ಚುನಾವಣಾ ಫಲಿತಾಂಶದ ಭವಿಷ್ಯ ಹೇಳುವ ಮತದಾನೋತ್ತರ ಸಮೀಕ್ಷೆಗಳುನಡೆಯುವುದು ಹೀಗೆ...
ಸುದ್ದಿ ಸಾಗರ

ಚುನಾವಣಾ ಫಲಿತಾಂಶದ ಭವಿಷ್ಯ ಹೇಳುವ ಮತದಾನೋತ್ತರ ಸಮೀಕ್ಷೆಗಳುನಡೆಯುವುದು ಹೀಗೆ...

Summarytoggle summary

ಮತದಾನೋತ್ತರ ಸಮೀಕ್ಷೆಗಳು ಚುನಾವಣಾ ಫಲಿತಾಂಶದ ಭವಿಷ್ಯವನ್ನು ಹೇಳುತ್ತಿವೆ. ಇವುಗಳ ಸತ್ಯಾಸತ್ಯೆತೆಯು ಚುನಾವಣಾ ಫಲಿತಾಂಶ ಹೊರಬಿದ್ದ ನಂತರವೇ ತಿಳಿಯುತ್ತದೆ. ಈ ಮೊದಲು ಚುನಾವಣಾ ಪೂರ್ವ ಸಮೀಕ್ಷೆಗಳು ನಡೆಯುತ್ತಿದ್ದವು. ಆದರೆ ಈ ವಿಧಾನ ಮತದಾರರ ಮೇಲೆ ಪರಿಣಾಮ ಮತ್ತು ಪ್ರಭಾವ ಬೀರಬಹುದೆಂದು ಚುನಾವಣಾ ಆಯೋಗ ತಡೆ ಹಿಡಿಯಿತು. ಸದ್ಯ ಮತದಾನೋತ್ತರ ಸಮೀಕ್ಷೆಗಳನ್ನು ನಡೆಸಲು ಅವಕಾಶ ಕೊಟ್ಟಿದೆ. ಹಾಗಾದರೆ ಮತದಾನೋತ್ತರ ಸಮೀಕ್ಷೆಗಳು ಎಂದರೆ ಏನು? ಅವುಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ? ಇತ್ಯಾದಿ ಅಂಶಗಳ ಕುರಿತು ಒಂದು ಮಾಹಿತಿ ಇಲ್ಲಿದೆ.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಭಾರತದಲ್ಲಿ ಚುನಾವಣೆಗಳು ಜನರ ಭವಿಷ್ಯವನ್ನು ನಿರ್ಧರಿಸುತ್ತವೆ ಎಂಬುದು ಚರ್ಚೆಯ ವಿಚಾರ. ಆದರೆ ಅದರ ಆಚೆಗೆ ಪ್ರತಿ ಚುನಾವಣೆಯೂ ತನ್ನದೇ ಆದ ರೋಚಕತೆಯನ್ನು ಒಳಗೊಂಡಿರುತ್ತವೆ. ಸದ್ಯ ನಡೆಯುತ್ತಿರುವ ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭೆ ಚುನಾವಣೆಗಳಲ್ಲಿ ನಾಮಪತ್ರ ಸಲ್ಲಿಕೆಯಿಂದ ಆರಂಭಗೊಂಡು ಮತದಾನದವರೆಗೆ ಪ್ರಕ್ರಿಯೆ ಜನರ ಗಮನ ಸೆಳೆಯುತ್ತಿವೆ. ಫಲಿತಾಂಶಕ್ಕೆ ಇನ್ನು ಮೂರು ದಿನ ಬಾಕಿ ಇದೆ. ಮತದಾನ ಮತ್ತು ಫಲಿತಾಂಶದ ನಡುವೆ ಚುನಾವಣೆಗಳ ರೋಚಕತೆಯನ್ನು ಹೆಚ್ಚಿಸಿರುವುದು ಮತದಾನೋತ್ತರ ಸಮೀಕ್ಷೆಗಳು.

