ಕಾವೇರಿ ವಿಚಾರದಲ್ಲಿ ಒಕ್ಕಟ್ಟು; ಮಹದಾಯಿ ವಿಚಾರದಲ್ಲಿ ಬಿಕ್ಕಟ್ಟು; ಇದ್ಯಾವ ಸೀಮೆ ‘ನೀರಿನ ರಾಜಕೀಯ’?
ಸುದ್ದಿ ಸಾಗರ

ಕಾವೇರಿ ವಿಚಾರದಲ್ಲಿ ಒಕ್ಕಟ್ಟು; ಮಹದಾಯಿ ವಿಚಾರದಲ್ಲಿ ಬಿಕ್ಕಟ್ಟು; ಇದ್ಯಾವ ಸೀಮೆ ‘ನೀರಿನ ರಾಜಕೀಯ’?

  • ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ3 ದಶಕಗಳಿಗಿಂತಲೂ ಹೆಚ್ಚಿನ ಇತಿಹಾಸ
  • ಹುಬ್ಬಳ್ಳಿ-ಧಾರವಾಡಗಳಲ್ಲಿ ಬಸ್ ಸಂಚಾರ ಸ್ಥಗಿತ.
  • ಬೆಳಗಾವಿಯಲ್ಲೂ ಮಹದಾಯಿ ಕಿಚ್ಚು ಹೆಚ್ಚಿದೆ.

ಮೂರು ದಶಕಗಳ ನೀರು ಹಂಚಿಕೆ ವಿವಾದಕ್ಕೆ ಮೂರು ದಿನಗಳಲ್ಲಿ ಪರಿಹಾರ ಸಿಗದಿದ್ದರೂ; ಚುನಾವಣಾ ಹಿನ್ನಲೆಯಲ್ಲಿ ರಾಜ್ಯದ ಎರಡು ಪ್ರಮುಖ ಪಕ್ಷಗಳಿಗೆ ಮಹಾದಾಯಿ ವಿಚಾರ ದಾಳವಾಗಿ ಬಳಕೆಯಾಗಿದೆ. ಕಾವೇರಿ ವಿಚಾರದಲ್ಲಿ ದೇವರಾಜ್‌ ಅರಸು ಸರಕಾರದಿಂದ ಹಿಡಿದು ಮೊನ್ನೆಮೊನ್ನೆವರೆಗೂ ಪಕ್ಷಾತೀತವಾಗಿ ದನಿ ಎತ್ತಿದ ರಾಜಕಾರಣಿಗಳೀಗ, ಮಹದಾಯಿ ನೀರಿಗಾಗಿ ಬೇಡಿಕೆಯನ್ನು ಮುಂದಿಟ್ಟುಕೊಂಡು ಬೆಂಗಳೂರಿಗೆ ಬಂದ ರೈತರನ್ನು ಬೀದಿ ಬೀದಿ ಸುತ್ತಿಸುವ 'ಹೀನ ರಾಜಕೀಯ'ವನ್ನು ಯಶಸ್ವಿಯಾಗಿ ಮಾಡಿಮುಗಿಸಿದ್ದಾರೆ. ಈ ಮೂಲಕ ಕಾವೇರಿಯಲ್ಲಿ ಒಗ್ಗಟ್ಟು, ಚುನಾವಣೆ ಹತ್ತಿರ ಬಂದಾಗ ಮಹಾದಾಯಿ ಬಿಕ್ಕಟ್ಟು ಎಂದು ಬಿಂಬಿಸುವ ಪ್ರಯತ್ನಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ಕೈ ಹಾಕಿವೆ.

