ಡೊನಾಲ್ಡ್‌ ಟ್ರಂಪ್‌ ಅಧಿಕಾರಕ್ಕೇರಿ ಒಂದು ವರ್ಷ: ಜಗತ್ತಿನ ದೊಡ್ಡಣ್ಣ ಅಮೇರಿಕ ಸರಕಾರ ಸ್ಥಗಿತ
ಸುದ್ದಿ ಸಾಗರ

ಡೊನಾಲ್ಡ್‌ ಟ್ರಂಪ್‌ ಅಧಿಕಾರಕ್ಕೇರಿ ಒಂದು ವರ್ಷ: ಜಗತ್ತಿನ ದೊಡ್ಡಣ್ಣ ಅಮೇರಿಕ ಸರಕಾರ ಸ್ಥಗಿತ

ಇದು ಅಮೆರಿಕಾದಲ್ಲಿ ನಡೆದ ಕುತೂಹಲಕಾರಿ ಬೆಳವಣಿಗೆ. 45ನೇ ಅಧ್ಯಕ್ಷರನ್ನಾಗಿ ಉದ್ಯಮಿ ಟ್ರಂಪ್‌ರನ್ನು ಆಯ್ಕೆ ಮಾಡಿಕೊಂಡ ಇಲ್ಲಿನ ಜನ, ವರ್ಷ ಕಳೆಯುವ ಮುನ್ನವೇ ಸರಕಾರವೇ ಸ್ಥಗಿತಗೊಂಡ ಘಟನೆಗೆ ಸಾಕ್ಷಿಯಾಗಿದ್ದಾರೆ. ಸದ್ಯ ನಿನ್ನೆ ರಾತ್ರಿಯಿಂದ ಅಮೆರಿಕಾದಲ್ಲಿ ಸರಕಾರ ತನ್ನ ಕಾರ್ಯ ಚಟುವಟಿಕೆಗಳನ್ನು ನಿಲ್ಲಿಸಿದೆ. ಅಮೆರಿಕಾದಲ್ಲಿ ನಡೆದಿರುವ ಈ ಆಂತರಿಕ ಬೆಳವಣಿಗೆ ಸಹಜವಾಗಿಯೇ ವಿಶ್ವದ ಗಮನ ಸೆಳೆಯುತ್ತಿದೆ.

ಅಮೆರಿಕ ಸರಕಾರ ನಿರ್ದಿಷ್ಟ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲು ವಿಫಲವಾಗಿದೆ. ಡೊನಾಲ್ಡ್‌ ಟ್ರಂಪ್ ನೇತೃತ್ವದ ಸರಕಾರ ಬಿಕ್ಕಟ್ಟಿಗೆ ಸಿಲುಕಿದೆ. ಅಲ್ಲಿನ ಕಾಂಗ್ರೆಸ್‌ನಲ್ಲಿ ವಲಸೆ ನೀತಿ ಮತ್ತು ಸರಕಾರಿ ವೆಚ್ಚದ ಕುರಿತು ಚರ್ಚೆ ಆರಂಭವಾಗಿತ್ತು. ಆದರೆ ಅಂತ್ಯದಲ್ಲಿ ಸಮ್ಮತಕ್ಕೆ ಬರದ ಹಿನ್ನೆಲೆಯಲ್ಲಿ ಇಡೀ ಸರಕಾರವೇ ಸ್ಥಗಿತಗೊಂಡಿದೆ.

ಪ್ರತಿಪಕ್ಷ ಡೆಮಾಕ್ರಟಿಕ್‌ ಪಾರ್ಟಿ ಕೂಡ ಸೆನೆಟ್‌ನಲ್ಲಿ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ವಿದೇಯಕಗಳು ಅಂಗೀಕಾರವಾಗದ ಹಾಗೆಯೇ ಉಳಿದಿವೆ.ಅಗತ್ಯ ಮತಗಳ ಕೊರತೆಯಿಂದಾಗಿ ಸರಕಾರಿ ವೆಚ್ಚವನ್ನು ನಿರ್ಧರಿಸುವ ಆಯವ್ಯಯ ಮಸೂದೆಗೆ ಬಿದ್ದು ಹೋಯಿತು. ಸುಮಾರು ಒಂದು ತಿಂಗಳ ಮಟ್ಟಿಗಿನ ಸರಕಾರದ ಖರ್ಚುಗಳನ್ನು ನಿಭಾಯಿಸುವುದಕ್ಕೆ ಅವಶ್ಯವಿರುವ ಹಣ ಒದಗಿಸುವ ಈ ಮಸೂದೆ ಇದಾಗಿತ್ತು.

