samachara
www.samachara.com
'ಅಂಬೇಡ್ಕರ್ ಬದುಕಿದ್ದರೆ ದಲಿತರ ಕೈಗೆ ಬಂದೂಕು ಕೊಡಿ ಅನ್ನುತ್ತಿದ್ದರು': ಕೋಟಿಗಾನಹಳ್ಳಿ ರಾಮಯ್ಯ ಸಂದರ್ಶನ
ಸುದ್ದಿ ಸಾಗರ

'ಅಂಬೇಡ್ಕರ್ ಬದುಕಿದ್ದರೆ ದಲಿತರ ಕೈಗೆ ಬಂದೂಕು ಕೊಡಿ ಅನ್ನುತ್ತಿದ್ದರು': ಕೋಟಿಗಾನಹಳ್ಳಿ ರಾಮಯ್ಯ ಸಂದರ್ಶನ

ಮೊದಲಿದ್ದ ಖದರ್‌ನ್ನು ಕಳೆದುಕೊಂಡಿದ್ದು ದೇಹ ಮಾತ್ರ. ಅದೇ ಹಳೆ ಹೋರಾಟದ ದಿನಗಳನ್ನು ನೆನಪಿಸುವ ದನಿ, ಘೋಷಣೆಗಳು ಹಾಗೂ ಕಾಲಕ್ಕಿಂತ ಮುಂದಿರುವ ಆಲೋಚನೆಗಳು. 'ನನ್ನ ಕೈಗೊಂದು ಬಂದೂಕು ಕೊಡಿ, 1000 ಬುಲೆಟ್ ಕೊಡಿ, ಅದ್ಯಾವನು ದಲಿತ ಹೆಣ್ಣು ಮಕ್ಕಳ ಮೈ ಮೊಟ್ಟುತ್ತಾರೋ ನೋಡೊಣ..' ಎಂದರು ಕೋಟಗಾನಹಳ್ಳಿ ರಾಮಯ್ಯ. 

ಬಿಳಿ ಅಂಗಿ, ಕಾಟನ್ ಪ್ಯಾಂಟ್‌, ಮೇಲೊಂದು ನೀಲಿ ಬಣ್ಣದ ಜರ್ಕಿನ್ ತೊಟ್ಟಿದ್ದ ಕೆ. ರಾಮಯ್ಯ ಮಾತನಾಡತೊಡಗಿದರು. ಕೋಲಾರದ ಬೆಟ್ಟದ ಬುಡದಲ್ಲೀಗ ಅವರೊಂದು ತಾತ್ಕಾಲಿಕ ಕಚೇರಿ ನಿರ್ಮಿಸಿಕೊಂಡಿದ್ದಾರೆ. ಇತ್ತೀಚೆಗೆ ಕೋಲಾರದ ಜಿಲ್ಲಾಧಿಕಾರಿಗೆ 'ನನಗೊಂದು ಬಂದೂಕು ಕೊಡಿ' ಎಂದು ಅರ್ಜಿ ಸಲ್ಲಿಸಿದ್ದಾರೆ. ಒಂದು ಯಶಸ್ವಿ ಹೋರಾಟ, ಸಮುದಾಯದಲ್ಲಿ ಜಾಗೃತಗೊಳ್ಳುತ್ತಿದ್ದ ಪ್ರಜ್ಞೆ, ನಿಧಾನವಾಗಿ ಪಾತಾಳಕ್ಕಿದ ಸಂಘಟನೆ, ಭ್ರಷ್ಟಗೊಂಡ ಮನಸ್ಸುಗಳನ್ನು ನೋಡಿದ ಅವರಿಗೀಗ 62 ವರ್ಷ. ಕಳೆದ ಎರಡು ದಶಕಗಳ ಕಾಲ 'ಆದಿಮಾ' ಹೆಸರಿನಲ್ಲಿ ಸಾಂಸ್ಕೃತಿಕ ಕೇಂದ್ರವನ್ನು ಕಟ್ಟುವಲ್ಲಿ, ಪರ್ಯಾಯ ರಾಜಕಾರಣದ ಕನಸಿನೊಂದಿಗೆ ಆಪ್‌ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಮೂಲಕ 'ಬೆಟ್ಟದ ಮೇಲೊಂದು ಮನೆ'ಯನ್ನು ಅಕ್ಷರಶಃ ಮಾಡಿಕೊಂಡು ಬದುಕಿದವರು. ದಾನಮ್ಮ ಪ್ರಕರಣದ ನಂತರ ಅವರೀಗ ಬೆಟ್ಟ ಇಳಿದು ಬಂದಿದ್ದಾರೆ. ಇದೇ ತಿಂಗಳ 31ನೇ ತಾರೀಖು ಕೋಲಾರದಲ್ಲಿ ಪಂಜಿನ ಮೆರವಣಿಗೆ ಇಟ್ಟುಕೊಂಡಿದ್ದಾರೆ. ದಲಿತ ಯುವಜನರ ಕೈಗೆ ಬಂದೂಕು ಕೊಡಿ ಎಂದು ಸರಕಾರವನ್ನು ಒತ್ತಾಯಿಸಲಿದ್ದಾರೆ.

