ಪ್ರೇಮಾಂಗಣದಿಂದ ಹೋರಾಟದ ಕಣಕ್ಕೆ 
ಸುದ್ದಿ ಸಾಗರ

ಪ್ರೇಮಾಂಗಣದಿಂದ ಹೋರಾಟದ ಕಣಕ್ಕೆ 

ಮರ್ಯಾದಾ ಹತ್ಯೆ ವಿರುದ್ಧ ಹೋರಾಡಿದ ಕೌಶಲ್ಯ ಕತೆ

  • ಕೌಶಲ್ಯ ಮರ್ಯಾದಾ ಹತ್ಯೆಗಳ ವಿರುದ್ಧ ಹೋರಾಡುತ್ತಿರು ಕ್ರುಸೇಡರ್
  • ಪ್ರೀತಿಸಿದ ಮದುವೆಯಾದರೆ ತನ್ನ ಮನೆಯವರೇ ಗಂಡನನ್ನು ಕೊಲೆ ಮಾಡಿದ್ದಾರೆ.
  • ಜಾತಿ ನಿರ್ಮೂಲನೆಗೆ ಪಣತೊಟ್ಟ ಕ್ರಾಂತಿಕಾರಿ ಕೌಶಲ್ಯ

ಮಾರ್ಚ್‌ 13, 2016:

ತಮಿಳುನಾಡಿನ ತಿರುಪುರ ಜಿಲ್ಲೆಯ ಉದಮಲ್ಪೇಟೆ ಬಸ್‌ ನಿಲ್ದಾಣ. ಜನ ಪ್ರಯಾಣಕ್ಕಾಗಿ ಬಸ್‌ಗಳಿಗೆ ಕಾಯುತ್ತ ನಿಂತಿದ್ದರು. ಗುಂಪಿನಲ್ಲಿ ಶಾಪಿಂಗ್ ಮುಗಿಸಿಕೊಂಡು ಗೂಡಿಗೆ ಮರಳಲು ಅಣಿಯಾಗಿದ್ದ ಅದೊಂದು ಜೋಡಿಯೂ ಇತ್ತು. ಇದ್ದಕ್ಕಿದ್ದಂತೆ ಬಂದ ತಂಡವೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸತೊಡಗಿದರು. ಸಾರ್ವಜನಿಕರ ಎದುರಿಗೆ ಹುಡುಗ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡತೊಡಗಿದ. ಆತನ ದೇಹದ ಮೇಲೆ ಬೀಳುತ್ತಿದ್ದ ಮಚ್ಚಿನೇಟುಗಳನ್ನು ತಡೆಯಲು ಆಕೆ ಪ್ರಯತ್ನ ಪಡುತ್ತಿದ್ದಳು.

ಆಕೆಯ ತಲೆಯಿಂದ ರಕ್ತ ಸೋರತೊಡಗಿತು. ಕೊನೆಗೆ, ಜನರೇ ಮುಂದೆ ಬಂದು ಹಲ್ಲೆಕೋರರನ್ನು ಹತೋಟಿಗೆ ತೆಗೆದುಕೊಂಡರು. ಹುಡುಗನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆಯೇ ಅಸುನೀಗಿದನು. ಆಕೆ, ಭಯಾನಕವಾದ ಹಲ್ಲೆಯನ್ನು ತಡೆದುಕೊಂಡು ಬದುಕುಳಿದಳು. ಹಾಗೆ; ಪ್ರೀತಿಸಿದ ತಪ್ಪಿಗೆ, ಮದುವೆಯಾದ ತಪ್ಪಿಗೆ, ಜಾತಿಯನ್ನು ಮೀರಿದ ತಪ್ಪಿಗೆ ಸಾವನ್ನಪ್ಪಿದ ಯುವಕನ ಹೆಸರು ಶಂಕರ್. ಆಕೆಯ ಹೆಸರು ಕೌಶಲ್ಯ.

