ದಾವೋಸ್‌ನಲ್ಲಿ ದೇವೇಗೌಡರನ್ನು ನೆನಪಿಸಿಕೊಂಡ ಪ್ರಧಾನಿ; ಹದವಾಗದ ಅಖಾಡದಲ್ಲಿ ಚುನಾವಣಾ ಲೆಕ್ಕಾಚಾರ
ಸುದ್ದಿ ಸಾಗರ

ದಾವೋಸ್‌ನಲ್ಲಿ ದೇವೇಗೌಡರನ್ನು ನೆನಪಿಸಿಕೊಂಡ ಪ್ರಧಾನಿ; ಹದವಾಗದ ಅಖಾಡದಲ್ಲಿ ಚುನಾವಣಾ ಲೆಕ್ಕಾಚಾರ

ಸ್ವಿಟ್ಜರ್ಲೆಂಡಿನ ದಾವೋಸ್‌ನಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಆರ್ಥಿಕ ವೇದಿಕೆಯ ಮೊದಲ ದಿನ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ; ಮಾಜಿ ಪ್ರಧಾನಿ ದೇವೇಗೌಡರನ್ನು ನೆನಪಿಸಿಕೊಂಡಿದ್ದಾರೆ. 

ವಲ್ಡ್‌ ಎಕನಾಮಿಕ್‌ ಫೋರಂನಲ್ಲಿ ಮೋದಿಯವರ ಭಾಷಣ ಆರಂಭವಾಗಿದ್ದೇ ದೇವೇಗೌಡರನ್ನು ನೆನಪಿಸಿಕೊಳ್ಳುವುದರಿಂದ. "20 ವರ್ಷಗಳಿಂದ ಸ್ವಿಟ್ಜರ್ಲೆಂಡಿನ ವೇದಿಕೆಯಲ್ಲಿ ಭಾರತದ ಯಾವುದೇ ಪ್ರಧಾನಿ ಪಾಲ್ಗೊಂಡಿರಲಿಲ್ಲ. ಮಾಜಿ ಪ್ರಧಾನಿ ದೇವೇಗೌಡರು 1997ರಲ್ಲಿ ಭೇಟಿ ನೀಡಿದ್ದರು. ಅದಾದ ನಂತರ ನನಗೆ ಈ ಅವಕಾಶ ಲಭಿಸಿದೆ," ಎಂದು ಭಾಷಣ ಆರಂಭಿಸಿದ ಮೋದಿ ನಂತರ 'ಆಸೆಯೆ ದುಖಃಕ್ಕೆ ಮೂಲ', ತತ್ವದ ಬಗ್ಗೆ ಮಾತನಾಡಿದರು. ಕಳೆದ ಇಪ್ಪತ್ತು ವರ್ಷಗಳಲ್ಲಿ ಆದ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯ ಬಗ್ಗೆಯೂ ಮಾತನಾಡಿದರು.

ಭಾಷಣದ ಆರಂಭದಲ್ಲಿಯೇ ದೇವೇಗೌಡರನ್ನು ನೆನೆದಿದ್ದು, ಕರ್ನಾಟಕದಲ್ಲಿ ಚುನಾವಣೆ ವೇಳೆ ಬಿಜೆಪಿ- ಜೆಡಿಎಸ್‌ ಮೈತ್ರಿಯ ಸಾಧ್ಯತೆಯ ಸುತ್ತಲೂ ಲೆಕ್ಕಾಚಾರಗಳಿಗೆ ಎಡೆಮಾಡಿಕೊಟ್ಟಿದೆ. ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ನಡೆದರೆ ಯಾವ ಪಕ್ಷವೂ ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೇರುವ ಲಕ್ಷಣಗಳು ಗೋಚರಿಸುತ್ತಿಲ್ಲ. ಚುನಾವಣೆ ಕಣ ರಂಗೇರುತ್ತಿದ್ದರೂ, ಹದವಾಗಲು ಇನ್ನಷ್ಟು ಸಮಯ ಬೇಕಿದೆ. ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ನಡೆಯುವ ಬಹಿರಂಗ ಸಭೆಗಳು, ಪಕ್ಷಗಳ ಹಿರಿಯ ನಾಯಕರ ಭೇಟಿಗಳು, ಟಿಕೆಟ್ ಹಂಚಿಕೆ ಪ್ರಕ್ರಿಯೆ ನಂತರವೇ ಚುನಾವಣೆ ಅಖಾಡದ ಕುರಿತು ಸ್ಪಷ್ಟತೆ ಸಿಗಬೇಕಿದೆ.

