ಬಶೀರ್
ಸುದ್ದಿ ಸಾಗರ

‘ಕಾಟಿಪಳ್ಳದ ರಿವೇಂಜ್‌ ಕಿಲ್ಲಿಂಗ್ಸ್‌’: ಸರ್ವಧರ್ಮದ ಪ್ರಾರ್ಥನೆಗೂ ಮರುಗದ ದೇವರು; ದೀಪಕ್ ಜಾಗಕ್ಕೆ ಹೋದ ಬಶೀರ್

Summary

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರ್ನಾಟಕಕ್ಕೆ ಕಾಲಿಟ್ಟ ದಿನವೇ, ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಸಾವಾಗಿದೆ. ಧರ್ಮ, ಧರ್ಮಗಳ ನಡುವೆ ದ್ವೇಷ ಬಿತ್ತುತ್ತ ಈ ರೀತಿ ಸಾವು-ನೋವುಗಳಾಗುತ್ತಿದ್ದರೆ ಮಾನವೀಯತೆಯೇ ಮಾಯವಾಗುವ ಕಾಲ ದೂರ ಉಳಿದಿಲ್ಲ.

ಬುಧವಾರ ಮಂಗಳೂರಿನ ಕಾಟಿಪಳ್ಳದಲ್ಲಿ ದೀಪಕ್ ರಾವ್‌ ಹತ್ಯೆ ನಡೆದಿತ್ತು. ಅದು ಕೋಮು ಧ್ವೇಷದ ಹಿನ್ನೆಲೆಯಲ್ಲಿ ನಡೆದ ಕೊಲೆ ಎಂದು ಕ್ಷಣಾರ್ಧದಲ್ಲಿ ಬಣ್ಣ ಪಡೆದುಕೊಂಡಿತ್ತು. ಪ್ರತಿಪಕ್ಷ ಬಿಜೆಪಿ ಅಖಾಡಕ್ಕೆ ಇಳಿದಿತ್ತು. ಹಿಂದುತ್ವದ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಅವುಗಳ ಪೈಕಿ ಬಜರಂಗ ದಳದ ಇಬ್ಬರು ಕಾರ್ಯಕರ್ತರು ಮಚ್ಚೆತ್ತಿಕೊಂಡು ಹೋಗಿ ಎದರಿಗೆ ಸಿಕ್ಕ ಮುಸ್ಲಿಂ ಮಧ್ಯವಯಸ್ಕರೊಬ್ಬರನ್ನು ಕೊಚ್ಚಿದ್ದರು. ಕೊಟ್ಟಾರ ಚೌಕಿಯ ಅಹಮ್ಮದ್ ಬಶೀರ್ ಮಚ್ಚಿನೇಟು ತಿಂದವರು. ಅವರಿಗೆ ಎಜೆ ಆಸ್ಪತ್ರೆಯಲ್ಲಿ ನೀಡಲಾಗುತ್ತಿದ್ದ ಚಿಕಿತ್ಸೆ ಭಾನುವಾರ ಬೆಳಗ್ಗೆ ಫಲ ನೀಡದೇ ಬಶೀರ್ ಪ್ರತೀಕಾರಕ್ಕೆ ಬಲಿಯಾಗಿದ್ದಾರೆ.