ಸಾರ್ವಜನಿಕ ನಟ್ಟನಡುವೆಯೇ ಎಂಜಿನಿಯರಿಂಗ್ ಪದವೀದರ ಶಂಕರ್ ಕೊಲೆಯಾಗಿ ಹೋದ ಪ್ರಕರಣವನ್ನು ಅವತ್ತು ಸರಕಾರ ಒಪ್ಪಿಕೊಳ್ಳಲೇ ಇಲ್ಲ. ಅಂದು ಮುಖ್ಯಮಂತ್ರಿಯಾಗಿದ್ದ ಓ. ಪನ್ನೀರ್‌ಸೆಲ್ವಂ, ಇದೊಂದು ಕಟ್ಟು ಕತೆ ಎಂಬರ್ಥದಲ್ಲಿ ಮಾತನಾಡಿದ್ದರು. ಆದರೆ, ಹಲ್ಲೆಯ ನಡೆಸಿದ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಅವು ಮುಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು ಕೂಡ.

ಕೌಶಲ್ಯ ಕುಟುಂಬದವರೇ ಮಗಳು ಜಾತಿ ಬಿಟ್ಟು ಮದುವೆಯಾಗಿದ್ದಾಳೆ ಎಂಬ ಕಾರಣಕ್ಕೆ 'ಮರ್ಯಾದಾ ಹತ್ಯೆ' ನಡೆಸಿದ್ದರು. ಯುವತಿಯ ತಂದೆ ಚಿನ್ನಸ್ವಾಮಿ, ಮಾವ ಪಂಡಿಥುರೈ ಸೇರಿದಂತೆ ಒಟ್ಟು 11 ಜನರ ಮೇಲೆ ಪೊಲೀಸರು 1500 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದರು. ನವೆಂಬರ್‌ನಲ್ಲಿ ಈ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ತಿರುಪುರ್ ನ್ಯಾಯಾಲಯವು ಸೋಮವಾರ ತೀರ್ಪು ನೀಡಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿದೆ.

'ಮರ್ಯಾದಾ ಹತ್ಯೆ'ಗಳು ಎಂದು ಕರೆಸಿಕೊಳ್ಳುವ ಇಂತಹ ಘಟನೆಗಳು ತಮಿಳುನಾಡಿಗಾಗಲೀ, ಈ ದೇಶಕ್ಕಾಗಲೀ, ಕರ್ನಾಟಕಕ್ಕಾಗಲೀ ಹೊಸತಲ್ಲ. ಆದರೆ ಇದೊಂದು ಪ್ರಕರಣದಲ್ಲಿ ತ್ವರಿತಗತಿಯಲ್ಲಿ ತೀರ್ಪು ಹೊರಬಿದ್ದಿದೆ. ಅಷ್ಟೆ ಅಲ್ಲ, ಅದೊಂದು ಮಾದರಿ ತೀರ್ಪಾಗಿಯೂ ಕಾಣಿಸುತ್ತಿದೆ. ಪ್ರಕರಣದಲ್ಲಿ ಕೌಶಲ್ಯ ತಂದೆ ಚಿನ್ನಸ್ವಾಮಿ, ಮಾವ ಪಂಡಿಥುರೈ, ಪಿ. ಜಗದಾಶನ್, ಎಮ್. ಮಣಿಕಾಂಡನ್ (25), ಪಿ. ಸೆಲ್ವಕುಮಾರ್ (25), ಪಿ. ಕಲೈಥಮಿಝ್ವಾನ್ (24) ಮತ್ತು ಎಂ. ಮದನ್ ಅಲಿಯಾಸ್ ಮೈಕೆಲ್ (25) ಮರಣ ದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ.

