samachara
www.samachara.com
'ರೈಟ್‌ ಮ್ಯಾನ್‌ ಇನ್‌ ದಿ ರಾಂಗ್‌ ಪಾರ್ಟಿ'; ಅಟಲ್‌ ಬಿಹಾರಿ ವಾಜಪೇಯಿ ಈಗ ಹೇಗಿದ್ದಾರೆ...?
ಸುದ್ದಿ ಸಾಗರ

'ರೈಟ್‌ ಮ್ಯಾನ್‌ ಇನ್‌ ದಿ ರಾಂಗ್‌ ಪಾರ್ಟಿ'; ಅಟಲ್‌ ಬಿಹಾರಿ ವಾಜಪೇಯಿ ಈಗ ಹೇಗಿದ್ದಾರೆ...?

ಮೊನ್ನೆ ಡಿಸೆಂಬರ್ 25; ಭಾರತದ ಮಾಜಿ ಪ್ರಧಾನಿ, ಶ್ರೇಷ್ಠ ವಾಘ್ಮಿ, ಕವಿ ಹೃದಯಿ ಅಟಲ್‌ ಬಿಹಾರಿ ವಾಜಪೇಯಿ ಜನ್ಮದಿನ. ಅಂದು ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಸಣ್ಣದಾಗಿ ಸುದ್ದಿಯಾಗಿ ಕಾಣಿಸಿಕೊಳ್ಳುವ ವಾಜಪೇಯಿ ನಿಜಕ್ಕೂ ಹೇಗಿದ್ದಾರೆ? ಅವರ ಆರೋಗ್ಯದಲ್ಲಿ ಏನಾಗಿದೆ? ಅವರ ಕುರಿತು ಬೇರೆಯವರು ಹೋಗಲಿ, ಸ್ವತಃ ಬಿಜೆಪಿಯವರೇ ಹೆಚ್ಚು ಮಾತನಾಡುತ್ತಿಲ್ಲ. ಅವರ ಹುಟ್ಟುಹಬ್ಬದಂದು ಮಾತ್ರ ನೆನಪಿಸಿಕೊಳ್ಳುವ ಮಟ್ಟಕ್ಕೆ ಕೇಸರಿ ಪಕ್ಷದ ಮತ್ಸದ್ಧಿ ರಾಜಕಾರಣಿ ಎಂದು ಬಿಂಬಿಸಲ್ಪಟ್ಟ ನೇತಾರರೊಬ್ಬರ ಸ್ಥಿತಿ ಬಂದು ಬಿಟ್ಟಿದೆ.

ವಾಜಿಪೇಯಿ ಮಂಡಿಚಿಪ್ಪು ಬದಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಗೊತ್ತು. 2009ರಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿ ಮಾತನಾಡುವ ಶಕ್ತಿಯನ್ನೂ ಕಳೆದುಕೊಂಡಿದ್ದಾರೆ. ಜನರನ್ನು ಗುರುತಿಸಲಾರದ ಸ್ಥಿತಿಯಲ್ಲಿ ಇದ್ದಾರೆ ಎಂಬೆಲ್ಲ ವಿಷಯಗಳು ಆಗಾಗ್ಗೆ ಕಿವಿ ಮೇಲೆ ಬೀಳುತ್ತಿವೆ. ಸಕ್ಕರೆ ಕಾಯಿಲೆಯಿಂದಲೂ ಬಳಲುತ್ತಿರುವ ಅವರ ಆರೋಗ್ಯ ತುಂಬ ಹದಗೆಟ್ಟಿದೆ ಎಂದೆಲ್ಲ ಸುದ್ದಿಗಳು ಅಲ್ಲಲ್ಲಿ ಬಂದರೂ, ವಾಜಿಪೇಯಿ ಕುರಿತು ನಿಖರವಾಗಿ ಹೀಗೆಯೇ ಎಂದು ಹೇಳುವವರು ಯಾರೂ ಇಲ್ಲ. ಬಿಜೆಪಿಯೇ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ, ತನ್ನ ನಾಯಕನನ್ನು ಹೆಚ್ಚು ನೆನಪಿಸಿಕೊಳ್ಳುವ, ಅವರ ಆರೋಗ್ಯದ ಕುರಿತು ದೇಶವಾಸಿಗಳಿಗೆ ಮಾಹಿತಿ ಕೊಡುವ ಪರಿಪಾಠವನ್ನು ಬಿಟ್ಟುಬಿಟ್ಟಿದೆ.