ಈ ಸಮಯದಲ್ಲಿ, ರಾಜ್ಯದ ಬಿಜೆಪಿ ಮುಖಂಡರು ಕಾಂಗ್ರೆಸ್ ಪಕ್ಷವನ್ನು ಹೊರಗಿಡಲು ಎಲ್ಲಾ ರೀತಿಯ ಹೊಂದಾಣಿಕೆಗಳಿಗೆ ಸಿದ್ಧ ಎನ್ನುತ್ತಿದ್ದಾರೆ. ಈ ಹಿಂದೆ, ಬಿಬಿಎಂಪಿ ಚುನಾವಣೆ ವೇಳೆಯಲ್ಲಿ ಜೆಡಿಎಸ್‌ ಕಾಂಗ್ರೆಸ್ ಜತೆ ಮೈತ್ರಿಗೆ ಒಪ್ಪಿಕೊಂಡಿತ್ತು. ಆದರೆ ವಿಧಾನಸಭಾ ಚುನಾವಣೆಯಲ್ಲಿ ಆಡಳಿತ ಪಕ್ಷದ ಜತೆ ಹೋಗುವುದಿಲ್ಲ ಎಂದು ಪಕ್ಷದ ರಾಷ್ಟ್ರಾಧ್ಯಕ್ಷ ದೇವೇಗೌಡ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಸಾಧ್ಯವಾದರೆ ಎಡ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಯನ್ನೂ ಅವರು ಮುಕ್ತವಾಗಿಟ್ಟಿದ್ದಾರೆ. ಈವರೆಗೆ ಜೆಡಿಎಸ್‌ ವಲಯದಿಂದ ಬಿಜೆಪಿಯನ್ನು ಹೊರಗಿಡುವ ಕುರಿತು ಎಲ್ಲಿಯೂ ಸ್ಪಷ್ಟ ಮಾತುಗಳು ಹೊರಬಿದ್ದಿಲ್ಲ ಎಂಬುದು ಗಮನಾರ್ಹ. ಇಂತಹ ಸಮಯದಲ್ಲಿಯೇ ದೂರದ ದಾವೋಸ್‌ನಲ್ಲಿ ಪ್ರಧಾನಿ ಮೋದಿ, ದೇವೇಗೌಡರನ್ನು ನೆನಪಿಸಿಕೊಂಡಿರುವುದು ಸಹಜವಾಗಿಯೇ ಚುನಾವಣೆ ಲೆಕ್ಕಾಚಾರಗಳಿಗೆ ಅನುವು ಮಾಡಿಕೊಡುತ್ತಿದೆ. ಈ ಹಿಂದೆ ಸ್ವತಃ ಗೌಡರೇ, "ಮೋದಿ ವಿರುದ್ಧ ಕಾಂಗ್ರೆಸ್ ರೀತಿಯಲ್ಲಿ ವಿರೋಧ ವ್ಯಕ್ತಪಡಿಸುವ ಅಗತ್ಯವಿಲ್ಲ,'' ಎಂದು ಪಕ್ಷದ ವೇದಿಕೆಯಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಈ ಹಿಂದೆ, ಜಿಎಸ್‌ಟಿ ಜಾರಿಗೆ ಮುನ್ನ ಬದುಕುಳಿದ ಮಾಜಿ ಪ್ರಧಾನಿಗಳಿಗೆ ವೇದಿಕೆ ಒದಗಿಸಲಾಗಿತ್ತು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪಕ್ಷದ ನಿಲುವಿನ ಕಾರಣಕ್ಕೆ ವೇದಿಕೆ ಹಂಚಿಕೊಳ್ಳಲು ನಿರಾಕರಿಸಿದ್ದರು. ಆದರೆ ದೇವೇಗೌಡರು ಮೋದಿ ಜತೆ ವೇದಿಕೆ ಹಂಚಿಕೊಳ್ಳುವ ಮೂಲಕ ದೇಶದ ಗಮನ ಸೆಳೆದಿದ್ದರು.

