‘ಇದು ನಾಣ್ಯ, ಆದರೆ ನಾಣ್ಯವಲ್ಲ’: ನಿಗೂಢ ಕರೆನ್ಸಿಗೆ ಕೈ ಚಾಚುವ ಮುನ್ನ ‘ಬಿಟ್ ಕಾಯಿನ್’ ಪರಿಚಯ
ಸುದ್ದಿ ಸಾಗರ

‘ಇದು ನಾಣ್ಯ, ಆದರೆ ನಾಣ್ಯವಲ್ಲ’: ನಿಗೂಢ ಕರೆನ್ಸಿಗೆ ಕೈ ಚಾಚುವ ಮುನ್ನ ‘ಬಿಟ್ ಕಾಯಿನ್’ ಪರಿಚಯ

ಒಂದು ದೇಶ; ಅದಕ್ಕೊಂದು ಸರಕಾರ; ಆ ಸರಕಾರ ಜಾರಿಗೆ ತಂದ ಅಧಿಕೃತ ಕರೆನ್ಸಿ. ಅವುಗಳಲ್ಲೇ ಆ ದೇಶ ನಡೆಯಬೇಕು' ಅದೊಂದು ವ್ಯವಸ್ಥೆ. ಈ ಕರೆನ್ಸಿ ವ್ಯವಸ್ಥೆಯನ್ನು ಆಧರಿಸಿ ದೇಶಗಳಲ್ಲಿ ತೆರಿಗೆ, ದಂಡ, ವ್ಯವಹಾರಗಳ ಮೇಲೆ ನಿಯಂತ್ರಣ ಹೀಗೆ ನಿಯಮ ನಿಬಂಧನೆಗಳನ್ನು ರೂಪಿಸಲಾಗುತ್ತದೆ. ಇದೇ ದೇಶದ ಒಂದಷ್ಟು ಜನ ಸೇರಿಕೊಂಡು ಸರಕಾರಕ್ಕೆ ಪರ್ಯಾಯವಾಗಿ ತಮ್ಮಲ್ಲೇ ಹೊಸ ಕರೆನ್ಸಿ ವ್ಯವಸ್ಥೆ ಹುಟ್ಟುಹಾಕಿದರೆ ಪರಿಸ್ಥಿತಿ ಏನಾಗಬಹುದು? ಸುಮ್ಮನೆ ಊಹಿಸಿಕೊಳ್ಳಿ. ಸದ್ಯ ನಡೆದಿರುವುದೂ ಅದೇ. ಇದರ ಹೆಸರು 'ಬಿಟ್ ಕಾಯಿನ್'!

ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ, ‘ಭವಿಷ್ಯದ ಅಧಿಕೃತ ಕರೆನ್ಸಿ’ ಎನಿಸಿರುವ ಬಿಟ್ ಕಾಯಿನ್‌ಗಳದ್ದೇ ಮಾತು. ಎಲ್ಲಾ ಬಂಡವಾಳಗಾರರು ಇದರತ್ತ ಚಿತ್ತ ನೆಟ್ಟಿದ್ದಾರೆ. ಇಷ್ಟು ದಿನ ರೂಪಾಯಿ ಮೌಲ್ಯವನ್ನು ಡಾಲರ್ ಒಟ್ಟಿಗೆ ತಾಳೆ ಹಾಕಿ ನೋಡುತ್ತಿದ್ದೆವು. ಮುಂದೆ ಡಾಲರ್ ಬದಲಿಗೆ ಈ ಬಿಟ್ ಕಾಯಿನ್ ಜೊತೆ ಹೋಲಿಕೆ ಮಾಡಬೇಕಾಗಬಹುದು. ಯಾಕೆಂದರೆ ಬಿಟ್ ಕಾಯಿನ್ ಮೇಲೆ ನಮ್ಮ ಜನಕ್ಕಿರುವ ಕ್ರೇಜ್, ಈ ನಾಣ್ಯದ ಮೌಲ್ಯವನ್ನು ಈ ಪರಿ ಏರಿಸಿದೆ. ಇಷ್ಟು ದಿನ ಚಿನ್ನ, ಶೇರು, ವಿದೇಶಿ ಕರೆನ್ಸಿಯ ಮೇಲೆ ಹೂಡಿಕೆ ಮಾಡಿ ಲಾಭ ಕಾಣುತ್ತಿದ್ದವರೆಲ್ಲಾ ಇಂದು ಕಣ್ಣಿಗೆ ಕಾಣಿಸದ, ಸ್ಪರ್ಶಿಸಲು ಸಿಗದ, ವರ್ಚುವಲ್‌ ಜಗತ್ತಿನಲ್ಲಿ ಮೌಲ್ಯ ವೃದ್ಧಿಸಿಕೊಳ್ಳುತ್ತಿರುವ ಬಿಟ್ ಕಾಯಿನ್ ಹಿಂದೆ ಬಿದ್ದಿದ್ದಾರೆ.

