಂಶಗಳನ್ನು ಕಳೆದುಕೊಳ್ಳುತ್ತಿವೆ. ಸಂಶೋಧಕರ ಪ್ರಕಾರ ಬಿಸಿಯಾದ ಮತ್ತು ಬಿಸಿಯಾಗಲಿರುವ ಮಣ್ಣಿನಲ್ಲಿ ನೀರು ಆವಿಯಾಗುವ ಪ್ರಮಾಣವು ಹೆಚ್ಚಳವಾಗಲಿದೆ. ಹೆಚ್ಚು ಮಳೆ ಕಾಣುತ್ತಿದ್ದ ಪ್ರದೇಶಗಳೂ ಸಹ ಬರಗಾಲವನ್ನು ಎದುರಿಸಲಿವೆ.

2014ರಲ್ಲಿ ನಡೆದ ಸಂಶೋಧನೆಯ ಪ್ರಕಾರ ಮೆಡಿಟರೇನಿಯನ್, ಅಮೆಜಾನ್, ಮಧ್ಯ ಅಮೆರಿಕ ಮತ್ತು ಇಂಡೋನೇಶಿಯಾ ಸೇರಿದಂತೆ ಉಪಉಷ್ಣವಲಯದ ಪ್ರದೇಶಗಳು ಕಠಿಣ ಪರಿಸ್ಥಿತಿಯನ್ನು ಕಾಣುತ್ತಿವೆ. ದಕ್ಷಿಣ ಆಫ್ರಿಕಾ, ಮೆಕ್ಸಿಕೋ, ಪಶ್ಚಿಮ ಆಸ್ಟ್ರೇಲಿಯಾ ಮತ್ತು ಕ್ಯಾಲಿಫೋರ್ನಿಯಾ ಕೂಡಾ ಒಣಗುತ್ತವೆ.ಭಾರತದ ಮಟ್ಟಿಗೆ ನೋಡುವುದಾದರೆ, ದೇಶದ 27 ರಾಜ್ಯಗಳು ಆಗಾಗ್ಗೆ ನೈಸರ್ಗಿಕ ವಿಪತ್ತುಗಳನ್ನು ಎದುರಿಸುತ್ತಿವೆ. ಜಾಗತಿಕ ತಾಪಮಾನ ಏರಿಕೆಯು ಈ ಹವಾಮಾನ ವಿಪತ್ತುಗಳು ತೀವ್ರವಾಗಿ ಹೆಚ್ಚಾಗಲು ಕಾರಣವಾಗುತ್ತಿದೆ. ಸಮೀಕ್ಷೆಗಳ ಪ್ರಕಾರ, 2007-2008ರಲ್ಲಿ, ಮಹತ್ತರವಾದ ವಿಪತ್ತುಗಳ ಸಂಖ್ಯೆಗೆ ಸಂಬಂಧಿಸಿದಂತೆ ಭಾರತವು ವಿಶ್ವದಲ್ಲೇ ಮೂರನೆಯ ಸ್ಥಾನವನ್ನು ಪಡೆದಿದೆ. ಒಂದೇ ವರ್ಷದಲ್ಲಿ 18 ದುರಂತಗಳು ಸಂಭವಿಸಿ, 1103 ಜನರ ಸಾವಿಗೆ ಕಾರಣವಾಗಿದ್ದವು.ಜಾಗತಿಕ ತಾಪಮಾನದ ಪರಿಣಾಮವಾಗಿಯೇ ಭಾರತವು ಅತಿವೃಷ್ಠಿ-ಅನಾವೃಷ್ಠಿಗಳನ್ನು ಎಗ್ಗಿಲ್ಲದಂತೆ ಅನುಭವಿಸುತ್ತಿದೆ. ಮಳೆ ಕಾಣದ ಪ್ರದೇಶಗಳು ಇದ್ದಕ್ಕಿದ್ದಂತೆಯೇ ಹೇರಳವಾದ ಮಳೆ ಕಾಣುತ್ತಿವೆ.

