ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್
ಸುದ್ದಿ ಸಾಗರ

ನಿಗೂಢ ದೇಶದ ಕಿರಿಯ ನಾಯಕ ಕಿಮ್ ಜಾಂಗ್ ಉನ್: ಅಣ್ವಸ್ತ್ರ ಬೆದರಿಕೆಯೂ; ಯುದ್ದೋನ್ಮಾದವೂ...

ಅಣ್ವಸ್ತ್ರ ಮತ್ತು ಕ್ಷಿಪಣಿಗಳ ಉತ್ಪಾದನೆ ಹೆಚ್ಚು ಒತ್ತು ಕೊಡುವಂತೆ ತಮ್ಮ ಅಧಿಕಾರಿಗಳಿಗೆ ಕಿಮ್ ಆದೇಶಿಸಿದ್ದಾರೆ. ಇದು ಅಂತಾರಾಷ್ಟ್ರೀಯ ಸಮುದಾಯದಲ್ಲಿ ಆತಂಕ ಹೆಚ್ಚಿಸಿದೆ.

“ಉತ್ತರ ಕೊರಿಯಾ ಬಳಿ ಅಣ್ವಸ್ತ್ರದ ದಾಸ್ತಾನಿದೆ. ಅಮೇರಿಕದ ಬಹುತೇಕ ಪ್ರದೇಶಗಳನ್ನು ತಲುಪುವ ಸಾಮರ್ಥ್ಯ ನಮ್ಮಲ್ಲಿದೆ. ಈ ಅಣ್ವಸ್ತ್ರದ ಬಟನ್ ಸದಾ ನನ್ನ ಮೇಜಿನ ಮೇಲೆಯೇ ಇರುತ್ತದೆ. ಇದು ಕೇವಲ ಬೆದರಿಯಲ್ಲ, ವಾಸ್ತವ,” 2018ರ ಆರಂಭದಲ್ಲಿಯೇ ಈ ಮಾತುಗಳು ಹೊರಬಂದಿದ್ದು ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್‌ರಿಂದ. ತಮ್ಮ ದೇಶವನ್ನುದ್ದೇಶಿಸಿ ಮಾಡಿದ ವಾರ್ಷಿಕ ಭಾಷಣದಲ್ಲಿ ಹೀಗೆ ಹೇಳಿದ್ದಾರೆ. ಈ ಮೂಲಕ ವರ್ಷದ ಸಂದೇಶದಲ್ಲಿ ಅವರು ಅಮೇರಿಕಕ್ಕೆ ನೀಡಿದ ಎಚ್ಚರಿಕೆ ಇದಾಗಿದೆ.

ಅಣ್ವಸ್ತ್ರ ಮತ್ತು ಕ್ಷಿಪಣಿಗಳ ಉತ್ಪಾದನೆ ಹೆಚ್ಚು ಒತ್ತು ಕೊಡುವಂತೆ ತಮ್ಮ ಅಧಿಕಾರಿಗಳಿಗೆ ಕಿಮ್ ಆದೇಶಿಸಿದ್ದಾರೆ. ಇದು ಅಂತಾರಾಷ್ಟ್ರೀಯ ಸಮುದಾಯದಲ್ಲಿ ಆತಂಕ ಹೆಚ್ಚಿಸಿದೆ. ‌2006ರಿಂದ ಲೆಕ್ಕ ಹಾಕಿದರೆ ಉತ್ತರ ಕೊರಿಯಾ ಇಲ್ಲಿಯವರೆಗೆ ಐದು ಪರಮಾಣು ಪರೀಕ್ಷೆಗಳನ್ನು ನಡೆಸಿದೆ. 2017ರ ಸೆಪ್ಟೆಂಬರ್‌ 3ರಂದು ಅತಿ ಪ್ರಬಲ ಹೈಡ್ರೋಜನ್‌ ಬಾಂಬ್‌ ಪರೀಕ್ಷೆ ಮಾಡುವ ಮೂಲಕ ಕಿಮ್ ಜಾಂಗ್ ಉನ್ ವಿಶ್ವಸಂಸ್ಥೆಯ ನಿಯಮಗಳನ್ನು ಉಲ್ಲಂಘನೆ ಮಾಡಿದ್ದರು.