ಹಾಗೆ ನೋಡಿದರೆ, ಚಿಂತಕ, ಹೋರಾಟಗಾರ, ಬರಹಗಾರ, ಕವಿ ಕೋಟಿಗಾನಹಳ್ಳಿ ರಾಮಯ್ಯ ಬಂದೂಕಿನ ಕುರಿತು ಇತ್ತೀಚಿನ ದಿನಗಳಲ್ಲಿ ಮಾತನಾಡುತ್ತಿರುವುದು ಎರಡನೇ ಬಾರಿ. ಕೆಲ ಸಮಯ ಹಿಂದೆ, ನ್ಯಾಷನಲ್‌ ಲಾ ಕಾಲೇಜಿನಲ್ಲಿ 'ಅಂಬೇಡ್ಕರ್ ಅಧ್ಯಯನ ಕೇಂದ್ರ'ದ ಉದ್ಘಾಟನೆಗೆ ಬಂದವರು ಕಮ್ಯುನಿಷ್ಟರನ್ನು ಛೇಡಿಸಿ ಮಾತನಾಡಿದ್ದರು. 'ನೀವು ಬಂದೂಕು ತೆಗೆದುಕೊಂಡು ಏನನ್ನೂ ಸಾಧಿಸಲು ಸಾಧ್ಯವಾಗಲಿಲ್ಲ. ಅದಕ್ಕೀಗ ಅಂಬೇಡ್ಕರ್ ಮೊರೆ ಹೋಗಿದ್ದೀರಿ,' ಎಂದವರು ಹೇಳಿದ್ದರು. ಇದೀಗ, ಅದೇ ರಾಮಯ್ಯ, 'ನಮ್ಮ ಕೈಗೆ ಬಂದೂಕು ಕೊಡಿ' ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ರಾಮಯ್ಯ ಅವರ ಮನಸ್ಸಿನಲ್ಲೇನಿದೆ? ನಿಜಕ್ಕೂ ಬಂದೂಕು ಬೇಕು ಎಂದು ಕೇಳುತ್ತಿದ್ದಾರ? ಅವರ ಮುಂದಿನ ಯೋಜನೆ ಏನು? ದಲಿತ ಮೇಲಿನ ಹಲ್ಲೆ, ದೌರ್ಜನ್ಯ, ಅತ್ಯಾಚಾರ, ಕೊಲೆ ಪ್ರಕರಣಗಳನ್ನು ಅವರು ಎದುರಿಸಲು ಕಂಡುಕೊಳ್ಳುತ್ತಿರುವ ಬಗೆ ಏನು? ಹೀಗೆ ನಾನಾ ಪ್ರಶ್ನೆಗಳನ್ನು ಇಟ್ಟುಕೊಂಡೇ 'ಸಮಾಚಾರ' ಕೋಲಾರದ ಅವರ ಹೊಸ, ತಾತ್ಕಾಲಿಕ ಕಚೇರಿಯಲ್ಲಿ ಭಾನುವಾರ ಸಂಜೆ ಭೇಟಿ ಮಾಡಿತು. ಆರಂಭದಲ್ಲಿ ಒಂದು ಗಂಟೆ ಸಂದರ್ಶನಕ್ಕೆಂದು ಒಪ್ಪಂದ ಆಗಿತ್ತಾದರೂ, ಸಂದರ್ಶನ ಮುಗಿದಾಗ ರಾತ್ರಿ 3 ಗಂಟೆ. ಸುಮಾರು ಐದೂವರೆ ಗಂಟೆ ರಾಮಯ್ಯ ಸುದೀರ್ಘವಾಗಿ ಮಾತನಾಡಿದರು. ಗತ, ವರ್ತಮಾನ ಮತ್ತು ಭವಿಷ್ಯದ ಕುರಿತು ಖಚಿತತೆಯ ದನಿಯಲ್ಲಿ ಅವರು ತಮ್ಮ ವಾದಗಳನ್ನು ಮಂಡಿಸಿದರು. ಅವರ ಜತೆಗಿನ ಸಂದರ್ಶನದ ಆಯ್ದ ಭಾಗಗಳನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.