ಒಂದಷ್ಟು ಕಾಲ ವಿದೇಶದಲ್ಲಿದ್ದ ಬಶೀರ್‌ಗೆ ಈಗ 47 ವರ್ಷ. ಹೊರ ದೇಶದಲ್ಲಿದ್ದಾಗ, ಅಲ್ಲಿ ನಡೆದ ಕೋಮು ಗಲಾಟೆ ಸಮಯದಲ್ಲಿ ತಮ್ಮ ಹಿಂದೂ ಸಹೋದ್ಯೋಗಿ ಪರವಾಗಿ ನಿಂತವರು. ಹಾಗಂತ ಗುರುವಾರದಿಂದಲೇ ಬಶೀರ್‌ ಬಗ್ಗೆ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಸಿಗತೊಡಗಿತು. ಮಾರಕಾಸ್ತ್ರಗಳಿಂದ ಕೊಚ್ಚಲ್ಪಟ್ಟ ಬಶೀರ್ ಸಾವನ್ನು ಗೆದ್ದು ಬರಲಿ ಎಂದು ಧರ್ಮಾತೀತರಾಗಿ, ಮನುಷ್ಯರು ಬೇಡಿಕೊಂಡಿದ್ದರು. ನಾನಾ ಮಂದಿರ, ಮಸೀದಿ, ಚರ್ಚ್‌ಗಳಲ್ಲಿ ಪ್ರಾರ್ಥನೆಗಳು ನಡೆದಿದ್ದವು ಎಂದು ದಿನ ಪತ್ರಿಕೆಗಳ ವರದಿಗಳು ಹೇಳುತ್ತವೆ.

“ಶುಕ್ರವಾರ ಮತ್ತು ಶನಿವಾರ ಹಲವು ಮಂದಿ ಅಣ್ಣನ ಮನೆಗೆ ಬಂದು ವಿಚಾರಿಸಿಕೊಂಡು ಹೋಗಿದ್ದಾರೆ. ಅನೇಕ ಮಸೀದಿಗಳಲ್ಲಿ ಆತನ ಆರೋಗ್ಯಕ್ಕಾಗಿ ಪ್ರಾರ್ಥನೆಗಳು ನಡೆದಿವೆ. ಅದಕ್ಕಿಂತಲೂ ಮುಖ್ಯವಾಗಿ ಹಿಂದೂ ಧರ್ಮದ ಗೆಳೆಯರು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ನಿತ್ಯಾನಂದ ಎಂಬ ಗೆಳೆಯರು ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಶನಿವಾರ ಪೂಜೆ ಸಲ್ಲಿಸಿದ್ದಾರೆ. ಹಲವು ಚರ್ಚ್‌ಗಳಲ್ಲೂ ಅಣ್ಣನ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ,”
-ಬಶೀರ್ ಅಣ್ಣ
“ಬಶೀರ್ ಬೇರೆ ಧರ್ಮದವರ ಜೊತೆಗೆ ತುಂಬ ಒಳ್ಳೆಯ ಸ್ನೇಹ ಮತ್ತು ಬಾಂಧವ್ಯವನ್ನು ಹೊಂದಿದ್ದರು. ಅವರ ಮನೆ ಇರುವುದೇ ಹಿಂದೂಗಳ ಏರಿಯಾವಾದ ಆಕಾಶಭವನದಲ್ಲಿ. ಅವರಿಗೆ ಯಾವುದೇ ಮತೀಯ ಹುಚ್ಚಿರಲಿಲ್ಲ. ಅವರು ಒಬ್ಬ ಸಾಂಪ್ರದಾಯಸ್ಥ ಮುಸಲ್ಮಾನ. ಯಾವುದೇ ರೀತಿಯ ರಾಜಕೀಯ ಮತ್ತು ಇತರೆ ಚಟುವಟಿಕೆಗಳಲ್ಲಿ ಅವರು ಭಾಗವಹಿಸಿರಲಿಲ್ಲ. ಅವರ ಮೇಲೆ ದಾಳಿ ನಡೆದ ನಂತರ ವಿವಿಧ ಧರ್ಮದವರು ಪ್ರಾರ್ಥನೆ ಸಲ್ಲಿಸಿದ್ದರು,”
-ಮುನೀರ್ ಕಾಟೀಪಳ್ಳ, ಡಿವೈಎಫ್‌ ರಾಜ್ಯಾಧ್ಯಕ್ಷ

ಈ ಸಂದರ್ಭದಲ್ಲಿ ಬಶೀರ್ ಕುಟುಂಬದವರು ತುಂಬ ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದಾರೆ. ಯಾರೂ ಗಲಾಟೆಗಿಳಿಯಬಾರದು. ಕಳೆದುಕೊಂಡಿರುವುದು ನಮ್ಮ ಮನೆಯವರನ್ನು. ಇತರರಿಗೆ ಯಾವುದೇ ರೀತಿಯ ತೊಂದರೆ ಮಾಡಬಾರದು ಎಂದು ಪ್ರಬುದ್ಧತೆಯನ್ನು ಮೆರೆದಿದ್ದಾರೆ ಎಂದು ಕಾಳಿಪಳ್ಳ ಸಂಯಮವನ್ನು ಗುರುತಿಸುತ್ತಾರೆ.

