ಸುದ್ದಿ ಸಾಗರ

‘ಅಮ್ಮ’ನಿಲ್ಲದ ಒಂದು ವರ್ಷ: ತಮಿಳುನಾಡು ಸಾಕ್ಷಿಯಾದ ಆರು ಪ್ರಮುಖ ರಾಜಕೀಯ ಬೆಳವಣಿಗೆಗಳು

Summarytoggle summary

‘ಅಮ್ಮ’ ಎಂದೇ ಪ್ರೀತಿಯಿಂದ ಕರೆಯಿಸಿಕೊಳ್ಳುತ್ತಿದ್ದ ನಟಿ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿಗೆ ಒಂದು ವರ್ಷ ತುಂಬಿದೆ.

ನೆರೆರಾಜ್ಯದ ರಾಜಕೀಯದಲ್ಲಿ ದಶಕಗಳಿಂದ ಪ್ರಾಬಲ್ಯ ಸಾಧಿಸಿದ, ಅಧಿಕಾರದ ಗದ್ದುಗೆಯಲ್ಲಿ 6 ವರ್ಷಗಳನ್ನು ಕಳೆದಿದ್ದ ಕರ್ನಾಟಕ ಮೂಲದ ಜಯಲಲಿತಾ ಕಳೆದ ವರ್ಷ 2016, ಡಿ. 5ರಂದು ಚೆನ್ನೈನಲ್ಲಿ ಅಸುನೀಗಿದ್ದರು.

'ಅಮ್ಮ'ನಿಂದಾಗಿ ತಮಿಳುನಾಡಿನ ರಾಜಕೀಯ ಗತಿ ಬದಲಿಸಿತ್ತು. ಇದೀಗ 'ಅಮ್ಮ'ನಿಲ್ಲದೆಯೂ ಇಲ್ಲಿನ ರಾಜಕೀಯ ಪಥ ಬದಲಿಸಿದೆ.ಕಳೆದ ಒಂದು ವರ್ಷದಲ್ಲಿ ತಮಿಳುನಾಡಿನ ರಾಜಕೀಯದಲ್ಲಾದ ಆರು ಮಹತ್ವದ ಬದಲಾವಣೆಗಳು ಇಲ್ಲಿವೆ. ಈ ಬದಲಾವಣೆಗಳಿಗೂ, ಜಯಲಲಿತಾ ಅವರ ಅನುಪಸ್ಥಿತಿಗೂ ನೇರ ಸಂಬಂಧವಿದೆ ಎಂಬುದು ಕುತೂಹಲಕಾರಿ ಅಂಶ.

1. ಪ್ರವರ್ಧಮಾನಕ್ಕೆ ಶಶಿಕಲಾ:

ವಿ. ಕೆ. ಶಶಿಕಲಾ ಜಯಲಲಿತಾರ 'ಆತ್ಮ ಸಹೋದರಿ' ಎಂದೇ ಕರೆಯಲಾಗಿತ್ತು. ಜಯಾ ಶವದ ಮುಂದೆ ದುಃಖತಪ್ತವಾಗಿ ನಿಂತಿದ್ದ ಗೆಳತಿ, ದೇಹ ಸಮಾಧಿಯಾಗುತ್ತಿದ್ದಂತೆ ಅಧಿಕಾರದ ಕೇಂದ್ರಕ್ಕೆ ಬಂದು ನಿಂತರು. ತಲೈವಿ ಸತ್ತ 12 ಗಂಟೆಗಳೊಳಗೆ ಪನ್ನೀರ್ ಸೇಲ್ವವಂರನ್ನು ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ನೇಮಕ ಮಾಡುವ ಮೂಲಕ ಒಂದು ಪರ್ಯಾಯ ಸರ್ಕಾರವನ್ನು ಸ್ಥಾಪಿಸಲಾಯಿತು.

ಈ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದು ಶಶಿಕಲಾ.ಡಿಸೆಂಬರ್ 31 ರಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡು ಸಾರ್ವಜನಿಕವಾಗಿ ಮಾತನಾಡಿದರು. ಯಾವತ್ತೂ ಸಾರ್ವಜನಿಕವಾಗಿ ಮಾತನಾಡದ ಅವರು ಆವತ್ತು ಸುದ್ದಿ ವಾಹಿನಿಗಳಿಗೆ ದೊಡ್ಡ ಚರ್ಚೆಗೆ ಆಹಾರವಾದರು.

