samachara
www.samachara.com
ಜಾಹೀರಾತಿನ ಹಿಂದೆ ಬಿದ್ದ ಸದಾ 'ಸಿದ್ಧ' ಸರಕಾರ ಮತ್ತು ಕಾಂಗ್ರೆಸ್‌ ಪಕ್ಷದೊಳಗಿನ ಬೇಗುದಿ
ಸುದ್ದಿ ಸಾಗರ

ಜಾಹೀರಾತಿನ ಹಿಂದೆ ಬಿದ್ದ ಸದಾ 'ಸಿದ್ಧ' ಸರಕಾರ ಮತ್ತು ಕಾಂಗ್ರೆಸ್‌ ಪಕ್ಷದೊಳಗಿನ ಬೇಗುದಿ

ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಜಾಹೀರಾತುಗಳಿಗೆ ಕೋಟಿ ಕೋಟಿ ಹಣವನ್ನು ಪೋಲು ಮಾಡುತ್ತಿದೆ. ಟಿವಿ ವಾಹಿನಿ, ರೇಡಿಯೋ, ಡಿಜಿಟಲ್‌, ಹೋರ್ಡಿಂಗ್ಸ್‌ ಮತ್ತಿತರ ಮಾದರಿಯಲ್ಲಿ ಸರಕಾರದ ಸಾಧನೆಯನ್ನು ಜನರಿಗೆ ತಲುಪಿಸಲು ಯತ್ನಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರ ಖರ್ಚು ಮಾಡುತ್ತಿರುವುದು ಸಾರ್ವಜನಿಕರ ಹಣ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ಆರಂಭವಾಗಿದ್ದು, ಸಿದ್ದರಾಮಯ್ಯ ಸರಕಾರದ ಸಾಧನೆಗಳನ್ನು, ಸ್ವಂತ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಬಗ್ಗೆ ಕಾಂಗ್ರೆಸ್‌ ಪಕ್ಷದ ಒಳಗೂ ಅಪಸ್ವರಗಳು ಕೇಳಿ ಬರುತ್ತಿವೆ ಎಂದು ವರದಿಗಳು ಹೇಳುತ್ತಿವೆ.

