‘ಮೊದಲು ಅಮೆರಿಕ’ ನೀತಿಗೆ ಜೋತು ಬಿದ್ದ ಟ್ರಂಪ್; ಮಧ್ಯಮ ವರ್ಗದ ಅನಿವಾಸಿ ಭಾರತೀಯರಲ್ಲಿ ಶುರುವಾಗಿದೆ ನಡುಕ
ಸುದ್ದಿ ಸಾಗರ

‘ಮೊದಲು ಅಮೆರಿಕ’ ನೀತಿಗೆ ಜೋತು ಬಿದ್ದ ಟ್ರಂಪ್; ಮಧ್ಯಮ ವರ್ಗದ ಅನಿವಾಸಿ ಭಾರತೀಯರಲ್ಲಿ ಶುರುವಾಗಿದೆ ನಡುಕ

ಇದು ಸುಮಾರು ಒಂದು ವರ್ಷದ ಹಿಂದಿನ ಮಾತು. 2016 ಅಂತ್ಯ ಹಾಗೂ 2017ರ ಆರಂಭದ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಎನ್ನುವ ಅಮೆರಿಕದ ಉದ್ಯಮಿಯ ಹೆಸರು ವಿಶ್ವವನ್ನು ನಿಧಾನವಾಗಿ ಆವರಿಸಲು ಆರಂಭಿಸಿತ್ತು. ಸಪ್ತಸಾಗರಗಳಾಚೆ ಚುನಾವಣೆಗೆ ನಿಂತಿದ್ದ ಡೊನಾಲ್ಡ್ ಟ್ರಂಪ್ ಭಾರತದಲ್ಲಿ ದೊಡ್ಡ ಸದ್ದು ಮಾಡಿದ್ದರು. ಅದಕ್ಕೆ ಕಾರಣವೂ ಇತ್ತು. ‘ನಾನು ಹಿಂದೂ ಧರ್ಮದ ದೊಡ್ಡ ಅಭಿಮಾನಿ’ ಮತ್ತು ‘ನಾನು ಭಾರತದ ದೊಡ್ಡ ಅಭಿಮಾನಿ’ ಎನ್ನುವ ಮಾತುಗಳು ಟ್ರಂಪ್ ಬಾಯಿಯಿಂದ ಹೊರಬೀಳುತ್ತಿದ್ದಂತೆ ಭಾರತದ ಮದ್ಯಮ ವರ್ಗ ಕುಣಿದು ಕುಪ್ಪಳಿಸಿತ್ತು. ಆದರೆ ಈಗ, ಟ್ರಂಪ್ ಹೆಸರು ಕೇಳುತ್ತಲೇ ಅದೇ ವರ್ಗ ಉರಿದು ಬೀಳುತ್ತಿದೆ.

ಡೊನಾಲ್ಡ್ ಟ್ರಂಪ್ ಅವರ ಮೊದಲು ಅಮೆರಿಕ (ಹೈರ್ ಅಮೆರಿಕ, ಬೈ ಅಮೆರಿಕ) ನೀತಿ ಭಾರತೀಯರಲ್ಲಿ ಅಭದ್ರತೆ ಭಾವ ಮೂಡಿಸಿದೆ. ಹೆಚ್-1ಬಿ ವೀಸಾಗೆ ಸಂಬಂಧಪಟ್ಟಂತೆ ಡೊನಾಲ್ಡ್ ಟ್ರಂಪ್ ತೆಗೆದುಕೊಳ್ಳುತ್ತಿರುವ ನಿರ್ಧಾರ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಸುಮಾರು 5 ಲಕ್ಷ ಭಾರತೀಯ ಉದ್ಯೋಗಿಗಳು ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗುವಂತೆ ಮಾಡಿದೆ.

ವರದಿಗಳ ಪ್ರಕಾರ ಹೆಚ್-1ಬಿ ವೀಸಾ ನೀತಿಗೆ ತಿದ್ದುಪಡಿ ತರಲು ಹೊರಟಿರೋ ಟ್ರಂಪ್ ಹೆಚ್-1ಬಿ ವೀಸಾ ಅವಧಿ ವಿಸ್ತರಣೆಗೆ ನಿರ್ಬಂಧ ವಿಧಿಸುವ ನೀತಿ ಜಾರಿಗೆ ತರಲು ನಿರ್ಧರಿಸಿದ್ದಾರೆ. ಒಂದು ವೇಳೆ ಟ್ರಂಪ್ ಉದ್ದೇಶಿತ ತಿದ್ದುಪಡಿ ಜಾರಿಯಾದರೆ, ಹೆಚ್-1ಬಿ ವೀಸಾ ಪಡೆದು ಅಮೆರಿಕದಲ್ಲಿ ನೆಲೆಸಿರುವ (ಬಹುತೇಕರು ಭಾರತೀಯರು) ಉದ್ಯೋಗಿಗಳಿಗೆ ಸಂಕಷ್ಟ ಎದುರಾಗಲಿದೆ. ಹೆಚ್-1ಬಿ ವೀಸಾ ಆಧಾರದ ಮೇಲೆ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವವರು 3 ವರ್ಷಗಳ ಕಾಲ ಅಮೆರಿಕದಲ್ಲಿ ಉದ್ಯೋಗ ಮಾಡಬಹುದು.

