ಹಣ ದುಬ್ಬರ, ಬೆಲೆ ಏರಿಕೆ, ದುಬಾರಿಯಾದ ಆರ್ಥಿಕ ನೀತಿಗಳು, ನಿರುದ್ಯೋಗ
ಸುದ್ದಿ ಸಾಗರ

ಹಣ ದುಬ್ಬರ, ಬೆಲೆ ಏರಿಕೆ, ದುಬಾರಿಯಾದ ಆರ್ಥಿಕ ನೀತಿಗಳು, ನಿರುದ್ಯೋಗ

ಇರಾನ್‌ನಲ್ಲಿ ಬುಗಿಲೆದ್ದ ಜನಾಕ್ರೋಶ

ಇರಾನ್ ಸರಕಾರದ ವಿರುದ್ಧ ಸ್ಫೋಟಗೊಂಡಿರುವ ಜನರ ಆಕ್ರೋಶ ದೇಶದ ನಾನಾ ನಗರಗಳಲ್ಲಿ ಬುಧವಾರ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಈವರೆಗೆ ಸುಮಾರು 21 ಮಂದಿ ಬಲಿಯಾಗಿದ್ದಾರೆ.

ದಶಕಗಳ ಕಾಲ ದೇಶದಲ್ಲಿ ತಲೆದೋರಿದ್ದ ಆರ್ಥಿಕ ಸಮಸ್ಯೆಗಳು, ಹೆಚ್ಚುತ್ತಿರುವ ನಿತ್ಯ ಬದುಕಿನ ಖರ್ಚುಗಳು ಹಾಗೂ ನಿರುದ್ಯೋಗಗಳ ಸಮಸ್ಯೆಗಳೀಗ ಸರಕಾರದ ಬುಡವನ್ನೇ ಅಲ್ಲಾಡಿಸುವ ಪ್ರತಿಭಟನೆಗೆ ಕಾರಣವಾಗಿದೆ. ಇದರ ಜತೆಗೆ. ಸರಕಾರ ಆರ್ಥಿಕ ನೀತಿಗಳಲ್ಲಿ ದೊಡ್ಡ ಬದಲಾವಣೆಗಾಗಿ ಆಗ್ರಹಗಳಿಗೆ ಈಗ ಸಾಂಘಿಕ ರೂಪವೂ ಸಿಕ್ಕಿದೆ.

ಅರಬ್‌ ಪ್ರಾಂಥ್ಯದಲ್ಲಿ ಬರುವ ಇರಾನ್‌ ಇವತ್ತಿಗೂ ಕಚ್ಚಾ ತೈಲ ನಿಕ್ಷೇಪವನ್ನು ನಂಬಿಕೊಂಡಿರುವ ದೇಶ. ಇಲ್ಲಿನ ಆರ್ಥಿಕತೆಗೆ 'ಆಯಿಲ್‌ ಮನಿ'ಯೇ ಜೀವಾಳ. ಇಲ್ಲಿ ಆಡಳಿತ ನಡೆಸಿದ ಎಲ್ಲಾ ಸರಕಾರಗಳು, ತೈಲ ನಿಕ್ಷೇಪದ ಆಚೆಗೆ ದೇಶದ ಆರ್ಥಿಕತೆಯನ್ನು ಕಟ್ಟುವ ಕಡೆಗೆ ಆಲೋಚನೆಯನ್ನೇ ಮಾಡಿರಲಿಲ್ಲ. ಕಳೆದ 3 ದಶಕಗಳಿಂದ ಇಲ್ಲಿನ ಆರ್ಥಿಕತೆ ಭಾರಿ ಸಂಕಷ್ಟಕ್ಕೆ ಸಿಲುಕಿತ್ತು. ಇದರಿಂದಾಗಿ ಸದ್ಯ ಇಲ್ಲಿನ ಹಣದುಬ್ಬರದ ದರ ಶೇ. 9.6 ತಲುಪಿದೆ. ನಿರುದ್ಯೋಗ ಸಮಸ್ಯೆ ಶೇ. 13ರಷ್ಟು ಹೆಚ್ಚಾಗಿದೆ. ಕೋಳಿ ಮತ್ತು ಮೊಟ್ಟೆಗಳಂತಹ ಮೂಲಭೂತ ಆಹಾರ ಪದಾರ್ಥಗಳ ಬೆಲೆಗಳು ಗಗನ ಮುಟ್ಟಿವೆ. ಅರ್ಥಸಾಸ್ತ್ರಜ್ಞರ ಪ್ರಕಾರ, 2015ರ ಅಣು ಒಪ್ಪಂದದಿಂದ ದೇಶದಲ್ಲಿ ಉದ್ಯೋಗಗಳು ಸೃಷ್ಟಿಯಾಗಿವೆ; ಜನರ ಜೀವನ ಮಟ್ಟದಲ್ಲಿ ಏರಿಕೆ ಕಂಡಿದೆ. ಆದರೆ ಅದರ ಪರಿಣಾಮಗಳು ಅಷ್ಟೇನು ಇಲ್ಲ ಎಂಬುದಕ್ಕೆ ಸದ್ಯ ಬೀದಿಗೆ ಇಳಿದ ಜನ ಸಾಕ್ಷಿಯಾಗಿದ್ದಾರೆ.