"ಅವರು (ಶಶಿಕಲಾ) ಯಾವತ್ತೂ ಉನ್ನತ ಹುದ್ದೆಯನ್ನು ಅಪೇಕ್ಷಿಸಿರಲಿಲ್ಲ. ಆದರೆ ಪಕ್ಷಕ್ಕೆ ಬೆಂಬಲವಾಗಿ ನಿಂತಿದ್ದರು. ನಾವೆಲ್ಲರೂ ಅಮ್ಮನ ಪರಂಪರೆಯನ್ನು ಮುಂದುವರೆಸಬೇಕೆಂದು ಬಯಸಿದ್ದೆವು. ಶಶಿಕಲಾ ಅಮ್ಮನ ಸಿದ್ಧಾಂತ ಮತ್ತು ಕಾರ್ಯಶೈಲಿಯನ್ನು ಬಲ್ಲ ಏಕೈಕ ವ್ಯಕ್ತಿಯಾಗಿದ್ದರು. ಅವರಿಬ್ಬರ ಸಂಬಂಧ ಬಹಳ ಚೆನ್ನಾಗಿತ್ತು. ಅಮ್ಮನ ಮಾತುಗಳಲ್ಲಿಯೇ ಹೇಳಬೇಕಾದರೆ, ಶಶಿಕಲಾ ಅವರು ಜಯಲಲಿತಾಗೆ ತಾಯಿಯಂತಿದ್ದರು " ಎಂದು ಎಐಎಡಿಎಂಕೆಯ ಟಿಟಿವಿ ದಿನಕರನ್ ಬಣದ ವಕ್ತಾರ ಅಪ್ಸರಾ ರೆಡ್ಡಿ ಅಭಿಪ್ರಾಯಪಡುತ್ತಾರೆ.

ಎಐಎಡಿಎಂಕೆಯ ಮುಖವಾಣಿಯಾದ Dr. Namadhu M.G.R (ತಮಿಳು ದೈನಿಕ) ಸಂಪಾದಕರಾಗಿದ್ದ ಅಝುಗರಾಜ್, ಪ್ರಧಾನಿ ನರೇಂದ್ರ ಮೋದಿಯವರ ಕುರಿತ ವಿಮರ್ಶಾತ್ಮಕ ಕವನವೊಂದನ್ನು ಬರೆದರು. ಈ ಕಾರಣಕ್ಕಾಗಿಯೇ ಪಕ್ಷದ ಮುಖವಾಣಿ ಪತ್ರಿಕೆಯಿಂದ 2017ರ ಆಗಸ್ಟ್‌ನಲ್ಲಿ ಅವರನ್ನು ಹೊರಹಾಕಲಾಯಿತು.

"ಪಕ್ಷದ ಮೂಲಭೂತ ತತ್ವ ಸಿದ್ಧಾಂತಗಳಿಗೆ ಸಂಬಂಧಿಸಿದಂತೆ ಜಯಲಲಿತಾರಿಗೆ ಕೆಲವು ನಿಲುವುಗಳಿದ್ದವು. ಬಹಿರಂಗವಾಗಿ ಡಿಎಂಕೆ ವಿರೋಧಿಯಾಗಿತ್ತು. ಮತ್ತೊಂದು ವಂಶಾಡಳಿತವನ್ನು ಪ್ರೋತ್ಸಾಹಿಸದೇ ಇರುವುದು ಎಐಎಡಿಎಂಕೆ ಗುಣವಾಗಿತ್ತು. ಶಶಿಕಲಾ ಮತ್ತು ದಿನಕರನ್ ಇಬ್ಬರೂ ಈ ಎರಡೂ ಸಿದ್ದಾಂತಗಳನ್ನು ಗಾಳಿಗೆ ತೂರಿದರು. ಡಿಎಂಕೆಯೊಂದಿಗೆ ಕೈಜೋಡಿಸಿ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿಯಾಗಿ ದಿನಕರನ್ ಅವರನ್ನು ನೇಮಿಸುವ ಮೂಲಕ ಶಶಿಕಲಾ ಅವರು ಅಮ್ಮನಿಗೆ ದ್ರೋಹ ಮಾಡಿದ್ದಾರೆ” ಎಂದು ಅವರು ಆರೋಪಿಸುತ್ತಾರೆ.