ಆಸೆಯೇ ದುಖಃಕ್ಕೆ ಮೂಲ:

ಇಂತಹ ಲೆಕ್ಕಾಚಾರಗಳನ್ನು ಪಕ್ಕಕ್ಕಿಟ್ಟು ನೋಡಿದರೆ, ದಾವೋಸ್‌ ವೇದಿಕೆಯಲ್ಲಿ ಮಾತನಾಡುತ್ತ ಮೋದಿ, "ಆಸೆಯೇ ದುಖಃಕ್ಕೆ ಮೂಲ. ಅವಶ್ಯಕತೆಗೆ ತಕ್ಕಷ್ಟು ಆಸೆ ಪಡಬೇಕು. ಅತಿಯಾಸೆಯನ್ನು ಬಿಟ್ಟಲ್ಲಿ ಬಡತನ ನಿರ್ಮೂಲನೆಯಾಗಲಿದೆ. ಬುದ್ಧನೂ ಕೂಡ ಇದನ್ನೇ ಹೇಳಿದ್ದಾನೆ. ನಮ್ಮ ದೇಶದ ಉಪನಿಷತ್ತುಗಳೂ ಇದನ್ನೇ ಹೇಳಿವೆ. ನಮಗೆ ಎಷ್ಟು ಬೇಕು ಅಷ್ಟನ್ನು ಮಾತ್ರ ನಮ್ಮಲ್ಲಿಟ್ಟುಕೊಳ್ಳಬೇಕು," ಎಂದರು.

ಮುಂದುವರೆದ ಅವರು, "ಮೂವತ್ತು ವರ್ಷಗಳ ನಂತರ ಮೊದಲ ಬಾರಿಗೆ ಇಡೀ ದೇಶದ ಜನತೆ ಬಿಜೆಪಿ ಪಕ್ಷದ ಮೇಲೆ ಪೂರ್ಣ ನಂಬಿಕೆಯಿಟ್ಟು ಆರಿಸಿದೆ. ಪೂರ್ಣ ಬಹುಮತವನ್ನು ಪಡೆದು ಬಿಜೆಪಿ ಅಧಿಕಾರಕ್ಕೆ ಬಂದಿದೆ. ನಮ್ಮ ಆರ್ಥಿಕ, ಸಾಮಾಜಿಕ ನೀತಿಗಳಿಂದ ಸಣ್ಣಪುಟ್ಟ ಬದಲಾವಣೆಗಳಾಗುತ್ತಿಲ್ಲ. ದೊಡ್ಡ ಅಭಿವೃದ್ಧಿಗಳನ್ನು ಕೇಂದ್ರೀಕರಿಸಿ ನಾವು ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಇಂದು ಭಾರತದಲ್ಲಿ ಅಂತರಾಷ್ಟ್ರೀಯ ಹೂಡಿಕೆದಾರರಿಗೆ ಬೇಕಾದ ಎಲ್ಲ ಸುಧಾರಣೆಗಳನ್ನು ಮಾಡಲಾಗಿದೆ. ಈಗ ಭಾರತದಲ್ಲಿ ಹಣ ಹೂಡಿಕೆ ಮಾಡುವುದು, ಸಾರಿಗೆ ವ್ಯವಸ್ಥೆ, ಆಮದು, ರಫ್ತು ಪ್ರಕ್ರಿಯೆ ಸರಳವಾಗಿದೆ. ಏಕ ರೂಪ ತೆರಿಗೆ ಜಾರಿಯಿಂದ ಆರ್ಥಿಕ ನೀತಿ ಸುಧಾರಣೆ ಮಾಡಲಾಗಿದೆ," ಎಂದರು.