ಸಮಾಚಾರ: ನೀವು ಬಂದೂಕು ಕೊಡಿ ಅಂತ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೀರಾ? ಸದ್ಯದ ಸಮಸ್ಯೆಗಳಿಗೆ ಬಂದೂಕಿನಲ್ಲಿ ಪರಿಹಾರ ಸಿಗುತ್ತೆ ಅಂತ ನಿಮಗೆ ನಿಜವಾಗಿಯೂ ಅನ್ನಿಸಲು ಶುರುವಾಗಿದೆಯಾ? 

ಕೆ. ರಾಮಯ್ಯ:

ಬಂದೂಕು ತಗೊಂಡು ಸಮಾಜವನ್ನು ಕೊಲ್ಲಲು ನಾವು ಹೋಗ್ತೀವಿ ಅಂತ ಅಂಡ್ಕೊಂಡಿದ್ದೀರಾ? ನಮ್ಮನ್ನು ಮೂರ್ಖರು ಅಂಡ್ಕೊಂಡಿದ್ದೀರಾ (ನಗು). ನಾವೇನು ಕಮ್ಯುನಿಸ್ಟ್‌ ಮೂರ್ಖರಾ? ಜನರಿಗೆ ಚೈತನ್ಯ ತುಂಬುವ ಕೆಲಸ ಆಗಬೇಕಿದೆ. ಅವರ ಎದುರಿಗಿರುವ ಸವಾಲುಗಳನ್ನು ನಾವು ರಾಜಕೀಯವಾಗಿಯೇ ಎದುರಿಸಬೇಕಿದೆ. ಅದರ ಜತೆಗೆ ನಮ್ಮ ರಕ್ಷಣೆಯನ್ನೂ ಮಾಡಿಕೊಳ್ಳಬೇಕಿದೆ. ಅದಕ್ಕಾಗಿಯೇ ಬಂದೂಕು ಕೇಳಿದ್ದು. ದಲಿತ ಹೆಣ್ಣು ಮಕ್ಕಳು ತಮ್ಮ ರಕ್ಷಣೆಗಾಗಿ ಗುಂಡು ಹಾರಿಸಬೇಕಾಗಿ ಬಂದರೆ ಏನು ಮಾಡುವುದು? ಅದು ರಕ್ಷಣೆಗಾಗಿ ಅಷ್ಟೆ. ನಮಗೆ ಬಂದೂಕು ಕೊಡಿ ಅಂದಿದ್ದು ಆ ಕಾರಣಕ್ಕೆ. ನಾನಿದನ್ನು ಆಕ್ರೋಶದಿಂದ ಮಾತನಾಡುತ್ತಿಲ್ಲ.

ಸಮಾಚಾರ: ಯಾಕೆ ಈಗ ಇಂತಹದೊಂದು ಹೇಳಿಕೆ? ಚುನಾವಣೆ ಹಿನ್ನೆಲೆಯಲ್ಲಿ ಏನಾದರೂ ಗಮನ ಸೆಳೆಯುವ ಪ್ರಯತ್ನನಾ ಅಂತಾ? 

ಕೆ. ರಾಮಯ್ಯ:

ನೋಡಿ, ನಾನು ಮೊಟ್ಟ ಮೊದಲ ಘೋಷಣೆ ಕೂಗಿದಾಗ ನನಗೆ 19 ವರ್ಷ. ಆ ಸಮಯದಲ್ಲಿ ಕೂಗಿ ಕೂಗಿ ನನ್ನ ಗಂಟಲು ಕಿತ್ತು ಬಂದಿತ್ತು. ಆಗ ಸ್ಲೋಗನ್‌ ಕೂಗೋದು ನನ್ನೊಳಗಿನ ಆಕ್ರೋಶವನ್ನು ಹೊರಹಾಕುವ ಪ್ರಕ್ರಿಯೆ ಅನ್ನಿಸುತ್ತಿತ್ತು. ಅದಕ್ಕೆ ತಕ್ಕಂತೆ ದಲಿತ ಚಳುವಳಿ ಕೂಡ ಪ್ರಖರವಾಗತೊಡಗಿತ್ತು. ಅದರೊಳಗೆ ಈ ನೆಲದ ಕಾವು ಇತ್ತು. ಆದರೆ ಏನ್ಮಾಡೋದು ಈಗ ಅದು ಡೌನ್ ಆಗಿದೆ. ಸದ್ಯಕ್ಕೆ ನನಗೆ ಬೇರೆ ದಾರಿ ಕಾಣಿಸುತ್ತಿಲ್ಲ. ಮತ್ತೆ ಬೀದಿಗೆ ಬರಬೇಕು ಅನ್ನಿಸುತ್ತಿದೆ.

ನಾನು ಎಲೆಕ್ಷನ್‌ಗೆ ನಿಲ್ಲಲ್ಲ. ಆದರೆ ಆ ತರದ ಒಂದು ರಾಜಕಾರಣದ ಹಿಂದೆ ಕೆಲಸ ಮಾಡ್ತೀನಿ. ನಾನು ನೇರವಾಗಿ ಚುನಾವಣೆಗೆ ನಿಲ್ಲುವ ಮನಸ್ಸು ಈಗಿಲ್ಲ. ಆದರೆ ಬೇರೆಯೇ ರೀತಿಯ ರಾಜಕಾರಣದ ಜತೆಗೆ ನಾನಿದ್ದೀನಿ. ಈಗ ಬಂದೂಕು ಕೇಳ್ತಿದೀನಿ. ಅಂಬೇಡ್ಕರ್ ಅದಕ್ಕಿಂತ (ಬಂದೂಕು) ಪ್ರಖರವಾದ ಅಸ್ತ್ರವನ್ನು ನಮಗೆ ಕೊಟ್ಟು ಹೋಗಿದ್ದಾರೆ. ಅದರ ಹೆಸರು ಮತ. ನಮಗೆ ಸಿಕ್ಕಿರುವ ಮತದಾನದ ಹಕ್ಕು. ಅದನ್ನು ಕೊಡುವಾಗ ಅಂಬೇಡ್ಕರ್ ಹೇಳಿದ್ದರು- ಭಿಕ್ಷುಕನಿಗೂ ಒಂದೇ ಮತ, ಕುಬೇರನಿಗೂ ಒಂದೇ ಮತ ಅಂತ. ಈಗ ಅದೇ ದೊಡ್ಡ ವೈರುಧ್ಯವಾಗಿ ಕಾಣಿಸುತ್ತಿದೆ. ಅದನ್ನು ಆದಷ್ಟು ಬೇಗ ತೊಡೆದು ಹಾಕಬೇಕಿದೆ.

ಬಹುಶಃ ಅಂಬೇಡ್ಕರ್ ಈಗ ಬದುಕಿದ್ದರೆ ದಲಿತ ಕೈಗೆ ಬಂದೂಕು ಕೊಡಿ ಅನ್ನುತ್ತಿದ್ದರು. ಯಾಕೆಂದರೆ ಅದ್ಬತವಾದ ಮಿಲಿಟರಿ ಹಿನ್ನೆಲೆ ಅವರಿಗಿತ್ತು. ಅಮಾಯಕರನ್ನು, ಅಸಹಾಯಕರನ್ನು, ದುರ್ಬಲರನ್ನು ಕೊಲೆ ಮಾಡ್ತಾ ಇರುವ ಇವತ್ತಿನ ಪರಿಸ್ಥಿತಿ ನೋಡಿದ್ರೆ ಖಂಡಿತಾ ಅಂಬೇಡ್ಕರ್ ಕೂಡ ಬಂದೂಕು ಕೈಗೆತ್ತಿಕೊಳ್ಳಬೇಡಿ ಅನ್ನುತ್ತಿರಲಿಲ್ಲ. ಗಾಂಧಿ ಬದುಕಿದ್ದರೂ ಇದೇ ಹೇಳುತ್ತಿದ್ದರು ಅನ್ನಿಸುತ್ತೆ.