ಡಿಸೆಂಬರ್ 28ರಂದು ಇರಾನಿನ ಎರಡನೇ ಅತಿದೊಡ್ಡ ನಗರ ಎನಿಸಿರುವ ಮಾಶಾದ್‌ನಲ್ಲಿ ಚಿಕ್ಕ ಮಟ್ಟದಲ್ಲಿ ಪ್ರತಿಭಟನೆ ಆರಂಭವಾಗಿತ್ತು. ಅದೀಗ ಸಾಂಘಿಕ ಶಕ್ತಿಯಾಗಿ ಬೀದಿಯಲ್ಲಿ ಕಾಣಿಸಿಕೊಂಡಿದ್ದು, ದೇಶಾದ್ಯಂತ ಸರಕಾರಿ ವಿರೋಧಿ ಹೋರಾಟಕ್ಕೆ ಭೂಮಿಕೆ ಕಲ್ಪಿಸಿದೆ.ಇರಾನಿನ ವಿದೇಶೀ ನೀತಿಗಳಿಂದ ಉದ್ಭವಿಸುತ್ತಿರುವ ಆರ್ಥಿಕ ಸಮಸ್ಯೆಗಳು, ಅರಬ್‌ನ ಪ್ರಾದೇಶಿಕ ಘರ್ಷಣೆಗಳಲ್ಲಿ ಇರಾನ್ ತಲೆ ಹಾಕುತ್ತಿರುವುದು, ಮಂಜೂರಾಗುತ್ತಿರುವ ಯೋಜನೆಗಳೆಲ್ಲವೂ ಜನರ ಜೇಬಿಗೆ ಕತ್ತರಿ ಹಾಕುತ್ತಿರುವ ಕಾರಣ ಪ್ರತಿಭಟನೆ ಹೆಚ್ಚಿನ ಕಾವು ಪಡೆದುಕೊಂಡಿದೆ. ಜನರ ಕೋಪಕ್ಕೆ ರಾಜಧಾನಿ ತೆಹ್ರಾನ್ ಸೇರಿದಂತೆ ಹಲವಾರು ಪ್ರಮುಖ ನಗರಗಳ ಬೀದಿಗಳು ಸಾಕ್ಷಿ ಹೇಳುತ್ತಿವೆ.