ಏನಿದು ಬಿಟ್ ಕಾಯಿನ್?

ಇದೂ ಕೂಡ ರೂಪಾಯಿ, ಡಾಲರ್, ಯುರೋಗಳಂತೆಯೇ ಒಂದು ನಾಣ್ಯ. ಆದರೆ, 'ಕ್ರಿಪ್ಟೋ ಕರೆನ್ಸಿ'; ಅಂದರೆ ನಿಗೂಢವಾದ ಹಣ. ಇದಕ್ಕೆ ನಿರ್ಧಿಷ್ಟ ರೂಪ ಇಲ್ಲ. ಕಂಪ್ಯೂಟರ್ ಅಥವಾ ನಮ್ಮ ಮೊಬೈಲ್ ಪರದೆಯ ಮೇಲೆ ಅಂಕಿಗಳ ರೂಪದಲ್ಲಿ ಇದು ಕಾಣಸಿಗುತ್ತದಷ್ಟೆ. 1998ರಲ್ಲೇ ವೀ ದಾಯ್ ಎಂಬ ಕಂಪ್ಯೂಟರ್ ಇಂಜಿನಿಯರ್ ಒಬ್ಬರು ಬಿಟ್ ಕಾಯಿನ್ ಪರಿಕಲ್ಪನೆಯನ್ನು ಮಂಡಿಸಿದ್ದರು. ಅದನ್ನು ‘ಬಿ-ಮನಿ’ ಎಂದು ಕರೆದಿದ್ದರು. ಜಪಾನ್ ನಿವಾಸಿ ಸಂತೋಷಿ ನಾಕಮೊಟೊ 2008ರಲ್ಲಿ ಈ ಕಲ್ಪನೆಯನ್ನು ವಾಸ್ತವಕ್ಕಿಳಿಸಿದರು. ಹೀಗೆ ಬಿಟ್ ಕಾಯಿನ್ ಬಳಕೆ ಬಂತು.

2009ರ ನಂತರ ಈ ಡಿಜಿಟಲ್ ಕೆರೆನ್ಸಿಯನ್ನು 'ಕ್ರಿಪ್ಟೋಗ್ರಫಿ' ಎಂಬ ತಂತ್ರಜ್ಞಾನ ಬಳಸಿ, ಪ್ರೋಗ್ರಾಮಿಂಗ್ ಲಾಂಗ್ವೇಜ್ ಮುಖಾಂತರ ಸೃಷ್ಟಿಸಲಾಯಿತು.ಇದೊಂದು ವಿಕೇಂದ್ರೀಕೃತ ವ್ಯವಸ್ಥೆ. ಮಧ್ಯವರ್ತಿಗಳಿಲ್ಲದೆ, ಅತಿ ಕಡಿಮೆ ವರ್ಗಾವಣೆ ಶುಲ್ಕದಲ್ಲಿ, ತಡೆರಹಿತವಾಗಿ ಇದನ್ನು ಬಳಕೆ ಮಾಡಬಹುದು. ಯಾವುದೇ ಒಂದು ದೇಶಕ್ಕೆ ಇದರ ಮೇಲೆ ಹಿಡಿತವಿಲ್ಲ. ಲಗಾಮಿಗೆ ಇದು ಸಿಗುವುದಿಲ್ಲ. ಹೀಗಾಗಿ ಕಾನೂನು ಕಟ್ಟಳೆಗಳ ಪರಿಧಿ ಮೀರಿ ಇವುಗಳನ್ನು ವರ್ಗಾವಣೆ ಮಾಡಬಹುದು. ಇದು ಈ ಕ್ರಿಪ್ಟೋ ಕರೆನ್ಸಿಯ ಕರಾಮತ್ತು.