ಶುಕ್ರವಾರ ಮಧ್ಯ ರಾತ್ರಿಯೇ ಈ ಮಸೂದೆ ಪಾಸಾಗಬೇಕಿತ್ತು. ಈ ಬಜೆಟ್ ಅನುಮೋದನೆಗೆ 60 ಮತಗಳ ಬೆಂಬಲ ಅಗತ್ಯವಿತ್ತು. ಆದರೆ ಮತಗಳ ಕೊರತೆ ಕಂಡು ಬಂದ ಹಿನ್ನಲೆಯಲ್ಲಿ ಸೆನೆಟ್‌ನಲ್ಲಿ ಈ ಮಸೂದೆ ತಡೆ ಹಿಡಿಯಲ್ಪಟ್ಟಿದೆ. ಪರಿಣಾಮವಾಗಿ ಈ ಮಸೂದೆ ಅಂಗೀಕಾರವಾಗಿಲ್ಲ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ವಿರೋಧಿ ಡೆಮಾಕ್ರಟಿಕ್ ಪಕ್ಷಗಳ ನಡುವೆ ಕೆಲ ಯೋಜನೆಗಳ ಬಜೆಟ್ ಕುರಿತಂತೆ ಒಮ್ಮತ ವ್ಯಕ್ತವಾಗಿಲ್ಲ. ಹಾಗಾಗಿ ಡೆಮಾಕ್ರಟಿಕ್ ಪಕ್ಷದ ಸದಸ್ಯರ ವಿರುದ್ಧ ಟ್ರಂಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮೆಕೋನೆಲ್‌ ಮತ್ತು ಸೆನೆಟ್‌ನ ಡೆಮೊಕ್ರಾಟಿಕ್‌ ನಾಯಕ ಚಕ್‌ ಶೂಮರ್‌ ಮತ್ತಿತರ ನಾಯಕರ ನಡುವೆ ಮಾತುಕತೆ ನಡೆಸಿದರೂ ಯಾವುದೇ ಫಲಶೃತಿ ಕಂಡುಬಂದಿಲ್ಲ. ಅಮೆರಿಕ ಸರಕಾರಕ್ಕೆ ಈಗ ತಾಂತ್ರಿಕ ಖರ್ಚು ನಿರ್ವಹಣೆಗೆ ಅಕ್ಷರಶಃ ಹಣ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ನಂಬಲೇಬೇಕಾಗಿದೆ.

ಅಮೆರಿಕದಲ್ಲಿ ಈ ತರಹ ಸರಕಾರ ಸ್ಥಗಿತಗೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಈಗಾಗಲೇ ಅನೇಕ ಬಾರಿ ಇಲ್ಲಿ ಸರಕಾರಗಳು ಸ್ಥಗತಿತಗೊಂಡಿವೆ. ಅದರಲ್ಲಿ, ಒಂದು ದಿನದಿಂದ ಹಿಡಿದು ಸುಮಾರು 21 ದಿನಗಳವರೆಗೆ ಸರಕಾರ ಬಾಗಿಲು ಹಾಕಿದ ಇತಿಹಾಸಗಳಿವೆ. 1981 ರಿಂದ ಲೆಕ್ಕ ಹಾಕಿದರೆ ಇಲ್ಲಿಯವರೆಗೆ ಸುಮಾರು 12 ಬಾರಿ ಸರಕಾರಗಳು ಸ್ಥಗಿತಗೊಂಡಿರುವ ಉದಾಹರಣೆಗಳಿವೆ.