ಮೂರುಬಾರಿ ಪ್ರಧಾನಿ ಪಟ್ಟ ಅಲಂಕರಿಸಿ, ದೇಶ ಕೊಂಡಾಡುವ ದಿಟ್ಟ ಕ್ರಮಗಳನ್ನು ಕೈಗೊಂಡವರು ವಾಜಪೇಯಿ. ತಮ್ಮ ಮಾತುಗಾರಿಕೆ, ಸರಳ ವ್ಯಕ್ತಿತ್ವದಿಂದಲೇ ತಮ್ಮ ರಾಜಕೀಯ ವಿರೋಧಿಗಳ ಮನಸ್ಸನ್ನೂ ಗೆದ್ದ ಅಪರೂಪದ ನಾಯಕ ಅವರು."ಅದ್ಹೇಗೆ ಇಷ್ಟು ಸೊಗಸಾಗಿ ಮಾತನಾಡ ಬಲ್ಲಿರಿ ಅಟಲ್‌ಜೀ. ನಿಮ್ಮರಾಜಕೀಯ ಭಾಷಣ ಕೂಡ ಎಷ್ಟು ಸಾಹಿತ್ಯ ಮಯವಾಗಿರುತ್ತದೆ.ನಿಮ್ಮ ಮಾತುಗಳನ್ನು ಕೇಳುತ್ತಲೇ ಇರಬೇಕೆನಿಸುತ್ತದೆ' ಎಂದು ಮಾಜಿ ಪ್ರಧಾನಿ ನೆಹರೂ ಅವರು ಒಮ್ಮೆ ವಾಜಪೇಯಿ ಅವರಿಗೆ ಹೇಳಿದ್ದು ಅಂದಿನ ಪತ್ರಿಕೆಗಳಲ್ಲಿ ವರದಿಯಾಗಿತ್ತು.

1971ರ ಯುದ್ಧದಲ್ಲಿ ಭಾರತ ಗೆದ್ದಾಗ, ಇಂದಿರಾ ಗಾಂಧಿ ಅವರನ್ನು ದುರ್ಗೆ ಎಂದು ಬಣ್ಣಿಸಿ, ಸಂಸತ್ತಿನಲ್ಲಿ ಕೊಂಡಾಡಿದ್ದವರು ವಾಜಪೇಯಿ. ಆ ಸಮಯಲ್ಲಿ ಅವರು ಸಂಸತ್‌ನಲ್ಲಿ ಮಾಡಿದ ಭಾಷಣ ಜನಪ್ರಿಯವಾಗಿತ್ತು.ಕಾಂಗ್ರೇಸೇತರ ಪ್ರಧಾನ ಮಂತ್ರಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ವಾಜಪೇಯಿ, ಬಿಜೆಪಿಯ ಸೌಮ್ಯವಾದಿ ನಾಯಕ ಎಂದು ಗುರುತಿಸಿಕೊಂಡೇ ಬಂದವರು.