ಸಮಾಚಾರ; ಈ ದೇಶದ ಸಾಮಾಜಿಕ, ಆರ್ಥಿಕ ಸಮಸ್ಯೆಗಳಿಗೆ ಬಂದೂಕೇ ಪರಿಹಾರ ಅಂತ ಮಾವೋವಾದಿಗಳು ಬಹಳ ಹಿಂದಿನಿಂದಲೇ ಹೇಳ್ಕೊಂಡು ಬರ್ತಿದ್ದಾರೆ. ನೀವು ಈಗ ಅದನ್ನೇ ಬೇರೆ ರೀತಿಯಲ್ಲಿ ಹೇಳ್ತಿದೀರಿ ಅನ್ಸಿತ್ತಿದೆ? 

ಕೆ. ರಾಮಯ್ಯ:

 ಬಂದೂಕಿನ ವಿಚಾರಕ್ಕೆ ಬಂದರೆ ಮಾವೋವಾದಿಗಳಿದಾರಲ್ಲ; ಅವರು ನನ್ನ ಮಾದರಿ ಅಲ್ಲ. ಬಹಳ ಕ್ಲಿಯರ್‌ ಆಗಿ ಹೇಳ್ತೀನಿ; ನಾನು ಬಂದೂಕು ಹಿಡಿಯುವುದಕ್ಕೆ ಮಾವೋವಾದಿಗಳು ಖಂಡಿತಾ ಮಾದರಿ ಅಲ್ಲ. ನಾನು ಹಿಂಸೆಯನ್ನು ಸಿದ್ಧಾಂತವಾಗಿ ಸ್ವೀಕಾರ ಮಾಡ್ತಾ ಇಲ್ಲ. ಹಿಂಸೆಯನ್ನು ಅನಿವಾರ್ಯವಾಗಿ ಬಳಸಬೇಕಾದ ಚಾರಿತ್ರಿಕ ಸಂದರ್ಭದಲ್ಲಿ ಅದರ ಮಹತ್ವವನ್ನು ಮೊದಲೇ ಮನಗಾಣಿಸಬೇಕು. ನಾನು 2017ರಲ್ಲಿ ನಿಂತು ಮಾತಾಡ್ತಾ ಇದೀನಿ. 'ನವಭಾರತ್' ಇದೆಯಲ್ಲಾ, ಅದು 'ಸ್ಮಶಾನ ಭಾರತ'ಗಿದೆ. ನಾವು ಅದಕ್ಕೆ ಎದುರುಗೊಳ್ಳೋದು ಹೆಂಗೆ ಎಂಬುದಕ್ಕೆ ಬಂದೂಕಿನ ಹೊರತಾಗಿ ಬೇರೆ ದಾರಿ ಕಾಣುವುದಿಲ್ಲ ಎಂಬ ಸ್ಥಿತಿ ನಿರ್ಮಾಣ ಮಾಡುವುದಾದರೆ ನಾವು ಅದನ್ನೇ ತೆಗೆದುಕೊಳ್ತೀವಿ. ಅದಕ್ಕೆ ಈಗಿನಿಂದಲೇ ಗರ್ಭದಲ್ಲಿರುವ ಶಿಶುವಿಗೂ ಅದನ್ನೇ ಮಾತಾಡ್ತೀವಿ ಎಂದು ಹೇಳಿದೀನಿ ಕರಪತ್ರದಲ್ಲಿ. ನಾನು ಇದನ್ನ ವರ್ತಮಾನಕ್ಕೆ ಮಾಡ್ತಾ ಇದೀನಿ ಅಂತಾನೇ ಎಲ್ಲರೂ ಅಂದ್ಕೊಂಡಿದಾರೆ. ನಾನು ಖಂಡಿತಾ ವರ್ತಮಾನಕ್ಕೆ ಮಾತಾಡ್ತಾ ಇಲ್ಲ. ಯಾಕೆಂದರೆ ಇಂತಹ ದಾನಮ್ಮರ ದಾರುಣವಾದ ಸಾವಿರಾರು ಮುಖಗಳನ್ನು ನಾನು ನೋಡಿದೀನಿ.

ಸಮಾಚಾರ: ಮಾತುಕತೆ ಆರಂಭಕ್ಕೂ ಮುನ್ನ ನೀವು 'ಡಿಗ್ನಿಫೈಡ್ ರಾಜಕೀಯ' ಎಂಬ ಪದ ಬಳಸಿದ್ರಿ. ಏನದು? ಇವತ್ತಿಗೆ ಅದನ್ನು ನಾವು ಹೇಗೆ ಅರ್ಥ ಮಾಡಿಕೊಳ್ಳಬೇಕು? 