ಹುಬ್ಬಳ್ಳಿಯಲ್ಲಿ ನಡೆದ ಮಹಾದಾಯಿ ಬಂದ್ (ಚಿತ್ರ: ಶಶಿಧರ್)
ಹುಬ್ಬಳ್ಳಿಯಲ್ಲಿ ನಡೆದ ಮಹಾದಾಯಿ ಬಂದ್ (ಚಿತ್ರ: ಶಶಿಧರ್)

ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಮೂರು ದಶಕಗಳಿಗಿಂತಲೂ ಹೆಚ್ಚಿನ ಇತಿಹಾಸವಿದೆ. ಎರಡೂವರೆಗ ವರ್ಷಗಳ ಹಿಂದೆ ಆರಂಭವಾದ ಈ ಹಂತದ ಮಹಾದಾಯಿ ನೀರಿಗಾಗಿನ ಪ್ರತಿಭಟನೆ ಇವತ್ತಿಗೆ (ಡಿ.27) 896ನೇ ದಿನಕ್ಕೆ ಕಾಲಿಟ್ಟಿದೆ. ಉತ್ತರ ಕರ್ನಾಟಕದಲ್ಲಿ ಬಂದ್‌ ಬಂದ್ ಆಚರಿಸಲಾಗಿದೆ. ಹುಬ್ಬಳ್ಳಿ-ಧಾರವಾಡಗಳಲ್ಲಿ ಬಸ್ ಸಂಚಾರ ಸ್ಥಗಿತಗೊಂಡು ಹೋರಾಟ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಬೆಳಗಾವಿಯಲ್ಲೂ ಮಹದಾಯಿ ಕಿಚ್ಚು ಹೆಚ್ಚಿದೆ. ಗದಗ ಮತ್ತು ಬಾಗಲಕೋಟೆ ಜಿಲ್ಲಗಳಲ್ಲೂ ಹೋರಾಟದ ಕಾವೇರಿದೆ. ಜೊತೆಗೆ ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಎದುರಿನ ಪ್ರತಿಭಟನೆ ಬುಧವಾರ ರಾಜಭವನ, ಚುನಾವಣಾ ಆಯೋಗ, ಜೆಡಿಎಸ್‌ ವರಿಷ್ಠ ದೇವೇಗೌಡ ಮನೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಗಳಿಗೆ ಪಾದಯಾತ್ರೆಯ ಸ್ವರೂಪವನ್ನು ಪಡೆದುಕೊಂಡಿದೆ.

ಒಂದಷ್ಟು ಹಿನ್ನೆಲೆ:

“ಕುಡಿಯಲು ನೀರು ತರುವ ಭಾರ ನನ್ನ ಮೇಲಿದೆ. ಇದು ನನ್ನ ಜವಾಬ್ದಾರಿ. ಇಂದಿನಿಂದ ನೀರಿನ ಚಿಂತೆ ಬಿಟ್ಟುಬಿಡಿ. ನೀರನ್ನು ನಾನೇ ತರುವೆ,” ಹೀಗೆಂದಿದ್ದರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ.

ಮಹದಾಯಿ ನದಿ ನೀರಿನ್ನು ಕರ್ನಾಟಕಕ್ಕೆ ತರುವುದಾಗಿ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ನಡೆದ 'ನವಕರ್ನಾಟಕ ಪರಿವರ್ತನಾ ಯಾತ್ರೆ'ಯ ಬೃಹತ್ ಸಮಾವೇಶದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಮ್ಮುಖದಲ್ಲಿ ಯಡಿಯೂರಪ್ಪ ಘೋಷಿಸಿದ್ದರು.

ಅದಕ್ಕೂ ಮೊದಲು ಮಹದಾಯಿ ಹೋರಾಟಗಾರರು, ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಣಿ ಹಾಗೂ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮನೆ ಮುಂದೆ ಧರಣಿ ನಡೆಸಿದ್ದರು. ಆಗ ಶೆಟ್ಟರ್ ಬೆಳಗಾವಿ ಚಳಿಗಾಲದ ಅಧಿವೇಶದಲ್ಲಿ ಪಾಲ್ಗೊಂಡಿದ್ದ ಕಾರಣದಿಂದ ಯಡುಯೂರಪ್ಪನವರೇ ಶೆಟ್ಟರ್ ನಿವಾಸಕ್ಕೆ ತೆರಳಿ, ಡಿ. 15ರೊಳಗೆ ಮಹದಾಯಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿ, ಪ್ರತಿಭಟನೆ ಹಿಂಪಡೆಯಿರಿ ಎಂದು ಕೇಳಿದ್ದರು. ಅವರ ಮಾತುಗಳ ಮೇಲೆ ಭರವಸೆ ಇಟ್ಟು ರೈತರು ಪ್ರತಿಭಟನೆ ಹಿಂಪಡೆದಿದ್ದರು.