ಮತದಾನೋತ್ತರ ಸಮೀಕ್ಷೆ:

ಮತದಾನೋತ್ತರ ಸಮೀಕ್ಷೆ ಎಂದರೆ ಇದು ಮತದಾರರ ಕೇವಲ ಅಭಿಪ್ರಾಯ ಸಂಗ್ರಹದ ಸಮೀಕ್ಷೆಯಲ್ಲ. ಮತಹಾಕಿ ಮತಗಟ್ಟೆಯಿಂದ ಹೊರಗೆ ಬಂದ ತಕ್ಷಣ, ಮತದಾರರು ನಿರ್ದಿಷ್ಟವಾಗಿ ಯಾವ ಅಭ್ಯರ್ಥಿಗೆ (ಯಾವ ಪಕ್ಷಕ್ಕೆ) ಮತ ಚಲಾಯಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ನಡೆಸುವ ಸಮೀಕ್ಷೆಯನ್ನು ಮತದಾನೋತ್ತರ ಸಮೀಕ್ಷೆ ಎಂದು ಕರೆಯುತ್ತಾರೆ.

ಈ ಸಮೀಕ್ಷೆಯಲ್ಲಿ ಮತದಾರ ನಿರ್ದಿಷ್ಟ ವ್ಯಕ್ತಿಗೆ ಅಥವಾ ಪಕ್ಷಕ್ಕೆ ಯಾಕೆ ಮತ ಚಲಾಯಿಸಿದ್ದಾರೆ? ಅವನನ್ನು ಮತ ಚಲಾಯಿಸಲು ಪ್ರೇರೇಪಿಸಿದ ಅಂಶಗಳೇನು? ತಹರದ ಮಾಹಿತಿಯನ್ನು ಕಲೆ ಹಾಕಲಾಗುತ್ತದೆ. ಹೀಗೆ ಕಲೆ ಹಾಕಿದ ಒಟ್ಟು ಮಾಹಿತಿಯ ಆಧಾರದಲ್ಲಿಯೇ ಅಂತಿಮ ಫಲಿತಾಂಶ ಏನಾಗಬಹುದು ಎಂಬ ಭವಿಷ್ಯ ನುಡಿಯಲಾಗುತ್ತದೆ.

ಮತದಾನೋತ್ತರ ಸಮೀಕ್ಷೆಯನ್ನು ಡಚ್ ಸಮಾಜಶಾಸ್ತ್ರಜ್ಞ ಹಾಗೂ ಮಾಜಿ ರಾಜಕಾರಣಿಯೂ ಆದ ಮಾರ್ಸೆಲ್ ವ್ಯಾನ್ ಡಾನ್ ಕಂಡು ಹಿಡಿದರು ಎಂದು ಹೇಳಲಾಗುತ್ತದೆ. ಫೆಬ್ರುವರಿ 15, 1967 ರಲ್ಲಿ ನಡೆದ ಡಚ್ ಲೆಜಿಸ್ಲೇಟಿವ್ ಚುನಾವಣೆಯಲ್ಲಿ  ಪ್ರಾಯೋಗಿಕವಾಗಿ ಇದನ್ನು ಮೊದಲು ಬಳಸಲಾಯಿತು ಎನ್ನುತ್ತವೆ ಗೂಗಲ್ ಮಾಹಿತಿ.

ಆದರೆ ಮತ್ತೊಂದು ಮೂಲದ ಪ್ರಕಾರ, ಅಮೇರಿಕದ ವಾರೆನ್ ಮಿಟೋಪ್ ಸ್ಕೈ ಎಂಬುವವರೇ ಸಿಬಿಎಸ್ ನ್ಯೂಸ್ ಗಾಗಿ ಮೊದಲು ಇದನ್ನು ಪ್ರಯೋಗಕ್ಕೆ ಒಳಪಡಿಸಿದ. 1967 ರಲ್ಲಿಯೇ Kentucky gubernatorial election ಗಾಗಿ ೀತ ಮತದಾನೋತ್ತರ ಸಮೀಕ್ಷೆ ಮಾಡಿದ ಎನ್ನಲಾಗುತ್ತದೆ.