ಎಲ್ಲಕ್ಕಿಂತ ಮುಖ್ಯವಾಗಿ, ಇಂದು ಎಡ-ಬಲಗಳ ನಡುವೆ ತೀವ್ರ ಸಂಘರ್ಷ ಇರುವಂಥ ದಿನಗಳಲ್ಲಿ; ಪ್ರತಿಸಾವು, ಪ್ರತಿ ಘಟನೆಗಳನ್ನೂ ರಾಜಕೀಯ ಪ್ರೇರಿತವಾಗಿಯೇ ನೋಡುವ ಈ ಸಂದರ್ಭದಲ್ಲಿ; ವಾಜಪೇಯಿ ನಾನಾ ಕಾರಣಗಳಿಗಾಗಿ ನೆನಪಾಗುತ್ತಾರೆ. ಅದು ಬಾಬ್ರಿ ಮಸೀದಿ ಧ್ವಂಸ ಪ್ರಕರಣವಿರಬಹುದು, ಗೋದ್ರೋತ್ತರ ಗುಜರಾತ್ ನರಮೇಧ ಇರಬಹುದು. ಈ ಸಮಯದಲ್ಲಿ ಬಿಜೆಪಿಯಲ್ಲಿದ್ದೂ, ವಾಜಿಪೇಯಿ ತಳೆದ ನಿಲುವುಗಳು ಇತಿಹಾಸದಲ್ಲಿ ದಾಖಲಾಗಿವೆ. ವಿರೋಧ ಪಕ್ಷದವರನ್ನು ಅವರ ನೀತಿ ನಿಯಮಗಳ ಕಾರಣಕ್ಕೆ ಟೀಕೆ ಮಾಡುತ್ತಿದ್ದರೇ ವಿನಾ, ವಾಜಿಪೇಯಿ ಯಾವತ್ತೂ ವೈಯಕ್ತಿಕ ನಿಂದನೆಗೆ ಇಳಿದವರಲ್ಲ. ವಾಜಪೇಯಿಯವರ ಈ ನಿಲುವನ್ನುಇತರ ಪಕ್ಷಗಳು ಹೋಗಲಿ, ಸ್ವತಃ ಬಿಜೆಪಿಯ ಮಹಾನ್ ನಾಯಕರು ಇವತ್ತಿಗೆ ಮರೆತಿದ್ದಾರೆ.

ಮೃದುತ್ವದಲ್ಲೊಂದು ಕಾಠಿಣ್ಯ: 

ಅದು 2001 ಸೆಪ್ಟೆಂಬರ್ 11ರ ಸಮಯ. ಅಮೆರಿಕದ ವಿಶ್ವ ವಾಣಿಜ್ಯ ಕಟ್ಟಡದ ಮೇಲೆ ವೈಮಾನಿಕ ದಾಳಿ ನಡೆಯಿತು. ಇಡೀ ವಿಶ್ವವನ್ನೇ ನಡುಗಿಸಿದ ಘಟನೆಯಾಗಿತ್ತು. ಆ ಹೊತ್ತಲ್ಲಿ ಅಮೆರಿಕದ ಆಗಿನ ಅಧ್ಯಕ್ಷ ಜಾರ್ಜ್‌ ಬುಷ್ ಆಕ್ರೋಶದಿಂದ, ಜಾಗತಿಕ ಭಯೋತ್ಪಾದಕರ ಕೈವಾಡವಿದೆ ಎಂದು ಆರೋಪಿಸಿದರು. ಭಯೋತ್ಪಾದನೆಯನ್ನು ಇಡೀ ವಿಶ್ವದಿಂದಲೇ ಮೂಲೋತ್ಪಾಟನೆ ಮಾಡುವುದು ಇನ್ನು ಮುಂದೆ ತಮ್ಮ ಗುರಿ ಎಂದು ಘೋಷಿಸಿದ್ದರು.