‘ಕುಡಿಯುವ ನೀರು ಮೊದಲ ಆದ್ಯತೆ ಎಂಬುದನ್ನು ಗೋವಾ ಸರ್ಕಾರ ಅರ್ಥ ಮಾಡಿಕೊಳ್ಳುತ್ತದೆ. ಕುಡಿಯುವ ನೀರು ಪೂರೈಕೆ ವಿಚಾರದಲ್ಲಿ ನಿಮ್ಮ ಕಾಳಜಿಯನ್ನು ನಾನು ಸ್ವಾಗತಿಸುತ್ತೇನೆ. ಜನರ ಹಿತದೃಷ್ಟಿಯಿಂದ ವಿವಾದವನ್ನು ಬಗೆಹರಿಸಲು ನಾವು ಸಹಕಾರ ನೀಡುತ್ತೇವೆ,’ ಎಂದು ಗೋವಾ ಸರಕಾರದ ಮುಖ್ಯಮಂತ್ರಿ ಮನೋಹರ್ ಫಣಿಕ್ಕರ್ ಅವರಿಂದ ಪತ್ರ ಬರೆಸಿಕೊಂಡು ಬಂದ ಯಡಿಯೂರಪ್ಪ ನೀರಿನ ವ್ಯಾಜ್ಯದಲ್ಲಿ ಉತ್ತರ ಕರ್ನಾಟಕದಲ್ಲಿ ರಾಜಕೀಯ ಲಾಭ ಮಾಡಿಕೊಳ್ಳಲು ಮುಂದಾದರು.

ಇದು ಆಳದಲ್ಲಿ ಕುದಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದ ಹಾಗಾಯಿತು. ಮಹದಾಯಿ ಹೋರಾಟಗಾರರು ಬೆಂಗಳೂರಿನ ಬಿಜೆಪಿ ಕಚೇರಿ ಮುಂದೆ ಧರಣಿ ಆರಂಭಿಸಿದರು.ಹೇಗೇ ನೋಡಿದರೂ, ಮಹದಾಯಿ ಹೋರಾಟಗಾರರು ಬೆಂಗಳೂರಿಗೆ ಬಂದು, ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ರಾಜ್ಯ ಸರಕಾರದ ಪರೋಕ್ಷ ಸಹಕಾರವೂ ಇತ್ತು. ಪೊಲೀಸರು ಪ್ರತಿಭಟನಾನಿರತರಿಗೆ ಅವಕಾಶ ಮಾಡಿಕೊಡುವ ಮೂಲಕ ಪ್ರತಿಭಟನೆಗೆ ರಾಜಕೀಯ ಸ್ವರೂಪ ನೀಡಲು ಸಹಾಯ ಮಾಡಿದರು.

ಕೊನೆಯ ಹಂತದಲ್ಲಿ ಕಾಂಗ್ರೆಸ್ ಪಕ್ಷ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ನೀರಾವರಿ ಖಾತೆ ಸಚಿವ ಎಂ. ಬಿ. ಪಾಟೀಲ್ ಬಿಜೆಪಿ ಕಚೇರಿ ಮುಂದೆ ಕುಳಿತಿದ್ದ ಪ್ರತಿಭಟನಾಕಾರರ ಜತೆ ಕುಳಿತುಕೊಂಡು ಅಧಿಕೃತವಾಗಿಯೇ ಹೋರಾಟದಲ್ಲಿ ರಾಜಕೀಯ ಬೆರೆಸು ಕೆಲಸ ಮಾಡಿದರು. ಇನ್ನೊಂದು ಕಡೆ, ಯಡಿಯೂರಪ್ಪ ಅವರನ್ನು ನಂಬಿ ಬಂದಿದ್ದ ಪ್ರತಿಭಟನಾಕಾರರಿಗೆ ಸೂಕ್ತ ಸಮಾಧಾನ ಮಾಡುವಲ್ಲಿ ಬಿಜೆಪಿ ವಿಫಲವಾಯಿತು.

“ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದಂತೆ, ಬಿಜೆಪಿ ನಾಯಕರನ್ನು ನಾವು ಒಪ್ಪಿಸಿದ್ದೇವೆ. ಗೋವಾ ಕಾಂಗ್ರೆಸ್‌ ನಾಯಕರನ್ನು ಒಪ್ಪಿಸಿ ಯೋಜನೆ ಜಾರಿಗೆ ಪ್ರಯತ್ನ ಮಾಡಬೇಕಿರುವುದು ಸಿದ್ದರಾಮಯ್ಯನವರೇ,” ಎಂದು ಬಿಎಸ್‌ವೈ ಯು-ಟರ್ನ್ ಹೊಡೆದರು. ಇದನ್ನು ಕೇಳಿ ರೈತರಿಗೆ ಸಹಜ ನಿರಾಸೆ ಮೂಡಿತು.

ಈ ಸಂದರ್ಭದಲ್ಲಿ “ಮೊದಲು ನೀರು ತರುವುದಾಗಿ ಹೇಳಿದ್ದ ಯಡಿಯೂರಪ್ಪನವರು, ಈಗ ನುಣುಚಿಕೊಳ್ಳುವ ಮಾತುಗಳನ್ನು ಆಡುವ ಮೂಲಕ ವಚನ ಭ್ರಷ್ಟರಾಗಿದ್ದಾರೆ,” ಎಂದು ಮಹದಾಯಿ ಹೋರಾಟ ಸಮಿತಿಯ ಅಧ್ಯಕ್ಷ ವೀರೇಶ್ ಸೊಬರದಮಠ ಆಕ್ರೋಶ ವ್ಯಕ್ತಪಡಿಸಿದ್ದರು.

ಬಿಎಸ್‌ವೈ ಹೇಳಿಕೆಗೆ ಪ್ರತಿಕ್ರಿಸಿದ್ದ ಸಿಎಂ ಸಿದ್ದರಾಮಯ್ಯ, "ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಕರ್ನಾಟಕ ಮತ್ತು ಗೋವಾ ನಡುವಿನ ಮಹದಾಯಿ ನದಿ ನೀರಿನ ವಿವಾದ ಇತ್ಯರ್ಥಪಡಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಬೇಕು,” ಎಂದು ಮಂಗಳವಾರ ಹೇಳಿಕೆ ನೀಡುವ ಮೂಲಕ ಕೇಂದ್ರದತ್ತ ಕೈತೋರಿಸಿದರು.

ಬಿಜೆಪಿ ದಾಳ:

ಬುಧವಾರ ಬೆಳಗ್ಗೆ ಹೊತ್ತಿಗೆ ಮಲ್ಲೇಶ್ವರದಿಂದ ಹೊರಟ ಮಹಾದಾಯಿ ಹೋರಾಟಗಾರರು ರಾಜಭವನ ಚಲೋ ಆರಂಭಿಸಿದರು. ಇದೇ ಸಮಯದಲ್ಲಿ ಬಿಜೆಪಿ ಮುಖಂಡರಾದ ಶೋಭ ಕರಂದ್ಲಾಜೆ, ಕಟ್ಟಾ ಸುಬ್ರಮಣ್ಯ ನಾಯ್ಡು ಸೇರಿದಂತೆ ಹಲವು ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ಮುಂದೆ ಪ್ರತಿಭಟನೆ ಆರಂಭಿಸಿದರು. ಇದು ಕಾಂಗ್ರೆಸ್ ಮತ್ತು ಬಿಜೆಪಿ ಮಹದಾಯಿ ವಿಚಾರದಲ್ಲಿ ನೇರ ಹಣಾಹಣಿಗೆ ಇಳಿದಿರುವುದಕ್ಕೆ ಪ್ರಮುಖ ನಿದರ್ಶನವಾಗಿ ಕಂಡಿತು.ಈ ಸಮಯದಲ್ಲಿ ಮಾತನಾಡಿದ ಶೋಭ ಕರಂದ್ಲಾಜೆ ಕಾಂಗ್ರೆಸ್ ಕಚೇರಿ ಮುಂದೆ ನಡೆಸುತ್ತಿದ್ದ ಪ್ರತಿಭಟನೆಗೆ ಅಡ್ಡಿ ಪಡಿಸಿದ ಪೊಲೀಸರ ವಿರುದ್ಧ ಹರಿಹಾಯ್ದರು.