ಈ ಕಾರಣಕ್ಕೆ ಬಿಟ್ ಕಾಯಿನ್‌ಗಳ ಬಗ್ಗೆ ಜನ ವಿಪರೀತ ಮೋಹಿತರಾಗಿದ್ದಾರೆ. ಪರಿಣಾಮ ಅವುಗಳ ಮೌಲ್ಯದಲ್ಲೂ ಕಂಡು ಕೇಳರಿಯದ ಏರಿಕೆಯಾಗಿದೆ. 'ಝೆಬ್ ಪೇ' ಎಂಬ ಜಾಲತಾಣದ ಮಾಹಿತಿ ಪ್ರಕಾರ 2009ರಲ್ಲಿ ಅಂತರ್ಜಾಲ ಜಗತ್ತಿಗೆ ಕಾಲಿಟ್ಟಾಗ ಈ ಕಾಯಿನ್ ಬೆಲೆ ಕೇವಲ 0.06 ಡಾಲರ್; ಇವತ್ತಿನ ರೂಪಾಯಿ ಮೌಲ್ಯದಲ್ಲಿ ಜುಜುಬಿ 2.80 ರೂಪಾಯಿ. 2016ರ ಅಕ್ಟೋಬರ್ ವೇಳೆಗೆ ಇದರ ಬೆಲೆ 21,872 ರೂಪಾಯಿಗಳಿಗೆ ಏರಿಕೆಯಾಗಿತ್ತು. ಅದೇ ಡಿಸೆಂಬರ್‌ನಲ್ಲಿ ಒಂದು ಬಿಟ್ ಕಾಯಿನ್ 57,000 ರೂಪಾಯಿ ಬೆಲೆ ಬಾಳುತ್ತಿತ್ತು. ಕಳೆದ ಫೆಬ್ರವರಿಯಲ್ಲಿ 89,000 ಇದ್ದ ಬಿಟ್ ಕಾಯಿನ್ ಬೆಲೆ ಮಾರ್ಚ್ ಹೊತ್ತಿಗೆ 98,600 ರುಪಾಯಿ ಮೌಲ್ಯ ಪಡೆದುಕೊಂಡಿತ್ತು.

ಇದೇ ದೊಡ್ಡ ಮೊತ್ತವೆಂದು ನೀವಂದುಕೊಂಡರೆ ಅದು ತಪ್ಪು. ಡಿಸೆಂಬರ್ ತಿಂಗಳ 13ರಂದು ಬಿಟ್ ಕಾಯಿನ್ ಸಾರ್ವಕಾಲಿಕ ಅತೀ ಹೆಚ್ಚಿನ ಮೌಲ್ಯ ಅಂದರೆ 12,86,000 ರುಪಾಯಿಗಳನ್ನು ಪಡೆದುಕೊಂಡಿತ್ತು. ಸದ್ಯ ಒಂದು ಬಿಟ್ ಕಾಯಿನ್ ಬೆಲೆ 14,993.72  ಡಾಲರ್; ಅಂದರೆ 9,44,655.41 ರುಪಾಯಿ.

ನಾಗಾಲೋಟದಲ್ಲಿರುವ ಬಿಟ್ ಕಾಯಿನ್ ತನ್ನ ಆರಂಭಿಕ ಬೆಲೆಗಿಂತ ಸುಮಾರು 1000 ಪಟ್ಟು ಏರಿಕೆ ಕಂಡಿದೆ. ಸುಲಭವಾಗಿ ಹೇಳಬೇಕೆಂದರೆ, 2010ರಲ್ಲಿ ಒಬ್ಬ ವ್ಯಕ್ತಿ ಬಿಟ್ ಕಾಯಿನ್ ನಲ್ಲಿ 100 ರುಪಾಯಿ ಮೌಲ್ಯದ ಹೂಡಿಕೆ ಮಾಡಿದ್ದನೆಂದರೆ, ಇಂದು ಅವನ ಹೂಡಿಕೆಯ ಮೌಲ್ಯ 2.3ಕೋಟಿಯಷ್ಟು ಬೆಲೆಬಾಳುತ್ತದೆ!ತಂತ್ರಜ್ಞರ ಪ್ರಕಾರ, ಬಿಟ್ ಕಾಯಿನ್ ಬೆಲೆ ಮುಂದಿನ ದಿನಗಳಲ್ಲಿ 60,000 ಡಾಲರ್ ತಲುಪಲಿದೆಯಂತೆ. ಹಾಗಂಥ ನಿಯಮವೇನೂ ಇಲ್ಲ. ಈ ಮಟ್ಟಕ್ಕೆ ಮೇಲೇರಿರುವ ಬಿಟ್ ಕಾಯಿನ್ ಹಠಾತ್ತನೆ ಆರಂಭದ ಬೆಲೆಗೆ, ಅಂದರೆ 0.06 ಡಾಲರ್ ಗೆ ಇಳಿದು ಬಿಡಬಹುದು.

