samachara
www.samachara.com
ಪ್ರಜಾತಂತ್ರವನ್ನ ಪಾತಾಳಕ್ಕೆ ತಳ್ಳುತ್ತಿದೆಯೇ ಚುನಾವಣಾ ಚಾಣಾಕ್ಷ 'ಶಾ' ತಂತ್ರಗಾರಿಕೆ?
ಸುದ್ದಿ ಸಾಗರ

ಪ್ರಜಾತಂತ್ರವನ್ನ ಪಾತಾಳಕ್ಕೆ ತಳ್ಳುತ್ತಿದೆಯೇ ಚುನಾವಣಾ ಚಾಣಾಕ್ಷ 'ಶಾ' ತಂತ್ರಗಾರಿಕೆ?

2018 ಹಾಗೂ 2019 ಚುನಾವಣೆಯ ಪರ್ವಕಾಲ. ಈ ವರ್ಷ ದೊಡ್ಡ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಕರ್ನಾಟಕ ಸೇರಿದಂತೆ ಒಟ್ಟು 8 ರಾಜ್ಯಗಳ ವಿಧಾನಸಭೆಗೆ ಚುನಾವಣೆಗಳು ನಡೆಯಲಿವೆ. ಮುಂದಿನ ವರ್ಷ ಲೋಕಸಭೆ ಚುನಾವಣೆ. ಪ್ರಜಾಧಿಕಾರದ ಪಡೆಯುವ ಪ್ರಕ್ರಿಯೆ ಹೊಸ್ತಿಲಲ್ಲಿರುವ ಕರ್ನಾಟಕದಲ್ಲಿ ಗೆಲುವು-ಸೋಲಿನ ಲೆಕ್ಕಾಚಾರದೊಂದಿಗೆ ರಾಜಕೀಯ ಪಕ್ಷಗಳು ರಟ್ಟೆಯರಳಿಸಿ ಪ್ರಚಾರದ ಕಣಕ್ಕೆ ಇಳಿದಿವೆ.

ಪ್ರಮುಖ ಮೂರು ಪಕ್ಷಗಳ ಚುನಾವಣಾ ಪ್ರಚಾರದ ವೈಖರಿಗಳ ಪೈಕಿ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಹಾಗೂ 19 ರಾಜ್ಯಗಳ ಚುಕ್ಕಾಣಿ ಹಿಡಿದಿರುವ ಬಿಜೆಪಿ ರೂಪಿಸುತ್ತಿರುವ ಚುನಾವಣಾ ತಂತ್ರಗಾರಿಕೆ, ದೇಶದ ಚುನಾವಣಾ ರಾಜಕಾರಣಕ್ಕೇ ವಿಲಕ್ಷಣ ರೂಪ ನೀಡುವ ಸಾಧ್ಯತೆಗಳಿವೆ. ಬಿಜೆಪಿ ಪಕ್ಷ ಈ ಬಾರಿ ಮತಬೇಟೆಯ ಮಾನದಂಡವನ್ನ ಅಭಿವೃದ್ದಿ, ಜನರ ಸೌಖ್ಯ, ಸಮಾಜದ ಶಾಂತಿ-ನೆಮ್ಮದಿಗಳಾಚೆ ಕೊಂಚ ಹೆಚ್ಚಾಗಿಯೇ ಕೊಂಡೊಯ್ಯುವ ಸಿದ್ದತೆಯಲ್ಲಿದೆ.