ಬಶೀರ್‌ ಮೇಲಿನ ದಾಳಿಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿ ಶುಕ್ರವಾರ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಇಂತಹ ವರದಿಗಳಿಂದ ಮತೀಯ ದ್ವೇಷ ಹಬ್ಬುವ ಸಾಧ್ಯತೆ ಹೆಚ್ಚು ಎಂಬ ಪೊಲೀಸರ ವರದಿಯನ್ನು ಆಧರಿಸಿ ಮಂಗಳೂರು ಜಿಲ್ಲಾಧಿಕಾರಿ ಸಸಿಕಾಂತ್ ಸೆಂತಿಲ್ ನೋಟಿಸ್‌ ಜಾರಿ ಮಾಡಿದ್ದಾರೆ.

ಕೇಬಲ್‌ ಟೆಲಿವಿಷನ್‌ ನೆಟ್‌ವರ್ಕ್‌ (ನಿಯಂತ್ರಣ) ಕಾಯ್ದೆ 1995ರ ಅಡಿಯಲ್ಲಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು. “ಮತೀಯ ದ್ವೇಷದ ಘಟನೆಗಳಿಗೆ ಸಂಬಂಧಿಸಿದ ಸುದ್ದಿ, ಅಭಿಪ್ರಾಯ ಮತ್ತು ಪ್ರತಿಕ್ರಿಯೆಗಳನ್ನು ಸರಿಯಾಗಿ ಪರಿಶೀಲಿಸಿದ ಬಳಿಕವೇ ಪ್ರಸಾರ ಮಾಡಬೇಕು. ಅಂತಹ ಕಾರ್ಯಕ್ರಮಗಳು ಶಾಂತಿ ಮತ್ತು ಸೌಹಾರ್ಧಕ್ಕೆ ಧಕ್ಕೆ ತರುವಂತಿರಬಾರದು. ಹಿಂಸೆಗೆ ಪ್ರಚೋದನೆ ನೀಡುವಂತಹ ಸುದ್ದಿ, ಕಾರ್ಯಕ್ರಮಗಳನ್ನು ಪ್ರಸಾರ ಮಾಡಬಾರದು. ಹಿಂಸೆಯ ದೃಶ್ಯಾವಳಿಗಳನ್ನು ಪ್ರಸಾರ ಮಾಡುವುದನ್ನು ತಪ್ಪಿಸಬೇಕು,” ಎಂದು ಜಿಲ್ಲಾಧಿಕಾರಿ ನೀಡಿದ್ದ ನೋಟಿಸ್‌ ಹೇಳಿತ್ತು.

ಶಾಂತಿ ಮಂತ್ರ:

ಅಬ್ದುಲ್ ಬಶೀರ್ ಹತ್ಯೆ ಹಿನ್ನೆಲೆಯಲ್ಲಿ, ಅಹಿಂಸೆಯ ಮಾತುಗಳನ್ನು ಮೈಸೂರು ಸಂಸದ, ಬಿಜೆಪಿ ಯುವ ಘಟಕದ ಅಧ್ಯಕ್ಷ ಪ್ರತಾಪ್ ಸಿಂಹ ಟ್ವೀಟರ್‌ನಲ್ಲಿ ಆಡಿದ್ದಾರೆ.  'ಒಂದು ಕಣ್ಣಿಗೆ ಇನ್ನೊಂದು ಕಣ್ಣು ಎಂಬುದು ಜಗತ್ತನ್ನು ಕುರುಡಾಗಿಸುತ್ತೆ' ಎಂಬ ಉಕ್ತಿಯನ್ನು ಬಳಸಿಕೊಂಡಿರುವ ಅವರು, "ದೀಪಕ್ ರಾವ್ ಕೊಲೆಗೆ ಬಶೀರ್‌ ಹತ್ಯೆ ಉತ್ತರವಲ್ಲ. ರಾಜ್ಯದಲ್ಲಿ ಶಾಂತಿ ನೆಲೆಸಲು ಇಚ್ಚಿಸದ ರಾಜ್ಯ ಸರಕಾರ ಇರುವ ಈ ಸಮಯದಲ್ಲಿ ಹಿಂದೂ ಮತ್ತು ಮುಸ್ಲಿಂರ ನಡುವೆ ಆಶಂತಿ ಮಾತುಕತೆಯನ್ನು ನಡೆಸಬೇಕು," ಎಂದು ಟ್ವೀಟ್‌ ಮಾಡಿದ್ದಾರೆ.

ಕೋಮು ಗಲಭೆ ನಡೆದ ಪ್ರದೇಶಗಳಲ್ಲಿ ಸೌಹಾರ್ದ ನಡಿಗೆಗಳು ನಡೆಯುವುದು ಅಗತ್ಯ ಕೂಡ. ಕಳೆದ ದಿಲ್ಲಿ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಅಲ್ಲಿ ಸೃಷ್ಟಿಸಲಾದ ಕೋಮು ಗಲಭೆಯನ್ನು ಹತೋಟಿಗೆ ತಂದಿದ್ದೇ ಸೌಹಾರ್ದ ನಡಿಗೆ. ಸದ್ಯದ ಪರಿಸ್ಥಿತಿಯಲ್ಲಿ, ಕಾಟಿಪಳ್ಳ ಸುತ್ತಮುತ್ತ ನಿಷೇಧಾಜ್ಞೆ ಜಾರಿಯಲ್ಲಿದೆ.

“ಸರಣಿ ಸಾವಿಗೆ ಯೋಜನೆಗಳನ್ನು ರೂಪಿಸಿ, ಸರಕಾರದ ದೌರ್ಬಲ್ಯವನ್ನು ಉಪಯೋಗಿಸಿಕೊಂಡು ಮತ ದೃವೀಕರಣದ ಮೂಲಕ ತಮ್ಮ ಓಟ್ ಬ್ಯಾಂಕ್‌ ರಾಜಕಾರಣವನ್ನು ಮಾಡುತ್ತಿರುವ ಇಂತವರಿಂದ ಶಾಂತಿಯ ಮಾತುಗಳು ವ್ಯಂಗ್ಯವಾಗಿ ಕಾಣಿಸುತ್ತವೆ. ಅವರಿಗೆ ನಿಜವಾಗಿಯೂ ನಮ್ಮೂರಿನಲ್ಲಿ ಶಾಂತಿ ಬೇಕು ಅಂದರೆ, ಪ್ರತಾಪ್‌ ಸಿಂಹ ತಮ್ಮ ಪಟಾಲಂ ಕಟ್ಟಿಕೊಂಡು ಹಿಮಾಲಯಕ್ಕೆ ಹೋಗಬೇಕು,’’
-ಮುನೀರ್ ಕಾಟೀಪಳ್ಳ, ಡಿವೈಎಫ್‌ಐ