ಸದ್ಯಕ್ಕೆ ಜೂಜು ಎಂದು ಕರೆಸಿಕೊಳ್ಳುತ್ತಿರುವ ಬಿಟ್ ಕಾಯಿನ್ ಹಲವಾರು ದಂಧೆಗಳಿಗೆ ರಾಜಮಾರ್ಗವಾಗಿ ಪರಿಣಮಿಸಿದೆ. ಕಾನೂನು ಅಂಕೆಗೆ ಸಿಗದ ಇವುಗಳನ್ನು ಮಾದಕ ಪದಾರ್ಥ, ಬಂದೂಕು, ಸ್ಪೋಟಕಗಳ ಪೂರೈಕೆ ಸೇರಿದಂತೆ ಎಲ್ಲಾ ಮಾಫಿಯಾಗಳಲ್ಲೂ ಎಗ್ಗಿಲ್ಲದೆ ಬಳಸಲಾಗುತ್ತಿದೆ.

ನಮಗೂ ಬಿಟ್ ಕಾಯಿನ್ ಸಿಗುತ್ತದಾ?

ಖಂಡಿತಾ. ಆದರೆ ಸುಲಭಕ್ಕಲ್ಲ. ಇದಕ್ಕೆ ಸಂಬಂಧಿಸಿದ ವಿಶೇಷ ತಂತ್ರಾಂಶವನ್ನು ಕಂಪ್ಯೂಟರಿಗೆ ಅಳವಡಿಸಬೇಕು. ಬಿಟ್ ಕಾಯಿನ್ ಗಳಿಸಲು ಹೊರಡುವ ಮುಂಚೆ ಕಂಪ್ಯೂಟರಿನಲ್ಲಿ 'ಬಿಟ್ ಕಾಯಿನ್ ವ್ಯಾಲೆಟ್' ಅನ್ನು ತೆರೆಯಬೇಕು. ಇದಿಲ್ಲದೇ ಬಿಟ್ ಕಾಯಿನ್ ಗಳಿಕೆ ಸಾಧ್ಯವಿಲ್ಲ. ಬಿಟ್ ಕಾಯಿನ್ ವ್ಯಾಪಾರಕ್ಕೆಂದೇ ಹಲವಾರು ಜಾಲತಾಣಗಳು ಸೃಷ್ಟಿಯಾಗಿವೆ, ವಿನಿಮಯ ಕೆಂದ್ರಗಳಿವೆ. ಅವುಗಳ ಮೂಲಕ ಬಿಟ್ ಕಾಯಿನ್ ಕೊಳ್ಳಬಹುದು ಅಥವಾ ಮಾರಬಹುದು.

ವಿಶೇಷ ಅಂದರೆ, ಈ ಬಿಟ್ ಕಾಯಿನ್ ಗಳನ್ನು ಬಳಕೆದಾರರೇ ಸೃಷ್ಟಿಸಬೇಕು. ಈ ಪ್ರಕ್ರಿಯೆಗೆ 'ಮೈನಿಂಗ್' ಎನ್ನಲಾಗುತ್ತದೆ. ಚಿನ್ನವನ್ನು ಗಣಿಗಾರಿಕೆ ಮಾಡುವಂತೆ ಬಿಟ್ ಕಾಯಿನ್‌ಗಳ ಗಣಿಗಾರಿಕೆ ನಡೆಯುತ್ತದೆ. ಆದರೆ, ಬೆಟ್ಟ ಗುಡ್ಡಗಳಲ್ಲಲ್ಲ; ಕಂಪ್ಯೂಟರಿನಲ್ಲಿ. ಇದನ್ನು ಅಗೆಯುವುದು ಅಷ್ಟು ಸುಲಭದ ಕೆಲಸವೇನಲ್ಲ. ಕಂಪ್ಯೂಟರ್ ನೀಡುವ ದೊಡ್ಡ ದೊಡ್ಡ ಗಣಿತದ ಸಮಸ್ಯೆಗಳನ್ನು ಬಗೆಹರಿಸಬೇಕು. ಅದಕ್ಕೆಂದೆ ಹಲವಾರು ದಿನ ತಲೆಕೆಡಿಸಿಕೊಳ್ಳಬೇಕು. ಅಷ್ಟೆಲ್ಲಾ ಕಷ್ಟಪಟ್ಟು ಸಮಸ್ಯೆ ಬಗೆಹರಿಸಿದರೆ ಬಿಟ್ ಕಾಯಿನ್ ನಿಮ್ಮದಾಗುತ್ತದೆ.Hash function ಎನ್ನಲಾಗುವ ಗಣಿತದ ಸಮಸ್ಯೆಯೊಂದನ್ನು ಬಗೆಹರಿಸಿದರೆ 12.5 ಬಿಟ್ ಕಾಯಿನ್ ಗಳು ನಿಮ್ಮದಾಗುತ್ತವೆ.