ಚುನಾವಣಾ ಫಲಿತಾಂಶ ಹೊರಬೀಳಲು ಕೆಲವೊಮ್ಮೆ ದಿನಗಳು ಮತ್ತು ವಾರಗಳೇ ಬೇಕಾಗುತ್ತವೆ. ಹಾಗಾಗಿ ಮತದಾನ ಪ್ರಕ್ರಿಯೆ ಮುಗಿದ ನಂತರದ ಕೆಲವು ನಿಮಿಷಗಳಲ್ಲಿಯೇ ಈ ಮತದಾನೋತ್ತರ ಸಮೀಕ್ಷೆಗಳು ಮತದಾರರಿಂದ ಮಾಹಿತಿಯನ್ನು ಕಲೆಹಾಕಿ ಅದನ್ನು ಒಟ್ಟುಗೂಡಿಸಿ ಒಂದು ಅಂದಾಜಿನಲ್ಲಿ ಸದ್ಯದ ಟ್ರೆಂಡ್ಗೆ ಪೂರಕವಾಗಿ ಫಲಿತಾಂಶದ ಕುರಿತು ಹೇಳುತ್ತವೆ.

ಭಾರತದಲ್ಲಿ ಟೈಮ್ಸ್ ನೌ, ಆಜ ತಕ್, ಝೀ ನ್ಯೂಸ್, ಸಿಎನ್ಎನ್-ಐಬಿಎನ್ ಇನ್ನಿತರೇ ನ್ಯೂಸ್ ಏಜನ್ಸಿಗಳು ಮತದಾನೋತ್ತರ ಸಮೀಕ್ಷೆ ಕೈಗೊಳ್ಳುತ್ತವೆ. ಎಸಿ ನೇಲ್ಸನ್, ಚಾಣಕ್ಯ ಮತ್ತು ಸಿ ವೋಟರ್ಸ್ ಸರ್ವೇಯಂತಹ ರಿಸರ್ಚ್ ಮತ್ತು ಸರ್ವೇ ಏಜನ್ಸಿಗಳು ಫೀಲ್ಡ್ ಸಮೀಕ್ಷೆಗೆ ನೆರವು ನೀಡುತ್ತವೆ.

2014ರ ಭಾರತದ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಚುನಾವಣಾ ಆಯೋಗವು ಮತ ಎಣಿಕೆಯಾಗುವ ತನಕ ಸಮೀಕ್ಷೆಗಳನ್ನು ಬಹಿರಂಗಪಡಿಸಬಾರದು ಎಂದು ಹೇಳಿತ್ತು. ಆದರೆ ಇದಕ್ಕೆ ಮಾದ್ಯಮಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ತನ್ನ ನಿರ್ಧಾರವನ್ನು ಹಿಂಪಡೆಯಿತು. ಹೀಗೆ ಮತದಾನೋತ್ತರ ಸಮೀಕ್ಷೆ ಮಾಧ್ಯಮಗಳಿಗೆ ಇವತ್ತು ಜನರ ಗಮನ ಸೆಳೆಯಲು ಅಗತ್ಯವಾದ ಅಂಶವಾಗಿದೆ.

ಮತದಾನೋತ್ತರ ಸಮೀಕ್ಷೆ ಬಗ್ಗೆ ಕೆಲವು ವಿವಾದಗಳು ಮತ್ತು ಟೀಕೆಗಳೂ ಇವೆ. ಒಂದು ವೇಳೆ ಚುನಾವಣೆಯಲ್ಲಿ ಒಂದಕ್ಕಿಂತ ಹೆಚ್ಚು ಮತದಾನದ ಹಂತಗಳಿದ್ದರೆ, ಮೊದಲ ಹಂತದ ಮತದಾನದ ನಂತರ ಮತದಾನೋತ್ತರ ಸಮೀಕ್ಷೆ ಹೊರಹಾಕಿದಾಗ ಅದು ಉಳಿದ ಹಂತದ ಮತದಾನದ ಮೇಲೆ ಪ್ರಭಾವ ಮತ್ತು ಪರಿಣಾಮ ಬೀರುತ್ತದೆ.