ಈ ವೀಸಾವನ್ನು ಮತ್ತೆ ಮೂರು ವರ್ಷದ ಅವಧಿಗೆ ವಿಸ್ತರಿಸಬಹುದು. ಒಂದು ವೇಳೆ ಗ್ರೀನ್ ಕಾರ್ಡ್(ಅಮೆರಿಕದಲ್ಲಿ ಶಾಶ್ವತ ವಾಸ)ಗೆ ಅರ್ಜಿ ಸಲ್ಲಿಸಿದ್ದವರು, ಅರ್ಜಿ ಇತ್ಯರ್ಥವಾಗುವವರೆಗೂ ಅಮೆರಿಕದಲ್ಲಿ ಇದ್ದು ಉದ್ಯೋಗ ಮಾಡಬಹುದು. ಆದ್ರೆ, ಹೊಸ ನೀತಿ ಈ ಸೌಲಭ್ಯಕ್ಕೆ ಕತ್ತರಿ ಹಾಕಲಿದೆ.

ಏನಿದು ಹೆಚ್-1ಬಿ ವೀಸಾ?

ಅಮೆರಿಕದ ಖಾಸಗಿ ಕಂಪನಿಗಳು ನೀಡುವ ವೀಸಾವನ್ನು ಹೆಚ್-1ಬಿ ವೀಸಾ ಎಂದು ಕರೆಯುತ್ತಾರೆ. ಅಮೆರಿಕದ ವಲಸೆ ಹಾಗೂ ರಾಷ್ಟ್ರೀಯತೆ ಕಾಯ್ದೆ, ಅಮೆರಿಕದ ಕಂಪನಿಗಳಿಗೆ ವೀಸಾ ನೀಡುವ ಅವಕಾಶ ಕಲ್ಪಿಸಿದೆ. ಅಮೆರಿಕದ ಉದ್ಯೋಗದಾತರು ಅಂದ್ರೆ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಹೆಚ್-1ಬಿ ವೀಸಾ ನೀಡುತ್ತವೆ. ಭಾರತವೂ ಸೇರಿದಂತೆ ವಿಶ್ವದ ನಾನಾ ದೇಶಗಳಿಂದ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಬಹುತೇಕರು ಹೆಚ್-1ಬಿ ವೀಸಾವನ್ನೇ ಅವಲಂಬಿಸಿದ್ದಾರೆ.

ಒಂದು ವೇಳೆ ಉದ್ಯೋಗ ನೀಡಿದ ಕಂಪನಿ, ಉದ್ಯೋಗಿಯ ಹೆಚ್-1ಬಿ ವೀಸಾ ಹಿಂಪಡೆದರೆ, ಆತ ಅಮೆರಿಕವನ್ನ ತೊರೆಯಬೇಕಾಗುತ್ತೆ. 60 ದಿನಗಳ ಒಳಗಾಗಿ ಮತ್ತೊಂದು ಕಂಪನಿಯಿಂದ ಹೆಚ್-1ಬಿ ವೀಸಾ ಪಡೆದುಕೊಳ್ಳಬೇಕು. ಆದ್ರೆ, ಗ್ರೀನ್ ಕಾರ್ಡ್‌ಗೆ ಸಲ್ಲಿಸಿರುವ ಅರ್ಜಿ ಇತ್ಯರ್ಥವಾಗಿರದೇ ಇದ್ದರೆ ಅಮೆರಿಕದಲ್ಲಿ ನೆಲೆಸುವ ಅವಕಾಶವಿರುತ್ತೆ. ಅಮೆರಿಕ ಪ್ರತಿವರ್ಷ 65 ಸಾವಿರ ಹೆಚ್-1ಬಿ ವೀಸಾ ಹಂಚಿಕೆ ಮಾಡುತ್ತೆ. ಈ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿ ಹೆಚ್-1ಬಿ ವೀಸಾ ಪಡೆಯುವವರು ಭಾರತೀಯರೇ ಆಗಿರುತ್ತಾರೆ. ಈಗಾಗ್ಲೇ 5 ಲಕ್ಷ ಭಾರತೀಯರು ಹೆಚ್-1ಬಿ ವೀಸಾ ಪಡೆದು ಅಮೆರಿಕದಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ.