ಹಾಗಾದರೆ Hash function ಬಗೆಹರಿಸುವುದು ಹೇಗೆ? ಎಲ್ಲೆಡೆ ಪ್ರಶ್ನೆಗಳನ್ನು ಕೊಟ್ಟು ಉತ್ತರಿಸುವಂತೆ ಕೇಳಿದರೆ, ಇಲ್ಲಿ ಉತ್ತರವನ್ನೇ ಕೊಟ್ಟು ಪ್ರಶ್ನೆಯನ್ನು ಸಿದ್ಧಪಡಿಸಲು ಸೂಚಿಸಲಾಗುತ್ತದೆ. ಕಂಪ್ಯೂಟರ್ ಲಾಂಗ್ವೇಜ್ ನಲ್ಲಿ ಹೇಳುವುದಾದರೆ output ನೀಡಿ input ಒದಗಿಸುವಂತೆ ಕೇಳುತ್ತಾರೆ. ಅದನ್ನು ನೀವು ಸರಿಯಾಗಿ ನಿರ್ವಹಿಸಿದ್ದಾದರೆ, 12.5 ಬಿಟ್ ಕಾಯಿನ್ ನಿಮ್ಮದಾಗುತ್ತವೆ.ಆರಂಭಿಕ ಹಂತದಲ್ಲಿ ಒಂದು Hash function ಬಗೆಹರಿಸಿದರೆ 50 ಬಿಟ್ ಕಾಯಿನ್ ದೊರೆಯುತ್ತಿದ್ದವು. ಈ ಸಮೀಕರಣಗಳನ್ನು ಬಿಡಿಸುವವರು ಹೆಚ್ಚಾದಂತೆ 25 ಬಿಟ್ ಕಾಯಿನ್‌ಗಳಿಗೆ ಇಳಿಸಲಾಯಿತು.

ಇಂದು ಬಿಟ್ ಕಾಯಿನ್ ಮೈನಿಂಗ್ ಸಂಖ್ಯೆ ಊಹಿಸಲಾಗದಷ್ಟು ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಬಿಟ್ ಕಾಯಿನ್ ದೊರೆಯುವಿಕೆಯೂ ಕಡಿಮೆಯಾಗಿದೆ. ಸಮೀಕರಣಗಳನ್ನು ಬಗೆಹರಿಸಲೆಂದೇ ಹಲವಾರು ಮೆಷಿನ್ನುಗಳ ತಯಾರಿಯೂ ಆಗಿದೆ. ಆ ಮೆಷಿನ್ನುಗಳು ಮಾರುಕಟ್ಟೆಯಲ್ಲಿ ದೊಡ್ಡದಾಗಿ ಸದ್ದು ಮಾಡುತ್ತಿವೆ. ಯಾವ ಮೆಷಿನ್ನಿದ್ದರೇನು? ಬಿಟ್ ಕಾಯಿನ್ ಸಿಗುತ್ತದೋ ಬಿಡುತ್ತದೋ ಎಂಬುದು ಎದುರಿದ್ದವನ ಬುದ್ಧಿಮತ್ತೆಯ ಮೇಲೆ ನಿರ್ಧರಿತವಾಗುತ್ತದೆ. ಅಷ್ಟು ತ್ರಾಸ ಬೇಡವೆಂದರೆ ಸುಮ್ಮನೆ ಎಷ್ಟು ಬೆಲೆಯಿದೋ ಅಷ್ಟನ್ನು ಕೊಟ್ಟು ಕೊಂಡುಕೊಳ್ಳಬಹುದು.