ಇತ್ತೀಚೆಗೆ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕೂದಲೆಳೆಯಂತರದಲ್ಲಿ ಗೆದ್ದು ಅಧಿಕಾರ ಉಳಿಸಿಕೊಂಡಿದೆ. ಅಭಿವೃದ್ಧಿ ಅಧಾರದ ಮೇಲೆ (‘ವಿಕಾಸ್ ಕಾ ಮುದ್ದೆ’) ಚುನಾವಣೆ ಗೆಲ್ಲುತ್ತೇವೆ ಅಂತಾ ಹೊರಟಿದ್ದ ಬಿಜೆಪಿ, ತನ್ನ ಚುನಾವಣಾ ತಂತ್ರವನ್ನು ಅದೆಷ್ಟು ಕೀಳಮಟ್ಟಕ್ಕೆ ಇಳಿಸಿತ್ತು ಅನ್ನೋದು ಎಲ್ಲರಿಗೂ ಗೊತ್ತಿದೆ. ಚುನಾವಣೆಯ ಕೊನೆ ದಿನಗಳಲ್ಲಿ ನರೇಂದ್ರ ಮೋದಿ ಬಾಯಿಯಲ್ಲಿ ‘ವಿಕಾಸ್’ ಪದದ ಬಳಕೆ ಕಡಿಮೆಯಾಗಿತ್ತು. ಅವರ ಸಾಲು ಸಾಲು ರ್ಯಾಲಿ ಹಾಗೂ ಭಾಷಣಗಳಲ್ಲಿ, ಅಪ್ಪಿ ತಪ್ಪಿಯೂ, 'ಗುಜರಾತ್ ಅಭಿವೃದ್ದಿ ಮಾದರಿ' ಅಥವಾ 'ವೈಬ್ರೆಂಟ್ ಗುಜರಾತ್' ಶಬ್ಧಗಳ ಉಚ್ಛಾರಣೆ ಕಾಣಲಿಲ್ಲ.

ಆರಂಭದಲ್ಲಿಯೇ ಮತಪ್ರಚಾರದ ಹಾದಿಯನ್ನು ಕ್ರಮಿಸಲು ಹೊರಟಿದ್ದು ಕಾಂಗ್ರೆಸ್. ಬಿಜೆಪಿ ನಿರೀಕ್ಷೆ ಮಾಡದಷ್ಟು ಪ್ರಚಾರ, ಸ್ಪಂದನೆ ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಈ ಬಾರಿ ವ್ಯಕ್ತವಾಯಿತು. ಅದೇ ವೇಳೆ ಕೇಸರಿ ಪಕ್ಷದ ಸಾಧನೆ ಹಾಗೂ ಅಭಿವೃದ್ದಿ ಅಜೆಂಡಾಗಳು ನೀಡಲ್ಲ ಅಂತಾ ತಿಳಿದ ಮೇಲೆ ಬಿಜೆಪಿ ಬಳಸಿದ್ದು ಮತ್ತದೇ ಧರ್ಮ ಹಾಗೂ ರಾಷ್ಟ್ರೀಯತೆಯ ಪುರಾತನ ಅಸ್ತ್ರಗಳನ್ನ. ಕೊನೆಗೂ ಬಿಜೆಪಿಯನ್ನು ಬಹುಮತದ ಗೆರೆ ದಾಟಿಸಿದ್ದು 'ಪಾಕಿಸ್ತಾನದ ಹಸ್ತಕ್ಷೇಪ'. ಮಣಿ ಶಂಕರ್ ಅಯ್ಯರ್ ಮನೆಯಲ್ಲಿ ಪಾಕ್ ಹೈಕಮಿಷನರ್ ಸಭೆ ಹಾಗೂ ಅಹ್ಮದ್ ಪಟೇಲ್ರನ್ನ ಗುಜರಾತ್ ಮುಖ್ಯಮಂತ್ರಿ ಮಾಡಲು ಪಾಕಿಸ್ತಾನ ಷಡ್ಯಂತ್ರ ನಡೆಸಿದೆ ಅಂತಾ ಪ್ರಧಾನಿ ಮೋದಿ ಗಂಭೀರ ಆರೋಪ ಮಾಡಿದ್ದರು. ಈ ಆರೋಪ ಧರ್ಮ ಹಾಗೂ ರಾಷ್ಟ್ರೀಯತೆ ಹೆಸರಲ್ಲಿ ಹಿಂದೂಗಳ ಮತಗಳನ್ನ ಸೆಳೆಯುವ ಬಿಜೆಪಿಯ ಪೊಲಿಟಿಕಲ್ ಗಿಮಕ್ ಆಗಿತ್ತು ಅನ್ನೋದು ಈಗ ಕನ್ನಡಿಯಲ್ಲಿ ಮುಖ ಕಂಡಷ್ಟೇ ಸ್ಪಷ್ಟವಾಗಿದೆ.