ಕೆ. ರಾಮಯ್ಯ:

 ರಾಜಕಾರಣ ಅಂತೀವಲ್ಲ ಅದು ನಾವಿಟ್ಟ ನಂಬಿಕೆ. ಒಬ್ಬೊಬ್ಬರಿಗೆ ಒಂದೊಂದು ರಾಜಕೀಯದಲ್ಲಿ ನಂಬಿಕೆ, ಉಳಿದವುಗಳಲ್ಲಿ ನಂಬಿಕೆ ಇರಲಲ್ಲ. ಯಾರು ವೆಲ್ಫೇರ್ ಎಕಾನಮಿ ಬಗ್ಗೆ ಹೇಳ್ತಾರೋ ನಾನು ಅವರ ಪರ ಇದೀನಿ. ಕ್ಯಾಪಿಟಲ್ ಎಕಾನಮಿ, ಪ್ರಾಫಿಟ್ ಎಕಾನಮಿ ಹೇಳಿದವರ ಪರವಾಗಿ ಇರಲ್ಲ ನಾನು. ಆಡಂ ಸ್ಮಿತ್ ಪರ ನಾನು ಇರಲ್ಲ. ಭಾರತ ಎಂತಹ ನೆಲ ಎಂದರೆ,  ಇಲ್ಲಿ ಕೆಲವರನ್ನು ಅಕ್ಷರ ಹೀನರನ್ನಾಗಿ ಮಾಡುವುದರ ಜೊತೆಗೆ ಅತ್ಯುನ್ನತ ದಾರ್ಶನಿಕತೆ ಇದ್ದಂತಹ ಜನಾಂಗಗಳನ್ನ ಹೇಲೆತ್ತುವುದಕ್ಕೆ ಬಳಸಬಹುದಾದಂತಹ ಸನಾತನ ಧರ್ಮಕ್ಕೆ ನೆಲೆ ನೀಡಿದ ನಾಡು. ಅಂತಹ ವ್ಯವಸ್ಥೆಯಿಂದ ಅನುಭವಿಸಿದವರು ಕಲ್ಯಾಣ ರಾಜಕಾರಣವನ್ನು ಅಪ್ಪಿಕೊಳ್ಳಬೇಕಿದೆ. ಅದನ್ನೇ ನಾನು ಡಿಗ್ನಿಫೈಡ್ ರಾಜಕೀಯ ಎಂದಿದ್ದು.

ಭಾರತೀಯ ಅನ್ನಿಸಿಕೊಂಡವನು ಮೊದಲು ಯೋಚಿಸಬೇಕಿರುವುದು ಏನೆಂದರೆ, ಭಾರತೀಯನೇ ಆಗಿರುವವನನ್ನು ನಾವ್ಯಾಕೆ ಮುಟ್ಟುತ್ತಾ ಇಲ್ಲ ಎಂದು. ಇದು ಮೂಲಭೂತ ಪ್ರಶ್ನೆ. ಆ ಕೇರಿಯನ್ನ ನಾವ್ಯಾಕೆ ಪ್ರವೇಶಿಸ್ತಿಲ್ಲ? ಅಥವಾ ಅಲ್ಲಿಯವನನ್ನು ನಾವ್ಯಾಕೆ ಒಳಬಿಟ್ಕೊಳ್ತಾ ಇಲ್ಲ? ಹಾಗೆ ಯೋಚಿಸಿದ್ದೇ ಆದರೆ, ಒಂದು ನಿರಂತರವಾದ ದೌರ್ಜನ್ಯಕ್ಕೆ ಒಂದು ಸಮುದಾಯದ ಜನ ಒಳಗಾಗಿರುವುದು ಗೊತ್ತಾಗುತ್ತದೆ. ಭಾರತೀಯನಾದವನು ಮೊದಲು ಮಾಡಬೇಕಾದ ಕೆಲಸ ಏನೆಂದರೆ ಅದನ್ನು ನಿವಾರಣೆ ಮಾಡುವುದಕ್ಕೆ ಯೋಚಿಸುವುದು. ಅಂದರೆ, ಸೋಷಿಯಲೈಸ್ಡ್‌ ಆಗಿರುವ ಮೈಂಡ್‌ಸೆಟ್‌ ಮೊದಲು ಬೇಕಿದೆ. ಆಮೇಲೆ ಏನಿದ್ದರೂ ಎಕಾನಮಿಕ್ಸ್ ಬಗ್ಗೆ ಆಲೋಚನೆ ಮಾಡಲಿ. ಅದು ವೈಸ್‌ವರ್ಸಾ ಅಲ್ಲ. ಮಾರ್ಕ್ಸಿಸ್ಟರು ಮಾಡಿದ ತಪ್ಪೇನೆಂದರೆ ಮೊದಲು ಎಕನಾಮಿಕ್ಸ್ ಆಮೇಲೆ ಸೋಷಿಯಲ್‌ ಅಂದರು. ಯಾಕೆಂದರೆ ಅವರು ಮಾರ್ಕ್‌ವಾದವನ್ನು ಮಕ್ಕೀಕಾ ಮಕ್ಕೀ ಓದಿದರು.