“ನೀವು ನಮ್ಮ ಮೇಲೆ ದೌರ್ಜನ್ಯ ನಡೆಸುವುದನ್ನು ನಿಲ್ಲಿಸಿ. ನೀರಿನ ವಿಚಾರದಲ್ಲಿ ರಾಜಕೀಯ ಬೆರೆಸುವ ಕೆಲಸ ಮಾಡಬೇಡಿ. ನಮ್ಮ ನಾಯಕ ಯಡಿಯೂರಪ್ಪ ಗೋವಾ, ಮಹಾರಾಷ್ಟ್ರ ಸರಕಾರಗಳ ಮನವೊಲಿಸುವ ಕೆಲಸ ಮುಂದುವರಿಸಿದ್ದಾರೆ. ಅಗತ್ಯ ಬಿದ್ದರೆ ನಾವೇ ಗೋವಾ, ಮಹಾರಾಷ್ಟ್ರ ಹಾಗೂ ದಿಲ್ಲಿ ಜತೆ ಮಾತುಕತೆ ಮಾಡುತ್ತೇವೆ,”
ಶೋಭಾ ಕರಂದ್ಲಾಜೆ, ಸಂಸದೆ

ಪ್ರತಿಭಟನೆ ಸಮಯದಲ್ಲಿ ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ಆರ್‌. ಅಶೋಕ್‌ ಅವರಿಗೆ ಗಾಯವಾಯಿತು ಎಂದು ಬಿಜೆಪಿ ಆಕ್ರೋಶವನ್ನು ಹೊರಹಾಕಿತು.

ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ರಾಮಲಿಂಗಾ ರೆಡ್ಡಿ, "ಬಿಜೆಪಿ ದೊಡ್ಡ ನಾಟಕ ಮಂಡಳಿ. ಮೋದಿ ಅದರ ಯಜಮಾನರು. ಗೋವಾ ಮುಖ್ಯಮಂತ್ರಿ ಕರ್ನಾಟಕದ ಮುಖ್ಯಮಂತ್ರಿ ಜತೆ ಮಾತನಾಡಬೇಕು. ಆದರೆ, ಅವರು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಿಗೆ ಪತ್ರ ಬರೆಯುವ ಅಗತ್ಯವಾದರೂ ಏನಿತ್ತು?,'' ಎಂದು ಪ್ರತಿಕ್ರಿಸಿದ್ದರು.

ಹೀಗೆ, ಕಾಂಗ್ರೆಸ್ ಮತ್ತು ಬಿಜೆಪಿ ಮಹದಾಯಿ ವಿಚಾರದಲ್ಲಿ ಕಿತ್ತಾಡುತ್ತಿರುವ ಹೊತ್ತಿಗೇ ಹೋರಾಟಗಾರರು ನೂರಾರು ಜನರನ್ನು ಕಟ್ಟಿಕೊಂಡು ರಾಜಭವನದ ಮುಂದೆ ನ್ಯಾಯದ ಬೇಡಿಕೆಯನ್ನು ಇಟ್ಟಿದ್ದರು. ಆದರೆ ರಾಜಭವನದೊಳಗೆ ಕೇವಲ ನಾಯಕರಿಗೆ ಅವಕಾಶ ನೀಡಲಾಯಿತು. ಒಳಗೆ ಹೋದ ಮೇಲೂ ರಾಜ್ಯಪಾಲ ವಾಜೂಬಾಯಿ ವಾಲಾ, ಪೂರ್ವಾನುಮತಿ ಇಲ್ಲದೆ ಭೇಟಿ ಮಾಡಲು ನಿರಾಕರಿಸಿದರು.

ಈ ಸಮಯದಲ್ಲಿ ರಾಜಭವನದಲ್ಲಿ ನೀಡಿದ ಪಾನೀಯಗಳನ್ನು ತಿರಸ್ಕರಿಸಿ ಹೊರಬಂದ ಮಹದಾಯಿ ಹೋರಾಟಗಾರರು ತಮ್ಮ ಆಕ್ರೋಶವನ್ನು ತೋಡಿಕೊಂಡರು. ಸದ್ಯ ಅವರ ಪ್ರತಿಭಟನಾ ಮೆರವಣಿಗೆ ಚುನಾವಣಾ ಆಯೋಗವನ್ನು ತಲುಪಿದೆ. ಮಹದಾಯಿ ಕಣಿವೆಯಲ್ಲಿ ಚುನಾವಣೆಯನ್ನು ಮುಂದೂಡಿ ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ.