ಕಾಟಿಪಳ್ಳದ ಕೋಮು ಸಂಘರ್ಷದ ರಕ್ತ ಚರಿತ್ರೆಯನ್ನು ಮುಂದಿಡುವ ಮುನೀರ್ ಮಂಗಳೂರು ಭಾಗದಲ್ಲಿ ಸೌಹಾರ್ದವನ್ನು ಬಯಸಿ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದವರು. "ಬಶೀರ್ ಸಾವಿಗೆ ಬಂದಿರುವ ಸಂತಾಪಗಳು ಜನರಲ್ಲಿ ಕೋಮು ಸಂಘರ್ಷ, ರಕ್ತಪಾತಗಳ ಬಗ್ಗೆ ರೇಜಿಗೆ ಹುಟ್ಟಿಸಿದೆ ಎಂಬುದನ್ನು ತೋರಿಸುತ್ತಿದೆ. ಧರ್ಮಗಳನ್ನು ಮೀರಿ ಸಾಮಾನ್ಯ ಜನ ಶಾಂತಿಯ ಮಾತುಗಳನ್ನು ಆಡುತ್ತಿದ್ದಾರೆ. ಆ ಕಾರಣಕ್ಕಾಗಿಯೇ ಕೋಮು ದೃವೀಕರಣದ ಮೂಲಕವೇ ಮೇಲೆ ಬಂದ ಪ್ರತಾಪ್‌ ಸಿಂಹ ತರಹದ ನಾಯಕರು ಈಗ ಶಾಂತಿ ಸಭೆಗಳ ಮಾತುಗಳನ್ನು ಹೇಳುತ್ತಿದ್ದಾರೆ,'' ಎಂಬುದು ಮುನೀರ್ ಅವರ ಸ್ಪಷ್ಟ ಅಭಿಪ್ರಾಯ.

ಆರೋಪಿಗಳ ಬಂಧನ:

ಶನಿವಾರ ಬೆಳಗ್ಗೆಯಷ್ಟೆ, ಮಂಗಳೂರು ನಗರದ ಪೊಲೀಸ್ ಕಮಿಷನರ್‌ ಟಿ. ಆರ್‌. ಸುರೇಶ್‌ ಬಶೀರ್ ಹತ್ಯೆ ಕುರಿತು ವಿವರ ನೀಡಿದ್ದರು. “ಮಂಗಳೂರಿನ ಪಡೀಲ್‌ನ ಅಳಪೆ ಕಂಡೇವು ಮನೆ ನಿವಾಸಿಗಳಾದ ಕಿಶನ್‌ (21), ಧನುಷ್‌ ಪೂಜಾರಿ (22), ಕಾಸರಗೋಡು ಜಿಲ್ಲೆ ಉಪ್ಪಳ ಸಮೀಪದ ಅಂಬಾರ್‌ನ ಕೃಷ್ಣನಗರ ನಿವಾಸಿ ಶ್ರೀಜಿತ್‌ ಪಿ.ಕೆ. ಅಲಿಯಾಸ್‌ ಶ್ರೀಜು (25) ಮತ್ತು ಮಂಜೇಶ್ವರದ ಕುಂಜತ್ತೂರು ಜೋಗಿಗುಡ್ಡೆ ನಿವಾಸಿ ಸಂದೇಶ್ ಕೋಟ್ಯಾನ್‌ (22) ಬಂಧಿತರು. ಇವರಲ್ಲಿ ಮೊದಲ ಇಬ್ಬರು ಬಜರಂಗದಳಕ್ಕೆ ಸೇರಿದವರು," ಎಂದು ತಿಳಿಸಿದ್ದರು.

“ಆರೋಪಿಗಳು ಕಂಕನಾಡಿ ಗರಡಿ ಜಾತ್ರೆಯಲ್ಲಿ ಸೇರಿದಾಗ, ದೀಪಕ್‌ ಕೊಲೆ ವಿರುದ್ಧ ಪ್ರತೀಕಾರ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಕಿಶನ್‌ ಮತ್ತು ಧನುಷ್‌ ಮನೆಗೆ ಹೋಗಿ ಮಾರಕಾಸ್ತ್ರಗಳನ್ನು ತೆಗೆದುಕೊಂಡು ನಗರಕ್ಕೆ ಬಂದಿದ್ದರು. ಕೊಟ್ಟಾರದ ಬಳಿ ಸಿಕ್ಕ ಬಶೀರ್‌ ಮೇಲೆ ದಾಳಿಮಾಡಿ ಕೊಲೆಗೆ ಯತ್ನಿಸಿದ್ದರು. ಧನುಷ್‌ ಮತ್ತು ಕಿಶನ್‌ ಇಬ್ಬರೂ ಸಹೋದರರು. ಇವರು ಮುಸ್ಲಿಂ ಧರ್ಮಕ್ಕೆ ಸೇರಿದ ಯಾವುದಾದರೂ ವ್ಯಕ್ತಿಗಳನ್ನು ಕೊಲೆ ಮಾಡುವ ಉದ್ದೇಶವನ್ನು ಹೊಂದಿದ್ದರು. ಅದೇ ಸಂದರ್ಭ ಎದುರಿಗೆ ಸಿಕ್ಕ ಬಶೀರ್‌ ಕೊಲೆ ಮಾಡಲು ಯತ್ನಿಸಿದ್ದಾರೆ," ಎಂದು ವಿಚಾರಣೆ ವೇಳೆ ತಿಳಿದಿದೆ ಎಂಬ ಮಾಹಿತಿ ನೀಡಿದ್ದರು.