ಕಳೆದ ಬಾರಿ 2013ರಲ್ಲಿ ಅಕ್ಟೋಬರ್‌ ತಿಂಗಳಲ್ಲಿ ಇದೇ ರೀತಿಯ ಬಿಕ್ಕಟ್ಟನ್ನು ಅಮೆರಿಕ ಎದುರಿಸಿತ್ತು. ಅದಾನಂತರ ಇನ್ನು 5 ವರ್ಷಗಳಾಗುವ ಮುಂಚೆಯೇ ಸರಕಾರ ಸ್ಥಗಿತಗೊಂಡಿರುವುದು ಜನರಲ್ಲಿ ಆತಂಕವನ್ನು ಹುಟ್ಟು ಹಾಕಿದೆ.ಫೆಡರಲ್ ಸರಕಾರ ಸ್ಥಗಿತಗೊಂಡ ಸಂದರ್ಭದಲ್ಲಿ ಹೆಚ್ಚಿನ ಉದ್ಯೋಗಿಗಳು ಕೆಲಸಕ್ಕೆ ಹಾಜರಾಗುವುದಿಲ್ಲ. ಅವರಿಗೆ ವೇತನ ರಹಿತ ರಜೆ ನೀಡಲಾಗುತ್ತದೆ. ಸುಮಾರು 40% ರಷ್ಟು ಕೆಲಸ ದೇಶದಲ್ಲಿ ಸ್ಥಗಿತಗೊಳ್ಳುತ್ತದೆ. ಸಾರ್ವಜನಿಕ ಸುರಕ್ಷತೆ ಹಾಗೂ ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಅತ್ಯಗತ್ಯ ನೌಕರರು ಮಾತ್ರ ತಮ್ಮ ಕೆಲಸ ನಿರ್ವಹಿಸುತ್ತಾರೆ.

ಯಾವುವು ಸ್ಥಗಿತಗೊಳ್ಳುತ್ತವೆ?

  • ರಾಷ್ಟ್ರೀಯ ಉದ್ಯಾನಗಳು
  • ಸ್ಮಾರಕಗಳು
  • ಸ್ಮಿತ್ಸೋನಿಯನ್ ವಸ್ತುಸಂಗ್ರಹಾಲಯಗಳು

ಯಾವುವು ಮುಂದುವರೆಯುತ್ತವೆ

  • ರಾಷ್ಟ್ರೀಯ ಭದ್ರತೆ (ಎಫ್‌ಬಿಐ, ಸೈನ್ಯ ಮತ್ತು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ)
  • ಸುರಕ್ಷತೆ ಮತ್ತು ಆದೇಶ (ಏರ್ ಟ್ರಾಫಿಕ್ ಕಂಟ್ರೋಲ್, ಕಾನೂನು)
  • ವೈದ್ಯಕೀಯ ಆರೈಕೆ (ವೆಟರನ್ಸ್ ಆಸ್ಪತ್ರೆಗಳು)
  • ಯುಎಸ್ ಮೇಲ್

ಇದೇ ವೇಳೆ ಅತ್ಯಗತ್ಯ ಸೇವೆಗಳನ್ನು ಕಾರ್ಯಾಚರಣೆಗಳು ಮುಂದುವರೆಯಲಿವೆ. ವಾರಾಂತ್ಯವಾದ ಕಾರಣದಿಂದ ಈ ಬೆಳವಣಿಗೆಯ ತಕ್ಷಣದ ಪರಿಣಾಮ ತಟ್ಟುವ ಸಾಧ್ಯತೆ ಕಡಿಮೆ ಎನ್ನುತ್ತವೆ ವರದಿಗಳು.

ಆರ್ಥಿಕ ಬಿಕ್ಕಟ್ಟು:

ನಿರ್ದಿಷ್ಟ ದೇಶಗಳಿಂದ ವಲಸೆ ಬಂದವರಿಗೆ ಅನುಮತಿ ನೀಡುವುದು, ಸೇನಾ ಸಿಬ್ಬಂದಿಗಳಿಗೆ ಹೆಚ್ಚು ಹಣ ಮತ್ತು ಮೆಕ್ಸಿಕೋ ಗಡಿಯಲ್ಲಿ ಅಗತ್ಯ ಹಣ ನಿಗದಿ ಮಾಡುವುದು ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ಅಮೆರಿಕದಲ್ಲಿ ಈಗ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ವಲಸೆ ನೀತಿಯನ್ನು ಬದಲಿಸಬೇಕೆಂಬುದು ಅಮೆರಿಕದ ನಿಲುವಾಗಿತ್ತು. ಆದರೆ ಆರ್ಥಿಕ ಬಿಕ್ಕಟ್ಟು ತಂದೊಡ್ಡಲು ವಲಸೆ ನೀತಿಯೂ ಕಾರಣವಾಗುತ್ತದೆ ಎಂಬ ಆತಂಕ ಅಮೆರಿಕಕ್ಕೆ ಈ ಮೊದಲೇ ಇತ್ತು ಎನ್ನಲಾಗುತ್ತಿದೆ.