ಅಂಗೈಯಲ್ಲಿ ಬಿಟ್ ಕಾಯಿನ್ ಬ್ರಹ್ಮಾಂಡ:

ಬಿಟ್ ಕಾಯಿನ್ ವ್ಯವಹಾರದ ಪೂರ್ತಿ ದಾಖಲೆ ಎಲ್ಲರಿಗೂ ಲಭ್ಯವಿದೆ. ಇದೊಂದು ಸಾರ್ವಜನಿಕವಾಗಿ ಲಭ್ಯ ಇರುವ ತಂತ್ರಾಂಶ. ಬಳಕೆಯಲ್ಲಿರುವ ಎಲ್ಲಾ ಬಿಟ್ ಕಾಯಿನ್‌ಗಳ ಲೆಕ್ಕವು 'ಬ್ಲಾಕ್ ಚೈನ್' (BLOCK CHAIN) ಎಂದು ಕರೆಯುವ ವಿಶೇಷ ದಸ್ತಾವೇಜಿನಲ್ಲಿ ದಾಖಲಾಗಿರುತ್ತದೆ. ಕ್ಷಣಕ್ಷಣಕ್ಕೂ ನಡೆಯುವ ವ್ಯವಹಾರದ ಮಾಹಿತಿ ಇಲ್ಲಿ ಲಭ್ಯವಿರುತ್ತದೆ. ಒಬ್ಬ ವ್ಯಕ್ತಿ ತನ್ನ ಬಳಿಯಿದ್ದ 10 ಬಿಟ್ ಕಾಯಿನ್‌ಗಳಲ್ಲಿ 5ನ್ನು ಮತ್ತೊಬ್ಬರ ಹೆಸರಿಗೆ ವರ್ಗಾಯಿಸುತ್ತಾನೆ. ಆ ಕ್ಷಣವೇ ಇಬ್ಬರ ಅಕೌಂಟಿನಲ್ಲೂ ಅದು ದಾಖಲಾಗುತ್ತದೆ. ಅಷ್ಟರ ಮಟ್ಟಿಗೆ ಇಲ್ಲಿ 'ಕಪ್ಪು ಹಣ'ದ ಶೇಖರಣೆಗೆ ಅವಕಾಶವೇ ಇಲ್ಲದಂತಹ ವ್ಯವಸ್ಥೆಯೊಂದನ್ನು ಈ ಇಂಟರ್‌ನೆಟ್ ತಂತ್ರಜ್ಞಾನ ಸೃಷ್ಟಿಸಿದೆ.

ಸಾಂಪ್ರದಾಯಿಕ ನಾಣ್ಯಗಳಿಗೆ ಹೇಗೆ ಬೆಲೆ ನಿಗದಿಯಾಗುತ್ತದೆಯೋ, ಅದೇ ಮಾದರಿಯಲ್ಲಿ ಬಿಟ್ ಕಾಯಿನ್ ಮೌಲ್ಯವನ್ನೂ ಅಳೆಯಲಾಗುತ್ತದೆ. ದಿನದಿಂದ ದಿನಕ್ಕೆ ತನ್ನ ಬೇಡಿಕೆಯನ್ನು ದ್ವಿಗುಣಗೊಳ್ಳಿಸಿಕೊಳ್ಳುತ್ತಿರುವ ಬಿಟ್ ಕಾಯಿನ್, ಅಷ್ಟೇ ವೇಗದಲ್ಲಿ ಮೌಲ್ಯವನ್ನೂ ವೃದ್ಧಿಸಿಕೊಳ್ಳುತ್ತಿದೆ. ಅದರ ಮಾಹಿತಿ ಮೇಲೆ ನೀವು ಓದಿದ್ದೀರಿ.

ಕಾನೂನಿನ ಹಂಗಿಲ್ಲ, ತೆರಿಗೆ ಭಯವಿಲ್ಲ:

ಬಿಟ್ ಕಾಯಿನ್ ಖಾತೆ ತೆರೆಯುವಾಗ ಯಾವುದೇ ವೈಯಕ್ತಿಕ ವಿವರ ನೀಡಬೇಕಿಲ್ಲ; ಅನಾಮಿಕರಾಗಿಯೇ ಇಲ್ಲಿ ವಹಿವಾಟು ನಡೆಸಬಹುದು. ವಹಿವಾಟು ನಡೆಸುವವರ ಹೊರತು ಇನ್ನಾರಿಗೂ ಅದರ ಮಾಹಿತಿ ದೊರೆಯುವುದಿಲ್ಲ. ವೈಯಕ್ತಿಕ ವಿವರಗಳನ್ನು ನೀಡದಿರುವುದರಿಂದ ಪತ್ತೆ ಹಚ್ಚುವುದೂ ಕಷ್ಟಸಾಧ್ಯ. ಡೀಸೆಂಟ್ರಲೈಸ್ಡ್ ಆದ ಕಾರಣ, ಯಾವುದೇ ರಾಷ್ಟ್ರದ ವಿದೇಶಾಂಗ ನೀತಿಗಳು, ಬ್ಯಾಂಕಿಂಗ್ ನಿಯಮಗಳು, ಆದಾಯ ತೆರಿಗೆಯ ಭಯ, ಅಡ್ಡಿ ಅತಂಕಗಳು ಇದಕ್ಕಿಲ್ಲ.