ಭಾರತದಲ್ಲಿ ಒಟ್ಟು ಕೃಷಿ ಭೂಮಿಗಳಲ್ಲಿ ಶೇ.33ರಷ್ಟು ಪ್ರದೇಶ ಬರಗಾಲ ಪೀಡಿತವಾಗಿದ್ದು, ವರ್ಷಕ್ಕೆ 750 ಮಿ.ಮೀ ಗಿಂತ ಕಡಿಮೆ ಮಳೆಯಾಗುತ್ತದೆ. ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಕರ್ನಾಟಕ, ಆಂಧ್ರಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳು ಈ ಸ್ಥಿತಿಯನ್ನು ಎದುರಿಸುತ್ತಿವೆ. ಮುಂದೆ ಬರಗಾಲ ಪೀಡಿತ ಪ್ರದೇಶದ ಪರಿಮಾಣ ಸುಮಾರು 68% ಆಗಬಹುದು. ರಾಜಸ್ಥಾನವು ತನ್ನ ಬರಗಾಲದ ಕಾರಣದಿಂದ 2000ದಲ್ಲಿ ವಿಶ್ವ ದಾಖಲೆ ಬರೆದಿತ್ತು.

ಜಾಗತಿಕ ತಾಪಮಾನದ ತೆಲೆಬಿಸಿಯನ್ನು ಕಡಿಮೆಗೊಳಿಸುವ ಸಲುವಾಗಿ ಪ್ಯಾರಿಸ್ ಅಗ್ರಿಮೆಂಟ್ ಅಸ್ಥಿತ್ವಕ್ಕೆ ಬಂದಿದೆ. ಸಹಿ ಮಾಡಿರುವ ದೇಶಗಳೆಲ್ಲವೂ ತಾಪಮಾನವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ತಲೆಕೆಡಿಸಿಕೊಂಡಿವೆ. ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, 2025ರ ವೇಳೆಗೆ ಹಸಿರು ಮನೆ ಹೊರಸೂಸುವಿಕೆಯನ್ನು 2005ರ ಅವಧಿಯಲ್ಲಿದ್ದ ಪ್ರಮಾಣಕ್ಕಿಂತ ಶೇ.28% ಕಡಿಮೆ ಮಾಡುವುದಾಗಿ ತಿಳಿಸಿದ್ದರು. ಸಧ್ಯದ ಅಮೇರಿಕಾ ಅಧ್ಯಕ್ಷ ರೊನಾಲ್ಡ್ ಟ್ರಂಪ್, 2017ರ ಆಗಸ್ಟ್‌ನಲ್ಲಿ ನಮ್ಮ ಸರಕಾರದಲ್ಲಿ ಪ್ಯಾರಿಸ್ ಒಪ್ಪಂದಕ್ಕೆ ಮಾನ್ಯತೆಯಿಲ್ಲ ಎಂದಿದ್ದರು. ಅದನ್ನು ವಿರೋಧಿಸಿ ಸಾವಿರಕ್ಕೂ ಅಧಿಕ ಮೇಯರ್‌ಗಳು, ಗವರ್ನರ್‌ಗಳು, ವ್ಯವಹಾರ ಕಾರ್ಯನಿರ್ವಾಹಕರು ತಾವು ಪ್ಯಾರಿಸ್ ಒಪ್ಪಂದಕ್ಕೆ ಬದ್ಧರೆಂದು ತಿಳಿಸಿದ್ದಾಗಿ ಇನ್‌ಸೈಡ್ ಕ್ಲೈಮೇಟ್ ನ್ಯೂಸ್ ವರದಿ ಮಾಡಿತ್ತು.

ಕೇವಲ ಸರಕಾರದ ಹಂತದ ಯೋಜನೆಗಳಿಂದ ಜಾಗತಿಕ ತಾಪಮಾನ ಕಡಿಮೆಯಾಗಲು ಸಾಧ್ಯವಿಲ್ಲ. ಅದಕ್ಕಾಗಿ ಇಡೀ ವ್ಯವಸ್ಥೆ ತಮ್ಮ ದೈನಂದಿನ ಬಳಕೆಗೆ ಅಗತ್ಯವಾದ ಇಂಧನ ಮೂಲಗಳಿಗಾಗಿ ನವೀಕರಿಸಬಹುದಾದ ಮೂಲಗಳತ್ತ ದೊಡ್ಡ ಮಟ್ಟದಲ್ಲಿ ಹೆಜ್ಜೆ ಹಾಕಬೇಕಿದೆ. ಚಿಕ್ಕದಾದರೂ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವ ಲ್ಯಾಟೀನ್ ಅಮೆರಿಕಾದ ಪುಟ್ಟ ದೇಶ ‘ಕೋಸ್ಟರಿಕಾ’ ವಿಶ್ವದ ಇನ್ನುಳಿದ ದೇಶಗಳಿಗೆ ಮಾದರಿಯಾಗಬಲ್ಲದು.