ಆ ಘಟನೆಯ ನಂತರದಲ್ಲಿ ಜನವರಿ 26 ರಗಣರಾಜ್ಯೋತ್ಸವದ ಸಮಯದಲ್ಲಿ ಭಾರತದ ಆಗಿನ ಪ್ರಧಾನಿ ವಾಜಪೇಯಿಯ ಭಾಷಣದಲ್ಲಿ ಭಯೋತ್ಪಾದನೆಯ ವಿಚಾರವನ್ನು ಪ್ರಸ್ತಾಪಸಿದರು. ಅಂದು, ನೇರವಾಗಿ ಅಮೆರಿಕವನ್ನೇ ದೃಷ್ಟಿಯಲ್ಲಿಟ್ಟುಕೊಂಡು ಮಾತನಾಡಿದ ವಾಜಪೇಯಿ, "ನಿಮ್ಮ ವಾಣಿಜ್ಯ ಕಟ್ಟಡದ ಮೇಲಿನ ದಾಳಿಯಿಂದಾಗಿ ಈಗ ನಿಮಗೆ ಭಯೋತ್ಪಾದನೆಯ ಅರಿವು ಬರುತ್ತಿದೆ.ಆದರೆ ಭಾರತ ಕಳೆದ 40 ವರ್ಷಗಳಿಂದ ಭಯೋತ್ಪಾದನೆಯ ಕರಿ ನೆರಳಲ್ಲೇ ಬದುಕುತ್ತಿದೆಯಲ್ಲ. ನಮ್ಮ ಸುಂದರ ಪ್ರದೇಶ ಕಾಶ್ಮೀರ ಭಯೋತ್ಪಾದನೆಯ ಆಡೊಂಬಲವಾಗಿ ಅದೆಷ್ಟು ವರ್ಷಗಳಾಗಿಲ್ಲ? ಅದೆಷ್ಟು ಅಮಾಯಕರ ಬಲಿದಾನವಾಗಿಲ್ಲ? ಈ ಕುರಿತು ಭಾರತ ನಿಮ್ಮ ನೆರವು ಕೇಳಿದಾಗಲೆಲ್ಲ ನೀವು ನಿರಾಕರಿಸುತ್ತಲೇ ಬಂದಿದ್ದೀರಿ. ಆಗ ನಿಮಗೆ ಭಯೋತ್ಪಾದನೆಯಿಂದಾಗಿ ನಾವು ಅನುಭವಿಸುತ್ತಿದ್ದ ನಮ್ಮಸಂಕಟಗಳು ಅರ್ಥವಾಗಲಿಲ್ಲವೇ?ಈಗ ನಿಮ್ಮದೇ ನೆಲದಲ್ಲಾದ ಈ ದುರಂತ ನಿಮ್ಮನ್ನು ನಿದ್ದೆಗೆಡಿಸುತ್ತಿದೆ.ಇಡೀ ವಿಶ್ವದಿಂದಲೇ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ಕುರಿತು ಮಾತನಾಡುತ್ತಿದ್ದೀರಿ. ಆದರೆ ಮಾನವೀಯ ಮೌಲ್ಯಗಳಿರುವ ಈ ನೆಲದಲ್ಲಿ ಮಾನವೀಯ ಮೌಲ್ಯಗಳನ್ನು ಮರುಸ್ಥಾಪಿಸಬೇಕೇ ಹೊರತು ಭಯೋತ್ಪಾದನೆಯ ವಿಷಬೀಜವನ್ನು ಬಿತ್ತುವುದಲ್ಲ. ಈ ವಿಷ ಬೀಜವನ್ನುಕಿತ್ತೊಗೆಯಲು ನಮ್ಮೊಂದಿಗೆ ಕೈಜೋಡಿಸಿ. ಭಯೋತ್ಪಾದನೆಯ ವಿರುದ್ಧವೇ ಭಾರತದ ಸಮರ ಎಂಬುದನ್ನು ಯಾವಾಗಿನಿಂದಲೂ ಹೇಳುತ್ತಲೇ ಬಂದಿದೆ,'' ಎಂದು ಹೇಳಿದ್ದರು. ವಾಜಪೇಯಿಯವರ ಅಂದಿನ ಈ ಮಾತುಗಳು ವಿಶ್ವಾದ್ಯಂತ ಸದ್ದು ಮಾಡಿತ್ತು.

ಗುಜರಾತ್‌ನಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮುಸ್ಲಿಂರ ಮಾರಣಹೋಮ ನಡೆದಾಗ ಕೇಂದ್ರದಲ್ಲಿ ಪ್ರಧಾನಿಯಾಗಿದ್ದವರು ವಾಜಿಪೇಯಿ. 2002ರಲ್ಲಿ ನಡೆದ ಈ ಭೀಭತ್ಸ ಘಟನೆಯ ನಂತರ ಅಂದು ಗುಜರಾತ್ ಮುಖ್ಯಮಂತ್ರಿ ಸ್ಥಾನದಲ್ಲಿದ್ದ ನರೇಂದ್ರ ಮೋದಿ ರಾಜೀನಾಮೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಗು ಕೇಳಿಬಂದಿತ್ತು. 'ಎ ರೈಟ್ ಮ್ಯಾನ್‌ ಇನ್ ರಾಂಗ್‌ ಪಾರ್ಟಿ' ಅನ್ನಿಸಿಕೊಂಡು ಬಂದ ವಾಜಿಪೇಯಿ, ದಿಟ್ಟ ಕ್ರಮ ಕೈಗೊಳ್ಳುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಅಂದು 'ರಾಜಧರ್ಮ' ಪಾಲಿಸುವಂತೆ ಮುಖ್ಯಮಂತ್ರಿ ಮೋದಿಯವರಿಗೆ  ಸೂಚಿಸಿದರು. ಅಂದಿಗೆ ವಾಜಿಪೇಯಿ ಪಕ್ಷದ ಮೇಲೆ, ಬಿಜೆಪಿಯನ್ನು ನಿಯಂತ್ರಿಸುವ ಸಂಘಪರಿವಾರದ ಅಂಕೆಗೆ ತಕ್ಕ ನಿರ್ಧಾರ ತೆಗೆದುಕೊಳ್ಳುವ ಮೂಲಕ ಮೊದಲ ಬಾರಿಗೆ, ನರಹತ್ಯೆಯ ಕಪ್ಪು ಚುಕ್ಕೆಯೊಂದು ಅಂಟಿಕೊಂಡಿತು.