ಕರ್ನಾಟಕದ ಅಖಾಡ:

ಬಿಜೆಪಿ ಗುಜರಾತ್ನಲ್ಲಿ ಉರುಳಿಸಿದ್ದ ದಾಳವನ್ನೇ ಕರ್ನಾಟಕದಲ್ಲೂ ಉರುಳಿಸಲು ಮುಂದಾಗಿದೆ. ಮೂರು ದಿನಗಳ ಕಾಲ ರಾಜ್ಯ ಪ್ರವಾಸ ನಡೆಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ವಿಲಕ್ಷಣ ಅನ್ನಿಸುವ ಚುನಾವಣಾ ತಂತ್ರ ಹೆಣೆದುಕೊಟ್ಟು ಹೋಗಿದ್ದಾರೆ.

ಸದ್ಯ ನರೇಂದ್ರ ಮೋದಿ ನೇತೃತ್ವ ಎನ್ಡಿಎ ಸರ್ಕಾರ ಕೇಂದ್ರದಲ್ಲಿದೆ. ಭಾರತವನ್ನ ನಾವು ಪ್ರಗತಿಯತ್ತ ತೆಗೆದುಕೊಂಡು ಹೋಗಿದ್ದೇವೆ ಅಂತಾ ಬಿಜೆಪಿ ನಾಯಕರು ಪುಂಖಾನುಪುಂಖವಾಗಿ ಹೇಳಿಕೊಳ್ಳುತ್ತಾರೆ. ನೋಟ್ ಬ್ಯಾನ್, ಜಿಎಸ್ಟಿ, ಮೇಕ್ ಇನ್ ಇಂಡಿಯಾ, ಫಾರಿನ್ ಡೈರೆಕ್ಟ್ ಇನ್ವೆಸ್ಟಮೆಂಟ್ನಂತಹ ಹಲವು ಯೋಜನೆಗಳು ನಮ್ಮ ಶಕ್ತಿ ಅಂತಾ ಬಿಜೆಪಿ ಪ್ರತಿಪಾದಿಸುತ್ತಲೇ ಬಂದಿದೆ. ನೋಟ್ ಬ್ಯಾನ್ ಬಳಿಕ ಉಂಟಾದ ನೋಟಿನ ಕೊರತೆಯಿಂದಾಗಿ ನೂರಾರು ಜೀವಗಳು ಹೋಗಿದೆ. ಆರ್ಥಿಕತೆ ಮೇಲೆ ಸಾಕಷ್ಟು ಪೆಟ್ಟು ಬಿದ್ದಿದೆ. ಹಾಗಿದ್ದೂ, ಬಿಜೆಪಿ ನೋಟ್ ಬ್ಯಾನ್ನ್ನು ಸಮರ್ಥಿಸಿಕೊಳ್ಳುತ್ತಲೇ ಬಂದಿದೆ. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶ ಅಂದ್ರೆ ಕೇಂದ್ರ ಸರ್ಕಾರದ ಈ ಯಾವ ಯೋಜನೆಯೂ ಬಿಜೆಪಿಗೆ ಮತ ಕೇಳಲು ಪ್ರಮುಖ ಅಜೆಂಡಾವಾಗುವ ಸಾಧ್ಯತೆ ಕಡಿಮೆ ಇದೆ. ಬಿಜೆಪಿ ಕೇಂದ್ರದಲ್ಲಿ ನಾನು ಮಾಡಿರೋ ಸಾಧನೆಗಳ ಮೂಲಕ ಮತ ಕೇಳಲು ಜನರ ಬಳಿ ತೆರಳಿದರೆ ಪ್ರತಿಕ್ರಿಯೆ ಉತ್ತಮವಾಗಿರುವುದಿಲ್ಲ ಎಂಬುದು ಈಗಾಗಲೇ ರಾಜ್ಯ ಬಿಜೆಪಿ ನಾಯಕರ ಅನುಭವಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಚುನಾವಣಾ ಅಜೆಂಡಾವನ್ನು ತನ್ನ ಮೂಲ ನೆಲೆಯಾದ ಧರ್ಮ ಮತ್ತು ಕೋಮು ದೃವೀಕರಣದ ಆಧಾರದ ಮೇಲೆ ರೂಪಿಸಲು ಅಮಿತ್ ಶಾ ಸೇರಿದಂತೆ ಕೇಂದ್ರ ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ ಎಂಬುದು ಲಭ್ಯವಾಗುತ್ತಿರುವ ಮಾಹಿತಿ.