ಸಮಾಚಾರ: ನೀವೂ ಚುನಾವಣೆಗೆ ನಿಂತವರು. ಕೋಲಾರವನ್ನೇ ಯಾಕೆ ಆಯ್ಕೆ ಮಾಡಿಕೊಂಡಿರಿ. ಅದೂ ಲೋಕಸಭಾ ಕ್ಷೇತ್ರ...?

ಕೆ. ರಾಮಯ್ಯ:

 ಕೋಲಾರದ ಎಂಪಿ ಕ್ಷೇತ್ರ ಹಾಗೂ ಚಾಮರಾಜನಗರ ಕರ್ನಾಟಕದಲ್ಲಿ ವಿಚಿತ್ರ ಕುದಿಬಿಂದುಗಳಿರುವ ಊರುಗಳಿವು. ಇವೆರಡರಲ್ಲಿ ಯಾರು ಗೆಲ್ತಾರೆ- ಯಾವುದೇ ಪಕ್ಷವಿರಬಹುದು- ಗೆದ್ದವರು ಮಾತ್ರ ಕುಬೇರರಾಗ್ತಾರೆ. ನೀವು ಊಹಿಸಲಾಗದಷ್ಟು ಹಣ ಮಾಡ್ತಾರೆ. ಇಲ್ಲಿ  ದಲಿತ ನಾಯಕರು ಮಾತ್ರ ಬೆಳೀತಾರೆ. ದಲಿತ ಸಮುದಾಯಗಳ ಸ್ಥಿತಿ ಹಾಗೆ ಇದೆ. ಇಂತಹ ಸಮಯದಲ್ಲಿ ದಲಿತ ಸಮುದಾಯಗಳ ಘನತೆ ಎತ್ತಿ ಹಿಡಿಯಲು ಚಿಕ್ಕದೊಂದು ಬಿರುಕು, ಅದರೊಳಗಿಂದ ಬೆಳಕು ನನಗೆ ಕಾಣಿಸುತ್ತದೆ. ಅದರ ಕಡೆಗೆ ನಾನು ನುಗ್ಗುತ್ತೇನೆ ಅಷ್ಟೆ. ಆಗ ಚುನಾವಣೆಗೆ ಇಡೀ ದೇಶಾದ್ಯಂತ ಪರ್ಯಾಯ ಬಯಸುವ ಸಾಕಷ್ಟು  ಜನನಿಂತಿದ್ದರು. ಅವರೆಲ್ಲರೂ ಸೋತರು ನಿಜ. ಆದರೆ ಗೆದ್ದಿದ್ದರೆ, ಇಡೀ ಭಾರತವೇ, ಸಾವಿರಾರು ಹೂಗಳು ಅರಳಿ ನಿಂತ ಸಂಸತ್ತನ್ನು ನೋಡುತ್ತಿತ್ತು. ಆದರೆ ಈಗ ಏನಾಗಿದೆ ನೋಡಿ, ಸಂಸತ್‌ನಲ್ಲಿ ಮಾಯಾವತಿಗೆ ಮಾತನಾಡಲು ಬಿಡುತ್ತಿಲ್ಲ...