ಇಗಾಗಲೇ ಇರಾನಿನಲ್ಲಿ ಸುಮಾರು 400 ಪ್ರತಿಭಟನೆಗಳ ವರದಿಯಾಗಿದೆ. ತೀವ್ರಗತಿಯಲ್ಲಿ ಬೆಳೆಯುತ್ತಿರುವ ಪ್ರತಿರೋಧ ಪ್ರಾಣಾಂತಿಕ ಹಂತವನ್ನು ತಲುಪಿದ್ದು, ದಶಕದಲ್ಲೇ ಇರಾನ್‌ ಕಂಡ ಅತಿ ದೊಡ್ಡ ಸರಕಾರದ ವಿರೋಧಿ ಹೋರಾಟ ಎನಿಸಿದೆ. ರಾಜಧಾನಿ ತೆಹ್ರಾನ್ ನಲ್ಲಿ ತೆಹ್ರಾನ್ ವಿಶ್ವವಿದ್ಯಾಲಯದ ಮುಂದೆ ವಿದ್ಯಾರ್ಥಿಗಳು ಶನಿವಾರದಂದು ಸರಕಾರವನ್ನು ವಿರೋಧಿಸಿ ಘೋಷಣೆಗಳನ್ನು ಮೊಳಗಿಸಿದ್ದರು. ನಂತರ ಪೊಲೀಸ್ ಪಡೆ ಪ್ರತಿಭಟನಾಕಾರರನ್ನು ಚದುರಿಸಿತ್ತು. ಇದೀಗ ಮತ್ತೆ ಅದೇ ಜಾಗದಲ್ಲಿ ಪ್ರತಿಭಟನೆಯನ್ನು ವಿದ್ಯಾರ್ಥಿಗಳು ಆರಂಭಿಸಿದ್ದಾರೆ.

ನ್ಯೂಯಾರ್ಕ್ ಮೂಲದ ‘ಇರಾನ್ ಮಾನವ ಹಕ್ಕುಗಳ ಕೇಂದ್ರ’ವು ಟ್ವಿಟ್ಟರಿನಲ್ಲಿ ವೀಡಿಯೋ ತುಣುಕೊಂದನ್ನು ಹರಿಬಿಟ್ಟಿದ್ದು, ತೆಹ್ರಾನ್ ವಿಶ್ವವಿದ್ಯಾಲಯದ ಮುಂದೆ ಗಲಭೆಯನ್ನು ನಿಯಂತ್ರಿಸುವ ಸಂದರ್ಭದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಉಂಟಾದ ಘರ್ಷಣೆಯನ್ನು ಬಯಲಿಗೆಳೆದಿದೆ. ಭದ್ರತಾ ದೃಷ್ಟಿಯಿಂದ ಇರಾನ್ ಸರಕಾರವು, ಇನ್ಸ್ಟಾಗ್ರಾಮ್ ಮತ್ತು ಟೆಲಿಗ್ರಾಮ್ ಬಳಕೆಯನ್ನು ಭಾನುವಾರದಿಂದಲೇ ನಿರ್ಬಂಧಿಸಿದೆ. ಸುಮಾರು 8 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಇರಾನ್ ನಲ್ಲಿ 4 ಕೋಟಿಗೂ ಹೆಚ್ಚು ಮಂದಿ ಟೆಲಿಗ್ರಾಮ್ ಬಳಸುತ್ತಿದ್ದಾರೆ. ರಾಜಕಾರಣಿಗಳು, ಬರಹಗಾರರು, ಚಿಂತಕರು, ಪತ್ರಕರ್ತರು, ಜನಸಾಮಾನ್ಯರೆಲ್ಲರೂ ಟೆಲಿಗ್ರಾಮ್‌ ಗ್ರಾಹಕರಾಗಿದ್ದಾರೆ.

ಪ್ರತಿಭಟನಾಕಾರರ ಬೇಡಿಕೆಗಳೇನು?