ಈ ನಡುವೆ, ಒಂದಷ್ಟು ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲು, ಅಲ್ಲಿನ ಐಶಾರಾಮಿ ಬದುಕು, ಮನೆಯ ಮೇಲೆ ಐಟಿ ದಾಳಿ ಎಲ್ಲವನ್ನೂ ಕಂಡವರು ಶಶಿಕಲಾ. ಜಯಲಲಿತಾ ಸಾವಿನ ನಂತರ ಇವತ್ತಿಗೆ ತಮಿಳುನಾಡು ರಾಜಕೀಯದಲ್ಲಿ ತಮ್ಮದೇ ಆದ ಪಾತ್ರವನ್ನು ಅವರು ವಹಿಸುತ್ತಿದ್ದಾರೆ.

2.ಜಯಾ ಟಿವಿ ಮತ್ತು ಎಐಎಡಿಎಂಕೆ:

ಆಗಸ್ಟ್‌ 22, 1999 ರಲ್ಲಿ ಪ್ರಾರಂಭವಾದ ಜಯಾ ಟಿವಿ ತಮಿಳುನಾಡಿನ ಮಾಧ್ಯಮ ಲೋಕದಲ್ಲಿ ಪ್ರಭಾವಿ ಮಾದ್ಯಮವಾಗಿತ್ತು. ಡಿಎಂಕೆಯ ಹಿರಿಯ ನಾಯಕ ದುರೈ ಮುರುಗನ್ ಅವರೊಂದಿಗೆ ಪ್ರಸ್ತುತ ಎಐಎಡಿಎಂಕೆ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಕಳೆದ ನವೆಂಬರ್ 19 ರಂದು ಜಯಾ ಟಿವಿ ಸಂದರ್ಶನವನ್ನು ಪ್ರಸಾರ ಮಾಡಿತು. ಇದಕ್ಕೆ ಎಐಎಡಿಎಂಕೆ ಕಡೆಯಿಂದ ತೀವ್ರ ವಿರೋಧವೂ ವ್ಯಕ್ತವಾಯಿತು. ರಾಜಕೀಯ ಬಣ್ಣ ಬಳಿದುಕೊಳ್ಳದೆ ತಟಸ್ಥವಾಗಿರಲು ಜಯಾ ಟಿವಿಗೆ ಒತ್ತಡ ಬರುತ್ತವೆ. ಆದರೆ ಜಯಾ ಟಿವಿ ತನ್ನ ಕೆಲಸವನ್ನು ಮುಂದುರಿಸಿದೆ. ಬಹುಶಃ ಜಯಾ ಬದುಕಿದ್ದರೆ ಜಯಾ ಟಿವಿಯ ಭವಿಷ್ಯ ಬೇರೆಯದೇ ಆಗಿರುತ್ತಿತ್ತು.

3.ಎಐಎಡಿಎಂಕೆ ಮಂತ್ರಿಗಳ ಮೇಲೆ ಜಯಲಲಿತಾ ಹಿಡಿತ:

1996ರಿಂದ, ತನ್ನ ಮೊದಲ ಅಧಿಕಾರಾವಧಿಯಿಂದಲೇ, ಜಯಲಲಿತಾ ತಮ್ಮ ಸಂಪುಟದ ಸಚಿವರನ್ನು ಹತೋಟಿಯಲ್ಲಿ ಇರಿಸಿಕೊಂಡಿದ್ದರು. ಆ ಸಮಯದಲ್ಲಿ ಸಚಿವರು ಅವರ ಆದೇಶಗಳನ್ನು ಉಲ್ಲಂಘಿಸಲು ಭಯಪಡುತ್ತಿದ್ದರು.  ಸಚಿವರಿಂದ ಹೇಳಿಕೆ ಪಡೆಯಲೂ ವರದಿಗಾರರು ಹರಸಾಹಸ ಪಡಬೇಕಾಗಿತ್ತು.