ಹೆಚ್-1ಬಿ ವೀಸಾ ಮೇಲೆ ಟ್ರಂಪ್ ಪ್ರಹಾರ!

ಡೊನಾಲ್ಡ್ ಟ್ರಂಪ್ ಮೊದಲಿನಿಂದಲೂ ಹೆಚ್-1ಬಿ ವೀಸಾ ನೀತಿಯನ್ನ ಸಾಧ್ಯವಾದಷ್ಟು ಮಟ್ಟಿಗೆ ಬೀಗಿಗೊಳಿಸುತ್ತಲೇ ಬಂದಿದ್ದಾರೆ. 2017ರ ಏಪ್ರಿಲ್ನಲ್ಲಿ ಅಮೆರಿಕ ಹೆಚ್-1ಬಿ ವೀಸಾ ಹಂಚಿಕೆ ಪ್ರಕ್ರಿಯೆ ನಿಲ್ಲಿಸಿತ್ತು. 2017ರ ಅಕ್ಟೋಬರ್ ತಿಂಗಳಲ್ಲಿ ಪುನ: ಈ ಪ್ರಕ್ರಿಯೆಯನ್ನು ಆರಂಭಿಸಿತ್ತು. ಹೆಚ್-1ಬಿ ಅರ್ಜಿ ಸಲ್ಲಿಸಿದ್ದ ಉದ್ಯೋಗ ಆಕಾಂಕ್ಷಿಗಳ ಹೋದ ಜೀವ ಮತ್ತೆ ಬಂದಿತ್ತು. ಕಳೆದ ವರ್ಷ ಹೆಚ್-1ಬಿ ವೀಸಾ ಪಡೆದ ಉದ್ಯೋಗಗಳ ಸಂಗಾತಿ (ಪತಿ, ಪತ್ನಿ) ಅಮೆರಿಕದಲ್ಲಿ ವಾಸಿಸುವ ಅವಕಾಶವನ್ನು ಟ್ರಂಪ್ ಮೊಟಕುಗೊಳಿಸಿದ್ದರು.

ಮೊದಲು ಪತಿ ಹೆಚ್-1ಬಿ ವೀಸಾ ಹೊಂದಿದ್ದರೆ ಪತ್ನಿ ಅಮೆರಿಕದಲ್ಲಿ ವಾಸಿಸುವ ಅವಕಾಶ ಪಡೆಯುತ್ತಿದ್ದಳು. ಆದರೆ ಈಗ, ಪತಿಯೊಂದಿಗೆ ಅಮೆರಿಕದಲ್ಲಿ ನೆಲೆಸಬೇಕಾದ್ರೆ ಪತ್ನಿಯೂ ಸಹ ಹೆಚ್-1ಬಿ ವೀಸಾಗೆ ಅರ್ಜಿ ಸಲ್ಲಿಸಿ ವೀಸಾ ಪಡೆಯಬೇಕು.ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿರೋ ಟ್ರಂಪ್ ಹೆಚ್-1ಬಿ ವೀಸಾ ವಿಸ್ತರಣೆಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಈ ಮೂಲಕ ವಿದೇಶಿಯರನ್ನು ಹೈರ್ ಮಾಡುವ ಅಮೆರಿಕದ ಕಂಪನಿಗಳಿಗೆ ಮೂಗುದಾರ ಹಾಕಲು ನಿರ್ಧಾರಿಸಿದ್ದಾರೆ.

ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ವಿದೇಶಿ ಉದ್ಯೋಗಿಗಳು ತಾವಾಗಿಯೇ ಅಮೆರಿಕ ತೊರೆಯಬೇಕು. ಈ ಮೂಲಕ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಅವಕಾಶ ಸಿಗುಂತೆ ಮಾಡುವುದು ಟ್ರಂಪ್ ‘ಮೊದಲು ಅಮೆರಿಕ’ ನೀತಿಯ ಪ್ರಮುಖ ಅಜೆಂಡಾ. ಈ ಮೊದ್ಲು ಹೆಚ್-1ಬಿ ವೀಸಾ ಅವಧಿ ಮುಗಿದರೂ, ಗ್ರೀನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ್ದರೆ ಅಮೆರಿಕದಲ್ಲಿ ಉಳಿದುಕೊಂಡು ಉದ್ಯೋಗ ಮಾಡುವ ಅವಕಾಶ ಇತ್ತು. ಗ್ರೀನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ್ದೇವೆ ಎನ್ನುವ ಆಧಾರದ ಮೇಲೆ ಹೆಚ್-1ಬಿ ವೀಸಾ ಅವಧಿಯನ್ನ ವಿಸ್ತರಿಸಿಕೊಳ್ಳಬಹುದಿತ್ತು.