ಸರಕಾರ ವಿರೋಧಿ ಹೋರಾಟಗಾರರು ಮತ್ತು ಸ್ಥಳೀಯ ಸುದ್ದಿ ಸಂಸ್ಥೆಗಳ ಪ್ರಕಾರ, ಕೆಲವ ಪ್ರತಿಭಟನಾಕಾರರು ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕ ಅಸಮಾನತೆಗಳ ವಿರುದ್ಧ ಬೀದಿಗಿಳಿದಿದ್ದರೆ, ಮತ್ತೆ ಕೆಲವರು 'ಡೆತ್ ಟು ರೌಹಾನಿ', 'ಫರ್ಗೆಟ್ ಪ್ಯಾಲಸ್ತೈನ್', 'ನಾಟ್ ಗಾಝಾ, ನಾಟ್ ಲೆಬನಾನ್, ಮೈ ಲೈಫ್ ಫಾರ್ ಇರಾನ್‌' ಘೋಷಣೆ ಮೊಳಗಿಸುತ್ತಿದ್ದಾರೆ. ದೇಶದ ವಿದೇಶಿ ನೀತಿಗಳನ್ನು ಪ್ರತಿರೋಧಿಸಿ, ಸರ್ಕಾರಿ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದಾರೆ. ''ಪ್ರಧಾನಿ ರೌಹಾನಿಯ ಪ್ರತಿಫಲ ನೀಡದ ಆರ್ಥಿಕ ನೀತಿಗಳು ಕುದಿಯುತ್ತಿರುವ ಅಸಮಾಧಾನಕ್ಕೆ ಕಾರಣವಾಗಿವೆ. ಮತ್ತೊಂಡು ಕಡೆ ರಾಜಕೀಯ ಪರಿಸ್ಥಿತಿಯೂ ಸುಧಾರಣೆಯಾಗಿಲ್ಲ. ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕುಂದುಕೊರತೆಗಳು ಜನರನ್ನು ಬಡೆದೆಬ್ಬಿಸಿವೆ," ಎಂದು ಬ್ರೋಕಿಂಗ್ ದೋಹಾ ಸೆಂಟರ್‌ನ ಆಲಿ-ಫತೊಲ್ಲಾ ನಜೇದ್, 'ಅಲ್-ಜಜೀರಾ' ಸುದ್ಧಿವಾಹಿನಿಯೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ದೇಶದ ಗ್ರಾಮೀಣ ಭಾಗಗಳಲ್ಲಿನ ಹೋರಾಟವು, ರಾಜಧಾನಿ ಟೆಹರಾನ್‌ನಷ್ಟೇ ಪ್ರಬಲವಾಗಿದೆ. 25ಕ್ಕಿಂತಲೂ ಕಡಿಮೆ ವಯಸ್ಸಿನ ಕಾರ್ಮಿಕ ವರ್ಗದ ಸದಸ್ಯರು ಮುಂಚೂಣಿಯಲ್ಲಿದ್ದಾರೆ.ಆರ್ಥಿಕತೆಯ ಮೇಲೆ ಜನರ ಕಾಳಜಿಯನ್ನು ಇರಾನ್ ಸರ್ಕಾರವು ಒಪ್ಪಿಕೊಂಡಿದೆ. ಆದರೆ ವಿಚ್ಛಿದ್ರಕಾರಿ ನಡವಳಿಕೆಯ ವಿರುದ್ಧ ಪ್ರತಿಭಟನಾಕಾರರನ್ನು ಎಚ್ಚರಿಸಿದೆ. "ಸಾರ್ವಜನಿಕ ಆಸ್ತಿಯನ್ನು ಹಾನಿಗೊಳಪಡಿಸಿದವರು, ಆದೇಶವನ್ನು ಉಲ್ಲಂಘಿಸಿ, ಕಾನೂನು ಮುರಿಯಲು ಪ್ರಯತ್ನಿಸಿದವರು ದಂಡ ತೆರಬೇಕಾಗುತ್ತದೆ," ಎಂದು ರೌಹಾನಿ ಸರಕಾರದ ಒಳಾಡಳಿತ ಇಲಾಖೆಯ ಅಬ್ದುಲ್ರಾಹ್ಮನ್ ರಹಮಾಣಿ ಫಝ್ಲಿ ಸರಕಾರಿ ದೂರದರ್ಶನದಲ್ಲಿ ಎಚ್ಚರಿಕೆ ನೀಡಿದ್ದಾರೆ. ಇದಕ್ಕೂ ಮುಂಚೆ ಜನರು ಗುಂಪು ಸೇರುವುದನ್ನು ಅಕ್ರಮ ಎಂದು ಅವರು ಹೇಳಿದ್ದರು. ಇದೂ ಕೂಡ ಪ್ರತಿಭಟನಾಕಾರರ ಆಕ್ರೋಶವನ್ನು ಹೆಚ್ಚಿಸಿದೆ.