“ಚುನಾವಣೆ ಘೋಷಣೆಯಾದೆಯೇ ಅದನ್ನು ಮುಂದೂಡುವ ಪ್ರಸ್ತಾಪ ಗಮನ ಸೆಳೆಯುವುದು ಕಷ್ಟ,’’ ಎನ್ನುತ್ತಾರೆ ರಾಜಕೀಯ ವರದಿಗಾರರೊಬ್ಬರು.“ಎಲ್ಲ ರಾಜಕೀಯ ಪಕ್ಷಗಳು ಮೊಸಳೆ ಕಣ್ಣೀರು ಸುರಿಸುತ್ತಿವೆ. ಆದರೆ, ರೈತರಿಗೆ ಪರಿಹಾರ ಮಾತ್ರ ಸಿಗುತ್ತಿಲ್ಲ. ಎಲ್ಲ ನಾಯಕರು ತಂತ್ರ ಹೆಣೆದು ರೈತರನ್ನು ಸೆಳೆಯುವ ಮೂಲಕ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ,”
-ಪರಶುರಾಮ ಜಂಬಗಿ , ರೈತ ಸೇನೆ ಮುಖಂಡ

ಏನಿದು ಮಹದಾಯಿ ವಿವಾದ?

ಇವರು ಮನಸ್ಸು ಮಾಡಿದರೆ ಉತ್ತರ ಕರ್ನಾಟಕದ ಜನರ ದೀರ್ಘಾವಧಿ ನೀರಿನ ವ್ಯಾಜ್ಯಕ್ಕೆ ಪರಿಹಾರ ಸಿಗಲು ಸಾದ್ಯವಿದೆ. (ಚಿತ್ರ: bp9news)
ಇವರು ಮನಸ್ಸು ಮಾಡಿದರೆ ಉತ್ತರ ಕರ್ನಾಟಕದ ಜನರ ದೀರ್ಘಾವಧಿ ನೀರಿನ ವ್ಯಾಜ್ಯಕ್ಕೆ ಪರಿಹಾರ ಸಿಗಲು ಸಾದ್ಯವಿದೆ. (ಚಿತ್ರ: bp9news)

ಕಳಸಾ-ಬಂಡೂರಿ ನಾಲಾ ಯೋಜನೆಯು ಬೆಳಗಾವಿ, ಧಾರವಾಡ ಮತ್ತು ಗದಗ ಜಿಲ್ಲೆಗಳಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಲು ಕರ್ನಾಟಕ ಸರ್ಕಾರ ಕೈಗೊಂಡ ಒಂದು ಯೋಜನೆ. ಇದರಲ್ಲಿ, ಮಲಪ್ರಭಾ ನದಿ ನೀರಿನ 7.56 ಟಿಎಂಸಿಯಷ್ಟನ್ನು ತಿರುಗಿಸಿ ಮಹಾದಾಯಿಯ ನದಿಯ ಎರಡು ಉಪನದಿಗಳಾದ ಕಳಸ ಮತ್ತು ಬಂಡೂರಿಗಳಿಗೆ ಅಡ್ಡಲಾಗಿ ಕಟ್ಟೆ ಕಟ್ಟುವ ಯೋಜನೆ.