ವಿವಿಧ ಸಚಿವಾಲಯಗಳ ಅಡಿಯಲ್ಲಿ ಬಂದ ಯೋಜನೆಗಳು ಜಯಲಲಿತಾ ಘೋಷಿಸದೆ ಇದ್ದಾಗ, ಪಕ್ಷದ ಹಿರಿಯ ಮುಖಂಡರೊಬ್ಬರು ವಿರೋಧ ವ್ಯಕ್ತಪಡಿಸಿದ್ದರು. ಅವರನ್ನು ಪಕ್ಷದಿಂದ ಹೊರಹಾಕಿದ್ದರು ಜಯಲಲಿತ. ಮತ್ತೊಂದು ಕ್ಲಾಸಿಕ್ ಉದಾಹರಣೆ ಎಂದರೆ, ಮಾಜಿ ಎಂಎಲ್ಎ ಪಝಾ ಕರುಪಯ್ಯ ಅವರದ್ದು. ಸಚಿವರನ್ನು ಬಹಿರಂಗವಾಗಿ ಟೀಕಿಸಿದ ಕಾರಣಕ್ಕೆ ಅವರಿಗೆ 2016 ರ ಸೆಪ್ಟೆಂಬರ್‌ನಲ್ಲಿ ಪಕ್ಷದಿಂದ ಗೇಟ್‌ ಪಾಸ್ ನೀಡಲಾಗಿತ್ತು. ಆದರೆ ಈಗ ಎಐಎಡಿಎಂಕೆಯಲ್ಲಿ ಎಲ್ಲಾ ಸಚಿವರು ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಎಐಎಡಿಎಂಕೆ ಸರಕಾರವನ್ನು ಕಮಲ್ ಹಾಸನ್ ಅವರು ತಮ್ಮ ಟ್ವೀಟುಗಳ ಮೂಲಕ ಟೀಕಿಸಿದ್ದಕ್ಕೆ ಪ್ರತಿಕ್ರಿಯಿಸಿ, ‘ಈ ನಟ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ’ ಎಂದು ಕಂದಾಯ ಸಚಿವ ಆರ್.ಬಿ. ಉದಯಕುಮಾರ್ ಪ್ರತಿಕ್ರಿಯೆ ನೀಡಿದರು.

ಇನ್ನು ಇತ್ತೀಚೆಗೆ ಮೀನುಗಾರಿಕಾ ಸಚಿವ ಡಿ.ಜಯಕುಮಾರ್ ಅವರು 'ಆಧಾರವಿಲ್ಲದ ಆರೋಪಗಳನ್ನು ಮುಂದುವರೆಸಿದರೆ ಪಕ್ಷವು ಕಮಲ್ ಹಾಸನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದೆ’ ಬೆದರಿಕೆ ಹಾಕಿದ್ದನ್ನು ನಾವು ಕಾಣಬಹುದು.

"ಜಯಲಲಿತಾ ಹಲವಾರು ಕ್ಷೇತ್ರಗಳ ತಜ್ಞರಿಂದ ಸುತ್ತುವರೆಯಲ್ಪಟ್ಟಿದ್ದರು. ಅವರ ಸಂಪುಟದಲ್ಲಿ ಮಂತ್ರಿಗಳು ನಾಮಕಾವಸ್ತೆಗಿದ್ದರು. ಏಕೆಂದರೆ ಅದು ಪ್ರಜಾಪ್ರಭುತ್ವದಲ್ಲಿ ಅಗತ್ಯವಾಗಿತ್ತು. ಈ ರೀತಿಯಲ್ಲಿ ಅವರನ್ನು ಕಟ್ಟಿಹಾಕಲಾಗಿತ್ತು. ಆದರೆ ಈಗ ಮಂತ್ರಿಗಳು ಮಾತನಾಡುತ್ತಿದ್ದಾರೆ ಎಂದು ಪಝಾ ಕರುಪಯ್ಯ ಹೇಳುತ್ತಾರೆ. ಜತೆಗೆ, ಈಗ ಅಲ್ಲಿನ ಪರಿಸ್ಥಿತಿ ಹಾಗಿಲ್ಲ ಎಂಬುದನ್ನೂ ಹೇಳುತ್ತಾರೆ.

4. ಪನ್ನೀರ್ ಸೇಲ್ವಂ ಮತ್ತು ಶಶಿಕಲಾ:

2001 ಮತ್ತು 2011 ರಲ್ಲಿ ನ್ಯಾಯಾಲಯ ಪ್ರಕರಣಗಳ ಕಾರಣದಿಂದ ಕೆಳಗಿಳಿಯಬೇಕಾಗಿ ಬಂದ ಎರಡೂ ಸಂದರ್ಭಗಳಲ್ಲಿ ಮುಖ್ಯಮಂತ್ರಿಯಾಗಲು ಜಯಲಲಿತಾ ಪನೀರ್ ಸೇಲ್ವಂರನ್ನು ಆಯ್ಕೆ ಮಾಡಿದ್ದರು.