ಸಮಾಚಾರ: ಸಚಿನ್‌ ತೆಂಡೂಲ್ಕರ್‌ಗೂ ಮಾತಾಡೋಕೆ ಅವಕಾಶ ನೀಡ್ತಿಲ್ಲ... (ನಗು)

ಕೆ. ರಾಮಯ್ಯ:

 (ನಗು) ಸಚಿನ್‌ಗೆ ಕೊಡದೇ ಇದ್ರೆ ನಮಗೇನಾಗ್ಬೇಕ್ರಿ? ಅವನ್ಯಾವನೋ ತನ್ನ ಫೆರಾರಿ ಕಾರಿಗೆ ತೆರಿಗೆ ರಿಯಾಯ್ತಿ ಕೇಳುವವನನ್ನು ನಾನು ಸಾಂಸ್ಕೃತಿಕ ಹೀರೋ ಅಂದ್ಕೊಳಲ್ಲ. ಈ ಕ್ರಿಕೆಟ್‌ ಗುಲಾಮರದ್ದು. ಹರಾಜಾಕಿಸ್ಕೊಳ್ತಾ ಇರುವಂತ ಗುಲಾಮರನ್ನು ನಾನು ಮಾದರಿಯಾಗಿ ಸ್ವೀಕರಿಸಲ್ಲ. ಒಳಗೆ ಹೇಡಿಗಳಾಗಿರುವಂತ, ಆದರೆ ಹೊರಗೆ ಮಾತ್ರ ಮಹಾ ಪೌರುಷ ಮೆರೆಯುವ 'ಸ್ಟಾರ್‌ಡಂ'ನ್ನ ನನ್‌ ಎಕ್ಕಡ ಅಂದ್ಕೊಳ್ತೀನಿ. ಅವರಲ್ಲ ಹೀರೋಗಳು, ನಾವು ಕಾಣಿಸಬೇಕಾಗಿರೋದು ನಮ್ಮ ನೆಲದ ನಮ್ಮ ನಿಜವಾದ ಹೀರೋಗಳನ್ನು...

ಸಮಾಚಾರ: ಕೊನೆಯದಾಗಿ, ಡಿ. 31ರ ರಾತ್ರಿ ಕೋಲಾರದಲ್ಲಿ ಪಂಜಿನ ಮೆರವಣಿಗೆ ಇಟ್ಟುಕೊಂಡಿದ್ದೀರ. ಮುಂದಿನ ಯೋಜನೆ...?

ಕೆ. ರಾಮಯ್ಯ:

ನಾನು ನನ್ನ ಜೀವನದಲ್ಲಿ ದಾರುಣವಾಗಿರುವಂತಹ ಹಲವು ಘಟನೆಗಳನ್ನು ನೋಡಿದ್ದೀನಿ. ಅದೇ ರೀತಿ ವಿಜಯಪುರದ ಆ ಬಾಲಕಿ ದಾನಮ್ಮಳ ಕತೆ ಕೂಡ. ಹೀಗೆ ಅಮಾಯಕರು, ದುರ್ಬಲರು ಅತ್ಯಾಚಾರ, ಕೊಲೆಗೀಡಾಗುವುದು ನಿಲ್ಲಬೇಕು. ಅಂತಹ ಘಟನೆಗಳನ್ನು ನಾವು ಗಟ್ಟಿ ದನಿಯಲ್ಲಿ ಖಂಡಿಸಬೇಕು. ಅದಕ್ಕಾಗಿಯೇ ನಾನು ಬಂದೂಕು ಕೊಡಿ ಅಂತ ಕೇಳಿದ್ದು. ದುರ್ಬಲರು ದುರ್ಬಲರಾಗಿಯೇ ಇರಲ್ಲ, ಅಸ್ತ್ರ ಕೈಗೆ ಸಿಕ್ಕರೆ ಪ್ರತಿಯೊಬ್ಬರೂ ಯೋಧರಾಗಬಲ್ಲರು ಎಂಬ ಸಂದೇಶವನ್ನು ಕಳಿಸಿಕೊಡಬೇಕಿದೆ. ಅದಕ್ಕಾಗಿ ಕೋಲಾರದಲ್ಲಿ ವರ್ಷದ ಕೊನೆಯಲ್ಲಿ ಮೆರವಣಿಗೆ ನಡೆಯಲಿದೆ. ಅದು ಹೊಸ ವರ್ಷಕ್ಕೆ ಹೊಸ ಶಕ್ತಿಯಾಗಿ ರೂಪುಗೊಳ್ಳುವ ಭರವಸೆ ಇದೆ. ಭರವಸೆ ಇಲ್ಲದಿದ್ದರೆ ಯಾವ ಯೋಜನೆಯೂ ಸಫಲವಾಗುವುದಿಲ್ಲ.