ಸುದ್ದಿ ಸಾಗರ

ಬಹಿರಂಗ ಪ್ರಚಾರಕ್ಕೆ ತೆರೆ: ಗುಜರಾತ್ ಚುನಾವಣೆಯಲ್ಲಿ ಗೆಲ್ಲೋರು ಯಾರು? ಸೋಲೋರು ಯಾರು?

ದೇಶದ ಗಮನ ಸೆಳೆಯುತ್ತಿರುವ ಗುಜರಾತ್ ಚುನಾವಣೆ ಮೊದಲ ಹಂತದ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ ಬೀಳಲಿದೆ. ಪ್ರಧಾನಿ ಮೋದಿ ತವರು ರಾಜ್ಯ ಹಾಗೂ ದೇಶದ ರಾಜಕೀಯದ ಒಲವು- ನಿಲುವುಗಳ ಭವಿಷ್ಯದ ಸೂಚನೆಯನ್ನೂ ಒಳಗೊಂಡ ಫಲಿತಾಂಶ ಇಲ್ಲಿ ಹೊರಬೀಳಲಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಬಿಜೆಪಿಯ ಸ್ಟಾರ್ ಪ್ರಚಾರಕರಾಗಿ ಮೋದಿ ಅಖಾಡಕ್ಕಿಳಿದಿದ್ದಾರೆ. ಜತೆಗೆ, ಕೇಂದ್ರ ಸಚಿವರು ಹಾಗೂ ಆರು ಜನ ಮುಖ್ಯಮಂತ್ರಿಗಳನ್ನು ಬಿಜೆಪಿ ಮತಯಾಚನೆಗೆ ಇಳಿಸಿದೆ.

ಡಿಸೆಂಬರ್ 9 ಮತ್ತು 14 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಡಿ. 18ರಂದು ಗುಜರಾತ್ ಚುನಾವಣಾ ಫಲಿತಾಂಶ ಹೊರ ಬೀಳಲಿದೆ.22 ವರ್ಷಗಳ ವರ್ಷಗಳ ತನ್ನ ಆಡಳಿತವನ್ನು ಉಳಿಸಿಕೊಳ್ಳಲು ಬಿಜೆಪಿ ಕಸರತ್ತು ನಡೆಸುತ್ತಿದೆ. ದೇಶಾದ್ಯಂತ ನೆಲಕಚ್ಚಿರುವ ಪುರಾತನ ಪಕ್ಷ ಕಾಂಗ್ರೆಸ್, ಬಿಜೆಪಿ ಭದ್ರ ಕೋಟೆಯನ್ನು ಅಲುಗಾಡಿಸುವ ಉಮೇದಿಯಲ್ಲಿದೆ. ಅದರ ಭಾಗವಾಗಿಯೇ ಪಾಟೀದಾರ್ ಮೀಸಲಾತಿ ಆಂದೋಲನದ ಹಾರ್ದಿಕ್ ಪಟೇಲ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಹಿಂದುಳಿದ ವರ್ಗಗಳ ಯುವ ನಾಯಕ ಅಲ್ಪೇಶ್ ಠಾಕೂರ್‌ಗೆ ಟಿಕೆಟ್ ನೀಡಿದೆ. ದಲಿತ ಯುವ ನಾಯಕ ಜಿಗ್ನೇಶ್‌ ಮೆವಾನಿಗೆ ಪರೋಕ್ಷ ಬೆಂಬಲ ನೀಡಿದೆ. ಹೇಗೇ ನೋಡಿದರೂ, ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ನೇರ ಹಣಾಹಣಿ. ನಡುವೆ, ಇತ್ತೀಚಿನ ಗುಜರಾತ್‌ ಮೀಸಲಾತಿ ಹೋರಾಟದ ರಾಜಕೀಯ ಪರ್ಯಾಯದ ಝಲಕ್‌ ಕೂಡ ಈ ಚುನಾವಣೆ ಒಳಗೊಂಡಿದೆ.‘ಧರ್ಮ ಮತ್ತು ಅಭಿವೃದ್ಧಿ’ ಅಜೆಂಡಾಗಳನ್ನು ಮುಂದಿಟ್ಟುಕೊಂಡು ಪ್ರಚಾರಕ್ಕಿಳಿದ ಬಿಜೆಪಿಗೆ ‘ಜಾತಿ ಅಜೆಂಡಾ’ ಗಳು ಹೊಡೆತ ಕೊಡಲ್ಪಡುತ್ತವೆ. ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರೀ ಬಿಜೆಪಿ ವಿರುದ್ಧ ವಿರೋಧಿ ಅಲೆಯನ್ನು ಸ್ಪಷ್ಟಪಡಿಸಿದ್ದು ಅಕ್ಟೋಬರ್ ತಿಂಗಳು.