ಈ ಯೋಜನೆಯು ದಶಕಗಳಿಂದ ಕಾಗದದ ಮೇಲೆ ಇತ್ತು. ಎಸ್.ಎಂ ಕೃಷ್ಣ ಆಡಳಿತದ ಕರ್ನಾಟಕ ಸರಕಾರವು 2002 ರಲ್ಲಿ ಈ ಯೋಜನೆಗೆ ಕೇಂದ್ರದ ಒಪ್ಪಿಗೆಯನ್ನು ಪಡೆದುಕೊಂಡಿತ್ತು. ಆದರೆ, ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ (ಬಿಜೆಪಿ ಸರಕಾರ) ನೇತೃತ್ವದಲ್ಲಿ, ಈ ಯೋಜನೆಯಿಂದ ಗೋವಾದ ಸಸ್ಯಗಳಿಗೆ ಹಾನಿಯಾಗುವುದು ಮತ್ತು ಪ್ರಾಣಿಗಳಿಗೆ ತೊಂದರೆಗೊಳಗಾಗಬಹುದು ಎಂದು ಆರೋಪಿಸಿ ಕೇಂದ್ರಕ್ಕೆ ಆಕ್ಷೇಪಣೆ ಸಲ್ಲಿಸಿತ್ತು.

ಇದರ ನಂತರ, ಕೇಂದ್ರದಲ್ಲಿ ಆಡಳಿತದಲ್ಲಿದ್ದ ಎನ್‌ಡಿಎ ಸರಕಾರವು ತನ್ನ ಅನುಮೋದನೆ ತಡೆ ಹಿಡಿಯಿತು.ನೀರನ್ನು ಮಹದಾಯಿಯ ಕಳಸಾ-ಬಂಡೂರಿ ಎಂಬ ಎರಡು ನಾಲೆಗಳ ಮೂಲಕ ಜಲಾಶಯಕ್ಕೆ ಹರಿಸಲು ಯೋಜನೆ ಇದಾಗಿತ್ತು. ಆದ್ದರಿಂದಲೇ ಕಳಸಾ-ಬಂಡೂರಿ ಎಂಬ ಹೆಸರು ಈ ಯೋಜನೆಗೆ ಬಂದಿದ್ದು.

ಬೆಳಗಾವಿ ಜಿಲ್ಲೆಯ ಪಶ್ಚಿಮ ಘಟ್ಟದ ಸಾಲಿನಲ್ಲಿ ಹುಟ್ಟುವ ಮಹದಾಯಿ ನದಿಯು ಕರ್ನಾಟಕದಲ್ಲಿ 35 ಕಿ.ಮೀ ಹರಿಯುತ್ತದೆ. ಮುಂದೆ ಗೋವಾ ರಾಜ್ಯದಲ್ಲಿ 45 ಕಿ.ಮೀ ಹರಿಯುವ ಮಹದಾಯಿ (ಮಾಂಡೋವಿ) ನದಿಯ 100 ಟಿಎಂಸಿಗೂ ಅಧಿಕ ನೀರು ಕೊನೆಗೆ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಹೀಗೆ ಗೋವಾ ರಾಜ್ಯದ ಮೂಲಕ ಅರೇಬ್ಬಿ ಸಮುದ್ರಕ್ಕೆ ಸೇರಿ ಪೋಲಾಗುವ ನೀರನ್ನು, ಉತ್ತರ ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳ ಜನರಿಗೆ ಉಪಯೋಗವಾಗಲೆಂದು ತರುವ ಉದ್ದೇಶ ಈ ಯೋಜನೆಯದ್ದು.

ಸಮುದ್ರಕ್ಕೆ ವ್ಯರ್ಥವಾಗಿ ಸೇರುತ್ತಿರುವ 100 ಟಿಎಂಸಿಗೂ ಅಧಿಕ ನದಿ ನೀರಲ್ಲಿ 7.56 ಟಿಎಂಸಿ ಪಾಲು ಕೇಳಿದ ಕರ್ನಾಟಕಕ್ಕೆ 2016 ರಲ್ಲಿ ನಿರಾಶೆಯಾಗಿತ್ತು. ಅದೇ ವರ್ಷದ ಜುಲೈ 27ರಂದು ಮಹಾದಾಯಿ ನ್ಯಾಯಾಧೀಕರಣ ಮಧ್ಯಂತರ ತೀರ್ಪು ಕರ್ನಾಟಕದ ರೈತರಿಗೆ ಆಘಾತ ತಂದಿತ್ತು. ಕಾನೂನು ಹೋರಾಟ, ರೈತರ ಪ್ರತಿಭಟನೆ ಎಲ್ಲವೂ ಇವತ್ತಿಗೂ ಮುಂದುವರೆದಿದೆ.