ವಾಜಿಪೇಯಿ ಕವಿ ಹೃದಯಿ. ರಾಜಕೀಯ ಮೀರಿದ ಸಾಹಿತ್ಯಾಸಕ್ತಿ ಅವರಿಗಿತ್ತು. ನೀವು ಮುಂದೊಂದು ದಿನ ಮಾಜಿ ಪ್ರಧಾನಿ ಆಗಬಲ್ಲಿರಿ.ಆದರೆ ಎಂದಿಗೂ ಮಾಜಿ ಕವಿಗಳಾಗಲು ಸಾಧ್ಯವಿಲ್ಲ ಎಂದು ಸ್ವತಃ ವಾಜಪೇಯಿಯವರೇ ಹೇಳಿದ್ದರು. "ಅಟಲ್ ಭಾಷಣದ ಮುಂದೆ ನಾವು ಮಾತನಾಡೋಕೆ ನಿಂತರೆ ಕೀಳರಿಮೆ ಉಂಟಾಗುತ್ತದೆ," ಎಂದು ಅಡ್ವಾಣಿ 1970ರಷ್ಟು ಹಿಂದೆಯೇ ಹೇಳಿದ್ದರು.

ಗ್ವಾಲಿಯರ್‌ನಿಂದ ಪ್ರಧಾನಿ ಪಟ್ಟದವರೆಗೆ: 

ವಾಜಪೇಯಿ 1924 ಡಿಸೆಂಬರ್ 25ರಂದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಹುಟ್ಟಿದರು.ತಂದೆ ಕೃಷ್ಣ ಬಿಹಾರಿ ವಾಜಪೇಯಿ ಶಿಕ್ಷಕರಾಗಿದ್ದರು. ತಾಯಿ ಕೃಷ್ಣಾದೇವಿ. ಗ್ವಾಲಿಯರ್‌ನಲ್ಲಿಯೇ ಆರಂಭಿಕ ವಿದ್ಯಾಭ್ಯಾಸ ಪೂರೈಸಿದ ಅಟಲ್,  ನಂತರ ಪದವಿಯನ್ನು ಅಲ್ಲಿನ ವಿಕ್ಟೋರಿಯಾ ಕಾಲೇಜಿನಲ್ಲಿ ಪಡೆದರು. ಹಿಂದಿ, ಇಂಗ್ಲಿಷ್ ಮತ್ತು ಸಂಸ್ಕೃತದಲ್ಲಿ ಪದವಿ ಪಡೆದ ಅವರಯ, ರಾಜಕೀಯ ಶಾಸ್ತ್ರದಲ್ಲಿ ಸ್ನಾತ್ತಕೋತ್ತರ ಪದವಿ ಮುಗಿಸಿದರು. ನಂತರ ಹಿಂದಿ ಮಾಸಿಕ 'ರಾಷ್ಟ್ರಧರ್ಮ', 'ಪಾಂಚಜನ್ಯ' (ಇದು ವಾರಪತ್ರಿಕೆ) ಮತ್ತು ದೈನಿಕಗಳಾದ 'ಸ್ವದೇಶ್' ಮತ್ತು 'ವೀರ್ ಅರ್ಜುನ'ಗಳಿಗೆ ಬರೆಯುತ್ತಿದ್ದರು. ರಾಷ್ಟ್ರಧರ್ಮ ಮತ್ತು ಪಾಂಚಜನ್ಯ ಪತ್ರಿಕೆಗಳಿಗೆ ವಾಜಪೇಯಿ ಸಂಪಾದಕರೂ ಆಗಿದ್ದರು.