ಸಮಾಜವನ್ನ ಒಡೆಯುವ ಸರಳ ಅಜೆಂಡಾಗಳಿಗೆ ಬಿಜೆಪಿ ಚುನಾವಣೆ ಹೊಸ್ತಿಲಿನಲ್ಲಿ ಮೊರೆ ಹೋಗಲಿದೆ. ಬೆಂಗಳೂರಿಗೆ ಬಂದಿದ್ದ ಅಮಿತ್ ಶಾ, ‘ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆಕ್ರಮಣಕಾರಿ ಧೋರಣೆ ತಾಳಿ. ಸಿದ್ದರಾಮಯ್ಯ ಸರ್ಕಾರವನ್ನ ಹಿಂದೂ ವಿರೋಧಿ ಅಂತಾ ಬಿಂಬಿಸಿ. ಮಹದಾಯಿ ಕಿಚ್ಚನ್ನ ಕಾಂಗ್ರೆಸ್ ಸರ್ಕಾರದ ವಿರುದ್ಧ ತಿರುಗಿಸಿ. ಈ ಕಿಚ್ಚನನ್ನ ಮತ್ತಷ್ಟು ತೀವ್ರಗೊಳಿಸಿ’ ಅಂತಾ ಸೂಚನೆ ನೀಡಿದ್ದಾರೆ ಅಂತಾ ವರದಿಯಾಗಿದೆ.

ಅಮಿತ್ ಶಾ ಅವರ ನೀತಿಗೆ ಈ ಹಿಂದೆ ಸಂಸದ ಪ್ರತಾಪ್ ಸಿಂಹ ನೀಡಿದ್ದ ಹೇಳಿಕೆ ಮತ್ತಷ್ಟು ಪುಷ್ಠಿ ಕೊಡುತ್ತೆ. ಅಮಿತ್ ಶಾ, ‘ಅಕ್ರಮಣಕಾರಿಯಾಗಿ.. ಕಿಚ್ಚನ್ನ ತೀವ್ರಗೊಳಿಸಿ... ಹಿಂದೂ ವಿರೋಧಿ ಎಂದು ಬಿಂಬಿಸಿ’ ಅಂತಾ ತಮ್ಮ ಕಾರ್ಯಕರ್ತರಿಗೆ ಕರೆ ನೀಡುತ್ತಿರುವುದು ಪ್ರಜಾಪ್ರಭುತ್ವವನ್ನ ಪಾತಾಳಕ್ಕೆ ತಳ್ಳುತ್ತಿರುವುದಲ್ಲದೇ ಪ್ರಕ್ರಿಯೆ ಅಲ್ಲವೇ? ಹೀಗಂತ ಪ್ರಶ್ನೆಯನ್ನು ಮುಂದಿಟ್ಟರೆ, ರಾಜ್ಯ ಬಿಜೆಪಿಯ ಪ್ರಮುಖ ನಾಯಕರೊಬ್ಬರು, "ಸದ್ಯಕ್ಕೆ ಕರ್ನಾಟಕದಲ್ಲಿ ಯಾವ ಅಜೆಂಡಾ ಇಟ್ಟುಕೊಂಡು ಸರಕಾರದ ವಿರುದ್ಧ ಬೀದಿಗೆ ಇಳಿಯಲು ಸಾಧ್ಯ ನೀವೇ ಹೇಳಿ?'' ಎಂದು ಪ್ರಶ್ನಿಸಿದರು.