ಜಪಾನ್‌, ಅಮೆರಿಕ, ಮತ್ತು ದಕ್ಷಿಣ ಕೊರಿಯಾ ದೇಶಗಳನ್ನು ಎದುರು ಹಾಕಿಕೊಂಡಿದ್ದರು. 'ಕ್ಷಿಪಣಿ ಪರೀಕ್ಷೆಗಳು, ಶಸ್ತ್ರಾಸ್ತ್ರಗಳ ಅಭಿವೃದ್ಧಿಯ ವಿರುದ್ಧವಾಗಿ ಅಮೆರಿಕ ಸೇರಿದಂತೆ ಜಗತ್ತಿನ ಅಭಿವೃದ್ಧಿ ರಾಷ್ಟ್ರಗಳು ಮತ್ತು ವಿಶ್ವಸಂಸ್ಥೆ ನೀಡುವ ಎಚ್ಚರಗಳಿಗೂ ಜಾಂಗ್ ಉನ್ ಮಣಿಯುತ್ತಿಲ್ಲ,' ಎಂಬುದೇ ಆತಂಕಕಾರಿ ಎನ್ನುತ್ತಾರೆ ಅಂತಾರಾಷ್ಟ್ರೀಯ ರಾಜಕೀಯ ವಿಶ್ಲೇ‍ಷಕರು.ಕಿಮ್ ಜಾಂಗ್ ಉನ್‌ ಉತ್ತರ ಕೊರಿಯಾದ ಅಧ್ಯಕ್ಷ. ಸದ್ಯ ವಿಶ್ವದ ಅತ್ಯಂತ ಕಿರಿಯ ನಾಯಕರೂ ಹೌದು.

2011 ರಲ್ಲಿ ತಂದೆ ಕಿಮ್‌ ಜೊಂಗ್ ಇಲ್‌ ಮರಣಾನಂತರ ಪಕ್ಷದ (ವರ್ಕರ್ಸ್ ಪಾರ್ಟಿ ಆಫ್ ಕೊರಿಯಾ) ಅಧ್ಯಕ್ಷ ಸ್ಥಾನಕ್ಕೆ ಅವರು ಏರಿದರು. ತಂದೆಯ ಮೇಲಿದ್ದ ಜವಾಬ್ದಾರಿಗಳು ಸಹಜವಾಗಿ 28 ವರ್ಷದ ಯುವಕನಾದ ಕಿಮ್‌ ಜಾಂಗ್ ಉನ್‌ ಹೆಗಲೇರಿದವು. ಆ ಸಂದರ್ಭದಲ್ಲಿ ಕಿಮ್ ಜಾಂಗ್ ಉನ್‌ ದೊಡ್ಡ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತಾರೆ? ಎಂಬುದು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶ್ನೆಗಳಿದ್ದವು.

ತಂದೆಯ ನಂತರ ಅಧಿಕಾರದ ಗದ್ದುಗೆಯನ್ನು ಏರಿದ ಕಿಮ್ ಜಾಂಗ್ ಉನ್ ತಮ್ಮ ಸ್ಥಾನಕ್ಕೆ ಅಪಾಯವನ್ನು ತಂದೊಡ್ಡಬಹುದಾಗಿದ್ದ ದೇಶದ ಉನ್ನತ ನಾಯಕರನ್ನು ತೆಗೆದು ಹಾಕಿದರು. ಈ ಮೂಲಕ ತಮ್ಮ ಸ್ಥಾನವನ್ನು ಭದ್ರಪಡಿಕೊಂಡರು. ದೇಶದ ಜನರ ಜೊತೆಗೆ ಸಂಪರ್ಕ ಸಾಧಿಸುವುದು, ಕಾರ್ಮಿಕರೊಂದಿಗೆ ಮತ್ತು ಸೈನಿಕರೊಂದಿಗೆ ಸಂವಹನ ನಡೆಸುವುದು ಮತ್ತು ಅಮೇರಿಕದ ವಿರುದ್ಧ ಹೇಳಿಕೆಗಳನ್ನು ನೀಡುವ ಮೂಲಕ ಮತ್ತಷ್ಟು ಸುದ್ದಿ ಕೇಂದ್ರಕ್ಕೆ ಬಂದರು.