ಬ್ರಿಟಿಷ್ ವಸಾಹತುಶಾಹಿ ಆಡಳಿತವನ್ನು ವಿರೋಧಿಸಿದ್ದಕ್ಕೆ ಅವರು ಹರೆಯದಲ್ಲೇ ಸ್ವಲ್ಪಕಾಲ ಜೈಲುವಾಸ ಅನುಭವಿಸಿದ್ದರು. 1942-45ರ ಕ್ವಿಟ್ ಇಂಡಿಯಾ ಚಳವಳಿಯ ಹೊತ್ತಲ್ಲಿ ವಾಜಪೇಯಿ ಪೂರ್ಣಪ್ರಮಾಣದ ರಾಜಕೀಯಕ್ಕೆ ಧುಮುಕಿದರು. ಮೊದಲಿಗೆ ಕಮ್ಯುನಿಸ್ಟ್‌ ಚಳವಳಿಯ ಗುರುತಿಸಿಕೊಂಡಿದ್ದ ಅಟಲ್, ನಂತರ ಆರ್‌ಎಸ್‌ಎಸ್‌ ಸೇರಿದರು. ಭಾರತೀಯ ಜನ ಸಂಘದ ಸ್ಥಾಪಕ, ಶ್ಯಾಮ ಪ್ರಸಾದ್ ಮುಖರ್ಜಿ ಅವರ ಆಪ್ತ ಅನುಯಾಯಿಯಾಗುವ ಮೂಲಕ ದೇಶದ ಬಲಪಂಥೀಯ ರಾಜಕೀಯದ ಆರಂಭದ ಅಧಿಕಾರದ ದಿನಗಳಲ್ಲಿ ನಾಯಕರಾಗಿ ಹೊರಹೊಮ್ಮಿದರು.

1957ರಲ್ಲಿ ಪ್ರಥಮ ಬಾರಿಗೆ ಸಂಸದರಾಗಿ ಆಯ್ಕೆಯಾದರು. 1970ರ ದಶಕದ ಕೊನೆಯಲ್ಲಿ ಮೊರಾರ್ಜಿ ದೇಸಾಯಿ ಸರ್ಕಾರದಲ್ಲಿ ವಾಜಪೇಯಿ ವಿದೇಶಾಂಗ ಸಚಿವರಾಗಿದ್ದರು. ಆಗಲೇ ಅವರು ಭಾರತ- ಪಾಕಿಸ್ತಾನ ನಡುವಣ ಬಾಂಧವ್ಯಕ್ಕೆ ಹೊಸ ಭಾಷ್ಯ ಬರೆಯಲು ವೇದಿಕೆ ಸಿದ್ಧಗೊಳಿಸಿದ್ದರು. ಈ ಸಮಯದಲ್ಲಿ ಅವರ ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಹಿಂದಿಯಲ್ಲಿ ಮಾಡಿದ ಭಾಷಣ ಅವರಿಗೆ ಸಾಕಷ್ಟು ಕೀರ್ತಿ ತಂದುಕೊಟ್ಟಿತು.

ಅವರ ದಿಟ್ಟನಿಲುವುಗಳು:

ಅಕ್ಟೋಬರ್ 13, 1999ರಲ್ಲಿ ಕೇಂದ್ರದಲ್ಲಿ ಹೊಸ ಸಮ್ಮಿಶ್ರ ಸರ್ಕಾರವನ್ನು ರಚಿಸಿದ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮುಖ್ಯಸ್ಥರಾಗಿ 2ನೇ ಬಾರಿ ಭಾರತದ ಪ್ರಧಾನಮಂತ್ರಿಯಾಗಿ ಅಧಿಕಾರ ನಿರ್ವಹಿಸಿದರು. 1996ರಲ್ಲಿ ಇವರು 13 ದಿನಗಳಿಗೆ ಪ್ರಧಾನ ಮಂತ್ರಿಯಾಗಿದ್ದರು. 1998ರಲ್ಲಿ ಎರಡನೇ ಬಾರಿ ಪ್ರಧಾನಿಯಾದರೂ ಅದುಕೂಡ 13 ತಿಂಗಳವರೆಗೆ ಮಾತ್ರಇತ್ತು. 1999ರಲ್ಲಿ ಮರು ಆಯ್ಕೆಯಾಗಿ ಪೂರ್ತಿ 5 ವರ್ಷಗಳ ಕಾಲ ಅಧಿಕಾರ ನಡೆಸಿದರು.