ಆದ್ರೀಗ, ಟ್ರಂಪ್ ಮಾಡಲು ಹೊರಟಿರೋ ತಿದ್ದುಪಡಿ ಈ ಅವಕಾಶವನ್ನ ನಿರಾಕರಿಸುತ್ತೆ. ಹೀಗಾಗಿ, ಗ್ರೀನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ್ದವರೂ ಅಮೆರಿಕ ತೊರೆದು ತಾಯಿನಾಡಿಗೆ ಮರಳಬಹುದಾದ ಸಂಧಿಗ್ಧತೆ ಎದುರಾಗಬಹುದು.ಗ್ರೀನ್ ಕಾರ್ಡ್ ಅಂದರೆ, ಅಮೆರಿಕದಲ್ಲಿನ ಶಾಶ್ವತವಾಗಿ ವಾಸಿಸುವ ಹಕ್ಕನ್ನು ನೀಡುವ ವ್ಯವಸ್ಥೆ. ವಿದೇಶಿಯರು ಈ ಗ್ರೀನ್ ಕಾರ್ಡ್ ಪಡೆದುಕೊಂಡರೆ ಅಮೆರಿಕದಲ್ಲಿ ಎಷ್ಟು ದಿನಗಳ ಕಾಲ ಬೇಕಾದರೂ ವಾಸಿಸಬಹುದು. ಅಮೆರಿಕದ ನಾಗರಿಕರಂತೆ ಎಲ್ಲಾ ಸೌಲಭ್ಯ ಪಡೆದುಕೊಳ್ಳಬಹುದು.

ಆದರೆ, ಗ್ರೀನ್ ಪಡೆದವರು ಅಮೆರಿಕದ ನಾಗರಿಕರಾಗುವುದಿಲ್ಲ. 1946ರಲ್ಲಿ ಈ ಕಾರ್ಡಿನ ಹಸಿರು ಬಣ್ಣದಲ್ಲಿತ್ತು. ಹೀಗಾಗಿ ಇದನ್ನ ಗ್ರೀನ್ ಕಾರ್ಡ್ ಎಂದು ಕರೆಯುವ ರೂಢಿಯಾಗಿದೆ. ಕಾರ್ಡ್ ಬಣ್ಣ ಬದಲಾದ್ರೂ ಹೆಸರು ಹಾಗೇ ಉಳಿದಿದೆ. ಗ್ರೀನ್ ಕಾರ್ಡ್ ಪಡೆದವರು ಇದನ್ನ ಜೊತೆಯಲ್ಲಿಟ್ಟುಕೊಂಡು ಓಡಾಡುವುದು ಕಡ್ಡಾಯ. ಒಂದು ವೇಳೆ ಗ್ರೀನ್ ಕಾರ್ಡ್ನ್ನ ಜೊತೆಗೆ ತೆಗೆದುಕೊಂಡು ಹೋಗಲು ಮರೆತರೆ ದಂಡ ಹಾಗೂ ಒಂದು ತಿಂಗಳ ಕಾಲ ಸೆರೆವಾಸ ಅನುಭವಿಸಬೇಕಾಗುತ್ತೆ.

ಅಮೆರಿಕದ ಗ್ರೀನ್ ಕಾರ್ಡ್ ಪಡೆಯಲು ದೊಡ್ಡ ಸಂಖ್ಯೆಯ ಜನ ಹೆಣಗಾಡುತ್ತಿದ್ದಾರೆ. ಸದ್ಯಕ್ಕೆ 10 ಲಕ್ಷ ಜನ ಗ್ರೀನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇದ್ರಲ್ಲೂ ಭಾರತೀಯರದ್ದು ಸಿಂಹಪಾಲು. ಅರ್ಜಿ ಸಲ್ಲಿಸಿ ಒಂದು ದಶಕವೇ ಕಳೆದ್ರೂ ಇನ್ನೂ ಇತ್ಯರ್ಥವಾಗಿಲ್ಲ.ಡೊನಾಲ್ಡ್ ಟ್ರಂಪ್, ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದಾಗ ಮುಸ್ಲಿಂ ಸಮುದಾಯದವರ ಮೇಲೆ ಹೆಚ್ಚು ಹೆಚ್ಚು ನಿರ್ಬಂಧ ಹೇರಿದ್ದು, ಮೆಕ್ಸಿಕೊ ವಲಸಿಗರನ್ನ ತೆಡೆಯಲು ಗಡಿಯಲ್ಲಿ ಗೋಡೆ ಕಟ್ಟಲು ನಿರ್ಧರಿಸಿದ್ದು, ಚೀನಾ ವಲಸಿಗರನ್ನ ನಿಯಂತ್ರಿಸಲು ಮುಂದಾಗಿದ್ದನ್ನ ಅಮೆರಿಕ-ಭಾರತೀಯರು ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದರು.