ಅಂತಿಮಕವಾಗಿ ಈ ಬಾರಿಯ ಕರ್ನಾಟಕ ವಿಧಾನಸಭೆಯನ್ನು ಗೆಲ್ಲುವುದೊಂದನ್ನೇ ಪರಮ ಧ್ಯೇಯ ಮಾಡಿಕೊಂಡಿದ್ದಾರೆ ನಮ್ಮ ನಾಯಕರು ಎನ್ನುತ್ತಾರೆ ಅವರು. ಬಿಜೆಪಿಯ ನಾಯಕ, ಸಂಘಪರಿವಾರದ ಪ್ರಮುಖ ಬುದ್ದಿಜೀವಿ ರಾಮ್ ಮಾಧವ್, ಪತ್ರಿಕೆಯೊಂದಕ್ಕೆ ಬರೆದಿದ್ದ ಲೇಖನದಿಂದ ಬಿಜೆಪಿಯ ಅಂತಿಮ ಗುರಿ ಏನು ಅನ್ನೋದು ಇನ್ನಷ್ಟು ಸ್ಪಷ್ಟವಾಗಿದೆ. ಚುನಾವಣೆಯನ್ನ ವಿಜ್ಞಾನದಂತೆ ಭಾವಿಸುವ ಬಿಜೆಪಿಗೆ ಗೆದ್ದು ಅಧಿಕಾರ ಹಿಡಿಯುವುದು ಸದ್ಯ ಎದುರಿಗಿರುವ ಗುರಿ ಎಂಬುದನ್ನು ಅವರು ಬಿಚ್ಚಿಟ್ಟಿದ್ದಾರೆ.

"ಕೇಂದ್ರ ಸರ್ಕಾರದ ಸಾಧನೆ ಹಾಗೂ ರಾಜ್ಯ ಸರ್ಕಾರದ ವೈಫಲ್ಯ ಮುಂದಿಟ್ಟುಕೊಂಡು ಜನರ ಬಳಿಗೆ ಹೋಗಿ ಅಂತಾ ಅಮಿತ್ ಶಾ ಕರೆ ನೀಡಬಹುದಿತ್ತು. ಆದ್ರೆ, ಬಿಜೆಪಿಗೆ ಜನಕಲ್ಯಾಣದ ಮಾನದಂಡ ಮುಂದಿಟ್ಟುಕೊಂಡು ಚುನಾವಣೆ ಎದುರಿಸಿರೋ ಇರಾದೆ ಇದ್ದಂತೆ ಕಾಣುತ್ತಿಲ್ಲ. ಗುಜರಾತ್ ಎಲೆಕ್ಷನ್ನಲ್ಲಿ ನಡೆದಂತೆ ಕರ್ನಾಟಕದಲ್ಲೂ ಬಿಜೆಪಿ ಮತಕ್ಕಾಗಿ ಧರ್ಮ ಹಾಗೂ ಹುಸಿ ರಾಷ್ಟ್ರೀಯತೆಯ ಮೊರೆ ಹೋಗುವುದು ಪಕ್ಕಾ ಆಗಿದೆ. ಅದಕ್ಕೆ ಅಮಿತ್ ಶಾ ರಣತಂತ್ರ ಪುರಾವೆಯಂತೆ ಕಾಣುತ್ತಿದೆ. ಈ ವರ್ಷದ 8 ರಾಜ್ಯಗಳ ವಿಧಾನಸಭೆ ಜೊತೆ ಮುಂದಿನ ಲೋಕಸಭೆ ಚನಾವಣೆ ಸಹ ನಡೆಯಲಿದೆ. ಬಿಜೆಪಿ ತನ್ನ ಗೆಲುವಿನ ಓಟ ಮುಂದುವರಿಸಲು ಧರ್ಮ ಹಾಗೂ ರಾಷ್ಟ್ರೀಯತೆಯ ಅಸ್ತ್ರ ಪ್ರಯೋಗಿಸಿ ಹಿಂದೂ ಮತಗಳ ದೃವೀಕರಣಕ್ಕೆ ಯತ್ನಿಸಲಿದೆ,'' ಎನ್ನುತ್ತಾರೆ ಪತ್ರಕರ್ತರೊಬ್ಬರು.