ಪ್ರಾಮಾಣಿಕತೆ ಮತ್ತು ಸ್ವಾಮಿ ನಿಷ್ಟೆಯಿಂದಿದ್ದ ಪನ್ನೀರ್ ಸೇಲ್ವಂ ಯಾವತ್ತೂ ಜಯಲಲಿತಾರ ಮಾತನ್ನು ಮೀರಿ ನಡೆಯಲಿಲ್ಲ.ಜಯಾ ಮರಣಾ ನಂತರ, 2016 ರ ಡಿಸೆಂಬರ್ 5 ರ ರಾತ್ರಿಯಲ್ಲಿ ಮೂರನೆಯ ಬಾರಿಗೆ ಅವರಿಗೆ ಮುಖ್ಯಮಂತ್ರಿಯಾಗಿ ಮಾಡಿದಾಗಲೂ ಶಶಿಕಾಲಾ ಇದೇ ರೀತಿಯ ನಿಷ್ಠೆಯನ್ನು ನಿರೀಕ್ಷಿಸಿದ್ದರು.

ಆದರೆ ಎರಡು ತಿಂಗಳ ಅಂತರದಲ್ಲಿ ಪನ್ನೀರ್ ಸೇಲ್ವಂ ಜಯಲಲಿತಾರ ಸ್ಮಾರಕದಲ್ಲಿ ಕುಳಿತೆದ್ದು ಬಂಡಾಯದ ಬಾವುಟ ಹಾರಿಸಿದರು. 2017 ರ ಫೆಬ್ರುವರಿ 8ರಂದು ಶಶಿಕಲಾ ಮತ್ತು ಅವರ ಕುಟುಂಬದ ವಿರುದ್ಧ ತಿರುಗಿ ಬಿದ್ದರು. ಜಯಾ ಇರುವಷ್ಟು ದಿನ ಪಕ್ಷದೊಳಗೆ ಬಂಡಾಯ ಎಂಬುದೇ ಇರಲಿಲ್ಲ.

5. ತಮಿಳುನಾಡಿನಲ್ಲಿ ಏರಿಕೆ ಕಾಣದ ಬಿಜೆಪಿ:

1998 ರಿಂದಲೂ, ಬಿಜೆಪಿ ಎರಡು ದ್ರಾವಿಡ ಬಣಗಳನ್ನು ಒಗ್ಗೂಡಿಸಿ ರಾಜ್ಯದಲ್ಲಿ ಒಂದು ಹೆಗ್ಗುರುತು ಸಾಧಿಸಲು ಪ್ರಯತ್ನಿಸುತ್ತಿದೆ. ಯಾವಾಗ 2014 ರ ಚುನಾವಣೆಯಲ್ಲಿ ಮೋದಿ ಅಲೆ ದೇಶದ ತುಂಬ ಇದೆ ಎನ್ನುವಾಗಲೂ, ತಮಿಳುನಾಡಿನಲ್ಲಿ ಬಿಜೆಪಿ ಗಳಿಸಿದ್ದು ಕೇವಲ ಒಂದು ಸ್ಥಾನ ಮಾತ್ರ. ಇಲ್ಲಿ ಮೋದಿ ಮ್ಯಾಜಿಕ್ ಏನೂ ನಡೆಯಲಿಲ್ಲ.  ಜಯಲಲಿತಾಳ ಮರಣದ ನಂತರ ಬಿಜೆಪಿ ತಮಿಳುನಾಡಿನಲ್ಲಿ ಪಕ್ಷವನ್ನು ಬಲಪಡಿಸುವ ಕನಸು ಕಂಡಿತು. ಅದಕ್ಕಾಗಿ ನಡೆದ ರಾಜಕೀಯ ಮೇಲಾಟಗಳಿಗೆ ಮಾಧ್ಯಮ ವರದಿಗಳೇ ಸಾಕ್ಷಿ.