ಇನ್ನುಳಿದ ಐವರು ಆರೋಪಿಗಳಲ್ಲಿ ಓರ್ವನಿಗೆ ಜೀವಾವಧಿ, ಮತ್ತೋರ್ವನಿಗೆ ಐದು ವರ್ಷ ಶಿಕ್ಷೆ ವಿಧಿಸಲಾಗಿದೆ. ಕೌಶಲ್ಯ ತಾಯಿ ಸೇರಿದಂತೆ ಉಳಿದ ಮೂವರನ್ನು ಖುಲಾಸೆಗೊಳಿಸಿದೆ.ತಮಿಳುನಾಡಿನ ಪೊಲ್ಲಾಚಿಯಲ್ಲಿ ಇಂಜಿನಿಯರಿಂಗ್ ಓದುವಾಗ ಕೌಶಲ್ಯ ಹಾಗೂ ಶಂಕರ್ ನಡುವೆ ಪ್ರೇಮಾಂಕುರವಾಗಿತ್ತು. ಕೌಶಲ್ಯ ತನ್ನ ಪ್ರೇಮ ವಿವಾಹದ ವಿಷಯದ ಕುರಿತು ಮನೆಯವರಿಗೆ ಹೇಳಿದಾಗ, ತೀವ್ರ ವಿರೋಧ ಬಂದಿತ್ತು. ಕೌಶಲ್ಯ ತೇವಾರ್ ಜಾತಿ (OBC) ಗೆ ಸೇರಿದವಳಾಗಿದ್ದು, ಶಂಕರ್ ದಲಿತ ಸಮುದಾಯದಕ್ಕೆ ಸೇರಿದವನು ಎಂಬುದೇ ಮನೆಯವರ ವಿರೋಧಕ್ಕೆ ಕಾರಣವಾಗಿತ್ತು. ಕೊನೆಗೆ, ಇಬ್ಬರೂ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿ ಹೊಸ ಬದುಕು ಆರಂಭಿಸುವ ಕನಸು ಕಟ್ಟಿದ್ದರು.

ಪ್ರೇಮಾಂಗಣದಿಂದ ಹೋರಾಟದ ಕಣಕ್ಕೆ:

ಕೌಶಲ್ಯ ತನ್ನ ಮೇಲೆ ನಡೆದ ಭಯಾನಕ ಹಲ್ಲೆಯಿಂದ ಬಚಾವಾಗಿದ್ದರು. ಆದರೆ ಆಕೆ ಪ್ರೀತಿಯನ್ನು ಕಳೆದುಕೊಂಡಿದ್ದಳು. ಆರಂಭದಲ್ಲಿ ಒಮ್ಮೆ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದರು; ಮಾನಸಿಕ ಖಿನ್ನತೆಗೂ ಒಳಗಾಗಿದ್ದರು. ಆದರೆ ಈಗ ಕೌಶಲ್ಯ ಸಂಪೂರ್ಣವಾಗಿ ಬದಲಾಗಿದ್ದಾರೆ. ಶಂಕರ್ ಮನೆಯನ್ನೇ ತನ್ನ ಮನೆ ಅಂದುಕೊಂಡಿದ್ದಾರೆ. ಶಂಕರ್ ತಮ್ಮಂದಿರಿಗೆ ವಿದ್ಯಾಭ್ಯಾಸ ಕೊಡಿಸುವ ಹೊಣೆ ಹೊತ್ತುಕೊಂಡಿದ್ದಾರೆ.

ಬಡ ಮಕ್ಕಳಿಗೆ ಶಂಕರ್ ಹೆಸರಿನಲ್ಲಿ ಟ್ಯೂಷನ್ ಸೆಂಟರ್‌ ಒಂದನ್ನು ಶುರುಮಾಡಿದ್ದಾರೆ. ಅದು ಅಗಲಿದ ಪತಿಯ ಕನಸು ಕೂಡ ಆಗಿತ್ತು.ಅದಕ್ಕಿಂತ ಹೆಚ್ಚಾಗಿ ಕೌಶಲ್ಯ ಈಗ ತಮಿಳುನಾಡಿನಲ್ಲಿ ನಡೆಯುವ ಮರ್ಯಾದಾ ಹತ್ಯೆಗಳ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ. ತಮ್ಮ ಪ್ರಕರಣದಲ್ಲಿ ನ್ಯಾಯಕ್ಕಾಗಿ ನಿಂತು ಬಡಿದಾಡಿದ್ದಾರೆ. ಮನೆಯವರಿಗೆ ಜಾಮೀನು ನೀಡದಂತೆ ನ್ಯಾಯಾಲಯಕ್ಕೆ ಮನವಿ ಮಾಡುತ್ತಲೇ ಬಂದಿದ್ದರು. ಇದೀಗ ಬಂದಿರುವ ಮಾದರಿ ತೀರ್ಪಿನಿಂದಾಗಿ ಅವರ ಹೋರಾಟದ ಚೈತನ್ಯ ಇನ್ನಷ್ಟು ಹೆಚ್ಚಾಗಿದೆ. 'ಜಾತಿ ಅಳಿಯದೆ ಮನುಷ್ಯತ್ವ ಅರಳಲು ಸಾಧ್ಯವಿಲ್ಲ' ಎಂದವರು ಅನುಭವದ ಮಾತುಗಳನ್ನು ಜಗತ್ತಿಗೆ ಸಾರುವ ಕೆಲಸ ಮಾಡುತ್ತಿದ್ದಾರೆ.