ತಂದೆಯ ಆಳ್ವಿಕೆಯಲ್ಲಿದ್ದ ಸಾಂಪ್ರದಾಯಿಕ ವಿಧಾನವನ್ನು ಕೈಬಿಟ್ಟು, ಪಾಶ್ಚಾತ್ಯ ಜೀವನಶೈಲಿಗೆ ಮನ್ನಣೆಯನ್ನೂ ನೀಡಿದರು. ಆದರೆ ದೇಶದಲ್ಲಿ ತನ್ನ ತಂದೆ ಎದುರಿಸಿದ್ದ ಸವಾಲುಗಳನ್ನು ಅವರಿಗೆ ಇನ್ನೂ ಪರಿಹರಿಸಲು ಸಾಧ್ಯವಾಗಿಲ್ಲ. ತೀವ್ರವಾದ ಬಡತನ, ಆರ್ಥಿಕತೆ ಕುಸಿತದಿಂದ ಉತ್ತರ ಕೊರಿಯಾ ತತ್ತರಿಸಿ ಹೋಗಿದೆ ಎನ್ನುತ್ತವೆ ಅಂತರಾಷ್ಟ್ರೀಯ ಮಾದ್ಯಮಗಳ ವರದಿಗಳು. ಆದರೆ ಈ ಕುರಿತು ಸ್ವತಂತ್ರ ವರದಿಗಳು ಇಲ್ಲ ಎಂಬುದು ಅಷ್ಟೆ ಗಮನಾರ್ಹವಾದುದು.

ಕಿಮ್ ಜಾಂಗ್ ಉನ್‌ ಪ್ಯಾಂಗ್ಯಾಂಗನಲ್ಲಿ 1982 ಜನೇವರಿ 8ರಂದು ಜನಿಸಿದರು. ಅಲ್ಲಿನ ಹಿಂದಿನ ಅಧ್ಯಕ್ಷ ಕಿಮ್ ಜೊಂಗ್ ಇಲ್‌ರ ಎರಡನೇ ಮಗ. ತಾಯಿ ಕೊ ಯಾಂಗ್-ಹುಯಿ. ಇಲ್ ಉತ್ತರ ಕೊರಿಯಾದ ಮೊದಲ ಸರ್ವಾಧಿಕಾರಿ. ಕಿಮ್ ಎನ್ನುವುದು ಕುಟುಂಬದ ಹೆಸರು.  ಕಿಮ್ ಜಾಂಗ್ ಉನ್‌ನ ಅಜ್ಜ ಕಿಮ್ ಇಲ್-ಸುಂಗ್‌ರನ್ನು ಉತ್ತರ ಕೊರಿಯಾದ ಪಿತಾಮಹನೆಂದು ಕರೆಯಲಾಗುತ್ತದೆ. ಕಿಮ್ ಜಾಂಗ್ ಉನ್‌ ಬಗ್ಗೆ ಅಧಿಕೃತವಾದ ಯಾವುದೇ ಜೀವನ ಚರಿತ್ರೆ ಇನ್ನೂ ಬಿಡುಗಡೆಯಾಗಿಲ್ಲ.

