ಸಾಂದರ್ಭಿಕ ಚಿತ್ರ
ಸುದ್ದಿ ಸಾಗರ

ರಗ್ಬಿ ತರಬೇತಿಗಾಗಿ ವಿದೇಶಕ್ಕೆ ಹೋದ ಮಕ್ಕಳು: ಕರ್ನಾಟಕದಲ್ಲಿ ಮಾನವ ಕಳ್ಳಸಾಗಣೆಯ ಬೇರುಗಳು...

Summary

ವರ್ಷದ ಕೊನೆಯಲ್ಲಿ ಉತ್ತರ ಭಾರತದಿಂದ ಮಕ್ಕಳ ಕಳ್ಳಸಾಗಣೆ ಜಾಲದ ಕುರಿತು ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿದೆ. ಭಾರತದಿಂದ 25 ಮಕ್ಕಳನ್ನು ಕ್ರೀಡಾಕೂಟದ ನೆಪದಲ್ಲಿ ಫ್ರಾನ್ಸ್‌ಗೆ ಕರೆಸಿಕೊಂಡು, ಅಲ್ಲಿ ಮಾರಾಟಕ್ಕಿಟ್ಟ ತಂಡವನ್ನು ಪತ್ತೆಹಚ್ಚಲಾಗಿದೆ. ಫ್ರಾನ್ಸ್ ದೇಶದ  ಪೊಲೀಸ್ ಇಂಟರ್ ಪೋಲ್‌ನಿಂದ ಮಾಹಿತಿ ಪಡೆದ ಸಿಬಿಐ ಭಾರತದಲ್ಲಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದೆ.

ಲಲಿತ್ ಡೇವಿಡ್ ಡೀನ್, ಸಂಜೀವ್ ರಾಜ್ ಮತ್ತು ವರುಣ್ ಚೌಧರಿ ವಶದಲ್ಲಿರುವ ಆರೋಪಿಗಳು. ಇವರುಗಳು ದೆಹಲಿ, ಫರೀಯಾಬಾದ್ ಮೂಲದವರು ಎನ್ನಲಾಗಿದೆ. ಆರೋಪಿಗಳ ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳಲ್ಲಿ ಮಾನವ ಕಳ್ಳಸಾಗಾಣಿಕೆಗೆ ಒಳಗಾದ ಮಕ್ಕಳ ಕುರಿತು ಹೆಚ್ಚಿನ ಮಾಹಿತಿ ಸಿಗಬಹುದು ಎಂಬ ನಿರೀಕ್ಷೆ ಇದೆ.

ಹಿನ್ನೆಲೆ:

ಮಕ್ಕಳ ಕಳ್ಳಸಾಗಾಣಿಕೆ ಏಜೆಂಟರ್‌ಗಳು ಕ್ರೀಡಾಕೂಟದ ನೆಪದಲ್ಲಿ ಮಕ್ಕಳನ್ನು ವಿದೇಶಕ್ಕೆ ಕೊಂಡೊಯ್ಯುವ ಯೋಜನೆ ಹಾಕಿಕೊಂಡು ಬಂದಿದ್ದರು. ಅದಕ್ಕಾಗಿ ಉತ್ತರ ಭಾರತದಲ್ಲಿ ಸಣ್ಣಮಟ್ಟದಲ್ಲಿ ರಗ್ಬಿ ತರಬೇತಿಯನ್ನು ಆಯೋಜಿಸಿದ್ದರು. ನಂತರ, ತರಬೇತಿಯಲ್ಲಿ ಆಯ್ಕೆಯಾದ 18 ವರ್ಷದೊಳಗಿನ 25 ಮಕ್ಕಳನ್ನು ಅಂತರಾಷ್ಟ್ರೀಯ ತರಬೇತಿಗೆಗಾಗಿ ಫ್ರಾನ್ಸ್ ದೇಶದ ಪ್ಯಾರಿಸ್‌ಗೆ ಕರೆದುಕೊಂಡು ಹೋಗಬೇಕು ಎಂದು ಪೋಷಕರ ಮನವೊಲಿಸಿದ್ದಾರೆ.

ಪೋಷಕರು ದೆಹಲಿ, ಪಂಜಾಬ್ ಮತ್ತು ಹರ್ಯಾಣಾ ರಾಜ್ಯಗಳಿಗೆ ಸೇರಿದವರಾಗಿದ್ದು, ತಮ್ಮ ಮಕ್ಕಳಿಗೆ ಅಂತರಾಷ್ಟ್ರೀಯ ಮಟ್ಟದ ರಗ್ಬಿ ತರಬೇತಿ ಸಿಗುತ್ತದೆ ಎಂಬ ಆಶಯದಿಂದ ಅವರನ್ನು ಆರೋಪಿಗಳೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಇದಿಷ್ಟನ್ನು ಸಿಬಿಐ ಈಗ ಬಿಡಿಸಿಟ್ಟಿದೆ.