ಜಾತಿ ನಿರ್ಮೂಲನೆಗೆ ಪಣತೊಟ್ಟ ಕ್ರಾಂತಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 2014 ರ ಮಾರ್ಚ್‌ನಲ್ಲಿ ಕೌಶಲ್ಯ ಸೀರೆಯುಟ್ಟುಕೊಂಡು, ಉದ್ದನೆಯ ಕೂದಲು ಬಿಟ್ಟುಕೊಂಡು, ಕೊರಳಲ್ಲಿ ತಾಳಿ ಹಾಕಿಕೊಂಡಿರುತ್ತಿದ್ದರು. ಒಂದು ವರ್ಷದ ನಂತರ, ತಲೆಯಲ್ಲಿ ಕತ್ತರಿಸಿದ ಸಣ್ಣ ಕೂದಲು, ದುರ್ಬಲವಾದ ಮುಖದ ಜಾಗದಲ್ಲಿ ಪ್ರಖರ ಚಹರೆ, ಜ್ವಾಲೆಯಂತ ಹೊಳೆಯುವ ಕಣ್ಣುಗಳು ಅವರದ್ದಾಗಿವೆ. ಅವರ ಈ  ಪರಿವರ್ತನೆ ಹೊಸ ಸಮಾಜದ ಕನಸುಗಳನ್ನು ಕಟ್ಟಿಕೊಂಡಿದೆ.

“ನಾನು ದಲಿತ ಐಕಾನ್ ಆಗಿ ಅವಳನ್ನು(ಕೌಶಲ್ಯ) ನೋಡುತ್ತಿದ್ದೇನೆ. ಕೆಲವು ತಿಂಗಳುಗಳ ಮೊದಲು ಅವರು ದುಃಖವನ್ನು ತಡೆಯಲಾರದೇ ಮಗುವಿನಂತೆ ಅಳುತ್ತಿದ್ದರು. ಆದರೆ ಈಗ ಅದೇ ಹುಡುಗಿ ಮರ್ಯಾದಾ ಹತ್ಯೆಗಳ ವಿರುದ್ಧ ಸಿಡಿದೆದ್ದು ಹೋರಾಟ ಮಾಡುತ್ತಿದ್ದಾಳೆ. ತನ್ನ ಪೋಷಕರು ಜಾಮೀನಿಗಾಗಿ ಹಲವು ಬಾರಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದಾಗ ಆ ಅರ್ಜಿಗಳನ್ನು ಇವಳು ಆಕ್ಷೇಸಿದ್ದಳು. ತನ್ನ ಪತಿಯ ಸಾವಿಗೆ ನ್ಯಾಯ ದೊರಕಿಸಿಕೊಳ್ಳಲು ಹೋರಾಡಿದಳು,”
-ಕಾಥಿರ್, ಮಧುರೈ ಮೂಲದ ದಲಿತ-ಹಕ್ಕುಗಳ ಹೋರಾಟಗಾರ