ಅವರ ಆರಂಭಿಕ ಜೀವನದ ಬಗ್ಗೆ ಅಧಿಕೃತ ಮಾಹಿತಿಗಳಿಲ್ಲ. ಕಿಮ್ ಜಾಂಗ್ ಉನ್‌ ಜನ್ಮದಿನಾಂಕದ ಬಗ್ಗೆಯೂ ಭಿನ್ನಾಭಿಪ್ರಾಯಗಳಿವೆ. ದಕ್ಷಿಣ ಕೊರಿಯಾದ ಗುಪ್ತಚರ ಅಧಿಕಾರಿಗಳ ಪ್ರಕಾರ, ಕಿಮ್‌ ಅವರು ಜನಿಸಿದ ನಿಜವಾದ ವರ್ಷ 1982 ಎಂದಿದೆ. ಆದರೆ ಅಮೇರಿಕದ ಮಾಜಿ ಬಾಸ್ಕೆಟ್ ಬಾಲ್ ಆಟಗಾರ ಡೆನ್ನಿಸ್ ರಾಡ್ಮನ್ ಕಿಮ್ ಜಾಂಗ್ ಉನ್‌ರನ್ನು ಭೇಟಿಯಾದ ನಂತರ,  ಜಾಂಗ್ ಉನ್‌ ಅವರ ಜನ್ಮದಿನಾಂಕ 8 ಜನವರಿ 1983 ಎಂದು ಹೇಳಿದ್ದರು.ಜಪಾನಿನ ವೃತ್ತ ಪತ್ರಿಕೆಗಳಲ್ಲಿ ಪ್ರಕಟಗೊಂಡ ವರದಿಗಳ ಪ್ರಕಾರ, ಸ್ವಿಜರ್ಲ್ಯಾಂಡ್‌ನಲ್ಲಿರುವ ಬರ್ನ್ ಸಮೀಪದ ಖಾಸಗಿ ಅಂತಾರಾ‍ಷ್ಟ್ರೀಯ ಇಂಗ್ಲಿಷ್ ಶಾಲೆಯಲ್ಲಿ ಜಾಂಗ್ ಉನ್ ಓದಿದ್ದಾರೆ. ಅಲ್ಲಿ 'ಚೋಲ್ ಪಾಕ್' ಅಥವಾ 'ಪಾಕ್ ಚೋಲ್' ಎಂಬ ಹೆಸರಿನಲ್ಲಿ 1993 ರಿಂದ 1998 ರವರೆಗೆ ಇದ್ದರು ಎನ್ನಲಾಗಿದೆ.

ಹೀಗೆ ರಹಸ್ಯವಾಗಿ ಶಿಕ್ಷಣ ಪಡೆದ ನಂತರ ಒಂದು ವರ್ಷ ತಂದೆಯ ಜೊತೆ ಕೆಲಸಮಾಡಿದ್ದರು ಜಾಂಗ್ ಉನ್. ಜಾಂಗ್ ಇಲ್ ಸತ್ತ ಎರಡು ದಿನಗಳ ನಂತರ, ಅದೂ ಸರ್ಕಾರವೇ ಅಧಿಕೃತವಾಗಿ ಪ್ರಕಟಿಸುವವರೆಗೆ ಈ ರಹಸ್ಯ ವಿಷಯ ಯಾರಿಗೂ ತಿಳಿದಿರಲಿಲ್ಲ. ಇದು ಉತ್ತರ ಕೊರಿಯಾದ ರಹಸ್ಯಮಯ ಬದುಕಿನ ಒಂದು ಮುಖವಷ್ಟೇ. ನಾಚಿಕೆ ಸ್ವಭಾವದ ಹುಡುಗನಾಗಿದ್ದ ಜಾಂಗ್ ಉನ್‌, ತನ್ನ ಸಹಪಾಠಿಗಳೊಂದಿಗೆ ಉತ್ತಮ ಸ್ನೇಹವಿಟ್ಟುಕೊಂಡಿದ್ದು, ಬಾಸ್ಕೆಟ್ ಬಾಲ್ ಪ್ರೇಮಿಯೂ ಆಗಿದ್ದರು. ಜುಲೈ 25, 2012 ರಂದು ಅವರು 20 ವರ್ಷದ ರಿ ಸೋಲ್-ಜುರನ್ನು ಮದುವೆ ಆಗಿದ್ದಾರೆ ಎನ್ನುತ್ತವೆ ವರದಿಗಳು.