ಇರಾಕ್‌ನ ಉಪಾಧ್ಯಕ್ಷ ಇಶಾಕ್ ಜಹಾಂಗಿರಿ ಶುಕ್ರವಾರ ಮಾತನಾಡಿ, “ಕೆಲವು ಪ್ರತಿಭಟನಾಕಾರರು ಬೆಲೆಏರಿಕೆ ವಿರುದ್ಧ ದನಿಯೇರಿಸಿದ್ದರೆ, ಇತರರು ಸರಕಾರವನ್ನು ಹಾಳುಗೆಡವುತ್ತಿದ್ದಾರೆ. ದೇಶದ ಎಲ್ಲಾ ಆರ್ಥಿಕ ಸೂಚ್ಯಾಂಕಗಳು ಉತ್ತಮವಾಗಿವೆ. ಕೆಲವು ಉತ್ಪನ್ನಗಳ ಬೆಲೆ ಹೆಚ್ಚಳವಾಗಿದ್ದು, ಸಮಸ್ಯೆ ಸರಿಪಡಿಸಲು ಕೆಲಸ ಮಾಡುತ್ತಿದೆ," ಎಂದು ತಿಳಿಸಿದರು. ಏತನ್ಮಧ್ಯೆ, ಮೆಹರ್ ನ್ಯೂಸ್ ಏಜೆನ್ಸಿಯ ಜೊತೆ ಭಾನುವಾರ ಮಾಹಿತಿ ಹಂಚಿಕೊಂಡ ಲೋರೆಸ್ತಾನ್ ಪ್ರಾಂತ್ಯದ ಗವರ್ನರ್ ಭದ್ರತಾ ಡಿಪ್ಯುಟಿ ಹಬೀಲ್ಲಲ್ಲಾ ಖೊಜಾಸ್ಟ್ಪೋರ್, "ಚಳವಳಿಗಾರರ ಉಪಸ್ಥಿತಿಯು ಪ್ರತಿಭಟನೆ ಶಾಂತಿಯುತ ಅಂತ್ಯವಾಗುವುದನ್ನು ತಡೆಗಟ್ಟಿದೆ. ಪಶ್ಚಿಮ ಇರಾನಿನ ನಗರವಾದ ಡೋರುಡ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಇಬ್ಬರು 'ವಿದೇಶಿ ಏಜೆಂಟ್'ಗಳು ಭಾಗವಹಿಸಿದ್ದರು,’’ ಎಂದು ಆರೋಪಿಸಿದ್ದಾರೆ.

ಅಧ್ಯಕ್ಷ ಹಸನ್ ರೋಹಾನಿ, “ಇರಾನಿಯರಿಗೆ ಪ್ರತಿಭಟಿಸುವ ಹಕ್ಕನ್ನು ಹೊಂದಿದ್ದಾರೆ, ಆದರೆ ಹಿಂಸಾತ್ಮಕವಾಗಿಲ್ಲ,” ಎಂದು ಹೇಳಿದ್ದಾರೆ. "ಜನರು ತಮ್ಮ ವಿಮರ್ಶೆಯನ್ನು ವ್ಯಕ್ತಪಡಿಸಲು ಮತ್ತು ಪ್ರತಿಭಟಿಸಲು ಮುಕ್ತರಾಗಿದ್ದಾರೆ. ಆದಾಗ್ಯೂ, ಆ ಟೀಕೆ ಮತ್ತು ಪ್ರತಿಭಟನೆಯ ರೀತಿಗಳ ಕಡೆಗೆ ನಾವು ಗಮನ ಹರಿಸಬೇಕು, ಅದು ಜನರ ಮತ್ತು ರಾಜ್ಯದ ಸುಧಾರಣೆಗೆ ಕಾರಣವಾಗಬಹುದು," ಎಂದಿದ್ದಾರೆ.ಇರಾನಿನ್‌ ಈ ಆಂತರಿಕ ಬೆಳವಣಿಗೆಗಳ ಕುರಿತಂತೆ ಪ್ರತಿಕ್ರಿಯಿಸಿದ ಅಮೆರಿಕಾ, ಪ್ರತಿಭಟನಾಕಾರರನ್ನು ಬಂಧಿಸದಂತೆ ಎಚ್ಚರಿಕೆ ನೀಡಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಇರಾನ್ ಕುರಿತು ಸರಣಿ ಟ್ವಿಟ್‌ಗಳನ್ನು ಮಾಡಿದ್ದಾರೆ. ಅವರ ಇತ್ತೀಚೆಗಿನ ಟ್ವಿಟ್‌ "ಪ್ರಕ್ಷುಬ್ಧ ಆಡಳಿತವು ಶಾಶ್ವತವಾಗಿ ಉಳಿಯುವುದಿಲ್ಲ, ಜಗತ್ತು ನೋಡುತ್ತಿದೆ,’’ ಎಂದು ಇರಾನ್‌ ಆಡಳಿತವನ್ನು ಟೀಕಿಸಿದೆ.