ಪಾಟೀದಾರ್ ಸಮುದಾಯದ ಮೀಸಲಾತಿಗಾಗಿ ಹಾರ್ದಿಕ್ ಪಟೇಲ್ ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದರೆ ಮತ್ತು ಊನಾ ಘಟನೆಯಿಂದ ಸಿಡಿದೆದ್ದು ದಲಿತ ದಮಮನಿತರಿಗಾಗಿ ಹಕ್ಕಿಗಾಗಿ ಹೋರಾಟ ಪ್ರಾರಂಭಿಸಿದ ನಾಯಕ ಜಿಗ್ನೇಶ್ ಮೇವಾನಿ ಬಿಜೆಪಿ ವಿರುದ್ಧ ನೇರ ಮುಖಾಮುಖಿಗೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಇಬ್ಬರೂ ಯುವ ನಾಯಕರು ಈ ಬಾರಿಯ ಚುನಾವಣಾ ಫಲಿತಾಂಶದಲ್ಲಿ ಪ್ರಮುಖ ಪಾತ್ರವಹಿಸಿದ್ದೇ ಆದರೆ, ಬಿಜೆಪಿಯ ವಿಜಯಿ ಯಾತ್ರೆಗೆ ತಡೆಒಡ್ಡುವ ಸಾಧ್ಯತೆಗಳಿವೆ.ಗುಜರಾತ್ ಅಸೆಂಬ್ಲಿ ಚುನಾವಣಾಯಲ್ಲಿ ಗ್ರಾಮೀಣ ಭಾಗ ಕಾಂಗ್ರೆಸ್ ಕಡೆಗೆ ಒಲವು ತೋರಿಸುತ್ತಿದೆ ಎನ್ನುತ್ತವೆ ಅಂಕಿ ಅಂಶಗಳು.

ಕಳೆದ ಮೂರು ವರ್ಷಗಳಲ್ಲಿ ಬಿಜೆಪಿಗೆ ಅತಿಹೆಚ್ಚಿನ ವಿರೋಧವನ್ನು ತೋರಿದ್ದು ಪಾಟೀದಾರ್ ಸಮುದಾಯದ ಮೀಸಲಾತಿಯ ಆಂದೋಲನ. ಮತ್ತು ಊನಾದಲ್ಲಿ ದಲಿತ ದಮನಿತರ ಮೇಲೆ ನಡೆದ ದೌರ್ಜನ್ಯದ ವಿರುದ್ಧ ಸಿಡೆದೆದ್ದು ತಮ್ಮ ಜನರಿಗಾಗಿ ಭೂಮಿ ಮತ್ತು ಪುನರ್ವಸತಿಗಳ ಬೇಡಿಕೆ ಇಟ್ಟ ದಲಿತ ಅಹಿಂಸಾ ಯಾತ್ರಾ.'ದಿ ಹಿಂದೂ' ವರದಿಯೊಂದರ ಪ್ರಕಾರ, 'ನಗರ ಪ್ರದೇಶಗಳಲ್ಲಿ ಬಿಜೆಪಿ ಹೆಚ್ಚಿನ ಬೆಂಬಲವನ್ನು ಪಡೆದಿದ್ದರೂ ಅಲ್ಲಿ ನಡೆದ ಎರಡು ಆಂದೋಲನಗಳು (ಪಾಟೀದಾರ್ ಮತ್ತು ದಲಿತ ಅಹಿಂಸಾ ಯಾತ್ರಾ) ಗ್ರಾಮೀಣ ಪ್ರದೇಶದಲ್ಲಿ ಬಿಜೆಪಿಯ ವಿರುದ್ಧ ಜನರಲ್ಲಿ ಆಕ್ರೋಶವನ್ನು ಹುಟ್ಟಿಹಾಕಿವೆ.

2015 ರಲ್ಲಿ ನಡೆದ ಕೆಲವು ಚುನಾವಣೆಗಳನ್ನು ಗಮನಿಸಿದಾಗ, ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಕಾಂಗ್ರೆಸ್ ಉತ್ತಮ ನಿರ್ವಹಣೆ ತೋರಿದೆ. ಆದರೆ ಪುರಸಭೆ ಮತ್ತು ನಗರಸಭೆ ಚುನಾವಣೆಯಗಳಲ್ಲಿ ಬಿಜೆಪಿ ಹಿಡಿತವನ್ನು ಸಾಧಿಸಿದೆ'.ಕಳೆದ ಚುನಾವಣೆಯನ್ನು ಗಮನಿಸಿದಾಗ ನಗರ ಮತ್ತು ಗ್ರಾಮೀಣ ಪ್ರದೇಶ ಎಂಬ ಎರಡು ವಿಭಾಗಗಳನ್ನು ಮಾಡಿಕೊಂಡು ಚುನಾವಣಾ ಪೂರ್ವ ಸಮೀಕ್ಷೆ ಮಾಡುವುದು ಅತ್ಯಗತ್ಯವಾಗಿದೆ. ಬಿಜೆಪಿ ಗ್ರಾಮೀಣ ಮಟ್ಟಕ್ಕಿಂತ ನಗರ ಮಟ್ಟದಲ್ಲಿ ಹೆಚ್ಚಿನ ಬೆಂಬಲವನ್ನು ಹೊಂದಿದೆ. ಇದಕ್ಕೆ ಕಾರಣವೂ ಇದೆ. ಡಿಮೋನಿಟೈಜೆಷನ್ (ನೋಟು ಅಪಮೌಲ್ಯೀಕರಣ) ಗ್ರಾಮೀಣ ಪ್ರದೇಶದ ಜನರ ಮೇಲೆ ನಕಾರಾತ್ಮಕ ಪರಿಣಾಮ ಬೀರಿ ಅವರನ್ನು ಸಂಕಷ್ಟಕ್ಕೆ ತಳ್ಳಿರುವುದು. ಹಾಗಾಗಿ ಈ ಬಾರಿ ಗ್ರಾಮೀಣ ಭಾಗದ ಜನ ಬಿಜೆಪಿಗೆ ಮತ ಹಾಕುವ ಸಾಧ್ಯತೆಗಳು ಕಡಿಮೆ.