ಅಧಿಕಾರವಹಿಸಿಕೊಂಡ ನಂತರ, ಕಿಮ್ ಜಾಂಗ್ ಉನ್‌ 2012ರ ಜುಲೈ18 ರಂದು ಕೊರಿಯನ್ ಪೀಪಲ್ಸ್ ಆರ್ಮಿಯ ಮಾರ್ಷಲ್ ದರ್ಜೆಗೆ ಬಡ್ತಿ ಪಡೆದರು. ಕಿಮ್ ಇಲ್-ಸಂಗ್ ಮಿಲಿಟರಿ ವಿಶ್ವವಿದ್ಯಾಲಯದಲ್ಲಿ ಸೈನ್ಯ ಅಧಿಕಾರಿಯಾಗಿಯೂ ನೇಮಕಗೊಂಡರು. 2011ರ ಡಿಸೆಂಬರ್‌ನಲ್ಲಿ ಉತ್ತರ ಕೊರಿಯಾದ ಆಡಳಿತದ ಚುಕ್ಕಾಣಿಯನ್ನು ಹಿಡಿಯುವ ಮೂಲಕ ವಿಶ್ವದ ಅತೀ ಕಿರಿಯ ನಾಯಕನೆನಿಸಿಕೊಂಡರು.

2013ರಲ್ಲಿ ವಿಶ್ವದ 46ನೇ ಅತ್ಯಂತ ಶಕ್ತಿಯುತ ವ್ಯಕ್ತಿ ಎಂದು 'ಫೋರ್ಬ್ಸ್' ಪಟ್ಟಿಯಲ್ಲಿ ಅವರನ್ನು ಹೆಸರಿಸಲಾಗಿದೆ. ಹೀಗೆ ರಾಷ್ಟ್ರದ ಗಮನವನ್ನು ಅವರು ಸೆಳೆಯುತ್ತ ಬಂದರು.ಕಿಮ್ ಜಾಂಗ್ ಉನ್‌ ಉತ್ತರ ಕೊರಿಯಾದ 'ಡೆಮೋಕ್ರಟಿಕ್ ಪೀಪಲ್ಸ್ ರಿಪಬ್ಲಿಕ್' ನಾಯಕರಾಗಿರುವುದುದಷ್ಟೇ ಅಲ್ಲದೇ, ವರ್ಕರ್ಸ್ ಪಾರ್ಟಿ ಆಫ್ ಕೊರಿಯಾದ ಮೊದಲ ಸೆಕ್ರೆಟರಿಯೂ ಹೌದು.

ಕೇಂದ್ರೀಯ ಸೇನಾ ಆಯೋಗದ ಅಧ್ಯಕ್ಷ, ರಾಷ್ಟ್ರೀಯ ರಕ್ಷಣಾ ಆಯೋಗದ ಅಧ್ಯಕ್ಷ, ಕೊರಿಯನ್ ಪೀಪಲ್ಸ್ ಆರ್ಮಿಯ ದಳಪತಿ ಮತ್ತು  ಕಮ್ಯುನಿಸ್ಟ್ ಸಂಘಟನೆಗಳಲ್ಲಿಯ ಸ್ಥಾಯಿ ಸಮಿತಿಗಳ ಸದಸ್ಯ. ಹೀಗೆ ಹಲವಾರು ಹುದ್ದೆಗಳನ್ನು ಜಾಂಗ್ ಉನ್ ಅಲಂಕರಿಸಿದ್ದಾರೆ. ಜಾಂಗ್‌–ಉನ್‌ 2011ರ ಡಿಸೆಂಬರ್‌ನಲ್ಲಿ ದೇಶದ ಆಡಳಿತ ಚುಕ್ಕಾಣಿ ಹಿಡಿದ ನಂತರ ಉತ್ತರ ಕೊರಿಯಾ, ಕ್ಷಿಪಣಿ ಅಭಿವೃದ್ಧಿ ಯೋಜನೆಗೆ ಹೆಚ್ಚಿನ ವೇಗ ನೀಡಿದೆ. ಅವರ ತಂದೆಯ ಆಡಳಿತ ಅವಧಿಗೆ ಹೋಲಿಸಿದರೆ, ಈಗ ಕ್ಷಿಪಣಿ ಪರೀಕ್ಷೆಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ ಎನ್ನುತ್ತವೆ ಮಾಧ್ಯಮಗಳ ವರದಿಗಳು.