ಕಾಂಗ್ರೆಸ್‌ ಪಕ್ಷದ ಒಳಗೆ ಹಿರಿಯ ನಾಯಕರು ಈಗಾಗಲೇ ಹೈಕಮಾಂಡ್‌ಗೆ ಸಿದ್ದರಾಮಯ್ಯ ಅವರ ವಿರುದ್ಧ ಇರುವ ಬೇಸರವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ಬೂತ್‌ ಮಟ್ಟದಲ್ಲಿ ಕಾರ್ಯಕರ್ತರನ್ನು ಮತ್ತು ಜನರನ್ನು ತಲುಪಲು ಜಾಹೀರಾತನ್ನು ಕಾಂಗ್ರೆಸ್‌ ಬಳಕೆ ಮಾಡಿಕೊಳ್ಳುತ್ತಿದೆ. ಆದರೆ ಇದು ಸರಕಾರದ ಜಾಹೀರಾತು ಅನಿಸುವುದಕ್ಕಿಂತಲೂ, ಸಿದ್ದರಾಮಯ್ಯ ತಮ್ಮನ್ನು ತಾವು ಹೊಗಳಿಕೊಳ್ಳುವಂತೆ ಭಾಸವಾಗುತ್ತಿದೆ ಎಂಬ ಆರೋಪಗಳಿವೆ. ಆ ಮೂಲಕ ಹೈಕಮಾಂಡ್‌ ಘೋಷಣೆ ಮಾಡದಿದ್ದರೂ, ತಾವೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂಬಂತೆ ಸಾಮಾಜಿಕವಾಗಿ ಸಿದ್ದರಾಮಯ್ಯ ತೋರಿಸಿಕೊಳ್ಳುತ್ತಿದ್ದಾರಾ ಎಂಬ ಪ್ರಶ್ನೆಯೂ ಏಳುತ್ತದೆ. ಎಲ್ಲಾ ಜಾಹೀರಾತುಗಳಲ್ಲೂ 'ಸದಾ ಸಿದ್ಧ ಸರಕಾರ' ಎಂಬ ಘೋಷ ವಾಕ್ಯವನ್ನು ಬಳಸುತ್ತಿದೆ. ಇದರಿಂದ ಬೇಸರಗೊಂಡಿರುವ ಪಕ್ಷದ ಹಿರಿಯ ನಾಯಕರು, ಪಕ್ಷವನ್ನು ಮೀರಿ ಸ್ವಪ್ರಶಂಸೆಗೆ ಸಿದ್ದರಾಮಯ್ಯ ಇಳಿದಿದ್ದಾರೆ ಎಂಬುದಾಗಿ ಹೈಕಮಾಂಡ್‌ಗೆ ತಿಳಿಸಿದ್ದಾರೆನ್ನಲಾಗಿದೆ. ಪಕ್ಷದ ಹಿರಿಯ ನಾಯಕರಲ್ಲಿರುವ ಅಸಮಾಧಾನದ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ರಾಜ್ಯಕ್ಕೆ ಬಂದಾಗ ಚರ್ಚಿಸುವ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯರ ಮೇಲಿರುವ ಪಕ್ಷದೊಳಗಿನ ಸದಮಾಧಾನ ಒಂದು ಕಡೆಗಾದರೆ, ಜಾಹೀರಾತಿಗೆ ಸರಕಾರ ಖರ್ಚು ಮಾಡುತ್ತಿರುವುದು ಬರೋಬ್ಬರಿ 100 ಕೋಟಿ ರೂ. ಎನ್ನಲಾಗುತ್ತಿದೆ. ಇಷ್ಟು ದೊಡ್ಡ ಮೊತ್ತವನ್ನು ಸಾರ್ವಜನಿಕರಿಗೆ ಸಹಾಯವಾಗುವ ಯೋಜನೆಗಳಿಗೆ ಬಳಸಬಹುದಿತ್ತು, ಎಂಬ ಮಾತುಗಳೂ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ. ಸರಕಾರ ಈ ಭಾರೀ ಮೊತ್ತವನ್ನು ಸಾರ್ವಜನಿಕರಿಂದ ಪಡೆದ ತೆರಿಗೆಯ ಹಣದಲ್ಲೇ ಕೊಡುತ್ತಿದೆ. ಕೇಂದ್ರದಲ್ಲಿ ಎನ್‌ಡಿಎ ಸರಕಾರ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜಾಹೀರಾತಿಗೆ ಹಣ ಪೋಲು ಮಾಡಿದ್ದಾರೆ ಎಂಬ ಆರೋಪವನ್ನು ಈ ಹಿಂದೆ ಕಾಂಗ್ರೆಸ್‌ ಮಾಡಿತ್ತು. ಆದರೆ ಈಗ ಕಾಂಗ್ರೆಸ್‌ ಸರಕಾರವೂ ಕೇಂದ್ರ ಬಿಜೆಪಿಯನ್ನೇ ಅನುಕರಿಸುತ್ತಿದೆ.