“ಅಡ್ಯಾರ್‌ನಲ್ಲಿ ವಿದ್ಯಾರ್ಥಿಗೆ ಇರಿದ ಸಂದರ್ಭದಲ್ಲಿ ಶ್ರೀರಾಮ ಸೇನೆಯಲ್ಲಿದ್ದೆವು. ಆ ಪ್ರಕರಣದಲ್ಲಿ ಶ್ರೀರಾಮ ಸೇನೆ ನಮಗೆ ಬೆಂಬಲ ನೀಡಲಿಲ್ಲ. ಬಳಿಕ ಬಜರಂಗದಳ ಸೇರಿದ್ದೇವೆ,” ಎಂದು ಕಿಶನ್‌ ಮತ್ತು ಧನುಷ್‌ ವಿಚಾರಣೆ ವೇಳೆ ತನಿಖಾ ತಂಡಕ್ಕೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸ್ ಕಮಿಷನರ್‌ ತಿಳಿಸಿದ್ದಾರೆ.

ಈ ಮೂಲಕ ಆರೋಪಿಗಳು ಹಿಂದುತ್ವ ಸಂಘಟನೆಗಳ ಜತೆ ನಂಟನ್ನು ಹೊಂದಿರುವುದು ಖಚಿತವಾಗಿದೆ.ಕಿಶನ್‌ ವಿರುದ್ಧ ಅತ್ಯಾಚಾರ, ಹಫ್ತಾ ವಸೂಲಿ, ಕೊಲೆಯತ್ನ ಆರೋಪದಡಿ ಮೂರು ಪ್ರಕರಣಗಳಿವೆ. ಧನುಷ್‌ ವಿರುದ್ಧ ಕೊಲೆ ಯತ್ನ, ದೊಂಬಿ ಸೃಷ್ಟಿಸಲು ಯತ್ನಿಸಿದ ಆರೋಪದಡಿ ಒಂದು ಪ್ರಕರಣವಿದೆ.

ಶ್ರೀಜಿತ್‌ ವಿರುದ್ಧ ಕಾಸರಗೋಡು ಜಿಲ್ಲೆಯಲ್ಲಿ ಆರು ಹಾಗೂ ನಗರದ ಉಳ್ಳಾಲ ಠಾಣೆಯಲ್ಲಿ ಒಂದು ಪ್ರಕರಣವಿದೆ. ಈತನ ವಿರುದ್ಧ ವೇಶ್ಯಾವಾಟಿಕೆಗಾಗಿ ಮಕ್ಕಳ ಬಳಕೆ, ದರೋಡೆ ಆರೋಪಗಳಿವೆ. ಸಂದೇಶ್‌ ವಿರುದ್ಧ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಅಪಹರಣ ಮತ್ತು ದೊಂಬಿ ನಡೆಸಿದ ಆರೋಪದಡಿ ಒಂದು ಪ್ರಕರಣವಿದೆ ಎನ್ನುತ್ತವೆ ಪೊಲೀಸ್ ಮೂಲಗಳು.