ಬಿಜೆಪಿಯು ಕಳೆದ ಚುನಾವಣೆಯಲ್ಲಿ ಶೇ.60 ಮತಗಳನ್ನು ಪಡೆದಾಗ, 40% ಆಡಳಿತ ವಿರೋಧಿ ಅಲೆ ಇದ್ದಿದ್ದು ಸ್ಪಷ್ಟವಾಗಿ ಕಾಣಿಸುತ್ತದೆ. ಈ ಬಾರಿ ಅಂತರ ಹೆಚ್ಚಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ.ಒಂದು ಕಡೆ ಚುನಾವಣೆಯ ಅಜೆಂಡಾಗಳು, ಇನ್ನೊಂದು ಕಡೆಯಲ್ಲಿ ನಗರ ಮತ್ತು ಗ್ರಾಮೀಣ ಭಾಗಗಳಾಗಿ ಇದ್ಭಾಗವಾಗಿರುವ ಜನಮತದ ಕ್ಷೇತ್ರಗಳು ಈ ಬಾರಿಯ ಗುಜರಾತ್ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸುವ ಸಾಧ್ಯತೆ ಇದೆ. ಇಲ್ಲಿನ ಗೆಲುವು ಮತ್ತು ಸೋಲು ದೇಶದ ರಾಜಕೀಯದ ಮೇಲೆ ತನ್ನದೇ ಆದ ಪರಿಣಾಮಗಳನ್ನು ಬೀರುವುದು ಖಾತ್ರಿ ಇದೆ. ಈ ಕಾರಣಕ್ಕಾಗಿಯೇ ಗುಜರಾತ್ ಫಲಿತಾಂಶದಲ್ಲಿ ಗೆಲ್ಲೋರು ಯಾರು? ಸೋಲೋರು ಯಾರು? ಎಂಬ ಕುತೂಹಲ ಮನೆ ಮಾಡಿದೆ.

ಗುಜರಾತ್ ದಮನಿತರ ಜತೆ ಕರ್ನಾಟಕ:

ಯುವ ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿಗೆ ಕರ್ನಾಟಕದಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ. "ಗುಜರಾತ್ ಚುನಾವಣಾ ಕಣದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವು ಜಿಗ್ನೇಶ್ ಮೇವಾನಿ ತಮ್ಮ ತತ್ವ ಸಿದ್ಧಾಂತಗಳನ್ನು ಸಡಿಲಿಸದೇ ರಾಜಕೀಯದ ಚುಕ್ಕಾಣಿ ಹಿಡಿಯುವ ಮೂಲಕ ದಲಿತ ದಮಿನಿತರ ಬದುಕಲ್ಲಿ ಬೆಳಕು ತರಲು ಅವಿರತ ಪ್ರಯತ್ನ ನಡೆಸುತ್ತಿದ್ದಾರೆ,'' ಎಂಬ ನಂಬಿಕೆ ಅವರ ಅಭಿಮಾನಿಗಳಲ್ಲಿದೆ.

ಈ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆಯೇ, 'ಗುಜರಾತ್ ದಮನಿತರಿಗಾಗಿ ನಾವು' ಎಂಬ ವಾಟ್ಸಾಪ್‌ ಗ್ರೂಪ್‌ ಒಂದು ಸೃಷ್ಟಿಯಾಗಿದೆ. ಇದರ ಭಾಗವಾಗಿಯೇ ಒಂದಷ್ಟು ಮಂದಿ ಗುಜರಾತ್‌ಗೆ ತೆರಳಿ ಜಿಗ್ನೇಶ್ ಕ್ಷೇತ್ರಗಳಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ಆರ್ಥಿಕ ಸಹಾಯವನ್ನೂ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಗುಜರಾತ್‌ ಚುನಾವಣೆ ಹಾಗೂ ಅದರ ಒಟ್ಟಾರೆ ಫಲಿತಾಂಶ ಒಂದು ಕಡೆಗಿದ್ದರೆ, ಜಿಗ್ನೇಶ್ ಗೆಲುವು ಮತ್ತು ಸೋಲಿನ ಹಿನ್ನೆಲೆಯಲ್ಲಿ ಪ್ರಜಾತಾಂತ್ರಿಕ ಪರ್ಯಾಯದ ಕನಸೊಂದು ಹುಟ್ಟಿದೆ.