“ರಗ್ಬಿ ತರಬೇತಿ ನೆಪದಲ್ಲಿ ಪೋಷಕರಿಂದ ತಲಾ 25-30 ಲಕ್ಷ ರೂಗಳನ್ನು ಪಡೆದಿದ್ದಾರೆ,”
-ಅಭಿಷೇಕ್ ದಯಾಳ್, ಸಿಬಿಐ ವಕ್ತಾರ

ಫ್ರಾನ್ಸ್ ದೇಶದ ಪ್ಯಾರಿಸ್ ನಗರದಲ್ಲಿ ರಗ್ಬಿ ಕಾರ್ಯಕ್ರಮ ಮತ್ತು ತರಬೇತಿ ಕುರಿತು ಒಂದು ನಕಲಿ ಆಮಂತ್ರಣ ತಯಾರು ಮಾಡಿದ್ದಾರೆ. ಈ ಆಮಂತ್ರಣದ ಆಧಾರದ ಮೇಲೆ ಮಕ್ಕಳಿಗೆ ವೀಸಾ ದೊರಕಿತ್ತು ಎನ್ನಲಾಗಿದೆ.

“2016 ಫೆಬ್ರುವರಿ ಸಮಯದಲ್ಲಿ 25 ಮಕ್ಕಳನ್ನು ಮಾನವ ಕಳ್ಳ ಸಾಗಾಣಿಕಾ ಏಜೆಂಟರ್‌ಗಳು ಫ್ರಾನ್‌ ತಲುಪಿಸಿದ್ದಾರೆ. ಮಕ್ಕಳಿಗೆ ಯಾವ ಸಂದೇಹವೂ ಬರಬಾರದು ಎನ್ನುವ ಕಾರಣದಿಂದ, ಒಂದು ವಾರದ ರಗ್ಬಿ ತರಬೇತಿ ಆಯೋಜಿಸಲಾಗಿತ್ತು. ತರಬೇತಿ ವೇಳೆಯಲ್ಲಿ ಮಕ್ಕಳನ್ನು ಫ್ರಾನ್ಸ್ ದೇಶದ ಗುರುದ್ವಾರದಲ್ಲಿ ಇರಿಸಿದ್ದರು,”
-ಸಿಬಿಐ ಅಧಿಕಾರಿಯೊಬ್ಬರು

“ಒಂದು ವಾರದ ತರಬೇತಿ ಮುಗಿದ ನಂತರದಲ್ಲಿ 25 ಮಕ್ಕಳ ಪಾಸ್‌ಪೋರ್ಟ್ ಸೇರಿದಂತೆ ಎಲ್ಲ ದಾಖಲೆಗಳನ್ನು ಏಜೆಂಟರೇ ಇಟ್ಟುಕೊಂಡು, ಭಾರತಕ್ಕೆ ವಾಪಾಸಾಗುವ ಟಿಕೆಟ್‌ಗಳನ್ನು ಪೋಷಕರಿಗೆ ತಿಳಿಸದೇ ರದ್ದು ಮಾಡಿದ್ದರು. ಆದರೆ ಈ ಮೊದಲೇ ಅನಾರೋಗ್ಯ ಹಾಗೂ ವಿವಿಧ ಕಾರಣಗಳಿಗಾಗಿ ಇಬ್ಬರು ಬಾಲಕರು ಭಾರತಕ್ಕೆ ಹಿಂದಿರುಗಿದ್ದರು. ಇನ್ನುಳಿದ 23 ಬಾಲಕರಲ್ಲಿ ಒಬ್ಬ ಬಾಲಕ ಈ ಕಳ್ಳ ಸಾಗಾಣಿಕೆ ಜಾಲವನ್ನು ಅರಿತು ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದ. ಅದೇ ಬಾಲಕ ಫ್ರಾನ್ಸ್‌ನ ಪೊಲೀಸರಿಗೆ ಕಣ್ಣಿಗೆ ಸಿಕ್ಕು ಈ ಪ್ರಕರಣದ ರಹಸ್ಯವನ್ನು ತೆರೆದಿಟ್ಟಿದ್ದಾನೆ,” ಎನ್ನುತ್ತವೆ ಸಿಬಿಐ ಮೂಲಗಳು.