ಸಮೀಕ್ಷೆಗಳು ಹೇಳುವ ದಿಕ್ಕಿನಲ್ಲಿಯೇ ಮುಂದಿನ ಹಂತದಲ್ಲಿ ಮತದಾರರು ತಮ್ಮ ಮತಚಲಾಯಿಸುವ ಪ್ರಭಾವ ಹೆಚ್ಚಾಗಿರುತ್ತದೆ ಎಂಬ ವಿರೋಧಗಳೂ ಈ ಸಮೀಕ್ಷೆಗಳ ವಿರುದ್ಧ ಇವೆ. ಆದರೆ ಸದ್ಯದ ಮತದಾರರ 'ಆನ್ ಲೈನ್ ಟ್ರೆಂಡ್' ಯಾವ ಕಡೆಗೆ ಹೆಚ್ಚು ಇರುತ್ತವೆಯೋ ಅದೇ ಕಡೆಗೆ ಬಹುತೇಕ ಸಮೀಕ್ಷೆಗಳು ತಮ್ಮ ಫಲಿತಾಂಶಗಳನ್ನು ಹೇಳುತ್ತವೆ ಎನ್ನಲಾಗುತ್ತದೆ.

ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಮತದಾನೋತ್ತರ ಸಮೀಕ್ಷೆ ಮಾಡುವ ಸಂಸ್ಥೆಗಳು ಸಮೀಕ್ಷೆದಾರರ ತಂಡಗಳನ್ನು ರಚಿಸುತ್ತವೆ. ಪ್ರತಿ ತಂಡಗಳು ಆಯ್ಕೆಮಾಡಿಕೊಂಡಿರುವ ಮತಗಟ್ಟೆಗಳಿಗೆ ಹೋಗುತ್ತವೆ. ಮತ ಚಲಾಯಿಸಿ ಬಂದ ಮತದಾರರಿಂದ ಅಗತ್ಯವಿರುವ ಮಾಹಿತಿಯನ್ನು ತಂಡ ಕಲೆ ಹಾಕುತ್ತದೆ.

ಮತದಾರ ಯಾವ ಅಭ್ಯರ್ಥಿಗೆ (ಪಕ್ಷಕ್ಕೆ) ಮತ ಹಾಕಿದ? ಹಾಗೂ ಮತ ಹಾಕಲು ಕಾರಣವೇನು? ಎಂಬ ಹಲವು ಪ್ರಶ್ನೆಗಳ ಮುಖಾಂತರ ಅವರ ಅಭಿಪ್ರಾಯವನ್ನು ಸಂಗ್ರಹಿಸುತ್ತದೆ. ನಿರ್ದಿಷ್ಟ ಸಂಖ್ಯೆಯ ಮತಗಟ್ಟೆಗಳಲ್ಲಿ ನಿರ್ದಿಷ್ಟ ಸಂಖ್ಯೆಯ ಮತದಾರರಿಂದ ಹೀಗೆ ಮಾಹಿತಿಯನ್ನು ಕಲೆ ಹಾಕಿದ ಮೇಲೆ ಒಟ್ಟಾಗಿ ಅದನ್ನು ಲೆಕ್ಕಾಚಾರ ಮಾಡಲಾಗುತ್ತದೆ. ನಂತರದಲ್ಲಿ ಸಮೀಕ್ಷೆಯಲ್ಲಿ ಕಂಡುಕೊಂಡಂತ ಮಾಹಿತಿಯ ಪ್ರಕಾರ ತಮ್ಮ ಸಮೀಕ್ಷೆಯ ಫಲಿತಾಂಶವನ್ನು ಸಂಸ್ಥೆಗಳು ಹೊರಹಾಕುತ್ತವೆ.

ಸಮೀಕ್ಷೆಗಳು ಎಷ್ಟು ನಿಜ ?