ಅಮೆರಿಕದಲ್ಲಿ ಈ ಆಯವ್ಯಯ ಮಸೂದೆಯ ತಾತ್ಕಾಲಿಕ ಬಜೆಟ್‌ನ ವ್ಯಾಪ್ತಿಯಲ್ಲಿ ಕೆಲವು ಕಾಮಗಾರಿಗಳು ನಡೆಯುತ್ತಿದ್ದವು. ಆಂತರಿಕ ಭದ್ರತೆ, ಗುಪ್ತಚರದಳ, ಸೇವಾ ಯೋಜನೆಗಳು ಇನ್ನಿತರ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುವ ನೌಕರರಿಗೆ ಸಂಬಳ ನೀಡಲು ಹಣ ಇಲ್ಲವಾಗಿದೆ. ಅನೇಕ ಯೋಜನೆಗಳಿಗೂ ನಿಗದಿಯಾದ ಹಣ ಮಂಜೂರಾಗಿಲ್ಲ ಎನ್ನಲಾಗಿದೆ. ಇವೆಲ್ಲವೂ ಅಂತಿಮವಾಗಿ ದೇಶದ ಆರ್ಥಿಕ ಬಿಕ್ಕಟ್ಟಿನ ಸ್ಥಿತಿಯನ್ನು ಎತ್ತಿ ತೋರಿಸುತ್ತಿವೆ. ಬೆಳವಣಿಗೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಪರಿಸ್ಥಿತಿಗೆ ಪ್ರತಿಪಕ್ಷ ಕಾರಣ ಎಂದು ಆರೋಪಿಸಿದ್ದಾರೆ.

"ಬೆಳಯುತ್ತಿರುವ ನಮ್ಮ ಆರ್ಥಿಕತೆಗೆ ಅವರು ಎಂತಹ ಕೆಲಸ ಮಾಡಿದ್ದಾರೆ ನೋಡಿ, ತೆರಿಗೆ ಕಡಿತಕ್ಕೆ ಮುಂದಾಗುವ ಸಮಯದಲ್ಲಿ ಸರಕಾರವನ್ನು ಸ್ಥಗಿತಗೊಳಿಸಲು ಹೊರಟಿದ್ದಾರೆ,'' ಎಂದು ಡೆಮಾಕ್ರಟಿಕ್ ಸೆನೆಟ್ ಸದಸ್ಯರ ವಿರುದ್ಧ ಅಧ್ಯಕ್ಷರು ಕಿಡಿ ಕಾರಿದ್ದಾರೆ. ಶ್ವೇತ ಭವನದಿಂದ ಇದೇ ಮಾದರಿಯ ಪ್ರತ್ಯೇಕ ಹೇಳಿಕೆಯೊಂದು ಹೊರಬಿದ್ದಿದೆ.ಆರೋಪ ಪ್ರತ್ಯಾರೋಗಳ ನಡುವೆಯೇ, ವಿಶ್ವದ ದೊಡ್ಡಣ್ಣನ ಸರಕಾರ ಸ್ಥಗಿತಗೊಂಡಿರುವುದು ಗಮನ ಸೆಳೆಯುತ್ತಿದೆ. ವಾರಾಂತ್ಯ ಕಳೆಯವು ಹೊತ್ತಿಗೆ ಇಲ್ಲಿನ ಪರಿಸ್ಥಿತಿ ಏನಾಗಿರಲಿದೆ ಎಂಬುದರ ಮೇಲೆ ಭವಿಷ್ಯದ ಅಮೆರಿಕಾ ನಿರ್ಧಾರವಾಗಲಿದೆ ಎನ್ನುತ್ತಿವೆ ವಿಶ್ಲೇಷಣೆಗಳು.