ನಾಯಕರ ವರ್ಚಸ್ಸು, ಸರ್ಕಾರದ ಸಾಧನೆ, ವಿರೋಧ ಪಕ್ಷಗಳ ವೈಫಲ್ಯಗಳು ಚುನಾವಣೆಯ ಅಜೆಂಡಾಗಳಾಗಬೇಕಿತ್ತು. ಆದರೆ ಅವೆಲ್ಲವನ್ನೂ ಬದಿಗೆ ಸರಿಸಲು ಹೊರಟಿರುವ ಬಿಜೆಪಿ ಈ ಬಾರಿ ಧರ್ಮವನ್ನು ಕರ್ನಾಟಕ ಚುನಾವಣೆಯಲ್ಲಿ ಮುಂದಿಡುವುದು ಸ್ಪಷ್ಟವಾಗಿದೆ. ಅದೇ ರಾಜಕೀಯ ಗೆಲುವು-ಸೋಲುಗಳನ್ನು ನಿರ್ಧರಿಸುವ ಪ್ರಮುಖ ಮಾನದಂಡವಾಗಲಿದೆ. ಬಿಜೆಪಿ ಈ ವಿಲಕ್ಷಣ ಚುನಾವಣಾ ಅಸ್ತ್ರಕ್ಕೆ ಜನ್ಮ ನೀಡಿದ್ರೆ ಕಾಂಗ್ರೆಸ್ ಅದನ್ನ ಪೋಷಿಸಲು ಹಿಂದೇಟು ಹಾಕುವ ಸಾಧ್ಯತೆಗಳಿಲ್ಲ. ಬಿಜೆಪಿ ತುಳಿದ ದಾರಿಯಲ್ಲೇ ರಾಹುಲ್ ಗಾಂಧಿ ಹೆಜ್ಜೆ ಹಾಕುವ ಸಾಧ್ಯತೆಗಳೂ ಇವೆ. ಈಗಾಗಲೇ 'ನಾನೂ ಕೂಡ ಬ್ರಾಹ್ಮಣ' ಎನ್ನುವ ಮೂಲಕ ಅವರೂ ಕೂಡ ಮೃದು ಹಿಂದುತ್ವದ ಹಾದಿಯಲ್ಲಿರುವುದನ್ನು ತೋರಿಸಿಕೊಟ್ಟಿದ್ದಾರೆ. ಇಂತಹ ಸನ್ನಿವೇಶದಲ್ಲಿ, ಚುನಾವಣೆ ಹೊಸ ಸರಕಾರದ ಸ್ಥಾಪನೆ ಮಾತ್ರವಲ್ಲ, ರಾಜ್ಯವನ್ನು ಧರ್ಮದ ಆಧಾರದ ಮೇಲೆ ಇನ್ನಷ್ಟು ಒಡೆಯುವ ಸಾಧ್ಯತೆಗಳೂ ಇವೆ. ಅದಕ್ಕೇ ಕೇಳಿದ್ದು, ಪ್ರಜಾತಂತ್ರವನ್ನ ಪಾತಾಳಕ್ಕೆ ತಳ್ಳುತ್ತಿದೆಯೇ ಚುನಾವಣಾ ಚಾಣಾಕ್ಷ 'ಶಾ' ತಂತ್ರಗಾರಿಕೆ? ಅಂತ.