“ಭಾರತೀಯರ ಕೌಶಲ್ಯ ಹಾಗೂ ಬದ್ದತೆಯಿಂದ ಅಮೆರಿಕಕ್ಕೆ ಸಾಕಷ್ಟು ಲಾಭವಾಗಿದೆ,” ಅಂತಾ ಟ್ರಂಪ್ ಹೇಳಿದ ಬಳಿಕ ಅಮೆರಿಕದಲ್ಲಿರುವ ಹಿಂದೂ ಒಕ್ಕೂಟಗಳು ಕುಣಿದು ಕುಪ್ಪಳಿಸಿದ್ದವು. ಇನ್ಮುಂದೆ ಅಮೆರಿಕದಲ್ಲಿ ಭಾರತೀಯರಿಗೆ ವಿಶೇಷ ಸ್ಥಾನಮಾನ ಸಿಗುತ್ತೆ ಅಂತಾ ಭಾವಿಸಿದ್ದವು. ಮೋದಿ-ಟ್ರಂಪ್ ಸ್ನೇಹ ಕಂಡು ಅಮೆರಿಕ-ಭಾರತೀಯರು ಸಂತಸಗೊಂಡಿದ್ದರು.ಆದ್ರೆ, ‘ಮೊದಲು ಅಮೆರಿಕ’ ಅನ್ನೋ ಟ್ರಂಪ್ ನೀತಿ, ಅಲ್ಲಿನ ಭಾರತೀಯರನ್ನು ಸಂಕಷ್ಟಕ್ಕೆ ದೂಡುವ ಸ್ಥಿತಿಗೆ ಬಂದಿದೆ.

ಮಕ್ಕಳನ್ನು ಅಮೆರಿಕಕ್ಕೆ ಕಳುಹಿಸಿರುವ ಭಾರತದ ಮೇಲ್ಮದ್ಯಮ ವರ್ಷದ ಕುಟುಂಬಗಳು ಟ್ರಂಪ್ ಅವರನ್ನ ಶಪಿಸುತ್ತಿವೆ. ಸಾಫ್ಟವೇರ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಭವಿಷ್ಯಕ್ಕೆ ಕತ್ತಲು ಆವರಿಸೋ ಆತಂಕ ಶುರುವಾಗಿದೆ. 2017ರಲ್ಲಿ ಭಾರತದ ಐಟಿ ಕ್ಷೇತ್ರ ಸಾಕಷ್ಟು ಏಟು ತಿಂದಿದೆ.

ಅದ್ರಲ್ಲೂ ಇನ್ಫೊಸಿಸ್ನಂತಹ ಕಂಪನಿಗಳು ಉದ್ಯೋಗಿಗಳನ್ನ ಮನೆಗೆ ಕಳುಹಿಸಿದ ಘಟನೆಗಳು ನಡೆದಿವೆ. ಸತ್ಯ ನಾಡೆಲ್ಲಾ, ಸುಂದರ ಪಿಚೈ ಆಗುವ ಕನಸು ಕಟ್ಟಿಕೊಂಡು ಅಮೆರಿಕಕ್ಕೆ ಹಾರಿದ್ದ ಟೆಕ್ಕಿಗಳು ಬರಿಗೈಯಲ್ಲಿ ಮನೆಗೆ ಮರಳು ಸ್ಥಿತಿ ಎದುರಾಗುವ ಭಯ ಕಾಡುತ್ತಿದೆ. ಭಾರತೀಯ ಟೆಕ್ಕಿಗಳಿಗೆ ಭವಿಷ್ಯದಲ್ಲಿ ಸಂಕಷ್ಟ ಎದುರಾಗಿರುವಂತೆ ಕಾಣಿಸುತ್ತಿದೆ. ಟ್ರಂಪ್ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಭಾರತೀಯ ಸಮುದಾಯದಲ್ಲಿ ದೊಡ್ಡ ಆತಂಕ ಸೃಷ್ಟಿಯಾಗಿರೋದನ್ನ ತಳ್ಳಿ ಹಾಕುವಂತಿಲ್ಲ.