“ಗೋವಾ ಮುಖ್ಯಮಂತ್ರಿ ಮತ್ತು ದೇಶದ ಪ್ರಧಾನ ಮಂತ್ರಿ ರಾಜ್ಯದ ಜನರ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಪ್ರಧಾನ ಮಂತ್ರಿಗಳು ಕರೆದ ಸರ್ವಪಕ್ಷಗಳ ನಿಯೋಗದಲ್ಲಿ ನಾವು ಇದ್ದೇವು. ಪ್ರಧಾನ ಮಂತ್ರಿಗಳಿಂದ ಸರಿಯಾದ ಪ್ರತಿಕ್ರಿಯೆ ಬರಲಿಲ್ಲ. ಜವಾಬ್ದಾರಿ ಹೊತ್ತು ಅವರು (ಪ್ರಧಾನಿ) ಈ ಮೂರು ರಾಜ್ಯಗಳ (ಮಹಾರಾಷ್ಟ್ರ ಗೋವಾ ಮತ್ತು ಕರ್ನಾಟಕ) ಮುಖ್ಯಮಂತ್ರಿಗಳ ಸಭೆ ಕರೆದು ಇಚ್ಚಾಶಕ್ತಿ ಪ್ರದರ್ಶನ ಮಾಡಬೇಕು. ಅದು ಬಿಟ್ಟು ರಾಜಕೀಯ ಆಟ ಆಡಲು ಹೋದರೆ ಜನರ ತೊಂದರೆಯಾಗುತ್ತದೆ. ಕರ್ನಾಟಕದ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ಅರ್ಥ ಮಾಡಿಕೊಂಡು, ಗೋವಾ ಸಿಎಂ ಪರಿಕ್ಕರ್ 7.5 ಟಿಎಂಸಿ ನೀರನ್ನು ಬಿಡಬೇಕು. ನಮ್ಮ ರಾಜ್ಯದಲ್ಲಿ ಹರಿಯುವ ನೀರು ಗೋವಾಕ್ಕೆ ಹೋಗಿ ಅದು ಅರಬ್ಬಿ ಸಮುದ್ರ ಸೇರುತ್ತದೆ. ಅದನ್ನು ನಮ್ಮ ರಾಜ್ಯಕ್ಕೆ ಬಿಡಲು ಇವರದ್ದೇನು ತಕರಾರು?,”
-ಸಿ.ಎಸ್ ಶಿವಳ್ಳಿ, ಕುಂದಗೋಳ ಶಾಸಕ

ದೀರ್ಘಾವಧಿಯಲ್ಲಿ ಉಳಿದುಕೊಂಡು ಬಂದಿರುವ ನೀರಿನ ವ್ಯಾಜ್ಯವೊಂದು ಚುನಾವಣೆ ಹಿನ್ನೆಲೆಯಲ್ಲಿ ಯಾವೆಲ್ಲಾ ಸ್ವರೂಪಗಳನ್ನು ಪಡೆಯಬಹುದು ಎಂಬುದನ್ನು ಸದ್ಯ ನಡೆಯುತ್ತಿರುವ ಘಟನಾವಳಿಗಳು ಸಾಕ್ಷಿಯಾಗಿವೆ. ರಾಜ್ಯದ ಹಿತಾಸಕ್ತಿ ಬಂದಾಗ ಒಂದಾಗಬೇಕಾದ ರಾಜಕೀಯ ಪಕ್ಷಗಳು, ಮತ ರಾಜಕೀಯವನ್ನೇ ಮುಂದೆ ಮಾಡಿಕೊಂಡು ರೈತರ ಸಮಸ್ಯೆಯನ್ನೂ ದಾಳವಾಗಿ ಬಳಕೆ ಮಾಡುತ್ತಿರುವುದು ಎದ್ದು ಕಾಣಿಸುತ್ತಿದೆ. ಇಬ್ಬರ ಹಗ್ಗ ಜಗ್ಗಾಟದಲ್ಲಿ ಮೊದಲೇ ಬಡವಾಗಿದ್ದ ಮಹದಾಯಿ ರೈತರು ಇನ್ನಷ್ಟು ಹೈರಾಣಾಗಿದ್ದಾರೆ. ಅವರ ಗೋಳು ಮುಂದುವರಿದೆ....