2004ರ ಲೋಕಸಭಾ ಚುನಾವಣೆಯಲ್ಲಿ ಬಹುತೇಕ ಸಮೀಕ್ಷೆಗಳು ವಾಜಪೇಯಿಯ ಮರಳಿ ಸರಕಾರ ರಚನೆ ಮಾಡುತ್ತಾರೆ ಎಂದು ಭವಿಷ್ಯ ನುಡಿದಿದ್ದವು. ಕಾಂಗ್ರೆಸ್ ಪಕ್ಷ  200+ ಗೆಲ್ಲಲು ಸಾಧ್ಯವೇ ಇಲ್ಲ ಎಂದಿದ್ದವು. ಎನ್ಡಿಎ 250+ ಸೀಟ್ ಗೆಲ್ಲುತ್ತವೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿದ್ದವು. ಆದರೆ ಅಂತಿಮವಾಗಿ ಕಾಂಗ್ರೆಸ್ 209 ಸ್ಥಾನಗಳಲ್ಲಿ ವಿಜಯ ಸಾಧಿಸುವ ಮುಖಾಂತರ ಸಮೀಕ್ಷೆಗಳ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿತ್ತು.

ಹೀಗೆ ಮತದಾನೋತ್ತರ ಸಮೀಕ್ಷೆಗಳು ಸೋತ ಉದಾಹರಣೆಗಳು ಭಾರತದಲ್ಲಷ್ಟೇ ಅಲ್ಲ ಜಗತ್ತಿನಾದ್ಯಂತ ಸಿಗುತ್ತವೆ. 2009ರ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಅದ್ವಾನಿಯನ್ನು ಪ್ರಧಾನಿಯಾಗಿ, ಯುಪಿಎ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯಾಗಿ ಘೋಷಣೆ ಮಾಡಿದ್ದವು. ಎನ್ಡಿಎ ಮತ್ತು ಯುಪಿಎ ಎರಡೂ ಬಹುತೇಕ ಸಮವಾಗಿ ಸೀಟುಗಳನ್ನು ಗೆಲ್ಲಲಿವೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿದ್ದವು.

ಆದರೆ ಚುನಾವಣಾ ಫಲಿತಾಂಶದಲ್ಲಿ ಯುಪಿಎ 262 ಸೀಟುಗಳನ್ನು ಪಡೆದಿತ್ತು. ಎನ್ಡಿಎ 159 ಸೀಟುಗಳನ್ನು ಪಡೆಯಲಷ್ಟೇ ಶಕ್ತವಾಗಿತ್ತು. ಇದು ಭಾರತದಲ್ಲಿ ಸಮೀಕ್ಷೆಗಳು ಸುಳ್ಳಾಗಬಹುದು ಎನ್ನಲು ಮತ್ತೊಂದು ಉದಾಹರಣೆಯಷ್ಟೇ. ಈಗ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಮತದಾನೋತ್ತರ ಸಮೀಕ್ಷೆಗಳು ಹೊರಬಿದ್ದಿವೆ.

ಬಿಜೆಪಿ ಬಹುಮತ ಸಾಧಿಸುತ್ತದೆ ಎಂದು ಭವಿಷ್ಯ ನುಡಿಯುತ್ತಿವೆ. ಇಂತಹ ಸಂದರ್ಭದಲ್ಲಿ ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್ ಅವರ ಚುನಾವಣಾ ಫಲಿತಾಂಶದ ವಿಶ್ಲೇಷಣೆಯೇ ಭಿನ್ನವಾಗಿದೆ. ಈ ಬಾರಿ ಸಮೀಕ್ಷೆಗಳ ಭವಿಷ್ಯ ಏನಾಗುತ್ತದೆ? ಜನರು ಸಮೀಕ್ಷೆಗಳ ಮೇಲಿನ ಭರವಸೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಾ? ಎಂಬುದನ್ನು ಸೋಮವಾರ ಹೊರಬೀಳುವ ಚುನಾವಣಾ ಫಲಿತಾಂಶವೇ ನಿರ್ಧರಿಸುತ್ತದೆ. ಅಲ್ಲೀವರೆಗೂ ಮತದಾನೋತ್ತರ ಸಮೀಕ್ಷೆ ಕುರಿತು ಇಷ್ಟು ಮಾಹಿತಿ ನಿಮಗಾಗಿ.