“ಉಳಿದಿರುವ 22 ಮಕ್ಕಳು ಪ್ಯಾರಿಸ್‌ನಲ್ಲಿದ್ದಾರೋ ಅಥವಾ ಯೂರೋಪ್‌ನಲ್ಲಿದ್ದಾರೋ ಎನ್ನುವುದನ್ನು ಪತ್ತೆ ಹಚ್ಚಲಾಗುತ್ತಿದೆ. ಬಹುಶಃ ಮಕ್ಕಳನ್ನು ಯಾರಿಗಾದರೂ ಮಾರಿರಬಹುದು ಎಂಬ ಅನುಮಾನವಿದೆ. ಈ ಕುರಿತು ಸಿಬಿಐಗೆ ಯಾವುದೇ ಪೋಷಕರಿಂದ ದೂರು ಬಂದಿಲ್ಲ. ಬಹುಶಃ ರಾಜ್ಯ ಪೊಲೀಸ್ ಇಲಾಖೆಗಳಿಗೆ ದೂರು ಬಂದಿರುವ ಸಾಧ್ಯತೆಗಳಿವೆ. ಅದನ್ನು ನಾವು ಪರಿಶೀಲನೆ ಮಾಡುತ್ತಿದ್ದೇವೆ. ಪೋಷಕರು ತಮ್ಮ ಮಕ್ಕಳನ್ನು ಫ್ರಾನ್ಸ್‌ಗೆ ಕಳುಹಿಸಲು ಹೇಗೆ ಒಪ್ಪಿಗೆ ನೀಡಿದರು ಎಂಬುದರ ಕುರಿತು ವಿವರವಾದ ಮಾಹಿತಿ ಕಲೆಹಾಕಲಾಗುತ್ತಿದೆ,” ಎಂದು ಸಿಬಿಐ ವಕ್ತಾರ ಅಭಿಷೇಕ್ ದಯಾಳ್ ಹೇಳಿದ್ದಾರೆ.

ಜಾಲದ ಬೇರುಗಳು- ಕರ್ನಾಟಕದಲ್ಲಿ:

ಹರಿಯಾಣ ಭಾಗದಲ್ಲಿ ನಡೆದ ಒಂದು ಘಟನೆ ವರ್ಷದ ಕೊನೆಯಲ್ಲಿ ಬಯಲಿಗೆ ಬಂದಿದೆ. ಹೀಗೆ, ಸುದ್ದಿಯಾಗಾಉವ ಹೋಗುವ ಪ್ರಕರಣಗಳು ಎಷ್ಟಿವೆಯೋ? ಕರ್ನಾಟಕ ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಇದನ್ನು ಮಾನವ ಕಳ್ಳಸಾಗಣೆಯ ‘ಹಾಟ್‌ ಸ್ಪಾಟ್‌’ ಎಂದು ಗುರುತಿಸಲಾಗುತ್ತಿದೆ. 2009-2012ರ ಕೇಂದ್ರ ಗೃಹ ಸಚಿವಾಲಯದ ವರದಿಗಳು, ದೇಶದಲ್ಲಿ ಮೂರನೇ ಅತಿ ಹೆಚ್ಚು ಮಾನವ ಕಳ್ಳಸಾಗಾಣಿಕೆ ಪ್ರಕರಣಗಳು ಕರ್ನಾಟಕದಿಂದ ವರದಿಯಾಗುತ್ತವೆ ಎಂದು ಹೇಳುತ್ತವೆ.

ಈ ಅವಧಿಯಲ್ಲಿ 1,379 ಮಾನವ ಕಳ್ಳಸಾಗಣೆ ಪ್ರಕರಣಗಳು ಕರ್ನಾಟಕದಿಂದ ವರದಿಯಾಗಿವೆ. ತಮಿಳುನಾಡು 2,244 ಪ್ರಕರಣಗಳು ಮತ್ತು ಆಂಧ್ರ ಪ್ರದೇಶ 2,157 ಪ್ರಕರಣಗಳು ವರದಿಯಾಗಿದ್ದವು ಎಂದು ಗೃಹ ಸಚಿವಾಲಯ ಹೇಳಿತ್ತು.ಕರ್ನಾಟಕದಲ್ಲಿ 2011-17ರ ನಡುವಿನ ಅವಧಿಯಲ್ಲಿ 1,680 ಮಕ್ಕಳ ಕಳ್ಳಸಾಗಾಣಿಕೆ ಪ್ರಕರಣಗಳು ದಾಖಲಾಗಿವೆ ಎನ್ನುತ್ತವೆ ಸಿಐಡಿಯ ಮಾನವ ಕಳ್ಳ ಸಾಗಾಣಿಕೆ ವಿರೋಧಿ ಘಟಕದ ವರದಿಗಳು.