ಸರಕಾರದ ಜಾಹೀರಾತಿನ ಬಗ್ಗೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್‌ ಸದಸ್ಯ ವಿಎಸ್‌. ಉಗ್ರಪ್ಪ, "ಜಾಹೀರಾತು, ಸರಕಾರದ ಸಾಧನೆಗಳನ್ನು, ಜನಪರ ಕೆಲಸಗಳನ್ನು ಜನರಿಗೆ ತಲುಪಿಸುವ ಸಾಧನ. ಸರಕಾರ ನೀಡುತ್ತಿರುವ ಜಾಹೀರಾತಿನ ಬಗ್ಗೆ ಕಾಂಗ್ರೆಸ್‌ ಪಕ್ಷದ ಯಾರಿಗೂ ಬೇಸರವಿಲ್ಲ. ಸರಕಾರದ ಮುಖವಾಣಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆ. ಸರಕಾರ ಮುಖಭಂಗ ಎದುರಿಸುವ ಸಂದರ್ಭ ಬಂದರೆ, ಆಗ ಮುಖ್ಯಮಂತ್ರಿಯನ್ನೇ ಹೊಣೆ ಮಾಡುತ್ತಾರಲ್ಲವೇ. ಅದೇ ರೀತಿ ಸರಕಾರದ ಸಾಧನೆಗಳಿಗೂ ಅವರೇ ರಾಯಭಾರಿಯಾಗುತ್ತಾರೆ. ಮತ್ತು ಇಂದು ಸಿದ್ದರಾಮಯ್ಯ ದೊಡ್ಡ ಜನನಾಯಕರಾಗಿ ನಿಂತಿದ್ದಾರೆ. ಅವರಿಗೆ ಪ್ರಚಾರದ ಅಗತ್ಯವಿಲ್ಲ. ಎಲ್ಲವನ್ನೂ ಮೀರಿ ಬೆಳೆದು ನಿಂತ ಮೇಲೆ ಪ್ರಚಾರ ಯಾಕೆ ಬೇಕು ಹೇಳಿ? ಸರಕಾರದ ಸಾಧನೆಯನ್ನು ಸಹಿಸದ ಬಿಜೆಪಿ ಮತ್ತು ಬಿಜೆಪಿಯ ಮನಸ್ಥಿತಿ ಹೊಂದಿದವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ," ಎಂದರು.

ಅದರ ಜತೆಗೆ, ಕಾಂಗ್ರೆಸ್‌ ಪಕ್ಷಕ್ಕೆ ಈ ಜಾಹೀರಾತುಗಳಿಂದ ಆಗುವ ಲಾಭವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಉಗ್ರಪ್ಪ, "ಜಾಹೀರಾತುಗಳನ್ನು ನೋಡುವವರು ವಿದ್ಯಾವಂತರು. ಸಾಮಾಜಿಕ ಜಾಲತಾಣಗಳಲ್ಲಿಯೂ ಜಾಹೀರಾತುಗಳನ್ನು ಜನ ನೋಡುತ್ತಾರೆ. ಇದರಿಂದ ಸರಕಾರದ ಸಾಧನೆಗಳು ಅವರನ್ನು ತಲುಪುತ್ತವೆ. ಅದರಿಂದ ಪಕ್ಷಕ್ಕೆ ಒಂದಿಷ್ಟು ಮಟ್ಟಿನ ಸಹಾಯವಾಗಲಿದೆ," ಎನ್ನುತ್ತಾರೆ.

ಜಾಹೀರಾತಿಗೆ ಮೋರೆ ಹೋಗಿದ್ಯಾಕೆ?:

ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಮುಂಬರುವ 2019ರ ಲೋಕಸಭಾ ಚುನಾವಣೆಯ ಮೇಲೆ ಪ್ರಭಾವ ಬೀರಲಿದೆ. ಕಾಂಗ್ರೆಸ್‌ ದೇಶದಲ್ಲಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಕರ್ನಾಟಕದ ಪಾತ್ರ ಬಹು ದೊಡ್ಡದಾಗಿದೆ. ಗುಜರಾತ್‌ ಚುನಾವಣೆಯ ರೋಚಕ ಸೋಲಿನ ನಂತರ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೇರುವ ಸಾಧ್ಯತೆಯನ್ನೂ ಪ್ರದರ್ಶಿಸಿದೆ. ಈ ಎಲ್ಲಾ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಅತಿ ಹೆಚ್ಚು ಜಾಹೀರಾತುಗಳ ಮೂಲಕ ಜನರನ್ನು ಕಾಂಗ್ರೆಸ್‌ ಕಡೆ ಮುಖ ಮಾಡಿಸಲು ಸರಕಾರ ಮುಂದಾಗಿದೆ ಎನ್ನುತ್ತವೆ ಕಾಂಗ್ರೆಸ್‌ ಪಕ್ಷದೊಳಗಿನ ಮೂಲಗಳು.