ಜಗತ್ತಿನ ಯಾವ ಮೂಲೆಯಿಂದ ಯಾವ ಮೂಲೆಗೆ ಬೇಕಾದರೂ ನಿಮಿಷಗಳೊಳಗೆ ಹಣ ವರ್ಗಾವಣೆ ಮಾಡಬಹುದು. ಸರಕು-ಸರಂಜಾಮುಗಳನ್ನೂ ಬಿಟ್ ಕಾಯಿನ್ ಮೂಲಕ ಕೊಳ್ಳಬಹುದು. ಯಾವುದೇ ದೇಶದ ಅಧಿಕೃತ ಕರೆನ್ಸಿಯನ್ನು ವಿನಿಮಯ ಮಾಡಿಕೊಳ್ಳಬಹುದು. ಮಧ್ಯವರ್ತಿಗಳಂತೆ ಕೆಲಸ ಮಾಡುವ ಬ್ಯಾಂಕುಗಳು ಇಲ್ಲವಾದ್ದರಿಂದ ಬ್ಯಾಂಕಿಂಗ್ ಕಮೀಷನ್ ಕೂಡ ಉಳಿತಾಯವಾಗುತ್ತದೆ.

ಆದಾಯ ತೆರಿಗೆ ಇಲಾಖೆಗೆ ತಲೆ ನೋವಾದ ಬಿಟ್ ಕಾಯಿನ್:

2014ರಲ್ಲಿ ಪ್ರಧಾನಿ ಮೋದಿ mygovt.in ಎಂಬ ಜಾಲತಾಣವನ್ನು ಉದ್ಘಾಟಿಸಿ, ಜನರಿಂದ ಬಿಟ್ ಕಾಯಿನ್‌ಗಳನ್ನು ನಿಷೇಧಿಸುವ, ನಿಯಂತ್ರಿಸುವ ಅಥವಾ ಸ್ವಯಂ ನಿಯಂತ್ರಣಕ್ಕೆ ಒಳಪಡಿಸಿಕೊಳ್ಳುವ ವಿಚಾರದಲ್ಲಿ ಅಭಿಪ್ರಾಯಗಳನ್ನು ನೀಡುವಂತೆ ಮನವಿ ಮಾಡಿದ್ದರು. ಇದೀಗ ಆರ್‌ಬಿಐ ಈ 'ಕ್ರಿಪ್ಟೋ ಕರೆನ್ಸಿ'ಯ ಮೇಲೆ ಹಿಡಿತ ಸಾಧಿಸುವ ಪ್ರಯತ್ನದಲ್ಲಿದೆ. ಆದರೆ ಸರಿಯಾದ ನಿಯಮಗಳಿಲ್ಲದೇ ರಿಸರ್ವ್ ಬ್ಯಾಂಕ್, ಆದಾಯ ತೆರಿಗೆ ಇಲಾಖೆಗಳು ಒದ್ದಾಡುತ್ತಿವೆ.ಇದರ ಜತೆಗೆ ಅರ್‌ಬಿಐ ಎಚ್ಚರಿಕೆ ಪ್ರಕಟಣೆ ಹೊರಡಿಸುತ್ತಿದ್ದಂತೆ, ‘ಬ್ಲಾಕ್ ಚೈನ್ ಅಂಡ್ ವರ್ಚುವಲ್ ಕರೆನ್ಸಿ ಅಸೋಸಿಯೇಷನ್ ಆಫ್ ಇಂಡಿಯಾ’ ಎಂಬ ಸಂಘಟನೆಯೊಂದು ಹುಟ್ಟಿಕೊಂಡಿದೆ.