ಪೋಖ್ರಾನ್‌ ಅಣ್ವಸ್ತ್ರ ಪರೀಕ್ಷೆ, ಪಾಕಿಸ್ತಾನದೊಂದಿಗೆ ಬಾಂಧವ್ಯ ಬಸೆಯುವ ಸಾರಿಗೆ ವ್ಯವಸ್ಥೆ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ಸುವರ್ಣ ಚತುಷ್ಫಥ ಯೋಜನೆ, ಸರ್ವಶಿಕ್ಷಾ ಅಭಿಯಾನ ಇವೆಲ್ಲ ವಾಜಪೇಯಿ ಪ್ರಧಾನಿಯಾಗಿದ್ದಾಗ ಜಾರಿಗೊಂಡ ಮಹತ್ವದ ಯೋಜನೆಗಳು.

ಪಕ್ಷದ ಸಿದ್ಧಾಂತಗಳೇನೇ ಇರಲಿ, ವಾಜಪೇಯಿಅವರು ಮಾತ್ರ ತಮ್ಮ ಸ್ವಂತ ನಿಲುವನ್ನೇ ಸದಾಕಾಲ ಪ್ರತಿಪಾದಿಸುತ್ತಿದ್ದರು.ಇದಕ್ಕೆ ಚೊಕ್ಕ ಉದಾಹರಣೆ 1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ನಡೆದ ಬಾಬರಿ ಮಸೀದಿ ಧ್ವಂಸ ಪ್ರಕರಣ. ಆ ಸಂದರ್ಭದಲ್ಲಿ ಅವರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ಎಲ್. ಕೆ. ಅಡ್ವಾಣಿ ಮತ್ತು ಬಿಜೆಪಿ ಇತರ ನಾಯಕರು ಈ ಪ್ರಕರಣವನ್ನು ಸಮರ್ಥಿಸಿಕೊಂಡಿದ್ದರೆ ವಾಜಪೇಯಿ ಮಾತ್ರ ಇದನ್ನು ಖಂಡಿಸಿದ್ದರು. ಆದರೆ, 2002ರಲ್ಲಿ ಗೋಧ್ರಾ ಘಟನೆ ನಂತರ ನಡೆದ ನರಮೇಧದ ಸಂದರ್ಭದಲ್ಲಿ ಪ್ರಧಾನಿಯಾಗಿದ್ದರೂ, ಗಟ್ಟಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಸೋತು ಹೋದರು.

ಲೋಕಸಭೆಗೆ ಸತತ 9 ಬಾರಿ ಹಾಗೂ ರಾಜ್ಯಸಭೆಗೆ 2 ಬಾರಿ ಆಯ್ಕೆಯಾಗಿದ್ದ ವಾಜಿಪೇಯಿ, 2015ರಲ್ಲಿ ಭಾರತ ರತ್ನ ಪ್ರಶಸ್ತಿ ಸ್ವೀಕರಿಸಿದರು. ಈ ಸಮಯದಲ್ಲಿಯೇ ಅವರ ಆರೋಗ್ಯ ಕೈಕೊಟ್ಟಿತ್ತು. ಪ್ರಶಸ್ತಿ ಪ್ರಧಾನದ ಚಿತ್ರಗಳನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿತ್ತಾದರೂ, ವಾಜಿಪೇಯಿ ಅವರ ಮುಖ ಕಾಣದಂತೆ ಮಾಡುವ ತಂತ್ರಗಾರಿಕೆ ಪ್ರದರ್ಶನವೂ ನಡೆದಿತ್ತು. ಹೀಗಾಗಿಯೇ, ಇವತ್ತು ವಾಜಿಪೇಯಿ ಹೇಗಿದ್ದಾರೆ? ಎಂಬುದು ಕಾಳಜಿ ಆಚೆಗೆ ಇರುವ ಕುತೂಹಲದ ಪ್ರಶ್ನೆಯಾಗಿ ದೇಶದ ಮುಂದಿದೆ.