ರಿವೇಂಜ್ ಕಿಲ್ಲಿಂಗ್ಸ್‌:

ಬುಧವಾರ ನಡೆದ ಎರಡು ಹತ್ಯೆಗಳು, ಕೋಮು ಧ್ವೇಷದ ಕಾರಣಕ್ಕೆ ಕಾಟಿಪಳ್ಳದಲ್ಲಿ ನಡೆದ ಎಷ್ಟನೇ ಕೊಲೆ? ಎಂದು ಕೇಳಿದರೆ, ಬಹುತೇಕ ಸ್ಥಳೀಯರು ಗೊಂದಲಕ್ಕೆ ಬೀಳುತ್ತಾರೆ. ಅವರಿಗೆ ಬಾಬ್ರಿ ಮಸೀದಿ ದ್ವಂಸದ ನಂತರ ನಡೆದ ಕೋಮು ಗಲಭೆಗಳು, ಅವುಗಳ ತಳಹದಿಯ ಮೇಲೆ ನಡೆದ ಸರಣಿ ಕೊಲೆಗಳ ನೆನಪಾಗುತ್ತದೆ.

70ರ ದಶಕದಲ್ಲಿ ಸರಕಾರಕ್ಕೆ ಮಂಗಳೂರು ನವ ಬಂದರು ನಿರ್ಮಿಸಲು ತಮ್ಮ ಸ್ವಂತ ಭೂಮಿ ಕೊಟ್ಟವರು ಇಲ್ಲಿನ ಜನ. ಅಲ್ಲಿಂದ ಸ್ಥಳಾಂತರಗೊಂಡ ನಂತರ ಕಾಟಿಪಳ್ಳ ಎಂಬ ಗ್ರಾಮವನ್ನು ಕಟ್ಟಿಕೊಂಡರು. ಅಲ್ಲಿ ಧರ್ಮ ಸಂಪ್ರದಾಯದ ಆಚರಣೆಗೆ ಸೀಮಿತವಾಗಿತ್ತು. ಆದರೆ ದೇಶಾದ್ಯಂತ ಬಾಬ್ರಿ ಮಸೀದಿ ದ್ವಂಸ ಪ್ರಕರಣ 1992ರಲ್ಲಿ ಸದ್ದು ಮಾಡಿತು.

ಅದು ಕಾಟಿಪಳ್ಳ ಗ್ರಾಮದಲ್ಲಿಯೂ ಸಣ್ಣ ಕಿಡಿ ಹೊತ್ತಿಸಿತು. ಆ ವೇಳೆಯಲ್ಲಿಯೇ ಸುಮಾರು 9 ಮಂದಿ ಬಲಿಯಾದರು."ಸೂರತ್ಕಲ್ ಕೋಮು ಗಲಭೆಯ ಸಮಯದಲ್ಲಿಯೂ 12 ಜನ ಸಾವನ್ನಪ್ಪಿದರು. 2007ರಲ್ಲಿ ಮಂಗಳೂರಿನಲ್ಲಿ ನಡೆದ ಕೋಮು ಹಿಂಸಾಚಾರದಲ್ಲಿ ಮೂವರು ಸಾವನ್ನಪ್ಪಿದರು. ಇವೆಲ್ಲವನ್ನೂ ಕಾಟಿಪಳ್ಳದ ಯುವಕರು ನೋಡಿಕೊಂಡೆ ಬೆಳೆದರು,'' ಎನ್ನುತ್ತಾರೆ ಸ್ಥಳೀಯರೊಬ್ಬರು.