ಇನ್ನು 2103ರಲ್ಲಿ ಈ ಡಿಜಿಟಲ್ ನಾಣ್ಯಕ್ಕೆ ಸಂಬಂಧಿಸಿದ 4 ಕಂಪನಿಗಳು ಭಾರತದಲ್ಲಿ ಕೆಲಸ ನಿರ್ವಹಿಸುತ್ತಿದ್ದವು. ಇಂದು ಅವುಗಳ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಕರ್ನಾಟಕದ ಜನರೇನು ಇದರಲ್ಲಿ ಹಿಂದೆ ಉಳಿದಿಲ್ಲ. ಯುನೊ ಕಾಯಿನ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ ತುಮಕೂರಿನಲ್ಲಿದೆ. ಬೆಂಗಳೂರಿನ ಸಾಫ್ಟ್‌ವೇರ್ ದಂಪತಿಗಳಿಬ್ಬರು ತಮ್ಮ ಮದುವೆಯ ಉಡುಗೊರೆಯನ್ನು ಬಿಟ್ ಕಾಯಿನ್‌ಗಳಲ್ಲಿಯೇ ಪಡೆದುಕೊಂಡಿದ್ದಾರೆ. ಬಂದಿದ್ದ 200 ಅತಿಥಿಗಳ ಪೈಕಿ ಶೇ.95ರಷ್ಟು ಮಂದಿ ಬಿಟ್ ಕಾಯಿನ್ ಮುಯ್ಯಿ ಹಾಕಿದ್ದಾರೆ. ಹೀಗೆ ಇವುಗಳ ವ್ಯವಹಾರ ಸಾಮಾನ್ಯ ಜನರನ್ನೂ ತಲುಪುತ್ತಿದೆ.ಅಮೆರಿಕಾ ಬಿಟ್ ಕಾಯಿನ್ ವ್ಯವಹಾರವನ್ನು ಅಧಿಕೃತವೆಂದೂ ಘೋಷಿಸಿಕೊಂಡಿದೆ. ಆದರೆ ಭಾರತದಂತಹ ರಾಷ್ಟ್ರಗಳು ಇದರಿಂದ ಮುಂದಾಗಬಹುದಾದ ಪರಿಣಾಮಗಳಿಗೆ ಅಂಜಿ, ಬಿಟ್ ಕಾಯಿನ್ ಮೇಲೆ ನಿಯಂತ್ರಣ ಹೇರಲು ದಾರಿ ಹುಡುಕುತ್ತಿವೆ. ಈಗಾಗಲೇ ಈ ರೀತಿಯ ಕರೆನ್ಸಿಗಳು ಸಮಾಜ ಘಾತುಕ ಕೆಲಸಗಳಿಗೆ ಬಳಕೆಯಾಗುತ್ತಿರುವುದು, ತೆರಿಗೆ ವಂಚನೆಗೆ ಸಹಾಯಕವಾಗುತ್ತಿರುವುದು ಸರಕಾರದ ನಿದ್ದೆಗೆಡಿಸಿದೆ.

ಸರಕಾರವೊಂದರ ಕರೆನ್ಸಿ ವ್ಯವಸ್ಥೆಗೆ ಪರ್ಯಾಯವೊಂದು ಸೃಷ್ಟಿಯಾದಾಗ ಏನಾಗಬಹುದು ಎಂಬುದಕ್ಕೆ ಬಿಟ್ ಕಾಯಿನ್ ಒಂದು ತಾಜಾ ಉದಾಹರಣೆ. ಏನೇ ಆಗಲಿ, ಬಿಟ್ ಕಾಯಿನ್‌ಗಳ ಜನಕ ಸಂತೋಷಿ ನಾಕಮೊಟೊ ಹೇಳಿರುವ ಪ್ರಕಾರ, ನಾವು 21 ಮಿಲಿಯನ್ ಬಿಟ್ ಕಾಯಿನ್‌ಗಳನ್ನಷ್ಟೇ ಸೃಷ್ಟಿಸಬಹುದು. ಈಗಾಗಲೇ ಅದರಲ್ಲಿ 16 ಮಿಲಿಯನ್ ಬಿಟ್ ಕಾಯಿನ್‌ಗಳು ಚಲಾವಣೆಗೆ ಲಭ್ಯವಾಗಿವೆ. ಉಳಿದಿರುವುದು 5 ಮಿಲಿಯನ್ ಗಳಷ್ಟೇ. ಹಣ ಮಾಡುವ ಆಸಕ್ತಿ ಇದ್ದವರು ಬಿಟ್‌ ಕಾಯಿಲ್‌ ಖಜಾನೆಗೆ ಕೈ ಹಾಕಿ ಅದೃಷ್ಟ ಪರೀಕ್ಷಿಸಿಕೊಳ್ಳಬಹುದು. ಆದರೆ ನಿಮ್ಮ ಬುದ್ಧಿ ಮತ್ತೆ ಮತ್ತು ಸಿದ್ಧತೆಯೂ ಜೋರಾಗಿಯೇ ಇರಬೇಕಾಗುತ್ತದೆ.