ಅಮೇರಿಕದ ಜೊತೆಗೆ ವೈರತ್ವ:

1945ರಲ್ಲಿ ಅಮೆರಿಕಕ್ಕೆ ಜಪಾನ್ ಶರಣಾದ ಬಳಿಕ, ಕೊರಿಯಾವನ್ನು ದಕ್ಷಿಣದಿಂದ ಅಮೆರಿಕ, ಉತ್ತರದಿಂದ ಸೋವಿಯತ್ ಆಕ್ರಮಿಸಿಕೊಂಡವು. ಸೋವಿಯತ್ ಅಧೀನದಲ್ಲಿದ್ದ ಪ್ರದೇಶ ಉತ್ತರ ಕೊರಿಯಾ ಎಂದೂ, ಅಮೆರಿಕದ ಅಧೀನದ ಪ್ರದೇಶ ದಕ್ಷಿಣ ಕೊರಿಯಾ ಎಂದು ಗುರುತಿಸಿಕೊಂಡವು.

ಜಗತ್ತಿನ ಎರಡನೇ ಮಹಾಯುದ್ಧದ ಅಂತ್ಯದವರೆಗೂ ಜಪಾನ್‌ ಅಧೀನದಲ್ಲಿ ಕೊರಿಯಾ ಇತ್ತು. ಚೀನಾದ ಬೆಂಬಲ ಪಡೆದು ಉತ್ತರ ಕೊರಿಯಾ, 1945ರಲ್ಲಿ ದಕ್ಷಿಣ ಕೊರಿಯಾ ಮೇಲೆ ಯುದ್ಧ ನಡೆಸಿತ್ತು.ಅಂದಿನಿಂದ ಆರಂಭಗೊಂಡ ಈ ಮಲತಾಯಿ ಮಕ್ಕಳ ನಡುವಿನ ಸಂಘರ್ಷ ಇವತ್ತಿಗೂ ಮುಂದುವರಿದಿದೆ.

ದಕ್ಷಿಣ ಕೊರಿಯಾದ ನೆರವಿಗೆ ಅಮೆರಿಕ ಮತ್ತು ಜಪಾನ್‌ ದೇಶಗಳು ನಿಂತಿವೆ. ಹೀಗಾಗಿ ಉತ್ತರ ಕೊರಿಯಾಕ್ಕೆ ಆ ಎರಡೂ ದೇಶಗಳ ಮೇಲೆ ತಣಿಯಲಾರದ ಕೋಪವಿದೆ.  ಹೀಗಾಗಿಯೇ ಕ್ಷಿಪಣಿ ಪರೀಕ್ಷೆಗಳೆಲ್ಲವೂ ದಕ್ಷಿಣ ಕೊರಿಯಾ ಅಷ್ಟೇ ಅಲ್ಲದೇ ಅಮೆರಿಕ ಮತ್ತು ಜಪಾನ್‌ಗಳನ್ನೂ ಉತ್ತರ ಕೊರಿಯಾ ಗುರಿಯಾಗಿರಿಸಿಕೊಂಡಿದೆ.

ಕಿಮ್ ಜಾಂಗ್ ಉನ್ ಮತ್ತು ಟ್ರಂಫ್:

ಅಮೇರಿಕದ ಅಧ್ಯಕ್ಷ ಟ್ರಂಪ್‌ರನ್ನು ‘ಮಾನಸಿಕ ಅಸ್ವಸ್ಥ’ ಎಂದು ಕಿಮ್‌ ಜಾಂಗ್ ಉನ್‌ ಜರಿದು, ಅಮೆರಿಕವನ್ನು ನಾಶ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಆಗ ಕಿಮ್ ಜಾಂಗ್ ಉನ್‌ ಒಬ್ಬ ‘ಹುಚ್ಚು ಮನುಷ್ಯ’ ಎಂದು ಡೊನಾಲ್ಡ್‌ ಟ್ರಂಪ್‌ ತಿರುಗೇಟು ನೀಡಿದ್ದರು. “ತನ್ನ ಜನರ ಬಗ್ಗೆ ಯೋಚಿಸದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್‌ ಖಂಡಿತವಾಗಿಯೂ ಹುಚ್ಚುಮನುಷ್ಯ,"ಎಂದು ಟ್ವೀಟ್‌ ಮಾಡಿದ್ದರು.ಈಗ 6 ಗಂಟೆಗಳ ಮುಂಚೆಯಷ್ಟೆ ಕಿಮ್‌ ಜಾಂಗ್‌ ಕುರಿತು ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ. 'ನನ್ನ ಬಳಿಯೂ ಅಣ್ವಸ್ತ್ರದ ಬಟನ್‌ ಇದೆ,' ಎಂದಿದ್ದಾರೆ.