ಟ್ರಂಪ್ ಆಡಳಿತದ ಅಡಿಯಲ್ಲಿ, ವಾಷಿಂಗ್ಟನ್ ಮತ್ತು ಟೆಹ್ರಾನ್ ಮತ್ತಷ್ಟುದೂರವಾಗಿವೆ. ಸಿರಿಯಾ ಮತ್ತು ಯೆಮೆನ್ ಯುದ್ಧಗಳು, 2015ರ ಪರಮಾಣು ಒಪ್ಪಂದದಂತಹ ವಿದೇಶಿ ನೀತಿಯ ವಿಷಯಗಳ ಹಿನ್ನೆಲೆಯಲ್ಲಿ ಇರಾನ್‌ ಮತ್ತು ಅಮೆರಿಕಾ ಸಂಬಂಧ ಹಳಸಿದೆ. ಕೆನಡಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶನಿವಾರದಂದು ಒಂದು ಸಣ್ಣ ಹೇಳಿಕೆಯನ್ನು ಬಿಡುಗಡೆ ಮಾಡಿತ್ತು. ಇರಾನ್ ದೇಶದೊಳಗಿನ ಪ್ರತಿಭಟನೆಗಳನ್ನು ಗುಟ್ಟಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಹೇಳುವುದರ ಜೊತೆಗೆ, "ಇರಾನಿನ ಅಧಿಕಾರಿಗಳು ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳನ್ನು ಗೌರವಿಸಬೇಕು" ಎಂದಿದೆ. ಫ್ರಾನ್ಸ್ ಹಾಗೂ ಜರ್ಮನಿಗಳಲ್ಲಿ ಇರಾನ್‌ ಜನರ ಪ್ರತಿಭಟನೆ ಬೆಂಬಲಿಸಿ ಸಾಂಕೇತಿಕ ಪ್ರತಿಭಟನೆಗಳು ನಡೆದಿವೆ.

ತಜ್ಞರ ಪ್ರಕಾರ ಪ್ರತಿಭಟನೆಯು ಈಗಾಗಲೇ ನಿರೀಕ್ಷೆಗಿಂತಲೂ ಹೆಚ್ಚಿನ ವೇಗದಲ್ಲಿ ಬೆಳೆಯುತ್ತಿದೆ. "ಆಡಳಿತ ಮತ್ತು ಅಧ್ಯಕ್ಷರ ವಿರುದ್ಧ ಘೋಷಣೆಗಳನ್ನು ಮೀರಿ ಏನು ಬೇಕಾದರೂ ಘಟಿಸಬಹುದು," ಎಂದು ಸ್ವತಂತ್ರ ಆನ್‌ಲೈನ್‌ ಸುದ್ದಿ ಸಂಸ್ಥೆ ‘ಇರಾನ್ ಇಂಟರ್ನ್ಯಾಷನಲ್’ ನ ಪತ್ರಕರ್ತ ನೆಗರ್ ಮೊರ್ಟಾಜಿವಿ ಹೇಳಿದ್ದಾರೆ. "ಆದರೆ, ಇರಾನ್ ಜನರ ನಡುವೆಯೇ ಭಿನ್ನಭಿಪ್ರಾಯಗಳು ತುಂಬಾ ಆಳವಾಗಿ ಬೇರು ಬಿಟ್ಟಿವೆ. ಅಧ್ಯಕ್ಷತೆ ಪಟ್ಟವನ್ನು ಮೀರಿದ ಸಮಸ್ಯೆ ಇದಾಗಿದ್ದು, ಕಳವಳಕಾರಿಯಾಗಿದೆ,” ಎಂದು ಪತ್ರಕರ್ತ ಮೊರ್ಟಾಜಿವಿ ಭವಿಷ್ಯದ ದಿಕ್ಸೂಚಿ ನೀಡಿದ್ದಾರೆ.