ಬಹುಶಃ ಜಯಾ ಬದುಕಿದ್ದರೆ ಬಿಜೆಪಿಗೆ ಇಂತಹ ಅವಕಾಶವೇ ಇರುತ್ತಿರಲಿಲ್ಲ.AIADMK (EPS-OPS faction) ಈಗ ಬಿಜೆಪಿಯಿಂದ ನಿಯಂತ್ರಿಸಲ್ಪಡುತ್ತದೆ ಎಂದು ಮಧುತು ಅಲಗುರಾಜ್ ಆರೋಪಿಸುತ್ತಾರೆ. "ಅಮ್ಮ ಜೀವಂತವಾಗಿರುವ ತನಕ ಬಿಜೆಪಿ ಸುಮ್ಮನಿತ್ತು. ಇಂದು, ಎಐಎಡಿಎಂಕೆ ಪಕ್ಷದ ಮೇಲೆ ತನನ್ನ ಹಿಡಿತವನ್ನು ಹೊಂದುತ್ತಿದೆ. ರಾಜ್ಯದಲ್ಲಿ ತನ್ನ ಬೇರುಗಳನ್ನು ಸ್ಥಾಪಿಸಲು ಬಿಜೆಪಿ ಹವಣಿಸುತ್ತಿದೆ,'' ಎನ್ನುತ್ತಾರವರು.

2017 ಮೇ ತಿಂಗಳಲ್ಲಿ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ತಮ್ಮ ಕೇಂದ್ರದ ಯೋಜನೆಗಳನ್ನು ಪರಿಶೀಲಿಸಲು ರಾಜ್ಯ ಕಾರ್ಯದರ್ಶಿಯನ್ನು ಭೇಟಿ ಮಾಡಿದರು. ಆದರೆ ಇದಕ್ಕೂ ಮೊದಲು ಜಯಲಲಿತಾ ಜೀವಂತವಾಗಿರುವ ತನಕ NEET, UDAY ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಗಳಂತಹ ಕೇಂದ್ರ ಸರಕಾರದ ಯೋಜನೆಗಳನ್ನು ಸಕ್ರಿಯವಾಗಿ ವಿರೋಧಿಸಿದರು. ಇವುಗಳಲ್ಲಿ ಹೆಚ್ಚಿನವು ಜಯಲಲಿತಾ ಅವರ ಮರಣದ ನಂತರ ಜಾರಿಗೆ ಬಂದವು ಎಂಬುದು ಗಮನಾರ್ಹ.

6. ದೊಡ್ಡ ನಾಯಕರ ಅಂತ್ಯ:

70ರ ದಶಕದ ಮೊದಲ ಗೆಲುವಿನೊಂದಿದೆ ಎಐಎಡಿಎಂಕೆ ಪ್ರಬಲವಾದ ನಾಯಕತ್ವ ಹೊಂದಿತ್ತು. ಎಂ.ಜಿ.ಆರ್ ಮತ್ತು ಜಯಲಲಿತಾ ಇಬ್ಬರೂ ವಿಶೇಷ ರೀತಿಯ ಆರಾಧನಾ ಸ್ಥಾನಮಾನವನ್ನು ಅಲಂಕರಿಸಿದ್ದರು. ಆ ಮೂಲಕ ರಾಜಕೀಯದಲ್ಲಿ ತಮ್ಮ ಪ್ರಾಬಲ್ಯವನ್ನು ಸಾಧಿಸಿದ್ದರು. ಆದರೆ ಇಂದು ಇಡೀ ರಾಜ್ಯವೇ ಒಪ್ಪುವಂತಹ ಯಾವ ನಾಯಕರೂ ಇಲ್ಲವಾಗಿದೆ.ಇವು ಜಯಲಲಿತಾ ಸಾವಿನೊಂದಿಗೆ ತಮಿಳುನಾಡು ಕಂಡ ಮಹತ್ವದ ರಾಜಕೀಯ ಬದಲಾವಣೆಗಳು. ಸಂಘರ್ಷದೊಂದಿಗೆ ನಾಯಕರ ಹುಟ್ಟಿ ಬರುತ್ತಾರೆ ಎಂಬುದು ಜಯಲಲಿತಾರ ಗಟ್ಟಿ ನಂಬಿಕೆಯಾಗಿದೆ. ಅವರ ಸಾವಿನ ನಂತರದ ಒಂದು ವರ್ಷ ಸಂಘರ್ಷದಲ್ಲಿಯೇ ಕೊನೆಯಾಗಿದೆ. ಸಂಘರ್ಷ ಜಾರಿಯಲ್ಲಿದೆ, ಹೊಸ ನಾಯಕ ಅಥವಾ ನಾಯಕಿಯ ಆಗಮನಕ್ಕೆ ಎಐಎಡಿಎಂಕೆ ಪಕ್ಷ ಕಾಯುತ್ತಿದೆ.

ಮಾಹಿತಿ ಕೃಪೆ: ಹಿಂದೂಸ್ತಾನ್ ಟೈಮ್ಸ್‌