ಮಾನವ ಕಳ್ಳಸಾಗಾಣಿಕೆಯನ್ನು ತಡೆಯಲೆಂದೇ ರಾಜ್ಯಾದ್ಯಂತ ಒಂಬತ್ತು ಮಾನವ ಕಳ್ಳಸಾಗಣೆ ವಿರೋಧಿ ಘಟಕಗಳನ್ನು ಸ್ಥಾಪಿಸಲಾಗಿದೆ. ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಮೈಸೂರು, ಬೆಳಗಾವಿ, ಮಂಗಳೂರು, ದಕ್ಷಿಣ ಕನ್ನಡ, ರಾಯಚೂರು, ಕಲಬುರಗಿ, ದಾವಣಗೆರೆ, ಹಾಗೂ ವಿಜಯಪುರದಲ್ಲಿ ಈ ಘಟಕಗಳನ್ನು ಸ್ಥಾಪಿಸಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಗಳೊಂದಿಗೆ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ತರಬೇತಿಯನ್ನೂ ನೀಡುತ್ತಿದ್ದಾರೆ.

“ಪ್ರತಿ 8 ನಿಮಿಷಕ್ಕೆ ಒಂದು ಮಗು ಭಾರತದಲ್ಲಿ ನಾಪತ್ತೆಯಾಗುತ್ತದೆ. ಈ ಅನುಪಾತ ದೇಶದಲ್ಲಿ ಕಡಿಮೆ ಆಗಬೇಕು. ಕರ್ನಾಟಕದಲ್ಲಿ ಕರ್ನಾಟಕದಲ್ಲಿ ಆಂಟಿ ಹ್ಯೂಮನ್ ಟ್ರಾಫಿಕಿಂಗ್ ಯುನಿಟ್ ಮೊದಲಿಗಿಂತ ಈಗ ಚುರುಕಾಗಿ ಕೆಲಸ ಮಾಡುತ್ತಿದೆ ಎನಿಸುತ್ತಿದೆ. ಕಾನೂನು ಪ್ರಕಾರ ಮಾನವ ಕಳ್ಳಸಾಗಾಣಿಕೆ ವಿರುದ್ಧ ಹೋರಾಡುವ ಜೊತೆಗೆ ಜನರಲ್ಲಿ ಅರಿವು ಮೂಡಿಸುವುದೂ ಮುಖ್ಯ,”
-ಸವಿತಾ, ಆಪ್ಸಾ(ಅಸೋಶಿಯೇಷನ್ ಫಾರ್ ಪ್ರೊಮೊಟಿಂಗ್ ಸೋಷಿಯಲ್ ಆಕ್ಷನ್) ಎನ್‌ಜಿಓ

ಕಳೆದ ಚುನಾವಣೆಗೂ ಮುಂಚೆ ನಡೆದ ರಾಜಕೀಯ ಪಲ್ಲಟದಲ್ಲಿ ಕೆಜೆಪಿ ಸೇರುವ ಮುನ್ನ ಬಿಜೆಪಿ ನಾಯಕಿ ಶೋಭ ಕರಂದ್ಲಾಜೆ ರಾಜ್ಯದಲ್ಲಿ 'ನಾಪತ್ತೆಯಾದ ಹೆಣ್ಣು ಮಕ್ಕಳ' ಕುರಿತು ವರದಿ ಕೇಳಿದ್ದರು. ಆದರೆ, ಅದು ರಾಜಕೀಯ ದಾಳವಾಗಿ, ಅಂದಿನ ಬಿಜೆಪಿ ಸರಕಾರ ಒಂದಷ್ಟು ಕೆಲಸ ಮಾಡಿ, ಚುನಾವಣೆ ನಂತರ ವಿಚಾರವೇ ಮರೆತು ಹೋಯಿತು. ಎಲ್ಲವನ್ನೂ ಪಕ್ಕಕ್ಕಿಟ್ಟು ನೋಡಿದರೆ, ಹೆಣ್ಣು ಮಕ್ಕಳ ನಾಪತ್ತೆ ಹಾಗೂ ಮಾನವ ಕಳ್ಳ ಸಾಗಣೆ ಒಂದಕ್ಕೊಂದು ಬೆಸೆದುಕೊಂಡಿರುವ ಅಂಶಗಳು. ಅವುಗಳನ್ನು ಹತೋಟಿಗೆ ತರುವ ಪ್ರಯತ್ನ ದೊಡ್ಡಮಟ್ಟದಲ್ಲಿ ಆರಂಭವಾಗಬೇಕಿದೆ.