2025ರ ಹೊತ್ತಿಗೆ ಭಾರತದ ಯುವ ಸಮುದಾಯ 5 ಟ್ರಿಲಿಯನ್‌ನಷ್ಟು ಆರ್ಥಿಕ ಸೃಷ್ಟಿ ಮಾಡಲಿದ್ದಾರೆ ಎಂದಿದ್ದಾರೆ ಮೋದಿ. ಅದರ ಜತೆಗೆ ಭವಿಷ್ಯದಲ್ಲಿ ಭಾರತದ ಯುವ ಪೀಳಿಗೆ ಕೆಲಸವನ್ನು ಕೇಳುವುದಿಲ್ಲ, ಕೆಲಸವನ್ನು ಕೊಡುವ ಕೈಗಳಾಗಿ ಬದಲಾಗಿರುತ್ತಾರೆ. "ನಮ್ಮ ಸುಧಾರಣಾ ನೀತಿಗಳ ಬಗ್ಗೆ ನಂಬಿಕೆಯಿಡಿ. ಭಾರತದ ಭವಿಷ್ಯ ಉಜ್ವಲವಾಗಿದೆ," ಎಂದು ಮೋದಿ ಹೇಳಿದರು.

ಮೋದಿಯವರು ಭಾಷಣದಲ್ಲಿ ಹೇಳಿದಂತೆ 2025ರಲ್ಲಿ ಭಾರತದ ಯುವ ಪೀಳಿಗೆ ಕೆಲಸ ಕೊಡುವ ಸ್ಥಾನದಲ್ಲಿ ಇರುತ್ತಾರೋ ಇಲ್ಲವೋ, ಸದ್ಯದ ಪರಿಸ್ಥಿತಿಯಲ್ಲಿ ಹಿಮ್ಮುಖವಾಗಿ ಸಾಗುತ್ತಿರುವ ಭಾರತದ ಆರ್ಥಿಕ ಸ್ಥಿತಿಯ ಸುಧಾರಣೆಗೆ ಕೇಂದ್ರ ಸರಕಾರ ಕ್ರಮ ತೆಗೆದುಕೊಳ್ಳುವ ಅವಶ್ಯಕತೆಯಿದೆ. ದಿನಬಳಕೆ ವಸ್ತುಗಳಾದ, ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ, ಧಾನ್ಯಗಳು, ತರಕಾರಿ ಮತ್ತಿತರ ಸಾಮಗ್ರಿಗಳ ದರ ಗಗನಕ್ಕೇರಿದೆ. ಇವೆಲ್ಲದರ ಬೆಲೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಕ್ರಮವೇನು ಎಂಬುದು ಪ್ರತಿ ಸಾಮಾನ್ಯನ ಪ್ರಶ್ನೆಯಾಗಿದೆ. ಉದ್ಯೋಗ ಸೃಷ್ಟಿಯ ಕುರಿತು ಸಾಕಷ್ಟು ಪ್ರಶ್ನೆಗಳೆದಿದ್ದು, ಇವೆಲ್ಲಕ್ಕೂ ಮೋದಿ ನೇತೃತ್ವದ ಕೇಂದ್ರ ಸರಕಾರ ಉತ್ತರ ನೀಡದ ಸ್ಥಿತಿಗೆ ತಲುಪಿದೆ.

ಹೀಗಿರುವಾಗಲೇ, ದಾವೋಸ್‌ನಲ್ಲಿ ದೇವೇಗೌಡರನ್ನು ನೆನಪಿಸಿಕೊಳ್ಳುವ ಮೂಲಕ ಮೋದಿ, ಕರ್ನಾಟಕ ಚುನಾವಣಾ ಕಣದ ಭವಿಷ್ಯ ಸಮೀಕರಣದ ಸುತ್ತ ಗಮನಸೆಳೆದಿದ್ದಾರೆ. ದೇವೇಗೌಡರನ್ನು ಮೈತ್ರಿಗೆ ಮೂದಲಿಸುವ ಮೊದಲ ಹೆಜ್ಜೆ ಇದಾಗಿರಲೂಬಹುದು.