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, 2019ರ ಚುನಾವಣೆಯನ್ನು ಎದುರಿಸಲು ಕಾರ್ಯಕರ್ತರಲ್ಲಿ ನೈತಿಕ ಬಲ ತುಂಬಲಿದೆ. ಕೇಂದ್ರದಲ್ಲಿ ಅಧಿಪತ್ಯ ಸಾಧಿಸಲು ಕಾಂಗ್ರೆಸ್‌ ಪಾಲಿಗೆ ಸದ್ಯ ಇರುವ ಅವಕಾಶ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸಾಮರ್ಥ್ಯಕ್ಕೆ ಒರೆ ಹಚ್ಚುವುದು. ಆ ಮೂಲಕ ಕರ್ನಾಟಕ ಚುನಾವಣೆಯೇ ನಿರ್ಣಾಯಕ ಎಂದು ಹೇಳಲಾಗದಿದ್ದರೂ, ಪಕ್ಷದ ಬಲವರ್ಧನೆಗೆ ಸಹಕಾರಿಯಾಗಲಿದೆ ಎನ್ನಬಹುದು.

'ಸಮಾಚಾರ'ದ ಜತೆ ಮಾತನಾಡಿದ ಬಿಜೆಪಿ ಮುಖಂಡರೊಬ್ಬರು ಹೇಳುವ ಪ್ರಕಾರ, ಸರಕಾರ ಅದ್ದೂರಿ ಜಾಹೀರಾತಿಗೆ ಸುರಿಯುವ ದುಡ್ಡನ್ನು ಜನಪರ ಯೋಜನೆಗಳಿಗೆ ಆ ಹಣವನ್ನು ವ್ಯಯಿಸಿದ್ದರೆ ಸಾರ್ವಜನಿಕರ ಹಿತ ಕಾಪಾಡಿದಂತಾಗುತ್ತಿತ್ತು. "ನಿಜವಾಗಲೂ ಜನಪರ ಕೆಲಸಗಳನ್ನು ಮಾಡಿದ್ದೇ ಆಗಿದ್ದಲ್ಲಿ ಜಾಹೀರಾತು ನೀಡಿ ಪ್ರಚಾರ ಮಾಡುವ ಅಗತ್ಯ ಇರಲಿಲ್ಲ. ಕೆಲಸ ಯಾರು ಮಾಡಿದ್ದಾರೆ ಅನ್ನೋದನ್ನು ತಿಳಿಯದವರಲ್ಲ ಕನ್ನಡಿಗರು," ಎಂಬುದಾಗಿ ತಿಳಿಸಿದರು.

ಜಾಹೀರಾತಿಗಷ್ಟೇ ಸೀಮಿತವಾಗಿರದ ಕಾಂಗ್ರೆಸ್‌ ಪಕ್ಷ, ಟ್ವಿಟ್ಟರ್‌, ಫೇಸ್‌ಬುಕ್‌ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲೂ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಾರ ಮಾಡುತ್ತಿದೆ. ಇದಕ್ಕಾಗಿಯೇ ಐಟಿ ಸೆಲ್‌ ಇದ್ದು, ಹತ್ತಾರು ತಂತ್ರಜ್ಞಾನ ಸ್ನೇಹಿ ಯುವಕರು ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಸಾಮಾಜಿಕ ಜಾಲತಾಣದಿಂದ ಜನರಿಗೆ ತಲುಪುವ ಪ್ರಯತ್ನ ಎಲ್ಲ ಪಕ್ಷಗಳಂತೆ ಕಾಂಗ್ರೆಸ್‌ ಕೂಡ ಮಾಡುತ್ತಿದೆ.

ಜಾಹೀರಾತಿಗೆ ಖರ್ಚು ಮಾಡಿದ ಕೋಟಿ ಕೋಟಿ ಹಣದಿಂದ ಜನತೆ ಕಾಂಗ್ರೆಸ್‌ನ ಕೈ ಹಿಡಿಯಲಿದ್ದಾರಾ ಎಂಬುದನ್ನು ಚುನಾವಣೆಯ ಫಲಿತಾಂಶದಿಂದ ತಿಳಿಯಲಿದೆ. ಸದ್ಯಕ್ಕಂತೂ, ಮಾದ್ಯಮಗಳ ಪಾಲಿಗೆ 'ಸದಾ ಸಿದ್ಧ ಸರಕಾರ' ಅನ್ನದಾತರಾಗಿರುವುದಂತೂ ಸುಳ್ಳಲ್ಲ.