ಜಾಗತಿಕ ಮಟ್ಟದಲ್ಲಿ ಸದ್ಯ ಉತ್ತರ ಕೊರಿಯಾ, ಕಿಮ್ ಜಾಂಗ್ ಹಾಗೂ ಅಣ್ವಸ್ತ್ರದ ಕುರಿತು ಚರ್ಚೆ ನಡೆಯುತ್ತಿದೆ. ದಕ್ಷಿಣ ಕೊರಿಯಾ ಮತ್ತು ಜಪಾನ್‌ ನಾಯಕರಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಟ್ರಂಪ್‌, "ಉತ್ತರ ಕೊರಿಯಾದ ಅಣ್ವಸ್ತ್ರ ಯೋಜನೆಗಳು ವಿಶ್ವದ ಶಾಂತಿ ಮತ್ತು ಭದ್ರತೆ ವಿಚಾರದಲ್ಲಿ ಆತಂಕ ಹುಟ್ಟಿಸಿವೆ. ಆ ದೇಶಕ್ಕೆ ಆರ್ಥಿಕ ಬೆಂಬಲ ನೀಡುವುದನ್ನು ಸಹಿಸುವುದಿಲ್ಲ," ಎಂದು ತಿಳಿಸಿದ್ದರು.

ಈ ಮೂಲಕ ಜಗತ್ತಿನ ಮೂರನೇ ಯುದ್ಧ ನಡೆಯುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಮಾಧ್ಯಮಗಳೂ ಇದಕ್ಕೆ ಉಪ್ಪು ಖಾರ ಅರೆದಿದ್ದನ್ನು ನಾವಿಲ್ಲಿ ಸ್ಮರಿಸಬಹುದು.ದಶಕಗಳಿಂದ ಆರ್ಥಿಕ ಸಂಕಷ್ಟದಲ್ಲಿರುವ ಉತ್ತರ ಕೊರಿಯಾದ ಪರಿಸ್ಥಿತಿಯನ್ನು ನಿಭಾಯಿಸುವುದು ಅಗತ್ಯವಾಗಿದೆ.

ಆದರೆ ಪರಮಾಣು ಅಸ್ತ್ರಗಳ ಮೂಲಕ ನಾನಾ ದೇಶಗಳನ್ನು ಬೆದರಿಸುವುದು ಉತ್ತರ ಕೊರಿಯಾಗೆ ಹಿತಕರ ನಡೆಯಂತೂ. ಈ ಮೂಲಕ ಅದು ಅಂತರಾಷ್ಟ್ರೀಯ ಸಂಬಂಧಗಳನ್ನು ಕಳೆದುಕೊಂಡು ಅದು ಏಕಾಂಗಿಯಾಗುವ ಸಾಧ್ಯತೆ ಹೆಚ್ಚಿದೆ. ಆದರೂ ಜಗತ್ತಿನ ಪ್ರಬಲ ರಾಷ್ಟ್ರಗಳನ್ನು ಎದುರುಹಾಕಿಕೊಂಡಿರುವ ಕಿಮ್ ಜಾಂಗ್ ದೈರ್ಯ? ಅದು ಎದುರಿಸುವ ಪರಿಣಾಮಗಳ ಮೇಲೆ ಇತಿಹಾಸದಲ್ಲಿ ದಾಖಲಾಗುತ್ತದೆ ಅಷ್ಟೆ.