ಕೌಶಲ್ಯ ಜೀವನದದಲ್ಲಿನ ವಿವಿಧ ಮಜಲುಗಳನ್ನು ಕಡಿಮೆ ಅಂತರದಲ್ಲಿ ಕಂಡರು. ಪ್ರೇಮವಿವಾಹ, ಗಂಡನ ಸಾವು, ಆತ್ಮಹತ್ಯೆಗೆ ಪ್ರಯತ್ನ ಮತ್ತು ಖಿನ್ನತೆಯಿಂದಾಗಿ ಬಳಲಿದ್ದು ಇವೆಲ್ಲವೂ ಒಂದು ಭಾಗ. ಎರಡನೇ ಭಾಗದಲ್ಲಿ ಕೌಶಲ್ಯ ಮರ್ಯಾದಾ ಹತ್ಯೆಗಳ ವಿರುದ್ಧ ಹೋರಾಡುತ್ತಿರು ಕ್ರುಸೇಡರ್.

“ಈ ಧೈರ್ಯ ಕಳೆದ 21 ತಿಂಗಳಲ್ಲಿ ಬಂದಿರುವುದಲ್ಲ. ಶಂಕರ್ ಅವರನ್ನು ಅಂತರ್ಜಾತೀಯ ವಿವಾಹವಾಗುವಾಗಲೇ ಇದ್ದಿದ್ದು,”
-ಕೌಶಲ್ಯ

ತಲೆ ಕೂದಲನ್ನು ಕತ್ತರಿಸಿ ಚಿಕ್ಕದಾಗಿ ಮಾಡಿಕೊಂಡಾಗ. 'ಇದೇಕೆ ಹೀಗೆ ಮಾಡಿಕೊಂಡಿದ್ದೀರಿ?' ಎಂದು ಕಾಥಿರ್ ಒಮ್ಮೆ ಕೇಳಿದ್ದರಂತೆ. “ಪುರುಷರಿಗೆ ಮಹಿಳೆ ಸಮನಾಗಿರುವ ಸಂಕೇತವಾಗಿ ನಾನು ಹಾಗೆ ಮಾಡಿಕೊಂಡಿದ್ದೇನೆ.” ಎಂದಿದ್ದರು ಕೌಶಲ್ಯ.

ಕಳೆದ ಹತ್ತು ವರ್ಷಗಳಲ್ಲಿ ತಮಿಳುನಾಡಿನಲ್ಲಿಯೇ ಸುಮಾರು 180 ಮರ್ಯಾದಾ ಹತ್ಯೆಗಳು ನಡೆದಿವೆ ಎನ್ನುತ್ತಿವೆ ಅಂಕಿ ಅಂಶಗಳು. ಕರ್ನಾಟಕದಲ್ಲಿಯೂ ಆಗಾಗ್ಗೆ ಇಂತಹ ಅಂತರ್ಜಾತಿ ವಿವಾಹವಾದ ಜೋಡಿಗಳ ಹತ್ಯೆಗಳು ಸದ್ದು ಮಾಡುತ್ತಿರುತ್ತವೆ. ಇವೆಲ್ಲಕ್ಕೂ ಜಾತಿ ನಿರ್ಮೂಲನೆ ಅಂತಿಮ ಮದ್ದು. ಆದರೆ ಅದಕ್ಕೂ ಮುಂಚೆ, ವ್ಯವಸ್ಥೆ ಕೂಡ ಇಂತಹ ಹತ್ಯೆಗಳ ವಿರುದ್ಧ ಸೆಟೆದು ನಿಲ್ಲುವ ಅಗತ್ಯವಿದೆ. ಇದೀಗ ತಮಿಳುನಾಡಿನಲ್ಲಿ ಮಾದರಿ ತೀರ್ಪು ಹೊರಬಿದ್ದಿದೆ. ಕೌಶಲ್ಯ ಮುಖದಲ್ಲಿ ತಾತ್ಕಾಲಿಕ ನಗು ಮೂಡಿದೆ. ಆದರೆ, ಹೋರಾಟದ ಕಣದಲ್ಲಿ ವಿರಾಮ ಸದ್ಯಕ್ಕೆ ಸಾಧ್ಯವಿಲ್ಲ ಎಂಬ ಅರಿವು ಅವರಿಗೆ ಇದೆ.