ಹೀಗೆ, ಕರಾವಳಿ ಭಾಗದಲ್ಲಿ ಸಾಂಘಿಕವಾಗಿ ನಡೆದ ಕೋಮು ಗಲಭೆಗಳ ಕತೆಯೊಂದಾದರೆ, ಕಾಟಿಪಳ್ಳವನ್ನೇ ಕೇಂದ್ರವಾಗಿಟ್ಟುಕೊಂಡು ನಡೆದ 'ಕೋಮು ಕೊಲೆ'ಗಳ ಅಧ್ಯಾಯ ಬೇರೆಯದೇ ತೆರೆದುಕೊಳ್ಳುತ್ತದೆ."2002ರಲ್ಲಿ ಆಟೋ ಚಾಲಕ ರಫೀಕ್‌ ಎಂಬಾತನ ಕೊಲೆ ಕೈಕಂಬ ಸಮೀಪದ ಗುರುಪುರದ ಬಳಿಯ ಪೊಳಲಿ ದ್ವಾರದಲ್ಲಿ ನಡೆಯುತ್ತದೆ.

ಕಾಟಿಪಳ್ಳದಲ್ಲಿ ನಡೆದ ಮೊದಲ 'ಕೋಮು ಕೊಲೆ' ಬಸ್‌ ಚಾಲಕ ರಫೂಫ್‌ ಅವರದ್ದು. ಅದಾದ ಮೇಲೆ, ಮಂಗಳೂರಿನ ತಾಲೂಕು ಪಂಚಾಯ್ತಿ ಮುಂದೆಯೇ ಕಾಂಗ್ರೆಸ್ ಮುಖಂಡ ಮಲ್ಲೂರು ಗಬ್ಬಾರ್ ಕೊಲೆ ನಡೆದುಹೋಗಿರುತ್ತದೆ. ಈ ಕೊಲೆಗಳ ಹಿಂದೆ ಹಿಂದೂ ಜಾಗರಣ ವೇದಿಕೆ ಜತೆಗಿದ್ದ ರೌಡಿ ಗುಂಪುಗಳ ಹೆಸರು ಕೇಳಿಬಂದಿತ್ತು,'' ಎಂಬ ಮಾಹಿತಿ ಇಲ್ಲಿ ಸಿಗುತ್ತದೆ.

ಇವೆಲ್ಲವೂ ವೈಯಕ್ತಿಕ ಮಟ್ಟದಲ್ಲಿ ಮುಸ್ಲಿಂ ಧರ್ಮೀಯರನ್ನೇ ಗುರಿಯಾಗಿಸಿಕೊಂಡು ನಡೆದ ದಾಳಿಗಳು.ಹಾಗೆ ನೋಡಿದರೆ, ಇಲ್ಲಿನ 'ಕೋಮು ಕೊಲೆ'ಗಳಿಗೆ ಮುಸ್ಲಿಂ ಧರ್ಮೀಯರ ಕಡೆಯಿಂದ ಮೊದಲ 'ಐ ಫಾರ್‌ ಆನ್ ಐ' ದಾಖಲಾಗುವುದು ಕಾಟಿಪಳ್ಳದಲ್ಲಿಯೇ. ಅಲ್ಲಿನ ಶಂಶುದ್ಧೀನ್‌ ಸರ್ಕಲ್‌ನಲ್ಲಿ ಆರಂಭಗೊಂಡ ಈ 'ರಿವೇಂಜ್‌ ಕಿಲ್ಲಿಂಗ್ಸ್‌' ಸದ್ಯ ಒಂದು ಸುತ್ತು ಹೊಡೆದು ಮತ್ತಲ್ಲೇ ಬಂದು ನಿಂತಿವೆ.

ಈ ಬಾರಿ ದೀಪಕ್ ಮತ್ತು ಬಶೀರ್ ಕೊಲೆಯಾಗಿ ಹೋಗಿದ್ದಾರೆ. ಹಂತಕರ ಬಂಧನವೂ ಆಗಿದೆ. ಹಿಂದೆಂದೂ ಇಲ್ಲದ ಸೌಹಾರ್ದ ಅಲೆ ಈ ಬಾರಿ ಎದ್ದಿದೆ. ಬಿಜೆಪಿಯಿಂದ ಆರಂಭಗೊಂಡು ಕಮ್ಯುನಿಸ್ಟರವರೆಗೆ ಎಲ್ಲರೂ ಶಾಂತಿಯನ್ನೇ ಬಯಸುತ್ತಿದ್ದಾರೆ.